ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಸೀಟು ಹೊಂದಾಣಿಕೆ ಕುದುರಲಿಲ್ಲ. ನಾಲ್ಕು ತಿಂಗಳ ಕಾಲ ಜರುಗಿದ ಹೊಂದಾಣಿಕೆ ಮಾತುಕತೆಗಳು ಮುರಿದುಬಿದ್ದವು. ಪರಿಣಾಮವಾಗಿ, ರಾಜಧಾನಿಯ ಲೋಕಸಭಾ ಚುನಾವಣೆಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ತನ್ನ ದಿಗ್ಗಜ ಉಮೇದುವಾರರನ್ನು ಕಣಕ್ಕಳಿಸಿದೆ. ಹದಿನೈದು ವರ್ಷಗಳ ಕಾಲ ಸತತ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್, ಮಾಜಿ ಕೇಂದ್ರ ಮಂತ್ರಿ ಅಜಯ್ ಮಾಕನ್, ದಿಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜೆ.ಪಿ.ಅಗರವಾಲ್, ಮಾಜಿ ಮಂತ್ರಿ ಅರವಿಂದರ್ ಸಿಂಗ್ ಲವ್ಲೀ ಹಾಗೂ ಅಂತಾರಾಷ್ಟ್ರೀಯ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್ ಈ ಪೈಕಿ ದೊಡ್ಡ ಹೆಸರುಗಳು. ತನ್ನ ಏಳು ಮಂದಿ ಸಂಸದರ ಪೈಕಿ ಐವರನ್ನು ಪುನಃ ಕಣಕ್ಕೆ ಇಳಿಸಿದೆ ಬಿಜೆಪಿ. ಮಾಜಿ ಕ್ರಿಕೆಟ್ ತಾರೆ ಗೌತಮ್ ಗಂಭೀರ್ ಮತ್ತು ಪ್ರಸಿದ್ಧ ಪಂಜಾಬಿ ಗಾಯಕ ಹನ್ಸ್ ರಾಜ್ ಹನ್ಸ್ ಈ ಪಕ್ಷದ ಹೊಸ ಹುರಿಯಾಳು ದಾಳಗಳು. ಮೋದಿ-ಬಿಜೆಪಿ ವಿರೋಧಿ ಮತಗಳು ಮುಖ್ಯವಾಗಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಹಾಗೂ ಭಾರತೀಯ ಜನತಾ ಪಾರ್ಟಿಯ ನಡುವೆ ಹಂಚಿಹೋಗುವ ಸಾಧ್ಯತೆ ಢಾಳಾಗಿ ತೆರೆದುಕೊಂಡಿದೆ. ಸಾಲದೆಂಬಂತೆ, ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿ ಕೂಡ ತನ್ನ ಅಭ್ಯರ್ಥಿಗಳನ್ನು ಹೂಡಿದೆ. ಹೀಗಾಗಿ, ಮೋದಿ- ಅಮಿತ್ ಷಾ ಜೋಡಿ ದೆಹಲಿ ಮಟ್ಟಿಗೆ ನಿರಾಳ. 2014ರಲ್ಲಿ ಏಳಕ್ಕೆ ಏಳೂ ಸೀಟುಗಳನ್ನು ಬಿಜೆಪಿ ಬಾಚಿಕೊಂಡಿತ್ತು. ಈ ಸಲ ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆ ಆಗಿದ್ದಲ್ಲಿ, ಏಳರ ಪೈಕಿ ಆರು ಸೀಟು ಬಿಜೆಪಿಯ ಕೈಬಿಡುವ ದಟ್ಟ ಸಾಧ್ಯತೆ ಇತ್ತು. ಇದೀಗ ಹೆಚ್ಚೂಕಡಿಮೆ ಏಳೂ ಸೀಟುಗಳನ್ನು ಬಿಜೆಪಿ ಮತ್ತೊಮ್ಮೆ ಗೆದ್ದುಕೊಂಡರೆ ಆಶ್ಚರ್ಯಪಡಬೇಕಿಲ್ಲ.
ಇತ್ತೀಚಿನ ವರ್ಷಗಳ ದೆಹಲಿ ಚುನಾವಣಾ ರಾಜಕಾರಣ ಮೂರೂ ಮುಖ್ಯ ಪಕ್ಷಗಳು ಏಳುಬೀಳುಗಳನ್ನು ಕಂಡಿವೆ. 2013ರಲ್ಲಿ ರಂಗಪ್ರವೇಶ ಮಾಡಿದ ಆಮ್ ಆದ್ಮಿ ಪಾರ್ಟಿ ಈ ಏಳುಬೀಳುಗಳ ಹಿಂದಿನ ಮುಖ್ಯ ಕಾರಣ. 2013ರ ವಿಧಾನಸಭಾ ಚುನಾವಣೆಗಳಲ್ಲಿ ಮೂರೂ ಪಕ್ಷಗಳ ಜೋಳಿಗೆ ತಲಾ ನಾಲ್ಕನೆಯ ಒಂದರಷ್ಟು ಮತಗಳು ಬಿದ್ದಿದ್ದವು. 2014ರಲ್ಲಿ ಕಾಂಗ್ರೆಸ್ ಧೂಳೀಪಟವಾದ ಲಾಭವನ್ನು ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ಹಂಚಿಕೊಂಡವು. ಕಾಂಗ್ರೆಸ್ ಪತನದ ಲಾಭದ ದೊಡ್ಡ ಪಾಲನ್ನು ಬಾಚಿಕೊಂಡದ್ದು ಬಿಜೆಪಿಯೇ. ದೆಹಲಿಯ ಏಳೂ ಲೋಕಸಭಾ ಸೀಟುಗಳನ್ನು ಗೆದ್ದಿತ್ತು. ಆಮ್ ಆದ್ಮಿ ಪಾರ್ಟಿಗೆ ಶೇ.33ರಷ್ಟು ವೋಟುಗಳು ಸಿಕ್ಕರೂ ಸೀಟುಗಳು ಕೈತಪ್ಪಿದ್ದವು. ಎಲ್ಲ ಏಳು ಸೀಟುಗಳಲ್ಲಿ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳು ಎರಡನೆಯ ಸ್ಥಾನದಲ್ಲಿದ್ದರು. ಕಾಂಗ್ರೆಸ್ ದೂರದ ಮೂರನೆಯ ಸ್ಥಾನದಲ್ಲಿತ್ತು. ಬಿಜೆಪಿ ವಿರೋಧಿ ಮತಗಳು ಹೀಗೆ ಹಂಚಿಹೋಗದಿದ್ದರೆ ಆಮ್ ಆದ್ಮಿ ಪಾರ್ಟಿ ಬರಿಗೈ ಆಗುತ್ತಿರಲಿಲ್ಲ. 2015ರಲ್ಲಿ ಪುನಃ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಯಶಸ್ಸಿನ ಭಾರಿ ಅಲೆಯನ್ನು ಏರಿತ್ತು. ಕಾಂಗ್ರೆಸ್ ತರಗೆಲೆಯಾದರೆ, ಬಿಜೆಪಿ ಕೇವಲ ಮೂರು ಸೀಟುಗಳಿಗೆ ತೃಪ್ತಿಪಡಬೇಕಾಯಿತು. ಮೋದಿಯವರ ಜಾದೂ ಕೂಡ ನಡೆಯಲಿಲ್ಲ. ಒಟ್ಟು 70 ಸೀಟುಗಳ ಪೈಕಿ ಆಮ್ ಆದ್ಮಿ ಪಾರ್ಟಿ 67ರಲ್ಲಿ ಭಾರಿ ಬಹುಮತದ ಅಂತರದಿಂದ ಗೆದ್ದಿತ್ತು. ಆದರೆ, ಈ ಯಶಸ್ಸು ಎರಡು ವರ್ಷಗಳ ನಂತರ 2017ರಲ್ಲಿ ಜರುಗಿದ ಮುನಿಸಿಪಲ್ ಕಾರ್ಪೊರೇಷನ್ ಆಫ್ ಡೆಲ್ಲಿ (ಎಂಸಿಡಿ) ಚುನಾವಣೆಗಳಲ್ಲಿ ದಕ್ಕಲಿಲ್ಲ. ಆಮ್ ಆದ್ಮಿ ಪಾರ್ಟಿಯ ಮತ ಗಳಿಕೆ ಪ್ರಮಾಣ ಎರಡೇ ವರ್ಷಗಳಲ್ಲಿ ಶೇ. 54.5ರಿಂದ ಶೇ.28ಕ್ಕೆ ಕುಸಿದಿತ್ತು. 2013ರ ವಿಧಾನಸಭೆ ಮತ್ತು 2014ರ ಲೋಕಸಭೆ ಚುನಾವಣೆಗಳಲ್ಲಿ ಭಾರಿ ಏಟು ತಿಂದಿದ್ದ ಕಾಂಗ್ರೆಸ್ ಪಕ್ಷ, ಎಂಸಿಡಿ ಚುನಾವಣೆಗಳಲ್ಲಿ ಹಠಾತ್ತನೆ ಚೇತರಿಸಿಕೊಂಡಿತ್ತು. ಈ ಪಕ್ಷದ ವೋಟು ಗಳಿಕೆ ನಾಟಕೀಯ ಸುಧಾರಣೆ ಕಂಡಿತ್ತು. 2015ರ ವಿಧಾನಸಭಾ ಚುನಾವಣೆಗಳಲ್ಲಿ ಕೇವಲ ಶೇ.9.7ರಷ್ಟು ಮತ ಗಳಿಸಿದ್ದ ಕಾಂಗ್ರೆಸ್, ನಗರ ನಿಗಮ ಚುನಾವಣೆಯಲ್ಲಿ ಶೇ.21.1ರಷ್ಟು ಮತಗಳನ್ನು ಪಡೆಯಿತು. ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ನಡುವಣ ಮತಗಳ ಅಂತರ ಈ ಚುನಾವಣೆಗಳಲ್ಲಿ ಕೇವಲ ಶೇ.5ಕ್ಕೆ ಕುಸಿದಿತ್ತು. ಪ್ರಧಾನಿ ಹುದ್ದೆಗೆ ಮೋದಿ, ಮುಖ್ಯಮಂತ್ರಿ ಪದವಿಗೆ ಕೇಜ್ರಿವಾಲ್ ಅವರಿಗೆ ಮಣೆ ಹಾಕಿದ್ದ ದೆಹಲಿ ಮತದಾರನ ಆದ್ಯತೆ ನಗರ ನಿಗಮ ಚುನಾವಣೆಗಳಲ್ಲಿ ಮಿಶ್ರರೂಪ ತಳೆದಿತ್ತು.
1999 ಮತ್ತು 2004ರ ನಡುವೆ ದೆಹಲಿಯಲ್ಲಿ ಬಿಜೆಪಿಯ ಮತ ಗಳಿಕೆ ಪ್ರಮಾಣದಲ್ಲಿ ಶೇ.10ರಷ್ಟು ಕುಸಿತ ಕಂಡುಬಂದಿದೆ. 1996, 1998 ಹಾಗೂ 1999ರಲ್ಲಿ ಬಿಜೆಪಿಯ ಮತ ಗಳಿಕೆ ಸಾಮರ್ಥ್ಯ ಶೇ.50 ಮತ್ತು ಶೇ.51ರ ಗಡಿಯಲ್ಲಿ ನೆಲೆಸಿತ್ತು. 2014ರಲ್ಲಿ ಎಲ್ಲ ಏಳು ಸೀಟುಗಳನ್ನು ಬಾಚಿಕೊಂಡ ಮೋದಿ ಅಲೆಯ ನಡುವೆಯೂ ಬಿಜೆಪಿ ಗಳಿಸಿದ ಮತಗಳ ಪ್ರಮಾಣ 46.4 ಮಾತ್ರ. ಐದು ವರ್ಷಗಳ ಮೋದಿ ಆಡಳಿತದ ನಂತರ ದೆಹಲಿಯಲ್ಲಿ ಬಿಜೆಪಿ ತನ್ನ 2014ರ ಮತ ಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲಿದೆ ಎನ್ನಲು ಆಧಾರಗಳಿಲ್ಲ. ಒಂದು ವೇಳೆ ಕುಸಿತವೇನಾದರೂ ಕಂಡುಬಂದರೆ ಅನಿರೀಕ್ಷಿತ ಫಲಿತಾಂಶಗಳು ಹೊರಬೀಳುವ ಸಾಧ್ಯತೆ ಇದೆ. ಆದರೆ, ಕಾಂಗ್ರೆಸ್ ಚೇತರಿಕೆಯಲ್ಲಿ ಇನ್ನಷ್ಟು ಸುಧಾರಣೆ ಕಂಡುಬಂದರೆ ಆಮ್ ಆದ್ಮಿ ಪಾರ್ಟಿಗೆ ಕೆಟ್ಟ ಸುದ್ದಿ ಸಿಕ್ಕಿ, ಬಿಜೆಪಿಯ ಪಾಲಿಗೆ ವರದಾನವಾಗಿ ಪರಿಣಮಿಸಲಿದೆ. 2019ರಲ್ಲಿ 2014 ಪುನರಾವರ್ತನೆಯಾಗುವ ವಿಶ್ವಾಸ ಕಮಲ ಪಾಳೆಯದಲ್ಲಿ ಮೂಡಿದೆ. ಈ ಆತ್ಮವಿಶ್ವಾಸ ನಿಜವೇ ಅಥವಾ ನಿರಾಧಾರವೇ ಎಂಬ ಗುಟ್ಟು ಮೇ.23ರಂದು ರಟ್ಟಾಗಲಿದೆ.
ಹೊಂದಾಣಿಕೆಯಿಂದ ಹಿಂದೆ ಸರಿದ ಕಾಂಗ್ರೆಸ್ ಪಕ್ಷ ಬಿಜೆಪಿಯ ಗೆಲುವನ್ನು ಬಯಸಿದೆ ಎಂಬುದು ಆಮ್ ಆದ್ಮಿ ಪಾರ್ಟಿಯ ಆಪಾದನೆ. ದೆಹಲಿ ಕೇಂದ್ರಿತ ವಿಷಯಗಳನ್ನು ಮುಂದಿಟ್ಟುಕೊಂಡು ಈ ಚುನಾವಣೆಗಳಲ್ಲಿ ಸೆಣಸುತ್ತಿದೆ ಆಮ್ ಆದ್ಮಿ ಪಾರ್ಟಿ. ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂಬ ವಿಷಯವನ್ನು ಮುಂದೆ ಮಾಡಿದೆ. ನರೇಂದ್ರ ಮೋದಿ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆಂದು ಅವರ ವಿರುದ್ಧ ದಾಳಿ ನಡೆಸಿದೆ. ಈ ಕದನದಲ್ಲಿ ಕಾಂಗ್ರೆಸ್ಸನ್ನು ಹಿಂದೆ ಹಾಕಿದರೆ ಪೊರಕೆ ಪಕ್ಷಕ್ಕೆ ಸೀಟುಗಳೂ ದಕ್ಕುವುದು ಸಾಧ್ಯ. ಲೋಕಸಭೆಯ ಮಟ್ಟದಲ್ಲಿ ತಾನು ಪ್ರಸ್ತುತವಾಗಿ ಉಳಿಯಲೂಬಹುದು. ವಿಫಲವಾದರೆ, ಮೋದಿ ಮತ್ತು ಕಾಂಗ್ರೆಸ್‌ಗೆ ಸುಲಭದ ತುತ್ತಾಗುವ ಅಪಾಯ ಕಾದಿದೆ.
ಸೀಟು ಹೊಂದಾಣಿಕೆಯನ್ನು ದೆಹಲಿಗೆ ಸೀಮಿತಗೊಳಿಸಬೇಕೇ ಇಲ್ಲವೇ ಪಂಜಾಬ್-ಹರಿಯಾಣ-ಚಂಡೀಗಢ-ಗೋವಾಗೆ ವಿಸ್ತರಿಸಬೇಕೇ ಎಂಬ ಕುರಿತ ಮತಭೇದವೇ ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ನಡುವಣ ಮೈತ್ರಿ ಪ್ರಯತ್ನವನ್ನು ಮಣ್ಣುಗೂಡಿಸಿತು. ದೆಹಲಿ-ಪಂಜಾಬ್-ಹರಿಯಾಣ-ಚಂಡೀಗಢ- ಗೋವಾದ ಒಟ್ಟು ಲೋಕಸಭಾ ಸೀಟುಗಳು 33. ಮೋದಿ-ಶಾ ಜೋಡಿಯನ್ನು ಹಣಿಯಬೇಕಿದ್ದರೆ ಈ 33 ಸೀಟುಗಳಲ್ಲಿ ಕಾಂಗ್ರೆಸ್- ಆಪ್ ಸೀಟು ಹೊಂದಾಣಿಕೆ ಮಾಡಿಕೊಳ್ಳುವುದು ಅತ್ಯಗತ್ಯ ಎಂಬುದು ಕೇಜ್ರಿವಾಲ್ ಲೆಕ್ಕಾಚಾರವಾಗಿತ್ತು.
ದೆಹಲಿಯಲ್ಲಿ 2014ರ ಮತ ಗಳಿಕೆ ಸರಳ ಗಣಿತವನ್ನು ಪರಿಗಣಿಸಿದರೆ ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಿದ್ದ ಒಟ್ಟು ಮತಗಳು ಬಿಜೆಪಿಯ ಮತ ಗಳಿಕೆಗಿಂತ ಶೇ.ಎರಡರಷ್ಟು ಹೆಚ್ಚು, ಅರ್ಥಾತ್ ಶೇ.48.3. ಹೀಗಾಗಿ, ಸರಳ ಗಣಿತವನ್ನೇ ಪರಿಗಣಿಸುವುದಾದರೆ, ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ಸೀಟು ಹೊಂದಾಣಿಕೆ ಬಿಜೆಪಿ ಪಾಲಿಗೆ ಒಳ್ಳೆಯ ಬೆಳವಣಿಗೆ ಆಗಿರುತ್ತಿರಲಿಲ್ಲ. ಇದೀಗ ಏರ್ಪಟ್ಟಿರುವ ತ್ರಿಕೋನ ಸ್ಪರ್ಧೆಯಿಂದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಗೆ ಹಿನ್ನಡೆಯಾಗುವ ಸಾಧ್ಯತೆಯೇ ದಟ್ಟ. ಈ ಎರಡೂ ಪಕ್ಷಗಳ ಮತದಾರರ ಸಮೂಹ ಹೆಚ್ಚು ಕಡಿಮೆ ಒಂದೇ- ಮುಸಲ್ಮಾನರು, ಬಡಬಗ್ಗರು, ಪರಿಶಿಷ್ಟರು, ಝುಗ್ಗಿ ಝೋಪಡಿ ಕೊಳೆಗೇರಿ ವಾಸಿಗಳು ಹಾಗೂ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಒಂದು ಭಾಗ. 2015ರ ವಿಧಾನಸಭಾ ಚುನಾವಣೆಗಳಲ್ಲಿ ಜರುಗಿದ್ದು ಹೀಗೆಯೇ. ಅಂತೆಯೇ, ಆಮ್ ಆದ್ಮಿ ಪಾರ್ಟಿ ಶೇ.54ರಷ್ಟು ಮತಗಳನ್ನು ಗಳಿಸಿತು. ಬಿಜೆಪಿ ಶೇ.32ಕ್ಕೆ ಹಾಗೂ ಕಾಂಗ್ರೆಸ್ ಶೇ.9.7ಕ್ಕೆ ಕುಸಿದಿತ್ತು. 2013ರ ತನ್ನ ಚೊಚ್ಚಲ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಶೇ.29.5, ಬಿಜೆಪಿ ಶೇ.33 ಹಾಗೂ ಕಾಂಗ್ರೆಸ್ ಶೇ.24.6ರಷ್ಟು ಮತ ಪಡೆದಿದ್ದವು. 2013 ಮತ್ತು 2015ರ ಮತ ಗಳಿಕೆಯ ಅಂಕಿ-ಅಂಶಗಳು ಆಪ್ ಗೆಲುವಿಗೆ ಬೆಲೆ ತೆತ್ತ ಪಕ್ಷ ಕಾಂಗ್ರೆಸ್ಸೇ ವಿನಾ ಬಿಜೆಪಿ ಅಲ್ಲ ಎಂಬ ಸತ್ಯವನ್ನು ಸಾರುತ್ತವೆ.