ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಿರುವ ಅವಿಶ್ವಾಸ ನಿರ್ಣಯದ ಸೋಲು-ಗೆಲುವನ್ನು ಬದಿಗೆ ಸರಿಸಿ ನೋಡುವುದಾದರೆ ಹಲವು ದಶಕಗಳ ನಂತರ ಕರ್ನಾಟಕ ವಿಧಾನಸಭೆಯು ಗುರುವಾರ ಅತ್ಯುತ್ತಮ ಚರ್ಚೆಗೆ ವೇದಿಕೆಯಾಯಿತು. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿ ದಾಖಲಾಗಲಿರುವ ಅವಿಶ್ವಾಸ ನಿಲುವಳಿಯ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ತ್ರಿವಳಿ ನಾಯಕರು ಒಬ್ಬೊರಿಗೊಬ್ಬರು ಪೂರಕವಾಗಿ ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ಕ್ರಿಯಾಲೋಪದ ಕಾರ್ಯತಂತ್ರ ಹೆಣೆಯುವ ಮೂಲಕ 70-80ರ ದಶಕದ ರಾಜಕಾರಣದ ದಿನಗಳನ್ನು ನೆನಪಿಸಿದರು.
ವೈಯಕ್ತಿಕ ರಾಜಕೀಯ ನಿಲುವುಗಳಾಚೆಗೆ ಎಲ್ಲಾ ರಾಜಕೀಯ ಆಸಕ್ತ ವಿದ್ಯಾರ್ಥಿಗಳಿಗೂ ಇಂದಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಎಚ್ ಕೆ ಪಾಟೀಲ್ ಮತ್ತು ಸಚಿವ ಹಾಗೂ ಭವಿಷ್ಯದ ಭರವಸೆಯ ನಾಯಕ ಕೃಷ್ಣಬೈರೇಗೌಡ ಅವರ ಮಾತುಗಳು ಖಂಡಿತವಾಗಿ ಖುಷಿಕೊಟ್ಟಿರುತ್ತದೆ. ಈ ತ್ರಿವಳಿ ನಾಯಕರು ಪರಿಣಾಮಕಾರಿಯಾಗಿ ಹೆಣೆದ ಕಾರ್ಯತಂತ್ರದಲ್ಲಿ ಸಿಲುಕಿದ ವಿರೋಧ ಪಕ್ಷವಾದ ಬಿಜೆಪಿಗೆ ಬೆಳಗಿನ ಸಂಭ್ರಮ ಸಂಜೆ ವೇಳೆಗೆ ಮಾಯವಾಗಿರುವುದು ಆ ನಾಯಕರ ಮುಖದಲ್ಲಿ ಸ್ಪಷ್ಟವಾಗಿತ್ತು.
ಇತ್ತೀಚೆಗೆ ದೇಶದ ಸಂಸತ್ತು ಹಾಗೂ ರಾಜ್ಯ ವಿಧಾನ ಮಂಡಲಗಳ ಚರ್ಚೆಯ ಗುಣಮಟ್ಟ ಕುಸಿಯುತ್ತಿದೆ ಎಂದು ಸಾರ್ವಜನಿಕರು ಹಾಗೂ ಸಂವಿಧಾನ ತಜ್ಞರು ಬೇಸರ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನ ತ್ರಿವಳಿ ನಾಯಕರು ಮಂಡಿಸಿದ ವಿಚಾರಗಳು ಜನಪ್ರತಿನಿಧಿಗಳ ಶಕ್ತಿ, ಸದನದ ಕಾರ್ಯ-ಕಲಾಪದ ಮಹತ್ವ ಹಾಗೂ ಘನತೆಯನ್ನು ಪರಿಚಯಿಸಿವೆ. ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು, ವೈ ಕೆ ರಾಮಯ್ಯ, ರಾಮಕೃಷ್ಣ ಹೆಗಡೆ, ಕೋಣಂದೂರು ಲಿಂಗಪ್ಪ, ಕೆ ಎಚ್ ರಂಗನಾಥ್ ಸೇರಿದಂತೆ ಹಲವಾರು ಆದರ್ಶಪ್ರಾಯ ನಾಯಕರು ರಾಜ್ಯದ ವಿಧಾನ ಮಂಡಲದ ಘನತೆ, ಗಾಂಭೀರ್ಯವನ್ನು ತಮ್ಮ ನಡೆ-ನುಡಿ, ಬುದ್ದಿಮತ್ತೆಯಿಂದ ಎತ್ತರದ ಸ್ಥಾನಕ್ಕೆ ಏರಿಸಿದ್ದಾರೆ. ಆ ಕಾಲಘಟ್ಟದ ರಾಜಕಾರಣಿಗಳಿಂದ ಪ್ರೇರಣೆ ಪಡೆದ ಸಮಕಾಲೀನರಾದ ಸಿದ್ದರಾಮಯ್ಯ ಹಾಗೂ ಎಚ್ ಕೆ ಪಾಟೀಲ್ ಹಾಗೂ ಯುವ ಪೀಳಿಗೆ ಪ್ರತಿನಿಧಿಸುವ ಕೃಷ್ಣಬೈರೇಗೌಡರು ತಮ್ಮ ವಿಚಾರ ಮಂಡನೆಯ ಮೂಲಕ ರಾಜಕೀಯ ಕ್ಷೇತ್ರದ ಬಗ್ಗೆ ತೀರಾ ನಿರಾಸರಾಗಬೇಕಿಲ್ಲ ಎಂಬ ಸಂದೇಶ ದಾಟಿಸಿದ್ದಾರೆ.
ಇತ್ತೀಚೆಗೆ ಉಭಯ ಸದನಗಳಿಗೆ ಅತ್ಯಾಚಾರ, ಕೊಲೆ, ದೊಂಬಿಯಂಥ ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವವರು, ತಂದೆ-ತಾಯಿಯ ಪ್ರಭಾವದಿಂದ ರಾಜಕೀಯ ಪ್ರವೇಶಿಸುವವರು, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೋಟ್ಯಂತರ ರುಪಾಯಿ ಸಂಪಾದಿಸಿ ತಮ್ಮ ಸಂಪತ್ತು ಕಾಯ್ದುಕೊಳ್ಳಲು ರಾಜಕೀಯ ಕ್ಷೇತ್ರ ಪ್ರವೇಶಿಸಿರುವ ಬಹುತೇಕ ಜನಪ್ರತಿನಿಧಿಗಳಿಗೆ ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಎಳ್ಳಷ್ಟೂ ತಿಳಿವಳಿಕೆಯಿಲ್ಲ. ಇಂಥ ಕಾಲಘಟ್ಟದಲ್ಲಿ ಕಾಂಗ್ರೆಸ್ ನ ತ್ರಿವಳಿ ನಾಯಕರು ಸದನದಲ್ಲಿ ಎತ್ತಿದ ವಿಚಾರಗಳು ಸದನದ ಸೌಂದರ್ಯ ಹೆಚ್ಚಿಸಿವೆ.
ಕಾಂಗ್ರೆಸ್-ಜೆಡಿಎಸ್ ನ 15 ಅತೃಪ್ತ ಶಾಸಕರ ವಿಚಾರದಲ್ಲಿ ಸುಪ್ರೀಂಕೋರ್ಟ್ ನ ಮಧ್ಯಂತರ ತೀರ್ಪಿನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕರು ಎತ್ತಿದ “ಕ್ರಿಯಾಲೋಪ”ದ ಕಾರ್ಯತಂತ್ರವು ಬಿಜೆಪಿಯನ್ನು ನಿಶಸ್ತ್ರಗೊಳಿಸಿದೆ. ಕಲಾಪ ನುಂಗಿದ ಕ್ರಿಯಾಲೋಪ ಕಾರ್ಯತಂತ್ರವನ್ನು ವಿಫಲಗೊಳಿಸಲು ವಿರೋಧ ಪಕ್ಷದ ಶಾಸಕರಾದ ಮಾಧುಸ್ವಾಮಿ, ಸುರೇಶ್ ಕುಮಾರ್, ಬಸವರಾಜ ಬೊಮ್ಮಾಯಿ, ಕೆ ಎಸ್ ಬೋಪಯ್ಯ ಅವರ ಪ್ರಯತ್ನ ಸಾಕಾಗಲಿಲ್ಲ. ಉಳಿದಂತೆ ವಿರೋಧ ಪಕ್ಷದ ಉಳಿದ ಶಾಸಕರು ಬಿಜೆಪಿಯ ಸಂಖ್ಯಾಬಲ ನಿರೂಪಿಸಲು ಸದನದಲ್ಲಿ ಭಾಗಿಯಾಗಿದ್ದರೆ ವಿನಾ ಅವರ್ಯಾರಿಗೂ ವಿಚಾರದ ಸ್ಪಷ್ಟತೆ ಇರಲಿಲ್ಲ ಎಂಬುದಕ್ಕೆ ಅವರ ಮೌನ ಸಾಕ್ಷ್ಯ ನುಡಿಯುತ್ತಿತ್ತು.

ಇದರಿಂದ ಬೇಸತ್ತ ಬಿಜೆಪಿಯು ರಾಜ್ಯಪಾಲರನ್ನೂ ಅಖಾಡಕ್ಕೆ ಎಳೆದು ತರುವ ಮೂಲಕ ವಿಧಾನಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡುವಂತೆ ಮಾಡಲು ಯತ್ನಿಸುತ್ತಿದೆ. ಇದರಲ್ಲಿ ಕಮಲಪಾಳೆಯ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.
ಕುಮಾರಸ್ವಾಮಿಯವರು ಸದನಕ್ಕೆ ಬಂದ ತಕ್ಷಣ ಅವಿಶ್ವಾಸ ಗೊತ್ತುವಳಿಯನ್ನು ನೇರವಾಗಿ ಮತಕ್ಕೆ ಹಾಕಿ, ಸಂಖ್ಯಾಬಲದ ಆಧಾರದಲ್ಲಿ ಸರ್ಕಾರಕ್ಕೆ ಸೋಲಾಗಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ರಣೋತ್ಸಾಹ ತೋರಿದ ವಿದ್ಯುನ್ಮಾನ ಮಾಧ್ಯಮಗಳ ರಾಜಕೀಯ ಪಂಡಿತರೂ ಕಾಂಗ್ರೆಸ್ ನ ತ್ರಿವಳಿಗಳ ಕ್ರಿಯಾಲೋಪದ ಅಸ್ತ್ರದಿಂದ ನಿರಾಸೆ ಅನುಭವಿಸಿದ್ದಾರೆ.
ಇದೆಲ್ಲದರ ಮಧ್ಯೆ, ಬುಡಕ್ಕೆ ಬೆಂಕಿ ಬಿದ್ದಿರುವುದರಿಂದ ಅದನ್ನು ನಂದಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ಕಳೆದ ವರ್ಷ ಇದೇ ಕೆಲಸವನ್ನು ಮಾಡಿತ್ತು ಎಂಬುದು ಇಲ್ಲಿ ಸ್ಮರಣೀಯ. ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕತ್ವದ ವಿರುದ್ಧ ಬಂಡೆದ್ದು, ಕಾಂಗ್ರೆಸ್ ಅಭ್ಯರ್ಥಿಯ ಪರ ಮತ ಚಲಾಯಿಸಿದ ಆರು ಶಾಸಕರನ್ನು ಹಿಂದಿನ ಸ್ಪೀಕರ್ ಕೆ ಬಿ ಕೋಳಿವಾಡ ಅನರ್ಹಗೊಳಿಸದೇ ಕಾಲಹರಣ ಮಾಡಿದರು. ಅದಕ್ಕೂ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಸ್ಪೀಕರ್ ಆಗಿದ್ದ ಕೆ ಜಿ ಬೋಪಯ್ಯ ಅವರು ನಿಯಮಬಾಹಿರವಾಗಿ ಕೆಲವು ಶಾಸಕರನ್ನು ಅನರ್ಹಗೊಳಿಸುವ ಮೂಲಕ ಸುಪ್ರೀಂಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದು ಇತಿಹಾಸದಲ್ಲಿದೆ. ಹೀಗೆ ಕಾಲಕಾಲಕ್ಕೆ ಸೃಷ್ಟಿಯಾದ ಬಿಕ್ಕಟ್ಟುಗಳನ್ನು ಅಂದಿನ ಸರ್ಕಾರಗಳು ಸರಿಪಡಿಸಿ, ಕಾನೂನು ಚೌಕಟ್ಟು ರೂಪಿಸುತ್ತಾ ಬಂದಿದ್ದರೆ ಇಂದು ನೈತಿಕತೆಯ ಬಗ್ಗೆ ರಾಜಕಾರಣಿಗಳು ಉಪನ್ಯಾಸ ಕೊಡುವ ಅಗತ್ಯ ಬೀಳುತ್ತಿರಲಿಲ್ಲ. ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕಮಟೊಳ್ಳಿ ಅವರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಹಲವು ತಿಂಗಳ ಹಿಂದೆಯೇ ಅರ್ಜಿ ನೀಡಿದೆ. ಇದನ್ನು ನಿರ್ದಿಷ್ಟ ಅವಧಿಯಲ್ಲಿ ವಿಲೇವಾರಿ ಮಾಡುವ ಕುರಿತು ನಿಯಮಾವಳಿಗಳನ್ನು ರೂಪಿಸಿದ್ದರೆ ಸ್ಪೀಕರ್ ಸ್ಥಾನದ ಬಗ್ಗೆಯೂ ಇಂದು ಅನುಮಾನಗಳು ಮೂಡುತ್ತಿರಲಿಲ್ಲ. ನಿರ್ಧಿಷ್ಟ ಸಂದರ್ಭಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ಪೀಕರ್ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿವೆ ಎಂಬುದು ವಾಸ್ತವ. ಸಾಂವಿಧಾನಿಕ ಸಮಸ್ಯೆಗಳು ಎದುರಾದಾಗ ಅವುಗಳನ್ನು ಪರಿಹರಿಸಿ, ಕಾನೂನು ರೂಪಿಸಿದ್ದರೆ ಸ್ಪೀಕರ್ ವಿವೇಚನೆಯನ್ನು ಬಳಸಿ ತೀರ್ಮಾನ ನೀಡುವ ಅಗತ್ಯ ಉದ್ಭವಿಸುತ್ತಿರಲಿಲ್ಲ. ಹಾಗಾಗಿದ್ದಲ್ಲಿ ರಾಜಕಾರಣವೂ ಅಧಃಪತನದ ಹಾದಿ ಹಿಡಿಯುತ್ತಿರಲಿಲ್ಲ. ವಿಶಾಲ ದೃಷ್ಟಿಯಲ್ಲಿ ನೋಡಿದರೆ ಕರ್ನಾಟಕದಲ್ಲಿನ ಇಂದಿನ ರಾಜಕೀಯ ಬಿಕ್ಕಟ್ಟಿಗೆ ಇಂಥವರೇ ಹೊಣೆಗಾರರು ಎಂದು ಷರಾ ಬರೆಯವುದು ಕಷ್ಟದ ಕೆಲಸ.