ಪೊಲೀಸರು ಸ್ವಲ್ಪ ಆಸಕ್ತಿ ವಹಿಸಿ ಕೆಲಸ ಮಾಡಿದರೆ ಎಂತಹ ಪ್ರಕರಣಗಳನ್ನೂ ಪತ್ತೆ ಹಚ್ಚಬಲ್ಲರು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ದೆಹಲಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶಿವ್ ದೇವ್ ಮೂರು ರಾಜ್ಯಗಳನ್ನು ಸುತ್ತಾಡಿ ಕೊನೆಗೂ ಮಂಗಳೂರಿನಲ್ಲಿ ಹತ್ತು ಕೋಟಿ ರೂಪಾಯಿ ಮೌಲ್ಯದ ಫಾರ್ಮ್ ಹೌಸ್ ವಾರಿಸುದಾರನ ಪತ್ತೆ ಮಾಡುತ್ತಾರೆ. ಆ ಫಾರ್ಮ್ ಹೌಸ್ ಒಂದು ಕಾಲದ ಸ್ಪೈ ಕೂಮರ್ ನರೈನ್ ಗೆ ಸೇರಿದ್ದಾಗಿತ್ತು.
ನಲ್ವತ್ತು ವರ್ಷಗಳ ಹಿಂದೆ ಕೂಮರ್ ನರೈನ್ ಗೂಢಚಾರಿಕೆ ಪ್ರಕರಣ ದೇಶದ ಬಹುದೊಡ್ಡ ಸುದ್ದಿಯಾಗಿತ್ತು. ಇಂದಿರಾ ಗಾಂಧಿ ಕಾಲದಿಂದಲೂ ಸಕ್ರಿಯವಾಗಿದ್ದ ಗೂಢಚರ್ಯೆ ಜಾಲದ ಮೇಲೆ ಕಣ್ಣಿರಿಸಿದ್ದ ಗುಪ್ತಚರ ಇಲಾಖೆ ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ಬೆಳಕಿಗೆ ತರಲಾಯಿತು. ವಿದೇಶಿ ಸ್ಕಾಚ್ ವಿಸ್ಕಿಗೆ ದೇಶದ ಗಂಭೀರ ಮಾಹಿತಿಗಳನ್ನು ವಿದೇಶಿ ರಾಯಭಾರಿಗಳಿಗೆ ಮಾರಾಟ ಮಾಡಲಾಗುತಿತ್ತು. ಸರಕಾರಿ ಅಧಿಕಾರಿಗಳು ಖಾಸಗಿ ವ್ಯಕ್ತಿಗಳು ಸೇರಿ ನಡೆಸುತ್ತಿದ್ದ ಈ ಗೂಢಚರ್ಯೆ ಪ್ರಕರಣ ಅಂದಿನ ಸರಕಾರವನ್ನು ಪೇಚಿಗೆ ಸಿಲುಕಿಸಿತ್ತು.
ಎಫ್ ಐ ಆರ್ ನಲ್ಲಿ ಕೇಂದ್ರ ಸರಕಾದ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರ ಹೆಸರಿತ್ತು. ಕುಮಾರ್ ನರೈನ್ ಕೆಲಸ ಮಾಡುತ್ತಿದ್ದ ಕಂಪೆನಿಯ ಮಾಲೀಕರು ಅದರಲ್ಲಿ ಸೇರಿದ್ದರು. ಹಲವು ಮಂದಿ ಜೈಲು ಸೇರಿದರು. ಕೆಲವು ವರ್ಷಗಳ ಅನಂತರ 1995ರಲ್ಲಿ ಜಾಮೀನು ಮೇಲೆ ಹೊರಬಂದ ಕೂಮರ್ ನರೈನ್ ದಕ್ಷಿಣ ದೆಹಲಿಯ ಸೈನಿಕ್ ಫಾರ್ಮ್ ಪ್ರದೇಶದಲ್ಲಿ ಫಾರ್ಮ್ ಹೌಸ್ ಖರೀದಿಸಿ ಮಡದಿ ಗೀತಾ ಅವರೊಂದಿಗೆ ವಾಸವಾಗಿದ್ದರು.
ಇಪ್ಪತ್ತು ವರ್ಷಗಳ ಹಿಂದೆ ನರೈನ್ ಸಾವನ್ನಪ್ಪುತ್ತಾರೆ. 2002ರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯನ್ನು ಯಾರೋ ಕೊಲೆ ಮಾಡುತ್ತಾರೆ. ಗೀತಾ ಅಂತ್ಯ ಸಂಸ್ಕಾರಕ್ಕೆ ಯಾವ ಸಂಬಂಧಿಕರು ಭಾಗಿಯಾಗುವುದಿಲ್ಲ. ದಂಪತಿಗೆ ಮಕ್ಕಳು ಅಥವ ಹಕ್ಕುದಾರರು ಇಲ್ಲದಿರುವುದರಿಂದ ಫಾರ್ಮ್ ಹೌಸನ್ನು ನೋಡಿಕೊಳ್ಳುವ ಜವಾಬ್ದಾರಿ ಅಂಬೇಡ್ಕರ್ ನಗರ ಪೊಲೀಸ್ ಠಾಣೆಗೆ ಸೇರುತ್ತದೆ.
2008 ಫೆಬ್ರವರಿ 5ರಂದು ಫಾರ್ಮ್ ಹೌಸಿನ ಬಾಗಿಲು ತೆರೆದ ಅದೇ ಪೊಲೀಸ್ ಠಾಣೆಯ ನಿವೃತ್ತ ಪೊಲೀಸ್ ಅಧಿಕಾರಿ ರಾಣಾ ಸಿಂಗ್ ಮತ್ತು ನರೈನ್ ಜೀವಂತ ಇದ್ದಾಗ ಮನೆ ಸಹಾಯಕಿಯಾಗಿದ್ದ ರಾಧಿಕಾ ಇಬ್ಬರು ಸೇರಿ ಫಾರ್ಮ್ ಹೌಸ್ ತಮ್ಮದೆಂದು ಘೋಷಿಸುತ್ತಾರೆ. ರಾಧಿಕಾ ನರೈನ್ ದಂಪತಿಯ ಮಗಳು ಎಂದು ಸುಳ್ಳು ಹೇಳುತ್ತಾರೆ.
ಈ ಮಧ್ಯೆ, ರಾಣಾ ಸಿಂಗ್ ದೆಹಲಿ ಪೊಲೀಸ್ ವಿಜಿಲೆನ್ಸ್ ಇಲಾಖೆಗೆ ದೂರೊಂದನ್ನು ನೀಡಿ, ತನ್ನನ್ನು ಗೀತಾ ಕೊಲೆ ಪ್ರಕರಣದಲ್ಲಿ ಆರೋಪಿ ಮಾಡಲು ಅಂಬೇಡ್ಕರ್ ನಗರ ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ದೂರು ನೀಡುತ್ತಾನೆ. ಇಲ್ಲಿಯೇ ಆಗಿದ್ದು ಮೊದಲ ಯಡವಟ್ಟು. ಡಿವೈಎಸ್ಪಿ ದರ್ಜೆಯ ಅಧಿಕಾರಿಯಿಂದ ತನಿಖೆಗೆ ಆದೇಶವಾಗುತ್ತದೆ.
ವಿಜಿಲೆನ್ಸ್ ತನಿಖೆಗೆ ಆದೇಶ ನೀಡಿದ ಹೊರತಾಗಿಯೂ ನಾಲ್ಕೈದು ಮಂದಿ ತನಿಖಾಧಿಕಾರಿಗಳು ಬದಲಾಗುತ್ತಾರೆ. ಪ್ರಕರಣದ ತನಿಖೆಯಲ್ಲಿ ಯಾವ ಬೆಳವಣಿಗೆಯೂ ಆಗುವುದಿಲ್ಲ. ಎಂಟು ವರ್ಷಗಳ ಅನಂತರ 2016ರಲ್ಲಿ ಪ್ರಕರಣ ಶಿವ್ ದೇವ್ ಎಂಬ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೈಗೆ ಬರುತ್ತದೆ. ಒಬ್ಬ ಪೊಲೀಸ್ ಅಧಿಕಾರಿಯೇ ಜಮೀನು ಕಬಳಿಸುವ ಪ್ರಕರಣದ ಆರೋಪಿ ಆಗಿರುವುದರಿಂದ ಸುಲಭವಾಗಿ ಪ್ರಕರಣಕ್ಕೆ ಬಿ ಅಥವ ಸಿ ರಿಪೋರ್ಟ್ ಹಾಕಿ ಕೈಚೆಲ್ಲುವಂತಿರಲಿಲ್ಲ. ಆದುದರಿಂದ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಲು ದೇವ್ ಮುಂದಾಗುತ್ತಾರೆ. ಅದಕ್ಕಾಗಿ ಉತ್ಸಾಹಿ ತಂಡವನ್ನು ಕೂಡ ರಚಿಸುತ್ತಾರೆ.

ರಾಧಿಕಾ ಮತ್ತು ರಾಣಾ ಸಿಂಗ್
ತಾನು ನರೈನ್ ಮಗಳಾಗಿದ್ದು, ಕೊಲೆಯಾದ ವಿಚಾರ ಗೊತ್ತಾಗಲಿಲ್ಲ. ತನ್ನ ಗಂಡನ ಮನೆಯವರು ಸಶಕ್ತರಾಗದಿರುವ ಕಾರಣ ಪೊಲೀಸ್ ಇನ್ಸಪೆಕ್ಟರ್ ರಾಣಾ ಅವರ ಸಹಾಯ ಪಡೆದುಕೊಂಡಿದ್ದೇನೆ. ಮೊದಲಿಗೆ ಫಾರ್ಮ್ ಹೌಸನ್ನು ರಾಣಾಗೆ ಬಾಡಿಗೆಗೆ ನೀಡಿದ್ದೇನೆ. ಇದೀಗ ಅದನ್ನು ಮೂವತ್ತು ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದ್ದೇನೆ. ಏಕೆಂದರೆ, ತನ್ನ ಗಂಡನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎನ್ನುತ್ತಾಳೆ ರಾಧಿಕಾ. ಈ ರಾಧಿಕಾ ದಂಪತಿ ಮನೆಯಲ್ಲಿ ಮನೆಗೆಲಸ ಮಾಡಿಕೊಂಡು ಹೋಗುತ್ತಿದ್ದವಳು.
ತನಿಖೆಯ ವೇಳೆ ರಾಣಾ ಮತ್ತು ರಾಧಿಕಾ ಇಬ್ಬರೂ ಒಂದಕ್ಕೊಂದು ಸಂಬಂಧವಿಲ್ಲದ ಹೇಳಿಕೆ ನೀಡುತ್ತಾರೆ. ಡಿ ಎನ್ ಎ ಟೆಸ್ಟ್ ಮಾಡಲು ಮುಂದಾದಾಗ ತಾನು ದತ್ತು ಮಗಳೆಂದು ವಾದಿಸುತ್ತಾಳೆ. ಕೊನೆಗೂ ಇಬ್ಬರೂ ಸೇರಿ ಕೂಮರ್ ನರೈನ್ ಫಾರ್ಮ್ ಹೌಸನ್ನು ಮೋಸದಿಂದ ಕಬಳಿಸಲು ಕತೆ ಕಟ್ಟಿರುವುದು ಪೊಲೀಸರಿಗೆ ಖಚಿತ ಆಗುತ್ತದೆ. ರಾಧಿಕಾ ನಿಜವಾದ ವಾರಸುದಾರಳು ಅಲ್ಲ ಅಂದ ಮೇಲೆ ನೈಜ ವಾರಸುದಾರರ ಪತ್ತೆಗೆ ತನಿಖಾಧಿಕಾರಿ ಮುಂದಾಗುತ್ತಾರೆ. ನಿಜವಾದ ವಾರಸುದಾರರು ಅಥವ ಸಂಬಂಧಿಕರು ದೊರಕಿದಾಗ ಮಾತ್ರ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಿ ಇವರಿಬ್ಬರೂ ದೋಷಿ ಎಂದು ಖಚಿತಪಡಿಸಲು ಸಾಧ್ಯ ಆಗುತ್ತದೆ.
ತನಿಖಾಧಿಕಾರಿ ಶಿವ್ ದೇವ್ ಕೈಗೊಂಡ ಮೊದಲ ಕೆಲಸ ಹಳೆಯ ಕೋರ್ಟು ದಾಖಲೆಗಳನ್ನು ತಡಕಾಡಿದ್ದು. ಗೂಢಚರ್ಯೆ ಪ್ರಕರಣದ ದೋಷಾರೋಪಣಾ ಪಟ್ಟಿಯಲ್ಲಿ ಕೂಮರ್ ನರೈನ್ ಮಾಹಿತಿ ಇತ್ತು. ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕನ್ ಚೇರಿ ಗ್ರಾಮದ ಐಯ್ಯರ್ ಕುಟುಂಬದಲ್ಲಿ ಹುಟ್ಟಿದ್ದ ನರೈನ್ ಮತ್ತು ಆತನ ಹೆಂಡತಿ ಗೀತಾಳ ಹೆತ್ತವರ ಮನೆ ಇದ್ದಿದ್ದು ಮಂಗಳೂರಿನ ಬಿಕರ್ಣಕಟ್ಟೆಯಲ್ಲಿ ಎಂಬ ಮೊದಲ ಮಾಹಿತಿ ಸಂಗ್ರಹವಾಯ್ತು.
ಕೂಮರ್ ನರೈನ್ ಚರಿತ್ರೆ:
1925ರಲ್ಲಿ ಪಾಲಕ್ಕಾಡಿನಲ್ಲಿ ಹುಟ್ಟಿದ ನರೈನ್, ತನ್ನ 18ನೇ ವಯಸ್ಸಿಗೆ ಭಾರತೀಯ ಸೇನಾ ಪಡೆಯ ಪೋಸ್ಟಲ್ ಸೇವೆಯಲ್ಲಿ ಹವಲ್ದಾರ್ ಆಗಿ ನೇಮಕವಾಗುತ್ತಾನೆ. ಹೆಚ್ಚು ಕಡಿಮೆ ಅದೇ ಸಮಯದಲ್ಲಿ, ಅಂದರೆ 1943ರಲ್ಲಿ ಮಂಗಳೂರಿನಲ್ಲಿ ಎಡ್ವಿನ್ ಡಿ ಸೋಜ ಎಂಬವರ ಜನನವಾಗುತ್ತದೆ. ದೆಹಲಿಯ ವಿಜಿಲೆನ್ಸ್ ಪೊಲೀಸರು ಹುಡುಕುತ್ತಿದ್ದ ವ್ಯಕ್ತಿ ಇವರೇ. ಈಗ ಪ್ರಾಯ 76 ವರ್ಷ.
ಆರು ವರ್ಷಗಳ ನಂತರ ಸೇನಾ ಪಡೆಯ ಪೋಸ್ಟಲ್ ವಿಭಾಗದಲ್ಲಿ ಕೆಲಸವನ್ನು ತೊರೆಯುವ ನರೈನ್ ಮುಂಬಯಿಯಲ್ಲಿ ಎಸ್ ಎಲ್ ಎಂ ಮಣೇಕ್ ಲಾಲ್ ಇಂಡಸ್ಟ್ರೀಸ್ ಕಂಪೆನಿಯ ಪ್ರಾದೇಶಿಕ ವ್ಯವಸ್ಥಾಪಕನಾಗಿ ಕೆಲಸಕ್ಕೆ ಸೇರುತ್ತಾನೆ. ಇದೇ ಕಂಪೆನಿಯಿಂದಾಗಿ ನರೇನ್ ಗೂಢಚಾರಿಕೆ ಕೆಲಸ ಮಾಡಿರುವುದು. ಗೂಢಚಾರಿಕೆ ಅಂದರೆ ಮತ್ತೇನಲ್ಲ, ಸರಕಾರದ ದಾಖಲೆಗಳನ್ನು ವಿದೇಶಿ ರಾಯಬಾರಿಗಳಿಗೆ ನೀಡುವುದು. ಅದಕ್ಕಾಗಿ ನರೇನ್ ಅನಂತರ ತನ್ನ ಕಚೇರಿಯನ್ನು ದೆಹಲಿಗೆ ಸ್ಥಳಾಂತರ ಮಾಡುತ್ತಾನೆ.
ತನಿಖಾಧಿಕಾರಿ ಈ ಮಾಹಿತಿಯನ್ನು ಆಧಾರಿಸಿ ಮಹಾರಾಷ್ಟ್ರದ ನಾಗಪುರ ಸಮೀಪ ಕಮ್ಟಿ ಕಂಟೋನ್ಮೆಂಟ್ ಆರ್ಮಿ ಪೋಸ್ಟಲ್ ಸರ್ವೀಸ್ ಸೆಂಟರಿಗೆ ಕಾಲಿಡುತ್ತಾನೆ. ನಂಬರ್ ಪಿ 4287 ಹವಿಲ್ದಾರ್ ಸಿಐಕೆ ಸಿ. ವಿ. ನಾರಾಯಣನ್ ಸನ್ ಆಫ್ ಸಿ. ಕೆ. ವೆಂಕಿಟರಾಮ ಐಯ್ಯರ್ ವಾಸ 9-209 ಕೊಯಮತ್ತೂರು ಜಿಲ್ಲೆ – ‘No P 4287Hav/CIK CV Narayanan S/o CK Venkitarama Iyer R/o 9/209, Coimbatore district’, ಈ ದಾಖಲೆಯನ್ನು ತೀರ ಹಳೆಯದು ಎಂಬ ಕಾರಣಕ್ಕಾಗಿ ನಾಶ ಮಾಡಿದ್ದೇವೆ ಎಂಬ ಮಾಹಿತಿ ದೊರೆಯುತ್ತದೆ. ವಿವರ ಸಿಗದಿದ್ದರೂ ವಿಳಾಸ ದೊರೆಯುತ್ತದೆ.
ಅಲ್ಲಿಂದ ದೇವ್ ತಂಡ ತಮಿಳುನಾಡಿನ ಆರ್ ಎಸ್ ಪುರಕ್ಕೆ ಭೇಟಿ ನೀಡುತ್ತದೆ. ಮುನಿಸಿಪಲ್ ಕಚೇರಿ, ಪೋಸ್ಟ್ ಆಫೀಸ್, ಪೊಲೀಸ್ ಠಾಣೆ ಎಲ್ಲಿ ಕೂಡ ಕಿಂಚಿತ್ತೂ ಮಾಹಿತಿ ದೊರೆಯುವುದಿಲ್ಲ. ಬಹುತೇಕ ಎಲ್ಲೆಡೆ 1976ರ ಮೊದಲಿನ ದಾಖಲೆಗಳು ಅಲ್ಲಿರಲಿಲ್ಲ. ಅಲ್ಲಿದ್ದ ಹಳೆಯ ಅಯ್ಯಪ್ಪ ದೇವಳದ ಪುರೋಹಿತರನ್ನು ಕೂಡ ಕೇಳಲಾಯಿತು. ನರೈನ್ ಸಮುದಾಯದ ಹಿರಿಯರಿಂದಲೂ ಕೂಡ ಯಾವುದೇ ಸುಳಿವು ದೊರೆಯಲಿಲ್ಲ.

ಗೀತಾ ಯಾನೆ ಗ್ರೆಟ್ಟಾ ವಾಲ್ಡರ್
ಕೊನೆಗೆ ಹುಡುಕಾಟವನ್ನು ಗೀತಾ ಕುಟುಂಬ ಕಡೆಗೆ ಬದಲಾಯಿಸಲಾಯಿತು. ಹಾಗಾಗಿ ಮಂಗಳೂರು ಕಡೆಗೆ ಪ್ರಯಾಣ. ಮೊದಲಿಗೆ ಜಾಲತಾಣದಲ್ಲಿ ಗೀತಾ ವಾಲ್ದರ್ ಎಂಬ ಹೆಸರಿನ ಬಗ್ಗೆ ಸರ್ಚ್ ಮಾಡಲಾಯಿತು. ವಾಲ್ಡರ್ ಸರ್ ನೇಮ್ ಬಗ್ಗೆಯೂ ಸರ್ಚ್ ಮಾಡಲಾಯಿತು. 2017ರಲ್ಲಿ ಮಂಗಳೂರಿಗೆ ಬಂದಿಳಿದ ಶಿವ್ ದೇವ್ ತನಿಖಾ ತಂಡ ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಹಲವು ಓಣಿಗಳಲ್ಲಿ ಓಡಾಟ ನಡೆಸಿತು. ವಾಲ್ಡರ್ ಸರ್ ನೇಮ್ ಇರುವ ಹಳೆಯ ಕುಟುಂಬಗಳನ್ನು ಮಾತನಾಡಿಸಿದರು. ಹಲವು ಚರ್ಚಿನ ಹಿರಿಯ ಪಾದ್ರಿಗಳನ್ನು ಮಾತನಾಡಿಸಲಾಯಿತು. ಕೊನೆಗೆ 1957ರ ಸುಮಾರಿಗೆ ಗ್ರೆಟ್ಟಾ ವಾಲ್ಡರ್ ಎಂಬಾಕೆ ದೆಹಲಿಗೆ ಹೋಗಿದ್ದಾಳೆ ಎಂಬ ಮಹತ್ವದ ಅಂಶ ತನಿಖಾಧಿಕಾರಿಗಳ ಕಿವಿಗೆ ಬಿತ್ತು. ಅನಂತರ ಆಕೆಗೊಬ್ಬ ಮಗ ಇರುವುದು ಕೂಡ ಗೊತ್ತಾಯಿತು. ಗ್ರೆಟ್ಟಾ ವಾಲ್ಡರ್ ಹೆಸರಿನ ಮಹಿಳೆಯೇ ಕೂಮರ್ ಮಡದಿ ಗೀತಾ. ಎಡ್ವರ್ಡ್ ಡಿ ಸೋಜ ಆಕೆಯ ಮೊದಲ ಮದುವೆಯಿಂದ ಹುಟ್ಟಿದ ಮಗ. ಏಕೈಕ ವಾರಸುದಾರ. ಆದರೆ, ಅದಕ್ಕಾಗಿ ದಾಖಲೆಗಳು ಬೇಕಾಗಿತ್ತು.
ಎಡ್ವರ್ಡ್ ಡಿ ಸೋಜ ಕುರಿತ ಮಾಹಿತಿ ನೀಡುವಂತೆ ದೆಹಲಿಯಿಂದ ತನಿಖಾ ತಂಡ ಮಂಗಳೂರು ಪೊಲೀಸರಿಗೆ ಪತ್ರವೊಂದನ್ನು ಬರೆಯುತ್ತದೆ. ಮಂಗಳೂರು ಪೊಲೀಸರು ಕಳುಹಿಸಿರುವ ದಾಖಲೆಗಳಲ್ಲಿ ಎಡ್ವರ್ಡ್ ಸನ್ ಆಫ್ ಬಿ. ಜಿ. (ಗ್ರೆಟ್ಟಾ) ವಾಲ್ಡರ್ ವೈಫ್ ಆಫ್ ಸಿ. ವಿ. ನರೈನ್, ವಾಸ ಸಿ-33ಎ ನಿಜಾಮುದ್ದೀನ್ ಎಂದಿತ್ತು. ಅಷ್ಟು ಸಾಲದಕ್ಕೆ 1969 ಜುಲೈ 1ರ ಪೊಲೀಸ್ ದಾಖಲೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಎಡ್ವಿನ್ ಸನ್ ಆಫ್ ಬಿ. ಜಿ. ವಾಲ್ಡರ್ ಜೂಲಿಯಾನ ಡಿ ಸೋಜ ಅವರ ಮಗಳು ಎಂದು ನೋಟ್ ಮಾಡಿದ್ದರು. ಅಲ್ಲಿಗೆ ದೆಹಲಿ ಪೊಲೀಸರ ಕೆಲಸ ಅಂತಿಮ ಹಂತ ತಲುಪಿತ್ತು. ಎಡ್ವಿನ್ ಡಿ ಸೋಜ ದೆಹಲಿಯ ನರೈನ್ ಮತ್ತು ಗೀತಾ ದಂಪತಿಯ ವಾರಸುದಾರ ಎಂಬುದು ಖಚಿತ ಆಗಿತ್ತು.
ಗ್ರೆಟ್ಟಾ ವಾಲ್ಡರ್ ಆಗಾಗ ಮಂಗಳೂರಿಗೆ ಬಂದು ತನ್ನ ತಾಯಿ ಮತ್ತು ಮಗನನ್ನು ನೋಡಿಕೊಂಡು ಹೋಗುವುದಿತ್ತು. ತಾಯಿ ಮತ್ತು ಮಗನಿಗೆ ಖರ್ಚಿಗಾಗಿ ಹಣ ಕೂಡ ಮನಿಯಾರ್ಡರ್ ಮಾಡುತ್ತಿದ್ದರು. ಎಡ್ವಿನ್ ದೆಹಲಿಗೆ ಹೋಗಿದ್ದೂ ಇದೆ. ನರೈನ್ ಕಚೇರಿ, ಅಂದಿನ ಮನೆ ಬಗ್ಗೆ ಎಡ್ವಿನ್ ಗೆ ಗೊತ್ತಿದೆ. ದೆಹಲಿ ತೀರಾ ಇಷ್ಟವಾದ ಕಾರಣ ಎಡ್ವಿನ್ ಕಾರೊಂದನ್ನು ತೆಗೆದುಕೊಂಡು ಮಂಗಳೂರಿಗೆ ಹಿಂತಿರುಗಿದ್ದರು. ತನ್ನ ಅಜ್ಜಿ ಜೂಲಿಯಾನ ಡಿ ಸೋಜ ತನ್ನ ತಾಯಿ ಎಂದೇ ತಿಳಿದುಕೊಂಡಿದ್ದರು ಎಡ್ವಿನ್. ಹಾಗೇ ಅವರ ಜತೆಗೇ ಇದ್ದರು.
1944-1945ರ ನಡುವೆ ಗ್ರೆಟ್ಟಾ ತನ್ನ ಚಿಕ್ಕ ಮಗುವನ್ನು ಜೂಲಿಯಾನ ಕೈಗೆ ನೀಡಿ ಉದ್ಯೋಗ ಅರಸಿ ಮಂಗಳೂರು ಬಿಟ್ಟು ಮುಂಬಯಿ ಸೇರಿದ್ದರು. ಅಲ್ಲಿಯೇ ಕೂಮರ್ ನರೈನ್ ಭೇಟಿ ಆಗಿದ್ದು. ಆದರೆ, ಎಡ್ವಿನ್ ಗಿಲ್ಬರ್ಟ್ ನಿಜಕ್ಕಾದರೆ ವಾಲ್ಡರ್ ಎಂಬವರಿಗೆ ಹುಟ್ಟಿದ ಮಗು. ಗಿಲ್ಬರ್ಟ್ ಮತ್ತು ಗ್ರೆಟ್ಟಾ ತಮಗೆ ಮಗು ಹುಟ್ಟಿದ ಅನಂತರ ಯಾಕೆ ಬೇರೆ ಬೇರೆಯಾದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಮತ್ತೊಮ್ಮೆ 2017ರಲ್ಲಿ ಮಂಗಳೂರಿಗೆ ಆಗಮಿಸಿದ ತನಿಖಾ ತಂಡ ಎಲ್ಲ ಮಾಹಿತಿಯನ್ನು, ಎಡ್ವರ್ಡ್ ಮತ್ತವರ ಸಂಬಂಧಿಕರ ಹೇಳಿಕೆಗಳನ್ನು ಪಡೆದುಕೊಳ್ಳುತ್ತದೆ. 2019 ಸೆಪ್ಟೆಂಬರ್ 13ರಂದು ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು ಕೂಡ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸುತ್ತದೆ.
ಇದೀಗ ಎಡ್ವರ್ಡ್ ಪಾಲಿಗೆ ಬಂದಿರುವ ಅಂದಾಜು ಹತ್ತು ಕೋಟಿ ರೂಪಾಯಿ ಮೌಲ್ಯದ ಫಾರ್ಮ್ ಹೌಸನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಅವರ ಮಗ ಪ್ರಕಾಶ್ ಡಿ ಸೋಜ ತಯಾರಿ ನಡೆಸಿದ್ದಾರೆ. ಪೊಲೀಸರಿಗೆ ದುಭಾಷಿಯಾಗಿ ಸಹಕರಿಸಿದ್ದ ಬಂಟ್ವಾಳದ ಜೆ. ಆರ್. ಬರೆಟ್ಟೊ ಅವರು ಪ್ರಕಾಶ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದೊಂದು ಬಯಸದೇ ಬಂದ ಭಾಗ್ಯ ಎನ್ನುತ್ತಾರೆ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗಿಯಾಗಿರುವ ಪ್ರಕಾಶ್. ಹೀಗೆ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಕತೆ ಹಲವು ದಶಕಗಳ ಅನಂತರ ಮಂಗಳೂರಿನ ಕೊಡಿಕಲ್ ಲೇನ್ ನಲ್ಲಿ ಕೊನೆಗೊಳ್ಳುತ್ತದೆ. ಅದು ಕನಸು ಮನಸ್ಸಿನಲ್ಲೂ ಕಂಡುಬರದ ಹತ್ತು ಕೋಟಿ ರೂಪಾಯಿಯ ಸಂಪತ್ತಿನೊಂದಿಗೆ.