ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಮೊದಲ ಅವಧಿಯ ವಿಶಿಷ್ಟ ಕಾರ್ಯಕ್ರಮವೆನಿಸಿದ್ದ ಗ್ರಾಮ ವಾಸ್ತವ್ಯದ ಮೂಲಕ ಮಾಧ್ಯಮಗಳಲ್ಲಿ ವಿಜೃಂಭಿಸುವ ಕೆಲಸಕ್ಕೆ ಮುಂದಡಿ ಇಟ್ಟಿದ್ದಾರೆ. ಆದರೆ, ರಾಜ್ಯದ ಆಡಳಿತ ವ್ಯವಸ್ಥೆಯ ಮುಖ್ಯಸ್ಥರಾದ ಮುಖ್ಯಮಂತ್ರಿ ಮಾಡಬೇಕಿರುವುದು ಆಡಳಿತ ಯಂತ್ರದಲ್ಲಿ ಸಂಚಲನ ಮೂಡಿಸಬಲ್ಲ ದೂರದೃಷ್ಟಿಯ ಕೆಲಸಗಳನ್ನು ಎಂಬುದನ್ನು ಅವರ ಜೊತೆಯಲ್ಲಿರುವ ಸಲಹೆಗಾರರು ನೆನಪಿಸಬೇಕಿದೆ.
ಹೆಂಗರುಳಿನವರಾದ ಕುಮಾರಸ್ವಾಮಿ ಅವರು ರಾಜ್ಯದ ವಿವಿಧ ಭಾಗಗಳಿಂದ ಬರುವ ಅಸಹಾಯಕರು, ಅಂಗವಿಕಲರು, ಮಕ್ಕಳು ಹಾಗೂ ಬಡವರು ಕಷ್ಟವೆಂದು ತಮ್ಮ ಬಳಿ ಬಂದಾಗ ಧಾರಾಳವಾಗಿ ಧನಸಹಾಯ ಮಾಡುವ ಮನೋಭಾವ ರೂಢಿಸಿಕೊಂಡಿದ್ದಾರೆ. ರಾಜ್ಯದ ನೇತೃತ್ವ ವಹಿಸಿದವರಿಗೆ ಇರಬೇಕಾದ ಅಂತಃಕರಣ ಅವರಲ್ಲಿರುವುದು ನಿಜಕ್ಕೂ ಶ್ಲಾಘನೀಯ. ಪ್ರಜೆಗಳೊಂದಿಗಿನ ತಮ್ಮ ಒಡನಾಟವನ್ನು ಮತ್ತಷ್ಟು ವೈಯಕ್ತಿಕ ಮಟ್ಟಕ್ಕೆ ಕೊಂಡೊಯ್ಯಲು ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ನಡೆಸಲಾರಂಭಿಸಿದ್ದಾರೆ.
ಹದಿಮೂರು ವರ್ಷಗಳ ಹಿಂದೆ ಬಿಜೆಪಿ-ಜೆಡಿಎಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ವಿವಿಧ ಜಿಲ್ಲೆಗಳ ೪೨ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ನೀಡಿದ ಆಶ್ವಾಸನೆಗಳನ್ನು ಇದುವರೆಗೂ ಈಡೇರಿಸಿಲ್ಲ. ಈಗ ಮತ್ತೆ ಜನಪ್ರಿಯತೆ ಗಳಿಸಲು ಗ್ರಾಮ ವಾಸ್ತವ್ಯ ಆರಂಭಿಸಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷ ಬಿಜೆಪಿ 28 ಪುಟಗಳ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯ ಆರೋಪಗಳನ್ನು ಅಲ್ಲಗಳೆಯದೇ, ಗ್ರಾಮ ವಾಸ್ತವ್ಯದಾಚೆಗೆ ಕುಮಾರಸ್ವಾಮಿಯವರ ಆದ್ಯತೆಗಳಾಗಬಹುದಾದ ಕೆಲಸಗಳತ್ತ ಚಿತ್ತ ಹರಿಸುವುದು ಸೂಕ್ತವೆನಿಸುತ್ತದೆ.

ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಮತ್ತು ಜನತಾದರ್ಶನ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಜನರು ವೃದ್ಧಾಪ್ಯ, ವಿಧವಾ ವೇತನ, ಅಂಗವಿಕಲರ ಮಾಸಾಶನ ವಿತರಣೆ, ಆರೋಗ್ಯ ವೆಚ್ಚ ಭರಿಸುವುದು, ಶಾಲಾ-ಕಾಲೇಜು ಶುಲ್ಕ ಪಾವತಿಗೆ ಸಹಾಯ, ಸಿವಿಲ್ ಪ್ರಕರಣಗಳು, ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಕೋರಲು ಬರುತ್ತಾರೆ. ಇವುಗಳಿಗೆ ಪರಿಹಾರ ಸೂಚಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರ, ತಹಶೀಲ್ದಾರ್ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ನಿರಂತರವಾಗಿ ಸಭೆ ನಡೆಸುವ ಮೂಲಕ ಅವುಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಬಹುದು. ಇಲ್ಲಿ ಸ್ವೀಕರಿಸಲಾದ ಅರ್ಜಿಗಳಿಗೆ ಕಾಲಮಿತಿ ನಿಗದಿಪಡಿಸಿ ಅವುಗಳ ವಿಲೇವಾರಿ ಮಾಡುವಂತೆ ಖಡಕ್ ಸೂಚನೆ ನೀಡಬೇಕು. ಅಧಿಕಾರಿಗಳ ಸಮ್ಮುಖದಲ್ಲಿ ಸ್ವೀಕರಿಸಲ್ಪಟ್ಟ ಅರ್ಜಿಗಳ ವಿಲೇವಾರಿ ಕುರಿತು ಎರಡು-ಮೂರು ಜಿಲ್ಲೆಗಳಿಗೊಂದರಂತೆ ಮುಖ್ಯಮಂತ್ರಿ ಸಭೆ ನಡೆಸುವುದರಿಂದ ಅಧಿಕಾರಿಗಳ ವಲಯದಲ್ಲಿ ಹೊಣೆಗಾರಿಕೆ ಹೆಚ್ಚಲಿದೆ.
ಈ ನಿಟ್ಟಿನಲ್ಲಿ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಹೊಸತರಲ್ಲಿ ಕುಮಾರಸ್ವಾಮಿ ಅವರು ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಓಗಳ ಸಭೆ ನಡೆಸಿದ್ದರು. ಹೊಸ ಸರ್ಕಾರದ ಆದ್ಯತೆಗಳನ್ನು ಅಧಿಕಾರಿಗಳಿಗೆ ವಿವರಿಸಿದ್ದ ಕುಮಾರಸ್ವಾಮಿ ಅವರು ಅಧಿಕಾರಿಗಳು ಗ್ರಾಮಗಳಿಗೆ ತೆರಳಬೇಕು ಎಂದು ಕಟ್ಟಪ್ಪಣೆ ಹೊರಡಿಸಿದ್ದರು. ಆದರೆ, ರಾಜಕೀಯ ಜಂಜಾಟಗಳಲ್ಲಿ ಸಿಲುಕಿದ ಕುಮಾರಸ್ವಾಮಿ ಅವರು ಆಡಳಿತ ಯಂತ್ರಕ್ಕೆ ವೇಗ ನೀಡುವತ್ತ ಗಮನಹರಿಸಲಿಲ್ಲ. ತಾವು ಅಧಿಕಾರಿ ವರ್ಗಕ್ಕೆ ನೀಡಿದ್ದ ಸೂಚನೆಯ ಸ್ಥಿತಿಗತಿಯನ್ನು ಕನಿಷ್ಠ ತಿಂಗಳಿಗೊಮ್ಮೆ ಪರಿಶೀಲಿಸುವ ಯತ್ನ ನಡೆಸಿದ್ದರೆ ಸಾರ್ವಜನಿಕರಿಗೆ ಬೇರೆಯದ್ದೇ ಸಂದೇಶ ರವಾನೆಯಾಗುತ್ತಿತ್ತು.
ಅಧಿಕಾರಿ ವಲಯದಲ್ಲಿ ಹೊಣೆಗಾರಿಕೆ ಹೆಚ್ಚುವಂತೆ ಮಾಡಿ, ತಾವು ರಾಜ್ಯದ ವಿವಿಧ ಕಡೆ ನಡೆಯುತ್ತಿರುವ ಬೃಹತ್ ನೀರಾವರಿ ಯೋಜನಾ ಸ್ಥಳಗಳಿಗೆ ಖುದ್ದು ಭೇಟಿ ನೀಡುವುದು, ತಮ್ಮ ಕನಸಿನ ಯೋಜನೆಗಳಲ್ಲಿ ಒಂದಾದ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿಗೆ ಅಗತ್ಯವಾದ ಭೂಮಿ ಪರಿಶೀಲನೆಗೆ ಸ್ಥಳ ಪರಿಶೀಲಿಸುವುದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಕುರಿತಾದ ಸಭೆಯನ್ನು ಆಯಾ ಜಿಲ್ಲೆಗಳಲ್ಲಿ ನಡೆಸುವುದು, ಬೆಂಗಳೂರಿನಂಥ ಪ್ರದೇಶದಲ್ಲಿ ಸ್ಟಾರ್ಟ್ ಅಪ್ ಗೆ ಪೂರಕ ವಾತಾವರಣ ಹೊಂದಿರುವ ಎಚ್ ಎಸ್ ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿಯಂಥ ಪ್ರದೇಶಗಳಲ್ಲಿರುವ ಕಂಪೆನಿಗಳ ಮುಖ್ಯಸ್ಥರ ಜೊತೆ ಸಭೆ ಹಾಗೂ ಅವರ ಸಲಹೆ-ಸೂಚನೆಗಳಿಗೆ ಕಿವಿಗೊಡುವುದು, ಬರ ಪೀಡಿತ ಪ್ರದೇಶಗಳಿಗೆ ಭೇಟಿ, ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳ ಸ್ಥಿತಿಗತಿ ಪರಿಶೀಲನೆ, ಉದ್ಯಮ ಕ್ಷೇತ್ರ ಹಾಗೂ ನಗರ ತಜ್ಞರ ಜೊತೆ ಸರಣಿ ಸಭೆ ನಡೆಸುವುದು ಮುಖ್ಯವಾಗಿತ್ತು.

ದೇಶದಲ್ಲಿ ಉದ್ಯಮ ಸ್ಥಾಪನೆಗೆ ಪೂರಕವಾದ ವಾತಾವರಣ ಹೊಂದಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇದನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿದೇಶಿ ನಿಯೋಗಗಳನ್ನು ಆಹ್ವಾನಿಸುವುದು. ಗ್ರಾಮೀಣಾಭಿವೃದ್ಧಿ, ಆರೋಗ್ಯ, ಐಟಿ, ಶಿಕ್ಷಣ, ಸಾರಿಗೆ, ಉದ್ಯೋಗ, ಕೌಶಲ್ಯಾಭಿವೃದ್ಧಿ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸುಧಾರಣೆ, ಅಭಿವೃದ್ಧಿ, ನೀತಿ-ನಿರೂಪಣೆಗಳಲ್ಲಿನ ಬದಲಾವಣೆ ಮತ್ತಿತರ ವಿಚಾರಗಳನ್ನು ಅರಿಯಲು ತಜ್ಞರ ಸಮಿತಿಗಳನ್ನು ರಚಿಸುವ ಕೆಲಸಗಳನ್ನು ಸರಣಿಯಾಗಿ ಕೈಗೊಂಡಿದ್ದರೆ ರಾಜ್ಯ, ರಾಷ್ಟ್ರ ಮತ್ತು ಮಾಧ್ಯಮ ವಲಯಕ್ಕೆ ವಿಶಿಷ್ಟ ಸಂದೇಶ ರವಾನೆಯಾಗುತ್ತಿತ್ತು. ಇದರಿಂದ ಗ್ರಾಮ ವಾಸ್ತವ್ಯ ರಾಜಕೀಯ ಸ್ಟಂಟ್ ಎನ್ನುತ್ತಿರುವ ವಿರೋಧ ಪಕ್ಷವಾದ ಬಿಜೆಪಿ ಬಾಯಿಗೆ ಬೀಗ ಹಾಕುವುದರ ಜೊತೆಗೆ ಮಾಧ್ಯಮಗಳ ಡಾರ್ಲಿಂಗ್ ಆಗಬಹುದಿತ್ತು.
ಇಷ್ಟೆಲ್ಲಾ ಕಾರ್ಯಚಟುವಟಿಕೆಗಳನ್ನು ಯುವಕರಿಗೆ ಉದ್ಯೋಗ ಸೃಷ್ಟಿಸಲು, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ದೀರ್ಘಾವಧಿಯಲ್ಲಿ ರಾಜ್ಯದಲ್ಲಿ ಸಂಪತ್ತು ನಿರ್ಮಾಣ ಮಾಡುವುದರೊಂದಿಗೆ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ, ವಿವಿಧ ಕ್ಷೇತ್ರಗಳ ತಜ್ಞರಿಗೆ ಸರ್ಕಾರದಲ್ಲಿ ಭಾಗಿಯಾಗಿಸುವ ಕೆಲಸವನ್ನು ರಾಜ್ಯ ಸರ್ಕಾರ ನಿರಂತರವಾಗಿ ಮಾಡುತ್ತಿದೆ ಎಂಬ ಸಕಾರಾತ್ಮಕ ಸಂದೇಶ ನಿರಂತರವಾಗಿ ಹೊರಡುವಂತೆ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಕುಮಾರಸ್ವಾಮಿ ಅವರು ನೋಡಿಕೊಂಡಿದ್ದರೆ ಅವರಿಗೆ ಎದುರಾಗಿರುವ ರಾಜಕೀಯ ಅಡ್ಡಿ ಆತಂಕಗಳು ತಂತಾನೆ ನಿವಾರಣೆಯಾಗುತ್ತಿದ್ದವು. ಇದರಿಂದ ಕುಮಾರಸ್ವಾಮಿ ಅವರನ್ನು ವಿರೋಧಿಸುವವರೂ ಅವರ ನಾಯಕತ್ವದಲ್ಲಿ ರಾಜಕೀಯ ಭವಿಷ್ಯ ಕಾಣಲು ಹಾತೊರೆಯುವಂತೆ ಮಾಡುವ ಅವಕಾಶ ಲಭಿಸುತಿತ್ತು. ಇದ್ಯಾವುದನ್ನೂ ಸಮ್ಮಿಶ್ರ ಸರ್ಕಾರ ಮಾಡಲಿಲ್ಲ.
ಕೊಡಗಿನಲ್ಲಿನ ನೆರೆ ಪರಿಸ್ಥಿತಿಯನ್ನು ಹೊರತುಪಡಿಸಿ ಬಹುತೇಕ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಸರ್ಕಾರ ಗುರಿ ನಿರ್ದೇಶಿತವಾಗಿ ನಡೆದು ಕೊಂಡಿರುವುದು ಕಾಣ ಸಿಗುವುದಿಲ್ಲ. ರೈತರ ಸಾಲಮನ್ನಾ ಮಾಡುವ ದೊಡ್ಡ ಯೋಜನೆಯನ್ನು ಘೋಷಿಸಿದ್ದರೂ ಫಲಾನುಭವಿಗಳಿಗೆ ಅದನ್ನು ಸಮರ್ಪಕವಾಗಿ ತಲುಪಿಸಲು ಸರ್ಕಾರ ವಿಫಲವಾಗಿದೆ ಎಂಬುದು ಚುನಾವಣೆಯ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ. ಬಹುತೇಕ ಜಿಲ್ಲೆಗಳಿಗೆ ರೈತರಿಗೆ ಹಲವು ತಿಂಗಳಿಂದ ಹಾಲಿನ ಸಬ್ಸಿಡಿಯೇ ಹಂಚಿಕೆಯಾಗಿಲ್ಲ ಎಂಬ ದೂರುಗಳಿವೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾದಾಗ ಕೆಲವು ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ನಿರ್ಧಾರವಾಯಿತಾದರೂ ಅದರ ಮುಂದಿನ ಸ್ಥಿತಿಗಳ ಕುರಿತಾಗಿ ಸರ್ಕಾರ ಏನೆಲ್ಲಾ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂಬ ಮಾಹಿತಿಯನ್ನು ಆ ಭಾಗದ ಜನರಿಗೆ ನೀಡುವ ಕೆಲಸವಾಗಲಿಲ್ಲ. ಸಮರ್ಥರನ್ನು ಗುರುತಿಸಿ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡುವ ಯತ್ನ ಮೊದಲಿನಿಂದಲೂ ಆಗಲಿಲ್ಲ. ಪರಿಸ್ಥಿತಿ ಹೀಗಿರುವಾಗ ತಮ್ಮ ಗ್ರಾಮ ವಾಸ್ತವ್ಯವು ಸಮ್ಮಿಶ್ರ ಸರ್ಕಾರದ ವರ್ಚಸ್ಸನ್ನು ವೃದ್ಧಿಸಲಿದೆ ಎಂಬುದು ಕುಮಾರಸ್ವಾಮಿಯವರಿಗಷ್ಟೇ ಪ್ರಿಯವಾಗಬೇಕಾದ ಸತ್ಯ.