ರಾಜಕೀಯ ನಾಟಕಗಳನ್ನು ಆಡುವುದರಲ್ಲಿ ಕರ್ನಾಟಕ ದೇಶದಲ್ಲಿಯೇ ಖ್ಯಾತಿ (?) ಪಡೆದಿದೆ. ಇದಕ್ಕೆ ಸುಮಾರು ಮೂರು ದಶಕಗಳ ಇತಿಹಾಸವಿದೆ. ಇದು ಶುರುವಾದದ್ದು ತೊಂಬತ್ತರ ದಶಕದ ಕೊನೆಯ ಭಾಗದಲ್ಲಿ. ತಮ್ಮ ಪಕ್ಷಕ್ಕೆ ಕರ್ನಾಟಕದಲ್ಲಿಯಾಗಲೀ, ರಾಷ್ಟ್ರೀಯ ಮಟ್ಟದಲ್ಲಿ ಆಗಲೀ ಲೋಕಸಭೆಯಲ್ಲಿ ಅಗತ್ಯದ ಸಂಖ್ಯಾ ಬಲವಿಲ್ಲದಿದ್ದರೂ ಮಾನ್ಯ ದೇವೇಗೌಡರು ಹಠಾತ್ತನೆ ನಾಟಕೀಯ ಶೈಲಿಯಲ್ಲಿ ಪ್ರಧಾನ ಮಂತ್ರಿ ಹುದ್ದೆ ಏರಿ ಜವಾಹರಲಾಲ ನೆಹರು, ಲಾಲ್ ಬಹಾದೂರ ಶಾಸ್ತ್ರಿ, ಇಂದಿರಾಗಾಂಧಿ ಮತ್ತು ಅಟಲ ಬಿಹಾರಿ ವಾಜಪೇಯಿ ಅಂತಹವರು ಕುಳಿತ ಸ್ಥಾನದಲ್ಲಿ ಕುಳಿತಾಗ ಕನ್ನಡಿಗರಿಗೆ ಏನೋ ಒಂದು ತರಹದ ಪುಳಕ. ಆದರೆ ಹೊಸದಿಲ್ಲಿಯ ರಾಜಕಾರಣಿಗಳ ದರ್ಬಾರು ಕೊಟ್ಟದ್ದು ಒಂದು ಕಿಡಿಗೇಡಿ ನಾಣ್ಣುಡಿ – “ಒಬ್ಬ (ದಿಲ್ಲಿಗೆ ಅಪರಿಚಿತ) ಗೌಡ ಪ್ರದಾನಿ ಯಾದರೆ, ದೇಶದಲ್ಲಿ ಯಾರಾದರೂ ಪ್ರಧಾನಿಯಾಗಬಹುದು.”.
ಪ್ರಸಿದ್ದ ಪತ್ರಕರ್ತ ಶೇಖರ ಗುಪ್ತಾ ತಮ್ಮ ಅಂಕಣದಲ್ಲಿ ಹೇಳುತ್ತಾರೆ, “ನನ್ನ ದೀರ್ಘಕಾಲದ ರಾಜಕಿಯ ವಿಶ್ಲೇಷಣೆ ವೃತ್ತಿಯಲ್ಲಿ, ನಾನು ದೇವೇಗೌಡರ ಹೆಸರನ್ನೇ ಕೇಳಿರಲಿಲ್ಲ.” (ದೇವೇಗೌಡರಲ್ಲದೇ ಅವರ ಮಗ ಕುಮಾರಸ್ವಾಮಿ ಇಂತಹುದೇ ಪರಿಸ್ಥಿತಿಯಲ್ಲಿ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿ ಪದವನ್ನು ಅಲಂಕರಿಸಿದ್ದು ಬಹುಶ: ಅವರಿಗೆ ಅರಿವಿಲ್ಲವೆಂದು ಕಾಣುತ್ತದೆ. ಕರ್ನಾಟಕದ ಸದ್ಯದ ರಾಜಕೀಯ ಬೆಳವಣಿಗೆಗಳಿಂದ ಕುಮಾರಸ್ವಾಮಿಯವರು ಎರಡನೆಯ ಬಾರಿ ಪಡೆದ ಪದವಿ ಡೋಲಾಯಮಾನ ಪರಿಸ್ಥಿತಿಯಲ್ಲಿದೆ.).
ಈ ರಾಜಕೀಯ ನಾಣ್ಣುಡಿಯ ಕಾರಣದಿಂದ, 2019ರ ಲೋಕಸಭೆ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿಗೆ ಬಹುಮತ ಸಿಗದೇ, ಬಿಜೆಪಿಯೇತರ ಪ್ರಧಾನಿ ಯಾಗುವ ಪರಿಸ್ಥಿತಿ ಬಂದರೆ, ತಾವೂ ಆ ಹುದ್ದೆಗೆ ಆಕಾಂಕ್ಷಿಗಳೆಂದು ಹಲವರು ಘೋಷಿಸಿಕೊಂಡರು. ಅವರಲ್ಲಿ ದೇವೆಗೌಡರನ್ನು ಹಿಡಿದು ಚಾಲನೆಯಲ್ಲಿ ಇದ್ದ ಹೆಸರುಗಳಲ್ಲಿ ಬಂಗಾಲದ ಮಮತಾ ಬ್ಯಾನರ್ಜಿ, ಬಿಹಾರದ ಮಾಯಾವತಿ, ಮಹಾರಾಷ್ಟ್ರದ ಶರದ್ ಪವಾರ್, ಆಂಧ್ರ ಪ್ರದೇಶದ ನಾರಾ ಚಂದ್ರಬಾಬು ನಾಯ್ಡು ಅವರ ಹೆಸರುಗಳೂ ಇದ್ದವು. ನರೇಂದ್ರ ಮೋದಿ ಮತ್ತು ಬಿಜೆಪಿಯ ಪ್ರಚಂಡ ವಿಜಯದಿಂದಾಗಿ, “ಇವರೆಲ್ಲರ ರಾಜಕೀಯ ಜೀವನ ಮತ್ತು ಕನಸುಗಳು ಭಗ್ನವಾದವು’’ ಎಂದು ಗುಪ್ತಾ ಅವರು ತಮ್ಮ ಅಂಕಣದಲ್ಲಿ ಹೇಳಿದ್ದಾರೆ.
ಈ ಶತಮಾನದ ಮೊದಲ ದಶಕದಲ್ಲಿ, ಕರ್ನಾಟಕದ ಬಿಜೆಪಿ ಮತ್ತು ಬಿ ಎಸ್ ಯಡಿಯೂರಪ್ಪ, ಇಂತಹ ಕಾರಣದಿಂದ ರಾಷ್ಟ್ರ ರಾಜಕಾರಣದಲ್ಲಿ ಸುದ್ದಿ ಮಾಡಿದರು. 2008 ರ ವಿಧಾನ ಸಭೆ ಚುನಾವಣೆಯ ನಂತರ “ಕಮಲ ಕಾರ್ಯಾಚರಣೆ” ಯಿಂದ ಬಹುಮತಕ್ಕೆ ಬೇಕಾದ ಶಾಸಕರನ್ನು ಇತರ ಪಕ್ಷಗಳಿಂದ ಎಳೆದು ಸರಕಾರ ಭದ್ರಗೊಳಿಸಿದವರು ಯಡಿಯೂರಪ್ಪ. ಅವರ ಕಾರ್ಯದ ಹಿಂದೆ ನಿಂತ ಶಕ್ತಿ ಬಳ್ಳಾರಿಯ ಗಣಿ ಧಣಿ ಎಂದು ಖ್ಯಾತನಾಮರಾದ ಗಾಳಿ ಜನಾರ್ದನ ರೆಡ್ಡಿ ಮತ್ತು ಅವರ ಸಂಗಡಿಗರು. ಪಕ್ಷಾಂತರ ನಿಷೇಧ ಕಾಯದೆಯಿಂದ ಪಾರಾಗಲು, ಬಿಜೆಪಿಗೆ ಬರುವ ಶಾಸಕರಿಂದ ರಾಜಿನಾಮೆ ಕೊಡಿಸಿ, ಉಪಚುನಾವಣೆಯ ಮೂಲಕ ಪುನರಾಯ್ಕೆ ಮಾಡುವ ಪದ್ದತಿಯನ್ನು ಜಾರಿಗೆ ತಂದರು. ಈ “ಕಮಲ ಕಾರ್ಯಾಚರಣೆ’’ ಎಷ್ಟು ಖ್ಯಾತಿ ಪಡೆದಿತ್ತೆಂದರೆ, ಹಲವು ದಶಕಗಳ ಹಿಂದೆ ಪಕ್ಷಾಂತರ ಕಾಯದೆ ಬರುವ ಮುನ್ನ ಉತ್ತರ ಭಾರತದ ಹರ್ಯಾಣ ರಾಜ್ಯದಲ್ಲಿ ನಡೆದ ಇಂತಹದೇ ಕಾರ್ಯಕ್ಕೆ ಕೊಟ್ಟ “ಆಯಾ ರಾಮ, ಗಯಾ ರಾಮ” ಖ್ಯಾತಿಯನ್ನು ಕರ್ನಾಟಕ ಮರೆಸಿ ಬಿಟ್ಟಿತ್ತು. ಕರ್ನಾಟಕದ ಕಮಲ ಕಾರ್ಯಚರಣೆಯಾದಾಗ ಬಿಜೆಪಿ ರಾಷ್ಟ್ರೀಯ ಮಟ್ಟದ ನಾಯಕತ್ವ ದಲ್ಲಿ ಇಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇನ್ನೂ ಪ್ರವೇಶ ಮಾಡಿರಲಿಲ್ಲ.
ಕರ್ನಾಟಕದ ಈ ರಾಜಕೀಯ ನಾಟಕದ ಸೂತ್ರಧಾರತ್ವ ವಹಿಸಿದ್ದ ಯಡಿಯೂರಪ್ಪನವರ ಮತ್ತು ಕಾರ್ಯಾಚರಣೆ ಜವಾಬ್ದಾರಿ ನಿರ್ವಹಿಸಿದ್ದ ಗಣಿಕಪ್ಪ ಕುಖ್ಯಾತಿಯ ಮಂತ್ರಿ ಗಾಳಿ ಜನಾರ್ದನ ರೆಡ್ಡಿ ಮತ್ತು ಸಂಗಡಿಗರು ಬಹಳ ದೊಡ್ಡ ರಾಜಕೀಯ ಬೆಲೆ ತೆರಬೇಕಾಯಿತು. ಅವರ ವಿರುದ್ದ ಭ್ರಷ್ಟಾಚಾರದ ಅಪಾದನೆಗಳು ಆದುವು. ಅನೇಕ ಹಗರಣಗಳು ತಲೆ ಎತ್ತಿದವು. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕೆಲ ಸಚಿವ ಸಹೋದ್ಯೋಗಿಗಳು ಸೆರೆಮನೆವಾಸ ಅನುಭವಿಸಬೇಕಾಯಿತು. ಜನಾರ್ದನ ರೆಡ್ಡಿಯವರು ಗಣಿ ಹಗರಣದ ಸುಳಿಯಿಂದ ಇನ್ನೂ ಹೊರಬಂದಿಲ್ಲ. ಅವರ ರಾಜಕೀಯ ಅಕಾಂಕ್ಷೆ ಕಮರಿದೆ. ಯಡಿಯೂರಪ್ಪನವರು ರಾಜಕೀಯದಲ್ಲಿ ಇದ್ದಾರೆ. ಆದರೆ ಮೊದಲಿನಂತೆ ಅವರು ಕರ್ನಾಟಕದ ಪ್ರಶ್ನಾತೀತ ಧುರೀಣರೆಂಬ ಪಟ್ಟದಿಂದ ವಂಚಿತರಾಗಿದ್ದಾರೆ.
“ಕರ್-ನಾಟಕ” ಎಂಬ ಮೂರು ಅಂಕದ ಹೊಸ ನಾಟಕ 2018 ರ ವಿಧಾನಸಭೆ ಚುನಾವಣೆಯ ನಂತರ ಆರಂಭವಾಗಿ, ಈಗ ಕ್ಲೈಮಾಕ್ಸಿಗೆ ತಲುಪಿದೆ. ಬಹಮತ ಸಿಗದ, ಆದರೆ ಅತಿ ಹೆಚ್ಚು ಸ್ಥಾನ ಗಳಿಸಿದ ಬಿಜೆಪಿ, ವಿರೋಧಿ ಪಕ್ಷದಲ್ಲಿ ಕುಳಿತಿದ್ದು. ಮೂರನೆಯ ಸ್ಥಾನ ಪಡೆದ ಜೆಡಿಎಸ್, ಎರಡನೆಯ ಸ್ಥಾನ ಪಡೆದ ಕಾಂಗ್ರೆಸಿನ ಬೆಂಬಲದಿಂದ ಮೈತ್ರಿ ಸರಕಾರ ನಡೆಸುತ್ತಿರುವುದು ಮೊದಲ ಅಂಕದಲ್ಲಿ ಕಂಡರೆ, ಎರಡನೆ ಅಂಕದಲ್ಲಿ, ಮೈತ್ರಿ ಪಕ್ಷಗಳೊಳಗಿನ ಮುನಿಸು, ಭಿನ್ನಾಭಿಪ್ರ್ರಾಯಗಳು ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನಿಂದ ತಾರಕಕ್ಕೆರುತ್ತಿರುವದು ಕಾಣಬಹುದು.
ತನ್ಮಧ್ಯೆ ಯಡಿಯೂರಪ್ಪನವರ ಕರ್ನಾಟಕ ಬಿಜೆಪಿ ತನ್ನದೇ ಉಪನಾಟಕ ಮಾಡಿ ಮುಖಭಂಗಕ್ಕೆ ಒಳಗಾಯಿತು ಎನ್ನುವುದನ್ನು ನೆನಿಸಿಕೊಳ್ಳಲೇಬೇಕು. ಅನೇಕ ಬಾರಿ “ಕಮಲ” ಕಾರ್ಯಚರಣೆ ಮಾಡಿ, ಕಾಂಗ್ರೆಸ್ ಶಾಸಕರನ್ನು ಸೆಳೆದು ತಮ್ಮ ಸರಕಾರವನ್ನು ಮಾಡಲು ಪ್ರಯತ್ನಿಸಿ ಯಡಿಯೂರಪ್ಪನವರು ವಿಫಲರಾದುದು ರಹಸ್ಯವಾಗಿ ಉಳಿದಿಲ್ಲ. ಡಿ. ಕೆ. ಶಿವಕುಮಾರ್ ಅವರ ಹಿರಿತನದಲ್ಲಿ ತಂತ್ರಗಾರಿಕೆ ಮಾಡಿ, ಯಡಿಯುರಪ್ಪನವರ ಪ್ರಯತ್ನಗಳನ್ನು ಹೊರಹಾಕಿ ಬಿಜೆಪಿಯನ್ನು ಫಜೀತಿಗೆ ಸಿಕ್ಕಿಸುವ ಪ್ರಯತ್ನಗಳು ನಡೆಯದೇ ಇರಲಿಲ್ಲ. ಆದರೆ ಈಗ ಆಗಿರುವ ಕೆಲ ಶಾಸಕರ ರಾಜಿನಾಮೆ ಪ್ರಹಸನದಲ್ಲಿ, ಯಡಿಯೂರಪ್ಪ ಮತ್ತು ಅವರ ಹತ್ತಿರವಿದ್ದವರ ಕೈವಾಡ ಇದ್ದ ಹಾಗಿಲ್ಲ. ಏಕೆಂದರೆ, ಯಡಿಯೂರಪ್ಪನವರಿಗೆ ಯಾವ ರಹಸ್ಯಗಳನ್ನೂ ಇಟ್ಟುಕೊಳ್ಳುವ ಶಕ್ತಿ ಇಲ್ಲ. ರಾಜಿನಾಮೆ ಪ್ರಕರಣ ಕೊನೆಯ ತನಕ ಬಹಳ ಗುಟ್ಟಾಗಿ ಇಡಲ್ಪಟ್ಟಿತ್ತು. ಇದನ್ನು ಬಹುಶ: ಬೇರೆಯವರು ಮುಖ್ಯವಾಗಿ ಹೊಸ ದಿಲ್ಲಿ ಮಟ್ಟದಲ್ಲಿ ವಿಚಾರ ಮಾಡಿರಬೇಕು. ಇಲ್ಲಾಗಲೀ ದಿಲ್ಲಿಯಲ್ಲಾಗಲೀ ಇದರಲ್ಲಿ ನಾಟಕ-ಕರ್-ನಾಟಕದ ಛಾಪು ಇರುವದನ್ನು ಅಲ್ಲಗಳೆಯಲಾಗುವದಿಲ್ಲ.