ದಕ್ಷಿಣ ಭಾರತದ ಗೋವಾ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪುಡಿಚೇರಿ ರಾಜ್ಯಗಳಲ್ಲಿ ಆಗಸ್ಚ್ ತಿಂಗಳ ಮಳೆ ವಿಪತ್ತಿನ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಮಹಾರಾಷ್ಟ್ರ, ಗುಜರಾತ್,ಒಡಿಶಾ, ಮಧ್ಯಪ್ರದೇಶ ಮತ್ತು ಕಳೆದ ತಿಂಗಳು ಅಸ್ಸಾಂ ರಾಜ್ಯ ಪ್ರವಾಹದಿಂದ ತತ್ತರಿಸಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಯ 124 ಘಟಕಗಳು ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿವೆ. ಭಾರತೀಯ ತಟ ರಕ್ಷಣಾ ಪಡೆಯ (Indian Coast Guard) 53 ತಂಡಗಳನ್ನು ಕೇರಳ, ಕರ್ನಾಟಕ, ಮಹಾರಾಷ್ಟ್ರ ಕರಾವಳಿಯಲ್ಲಿ ನಿಯೋಜಿಸಲಾಗಿದೆ.
45 ವರ್ಷಗಳಲ್ಲಿ ಕಂಡರಿಯದ ವಿಪತ್ತು
ಮಹಾರಾಷ್ಟ್ರದ ದಕ್ಷಿಣ ಪ್ರದೇಶದ ಜಿಲ್ಲೆಗಳು, ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳು, ಕೇರಳದ ಉತ್ತರ ದಿಕ್ಕಿನ ಏಳು ಜಿಲ್ಲೆಗಳು, ತಮಿಳುನಾಡಿನ ಪಶ್ಚಿಮ ಘಟ್ಟ ಪ್ರದೇಶದ ಜಿಲ್ಲೆಗಳು ಭಾರಿ ಮಳೆ, ಪ್ರವಾಹ, ಭೂಕುಸಿತದಿಂದ ತತ್ತರಿಸಿವೆ. ಕೃಷ್ಣ, ಘಟಪ್ರಭಾ, ಮಲಪ್ರಭಾ, ನೇತ್ರಾವತಿ, ಕಾಳಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಲವೆಡೆ ಕುಡಿಯಲು ನೀರಿಲ್ಲದೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಹಾರ ಕಾರ್ಯದಲ್ಲಿ ವಿಳಂಬ, ಸಕಾಲ ಮುನ್ಸೂಚನೆ ನೀಡದಿರುವ ಕೊರತೆಯಿಂದಾಗ ಜನರು ಪರಿತಪಿಸುವಂತಾಗಿದೆ.
ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಲ್ಲಿ ಒಂದೂವರೆ ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸುರಿದ ಅಸಾಧಾರಣ ಮಳೆ ಮತ್ತು ಮಹಾರಾಷ್ಟ್ರ ರಾಜ್ಯದ ಕೊಯ್ನ ಅಣೆಕಟ್ಟಿನ ಹೆಚ್ಚುವರಿ ನೀರನ್ನು ವಿಳಂಬವಾಗಿ ಕರ್ನಾಟಕದತ್ತ ಹರಿಯಬಿಟ್ಟಿರುವುದು ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಕರ್ನಾಟಕದಲ್ಲಿ ಅಪಾರ ಕೃಷಿ ಹಾನಿಯಲ್ಲದೆ, ಮೂಲಭೂತ ಸೌಕರ್ಯಗಳಾದ ರಸ್ತೆ,ಸೇತುವೆಗಳು ಕೊಚ್ಚಿ ಹೋಗಿದ್ದು, ಅಂದಾಜು ಆರು ಸಾವಿರ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ರಾಜ್ಯ ಸರಕಾರ ಹೇಳಿದೆ.
ಸತತವಾಗಿ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿರುವ ಮುಖ್ಯಮಂತ್ರಿ ಬಿ. ಎಸ್. ಯಡ್ಯೂರಪ್ಪ 45 ವರ್ಷಗಳಲ್ಲಿ ಕಂಡರಿಯದ ಪ್ರಾಕೃತಿಕ ವಿಕೋಪ ಇದಾಗಿದೆ ಎಂದಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಕೇಂದ್ರ ಸರಕಾರ ರಾಜ್ಯಕ್ಕೆ 100 ಕೋಟಿ ರೂಪಾಯಿ ಮೊದಲ ಕಂತಿನ ಪರಿಹಾರ ಘೋಷಣೆ ಮಾಡಿದ್ದು, ರಾಜ್ಯ ಸರಕಾರ ನೌಕರರ ಸಂಘ 150 ಕೋಟಿ ರೂಪಾಯಿ ಪರಿಹಾರ ಧನ ನೀಡುವುದಾಗಿ ಘೋಷಣೆ ಮಾಡಿದೆ.

ಕೇರಳ ಮತ್ತೊಮ್ಮೆ ತತ್ತರ
ಕಳೆದ ವರ್ಷ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿ ಹೋಗಿದ್ದ ಕೇರಳ ರಾಜ್ಯ ಈಗ ಮತ್ತೊಮ್ಮೆ ಹಿಂದಿಗಿಂತಲೂ ಕಠಿಣವಾದ ಪ್ರಾಕೃತಿಕ ವಿಕೋಪವನ್ನು ಎದುರಿಸುತ್ತಿದೆ. ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಅನಾಹುತಗಳಿಗೆ ಸಾಕ್ಷಿಯಾಗಿದೆ. ಕೊಚ್ಚಿ ವಿಮಾನ ನಿಲ್ದಾಣ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ. ಆಗಸ್ಟ್ 11ರ ತನಕ ಕೊಚ್ಚಿ ವಿಮಾನ ನಿಲ್ದಾಣ ಬಂದ್ ಆಗಿರುತ್ತದೆ.
ಕೇರಳದಲ್ಲಿ 315 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಒಂದು ಲಕ್ಷಕ್ಕಿಂತ ಹೆಚ್ಚು ಮಂದಿಯನ್ನು ಇಂತಹ ಗಂಜಿ ಕೇಂದ್ರಗಳಿಗ ಸ್ಥಳಾಂತರಿಸಲಾಗಿದೆ. ಸುಮಾರು ಮೂವತ್ತು ಸಾವಿರಕುಟುಂಬಗಳು ಮನೆ ಕಳಕೊಂಡಿದ್ದಾರೆ. ಕಾಸರಗೋಡು,ಕಣ್ಣೂರು, ಕೋಝಿಕ್ಕೋಡು, ಮಲಪುರಂ, ಇಡುಕ್ಕಿ, ಪಾಲಕ್ಕಾಡ್, ಎರ್ನಾಕುಲಂ ಜಿಲ್ಲೆಗಳು ಪ್ರವಾಹ ಬಾಧಿತವಾಗಿವೆ. ಇದುವರೆಗೆ ಸುಮಾರು 45 ಮಂದಿ ಸಾವನ್ನಪ್ಪಿದ್ದು, ಬಹುತೇಕ ಕಡೆ ಭೂಕುಸಿತ ಸಂಭವಿಸಿದೆ.

ತುಂಬಿ ಹರಿದ ಗೋದಾವರಿ
ಆಂಧ್ರಪ್ರದೇಶದ ಪೂರ್ವ ಗೋದಾವರಿ ಮತ್ತು ಪಶ್ಚಿಮ ಗೋದಾವರಿ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 31ಕ್ಕೂ ಹೆಚ್ಚು ಮಂದಿ ಒಳನಾಡು ಮೀನುಗಾರರನ್ನು ಅರೆ ಸೇನಾಪಡೆಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಗೋದಾವರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಅಚ್ಚುಕಟ್ಟು ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಗೋದಾವರಿ ತುಂಬಿಹರಿಯುತ್ತಿರುವುದರಿಂದ 36 ಗ್ರಾಮಗಳು ದ್ವೀಪಗಳಾಗಿ ಪರಿವರ್ತನೆಯಾಗಿವೆ. ಈ ಮಧ್ಯೆ, 1,900 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮುಖ್ಯಮಂತ್ರಿ ಜಗನ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ನೀಲಗಿರಿ ಪರ್ವತಶ್ರೇಣಿ
ಕರ್ನಾಟಕ ರಾಜ್ಯಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಪಶ್ಚಿಮಘಟ್ಟ ಪ್ರದೇಶದ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾದ ಕಾರಣ ಕೆಲವು ಮಂದಿ ಮಳೆ ನೀರಿಗೆ ಕೊಚ್ಚಿ ಹೋಗಿದ್ದು, ಅಲ್ಪಸ್ವಲ್ಪ ನಾಶ ನಷ್ಟ ಸಂಭವಿಸಿದೆ. ಕೇರಳ, ಕರ್ನಾಟಕ, ತಮಿಳುನಾಡು ಹೊಂದಿಕೊಂಡಿರುವ ರಾಷ್ಟ್ರೀಯ ಉದ್ಯಾನವನ ಮತ್ತು ವರ್ವತಶ್ರೇಣಿಗಳ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಕೇರಳದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ಕರ್ನಾಟಕದ ಕಬಿನಿ ಅಣೆಕಟ್ಟು ತುಂಬಿದೆ. ಕೊಯಮತ್ತೂರು ಮತ್ತು ನಿಲಗೀರಿಸ್ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ.
ದಕ್ಷಿಣ ಮಹಾರಾಷ್ಟ್ರ ಮಳೆ
ದಕ್ಷಿಣ ಮಹಾರಾಷ್ಟ್ರ ಮಳೆಮಹಾರಾಷ್ಟ್ರ ರಾಜ್ಯದ ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹದಿಂದ ಭಾರಿ ಪ್ರಮಾಣದ ನಾಶ ನಷ್ಟ ಸಂಭವಿಸಿದ್ದು, ದಕ್ಷಿಣ ಭಾಗದ ಬಹುತೇಕ ಜಿಲ್ಲೆಗಳು ಪ್ರವಾಹ ನೀರಿನಿಂದ ಸಂಕಷ್ಟಅನುಭವಿಸಿವೆ. ರಾಜ್ಯದಲ್ಲಿ ಒಟ್ಟು ಎರಡು ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಮಳೆಯಿಂದಾಗಿ 27 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ನಿರಂತರವಾಗಿ ಐದು ದಿನಗಳಿಂದ ಪ್ರವಾಹ ಪೀಡಿತರ ರಕ್ಷಣಾ ಕಾರ್ಯ ಮುಂದುವರಿದಿದ್ದು, 66 ಕೇಂದ್ರ ಸರಕಾರದ ಸೇನಾ ಮತ್ತು ಅರೆ ಸೇನಾ ಪಡೆಗಳು ಕಾರ್ಯ ನಿರತವಾಗಿವೆ. ಮೂವತ್ತೊಂದು ಎನ್ ಡಿ ಆರ್ ಎಫ್ ತಂಡಗಳು, 26 ನೌಕಾ ಪಡೆ, 11 ಕೋಸ್ಟ್ ಗಾರ್ಡ್ ಮತ್ತು ಎಂಟು ಭೂಸೇನಾ ಪಡೆಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ.
ಗೋವಾ ರಾಜ್ಯದಲ್ಲಿ ಪ್ರವಾಹ ಸಮಸ್ಯೆ ನಿವರಾಣೆಯಾಗಿದ್ದು, ಪರಿಹಾರ ಕಾರ್ಯ ಭರದಿಂದ ಸಾಗಿದೆ. ಮೀನುಗಾರರು ಮತ್ತು ಪ್ರವಾಸಿಗರು ಸಮುದ್ರ ತೀರಕ್ಕೆ ಆಗಮಿಸದಂತೆ ನಿರ್ಬಂಧಿಸಲಾಗಿದೆ. ಮಹಾರಾಷ್ಟ್ರ-ಗೋವಾ ಗಡಿ ಪ್ರದೇಶದಲ್ಲಿ ಇರುವ ತಿಲ್ಲಾರಿ ಅಣೆಕಟ್ಟಿನಿಂದ ಹೆಚ್ಚುವರಿ ನೀರು ಹೊರಹಾಕಿದ ಪರಿಣಾಮ ಪ್ರವಾಹ ಭೀತಿ ಉಂಟಾಗಿತ್ತು. ಗೋವಾದಲ್ಲಿ 150 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು.
ಗುಜರಾತಿನಲ್ಲಿ ಇದುವರೆಗೆ ವಾರ್ಷಿಕ ಸರಾಸರಿ 62 ಎಂಎಂ ಮಳೆ ದಾಖಲಾಗಿದ್ದು, ಹೆಚ್ಚಿನ ಪ್ರಮಾಣದ ಮಳೆಯಾಗುವ ಸಂಭವ ಇರುವುದರಿಂದ ಹಲವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.
ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ವಿಷಮವಾಗಿದ್ದು, ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಮುಂದಾಗಬೇಕು.