ಹಿರಿಯ ರಾಜಕಾರಣಿ ಮತ್ತು ಚಾಣಕ್ಯ ದೇವೇಗೌಡರ ಸಖ್ಯವೆಂದರೆ ಮಹಾಭಾರತದ ಧೃತರಾಷ್ಟ್ರನ ಆಲಿಂಗನಕ್ಕಿಂತ ಕೆಟ್ಟದ್ದು ಎನ್ನುವ ಜನಜನಿತ ನಾಣ್ಣುಡಿ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮೂರನೆಯ ಬಾರಿ ಸತ್ಯವಾಗಿದೆ. ಧೃತರಾಷ್ಟ್ರನ ಆಲಿಂಗನಕ್ಕೆ ಎದುರಿಗಿದ್ದ ಉಕ್ಕಿನ ಪ್ರತಿಮೆಯನ್ನು ಪುಡಿಪುಡಿ ಮಾಡುವ ಶಕ್ತಿ ಇದ್ದರೆ, ಗೌಡರ ರಾಜಕಿಯ ಅಲಿಂಗನ ಎರಡೂ ಕಡೆಗೂ, ಅಂದರೆ ಆಲಿಂಗನ ಮಾಡಿದವರಿಗೂ, ಮಾಡಿಸಿಕೊಂಡವರಿಗೂ ಹಾನಿಯನ್ನು ಸಮಪ್ರಮಾಣದಲ್ಲಿ ಮಾಡಬಹುದು ಎನ್ನುವುದನ್ನು ಲೋಕಸಭಾ ಚುನಾವಣೆಯ ಪರಿಣಾಮೋತ್ತರ ಘಟನೆಗಳಿಂದ ತಿಳಿಯಬಹುದು.
ಗೌಡರ ಅಲಿಂಗನದ ರುಚಿಯನ್ನು ಈಗಾಗಲೇ ಎರಡು ಬಾರಿ ಅವರ ರಾಜಕೀಯ ಸಹಾನುವರ್ತಿಗಳು ಮತ್ತು ರಾಜಕೀಯ ವಿರೋಧಿಗಳು ಕಂಡಿದ್ದಾರೆ. ಆದರೆ, ಈಗ ಕೊನೆಗೊಂಡ ಲೋಕಸಭಾ ಚುನಾವಣೆ ಎಂಬ ಮೂರನೆಯ ಅಂಕದಲ್ಲಿ, ಈ ನಾಟಕ ಆಡಿದ ಇಬ್ಬರೂ, ಅಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಬಹಳ ದೊಡ್ಡ ಬೆಲೆ ತೆರಬೇಕಾಗಿದೆ. ಇದರಿಂದ ಒದ್ದಾಡಬೇಕಾಗಿದ್ದ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಯಶಸ್ಸಿನ ಹುಮ್ಮಸ್ಸಿನಿಂದ ಬೀಗುತ್ತಿದ್ದಾರೆ.
ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ಉಂಟಾದಾಗ, ಎರಡನೆಯ ಮತ್ತು ಮೂರನೆಯ ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್, ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ರಚಿಸಿದ್ದು ಎಲ್ಲರಿಗೆ ತಿಳಿದಿದೆ. ಈ ಮೈತ್ರಿ ವ್ಯವಸ್ಥೆಯನ್ನು, 2019ರ ಲೋಕಸಭೆ ಚುನಾವಣೆಗೂ ವಿಸ್ತರಿಸಿ ಬೆಳೆಯುತ್ತಿರುವ ನರೇಂದ್ರ ಮೋದಿಯವರಿಗೆ ಮತ್ತು ಬಿಜೆಪಿಗೆ ಕಡಿವಾಣ ಹಾಕಲು ಬಳಸಿಕೊಳ್ಳುವ ನಿರ್ಧಾರವನ್ನು ಎರಡೂ ಪಕ್ಷಗಳ ರಾಷ್ಟ್ರೀಯ ಆದ್ಯಕ್ಷರುಗಳ ಮಟ್ಟದಲ್ಲಿ ತೆಗೆದುಕೊಳ್ಳಲಾಯಿತು. ಅದರಂತೆ, ಕರ್ನಾಟಕದ ಎಲ್ಲ 28 ಲೋಕಸಭಾ ಕ್ಷೇತ್ರಗಳಿಗೆ ಸ್ಥಾನ ಹೊಂದಾಣಿಕೆಯ ವ್ಯವಸ್ಥೆಯು ಆಗಿ, ಎರಡೂ ಮೈತ್ರಿ ಪಕ್ಷಗಳು ಬಹು ಉತ್ಸಾಹದಿಂದ ಲೋಕಸಭಾ ಚುನಾವಣೆಯನ್ನು ಎದುರಿಸಿದವು. ಅವುಗಳಿಗೆ ಅವರವರದೇ ವಿಶೇಷ ವಿಷಯ ಪಟ್ಟಿಯೂ ಆಯಿತು.
ರಾಹುಲ್ ಗಾಂಧಿಯವರಿಗೆ ಪ್ರಧಾನಿ ನರೇಂದ್ರ ಮೋದಿ ಎರಡನೆಯ ಬಾರಿ ಆ ಹುದ್ದೆಗೆ ಬರಬಾರದೆಂದು ಇದ್ದರೆ, ಕರ್ನಾಟಕದ ದೇವೇಗೌಡರ ಕನಸೇ ಬೇರೆ; ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಅತಂತ್ರ ಪರಿಸ್ಥತಿ ನಿರ್ಮಾಣವಾಗಿ ಬಿಜೆಪಿಯೇತರ ಪಕ್ಷಗಳ ಸರಕಾರ ರಚಿಸುವ ಪರಿಸ್ಥಿತಿ ಏನಾದರೂ ನಿರ್ಮಾಣವಾದಲ್ಲಿ ಪ್ರಧಾನಿಯ ಪಟ್ಟಕ್ಕೆ ಏರಬಹುದು ಎಂಬುದು. ಇದೇ ನೆವ ಮಾಡಿಕೊಂಡು ತಮ್ಮ ಕುಟುಂಬದ ಮೂರನೆಯ ತಲೆಮಾರಿನ ಇಬ್ಬರು ಮೊಮ್ಮಕ್ಕಳು- ಪ್ರಜ್ವಲ್ (ರೇವಣ್ಣನವರ ಮಗ) ಹಾಗೂ ನಿಖಿಲ್ ಅವರಿಗೆ (ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ) ರಾಜಕೀಯ ರಂಗಪ್ರವೇಶ ಮಾಡಿಸಿದ್ದು. ಇದಕ್ಕಾಗಿ ತಮ್ಮ ಸ್ವಕ್ಷೇತ್ರವಾದ ಹಾಸನವನ್ನು ರೇವಣ್ಣನವರ ಮಗನಿಗೆ ಬಿಟ್ಟು, ತಮ್ಮ ಪಕ್ಷದ ಅಭ್ಯರ್ಥಿ ಗೆದ್ದಿದ್ದ ಮಂಡ್ಯವನ್ನು ಇನ್ನೊಬ್ಬ ಮೊಮ್ಮಗನಿಗೆ ಕೊಟ್ಟು, ತಮಗಾಗಿ ತುಮಕೂರನ್ನು ಬಿಡುವಂತೆ ಕಾಂಗ್ರೆಸ್‌ಗೆ ಮನವಿ ಮಾಡಿದ್ದರು.
ಆದರೆ, ಕರ್ನಾಟಕದ ಮತದಾರರು, ರಾಹುಲ್ ಗಾಂಧಿ ಮತ್ತು ದೇವೇಗೌಡರ ಕನಸುಗಳನ್ನು ಪೂರ್ತಿ ಭಗ್ನಗೊಳಿಸಿದ್ದಲ್ಲದೆ, ಕನಾಟಕದಲ್ಲಿರುವ ಮೈತ್ರಿ ಸರಕಾರದ ಭವಿಷ್ಯದ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನೂ ಇಟ್ಟರು.
ಈ ಬಾರಿ ಕಾಂಗ್ರೆಸ್, ಕರ್ನಾಟಕದಲ್ಲಿ ಇರುವ 28 ಸ್ಥಾನಗಳಲ್ಲಿ ಬೆಂಗಳೂರು ಗ್ರಾಮೀಣ ಕ್ಷೇತ್ರ ಬಿಟ್ಟರೆ ಎಲ್ಲಿಯೂ ಗೆದ್ದಿಲ್ಲ. 25 ಸ್ಥಾನಗಳು ಬಿಜೆಪಿಗೆ ಹೋದರೆ, ಬೆಂಬಲಿತ ಅಭ್ಯರ್ಥಿಗೆ ಒಂದು (ಮಂಡ್ಯ) ಮತ್ತು ಜೆಡಿಎಸ್‌ಗೆ ಒಂದು (ಹಾಸನ) ಸ್ಥಾನ ಹೋಗಿದೆ.
ಕರ್ನಾಟಕ ರಾಜ್ಯ ನಿರ್ಮಾಣವಾದ ಮೇಲೆ ಮೊದಲ ಬಾರಿ, ಕಾಂಗ್ರೆಸ್ ಇಂತಹ ಕಳಪೆ ಪ್ರದರ್ಶನ ನೀಡಿದೆ. ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿ ಪ್ರಭಾವ ಹೆಚ್ಚುವ ತನಕ ಉತ್ತರ ಕರ್ನಾಟಕದ 12 ಲೋಕಸಭಾ ಕ್ಷೇತ್ರಗಳು ಕಾಂಗ್ರೆಸಿನ ಭದ್ರಕೋಟೆ ಎಂದೇ ಹೆಸರಾಗಿದ್ದವು. ಕಾಂಗ್ರೆಸಿನ ಹೆಸರಿನಲ್ಲಿ ಯಾರೂ ನಿಂತರೂ ಗೆಲ್ಲುತ್ತಿದ್ದರು. 1994ರ ನಂತರ ಸುಮಾರು ಎಂಟು-ಒಂಬತ್ತು ಕ್ಷೇತ್ರಗಳು ಕ್ರಮೇಣ ಬಿಜೆಪಿ ಪ್ರಭಾವಕ್ಕೆ ಒಳಗಾದರೂ, 3-4 ಸ್ಥಾನಗಳನ್ನು ಯಾವುದೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಲೇ ಇತ್ತು. ಈ ಬಾರಿ ಕಾಂಗ್ರೆಸ್ ಎಲ್ಲಿಯೂ ಗೆದ್ದಿಲ್ಲ. ಸೋಲರಿಯದ ಸರದಾರನೆಂದು ಹೆಸರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಮೊದಲ ಬಾರಿ ಸೋಲಿನ ಸವಿಯನ್ನು ಜನ ಉಣಿಸಿದ್ದಾರೆ. ದಕ್ಷಿಣ ಕರ್ನಾಟಕದ 16 ಸ್ಥಾನಗಳಲ್ಲಿ ಬೆಂಗಳೂರು ಗ್ರಾಮೀಣ ಕ್ಷೇತ್ರ ಬಿಟ್ಟರೆ, ಎಲ್ಲ ಕಡೆ ಕಾಂಗ್ರೆಸ್ ಸೋತಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಿಂದ ಪರಾಜಯ ಹೊಂದಿದ್ದಾರೆ.
ಮತ ಗಳಿಕೆಯ ದೃಷ್ಟಿಯಿಂದಲೂ ಈ ಸೋಲು ಕಾಂಗ್ರೆಸಿಗೆ ಅತಿ ಹೀನಾಯ. ಕೆಲ ಬೆರಳೆಣಿಕೆಯಷ್ಟು ಸ್ಥಾನಗಳನ್ನು ಬಿಟ್ಟರೆ, ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿಗಳು ಚಲಾಯಿತ ಮತಗಳಲ್ಲಿ ಶೇಕಡ 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಚಾಮರಾಜನಗರದ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಅತ್ಯಂತ ಕಡಿಮೆ ಅಂತರದ (1817) ಮತಗಳಿಂದ ಗೆದ್ದರೆ, ಕಲಬುರ್ಗಿ (95,452). ಕೊಪ್ಪಳ (38,397), ಬಳ್ಳಾರಿ (55,707) ಬಿಟ್ಟರೆ ವಿಜಯದ ಅಂತರ ಒಂದು ಲಕ್ಷದಿಂದ ಮೂರು ಲಕ್ಷಕ್ಕೂ ಮೀರಿದೆ.
ಜೆಡಿಎಸ್‌ನ ಏಕಮೇವ ವಿಜಯವನ್ನು ತಂದುಕೊಟ್ಟವರು ಪ್ರಜ್ವಲ್ ರೇವಣ್ಣ (1.41 ಲಕ್ಷ ಮತಗಳ ಅಂತರ) ಹಾಸನದಲ್ಲಿ. ದೇವೆಗೌಡರು ತುಮಕೂರಿನಲ್ಲಿ (-13,339) ಮತದಿಂದ ಸೋತರೆ, ಅವರ ಇನ್ನೊಬ್ಬ ಮೊಮ್ಮಗ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ಮಗ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರ ಎದುರು 1.25 ಲಕ್ಷ ಮತಗಳ ಅಂತರದಿಂದ ಪರಾಜಯ ಹೊಂದಿದ್ದಾರೆ.
ಬಿಜೆಪಿಗೆ ಒಟ್ಟು 180.53 ಲಕ್ಷ ಮತ (51.38%), ಕಾಂಗ್ರೆಸಿಗೆ 112.03 ಲಕ್ಷ (31.88%) ಮತ ಮತ್ತು ಜೆಡಿಎಸ್‌ಗೆ 33.97 ಲಕ್ಷ (09.67%) ಮತಗಳು ಬಂದಿವೆ. 2014ರ ಚುನಾವಣೆಯಲ್ಲಿ 17 ಸ್ಥಾನ ಗೆದ್ದ ಬಿಜೆಪಿ 133.50 ಲಕ್ಷ ಮತ ಗಳಿಸಿ, ಒಂಬತ್ತು ಸ್ಥಾನ ಗಳಿಸಿದ ಕಾಂಗ್ರೆಸ್ (126.66 ಲಕ್ಷ) ಕೇವಲ ಏಳು ಲಕ್ಷ ಹೆಚ್ಚು ಮತ ಗಳಿಸಿತ್ತು. ಈ ಬಾರಿ, ಬಿಜೆಪಿ ಮತ್ತು ಕಾಂಗ್ರೆಸಿನ ನಡುವಿನ ಮತದ ಅಂತರ 68 ಲಕ್ಷಕ್ಕೆ ಏರಿದೆ. ಜೆಡಿಎಸ್‌ನ ಒಟ್ಟು ಮತ ಗಳಿಕೆಯಲ್ಲಿಯೂ ಬದಲಾವಣೆ ಕಂಡಿಲ್ಲ. ಅದಕ್ಕೆ ಕಳೆದ ಬಾರಿಗಿಂತ ಬರೀ 9,000 ಖೋತಾ ಆಗಿದೆ ಮಾತ್ರ.
ಸ್ಥಾನಗಳು ಮತ್ತು ಒಟ್ಟು ಮತ ಗಳಿಕೆಗಳ ವಿಷಯದಲ್ಲಿಯೂ ಬಿಜೆಪಿ ಮೈತ್ರಿ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿವೆ. ಮೈತ್ರಿ ಮೂಲಕ ಬಿಜೆಪಿಯನ್ನು ಕರ್ನಾಟಕದಲ್ಲಿ ಕಟ್ಟಿಹಾಕಬೇಕೆಂಬ ಕಾಂಗ್ರೆಸ್ ಮತ್ತು ಜೆಡಿಎಸ್ ವರಿಷ್ಠರ ಕನಸು ಭಗ್ನವಾಗಿದೆ. ಇತಿಹಾಸದಲ್ಲಿ ಮೊದಲ ಬಾರಿ ಇಂತಹ ಸೋಲನ್ನು ಕಾಂಗ್ರೆಸ್ ಕರ್ನಾಟಕದಲ್ಲಿ ಅನುಭವಿಸಿದೆ. ಮೈತ್ರಿಯಿಂದ ತನಗೆ ಬೇಕಾದ ರಾಜಕೀಯ ಲಾಭ ತೆಗೆಯುವ ದೇವೇಗೌಡರಿಗೂ ಹಿನ್ನಡೆಯಾಗಿದ್ದು, ಸ್ವತಃ ಸೋತಿದ್ದಾರೆ. ಚುನಾವಣೆ ಕಣದಲ್ಲಿದ್ದ ಇಬ್ಬರು ಮೊಮ್ಮಕ್ಕಳ ಪೈಕಿ ಒಬ್ಬರು ಸೋತಿದ್ದಾರೆ. ಗೆದ್ದಿರುವ ಸ್ಥಾನಗಳೂ ಕಡಿಮೆ ಆಗಿವೆ.
ಅಂಕಣಕಾರರು ಹಿರಿಯ ಪತ್ರಕರ್ತರು