ಜಗನ್ ಶಕ್ತಿ ಸದ್ಯ ಸುದ್ದಿಯಲ್ಲಿರುವ ಹೆಸರು. ಬೆಂಗಳೂರಿಗರಾದ ಜಗನ್, ವಿಶ್ವವೇ ಬೆರಗಿನಿಂದ ನೋಡುವ ಬೆಂಗಳೂರು ನೆಲದ, ಬಹುತಾರಾಗಣದ ಚಿತ್ರ, ‘ಮಿಷನ್ ಮಂಗಲ್ ‘ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಚಿತ್ರರಂಗ ಇವರಿಗೆ ಹೊಸದಲ್ಲ. ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ಮುರುಗದಾಸ್, ಬಾಲ್ಕಿ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಕ್ಷಯ್ ಕುಮಾರ್ ನಟಿಸಿದ, ಹಾಲಿಡೇ, ಅದರ ತಮಿಳು ಮೂಲ ತುಪ್ಪಾಕಿಯಲ್ಲಿ ಬೆವರು ಸುರಿಸಿದ್ದಾರೆ. ಇಸ್ರೋ ವಿಜ್ಞಾನಿಗಳ ಕುಟುಂಬದಲ್ಲಿ ಬೆಳೆದ ಜಗನ್ ಸ್ವತಃ ಕೆಮಿಕಲ್ ಎಂಜಿನಿಯರ್. ಸಿನಿಮಾ ಮಾಧ್ಯಮದ ಆಕರ್ಷಣೆಗೊಳಗಾದ ಇವರು ಭಿನ್ನಧಾರೆಯ ಸಿನಿಮಾಗಳನ್ನು ನಿರ್ಮಿಸುವ ಉತ್ಸಾಹದಲ್ಲಿದ್ದಾರೆ. ‘ಪ್ರತಿಧ್ವನಿ’ಯೊಂದಿಗೆ ತಮ್ಮ ಮೊದಲ ಸಿನಿಮಾದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ನಿಮ್ಮ ಹಾಗು ಸಿನಿಮಾದ ನಂಟಿನ ಬಗ್ಗೆ ಸ್ವಲ್ಪ ಹೇಳಿ
ನಾನು ಫಸ್ಟ್ ಡೇ ಫಸ್ಟ್‌ಶೋ ನೋಡುವ ಸಿನಿಮಾಭಿಮಾನಿ. ರಾಜ್‌ಕುಮಾರ್, ಬಚ್ಚನ್, ಚಿರಂಜೀವಿ ಸಿನಿಮಾಗಳಿಗೆ ಬಟ್ಟೆ ಹರಿದುಕೊಂಡು ಹೋಗುವ ಹುಚ್ಚಿಟ್ಟುಕೊಂಡವನು. ಎಷ್ಟೇ ಕಷ್ಟವಾದರೂ ಹೋಗಿ ಸಿನಿಮಾ ನೋಡಿ ಬರುತ್ತಿದ್ದೆ. ನನಗೆ ಕಮರ್ಷಿಯಲ್ ಸಿನಿಮಾಗಳ ಕಡೆಗೆ ಒಂದು ಸೆಳೆತವಿದೆ. ನನ್ನ ಈ ಹುಚ್ಚು ಸಿನಿಮಾರಂಗಕ್ಕೆ ಕರೆದುಕೊಂಡು ಬಂತು. ಮುರುಗದಾಸ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು.

ಮಂಗಳಯಾನದ ಕುರಿತು ಸಿನಿಮಾಮಾಡಬೇಕೆಂದು ಅನ್ನಿಸಿದ್ದೇಕೆ?
ನನ್ನ ಅಕ್ಕ ಇಸ್ರೋ ವಿಜ್ಞಾನಿ. ಮನೆಯಲ್ಲಿ ಬೆಳಗ್ಗೆ ವಿವಿಧ ಭಾರತಿ ಕೇಳುತ್ತಾ, ರೇಡಿಯೋ ಟೈಮ್ ಅನ್ನು ಅನುಸರಿಸುತ್ತಾ ಮನೆಯ ಕೆಲಸ ಮಾಡುತ್ತಾ ಇದ್ದುದ್ದನ್ನು ನೋಡಿದೆ. ಅಪ್ಪ ಎಚ್‌ಎಎಲ್‌ನಲ್ಲಿದ್ದರು. ಅಕ್ಕ ತುಂಬಾ ಶ್ರಮ ವಹಿಸಿ ಓದಿ, ವಿಜ್ಞಾನಿಯಾದರು. ಮನೆಯ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ವಿಜ್ಞಾನಿಯ ಹೊಣೆಗಾರಿಕೆಯನ್ನು ಅಕ್ಕ ನಿಭಾಯಿಸುವುದನ್ನು ಹತ್ತಿರದಿಂದ ನೋಡುತ್ತಿದ್ದೆ. ಗಂಡಸರು ಒಂದು ಮೀಟಿಂಗ್ ಇದೆ ಅಂದ್ರೆ ಬೇರಾವ ಕೆಲಸಗಳನ್ನು ಮಾಡುವುದಿಲ್ಲ. ಆದರೆ ಹೆಂಗಸರು ತಮ್ಮ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಅಕ್ಕ ರಾಕೆಟ್ ಲಾಂಚ್ ಮಾಡಿ, ಬರುವಾಗ ತರಕಾರಿ ತೆಗೆದುಕೊಂಡು ಬರುತ್ತಿದ್ದಳು. ಸಾಧಾರಣ ವ್ಯಕ್ತಿಗಳಾಗಿ ಕಾಣಿಸ್ತಾರೆ, ಆದರೆ ಅಸಾಧಾರಣೆ ಕೆಲಸ ಮಾಡುತ್ತಿರುತ್ತಾರೆ. ಅದೇ ನನಗೆ ಸ್ಫೂರ್ತಿ.
ವಿಜ್ಞಾನ ಹಿನ್ನೆಲೆಯಲ್ಲಿ ಸಿನಿಮಾವನ್ನು ನಿರ್ಮಿಸುವ ಸವಾಲು ಎಂಥದ್ದಾಗಿತ್ತು?
ಸಿನಿಮಾ ಮನರಂಜನೆಯಿಂದ ಕೂಡಿರಬೇಕು. ನಾನು ನೋಡಿದ ಚಿತ್ರಗಳಂತೆ, ಓಡಿ ಬಂದು ನೋಡುವಂತಿರಬೇಕು. ಸಾಕ್ಷ್ಯಚಿತ್ರವಾಗಬಾರದು. ಮಂಗಳಯಾನದ ಘಟನೆಯನ್ನುನಾವು ಬದಲಿಸುವಂತಿಲ್ಲ. ಅದು ವಾಸ್ತವ. ಆದರೆ ಪಾತ್ರಗಳನ್ನು ನಮ್ಮ ಕಲ್ಪನೆಯಂತೆ ಕಟ್ಟುವ ಅವಕಾಶ ಮಾತ್ರ ಇರುವುದು. ಇದನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಬೌದ್ಧಿಕವಾಗಿ ಭಾರವಾಗದ, ಸುಲಭವಾಗಿ ಬೆಸೆದುಕೊಳ್ಳುವ ಐಡಿಯಾಗಳನ್ನು ತರುವ ಪ್ರಯತ್ನ ಮಾಡಿದ್ದೇನೆ. ಬಜಾಜ್ ಬಗ್ಗಿಸಿ ಕಿಕ್ ಸ್ಟಾರ್ಟ್ ಮಾಡುವ ಉದಾಹರಣೆಯಿದೆಯಲ್ಲ ಹಾಗೆ. ಅದೇ ಕಾರಣಕ್ಕೆ ಪೂರಿಯ ದೃಶ್ಯವನ್ನು ತರಲಾಯಿತು. ಥಿಯೇಟರ್‌ಗೆ ಬರುವ ಪ್ರೇಕ್ಷಕನಿಗೆ ಟ್ಯಾನ್ ತೀಟಾ, ಕಾಸ್ ತೀಟಾ, ಟ್ಯಾಂಜೆಂಟ್ ಅಂತ ಹೇಳಿದರೆ ಕಷ್ಟವಾಗುತ್ತದೆ. ಅದೇ ಸಂಕೀರ್ಣ ವಿಷಯವನ್ನು ಅವನಿಗೆ ಹತ್ತಿರವಾಗುವಂತೆ ಕಟ್ಟಿಕೊಡಬೇಕು. ನಾನು ಆನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇನೆ.
ದೊಡ್ಡ ತಾರಾಗಣವಿದೆ, ನಿಮ್ಮ ಮೊದಲ ಚಿತ್ರಕ್ಕೆ ಅಕ್ಷಯ್ ಕರೆತರಲು ಸಾಧ್ಯವಾಗಿದ್ದು ಹೇಗೆ?
ಹಾಲಿಡೇ ಚಿತ್ರಕ್ಕೆಅಕ್ಷಯ್ ಅವರ ಜೊತೆಗೆ ಕೆಲಸ ಮಾಡಿದೆ. ತುಂಬಾ ಆತ್ಮೀಯವಾಗಿ ನನ್ನೊಂದಿಗೆ ಮಾತನಾಡುತ್ತಿದ್ದರು. ಕೇಸರಿ ಸಿನಿಮಾ ಶೂಟಿಂಗ್ ವೇಳೆ, ನನ್ನಕಥೆಯನ್ನು ಹೇಳಿದೆ. ಈ ಕತೆಯಲ್ಲಿ ನಟಿಸುತ್ತೇನೆ ಎಂದು ಒಪ್ಪಿಕೊಂಡರು. ಪಾ ಚಿತ್ರದಲ್ಲಿ ವಿದ್ಯಾಬಾಲನ್ ಅವರೊಂದಿಗೆ ಕೆಲಸ ಮಾಡಿದ್ದೆ. ಅವರೂ ಕತೆ ಕೇಳಿದ ಕೂಡಲೇ ಒಪ್ಪಿಕೊಂಡರು. ಹೀಗೆ ದತ್ತಣ್ಣ ಕೂಡ ತಂಡದ ಭಾಗವಾದರು. ಆದರೆ ಆರಂಭದಲ್ಲಿ ನನ್ನ ತಲೆಯಲ್ಲಿ ಬೇರೆಯದ್ದೇ ಆಲೋಚನೆ ಇತ್ತು. ಕನ್ನಡದ ಅನುಪ್ರಭಾಕರ್ ಅಥವಾ ಉಮಾಶ್ರೀ, ಮಲಯಾಳಂನಿಂದ ಮಂಜು ವಾರಿಯರ್,ತಮಿಳಿನಿಂದ ಸುಹಾಸಿನಿ ಹೀಗೆ ಬೇರೆ ಬೇರೆ ಭಾಷೆಯ ಕಲಾವಿದರನ್ನು ಕರೆತರುವ ಯೋಚನೆ ಇತ್ತು. ಇಸ್ರೋ ಒಳಗೆ ಕಾಲಿಟ್ಟರೆ ನಿಮಗೆ ಆಗುವ ಅನುಭವವೂ ಅಂಥದ್ದೇ. ಇಸ್ರೋ ಬೆಂಗಳೂರಿನ ಕಾಸ್ಮೋಪಾಲಿಟಿನ್, ಬಹು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿ ಎಲ್ಲರಿಗೂ ಸ್ಥಳವಿದೆ.

ಮಿಷನ್ ಮಂಗಲ್ ತನ್ನದೇ ಆದ ಕಾರಣಗಳಿಗೆ ಸುದ್ದಿಯಾಗಿದೆ. ಮುಂದಿನ ಯೋಜನೆಗಳು ಆಗಲೇ ನಿಮ್ಮ ಮನಸ್ಸಿನಲ್ಲಿರಬಹುದು…
ನನಗೆ ಸೈನ್ಸ್ ಫಿಕ್ಷನ್ ತುಂಬಾ ಇಷ್ಟದ ಪ್ರಕಾರ. ಅವೆಂಜರ್ಸ್, ಸೂಸೈಡ್ ಸ್ಕ್ವಾಡ್ ಮುಂತಾದ ಸಿನಿಮಾಗಳನ್ನು ಭಾರತೀಯ ಚಿತ್ರರಂಗದಲ್ಲೂ ಪ್ರಯೋಗಿಸುವ ಉತ್ಸಾಹವಿದೆ. ಆದರೆ ಈಗಾಗಲೇ ಮುರುಗದಾಸ್ ಅವರ ಕತ್ತಿ ಸಿನಿಮಾವನ್ನು ಹಿಂದಿಯಲ್ಲಿ ನಿರ್ದೇಶಿಸುವುದಕ್ಕೆ ಒಪ್ಪಿಕೊಂಡಿದ್ದೇನೆ. ಕನ್ನಡದಲ್ಲೂ ಚಿತ್ರ ನಿರ್ಮಿಸುವ ಆಸೆಯಿದೆ. ಸುದೀಪ್ ಅವರ ಬಾಡಿ ಲಾಂಗ್ವೆಜ್, ಮ್ಯಾನರಿಸಂ ತುಂಬಾ ಇಷ್ಟ.
ಸುದೀಪ್ ಅವರನ್ನು ಕತ್ತಿ ಚಿತ್ರಕ್ಕೆ ಕರೆ ತರುವ ಉದ್ದೇಶವಿದೆಯೇ?
ಮಾತಾಡಿಲ್ಲ. ಆದರೆ ಸಿನಿಮಾ ಕಾನ್ವರ್ಜೆನ್ಸ್ ಆದ ಮೇಲೆ ಈಗ ಭಾಷೆಯ ಮಿತಿ ಇಲ್ಲ. ಬಾಹುಬಲಿ ವಿವಿಧ ಭಾಷೆಗಳಲ್ಲಿ ಬಂತು. ಅಷ್ಟೇ ಏಕೆ ಕನ್ನಡದ್ದೇ ಕೆಜಿಎಫ್ ಬಹುಭಾಷೆಯಲ್ಲಿ ತೆರೆ ಕಂಡಿತಲ್ಲ. ಅದೇ ರೀತಿ ಕನ್ನಡದಲ್ಲೇ ಚಿತ್ರ ನಿರ್ಮಿಸಿ, ಭಾರತಾದ್ಯಂತ ತಲುಪುವಂತೆ ಮಾಡೋಣ. ನನಗೆ ಕನ್ನಡ, ತಮಿಳು, ಮಲಯಾಳಂ ಭಾಷೆಗಳು ಗೊತ್ತು. ನಾನು ಇಂಥ ಪ್ರಯೋಗ ಮಾಡುವುದಕ್ಕೆ ಸಿದ್ಧ.