ನಿನ್ನೆಗೆ ಕೊನೆಗೊಂಡ 2019ರ ಲೋಕಸಭಾ ಚುನಾವಣೆ ಕೆಲವು ಖ್ಯಾತ, ಕುಖ್ಯಾತ ದಾಖಲೆಗಳನ್ನು ನಿರ್ಮಿಸಿದೆ ಎಂದು ಹೇಳಬಹುದು. ಚುನಾವಣಾ ಪೂರ್ವದ ಕಾಲದಲ್ಲಿದ್ದ ವಾತಾವರಣವನ್ನು ಗಮನಿಸಿದರೆ, ಯಾವ ಅಡೆತಡೆಗಳಿಲ್ಲದೆ ಚುನಾವಣೆಗಳು ಕೊನೆಗೊಂಡಿದ್ದು (ಪ.ಬಂಗಾಳ ಹೊರತುಪಡಿಸಿ) ಸಮಾಧಾನದ ಸಂಗತಿಯೇ ಸರಿ. ಚುನಾವಣೆಯ ಮುನ್ನಿನ ರಾಜಕೀಯ ತುರುಸು, ಜಿದ್ದಾಜಿದ್ದಿ ಮತ್ತು ಕಹಿ ಒಗರು ಮಿಶ್ರಣದ ಮಾತಿನ ರಾಜಕೀಯ ಜಟಾಪಟಿ ವಾತಾವರಣವನ್ನು ನೋಡಿದರೆ, ಇನ್ನೂ ಏನೇನೋ ಅಗಬಹುದೆಂದು ಅನಿಸಿತ್ತು. ಹಾಗೇ ಏನೂ ಅಗಲಿಲ್ಲ. ರಾಜಕೀಯವಾಗಿ ಕಾವೇರಿದ ಪರಿಸ್ಥಿತಿಯಲ್ಲಿ ಎಲ್ಲ ಏಳೂ ಹಂತದ ಚುನಾವಣೆಗಳೂ ಜಾಸ್ತಿ ಗದ್ದಲ, ಗಲಾಟೆಗಳಿಗೆ ಎಡೆಗೊಡದೆ ನಡೆದವು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಮತವನ್ನು ಚಲಾಯಿಸಿದರು. ಪಶ್ಚಿಮ ಬಂಗಾಳದಲ್ಲಿ ಆದ ದೊಂಬಿ, ಹಿಂಸಾಚಾರದ ಘಟನೆಗಳು, ಅಧಿಕಾರಾರೂಢ ತೃಣಮೂಲ ಕಾಂಗ್ರೆಸಿನ ಕಾರ್ಯಕರ್ತರು ಇತರರ ಮೇಲೆ ವಿಶೇಷವಾಗಿ, ಬಿಜೆಪಿ ಕಾರ್ಯಕರ್ತರ ಮೇಲೆ ಮಾಡಿದ ದೌರ್ಜನ್ಯಗಳು ಒಂದು ಅಪವಾದವೆಂದೇ ಹೇಳಬೇಕು. ಪ್ರಕ್ಷುಬ್ದ ವಾತವರಣವಿದ್ದರೂ ಇತರ ಪ್ರದೇಶಗಳಲ್ಲಿ ಹಿಂಸಾತ್ಮಕ ಘಟನೆಗಳು ಸಾಧಾರಣವಾಗಿ ನಡೆಯಲಿಲ್ಲ.
ಆದರೆ, ಘಟಿಸಿದ ಕೆಲವು ಕಳವಳಕಾರಿ ಅಂಶಗಳನ್ನೂ ಮರೆಯುವಂತಿಲ್ಲ. ಚುನಾವಣಾ ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವುದರಲ್ಲಿ ಚುನಾವಣಾ ಆಯೋಗ ತೋರಿದ ಮೀನಮೇಷದಿಂದಾಗಿ, ಚುನಾವಣಾ ಪ್ರಚಾರದ ಭಾಷಣಗಳು ಸಭ್ಯತೆಯ ಎಲ್ಲೆಯನ್ನು ಮೀರಿ, ವ್ಯಕ್ತಿಗಳ, ಸಂಘಟನೆಗಳ ಘನತೆ, ಗಾಂಭೀರ್ಯವನ್ನು ಮಣ್ಣುಪಾಲು ಮಾಡಿದ್ದು ಕೇಳಲು ಕರ್ಣಕಠೋರವಾಗಿತ್ತು. ಇದನ್ನು ಯಾರೋ ಜಿಲ್ಲಾ ಮಟ್ಟದ ಧುರೀಣರು ಮಾಡದೆ, ರಾಷ್ಟ್ರೀಯ ಮಟ್ಟದ ನಾಯಕರೇ ಮಾಡಿದರು. ರಾಷ್ಟ್ರೀಯ ಕಾಂಗ್ರೆಸ್ ಆಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಕಳ್ಳ ಎಂದು ಕರೆಯಲು ಶುರು ಮಾಡಿದರೆ, ಅವರಿಗಿಂತ ಕೆಳಗಿದ್ದವರು ಇನ್ನು ಯಾವ ಭಾಷೆ ಉಪಯೋಗಿಸಲು ಸಾಧ್ಯ? ನಿಮಗೆ ಮೋದಿ ಮೇಲೆ ಸಿಟ್ಟಿರಬಹುದು, ಅವರನ್ನು ನೀವು ಇಷ್ಟಪಡದಿರಬಹುದು. ಅದಕ್ಕೆ ಸಂವಿಧಾನಿಕ ಹುದ್ದೆಯಾದ ಪ್ರಧಾನಮಂತ್ರಿ ಪದಕ್ಕೆ ಅಪಮಾನ ಮಾಡಬಹುದೇ? ಈಗ ಪ್ರಧಾನಮಂತ್ರಿ ಕಳ್ಳ ಎಂದು ಮಾತನಾಡುವವರು ನಾಳೆ ಅದೇ ಪದವಿಯನ್ನು ಅಲಂಕರಿಸಿದಾಗ ಇತರರು ಇದೇ ಪದವನ್ನು ಉಪಯೋಗಿಸುವ ಸಾಧ್ಯತೆಯನ್ನು ರಾಹುಲ್ ಗಾಂಧಿ ಮರೆತಂತೆ ಕಾಣಿಸುತ್ತದೆ. ಬಿಜೆಪಿಯವರು ಇದನ್ನು ಸಹಿಸದೆ, ರಾಹುಲ್ ಗಾಂಧಿಯ ತಾಯಿ, ತಂದೆಯವರ ಹೆಸರನ್ನೂ ಎಳೆತಂದರು. ಒಂದು ಸಂದರ್ಭದಲ್ಲಿಯಂತೂ ಪ್ರಧಾನಮಂತ್ರಿ ಮೋದಿ, ರಾಹುಲ್ ಗಾಂಧಿ ತಮಗೆ ಉಪಯೋಗಿಸಿದ ವಿಶೇಷಣವನ್ನು, ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರಿಗೆ ಉಪಯೋಗಿಸಿದರು. ರಾಹುಲ್ ಗಾಂಧಿ ರಾಜಕೀಯವಾಗಿ ಇನ್ನೂ ಎಳಸು. ಆದರೆ, ಅವರು ಆಡಿದ ಭಾಷೆಯನ್ನು ಅನುಭವಿ ರಾಜಕಾರಣಿ ನರೇಂದ್ರ ಮೋದಿಯೂ ಆಡಬಹುದೇ?
ಕರ್ನಾಟಕದಲ್ಲಿ ಇಂತಹ ಹದ್ದು ಮೀರಿದ ಮಾತುಗಳಿಗೆ ಕಡಿಮೆ ಏನೂ ಇರಲಿಲ್ಲ. ಕಾಂಗ್ರೆಸ್ ನಾಯಕರುಗಳು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯಲ್ಲಿ ವಿರೋಧಿ ಪಕ್ಷದ ಧುರೀಣರಾದ ಮಲ್ಲಿಕಾರ್ಜುನ ಖರ್ಗೆ, ನರೇಂದ್ರ ಮೋದಿ ಹೆಸರು ಬಳಸುವಾಗ ಏಕವಚನ ಉಪಯೋಗಿಸಿದ್ದು, ಅದು ಮಾಧ್ಯಮದಲ್ಲಿ ಪ್ರಸಾರವಾಗಿದ್ದನ್ನು ಅನೇಕರು ಕೇಳಿದ್ದಾರೆ. ಮೋದಿ ಹೇಳಿದ ಒಂದು ಮಾತನ್ನು ಉದ್ಧರಿಸುತ್ತ ಖರ್ಗೆಯವರು, “ಮೋದಿ ಈಗ ನೇಣು ಹಾಕಿಕೊಳ್ಳುತ್ತಾನಾ?” ಎಂದು ಉದ್ಗಾರ ತೆಗೆದರೆ, ರಾಜಕೀಯದಲ್ಲಿ ಈಗ ಕಣ್ಣು ತೆರೆಯುತ್ತಿರುವ ಹಾಗೂ ಇತ್ತೀಚೆಗಷ್ಟೆ ಮಂತ್ರಿಯಾದ ಅವರ ಮಗ ಪ್ರಿಯಾಂಕ ಖರ್ಗೆ, “ಹಾಗಾದಲ್ಲಿ, ನೇಣುಗಂಬಕ್ಕೆ ಹೋಗುವ ರಸ್ತೆಯನ್ನು ನಾನು ಮಾಡಿಸಿಕೊಡುತ್ತೇನೆ,” ಎಂದು ಅಪ್ಪಣೆ ಮಾಡುತ್ತಾರೆ. ‘ಅಪ್ಪ ದೇವಾಲಯ ಕಟ್ಟಿಸಿದರೆ, ಮಗ ಕಳಶವಿಡುತ್ತಾನೆ’ ಎಂಬ ನಾಣ್ಣುಡಿ ನೆನಪಾಗುತ್ತದೆ. ತಮ್ಮ ದೀರ್ಘಕಾಲೀನ ರಾಜಕೀಯ ಜೀವನದಲ್ಲಿ ಎಂದೂ ಸಭ್ಯತೆಯನ್ನು ಮರೆಯದ ಮಲ್ಲಿಕಾರ್ಜುನ ಖರ್ಗೆ ಈಗ ಇಂತಹ ಮಾತಾಡಿದರೆ, ಇದೀಗ ರಾಜಕೀಯಕ್ಕೆ ಬಂದ ಅವರ ಮಗ ಏನು ಪಾಠ ಕಲಿಯಬಹುದು?
ಕುತೂಹಲ ಕೆರಳಿಸಿದ್ದ ಮಂಡ್ಯದ ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ನಿಖಿಲ್ ವಿರುದ್ಧ ಸ್ಪರ್ಧಿಸಿದ್ದ ಖ್ಯಾತ ಚಲನಚಿತ್ರ ನಟ ಅಂಬರೀಷ್ ಪತ್ನಿ ಸುಮಲತಾ ವಿರುದ್ಧವೂ ಜೆಡಿಎಸ್ ಧುರೀಣರು ಸಭ್ಯತೆಯ ಎಲ್ಲೆ ಮೀರಿದ ಮಾತುಗಳನ್ನು ಆಡಿದ್ದಾರೆ. ಅವಾಚ್ಯ ಶಬ್ದಗಳನ್ನು ಆಡುವುದೇ ಚುನಾವಣಾ ಪ್ರಚಾರವೋ ಎನ್ನುವ ಮಟ್ಟಿಗೆ ಈ ಪ್ರವೃತ್ತಿ ಕರ್ನಾಟಕದಲ್ಲಿ ಬೆಳೆದಿದೆ.
ಇದಕ್ಕೆ ತಡೆಹಾಕಬೇಕಾದವರು ಚುನಾವಣಾ ಆಯೋಗದವರು. ಅವರು ಮೊದಲಿನಂದಲೂ ಚುನಾವಣಾ ಮಾದರಿ ನೀತಿಸಂಹಿತೆಯನ್ನು ನಿಷ್ಠುರವಾಗಿ ಅನುಷ್ಠಾನ ಮಾಡಿದ್ದರೆ ಈ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯ ಚಾಟಿ ಬೀಸಿದ ನಂತರ ಕಾರ್ಯಪ್ರವೃತ್ತವಾದರೂ ಪರಿಸ್ಥಿತಿ ಕೈಮೀರಿತ್ತು ಎನ್ನುವುದು ಬಂಗಾಳದ ಉದಾಹರಣೆಯಿಂದ ಗೊತ್ತಾಗುತ್ತದೆ. ಯಾವ ಅಂಜಿಕೆಯೂ ಇಲ್ಲದೆ, ನ್ಯಾಯಬದ್ದವಾಗಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಸಲಾಗುವುದಿಲ್ಲ ಎಂಬ ಪರಿಸ್ಥಿತಿ ಬಂದರೂ ಏನೂ ಮಾಡದೆ ಚುನಾವಣಾ ಆಯೋಗ ಕುಳಿತಿತ್ತು. ಕೊನೆಗೆ ಚುನಾವಣಾ ಆಯೋಗ ಕೆಲವು ಕಠಿಣ ಕ್ರಮ ಕೈಕೊಂಡಾಗ ಪರಿಸ್ಥಿತಿ ಮತ್ತೆ ಕೈಮೀರಿತ್ತು. ಪ.ಬಂಗಾಳದ ಸರಕಾರಿ ಅಧಿಕಾರಿಗಳು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದರು. ಕೆಲ ಹಿರಿಯ ಅಧಿಕಾರಿಗಳನ್ನು ಚುನಾವಣಾ ಕೆಲಸದಿಂದ ತೆಗೆದುಹಾಕಿ, ಹೊಸದಿಲ್ಲಿಗೆ ವರ್ಗಾಯಿಸಲಾದರೂ, ರಾಜಕೀಯ ವ್ಯವಸ್ಥೆಗೆ ಹಿಡಿದಿದ್ದ ಗೆದ್ದಲನ್ನು ತೆಗೆಯಲಾಗಲಿಲ್ಲ. ಅದರ ಬದಲು, ಚುನಾವಣಾ ಅಯೋಗವೇ ಮಮತಾ ಬ್ಯಾನರ್ಜಿಯ ಕೋಪಕ್ಕೆ ಒಳಗಾಯಿತು. ಮಮತಾರಂತೆ ಇತರ ರಾಜ್ಯಗಳ ನೇತಾರರೂ ನಡೆದುಕೊಂಡಿದ್ದರೆ, ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದೀತೇ?
ಅಂಕಣಕಾರರು ಹಿರಿಯ ಪತ್ರಕರ್ತರು