ದೇಶದ ಧಮನಿಗಳಲ್ಲಿ ಹರಿಯತ್ತಿರುವ ಗಂಡಾಳಿಕೆ ಮತ್ತು ಸ್ತ್ರೀದ್ವೇಷ ನಿತ್ಯ ನಿರಂತರ ನಂಜು ಅಪ್ಪಟ ಆತ್ಮಘಾತಕ. ಈ ಕಟುಸತ್ಯಕ್ಕೆ ಮುಖಾಮುಖಿಯಾಗಿ ಒಪ್ಪಿಕೊಂಡು ತಿದ್ದಿಕೊಳ್ಳುವುದು ಆರೋಗ್ಯಕರ ಸಮಾಜದ ಲಕ್ಷಣ. ಬೆನ್ನು ತೋರಿಸಿ ಕುರುಡುತನ ನಟಿಸುವುದು ರೋಗಗ್ರಸ್ತ ನಾಗರಿಕತೆಯ ಹೆಗ್ಗುರುತು. ಸಮಾನತೆಯನ್ನು ನಿರಾಕರಿಸುವ ನಾಗರಿಕತೆ ಶ್ರೇಷ್ಠ ಎನಿಸಿಕೊಳ್ಳುವುದು ಸಾಧ್ಯವಿಲ್ಲ. ದೆಹಲಿ ಲೋಕಸಭಾ ಚುನಾವಣೆಯ ಜಿದ್ದಾಜಿದ್ದಿನ ಕಾಳಗದ ನಡುವೆ ಮೊನ್ನೆ ನಡೆದಿರುವ ಅನಾಮಧೇಯ ಕೊಳಕು ಪತ್ರದ ಹಗರಣ ಯಾವ ನಾಗರಿಕ ಸಮಾಜಕ್ಕೂ ಶೋಭೆ ತರುವುದಿಲ್ಲ. ದೆಹಲಿ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ದೇಶದ ಮಾಜಿ ಕ್ರಿಕೆಟ್ ತಾರೆ ಗೌತಮ್ ಗಂಭೀರ್ ಬಿಜೆಪಿ ಹುರಿಯಾಳು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿತು ಬಂದಿರುವ ಆತಿಶಿ ಮಾರ್ಲೇನ ಎಂಬ ಸುಶಿಕ್ಷಿತ ಪ್ರತಿಭಾವಂತೆಯನ್ನು ಆಮ್ ಆದ್ಮಿ ಪಾರ್ಟಿ ಇಲ್ಲಿ ತಿಂಗಳುಗಳಷ್ಟು ಮೊದಲೇ ಕಣಕ್ಕೆ ಇಳಿಸಿತ್ತು.
ದೆಹಲಿಯ ಸರ್ಕಾರಿ ಶಾಲೆಗಳ ಸುಧಾರಣೆ ಅರವಿಂದ್ ಕೇಜ್ರೀವಾಲ್ ಸರ್ಕಾರದ ಹೊಳೆಯುವ ಸಾಧನೆಗಳಲ್ಲೊಂದು. ಈ ಸಾಧನೆಯ ಹಿಂದಿನ ದೊಡ್ಡ ಶಕ್ತಿ ಆತಿಶಿ ಮಾರ್ಲೇನ ಸಿಂಗ್. ದೆಹಲಿ ವಿಶ್ವವಿದ್ಯಾಲಯದ ವಿಜಯಕುಮಾರ್ ಸಿಂಗ್ ಮತ್ತು ತೃಪ್ತಾ ವಾಹಿ ಎಂಬ ಪ್ರೊಫೆಸರ್ ದಂಪತಿಗಳ ಮಗಳು. ಮಾರ್ಲೆನಾ ಎಂಬ ನಡು ನಾಮಧೇಯದ ಹಿಂದಿರುವುದು ಆಕೆಯ ತಂದೆ-ತಾಯಿಯರ ಮಾರ್ಕ್ಸ್ ಮತ್ತು ಲೆನಿನ್ ಕುರಿತ ಪ್ರೀತಿ. ಜಾತಿ ಸೂಚಕ ಸಿಂಗ್ ಅನ್ನು ಕೈಬಿಟ್ಟು ಮಾರ್ಲೇನವನ್ನು ಉಳಿಸಿಕೊಂಡಿದ್ದರು ಆತಿಶಿ. ದೆಹಲಿಯ ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಆತಿಶಿ, 2001ರಲ್ಲಿ ದೆಹಲಿ ವಿಶ್ವವಿದ್ಯಾಲಯಕ್ಕೇ ಪ್ರಥಮರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯ ನಂತರ ರ್ಹೋಡ್ಸ್ ಸ್ಕಾಲರ್ ಗರಿಯೂ ಅವರ ಮುಡಿಗೇರಿತ್ತು. ಆಂಧ್ರದ ರಿಶಿ ವ್ಯಾಲಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲ ಕಾಲ ಉದ್ಯೋಗ, ನಂತರ ಮಧ್ಯಪ್ರದೇಶದ ಭೋಪಾಲ್ ಬಳಿ ಜೈವಿಕ ಕೃಷಿ ಹಾಗೂ ಪ್ರಗತಿಪರ ಶಿಕ್ಷಣ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ನಂತರ ದೆಹಲಿಯ ಭ್ರಷ್ಟಾಚಾರ ವಿರೋಧಿ ಆಂದೋಲನ- ಆಮ್ ಆದ್ಮೀ ಪಾರ್ಟಿಯಲ್ಲಿ ನೆಲೆ ನಿಂತರು. ಪಕ್ಷದ ತಲೆಯಾಳುಗಳಲ್ಲಿ ಒಬ್ಬರು. ವಕ್ತಾರೆಯಾಗಿ ತೂಕದ ಮಾತುಗಳನ್ನು ಆಡಿ ತಮಗೂ ತಮ್ಮ ಪಕ್ಷಕ್ಕೂ ಹೆಸರು ತಂದವರು.
2014ರಲ್ಲಿ ಮಹಾತ್ಮ ಗಾಂಧೀಜಿ ಮೊಮ್ಮಗ ರಾಜಮೋಹನ ಗಾಂಧಿ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿ ದೆಹಲಿ ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಗೆಲುವು ಬಿಜೆಪಿಗೆ ಒಲಿದಿತ್ತು. ರಾಜಮೋಹನ ಅವರು ಎರಡನೆಯ ಸ್ಥಾನ ಮತ್ತು ಶೀಲಾ ದೀಕ್ಷಿತ್ ಅವರ ಮಗ ಸಂದೀಪ್ ದೀಕ್ಷಿತ್ ಮೂರನೆಯ ಸ್ಥಾನದಲ್ಲಿದ್ದರು. ಆಮ್ ಆದ್ಮಿ ಪಾರ್ಟಿ ಈ ಸಲ ಆತಿಶಿ ಅವರನ್ನು ಈ ಕ್ಷೇತ್ರದಿಂದ ಕಣಕ್ಕೆ ಇಳಿಸಿತ್ತು. ಬಹುಕಾಲ ಚಾಲ್ತಿಯಲ್ಲಿದ್ದ ವದಂತಿ ನಿಜವಾಗಿ, ಕ್ರಿಕೆಟ್ ಪಟು ಗೌತಮ್ ಗಂಭೀರ್ ಕಡೆಯ ಕ್ಷಣಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆತಿಶಿ ಅವರಿಗೆ ಎದುರಾದರು. ಇದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರವಿಂದರಲ್ ಲವ್ಲೀ. ಗಂಭೀರ್ ಮತ್ತು ಆತಿಶಿ ನಡುವಣ ಸ್ಪರ್ಧೆ ಕಾವು ಪಡೆದು ಕಿಡಿಗಳು ಹಾರಿದ್ದವು. ಮತದಾನಕ್ಕೆ ನಾಲ್ಕು ದಿನ ಮುನ್ನ ಹೊರಬಿದ್ದ ಅನಾಮಧೇಯ ಕೊಳಕು ಪತ್ರವೊಂದು ಬೆಂಕಿಯನ್ನೂ ಹೊತ್ತಿಸಿತು.
ಆತಿಶಿ ವಿರುದ್ಧ ಸ್ತ್ರೀದ್ವೇಷದ ಅಶ್ಲೀಲ ಮಾತುಗಳು, ಕೀಳು ಆಪಾದನೆಗಳು ತುಂಬಿ ತುಳುಕಿರುವ ಈ ಪತ್ರ ಮನುವಾದಿ ಮನಸ್ಥಿತಿಯ ಕೈಗನ್ನಡಿಯಿಂತಿದೆ. ಈ ಪತ್ರದ ಹಿಂದಿನ ಕೈವಾಡ ಗೌತಮ್ ಗಂಭೀರ್ ಅವರದೇ ಎಂಬುದು ಆತಿಶಿ ಮತ್ತು ಆಪ್ ಆರೋಪ. ತಮ್ಮ ಕೈವಾಡ ಇದೆಯೆಂದು ರುಜುವಾತಾದರೆ ಸಾರ್ವಜನಿಕವಾಗಿ ನೇಣುಗಂಬ ಏರಲು ತಾವು ಸಿದ್ಧ ಎಂದಿರುವ ಗಂಭೀರ್, ಆಪಾದನೆ ಸುಳ್ಳಾದರೆ ಕೇಜ್ರಿವಾಲ್ ರಾಜಕೀಯ ತ್ಯಜಿಸುತ್ತಾರೆಯೇ ಎಂದು ಸವಾಲು ಹಾಕಿದ್ದಾರೆ.
ಇಷ್ಟಕ್ಕೂ ಆ ಪತ್ರದಲ್ಲೇನಿತ್ತು?
“ವಿಜಯಕುಮಾರ್ ಸಿಂಗ್ ಮತ್ತು ತೃಪ್ತಾ ವಾಹಿ ಅವರ ಮಗಳು ಆತಿಶಿ ಆಂಧ್ರದ ಗೋಮಾಂಸ ಭಕ್ಷಕ ಕ್ರೈಸ್ತನೊಬ್ಬನನ್ನು ಮದುವೆಯಾಗಿದ್ದಾಳೆ. ಮಿಶ್ರತಳಿಗೆ ಇವಳು ಉತ್ತಮ ಉದಾಹರಣೆ. ತಂದೆ ಉತ್ತರ ಪ್ರದೇಶದ ಜಾಟ್ (ಒಕ್ಕಲಿಗ)- ತಾಯಿ ಪಂಜಾಬಿ ಹಾಗೂ ಗಂಡ ಆಂಧ್ರದ ಕ್ರೈಸ್ತ. ಹರೆಯದಲ್ಲಿ ಆಂಧ್ರದ ಹಳ್ಳಿಯ ಶಾಲೆಯೊಂದರಲ್ಲಿ ಕೆಲಸ ಮಾಡುವಾಗ ಸಹಶಿಕ್ಷಕನೊಬ್ಬನೊಡನೆ ಲೈಂಗಿಕ ಕ್ರಿಯೆಯಲ್ಲಿ ನಿರತಳಾಗಿದ್ದಾಗ ಸಿಕ್ಕಿಬಿದ್ದವಳು. ಸಂಗತಿ ಬಯಲಾಗಿ ರಂಪವಾದ ಕಾರಣ ಅದೇ ಸಹಶಿಕ್ಷಕನೊಂದಿಗೆ ಮದುವೆ ಜರುಗಿತು. ದೂರದ ಹಳ್ಳಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ ಇವಳು ಅದ್ಯಾವ ಘನಂದಾರಿ ಶೈಕ್ಷಣಿಕ ನೀತಿಯನ್ನು ರೂಪಿಸುವುದು ಸಾಧ್ಯ? ಅಸಂಭವ. ದೆಹಲಿಯ ಶಿಕ್ಷಣ ಇಲಾಖೆಯಲ್ಲಿ ಇವಳಿಗಿಂತ ಪ್ರತಿಭಾವಂತರಾದ ಮತ್ತು ಹೆಚ್ಚು ಶೈಕ್ಷಣಿಕ ಅರ್ಹತೆಗಳನ್ನು ಉಳ್ಳ ಸಾವಿರಾರು ಮಂದಿ ಶಿಕ್ಷಕರಿದ್ದಾರೆ. ವಾಸ್ತವವಾಗಿ ಕುತ್ತಾ (ನಾಯಿ) ಕೇಜ್ರಿವಾಲ್ ಮತ್ತು ಕಂಜರ್ (ಶಬ್ದಕೋಶ ನಿಘಂಟಿನ ಪ್ರಕಾರ ಕಂಜರ್‌ನ ಅರ್ಥ ಸ್ತ್ರೀಯರಿಂದ ವೇಶ್ಯಾವೃತ್ತಿ ಮಾಡಿಸುವ ಅಸಭ್ಯ ಅನಾರ್ಯ ಜಾತಿ) ಮನೀಶ್ ಸಿಸೋಡಿಯಾ (ದೆಹಲಿಯ ಉಪಮುಖ್ಯಮಂತ್ರಿ) ಪರವಾದ ಗೂಂಡಾ ಇವಳು. ಯಾವುದೇ ರಾಜಕೀಯ ಹಿನ್ನೆಲೆ ಇವಳಿಗೆ ಇಲ್ಲ. ಮನೀಶ್ ಸಿಸೋಡಿಯಾ ಇವಳನ್ನು ಇಟ್ಟುಕೊಂಡಿದ್ದಾನೆ. ದೆಹಲಿ ಉತ್ತರದ ಉಮೇದುವಾರಿಕೆಯನ್ನು ಕೊಡಿಸಿದ್ದಾನೆ. ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಕುತ್ತಾ ಕೇಜ್ರಿವಾಲ್ ಮತ್ತು ಕಂಜರ್ ಸಿಸೋಡಿಯಾಗೆಂದು ಇವಳು ಹಣ ಸಂಗ್ರಹಿಸುತ್ತಾಳೆ. ಉದಾಹರಣೆಗೆ, ತನಗೆ ಬೇಕಾದ ಶುಲ್ಕ ವಸೂಲಿ ಮಾಡಲು ಖಾಸಗಿ ಶಾಲೆ ನೀಡಬೇಕಿರುವ ಲಂಚದ ಮೊತ್ತ ಒಂದು ಕೋಟಿ ರುಪಾಯಿ. ಇವಳು ಗಂಡ ಬಿಟ್ಟವಳು. ಇವಳಿಗಿರುವ ವಿವಾಹಿತ ಹೆಣ್ಣಿನ ಬಯಕೆಗಳನ್ನೆಲ್ಲ ಸಿಸೋಡಿಯಾ ತೀರಿಸುವ ಕಾರಣ ಇವಳ ಗಂಡ ಇವಳ ಜೊತೆಗಿಲ್ಲ. ಕಂಜರ್ ಸಿಸೋಡಿಯಾ ಷೆಡ್ಯೂಲ್ಡ್ ಕ್ಯಾಸ್ಟಿನವನು. ಸ್ಫುರದ್ರೂಪಿ. ಆದರೆ, ಷೆಡ್ಯೂಲ್ಡ್ ಕ್ಯಾಸ್ಟಿನವರು ಸ್ಫೂರದ್ರೂಪಿಗಳಾಗಿರುವುದು ಸಾಧ್ಯವಿಲ್ಲ, ಇವನು ಸಕ್ರಮ ತಂದೆ-ತಾಯಿಯರಿಗೆ ಹುಟ್ಟಿದವನಲ್ಲ ಎಂಬುದಕ್ಕೆ ಈ ಅಂಶವೇ ಸಾಕ್ಷಿ. ಇವನ ತಾಯಿಯು ಮೇಲ್ಜಾತಿಗೆ ಸೇರಿದ ಸುಂದರ ಗಂಡಸಿನೊಂದಿಗೆ ಕೂಡಿ ಗರ್ಭ ಧರಿಸಿರಬಹುದು. ಆತಿಶಿ ಕೂಡ ಸಿಸೋಡಿಯಾನ ಮಗನನ್ನು ಹೆರಲಿದ್ದಾಳೆ. ಸಮಾಜಕ್ಕೆ ಕಳಂಕಪ್ರಾಯ ಎನಿಸಿದ ಇಂತಹ ಹೆಂಗಸಿಗೆ ನೀವು ನಿಮ್ಮ ಮತ ನೀಡುವಿರಾ? ಇವಳೊಬ್ಬ ವೇಶ್ಯೆ. ಇವಳು ಗೆದ್ದುಬಿಟ್ಟರೆ ನೀವು ನಿಮ್ಮ ಕೆಲಸ ಮಾಡಿಸಿಕೊಳ್ಳಲು ಅಥವಾ ನೆರವು ಪಡೆಯಲು ವೇಶ್ಯೆಯೊಬ್ಬಳ ಬಳಿಗೆ ಹೋಗಬೇಕಾದೀತು ಎಂಬುದನ್ನು ಆಲೋಚಿಸಿ ನೋಡಿರಿ. ಈ ಪತ್ರವನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿರಿ ಮತ್ತು ನಿಮ್ಮ ಬಂಧು ಬಳಗವು ವೇಶ್ಯೆಯೊಬ್ಬಳಿಗೆ ಮತ ನೀಡದಂತೆ ತಡೆಯಿರಿ. ಆಪ್ ಮತ್ತು ಕಾಂಗ್ರೆಸ್ ಸೀಟು ಹೊಂದಾಣಿಕೆ ಮಾಡಿಕೊಂಡರೂ ಈ ಪಕ್ಷಗಳ ಒಬ್ಬೇ ಒಬ್ಬ ಅಭ್ಯರ್ಥಿಯೂ ದೆಹಲಿಯಲ್ಲಿ ಗೆಲ್ಲುವುದಿಲ್ಲ ಎಂದು ನಾನು ಭರವಸೆ ಕೊಡುತ್ತೇನೆ. ಥ್ಯಾಂಕ್ಸ್.”
ಆದರೆ, ಈ ಪತ್ರಕ್ಕೂ ತಮಗೂ ಸಂಬಂಧ ಇಲ್ಲವೆಂದಷ್ಟೇ ಹೇಳಿದ ಗೌತಮ್ ಗಂಭೀರ್, ಪತ್ರದಲ್ಲಿ ಬರೆದಿರುವುದನ್ನು ಖಂಡಿಸುವ ದೊಡ್ಡತನ ತೋರಲಿಲ್ಲ. ಈ ಪತ್ರ ಆಮ್ ಆದ್ಮಿ ಪಾರ್ಟಿಯದೇ ಸೃಷ್ಟಿ ಎಂದು ಬಿಜೆಪಿ ಆಪಾದಿಸಿದೆ. “ಇಂತಹ ಖೋಟಾ ಕಾಗದಗಳಿಗೆ ಗಂಭೀರ್ ಹೆದರಬೇಕಿಲ್ಲ, ಬೇಕಾದರೆ ನ್ಯಾಯಾಲಯದಲ್ಲಿ ಅವರಿಗೆ ನೆರವು ನೀಡಲು ಸಿದ್ಧ,” ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅಭಯ ನೀಡಿದ್ದಾರೆ.
ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಡದಂತೆ ಕೋಳ ತೊಡಿಸಿ ಆಕೆಯನ್ನು ಅಡುಗೆ ಮನೆ- ಮಲಗುವ ಕೋಣೆ- ಹೆರಿಗೆ ಕೋಣೆಗಳಲ್ಲಿ ಕೂಡಿ ಹಾಕುವ ಹಳೆಯ ಹುನ್ನಾರವಿದು. ಆಕೆಯ ಚಾರಿತ್ರ್ಯವನ್ನು ಪ್ರಶ್ನಿಸುವುದು ಪುರುಷಾಧಿಪತ್ಯದ ಪುರಾತನ ಕೀಳುತಂತ್ರ. ದೇಶದ ಹತ್ತು ಮಂದಿ ಸಂಸದರ ಪೈಕಿ ಒಂಬತ್ತು ಮಂದಿ ಪುರುಷರು. ಸಂಸತ್ತಿನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದ 190 ದೇಶಗಳ ಪೈಕಿ ಭಾರತದ ಸ್ಥಾನ 151ನೆಯದು. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನೇಪಾಳಕ್ಕಿಂತಲೂ ಕೆಳಗಿನ ಸ್ಥಾನ ನಮ್ಮದು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೀತಿ ನಿರ್ಧಾರ ರೂಪಿಸುವ ಸಂಸ್ಥೆಗಳಲ್ಲೂ ಮಹಿಳೆ ಬಹುತೇಕ ಅದೃಶ್ಯಳು.
ರಾಷ್ಟ್ರಪತಿ, ಪ್ರಧಾನಮಂತ್ರಿ, ರಕ್ಷಣಾ ಮಂತ್ರಿ, ವಿದೇಶಮಂತ್ರಿ ಹಾಗೂ ಲೋಕಸಭೆಯ ಸ್ಪೀಕರ್ ಸ್ಥಾನಗಳಲ್ಲಿ ಮಹಿಳೆಯರನ್ನು ಕೂರಿಸಿದ್ದೇವೆ ಎಂದು ಕೇವಲ ಪ್ರತೀಕಗಳ ಹಿಂದೆ ಅವಿತುಕೊಳ್ಳುವುದು ಶುದ್ಧ ಆಷಾಡಭೂತಿತನ. ಅರ್ಧ ಆಕಾಶ, ಅರ್ಧ ಭೂಮಿ, ಅರ್ಧ ಅಧಿಕಾರ ಆಕೆಯ ನ್ಯಾಯಬದ್ಧ ಹಕ್ಕು, ಭಿಕ್ಷೆ ಅಲ್ಲ.