ಪುರಾತನ ಭಾರತದಲ್ಲಿ ಯುದ್ಧದ ಸಂದರ್ಭದಲ್ಲಿ ಹತರಾಗುತ್ತಿದ್ದ ಸೈನಿಕರನ್ನು ಮತ್ತೆ ಜೀವಂತಗೊಳಿಸಲು ಮಹಾ ಮೃತ್ಯುಂಜಯ ಮಂತ್ರ ಜಪಿಸಲಾಗುತ್ತಿತ್ತಂತೆ. ಹಾಗಂತ ನಾವು ಪೌರಾಣಿಕ ಕಥೆಗಳಲ್ಲಿ ಓದಿದ್ದೇವೆ, ಪೌರಾಣಿಕ ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಅದನ್ನೊಂದು ಮನರಂಜನೆಯನ್ನಾಗಿ ಸವಿಯುತ್ತಿದ್ದೆವೇ ವಿನಃ ಮಕ್ಕಳು ಸಹ ಅದನ್ನು ನಂಬುತ್ತಿರಲಿಲ್ಲ.
ಆದರೆ ಈಗ ಅದನ್ನು ಪುರಾಣ ಎಂದು ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಕೇಂದ್ರ ಸರ್ಕಾರದ ಅನುದಾನದ ನೆರವಿನಿಂದಲೇ ಮಹಾ ಮೃತ್ಯುಂಜಯ ಜಪದ ಶಕ್ತಿ ಪರೀಕ್ಷಿಸುವ ಅಧ್ಯಯನವೊಂದನ್ನು ದೆಹಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಅಲ್ಲಿನ ವೈದ್ಯ ಡಾ. ಅಶೋಕ್ ಕುಮಾರ್ ಅವರು 2016 ಅಕ್ಟೋಬರ್ ನಿಂದ 2019 ಏಪ್ರಿಲ್ ವರೆಗೆ ಇಂತಹ ಒಂದು ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಮಾಸಿಕ 28,000 ರೂ.ಗಳಂತೆ ಸಂಶೋಧನಾ ನಿಧಿ ಮಂಜೂರು ಮಾಡಿದೆ.

ಅಪಘಾತ, ಹಲ್ಲೆ ಮತ್ತಿತರ ಕಾರಣಗಳಿಂದ ತಲೆಗೆ ಪೆಟ್ಟು ಬಿದ್ದು ಮಿದುಳಿಗೆ ತೀವ್ರ ಹಾನಿಯಾಗಿ ಕೋಮಾ ಸ್ಥಿತಿ ತಲುಪಿರುವ ರೋಗಿಗಳ ಮೇಲೆ ಮಹಾ ಮೃತ್ಯುಂಜಯ ಜಪದ ಪರಿಣಾಮ ಪರೀಕ್ಷಿಸಲು ಡಾ. ಅಶೋಕ್ ಕುಮಾರ್ ಅವರು 2014 ರಲ್ಲೇ ನಿರ್ಧರಿಸಿದ್ದರಂತೆ. ಆಗ ದೆಹಲಿಯ ಪ್ರಸಿದ್ಧ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ನರರೋಗ ಔಷಧಶಾಸ್ತ್ರಜ್ಞರಾಗಿದ್ದ ಡಾ. ಅಶೋಕ್ ಕುಮಾರ್ ಅವರು ಈ ಸಂಬಂಧ ಒಂದು ಯೋಜನೆ ಸಿದ್ಧಪಡಿಸಿ ಸಂಶೋಧನಾ ಶಿಷ್ಯವೇತನಕ್ಕಾಗಿ ಐಸಿಎಂಆರ್ ಗೆ ಅರ್ಜಿ ಸಲ್ಲಿಸಿದ್ದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೇಲ್ವಿಚಾರಣೆಗೊಳಪಟ್ಟಿರುವ, ಜೀವವೈದ್ಯಕೀಯ ಸಂಶೋಧನೆಗಳ ಸೂತ್ರೀಕರಣ ಮತ್ತು ಉತ್ತೇಜನ ನೀಡುವ ಭಾರತದ ಕೇಂದ್ರ ಸಂಸ್ಥೆಯಾಗಿರುವ ಐಸಿಎಂಆರ್ 2016 ಮಾರ್ಚ್ ನಲ್ಲಿ ಡಾ. ಅಶೋಕ್ ಕುಮಾರ್ ಸಲ್ಲಿಸಿದ್ದ ಸಂಶೋಧನಾ ಶಿಷ್ಯವೇತನಕ್ಕೆ ಅನುಮೋದನೆ ನೀಡಿತು. 2016 ಅಕ್ಟೋಬರ್ ನಿಂದ ಒಂದು ವರ್ಷ ಕಾಲದ ಅಧ್ಯಯನಕ್ಕೆ ಮಾಸಿಕ 28,000 ರೂ. ನಂತೆ ಶಿಷ್ಯವೇತನ ಮಂಜೂರು ಮಾಡಿತು. ನಂತರ ಅಧ್ಯಯನ ಅವಧಿಯನ್ನು ಮತ್ತೆರಡು ವರ್ಷಗಳಿಗೆ ವಿಸ್ತರಿಸಿತು.
ರೋಗಿಯ ಪರವಾಗಿ ಮತ್ತೊಬ್ಬರು ಋಗ್ವೇದದ ಮಂತ್ರಗಳಲ್ಲೊಂದಾದ ಮಹಾ ಮೃತ್ಯುಂಜಯ ಮಂತ್ರ ಜಪಿಸಿ, ಅದರಿಂದ ರೋಗಿಯ ಆರೋಗ್ಯದ ಮೇಲಾಗುವ ಪರಿಣಾಮ ಅಧ್ಯಯನ ನಡೆಸುವ ಈ ಯೋಜನೆಗೆ ಏಮ್ಸ್ ನ ನೈತಿಕ ಸಮಿತಿಯು, “ಇದೊಂದು ಅವೈಜ್ಞಾನಿಕ ಯೋಜನೆ” ಎಂದು ತೀರ್ಮಾನಿಸಿ, ಅನುಮತಿ ನಿರಾಕರಿಸಿತು. ಆದರೆ ರಾಮಮನೋಹರ ಲೋಹಿಯಾ ಆಸ್ಪತ್ರೆಯ ನೈತಿಕ ಸಮಿತಿಯು ಆರು ಸುತ್ತುಗಳ ಪ್ರಶ್ನೋತ್ತರಗಳ ನಂತರ ಈ ಅಧ್ಯಯನಕ್ಕೆ ಅನುಮತಿ ನೀಡಿತು.

ಡಾ. ಅಶೋಕ್ ಕುಮಾರ್ ಅವರು, ತೀವ್ರವಾಗಿ ಮಿದುಳು ಹಾನಿಯಾಗಿರುವ 40 ರೋಗಿಗಳನ್ನು 20 ರೋಗಿಗಳ ಎರಡು ಗುಂಪುಗಳಾಗಿ ವಿಂಗಡಿಸಿದರು. ಒಂದು ಗುಂಪಿನ ರೋಗಿಗಳಿಗೆ ಎಂದಿನಂತೆ ವೈದ್ಯಕೀಯ ಚಿಕಿತ್ಸೆ ಮುಂದುವರಿಸಲಾಯಿತು, ಮತ್ತೊಂದು ಗುಂಪಿನ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಜೊತೆಗೆ ಪ್ರತಿ ರೋಗಿಯ ಪರವಾಗಿ ಮಹಾ ಮೃತ್ಯುಂಜಯ ಜಪ ಮಾಡಲಾಯಿತು. ದೆಹಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಸಂಸ್ಕೃತ ಪಂಡಿತರು ರೋಗಿಗಳ ಪರವಾಗಿ ಮಹಾ ಮೃತ್ಯಂಜಯ ಮಂತ್ರ ಜಪಿಸುವ ಕಾರ್ಯ ನಡೆಸಿಕೊಟ್ಟರು. ಮೊದಲು ಆಸ್ಪತ್ರೆಗೆ ಹೋಗಿ ರೋಗಿಯನ್ನು ಗಂಗಾಜಲದಿಂದ ಶುದ್ಧೀಕರಿಸಿ, ನಂತರ ವಿದ್ಯಾಪೀಠದ ಆವರಣದಲ್ಲಿರುವ ದೇವಾಲಯದಲ್ಲಿ ಮಹಾಮೃತ್ಯುಂಜಯ ಮಂತ್ರ ಜಪಿಸಲಾಗುತ್ತಿತ್ತು. ಜೊತೆಗೆ ರೋಗಿಯ ಹೆಸರು, ಜನ್ಮ ದಿನಾಂಕ, ಜನ್ಮಸ್ಥಳ ಮತ್ತು ಗೋತ್ರವನ್ನು ಪಠಿಸಲಾಗುತ್ತಿತ್ತು.
ಸುಮಾರು 31 ತಿಂಗಳುಗಳ ಕಾಲ ನಡೆದ ಈ ಅಧ್ಯಯನದಲ್ಲಿ, ವೈದ್ಯಕೀಯ ಚಿಕಿತ್ಸೆ ಮಾತ್ರ ಪಡೆದ ರೋಗಿಗಳಿಗಿಂತ ಮಹಾ ಮೃತ್ಯುಂಜಯ ಮಂತ್ರ ಜಪಿಸಲಾದ ರೋಗಿಗಳ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡುಬಂದಿದೆ ಎಂಬುದಾಗಿ ಡಾ. ಅಶೋಕ್ ಕುಮಾರ್ ತಿಳಿಸಿರುವುದಾಗಿ ‘ದಿ ಕ್ಯಾರವಾನ್’ ಮಾಗಜಿನ್ ವರದಿ ಮಾಡಿದೆ. ಆದರೆ, ಡಾ. ಅಶೋಕ್ ಕುಮಾರ್ ಅವರಿಗೆ ಯೋಜನಾ ಮಾರ್ಗದರ್ಶಿಯಾಗಿದ್ದ ರಾಮಮನೋಹರ ಲೋಹಿಯಾ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅಜಯ್ ಚೌಧರಿ ಅವರು ಮಾತ್ರ, “ಮಹಾ ಮೃತ್ಯುಂಜಯ ಜಪವು ರೋಗಿಯ ಆರೋಗ್ಯ ಸುಧಾರಣೆಯಲ್ಲಿ ಪರಿಣಾಮ ಬೀರಿರುವ ಕುರಿತು ಅಧ್ಯಯನದ ಪ್ರಾಥಮಿಕ ಫಲಿತಾಂಶಗಳು ಸ್ಪಷ್ಟವಾಗಿ ಸೂಚಿಸುವುದಿಲ್ಲ, ಆದರೆ ಅಂತಿಮ ಫಲಿತಾಂಶದಲ್ಲಿ ಅದರ ಸೂಚನೆ ದೊರೆಯುವ ಸಾಧ್ಯತೆಗಳು ಇಲ್ಲದಿಲ್ಲ” ಎಂಬುದಾಗಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
2014 ರಲ್ಲಿ ಬಲಪಂಥೀಯ ವಿಚಾರಧಾರೆಯ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಭಾರತದ ಪುರಾತನ ವೈದ್ಯಕೀಯ ಸಾಧನೆಗಳ ಕುರಿತ ಸುಳ್ಳು ಪ್ರತಿಪಾದನೆಗಳು ಹೆಚ್ಚುತ್ತಲೇ ಇವೆ. ಖುದ್ದು ಪ್ರಧಾನ ಮಂತ್ರಿ ಸೇರಿದಂತೆ ಸರ್ಕಾರದ ಪ್ರತಿನಿಧಿಗಳೇ ಇಂತಹ ಪ್ರತಿಪಾದನೆಗಳನ್ನು ಮಾಡಿರುವ, ಮಾಡುತ್ತಿರುವ ಹಲವಾರು ಉದಾಹರಣೆಗಳಿರುವಾಗ, ಅವೈಜ್ಞಾನಿಕ ಎನಿಸುವಂತಹ ಯೋಜನೆಗಳಿಗೆ ಸರ್ಕಾರದ ಅನುದಾನ ದೊರೆತಿರುವುದರಲ್ಲಿ ಆಶ್ವರ್ಯವೇನೂ ಇಲ್ಲ.