ರಾಮನಗರ ಜಿಲ್ಲೆಯ ಕುದೂರು-ಹುಲಿಕಲ್ ನಡುವಿನ ನಾಲ್ಕು ಕಿಮೀ ರಸ್ತೆ ಸಾಲುಮರದ ತಿಮ್ಮಕ್ಕನವರು ವೃಕ್ಷಗಳನ್ನು ಸಲಹಿದ ಕಾರಣಕ್ಕೆ ಪ್ರಸಿದ್ಧಿ ಪಡೆದ ರಸ್ತೆ. ಈ ಊರನ್ನು ಬಳಸಿ ಹಾದುಹೋಗಿರುವ ಬಾಗೆಪಲ್ಲಿ-ಹಲಗೂರು ಹೆದ್ದಾರಿ (ರಾ.ಹೆ.94) ವಿಸ್ತರಣೆಗೆ ಲೋಕೋಪಯೋಗಿ ಇಲಾಖೆ ಮುಂದಾಗಿತ್ತು. ಇದು ಸಾಧ್ಯವಾಗಿದ್ದರೆ ತಿಮ್ಮಕ್ಕನವರು ನೆಟ್ಟು ಬೆಳೆಸಿದ 287 ಮರಗಳು ಜೀವ ಕಳೆದುಕೊಳ್ಳುತ್ತಿದ್ದವು.
ಈ ವಿಷಯ ತಿಳಿಯುತ್ತಲೇ ಕಂಗಾಲಾದ ತಿಮ್ಮಕ್ಕನವರು, ಇಂದು (ಜೂ.03) ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದರು. ಅಧಿಕಾರಿಗಳೊಂದಿಗೆ ಸಭೆಯಲ್ಲಿದ್ದ ಸಿಎಂ ಎಚ್‌ಡಿಕೆ, ತಿಮ್ಮಕ್ಕನವರು ಬಂದ ವಿಷಯ ತಿಳಿದು ಸಭೆ ಮೊಟಕುಗೊಳಿಸಿ ಭೇಟಿಯಾದರು. ನಂತರ ಎಚ್‌ಡಿಕೆ, ತಿಮ್ಮಕ್ಕನವರ ಎದುರೇ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯವರಿಗೆ ಕರೆ ಮಾಡಿ, ಬಾಗೆಪಲ್ಲಿ-ಹಲಗೂರು ಹೆದ್ದಾರಿಯ ರೂಪು ಬದಲಿಸುವಂತೆ ಆದೇಶಿಸಿದರು. ತಿಮ್ಮಕ್ಕನವರು ಖುಷಿಯಾಗಿ ಕುಮಾರಸ್ವಾಮಿಯವರನ್ನು ಆಶೀರ್ವದಿಸಿದರು. ಎಚ್‌ಡಿಕೆ ತುರ್ತು ಸ್ಪಂದನೆಯನ್ನು ಎಲ್ಲರೂ ಶ್ಲಾಘಿಸಿದರು. ಇಂಥ ವಿಷಯಗಳಲ್ಲಿ ಎಚ್‌ಡಿಕೆ ಅವರ ಕಾಳಜಿ ನಿಜಕ್ಕೂ ಮೆಚ್ಚಬೇಕಾದ್ದೇ. ಹೊಟ್ಟೆ-ಬಟ್ಟೆ ಕಟ್ಟಿ ಸಾಲುಮರಗಳನ್ನು ಮಕ್ಕಳಂತೆ ಬೆಳೆಸಿದ ತಿಮ್ಮಕ್ಕನವರ ಸಾಧನೆಯೂ ಕಡಿಮೆಯಲ್ಲ. ಆದರೆ, ಈ ಘಟನೆ ಮರಗಳ ಮಾರಣಹೋಮದ ಕುರಿತ ಸರ್ಕಾರದ ನಿಲುವುಗಳ ಬಗ್ಗೆ ಕೆಲವು ಗಂಭೀರ ಪ್ರಶ್ನೆ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ.
ಹೆದ್ದಾರಿಗಳ ವಿಸ್ತರಣೆಗೆ ಕನಿಷ್ಠ 8 ಲಕ್ಷ ಮರಗಳ ಬಲಿ!
‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ದೈನಿಕವು 2018ರ ಜುಲೈನಲ್ಲಿ ಆರ್‌ಟಿಐನಡಿ ಪಡೆದ ಮಾಹಿತಿಯ ಪ್ರಕಾರ, ಆ ಹೊತ್ತಿಗೆ ರಾಜ್ಯ ಸರ್ಕಾರ ಕೈಗೊಳ್ಳಬೇಕೆಂದು ತೀರ್ಮಾನ ಮಾಡಿದ್ದ ರಸ್ತೆ ವಿಸ್ತರಣೆಯಲ್ಲಿ ಬಲಿ ಆಗಲಿವೆ ಎಂದು ಅಂದಾಜಿಸಲಾಗಿದ್ದ ಮರಗಳ ಸಂಖ್ಯೆ ಹತ್ತಿರತ್ತಿರ ಏಳೂವರೆ ಲಕ್ಷ! ಇಷ್ಟಕ್ಕೇ ಹುಬ್ಬೇರಿಸುವುದು ಬೇಡ, ಏಕೆಂದರೆ ಇದು ಕೇವಲ ಮಲೆನಾಡಿನ ಭಾಗದ (ಸಾಗರ-ಕೊಲ್ಲೂರು, ಶಿವಮೊಗ್ಗ-ಹೊನ್ನಾವರ, ಶಿಕಾರಿಪುರ-ಬೈಂದೂರು, ತೀರ್ಥಹಳ್ಳಿ-ಮಲ್ಪೆ, ಶಿಸಿಲ-ಬೈರಾಪುರ) ರಸ್ತೆಗಳ ವಿಸ್ತರಣೆಯಲ್ಲಿ ಕಡಿತಕ್ಕೆ ಸಿಗಲಿದ್ದ ಮರಗಳ ಸಂಖ್ಯೆಯಷ್ಟೆ. ಇದೀಗ ದೊಡ್ಡ ಸುದ್ದಿಯಾದ ಬಾಗೆಪಲ್ಲಿ-ಹಲಗೂರು ಹೆದ್ದಾರಿ (ರಾ.ಹೆ.94) ಸೇರಿದಂತೆ ಬಯಲುಸೀಮೆಯ ಯಾವುದೇ ರಸ್ತೆಗಳ ವಿಸ್ತರಣೆಯಲ್ಲಿ ನೆಲಕಾಣಲಿರುವ ಮರಗಳ ಸಂಖ್ಯೆ ಇದರಲ್ಲಿ ಸೇರಿಲ್ಲ. ಈ ಕಾಮಗಾರಿಗಳು ಇನ್ನೂ ಚಾಲ್ತಿಯಲ್ಲಿ ಇರುವುದರಿಂದ ಮತ್ತು ದೀರ್ಘಾವಧಿಯಲ್ಲಿ ಕಡಿತಕ್ಕೆ ಸಿಕ್ಕುವುದರಿಂದ ಯಾರಿಗೂ ಈ ಬಗ್ಗೆ ಬೇಗನೆ ಗಮನ ಹೋಗುವುದಿಲ್ಲ. ಆದರೆ, ಅಷ್ಟು ಮರಗಳ ಮಾರಣಹೋಮ ಮಾತ್ರ ನಿಶ್ಚಿತ.
ಬೆಂಗಳೂರು-ಮೈಸೂರು ಹೆದ್ದಾರಿ ಮೇಲ್ದರ್ಜೆ ಕಾಮಗಾರಿಗಾಗಿ 1615 ಮರಗಳನ್ನು ಕಡಿಯುವ ಪ್ರಸ್ತಾಪವಿತ್ತು. ಬಸವೇಶ್ವರ ಸರ್ಕಲ್‌ನಿಂದ ಹೆಬ್ಬಾಳದವರೆಗಿನ ಎಲಿವೇಟೆಡ್ ಮೇಲುರಸ್ತೆ ಕಾಮಗಾರಿ ನಡೆದಿದ್ದರೆ 3,821 ಮರಗಳು ನೆಲಕ್ಕುರುಳುತ್ತಿದ್ದವು. ರಾಷ್ಟ್ರೀಯ ಹೆದ್ದಾರಿ 4A ವಿಸ್ತರಣೆಗಾಗಿ (ಬೆಳಗಾವಿ ಜಿಲ್ಲೆ) 22,000 ಮರಗಳಿಗೆ ಕೊಡಲಿ ಇಡುವ ಯೋಜನೆ ಬಹುತೇಕ ಮುಗಿಯುತ್ತ ಬಂದಿದೆ. ಕಳೆದ ವರ್ಷದ ಅಂತ್ಯದ ವೇಳೆ ಸಾವಿರಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲಾಗಿತ್ತು ಎನ್ನುತ್ತಾರೆ ಸ್ಥಳೀಯರು.
ಎತ್ತಿನಹೊಳೆ ವಿಷಯದಲ್ಲಿ ಜಾಣ ಕುರುಡು
ಇತ್ತೀಚೆಗೆ, ಎತ್ತಿನಹೊಳೆ ಯೋಜನೆಗೆ ಹಸಿರು ನ್ಯಾಯ ಮಂಡಳಿಯ ಹಸಿರು ನಿಶಾನೆ ಪಡೆಯುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದ್ದು, ಪರಿಸರ ಹಾನಿ ವರದಿಯನ್ನು ನೀಡದೆಯೇ ಕಾಮಗಾರಿಗೆ ಅನುಮತಿ ಪಡೆಯುವಲ್ಲಿ ತಾಂತ್ರಿಕ ಸಫಲತೆ ಕಂಡಿದೆ (ಈ ಕುರಿತ ಪ್ರತಿಧ್ವನಿ ವರದಿ ಇಲ್ಲಿದೆ) . ಅರಣ್ಯ ಪ್ರದೇಶವನ್ನು ಅರಣ್ಯಕ್ಕೆ ಸಂಬಂಧಪಡದ ಕಾಮಗಾರಿಗಳಿಗೆ ಬಳಸುವ ಮುನ್ನ ಪರಿಸರ ಹಾನಿಯ ಸಮೀಕ್ಷೆ ನಡೆಸಿ ವರದಿ ಮಾಡಬೇಕಿರುವುದು ನಿಯಮ. ಆದರೆ, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಾದ್ದರಿಂದ ಅದಕ್ಕೆ ಪರಿಸರ ಹಾನಿ ಸಮೀಕ್ಷಾ ವರದಿ ಬೇಕಿಲ್ಲ ಎಂದಿದೆ ನ್ಯಾಯಮಂಡಳಿ. ಅಂದರೆ, ಈ ಅಂಶವನ್ನು ಹೇಳಿಯೇ ನ್ಯಾಯಮಂಡಳಿಯ ಮನವೊಲಿಸಲಾಗಿದೆ.
ಹಾಗಾದರೆ, ಕುಡಿಯುವ ನೀರಿನ ಯೋಜನೆಯಾದ ಮಾತ್ರಕ್ಕೆ ಅರಣ್ಯವನ್ನು ಮನಬಂದಂತೆ ಬೇಕಾಬಿಟ್ಟಿ ಬಳಸಿಕೊಳ್ಳಬಹುದೇ? ಸರಿ, ನೀರಿನ ಲಭ್ಯತೆ ತೀರಾ ಕಡಿಮೆ ಇರುವ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಒಳ್ಳೆಯ ಉದ್ದೇಶದಿಂದ ಎತ್ತಿನಹೊಳೆ ಯೋಜನೆ ನಡೆಯುತ್ತಿದೆ ಎಂಬ ಕಾರಣಕ್ಕೆ ಇದನ್ನು ಒಪ್ಪಬಹುದಾದರೂ, ಈ ಯೋಜನೆಯಲ್ಲಿ ನಾಶವಾಗುತ್ತಿರುವ ಮರಗಿಡಗಳಿಗೆ ಬದಲಾಗಿ ಅರಣ್ಯ ವೃದ್ಧಿಯ ಪರ್ಯಾಯ ಯೋಜನೆ ಸರ್ಕಾರದ ಬಳಿ ಇದೆಯೇ? ಒಂದು ವೇಳೆ ಅಂಥ ಯೋಜನೆ ಇದ್ದುದೇ ಹೌದಾದರೆ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆಯೇ? ನೀರಿನ ಮೂಲವಾದ ಮಳೆಕಾಡನ್ನು ಹೀಗೆ ಒಂದಾದ ಮೇಲೆ ಒಂದರಂತೆ ಸಾಲು-ಸಾಲು ಯೋಜನೆಗಳನ್ನು ರೂಪಿಸಿ ನಾಶ ಮಾಡುತ್ತ ನಡೆದರೆ, ಯಾವುದೇ ಉದ್ದೇಶಕ್ಕಾದರೂ ನೀರು ಸಿಕ್ಕುವುದಾದರೂ ಹೇಗೆ?
ಎಚ್‌ಡಿಕೆಯವರದು ಕೇವಲ ಜನಪ್ರಿಯ ನಿರ್ಧಾರವೇ?
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರಸ್ತಾಪವಾದ ಸ್ಟೀಲ್ ಬ್ರಿಡ್ಜ್ ಎಂಬ ಭೂತ ಬೆಂಗಳೂರಿನಲ್ಲಿ ಖುಷಿ, ನೆಮ್ಮದಿ ತಂದಿದ್ದಕ್ಕಿಂತ ಆತಂಕ ಹುಟ್ಟುಹಾಕಿದ್ದೇ ಹೆಚ್ಚು. ಮರಗಳ ಮಾರಣಹೋಮದ ಜೊತೆಗೆ ಸುರಕ್ಷತೆಯ ಬಹುದೊಡ್ಡ ಅನುಮಾನಗಳನ್ನು ಕೂಡ ಈ ಯೋಜನೆ ಬಿತ್ತಿತ್ತು. ಈಗಲೂ ಆಗೊಮ್ಮೆ ಈಗೊಮ್ಮೆ ಈ ಸುದ್ದಿ ಜೀವ ಪಡೆದು ಪ್ರತಿಭಟನೆ, ಹರತಾಳ, ಧರಣಿಗಳಿಗೆ ಕಾರಣವಾಗುತ್ತಲೇ ಇದೆ. ಹಿಂದಿನ ಸರ್ಕಾರದ ಕೊನೆಯ ಅವಧಿಯಲ್ಲಿ ಗೃಹ ಸಚಿವರು ಮತ್ತು (ಕೆ ಜೆ ಜಾರ್ಜ್ ಅವರ ಅನುಪಸ್ಥಿತಿಯಲ್ಲಿ) ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿದ್ದವರು ಈಗಿನ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್. ಆಗ ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಆಗಲಿರುವ ಮರಗಳ ಮಾರಣಹೋಮದ ಬಗ್ಗೆ ಪ್ರಾಮಾಣಿಕವಾಗಿ ಒಂದು ಮಾತನ್ನೂ ಆಡದ ಪರಮೇಶ್ವರ್ ಅವರು ಇದೀಗ, “ತಿಮ್ಮಕ್ಕನವರು ನೆಟ್ಟ ಮರಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ,” ಎಂಬ ಹೊಣೆಗಾರಿಕೆಯ ಮಾತನಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಸರಿ, ಆದರೆ ಇಂಥ ಮಾತುಗಳು ಎಲ್ಲ ಹೊತ್ತಿನಲ್ಲೂ ಹೊರಬಿದ್ದರೆ ಮಾತ್ರ ನಿಜವಾಗಿಯೂ ಪರಿಸರ ಕಾಳಜಿ ಇದೆ ಎಂದು ನಂಬಬಹುದು.
ಇನ್ನು, ಎಚ್‌ಡಿಕೆ ಅವರು ಸಾಲುಮರದ ತಿಮ್ಮಕ್ಕನವರ ಪ್ರಕರಣದಲ್ಲಿ ಕೈಗೊಂಡ ತುರ್ತು ತೀರ್ಮಾನ ಜನಪ್ರಿಯತೆಯ ಉದ್ದೇಶ ಹೊಂದಿಲ್ಲದಿರಬಹುದು. ಆದರೂ ಅದು ಜನಪ್ರಿಯ ತೀರ್ಮಾನವಷ್ಟೆ. ಏಕೆಂದರೆ, ತನ್ನ ಪರಿಸರ ಪ್ರೀತಿಗಾಗಿ ‘ಪದ್ಮಶ್ರೀ’ ಗೌರವ ಪಡೆದ ತಿಮ್ಮಕ್ಕನವರ ವಿಷಯದಲ್ಲಿ ಎಡವಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಪರಿಸರಕ್ಕೆ ಧಕ್ಕೆ ತರುವ, ಮರಗಳ ಮಾರಣಹೋಮ ಆಗುವ ಇನ್ನಿತರ ಯೋಜನೆಗಳ ಬಗ್ಗೆಯೂ ಇಂಥದ್ದೇ ಸ್ಪಂದನೆ ಮತ್ತು ಖಡಕ್ ತೀರ್ಮಾನ ಹೊರಬಿದ್ದಲ್ಲಿ ಮಾತ್ರವೇ ಮುಖ್ಯಮಂತ್ರಿಯವರ ಈ ನಿರ್ಧಾರ ಪ್ರಾಮಾಣಿಕ ನಿರ್ಧಾರ ಎಂದು ಜನ ಒಪ್ಪಿಯಾರು.
ಮರ ಕಡಿಯದೆ ಇರಲಾಗದು ನಿಜ, ಆದರೆ…
ಸಮತೋಲಿತ ಅಭಿವೃದ್ಧಿಗೆ ಆದ್ಯತೆ ನೀಡಿದರೂ ಮರಗಳನ್ನು ಕಡಿಯದೆ ಇರಲು ಸಾಧ್ಯವಾಗದು. ಪಕ್ಷ ರಾಜಕಾರಣದ ನೆಲೆಯಲ್ಲಿ ಮಾತ್ರವೇ ಮರ ಕಡಿಯುವುದನ್ನು ವಿರೋಧಿಸುವ ಎಲ್ಲ ಅವಕಾಶವಾದಿಗಳು ಕೂಡ ಇದನ್ನು ಒಪ್ಪಿಕೊಳ್ಳಲೇಬೇಕು. ಆದರೆ, ಇಂಥ ಯೋಜನೆಗೆ ಇಷ್ಟು ಮರಗಳಿಗೆ ಕೊಡಲಿಪೆಟ್ಟು ಬೀಳುತ್ತದೆ ಎಂಬ ಲೆಕ್ಕಾಚಾರ ಸಿಕ್ಕ ತಕ್ಷಣ ಅದರ ದುಪ್ಪಟ್ಟು ಗಿಡಗಳನ್ನು ನೆಡುವ ಪರ್ಯಾಯ ಯೋಜನೆಗೆ ತಕ್ಷಣ ಚಾಲನೆ ನೀಡಬೇಕಿರುವುದು ಬುದ್ಧಿವಂತ ಸರ್ಕಾರವೊಂದು ಮಾಡಬೇಕಿರುವ ತುರ್ತು ಕೆಲಸ.
ಪರ್ಯಾಯ ಯೋಜನೆಗೆ ಚಾಲನೆ ನೀಡಿದ ನಂತರ ಅತ್ಯಗತ್ಯವಾಗಿ ಕತ್ತರಿಸಲೇಬೇಕಿರುವಷ್ಟು ಮರ ಕತ್ತರಿಸಿದರೆ ಸರ್ಕಾರದ ನಡೆಯ ಬಗ್ಗೆ ಯಾರೂ ಅಪಸ್ವರ ಎತ್ತಲಾರರು. ಆದರೆ, ಸರ್ಕಾರಗಳು ಹೀಗೆ ಮಾಡುತ್ತಿಲ್ಲವಾದ್ದರಿಂದಲೇ ಹಸಿರು ನ್ಯಾಯ ಮಂಡಳಿಯಲ್ಲಿ ಅರಣ್ಯ ನಾಶದ ಕುರಿತ ಪ್ರಕರಣಗಳು ದಾಖಲಾಗುತ್ತಲೇ ಇವೆ. ಪ್ರತಿಭಟನೆಗಳು ಹೆಚ್ಚುತ್ತಲೇ ಇವೆ. ಚಳಿವಳಿಗಳು ಹುಟ್ಟಿಕೊಳ್ಳುತ್ತಿವೆ. ಪರಿಸರದ ಕುರಿತ ಕಾಳಜಿ ಮೆರೆಯುವ ಸರ್ಕಾರದ ಕೆಲವು ನಡೆಗಳು ಕೂಡ ಅನುಮಾನಾಸ್ಪದ ಎನಿಸಿಕೊಳ್ಳುತ್ತಿವೆ. ಹಾಗಾಗಿ, ಕೇವಲ ಜನಪ್ರಿಯ ನಿರ್ಧಾರಗಳಿಗೆ ಜೋತುಬೀಳುವ ಬದಲು, ದೀರ್ಘಕಾಲೀನ ಹೆಸರು ತಂದುಕೊಡುವಂಥ ನಿರ್ಧಾರಗಳೂ ಎಚ್‌ಡಿಕೆ ಅವರಿಂದ ಹೊರಬರಲಿ.