ದೇಶಕ್ಕೇ ಮಾದರಿಯಾಗಿದ್ದ ʼಆಗ್ರಾʼ ಇಂದು ರೆಡ್‌ ಝೋನ್!‌

ʼನಮಸ್ತೆ ಟ್ರಂಪ್‌ʼ ಎಂದು ಅಮೆರಿಕಾ ಅಧ್ಯಕ್ಷರನ್ನ ಭಾರತಕ್ಕೆ ಆಹ್ವಾನಿಸಿ, ತಾಜ್‌ ಮಹಲ್‌ ಗೆ ಕರೆದೊಯ್ದು ಅಲ್ಲಿನ ಸ್ಮಾರಕ, ಪ್ರಕೃತಿ ಸೌಂದರ್ಯವನ್ನ ತೋರಿಸಲಾಗಿತ್ತು. ತಾಜ್‌ ಮಹಲ್‌ ಕಂಡು ಬೆರಗಾದ ಟ್ರಂಪ್‌ ದಂಪತಿ ತಾಜ್‌ ಮಹಲ್‌ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದೀಗ ಅದೇ ತಾಜ್‌ ಮಹಲ್‌ ಇರುವ ‘ಆಗ್ರಾ’ ಪ್ರದೇಶ ಸದ್ಯ ಕರೋನಾ ಹಾಟ್‌ ಸ್ಪಾಟ್.‌ ಹಾಗಂತ ಕರೋನಾಗೂ ಟ್ರಂಪ್‌ ಗೂ ಸಂಬಂಧವಿಲ್ಲ. ಫೆಬ್ರವರಿ ಸಮಯಕ್ಕೆ ಇಟೆಲಿಯಿಂದ ವಾಪಾಸಾಗಿದ್ದ ಆಗ್ರಾ ಮೂಲದ ಉದ್ಯಮಿಯೊಬ್ಬನಿಗೆ ವಾರಗಳ ಅಂತರದಲ್ಲಿ ಕರೋನಾ ಸೋಂಕು ದೃಢಪಟ್ಟಿತ್ತು. ಇದು ಉತ್ತರ ಭಾರತದಲ್ಲೆ ಕಂಡು ಬಂದ ಮೊದಲ ಪ್ರಕರಣವಾಗಿತ್ತು.

ಸದ್ಯ ಈ ಆಗ್ರಾ ನಗರದಲ್ಲಿ 1.6 ಮಿಲಿಯನ್‌ ಮಂದಿ ವಾಸಿಸುತ್ತಿದ್ದು, ಇಲ್ಲಿಯೇ 17ನೇ ಶತಮಾನದ ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ತಾಜ್‌ ಮಹಲ್‌ ಕೂಡಾ ಇದೆ. ಸದ್ಯ ಈ ಪ್ರದೇಶದಲ್ಲಿ ರೋಗಿಗಳ ಪತ್ತೆ ಹಾಗೂ ಕ್ವಾರೆಂಟೈನ್‌ ಮಾಡುವ ಕಾರ್ಯಾಚರಣೆ ಮುಂದುವರೆದಿದೆ.

ಕಳೆದ ಮಾರ್ಚ್‌ 16 ರಂದೇ ಪ್ರವಾಸಿಗರನ್ನ ತಾಜ್‌ ಮಹಲ್‌ ನಿರ್ಬಂಧ ವಿಧಿಸಿ ಕೇಂದ್ರ ಪ್ರವಾಸೋದ್ಯಮ ಇಲಾಖೆ ಸೂಚನೆ ನೀಡಿತ್ತು. ಅಂದಿನಿಂದ ಇಂದಿನವರೆಗೂ ತಾಜ್‌ಮಹಲ್‌ ಮುಚ್ಚಿದ ಸ್ಥಿತಿಯಲ್ಲೇ ಇದೆ. ಯಾರೊಬ್ಬರಿಗೂ ಅವಕಾಶ ನೀಡಲಾಗಿಲ್ಲ. ಇದರಿಂದಾಗಿ ದೇಶದ ಆರ್ಥಿಕತೆಗೂ ಸಾಕಷ್ಟು ಪರಿಣಾಮ ಬೀರಿದೆ. ಕಳೆದ ಒಂದು ವರುಷದಲ್ಲಿ ತಾಜ್‌ ಮಹಲ್‌ ಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಬರೋಬ್ಬರಿ 70 ಲಕ್ಷ. ಇದರಲ್ಲಿ ಲಕ್ಷಾಂತರ ವಿದೇಶಿ ಪ್ರವಾಸಿಗರೂ ಇದ್ದಾರೆ. ಆದರೆ ಈ ವರುಷದ ಆರಂಭದಲ್ಲೇ ಕರೋನಾ ಮೆಲ್ಲನೆ ದಾಂಗುಡಿಯಿಟ್ಟಿದ್ದು, ಭಾರತ ಮಾತ್ರವಲ್ಲದೇ ಜಗತ್ತಿನ ಎಲ್ಲಾ ಪ್ರವಾಸೋದ್ಯಮಕ್ಕೂ ಹಿನ್ನಡೆಯಾಗಿದೆ.

ಅಚ್ಚರಿ ಅಂದ್ರೆ ಎಪ್ರಿಲ್‌ ತಿಂಗಳ ಅರ್ಧದವರೆಗೂ 50ಕ್ಕೂ ಕಡಿಮೆ ಸೋಂಕುಗಳಷ್ಟೇ ಆಗ್ರಾ ನಗರದಲ್ಲಿ ಕಾಣಿಸಿಕೊಂಡಿದ್ದವು. ಕೇಂದ್ರ ಆರೋಗ್ಯ ಸಚಿವಾಲಯ ತೋರಿದ್ದ ತುರ್ತು ಕಾರ್ಯಯೋಜನೆಗೆ ಸ್ವತಃ ಪ್ರಧಾನ ಮಂತ್ರಿ ಕೂಡಾ ಸಂತೋಷ ವ್ಯಕ್ತಪಡಿಸಿದ್ದರು. ʼಆಗ್ರಾ ಮಾದರಿʼಯನ್ನೇ ದೇಶಾದ್ಯಂತ ಜಾರಿಗೆ ತರೋದಾಗಿ ನರೇಂದ್ರ ಮೋದಿ ನೇತೃತ್ವದ ಸರಕಾರ ತಿಳಿಸಿತ್ತು. ಮಾತ್ರವಲ್ಲದೇ ಭಾರತೀಯ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ಲವ್‌ ಅಗರ್ವಾಲ್‌ ಕೂಡಾ ಎಪ್ರಿಲ್‌ 11 ರಂದು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ “ಭಾರತ ಯಾವ ರೀತಿ ಕರೋನಾ ವಿರುದ್ಧ ಹೋರಾಡುತ್ತಿದೆ ಅನ್ನೋದಕ್ಕೆ ಆಗ್ರಾವೇ ಒಂದೊಳ್ಳೆ ಉದಾಹರಣೆ” ಎಂದಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ, ಎರಡನೇ ಹಂತದ ಕರೋನಾ ಆಗ್ರಾದಲ್ಲಿ ಆತಂಕವನ್ನ ಸೃಷ್ಟಿ ಮಾಡಿದೆ. ಕಠಿಣ ಲಾಕ್‌ಡೌನ್‌ ಅಳವಡಿಸಲಾಗಿದೆ.

ಸದ್ಯ ರೆಡ್‌ ಝೋನ್‌ ನಲ್ಲಿರುವ ಆಗ್ರಾ ನಗರವೊಂದರಲ್ಲೇ 596 ಮಂದಿ ಸೋಂಕು ಬಾಧಿತರಾಗಿದ್ದು, 14 ಮಂದಿ ಅಸುನೀಗಿದ್ದಾರೆ. ಇದೆಲ್ಲದರ ಮೂಲವೂ ಇಟೆಲಿಯಿಂದ ಬಂದ ವ್ಯಕ್ತಿ ಎಂದೇ ಅಲ್ಲಿನ ಜಿಲ್ಲಾಡಳಿತ ನಂಬಿದೆ. ಇಟೆಲಿಯಿಂದ ಬಂದ ಆ ವ್ಯಕ್ತಿಯು ತಾಜ್‌ ಮಹಲ್‌ ನಿಂದ ಕೇವಲ 10 ಕಿಲೋ ಮೀಟರ್‌ ದೂರದಲ್ಲಿ ವಾಸಿಸುವವರಾಗಿದ್ದಾರೆ. ಈ ರೀತಿ ಬಂದ ವ್ಯಕ್ತಿಯಿಂದಾಗಿ ಅವರ ಇಡೀ ಕುಟುಂಬವೇ ಕರೋನಾ ಸೋಂಕಿಗೆ ಒಳಗಾಗಿತ್ತು. ಆರಂಭಿಕ ಹಂತದಲ್ಲಿ ಕ್ವಾರೆಂಟೈನ್‌ ಒಳಪಡಿಸದ ಪರಿಣಾಮ, ಆ ವ್ಯಕ್ತಿಯ ಓಡಾಡಿದ್ದಲೆಲ್ಲ ಒಂದಿಲ್ಲೊಂದು ಪಾಸಿಟಿವ್‌ ಪ್ರಕರಣಗಳು ದೃಢಪಟ್ಟವು. ಆನಂತರದ ದಿನಗಳಲ್ಲಿ ತಬ್ಲೀಗಿ ಜಮಾಅತ್‌ ಧಾರ್ಮಿಕ ಸಭೆಗೆ ತೆರಳಿದವರಲ್ಲಿ ಆಗ್ರಾದಲ್ಲಿ 104 ಮಂದಿಗೆ ಕರೋನಾ ಸೋಂಕು ದೃಢಪಟ್ಟಿತ್ತು.

ಸದ್ಯ ಅಲ್ಲಿ ಗೂಗಲ್‌ ಮ್ಯಾಪ್‌ ಸಹಾಯದಿಂದ ಪ್ರದೇಶಗಳನ್ನ ಗುರುತಿಸಿ ಪರೀಕ್ಷೆ ಹಾಗೂ ಚಿಕಿತ್ಸೆ ನೀಡುವ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಆದರೆ ಸಾವಿರಾರು ಮನೆಯಿರುವ ಆಗ್ರಾದಲ್ಲಿ ಎಷ್ಟು ಚುರುಕಾಗಿ ಕಾರ್ಯನಿರ್ವಹಿಸಿದರೂ ನಿರೀಕ್ಷಿತ ಫಲಿತಾಂಶ ಕಾಣಲು ಸಾಧ್ಯವಾಗುತ್ತಿಲ್ಲ ಅನ್ನೋದು ಆರೋಗ್ಯ ಇಲಾಖೆ ಮುಂದಿರುವ ಸವಾಲು.

ಇದೀಗ ಅಲ್ಲಿನ ಸ್ಥಳೀಯಾಡಳಿತವು ರೋಗ ಭಾದಿತ ಕೇಂದ್ರವನ್ನ ಗುರುತಿಸಿ ಅದರ ಸುತ್ತ 3 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಕಂಟೋನ್ಮೆಂಟ್‌ ವಲಯಗಳನ್ನಾಗಿ ಮಾಡಿ ನಿಗಾವಿಟ್ಟಿದೆ. ಈವರೆಗೂ 3000 ಕಾರ್ಮಿಕರು ಹಾಗೂ 1,65,000 ಮಂದಿಯನ್ನ ಪರೀಕ್ಷೆಗೊಳಪಡಿಸಲಾಗಿದೆ. ಎಲ್ಲೆಲ್ಲ ಪ್ರಕರಣಗಳು ಹೆಚ್ಚಿವೆಯೋ ಅಲ್ಲಿ ಸಂಪೂರ್ಣ ಸೀಲ್‌ಡೌನ್‌ ಮಾಡಿ ಸೋಂಕು ಹರಡುವಿಕೆ ತಡೆಗಟ್ಟಲು ಅಲ್ಲಿನ ಜಿಲ್ಲಾಡಳಿತ ಪ್ರಯತ್ನಪಡುತ್ತಿದೆ. ಇದರಿಂದ ಸಾವಿರಾರು ಮನೆಗಳು ಸೀಲ್‌ಡೌನ್‌ ನಲ್ಲಿ ಬಂಧಿಯಾಗಿದ್ದು, ಹತ್ತು ಸಾವಿರದಷ್ಟು ಮಂದಿ ಅತಂತ್ರರಾಗಿದ್ದಾರೆ. ಮಾತ್ರವಲ್ಲದೇ ಲಾಕ್‌ಡೌನ್‌ ಪ್ರದೇಶದಲ್ಲಿ ಕ್ಯಾಮೆರಾ ಕಣ್ಗಾವಲನ್ನೂ ಇರಿಸಲಾಗಿದೆ.

ಹಾಗಂತ ಆಗ್ರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಪರೀಕ್ಷೆ ಕೂಡಾ ನಡೆಸಲಾಗುತ್ತಿದೆ. ಒಂದೊಮ್ಮೆ ಒಂದೇ ವ್ಯಕ್ತಿಯನ್ನ ಎರಡೆರಡು ಬಾರಿ ಪರೀಕ್ಷೆಗೊಳಪಡಿಸಿದ್ದೂ ಇದೆ. ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವವರ ಪತ್ತೆ ಹಚ್ಚಲು ಚಾರ್ಟ್‌ ರಚಿಸಿ ಕಾರ್ಯಯೋಜನೆ ಕೂಡಾ ಅಲ್ಲಿನ ಸ್ಥಳೀಯಾಡಳಿತ ಮಾಡುತ್ತಿದೆ.

ಒಟ್ಟಿನಲ್ಲಿ ಇಡೀ ರಾಷ್ಟ್ರದ ಗಮನಸೆಳೆದಿದ್ದ ಆಗ್ರಾ ಇಂದು ಮಾದರಿಯಾಗುವ ಬದಲು ಆತಂಕವನ್ನ ಎದುರು ನೋಡುತ್ತಿದೆ. ಇನ್ನು 596 ಮಂದಿಯಲ್ಲಿ 478 ಸಕ್ರಿಯ ಪ್ರಕರಣಗಳಿದ್ದು ಆಗ್ರಾ ಜಿಲ್ಲಾಡಳಿತ ಮಾತ್ರವಲ್ಲದೇ ಉತ್ತರ ಪ್ರದೇಶದಲ್ಲೇ ಅತ್ಯಧಿಕ ರೋಗಿಗಳನ್ನ ಹೊಂದಿದಂತಾಗಿದೆ.

Please follow and like us:

Related articles

Share article

Stay connected

Latest articles

Please follow and like us: