ಅದು 1935ರ ಆಸುಪಾಸು. ಉತ್ತರ ಆಸ್ಟ್ರೇಲಿಯಾದ ರೈತರು ಗ್ರೆಯ್ಬಕ್ಕ್ ಬೀಟಲಸ್ ಎಂಬ ಕೀಟ ತಮ್ಮ ಕಬ್ಬಿನ ಹೊಲಗಳ ಮೇಲೆ ಮಾಡುವ ದಾಳಿಯಿಂದ ದಿಕ್ಕೆಟ್ಟು ಹೋಗಿದ್ದರು. ಬೆಳೆಗಳನ್ನು ಉಳಿಸಿಕೊಳ್ಳುವ ಅವರ ಯಾವ ಪ್ರಯತ್ನಗಳೂ ಫಲಿಸುತ್ತಿರಲಿಲ್ಲ. ಸೋತ ಜನರು ಮತ್ತು ಸರ್ಕಾರಕ್ಕೆ ಅದ್ಯಾರೋ ಒಂದು ಸಲಹೆ ಕೊಟ್ಟರು. ಹವಾಯಿ ದ್ವೀಪದಲ್ಲಿ ಕಂಡು ಬರುವ ಕೇನ್ ಟೋಡ್ ಎಂಬ ತಳಿಯ ಕಪ್ಪೆಯನ್ನು ಪರಿಚಯಿಸಿದರೆ ಅವು ಈ ಕೀಟಗಳ ಲಾರ್ವೆಯನ್ನು ತಿಂದು ಅವುಗಳ ಜನಸಂಖ್ಯೆಯನ್ನು ನಿಯಂತ್ರಿಸುತ್ತವೆ ಎಂಬುದೇ ಆ ಸಲಹೆಯಾಗಿತ್ತು. ಸರ್ಕಾರವು ಇದನ್ನು ಒಪ್ಪಿ ಹಿಂದು-ಮುಂದು ನೋಡದೆ ದೊಡ್ಡ ಸಂಖ್ಯೆಯಲ್ಲಿ ಕಪ್ಪೆಗಳನ್ನು ಆಮದು ಮಾಡಿಕೊಂಡು ಕೀಟಗಳ ಹಾವಳಿ ವ್ಯಾಪಕವಾಗಿರುವಲ್ಲೆಲ್ಲ ಬಿಟ್ಟರು. ಬಿಟ್ಟ ಕೆಲವು ದಿನಗಳ ನಂತರವಷ್ಟೇ ಅದರ ಪರಿಣಾಮ ಗೊತ್ತಾಯಿತು. ಅದೇನೆಂದರೆ, ಈ ಕೀಟಗಳ ಲಾರ್ವೆಯಿಂದ ಮರಿ ಬರುವ ಸಮಯಕ್ಕೂ ಹಾಗೂ ಈ ಕಪ್ಪೆಗಳು ಮರಿಮಾಡುವ ಸಮಯದಲ್ಲಿ ಪೌಷ್ಟಿಕಾಂಶಕ್ಕಾಗಿ ಅವುಗಳನ್ನು ತಿನ್ನುವ ಸಮಯಕ್ಕೂ ಹೊಂದಾಣಿಕೆ ಇರಲಿಲ್ಲ! ಹೀಗಾಗಿ ಕಪ್ಪೆಗಳು ಈ ಪ್ರಭೇದದ ಕೀಟಗಳನ್ನು ತಿನ್ನುತ್ತಲೇ ಇರಲ್ಲಿಲ್ಲ. ಜೊತೆಗೆ, ಈ ಕಪ್ಪೆಗಳ ಸಂಖ್ಯೆ ಅತೀ ಶೀಘ್ರವಾಗಿ ದ್ವಿಗುಣವಾಗುತ್ತಾ ಹೋಯಿತು. ರೈತರಿಗೆ ಈಗ ಕೀಟಗಳ ಜೊತೆ ಈ ವಿಷಕಾರಿ ಕಪ್ಪೆಗಳ ಜೊತೆ ಕೂಡ ಏಗಬೇಕಾಗಿ ಬಂತು. ಸಿಕ್ಕಸಿಕ್ಕಲ್ಲಿ ಅವುಗಳನ್ನು ಸಾಯಿಸಿದರೂ ಕೂಡ ಅವುಗಳ ಸಂಖ್ಯೆಯನ್ನು ನಿಯಂತ್ರಿಸಲಾಗಲಿಲ್ಲ.
ಮೇಲೆ ಹೇಳಿದ್ದು ಒಂದು ಉದಾಹರಣೆಯಷ್ಟೇ. ಇಂತಹ ಹತ್ತು ಹಲವಾರು ಉದಾಹರಣೆಗಳು ನಮ್ಮೆದುರಲ್ಲಿವೆ. ಪ್ರಕೃತಿಯನ್ನು ಜಯಿಸ ಹೊರಟಾಗೆಲ್ಲ ಮಾನವ ಸೋತಿದ್ದಾನೆ. ಗೊತ್ತಿಲ್ಲದೆ ಮಾಡಿದ ಅಚಾತುರ್ಯಗಳಿಗೆ ಬೆಲೆ ತೆತ್ತಿದ್ದಾನೆ, ತೆರುತ್ತಲೇ ಇದ್ದಾನೆ. ಪ್ರಕೃತಿ ಪ್ರತಿಯೊಂದು ಜೀವಿಗೂ ತನ್ನದೇ ಆದ ಜಾಗ ಮತ್ತು ಜವಾಬ್ದಾರಿಗಳನ್ನು ಕೊಟ್ಟಿದೆ. ಅವು ಜೀವಿಸುವ ವಾತಾವರಣದಲ್ಲಿ ಕೊಂಚ ಏರು ಪೇರು ಆದರೂ ಅವು ಉಳಿಯಲಾರವು. ಅದೊಂದು ತಳಿಯ ಮರ ಹುಟ್ಟಲು ಒಂದು ಹಕ್ಕಿಯ ಬೀಜ ಪ್ರಸರಣದಿಂದ ಮಾತ್ರ ಸಾಧ್ಯ. ಹೀಗೆ ಅವುಗಳ ಜೀವನ ಶೈಲಿಗೆ ಕಾಡು ಮತ್ತು ನದಿಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಇವೆಲ್ಲವೂ ನಮಗೆ ತಿಳಿದಿರುವುದು ವೈಜ್ಞಾನಿಕ ಸಂಶೋದನೆಗಳಿಂದ. ಇಷ್ಟೆಲ್ಲಾ ತಿಳಿದಿರುವ ನಾವು ಈಗ ಮತ್ತೆ ಸರಿ ಮಾಡಲಾಗದಷ್ಟು ಅನಾಹುತ ಮಾಡುವುದಕ್ಕೆ ಸಜ್ಜಾಗಿದ್ದೇವೆ.

ನದಿಗಳು ನಮ್ಮೆಲರ ಜೀವಾಳ. ಇತಿಹಾಸ ಪುಟಗಳನ್ನು ತೆಗೆದು ನೋಡಿದರೆ ಎಲ್ಲಾ ಪ್ರಾಚೀನ ನಾಗರೀಕತೆಗಳು ನದಿಗಳ ತಪ್ಪಲಲ್ಲೇ ರೂಪಗೊಂಡಿವೆ. ನದಿಯೆಂದರೆ –ಅದಕ್ಕೆ ಒಂದು ಉಗಮ ಸ್ಥಳ ಮತ್ತು ಬಾಯಿ (ಮೌತ್ ಆಫ್ ದಿ ರಿವರ್) ಇರುತ್ತದೆ. ವಸ್ತುಗಳ ಸವೆತ, ಸಾರಿಗೆ ಮತ್ತು ಶೇಖರಣೆ ನದಿಗಳ ವಾಡಿಕೆಯ ಕೆಲಸ. ಸಾಮಾನ್ಯವಾಗಿ ಒಂದು ನದಿ 3 ಹಂತಗಳಲ್ಲಿ ಹರಿಯುತ್ತದೆ. ಯುವ ಹಂತ, ಮಧ್ಯಮ ಹಂತ ಮತ್ತು ಪ್ರೌಢ ಹಂತ. ಮೊದಲನೆಯ ಹಂತದಲ್ಲಿ ನದಿ ಬಹಳ ರಭಸವಾಗಿ ಹರಿಯುತ್ತದೆ. ಈ ಹಂತದಲ್ಲೇ ಮಡ್ಡಿಯ ಸವೆತ ಮಾಡಿ ಮುಂದಿನ ಹಂತ ತಲುಪುತ್ತದೆ. ಅನೇಕ ಜಲಪಾತಗಳು, ರಾಪಿಡ್ ಗಳು, ವೀ-ಆಕಾರದ ವ್ಯಾಲಿಗಳು (V-shaped Valley) ನಿರ್ಮಾಣಗೊಳ್ಳುತ್ತವೆ. ಮಧ್ಯಮ ಹಂತದಲ್ಲಿ (ಮೆಚ್ಯೂರ್ ಸ್ಟೇಜ್) ನದಿಯ ರಭಸ ಕಡಿಮೆಯಾಗುತ್ತದೆ. ಕೊನೆಯ ಹಂತದಲ್ಲಿ ನದಿ ತಾನು ಹೊತ್ತುಕೊಂಡು ಬಂದ ಮಡ್ದಿಗಳನ್ನು ನಿಕ್ಷೇಪ ಮಾಡುತ್ತದೆ. ವ್ಯವಸಾಯಕ್ಕೆ ಇದು ಬಹು ಮುಖ್ಯ. ಈ ಹಂತದ ನಂತರ ನದಿ ಸಮುದ್ರಕ್ಕೆ ಸೇರುತ್ತದೆ. ಭಾರತದಲ್ಲಿ ಪೂರ್ವಕ್ಕೆ ಹರಿಯುವ ನದಿಗಳು ಸಮುದ್ರಕ್ಕೆ ಡೆಲ್ಟಾ (Delta) ಮುಖಾಂತರ ಸೇರುತ್ತದೆ ಹಾಗೂ ಪಶ್ಚಿಮಕ್ಕೆ ಹರಿಯುವ ನದಿಗಳು ಎಸ್ಟ್ಯುವರಿ (Estuary) ಮುಖಾಂತರ ಸೇರುತ್ತದೆ.

ಭಾರತದಲ್ಲಿ ನದಿಗಳ ವರ್ಗೀಕರಣ ಹೀಗಿದೆ:
1. ಪೂರ್ವಕ್ಕೆ ಹರಿಯುವ ನದಿಗಳು (ಗಂಗಾ, ಗೋದಾವರಿ, ಕೃಷ್ಣ, ಕಾವೇರಿ…)
2. ಪಶ್ಚಿಮಕ್ಕೆ ಹರಿಯುವ ನದಿಗಳು (ತಾಪಿ, ನರ್ಮದಾ, ಶರಾವತಿ, ನೇತ್ರಾವತಿ…)
3. ದೀರ್ಘಕಾಲಿಕ ನದಿಗಳು – ಈ ನದಿಗಳು ಹಿಮಾಲಯದಲ್ಲಿ ಹುಟ್ಟುತ್ತವೆ, ಎಂದಿಗೂ ಬತ್ತುವುದಿಲ್ಲ.
4. ದೀರ್ಘ ಕಾಲಿಕ ನದಿಗಳು – 2 – ಈ ನದಿಗಳು ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತವೆ.
ಈ ರೀತಿ ನೈಸರ್ಗಿಕವಾಗಿ ಸಾವಿರಾರು ವರ್ಷಗಳಿಂದ ಹರಿಯುವ ನದಿಗಳ ಜೋಡಣೆ ಮತ್ತು ದಿಕ್ಕು ಬದಲಿಸುವ ಕಾರ್ಯಕ್ಕೆ ಮುಂದಾಗಿರುವ ಸರ್ಕಾರ ಇನ್ನೊಮ್ಮೆ ಪರಿಗಣಿಸಬೇಕು. ಕೆನ್-ಬೆತ್ವಾ ನದಿ ಜೋಡಣೆಯ ಯೋಜನೆ ಈಗ ಕಾರ್ಯರೂಪಕ್ಕೆ ತರಲು ಎಲ್ಲ ಸಿದ್ಧತೆಗಳನ್ನು ಸರ್ಕಾರ ಮಾಡಿಕೊಡಿದೆ. ಈ ರೀತಿಯ ಕಾರ್ಯಗಳನ್ನು ಪೂರ್ತಿ ದೇಶಕ್ಕೆ ವಿಸ್ತರಿಸಿ ಪ್ರತಿಯೊಂದು ನದಿಯನ್ನು ಪರಸ್ಪರ ಜೋಡಿಸಿ, ಸಮುದ್ರಕ್ಕೆ ಸೇರುವ ನೀರು ಪೋಲಾಗುತ್ತದೆ ಎಂದು ಭಾವಿಸಿ ಅಭಿವೃದ್ದಿಯ ಕನಸು ಕಟ್ಟಿಕೊಂಡು ಮುನ್ನಡೆಯುವ ಸರ್ಕಾರಕ್ಕೆ ಏನನ್ನು ಹೇಳಬೇಕೋ. ಸಮುದ್ರಕ್ಕೆ ಸೇರುವ ನೀರು ಪೋಲಾಗುವುದಿಲ್ಲ, ಅದು ಒಂದು ನೈಸರ್ಗಿಕ ಕ್ರಿಯೆ. ಸಮುದ್ರದ ಲವಣಾಂಶ ಪರ್ಸೆಂಟೇಜ್ ಅನ್ನು ಅಚಲವಾಗಿಡಿಸಲು, ಅಲ್ಲಿರುವ ಜೀವಿಗಳ ಸಂರಕ್ಷಣೆಯ ಹೊಣೆ ಹೊರುತ್ತದೆ. ಅದನ್ನು ಬದಲಿಸಲು ಹೊರಟರೆ ನಮ್ಮ ನದಿಗಳನ್ನು ನಾವೇ ಕೊಂದಂತೆ ಎಂದು ಹಲವಾರು ವಿಜ್ಞಾನಿಗಳು ಮತ್ತು ಪರಿಸರ ಹಾಗು ನದಿ ತಜ್ಞರು ಹೇಳಿದ್ದಾರೆ.

ಕೇನ್-ಬೆತ್ವಾ ನದಿ ಜೋಡಣೆಯಾದರೆ ಇದೀಗಷ್ಟೇ ಬೇಟೆಗಾರರ ಬಂದೂಕಿನಿಂದ ಜರ್ಜರಿತಗೊಂಡು ಚೇತರಿಸಿಕೊಳ್ಳುತ್ತಿರುವ ಪನ್ನಾ ಟೈಗರ್ ರಿಸರ್ವ್ ನ ಸುಮಾರು ಎಕರೆಗಳು ಮುಳುಗಡೆಗೊಳ್ಳಲಿದೆ, ಅಲ್ಲಿರುವ ಶಿಲಾಯುಗದ ಗುಹೆಗಳ ಸಹಿತ. ಇನ್ನೂ ಅದೆಷ್ಟು ಕಾಡುಗಳು ಈ ರೀತಿ ಮುಳುಗಲಿದೆಯೊ?
ದೊಡ್ಡ ಜನಸಂಖ್ಯೆಯ ನಮ್ಮ ದೇಶದಲ್ಲಿ ನಮ್ಮ ಉಳಿವಿಗೆ ಇರುವ ಕಾಡು ಬರಿ ಶೇಕಡಾ 21 ಮಾತ್ರ. ನಮ್ಮೆಲ್ಲ ನದಿಗಳು ಹುಟ್ಟುವುದು ಅರಣ್ಯ ಪ್ರದೇಶದಲ್ಲೇ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನದಿಗಳು ಮತ್ತು ಅರಣ್ಯಗಳ ಮೇಲಿನ ಒತ್ತಡಗಳು ಅನೇಕ ಅದರ ಒಂದು ಮುಖವಷ್ಟೆ. ಈ ನದಿ ಜೋಡಣೆ, ಬರ ಪರಿಹಾರ, ರೈತರ ಸಮಸ್ಯೆಗಳು, ಕುಡಿಯುವ ನೀರಿನ ಪೂರೈಕೆಗೆ ವೈಜ್ಞಾನಿಕವಾಗಿ ಉನ್ನತಮಟ್ಟದಲ್ಲಿ ಸರ್ಕಾರದಲ್ಲಿ ಚರ್ಚೆಗಳು ಆಗಬೇಕು. ಒಂದು ಕಣ್ಣಿಗೆ ಬೆಣ್ಣೆ ,ಒಂದು ಕಣ್ಣಿಗೆ ಸುಣ್ಣ ಹಚ್ಚುವುದನ್ನು ಬಿಟ್ಟು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳ ಜೊತೆ ಸೇರಿ ಹೊಸ ಅರಣ್ಯ ಮತ್ತು ನದಿ ಸಂರಕ್ಷಣೆಯನೀತಿಗೆ ನಾಂದಿ ಹಾಡಬೇಕು.
ಲೇಖಕರು ಪರಿಸರ ತಜ್ಞರು