ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ನೀಡಿದ ರಾಜೀನಾಮೆ ಇದೀಗ ಅಧಿಕೃತ. ಚುನಾವಣೆ ಸಂದರ್ಭದಲ್ಲಿ ನಾಯಕರಿಂದ ತಮಗೆ ಬೆಂಬಲ ಸಿಗದೆ ಬೇಸತ್ತಿದ್ದ ರಾಹುಲ್ ಇದೀಗ ನಾಯಕರ ಒತ್ತಡಕ್ಕೆ ಮಣಿಯದೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದನ್ನು ಖಚಿತಪಡಿಸಿದ್ದಾರೆ. ಹೊಸ ಅಧ್ಯಕ್ಷರ ಆಯ್ಕೆ ಮುಗಿಯುತ್ತಿದ್ದಂತೆ ಅಧಿಕಾರ ಹಸ್ತಾಂತರ ಮಾಡುವುದಾಗಿ ಹೇಳಿದ್ದಾರೆ. ಇದರೊಂದಿಗೆ ಹೊಸ ಅಧ್ಯಕ್ಷರನ್ನು ನೇಮಿಸುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮೇಲಿದೆ. ಮೋತಿಲಾಲ್ ವೋರಾ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಿಸಲು ತೀರ್ಮಾನಿಸಲಾಗಿದೆಯಾದರೂ ಈ ಬಗ್ಗೆ ಸ್ವತಃ ವೋರಾ ಅವರಿಗೇ ಇದುವರೆಗೆ ಮಾಹಿತಿ ಇಲ್ಲ. ಹೀಗಾಗಿ ಹೊಸ ಅಧ್ಯಕ್ಷರ ನೇಮಕ ಇನ್ನೂ ಅಂತಿಮವಾಗಿಲ್ಲ.
ರಾಹುಲ್ ಅವರಿಗಿಂತ ಮುಂಚೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಮತ್ತೆ ಆ ಸ್ಥಾನಕ್ಕೇರುವ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ಲೋಕಸಭೆ ಚುನಾವಣೆ ವೇಳೆ ಮತ್ತೆ ಸಕ್ರಿಯರಾಗಿದ್ದ ನೆಹರೂ ಕುಟುಂಬದ ಕುಡಿ, ಸೋನಿಯಾ ಪುತ್ರಿ ಪ್ರಿಯಾಂಕ ಗಾಂಧಿ ಕೂಡ ಆ ಸ್ಥಾನಕ್ಕೇರುವ ಸಾಧ್ಯತೆ ಕಡಿಮೆ. ಹೀಗಾಗಿ ಮತ್ತೊಮ್ಮೆ ನೆಹರೂ ಕುಟುಂಬ ಹೊರತಾದ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕಿದೆ. ಆದರೆ, ಅದು ಅಷ್ಟು ಸುಲಭದ ಕೆಲಸ ಅಲ್ಲ ಎಂಬುದು ಸ್ವತಃ ಸೋನಿಯಾ, ರಾಹುಲ್ ಮತ್ತು ಸಿಡಬ್ಲ್ಯುಸಿಗೆ ಇದೆ.
ಏಕೆಂದರೆ, ಕಾಂಗ್ರೆಸ್ ಅಧ್ಯಕ್ಷರಾಗಿ ನೆಹರೂ ಕುಟುಂಬದವರ ಹೊರತಾಗಿ ಯಾರೇ ಆಯ್ಕೆಯಾದರೂ ನಿರ್ಧಾರಗಳನ್ನು ಕೈಗೊಳ್ಳುವ ಮುಕ್ತ ಸ್ವಾತಂತ್ರ್ಯ ಇರುವುದಿಲ್ಲ. ಏನೇ ಆದರೂ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕ ಅವರ ಮೂಗಿನ ನೇರಕ್ಕೆ ಅವರು ನಡೆದುಕೊಳ್ಳಬೇಕು. ಈ ಹಿಂದೆ ನೆಹರೂ ಕುಟುಂಬ ಸದಸ್ಯರ ಹೊರತಾಗಿ ಅಧ್ಯಕ್ಷರು ಆಯ್ಕೆಯಾದಾಗ ಅದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾದ ಡಾ. ಮನಮೋಹನ್ ಸಿಂಗ್ ಅವರಿಗೇ ಮುಕ್ತವಾಗಿ ಆಡಳಿತ ನಡೆಸಲು ಅವಕಾಶ ಸಿಗಲಿಲ್ಲ ಎಂದಾದರೆ ಪಕ್ಷದ ಅಧ್ಯಕ್ಷರಾದವರಿಗೆ ಆ ಅವಕಾಶ ಸಿಗುವುದೇ ಎಂಬುದು ಪ್ರಶ್ನೆ.
1951ರಲ್ಲಿ ಜವಹರಲಾಲ್ ನೆಹರೂ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಇದುವರೆಗೆ ಆ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದವರಲ್ಲಿ ಬಹುತೇಕ ಇದ್ದದ್ದು ಅವರ ಕುಟುಂಬದವರೆ. ನೆಹರೂ ನಂತರ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ಸ್ಥಾನಕ್ಕೇರಿದರು. ಮಧ್ಯೆ ಕೆಲವರು ಬಂದು ಹೋದರಾದರೂ ಹೆಚ್ಚು ಕಾಲ ಉಳಿಯಲಿಲ್ಲ. ಅವರು ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ನೆಹರೂ ಕುಟುಂಬದ ಮಾತೇ ಅಂತಿಮವಾಗುತ್ತಿತ್ತು.

ಕರ್ನಾಟಕಕ್ಕೆ ಸಿಗಲಿದೆಯೇ ಅಧ್ಯಕ್ಷ ಸ್ಥಾನ?
ರಾಹುಲ್ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಈಗ ಕಾಡತೊಡಗಿದೆ. ವಯಸ್ಸಿನಲ್ಲಿ ಹಿರಿಯರಾಗಿರುವ ಮೋತಿಲಾಲ್ ವೋರಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರೆ ಹೇಗೆ ಎಂಬ ಚಿಂತನೆ ನಡೆಯುತ್ತಿದೆಯಾದರೂ ಅವರ ವಯಸ್ಸೇ ಅಡ್ಡಿಯಾಗುವ ಸಾಧ್ಯತೆ ಇದೆ. ಇವರನ್ನು ಹೊರತುಪಡಿಸಿದರೆ ಸದ್ಯಕ್ಕೆ ಮುಂಚೂಣಿಯಲ್ಲಿರುವ ಹೆಸರುಗಳು ಈ ಹಿಂದೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿದ್ದ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ, ಮಹಾರಾಷ್ಟ್ರದ ದಲಿತ ನಾಯಕ, ಕೇಂದ್ರದ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ, ಕೇಂದ್ರದ ಮತ್ತೊಬ್ಬ ಮಾಜಿ ಸಚಿವ, ಮಹಾರಾಷ್ಟ್ರದ ಮುಕುಲ್ ವಾಸ್ನಿಕ್. ಮೂವರೂ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಪೈಕಿ ಒಬ್ಬರನ್ನು ನೇಮಿಸಿದರೂ ಕಾಂಗ್ರೆಸ್ ನ ಮೊದಲ ದಲಿತ ಅಧ್ಯಕ್ಷರಾಗುತ್ತಾರೆ.
ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸಚಿವರಾಗಿ ಸಾಕಷ್ಟು ಕೆಲಸ ಮಾಡಿ ಹೈಕಮಾಂಡ್ ಮೆಚ್ಚುಗೆ ಗಳಿಸಿದ್ದರು. ಉತ್ತಮ ವಾಗ್ಮಿಯೂ ಆಗಿದ್ದ ಮತ್ತು ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವ ಛಾತಿ ಹೊಂದಿರುವ ಖರ್ಗೆ ಅವರ ಕಾರ್ಯವೈಖರಿ ಗಮನಿಸಿ ಅವರನ್ನು ಹಿಂದಿನ ಲೋಕಸಭೆಯಲ್ಲಿ (2014-19) ಪಕ್ಷದ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆ ಅವಧಿಯಲ್ಲಿ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಮಾನ ಕಾಪಾಡಿದ್ದೇ ಖರ್ಗೆ ಎನ್ನುವಷ್ಟರ ಮಟ್ಟಿಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಕಾಡಿದ್ದರು. ಈ ಒಂದು ಕಾರಣವೇ ಖರ್ಗೆ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿ ತಂದಿದೆ. ಖರ್ಗೆ ಅಧ್ಯಕ್ಷರಾದರೆ ಕಾಂಗ್ರೆಸ್ ಗೆ ಒಳ್ಳೆಯದು ಎಂಬ ಭಾವನೆ ಅನೇಕ ಹಿರಿಯ ನಾಯಕರಲ್ಲಿದೆ. ಹಾಗೇನಾದರೂ ಅವರು ಆಯ್ಕೆಯಾದರೆ ಮೊದಲ ಬಾರಿಗೆ ಕರ್ನಾಟಕದವರೊಬ್ಬರು ಈ ಸ್ಥಾನಕ್ಕೆ ಏರಿದಂತಾಗುತ್ತದೆ. ಆದರೆ, ಉತ್ತರ ಬಾರತದ ಲಾಬಿ ಅದಕ್ಕೆ ಅವಕಾಶ ಮಾಡಿಕೊಡುವುದೇ ಎಂದು ಕಾದು ನೋಡಬೇಕು.
ಪ್ರಿಯಾಂಕ ಬರುವರೇ?
ಇದೆಲ್ಲದರ ಮಧ್ಯೆ ಕಳೆದ ಲೋಕಸಭೆ ಚುನಾವಣೆ ವೇಳೆ ರಾಜಕಾರಣದಲ್ಲಿ ಸಕ್ರಿಯರಾದ ಸೋನಿಯಾ ಪುತ್ರಿ ಪ್ರಿಯಾಂಕ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆಯೇ ಎಂಬ ಪ್ರಶ್ನೆ ಕೇಳಿ ಬರಲಾರಂಭಿಸಿದೆ. ಸದ್ಯಕ್ಕೆ ಅದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆಯಾದರೂ ಸಂಪೂರ್ಣ ಅಲ್ಲಗಳೆಯಲು ಸಾಧ್ಯವಿಲ್ಲ. ರಾಹುಲ್ ಬಳಿಕ ನೇರವಾಗಿ ಪ್ರಿಯಾಂಕ ಗಾಂಧಿಯನ್ನು ಕರೆತಂದರೆ ಅದು ಮತ್ತೆ ಅಸಮಾಧಾನಕ್ಕೆ ಕಾರಣವಾಗಬಹುದು ಎಂದು ಸದ್ಯದ ಮಟ್ಟಿಗೆ ಬೇರೆಯವರನ್ನು ಈ ಸ್ಥಾನಕ್ಕೆ ನೇಮಿಸಬಹುದು. ಆದರೆ, ಇದು ಹೆಚ್ಚು ದಿನ ಇರುವುದಿಲ್ಲ ಮತ್ತು ಅಧ್ಯಕ್ಷರು ನೆಹರೂ ಕುಟುಂಬದ ಆದೇಶ ಪಾಲನೆಗಷ್ಟೇ ಸೀಮಿತ ಎಂಬುದು ಈ ಹಿಂದೆ ಸಾಷ್ಟು ಬಾರಿ ಸಾಬೀತಾಗಿರುವುದರಿಂದ ಕೆಲ ತಿಂಗಳ ಬಳಿಕ ರಾಹುಲ್ ಗಾಂಧಿ ಈ ಸ್ಥಾನಕ್ಕೆ ವಾಪಸಾಗಲು ಒಪ್ಪದಿದ್ದರೆ ಆಗ ಪ್ರಿಯಾಂಕ ಹೆಸರು ಮುನ್ನೆಲೆಗೆ ಬರುವುದು ಖಚಿತ.
ಇತರರೇಕೆ ಯಶಸ್ವಿಯಾಗಿಲ್ಲ?
ಸ್ವಾತಂತ್ರ್ಯ ಪೂರ್ವದಲ್ಲಿ ಉದಯವಾದ ಕಾಂಗ್ರೆಸ್ ಪಕ್ಷದಲ್ಲಿ ಸ್ವಾತಂತ್ರ್ಯಾ ನಂತರ ಹೆಚ್ಚು ಕಾಲ ಅಧ್ಯಕ್ಷರಾಗಿದ್ದವರು ನೆಹರೂ ಕುಟುಂಬಸ್ಥರು. ಇವರನ್ನು ಹೊರತುಪಡಿಸಿ ಉಳಿದವರು ಅಧ್ಯಕ್ಷರಾದಾಗ ಪಕ್ಷದಲ್ಲಿ ಒಗ್ಗಟ್ಟು ಮೂಡಿಸಲು ಸಾಧ್ಯವಾಗಿಲ್ಲ. ನಾಯಕರ ನಡುವಿನ ಕಚ್ಚಾಟ ಹೆಚ್ಚಾಗಿ ಪಕ್ಷ ಹಿನ್ನಡೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಶತಮಾನದ ಇತಿಹಾಸ ಹೊಂದಿರುವ ಪಕ್ಷದಲ್ಲಿ ತಾವೇಕೆ ಅಧ್ಯಕ್ಷರಾಗಬಾರದು ಎಂದು ಇತರೆ ನಾಯಕರು ಅಸಹಕಾರ ತೋರುತ್ತಿದ್ದರು. ಇದರಿಂದ ಪಕ್ಷ ಸಾಕಷ್ಟು ಬಾರಿ ಒಡೆದ ಉದಾಹರಣೆಗಳೂ ಇವೆ. ಇದರಿಂದಾಗಿಯೇ ನೆಹರೂ ಕುಟುಂಬದವರನ್ನು ಹೊರತುಪಡಿಸಿದ ನಾಯಕರು ಅಧ್ಯಕ್ಷರಾಗಿ ಯಶಸ್ವಿಯಾಗಲು ಸಾಧ್ಯವಾಗಿಲ್ಲ. ಹೀಗಾಗಿಯೇ ಹೊಸ ಅಧ್ಯಕ್ಷರ ನೇಮಕವಾದರೂ ಅವರು ಹೆಚ್ಚು ದಿನ ಆ ಸ್ಥಾನದಲ್ಲಿ ಬಾಳುವುದು ಕಷ್ಟ ಎಂಬ ಮಾತುಗಳು ಈಗಾಗಲೇ ಕೇಳಿಬರಲಾರಂಭಿಸಿದೆ.