ಶಿವಮೊಗ್ಗ ನಗರ ತನ್ನೆಲ್ಲಾ ಹೊಲಸನ್ನ ಪವಿತ್ರ ತುಂಗಾ ನದಿಗೆ ಹರಿಬಿಡುತ್ತಿದೆ, ಈ ತ್ಯಾಜ್ಯ ಪ್ರತೀ ಜೀವಸಂಕುಲಕ್ಕೂ ಮಾರಕವಾಗಿದೆ, ನವೆಂಬರ್ ತಿಂಗಳಲ್ಲೇ ನದಿಯ ಅಂಚಿನಲ್ಲಿ ಓಡಾಡಲು ಆಗುವುದಿಲ್ಲ, ಸಂಸ್ಕೃತ ಗ್ರಾಮ ಮತ್ತೂರಿನಿಂದ ಗೋಂಧಿ ಚಟ್ನಳ್ಳಿವರೆಗೆ ಶಿವಮೊಗ್ಗ ನಗರದಕ್ಕೆ ಸೇರುವ ತ್ಯಾಜ್ಯಗಳನ್ನ ನೋಡಿದರೆ ಗಂಗಾ ಸ್ನಾನ ತುಂಗಾ ಪಾನ ಎಂಬ ನಾಣ್ಣುಡಿ ಬಗ್ಗೆ ಅನುಮಾನ ಹುಟ್ಟುತ್ತೆ. ಇಂತಹ ಪ್ರತಿಕೂಲ ವಾತಾವರಣ ಸುಮಾರು ಇಪ್ಪತ್ತು ತಳಿ ಮೀನುಗಳನ್ನೂ ಮಾಯವಾಗಿಸಿದೆ ಎಂಬುದು ಆಘಾತಕಾರಿ ವಿಷಯ.
ಹಿಂದೆ ಶಿವಮೊಗ್ಗ ನಗರ ಸ್ಥಳೀಯ ಮೀನುಗಾರರ ಸ್ವರ್ಗವಾಗಿತ್ತು, ಸಾಂಪ್ರದಾಯಿಕವಾಗಿ ಮೀನು ಹಿಡಿದು ಬೀದಿಗಳಲ್ಲಿ ಮಾರುವ ಪರಂಪರೆ ಇತ್ತು, ಮುಂಜಾನೆ ಮೀನು ಹಿಡಿಯುವ ಸ್ಥಳಗಳಿಗೇ ಭೇಟಿ ನೀಡಿ ಖರೀದಿಸುವ ವಾತಾವರಣವಿತ್ತು, ಮೀನುಗಾರರೂ ಕೂಡ ಉಕ್ಕಡ, ಹಾಯುದೋಣಿಗಳಲ್ಲಿ ಹೋಗಿ ಬಲೆ ಬೀಸಿ, ಎಳೆಬಿಸಿಲು ಜಾರುವ ಮುನ್ನ ಹತ್ತಾರು ಕೆ.ಜಿ ಮೀನು ಹಿಡಿಯುತ್ತಿದ್ದರು, ತುಂಗಾ ತೀರದಲೊಬ್ಬ ಗಾಳ ಹಾಕಿ ಕುಳಿತುಕೊಂಡಿದ್ದಾನೆಂದರೆ ಅವನ ಪಕ್ಕದಲ್ಲಿನ ಚೀಲದಲ್ಲಿ ಮೀನುಗಳು ಪಟಪಟನೇ ಬಡಿದಾಡುತ್ತಿದ್ದವು. ಈಗ ತುಂಗಾ ತೀರ ಕೊಳಕು ಅರಸಿ ಬರುವ ಹಂದಿಗಳ ಸಾಮ್ರಾಜ್ಯ, ಪ್ಲಾಸ್ಟಿಕ್ ಕಾರ್ಖಾನೆ, ದುರ್ನಾತ ಬೀರುತ್ತಾ ರೋಗ ಹರಡುವ ಸ್ಥಳ. ಚಳಿಗಾಲದಲ್ಲಿ ನೀರಿನ ಹರಿವು ಕಡಿಮೆಯಾದರೂ ಪ್ರಶಾಂತ ತಿಳಿನೀರಿನಲ್ಲಿ ವಿರಮಿಸುತ್ತಿದ್ದ ಹತ್ತಾರು ದೇಸಿ ಮೀನಿನ ತಳಿಗಳಿಂದು ಸಿಟಿ ಸರಹದ್ದಿನಲ್ಲಿ ಮಾಯವಾಗಿವೆ, ಬಾಂಬೆ ಕಾಟ್ಲಾ ಎಂದು ಸ್ಥಳೀಯವಾಗಿ ಕರೆಯುವ ಮೀನಿನ ಸಂತತಿ ಮಾತ್ರ ಉಳಿದುಕೊಂಡಿದೆ. ಪ್ರತಿದಿನ ಹತ್ತಾರು ಮೀನುಗಾರರು ಇಲ್ಲಿ ಗಿರಕಿ ಹೊಡೆಯುತ್ತಾರೆ. ಆದರೆ ಎರಡು ಕೆಜಿ ಮೇಲೆ ಮೀನು ಸಿಗುವುದಿಲ್ಲ.
ಎರಡು ಕಿಲೋಮೀಟರ್ ದೂರದ ಗೋಂಧಿ ಚಟ್ನಹಳ್ಳಿಯ ಪ್ರಕಾಶ್ “ಪ್ರತಿದಿನ ಮೀನು ಹಿಡಿಯಲು ಬರ್ತಾರೆ, ಸರಿಯಾಗಿ ಹನ್ನೆರಡು ಗಂಟೆಗೆ ಬಲೆ ಬೀಸುತ್ತಾರೆ, ಸಂಜೆಯವರೆಗೆ ಅವರಿಗೆ ಧಕ್ಕುವ ಮೀನಿನ ಪ್ರಮಾಣ ಎರಡು ಕೆಜಿ”. ಪ್ರಕಾಶ್ ಇದೇ ಜಾಗದಲ್ಲಿ ಹನ್ನೆರಡು ವರ್ಷಗಳ ಹಿಂದೆ ದಿನಕ್ಕೆ ಇಪ್ಪತ್ತು ಕೆಜಿ ವಿವಿಧ ಜಾತಿಯ ಗೌರಿ ಮೀನು, ಔಲು, ಗಿರ್ಲು ಹಿಡಿಯುತ್ತಿದ್ದರು , ಆದರೆ ಈಗ ಅವರಿಗೆ ಒಂದೇ ಜಾತಿಯ ಮೀನು ಸಿಗುತ್ತಿದೆ. ಸಾಮಾನ್ಯವಾಗಿ ತುಂಗಾ ತೀರದಲ್ಲಿ ಸೆಪ್ಟಂಬರ್‌ನಿಂದಲೇ ಮೀನುಗಾರಿಕೆ ಆರಂಭವಾಗುತ್ತೆ, ಕಾರಣ ತುಂಗಾ ಜಲಾಶಯವಿರುವುದರಿಂದ ನೀರಿನ ಹರಿವಿಕೆ ದಿಢೀರ್‌ನೇ ಕ್ಷೀಣಿಸುತ್ತದೆ. ಅಲ್ಲಲ್ಲಿ ವಿಸ್ತಾರವಾಗಿ ಚಾಚಿಕೊಂಡು, ಕೆಲವೆಡೆ ಬರಿದಾಗುತ್ತಾ ಬೇಸಿಗೆಯವರೆಗೆ ಮೀನಿನ ಆಶ್ರಯವಾಗಿರುವ ನೀರಿಗೆ ನಗರದ ತ್ಯಾಜ್ಯ ಸೇರಿ ಜೀವ ವೈವಿಧ್ಯಕ್ಕೆ ಮಾರಕವಾಗಿದೆ.
ಇನ್ನೊಬ್ಬ ಮೀನುಗಾರ ಪುನೀತ್, ತುಂಗಾ ಸೇತುವೆ ಕೆಳಗೆ ಮುಂಜಾನೆಯೇ ಬಲೆಬಿಟ್ಟು ಮೂರು ಗಂಟೆಯ ನಂತರ ಮೂರೇ ಮೀನನ್ನ ಚೀಲದಲ್ಲಿ ತುಂಬಿಟ್ಟು ಪುನಃ ನದಿಯಲ್ಲಿ ಹರಿಗಾಲು ಹಾಕುತ್ತಿದ್ದ, ಆತನೂ ಹೇಳುವಂತೆ ಶಿವಮೊಗ್ಗ ರಾಜಕೀಯವಾಗಿ ಗುರುತಿಸಿಕೊಂಡಿದೆ ಆದರೆ ಶುಚಿತ್ವದಲ್ಲಿ ಹಿಂದೆ ಬಿದ್ದಿದೆ, ನಗರದೊಳಗೇ ಹರಿಯುವ ನದಿಯನ್ನ ಹಾಳು ಮಾಡಿರುವ ಕೀರ್ತಿ ಅಧಿಕಾರಿಗಳ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ, ಇಲ್ಲೇ ನದಿ ತೀರದ ಮೇಲೆ ಪ್ರಭಾವಿ ಬಿಜೆಪಿ ನಾಯಕ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪನವರ ಮನೆ ಇದೆ, ಅವರೇ ನಗರದ ಶಾಸಕರೂ ಕೂಡ, ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ತುಂಗಾ ನದಿ ಶುಚಿತ್ವದ ಬಗ್ಗೆ ಒಂದೂ ಮಾತನಾಡುವುದಿಲ್ಲ ಎನ್ನುತ್ತಾರೆ.
ನಗರದ ವ್ಯಾಪ್ತಿಯ ತುಂಗಾ ನದಿಗೆ ಬಿಡುವ ಹೊಲಸು ನೀರನ್ನ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಈ ಮೀನಿನ ಸಂತತಿ ಉಳಿಯುತ್ತಿತ್ತು, ಕಳೆದ ಹತ್ತು ವರ್ಷದಲ್ಲಿ ಇಪ್ಪತ್ತು ತಳಿಗಳನ್ನ ನುಂಗಿ ಹಾಕಿರುವ ಶಿವಮೊಗ್ಗದ ಹೊಲಸು ಸ್ಮಾರ್ಟ್ ಸಿಟಿ ಹಣ ಕೋಟಿಗಟ್ಟಲೇ ಹರಿಯುತ್ತಿದ್ದರೂ ಗಮನ ಹರಿಸುತ್ತಿಲ್ಲ, ಈ ಕುರಿತು ಸ್ವತಃ ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಜಿಎಸ್ ಷಡಾಕ್ಷರಿಯವರೂ ಒಪ್ಪಿಕೊಳ್ಳುತ್ತಾರೆ. ಬಾಂಬೆಕಾಟ್ಲಾ ಎಂದು ಒಪ್ಪಿಕೊಂಡಿರುವ ಮೀನಿನ ಹಸರು ಟಿಲಾಪಿಯಾ, ಈ ಮೀನು ಮಾತ್ರ ಈ ಗಬ್ಬು ನೀರಲ್ಲಿ ಜೀವ ಉಳಿಸಿಕೊಳ್ಳಬಹುದು, ನಗರ ವ್ಯಾಪ್ತಿಯಲ್ಲಿನ ತ್ಯಾಜ್ಯ ನಿರ್ವಹಣೆ ಹಾಗೂ ನದಿಗೆ ಅದರ ಹರಿವನ್ನ ನಿರ್ವಹಣೆ ಮಾಡಬೇಕಿದೆ ಹಾಗೂ ಜನರೂ ಕೂಡ ಜೀವ ವೈವಿಧ್ಯತೆಯ ಅರಿವನ್ನ ಬೆಳೆಸಿಕೊಳ್ಳಬೇಕು ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಗಂಗಾನದಿಯಷ್ಟೇ ಪುಣ್ಯವಾಹಿನಿಯಾಗಿರುವ ತುಂಗಾ ನದಿಗೆ ಬಿಜೆಪಿ ಸರ್ಕಾರ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಬೇಕಿತ್ತು, ರವಿ ಶಂಕರ್ ಗುರೂಜೀಯಂತವರೇ ಹಾಡಿಹೊಗಳುವ ತುಂಗಾ ನದಿ ಸರ್ಕಾರದ ಪಟಲದಿಂದ ದೂರ ಉಳಿದಿದ್ದು ಹೇಗೆ ಎಂಬುದೇ ಸೋಜಿಗ.