ಜನರೇ ಗುಂಪುಗೂಡಿ ವ್ಯಕ್ತಿಗಳನ್ನು ಸಾಯಬಡಿಯುವ ಪ್ರವೃತ್ತಿಯ ಕುರಿತು ಸುಪ್ರೀಂ ಕೋರ್ಟ್ 2018ರ ಜುಲೈ 17ರಂದು ತೀವ್ರ ಕಳವಳ ಪ್ರಕಟಿಸಿತ್ತು. ಗುಂಪುಶಾಹಿಯ ಘೋರ ಕೃತ್ಯಗಳು ಎಂದು ಖಂಡಿಸಿತ್ತು. ನಾಗರಿಕರು ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಒಪ್ಪಲಾಗದು ಎಂದು ಖಡಾಖಂಡಿತ ನುಡಿಗಳಲ್ಲಿ ಸಾರಿತ್ತು. ಇಂತಹ ಪ್ರಕರಣಗಳನ್ನು ನಿಷ್ಠುರವಾಗಿ ಮಟ್ಟ ಹಾಕುವ ಅಗತ್ಯವಿದ್ದು, ಹೊಸ ಪರಿಣಾಮಕಾರಿ ಕಾಯಿದೆಯನ್ನು ರೂಪಿಸುವಂತೆ ಸಂಸತ್ತಿಗೆ ಸಲಹೆ ನೀಡಿತ್ತು. ಇಂತಹ ಘಟನೆಗಳಿಗೆ ಪ್ರಚೋದನೆ ನೀಡುವಂತಹ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬುವುದನ್ನು ನಿಯಂತ್ರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂಜಾಗ್ರತೆಯ ಕ್ರಮಗಳನ್ನು ಜರುಗಿಸಬೇಕು. ಅಂತಹ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 153 ಎ ಸೆಕ್ಷನ್ ಪ್ರಕಾರ ಎಫ್.ಐ.ಆರ್. ದಾಖಲು ಮಾಡಬೇಕು. ತ್ವರಿತ ನ್ಯಾಯಾಲಯಗಳಲ್ಲಿ ಎಡೆಬಿಡದೆ ದಿನನಿತ್ಯ ವಿಚಾರಣೆ ನಡೆದು ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯಾಗಬೇಕು. ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ಎದೆಯಲ್ಲಿ ಕಾನೂನಿನ ಹೆದರಿಕೆ ಹುಟ್ಟಬೇಕು. ಮೊದಲೇ ಗೊತ್ತಿದ್ದರೂ ಇಂತಹ ಪ್ರಕರಣಗಳನ್ನು ಬೇಕೆಂದೇ ನಡೆಯಲು ಬಿಡುವ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು ಎಂಬುದಾಗಿ ಮಾರ್ಗಸೂಚಿಗಳನ್ನು ನೀಡಿತ್ತು.
ಈ ದಿಸೆಯಲ್ಲಿ ಯಾವ ಚಲನೆಯೂ ಕಾಣುತ್ತಿಲ್ಲ. ಕೇಂದ್ರ ಸರ್ಕಾರ ಕಾನೂನು ರೂಪಿಸುವ ದೂರದ ಸೂಚನೆಯೂ ಕಾಣುತ್ತಿಲ್ಲ. ಮಾರ್ಗಸೂಚಿಗಳೂ ಮೂಲೆಗುಂಪಾಗಿವೆ. ತ್ರಿವಳಿ ತಲಾಖ್ ನಿಷೇಧ ಮಸೂದೆ ರೂಪಿಸಿ ಸಂಸತ್ತಿನಲ್ಲಿ ಪಾಸು ಮಾಡಿಸಿಕೊಳ್ಳಲು ತೋರಿದ ತುರ್ತಿನ, ನೀಡಿದ ಆದ್ಯತೆಯ ಲವಲೇಶವನ್ನೂ ಕೇಂದ್ರ ಸರ್ಕಾರ ಗುಂಪು ಹತ್ಯೆ ಕಾನೂನು ರೂಪಿಸುವ ಕುರಿತು ತೋರುತ್ತಿಲ್ಲ.

ನ್ಯಾಯಾಲಯದ ಆದೇಶದ ನಂತರ ಗುಂಪುಗೂಡಿ ಸಾಯಬಡಿಯುವ ಕೃತ್ಯಗಳನ್ನು ತಡೆಯಲು ಕಾನೂನು ರೂಪಿಸುವ ಸಲುವಾಗಿ ಉನ್ನತ ಮಟ್ಟದ ಎರಡು ಸಮಿತಿಗಳನ್ನು ಕೇಂದ್ರ ಸರ್ಕಾರ ರಚಿಸಿತ್ತು. 2014-2019 ಸಾಲಿನ ಗೃಹಮಂತ್ರಿ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಸಮೂಹ ಮತ್ತು ಗೃಹ ಇಲಾಖೆಯ ಕಾರ್ಯದರ್ಶಿ ರಾಜೀವ್ ಗೌಬಾ ಅವರ ನೇತೃತ್ವದ ಅಧಿಕಾರಿಗಳ ಸಮಿತಿಗಳು ಹೊಸ ಕಾನೂನು ಕುರಿತು ನಾಲ್ಕು ವಾರಗಳಲ್ಲಿ ತಮ್ಮ ಶಿಫಾರಸುಗಳನ್ನು ಪ್ರಧಾನಿಯವರಿಗೆ ಸಲ್ಲಿಸಬೇಕಿತ್ತು. ವರದಿಗಳೇನೋ ಸಲ್ಲಿಕೆಯಾಗಿವೆ. ವರದಿಗಳ ವಿವರಗಳು ಹೊರಬಿದ್ದಿಲ್ಲ.
ಚುನಾವಣೆಯ ಕಾರಣ ಈ ದಿಸೆಯಲ್ಲಿ ಗಮನ ಹರಿಸಲಾಗಿಲ್ಲ. ಜೊತೆಗೆ ಇಂತಹ ಕಾನೂನಿನ ಅಗತ್ಯ ಇದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಬಿಜೆಪಿ ನಾಯಕ ನಳಿನ್ ಕೋಹ್ಲಿ ಪ್ರತಿಕ್ರಿಯೆ ಆಘಾತಕಾರಿ.
ಗೋವುಗಳನ್ನು ಸಂರಕ್ಷಿಸುವ ನೆಪದಲ್ಲಿ ಪುಂಡಾಟಿಕೆ-ಹಿಂಸಾಚಾರವನ್ನು ಭುಗಿಲೆಬ್ಬಿಸುವ ಸಂಘಟಿತ ಗೋರಕ್ಷಕ ಗುಂಪುಗಳು ದೇಶದೆಲ್ಲೆಡೆ ಸಕ್ರಿಯವಾಗಿವೆ. ಸರ್ಕಾರಗಳ ಬೇಹುಗಾರಿಕೆ ಬಾಹುಗಳಿಗೆ ಇವುಗಳ ಅರಿವು ಇಲ್ಲದಿರುವುದು ಸೋಜಿಗ. ಅರಿವಿದ್ದೂ ಕ್ರಮ ಜರುಗಿಸಿಲ್ಲವಾದರೆ ಅದು ಅಕ್ಷಮ್ಯ.
ಇರುಳು ಸಮಾಜಘಾತಕ ಚಟುವಟಿಕೆ ನಡೆಸುವ ಕೆಲವರು ಹಗಲು ಗೋರಕ್ಷಕರ ವೇಷ ಧರಿಸಿ ದಂಧೆ ನಡೆಸುತ್ತಾರೆ ಎಂದು ಪ್ರಧಾನಮಂತ್ರಿ ಮೋದಿಯವರು ಹೇಳಿಕೆ ನೀಡಿ ಎರಡೂವರೆ ವರ್ಷಗಳೇ ಉರುಳಿವೆ. ಈ ದಂಧೆ ನಡೆಸುವವರು ಆಕಸ್ಮಿಕವಾಗಿ ಹುಟ್ಟಿಕೊಂಡವರಲ್ಲ. ವರ್ಷಗಟ್ಟಲೆ ನೀರೆರೆದು ಬೆಳೆಸಿದವರು ಅವರು. ಹೀಗಾಗಿಯೇ ಅವರ ಮೇಲೆ ಕ್ರಮ ಜರುಗುತ್ತಿಲ್ಲ. ಯಾಕೆ ಜರುಗುತ್ತಿಲ್ಲ ಎಂಬ ಕುರಿತು ಪ್ರಧಾನಿ ಬಳಿ ಉತ್ತರವೂ ಇಲ್ಲ.

ದೇಶಾದ್ಯಂತ ನಡೆಯುತ್ತಿರುವ ಇಂತಹ ಹತ್ಯೆಗಳಿಗೆ ಹೆಚ್ಚಾಗಿ ಮುಸ್ಲಿಮರು ಮತ್ತು ದಲಿತರು ಶಿಕಾರಿಗಳಾಗುತ್ತಿದ್ದಾರೆ. ಅಪರಾಧಿಗಳ ಮೇಲೆ ಬಿಗಿ ಕಾನೂನು ಕ್ರಮ ಜರುಗಿಸುವ ಮಾತನ್ನು ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಪ್ರತಿ ಬಾರಿಯೂ ಆಡಿವೆ. ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲೇ ಹೆಚ್ಚಾಗಿ ಜರುಗಿರುವ ಈ ಪ್ರಕರಣಗಳ ಮುಂದೆ ಖುದ್ದು ಪ್ರಧಾನಿಯವರೂ ಅಸಹಾಯಕರು ಎಂಬುದು ವ್ಯಥೆಯ ವಿಷಯ.
ಗೋರಕ್ಷಕರ ಗುಂಪು ಹಿಂಸಾಚಾರವನ್ನು ಪ್ರಧಾನಿ ಮೂರು ಬಾರಿ ಖಂಡಿಸಿದ್ದಾರೆ. ಬಹುಪಾಲು ಹಿಂಸಾಚಾರಿಗಳು ಗೋರಕ್ಷಕರ ಮುಖವಾಡ ಧರಿಸಿದ ಸಮಾಜಘಾತಕ ಶಕ್ತಿಗಳು. ಇವರ ಪೈಕಿ ಶೇ. 80ರಷ್ಟು ಮಂದಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದವರು. ಗೋರಕ್ಷಣೆಯ ಹೆಸರಿನಲ್ಲಿ ದಂಧೆ ನಡೆಸಲಾಗುತ್ತಿದೆ. ರಾತ್ರಿ ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಹಗಲು ಗೋರಕ್ಷಣೆಯ ಸೋಗು ಹಾಕುತ್ತಾರೆ. ದನದ ವ್ಯಾಪಾರಿಗಳು, ಗೋಮಾಂಸ ಸೇವಿಸುವವರು ಹಾಗೂ ಹಾಲು ವ್ಯಾಪಾರ ಮಾಡುವ ರೈತರನ್ನು ಗೋರಕ್ಷಣೆಯ ಹೆಸರಿನಲ್ಲಿ ಕೊಲ್ಲುವುದನ್ನು ಒಪ್ಪಲಾಗದು ಎಂಬ ಮಾತುಗಳನ್ನು ಅವರು ಆಡಿ ವರ್ಷಗಳು ಉರುಳಿವೆ. ಪರಿಣಾಮ ಶೂನ್ಯ. ಬಾಯಿಮಾತಿನ ಖಂಡನೆಯಷ್ಟೇ ಸಾಕೇ, ಅಥವಾ ಆಡಿದ ಮಾತನ್ನು ನಡೆಸಿಕೊಡಬೇಕೇ?
ಇನ್ನೆಷ್ಟು ಘಟನೆಗಳು ಬೇಕು?
ಪ್ರಧಾನಿಯವರ ಖಂಡನೆಯ ಬೆನ್ನಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು ‘ನೈಜ’ ಗೋರಕ್ಷಕರಿಗೆ ಅಭಯ ನೀಡಿದ್ದರು. ಪ್ರಧಾನಿ ಮತ್ತು ಸುಪ್ರೀಂ ಕೋರ್ಟ್ ನ ಸದುದ್ದೇಶದ ಟೀಕೆ ಟಿಪ್ಪಣಿಗಳಿಂದ ನೈಜ ಗೋರಕ್ಷಕರು ವಿಚಲಿತರಾಗುವ ಅಗತ್ಯವಿಲ್ಲ ಎಂದಿದ್ದರು. ಮೋದಿ ಸಂಪುಟದ ಮಂತ್ರಿಗಳು ಗೋರಕ್ಷಕ ಗುಂಪುಗಳ ದಾಳಿಯನ್ನು ಸಮರ್ಥಿಸಿ ಹೇಳಿಕೆ ನೀಡುವುದನ್ನು ಈಗಲೂ ನಿಲ್ಲಿಸಿಲ್ಲ. ಜಾಮೀನಿನ ಮೇಲೆ ಹೊರಬೀಳುವ ಇಂತಹ ಆರೋಪಿಗಳಿಗೆ ಹೂಮಾಲೆ ತೊಡಿಸಿ ಸನ್ಮಾನಿಸಿದರು ಸಚಿವ ಜಯಂತ್ ಸಿನ್ಹಾ. ಮತ್ತೊಬ್ಬ ಸಚಿವರು ಜೈಲಿಗೆ ಭೇಟಿ ನೀಡಿ ಆರೋಪಿಗಳ ಬೆನ್ನು ತಟ್ಟಿದರು. ಗೋಮಾಂಸ ತಿನ್ನುವುದನ್ನು ಬಿಡುವ ತನಕ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದಿದ್ದಾರೆ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್. ದಾದ್ರಿಯಲ್ಲಿ ಅಖ್ಲಾಕ್ ಅಹ್ಮದ್ ಹತ್ಯೆ ಪ್ರಕರಣದ ಆರೋಪಿಯ ಶವಕ್ಕೆ ರಾಷ್ಟ್ರಧ್ವಜ ಹೊದಿಸಿ ಗೌರವಿಸಲಾಗಿತ್ತು.
ಗುಜರಾತಿನ ಊನಾದಲ್ಲಿ ಸತ್ತ ದನದ ಚರ್ಮ ಸುಲಿಯುತ್ತಿದ್ದ ದಲಿತ ಯುವಕರನ್ನು ಜೀಪಿಗೆ ಕಟ್ಟಿ ಅಮಾನುಷವಾಗಿ ಥಳಿಸಲಾದ ಪ್ರಕರಣ ಜರುಗಿ ಮೂರು ವರ್ಷಗಳೇ ಉರುಳಿವೆ. ನ್ಯಾಯದಾನ ಎಂಬುದು ಹತ್ತಿರದಲ್ಲೆಲ್ಲೂ ಕಾಣುತ್ತಿಲ್ಲ. ಜಾಮೀನಿನ ಮೇಲೆ ಹೊರಬಿದ್ದ ಆರೋಪಿಗಳು ದಲಿತರ ಮೇಲೆ ಮತ್ತೆ ಹಲ್ಲೆ ನಡೆಸಿದರು.

ಕೋಮುವಾದವನ್ನು ಹತ್ತಿಕ್ಕಲು ಕ್ರಮ ಜರುಗಿಸುವ ಅಧಿಕಾರಿಗಳನ್ನೂ ಗುಂಪು ಹತ್ಯೆಯು ಬಲಿ ತೆಗೆದುಕೊಳ್ಳುತ್ತಿದೆ. ಪೊಲೀಸ್ ಇನ್ಸ್ ಪೆಕ್ಟರ್ ಸುಬೋಧ್ ಸಿಂಗ್ ಅವರನ್ನು 2018ರ ಡಿಸೆಂಬರ್ ತಿಂಗಳಲ್ಲಿ ಹೀಗೆಯೇ ಗೋರಕ್ಷಕರೆಂದು ಹೇಳಿಕೊಳ್ಳುವ ಗುಂಪೊಂದು ಹತ್ಯೆ ಮಾಡಿತು. ಆದರೆ ಜೀತು ಫೌಜಿ ಸೇರಿದಂತೆ ಎಲ್ಲ ಏಳು ಮಂದಿ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಬುಲಂದಶಹರ್ ಸನಿಹದ ಮಹಾವ್ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಗೋವುಗಳ ಕಳೇಬರಗಳು ಸಿಕ್ಕವೆಂದು ಉನ್ಮತ್ತ ಗುಂಪು ಚಿಂಗ್ರಾವತಿ ಪೊಲೀಸ್ ಔಟ್ ಪೋಸ್ಟ್ ಗೆ ಮುತ್ತಿಗೆ ಹಾಕಿತ್ತು. ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚದುರುವಂತೆ ಎಚ್ಚರಿಸಿದ್ದ ಸಿಂಗ್ ಮೇಲೆ ಬಡಿಗೆಗಳು, ಖಡ್ಗಗಳು, ಕಲ್ಲುಗಳು, ಬಂದೂಕು ಪಿಸ್ತೂಲುಗಳನ್ನು ಹಿಡಿದಿದ್ದ 300-400 ಮಂದಿಯ ಗುಂಪು ದಾಳಿ ಮಾಡಿತ್ತು .
ಈ ಪ್ರಕರಣ ತಾನಾಗಿ ಭುಗಿಲೆದ್ದಿತೋ ಅಥವಾ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರ ಕೊಲೆಗೆ ನಡೆದ ಪೂರ್ವಯೋಜಿತ ಸಂಚೋ ಎಂಬ ಅಂಶಗಳೂ ತನಿಖೆಯ ವ್ಯಾಪ್ತಿಯಲ್ಲಿವೆ. ಬಾಬರಿ ಮಸೀದಿ ನೆಲಸಮದ ವಾರ್ಷಿಕಕ್ಕೆ (ಡಿ.6) ಮೂರು ದಿನಗಳಿರುವಂತೆ ಗೋವುಗಳ ಕಳೇಬರಗಳು ಯಾಕೆ ಕಂಡು ಬಂದಿವೆ, ಅವುಗಳ ಹತ್ಯೆ ಮಾಡಿದ ಮತ್ತು ಆನಂತರ ಕಳೇಬರಗಳನ್ನು ಎಸೆಯಲಾದ ಸ್ಥಳವನ್ನು ಮೊದಲೇ ಆಯ್ಕೆ ಮಾಡಲಾಗಿತ್ತೇ ಹೇಗೆ ಎಂಬ ಅಂಶಗಳೂ ತನಿಖೆಗೆ ಒಳಪಡಲಿವೆ ಎಂದು ಪ್ರಕಟಿಸಲಾಗಿತ್ತು.
ನಿಚ್ಚಳ ಸಾಕ್ಷ್ಯಗಳಿದ್ದ ಪೆಹಲೂಖಾನ್ ಹತ್ಯೆಯನ್ನೇ ದಾರಿ ತಪ್ಪಿಸಿದ ಶಕ್ತಿಗಳು ಇತರೆ ಗುಂಪು ಹತ್ಯೆ ಪ್ರಕರಣಗಳನ್ನು ಹೂತು ಹಾಕುವುದಿಲ್ಲ ಎಂಬ ಖಾತರಿಯಾದರೂ ಏನು?
ಇಂದು ಮುಸ್ಲಿಮರು- ದಲಿತರು, ನಾಳೆಯ ಸರದಿ ಯಾರದೂ ಆದೀತು. ”ಸುಳ್ಳು ಸುದ್ದಿಗಳು, ಕಟ್ಟುಕತೆಗಳನ್ನು ಸೇವಿಸಿ ನೈತಿಕತೆಯ ಸ್ವಯಂಘೋಷಿತ ಉದ್ಧಾರಕರ ಪಾತ್ರ ವಹಿಸುವ ಉನ್ಮಾದದ ಗುಂಪುಗಳು ಅಲೆಗಳಂತೆ ಏಳತೊಡಗಿದ್ದು, ಬಿರುಗಾಳಿಯಂತಹ ಪೆಡಂಭೂತಗಳಂತೆ ದೇಶವನ್ನು ನುಂಗಲಿವೆ” ಎಂಬ ಸುಪ್ರೀಂ ಕೋರ್ಟ್ ಕಳವಳ ನಿರಾಧಾರ ಅಲ್ಲ.
ಸಿಖ್ ಉಗ್ರಗಾಮಿ ಜರ್ನೇಲ್ ಸಿಂಗ್ ಭಿಂದ್ರನ್ ವಾಲೆಯನ್ನು ಬೆಳೆಸಿದ ಆಪಾದನೆಯನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿ ಹೊತ್ತಿದ್ದರು. ತಾವು ಬೆಳೆಸಿದ್ದೇ ಕಡೆಗೆ ಅವರ ಪ್ರಾಣಕ್ಕೆ ಮುಳುವಾಯಿತು. ಬೇವು ಬಿತ್ತಿ, ಮಾವು ಬೆಳೆವುದು ಸಾಧ್ಯವಿಲ್ಲ.