Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ತಾವು ಹೇಳಿದ್ದೇ ಸತ್ಯ ಎನ್ನುವ ಮತಗಟ್ಟೆ ಸಮೀಕ್ಷೆಗಳನ್ನು ಎಷ್ಟು ನಂಬಬೇಕು?

ಮತಗಟ್ಟೆ ಮತ್ತು ಮತದಾನೋತ್ತರ ಸಮೀಕ್ಷೆ ನಡೆಸುವ ಅನುಭವಿ, ಕಸುಬುದಾರ ಏಜೆನ್ಸಿಗಳ ಸಂಖ್ಯೆ ಮೂರು ನಾಲ್ಕನ್ನು ಮೀರುವುದಿಲ್ಲ!
ತಾವು ಹೇಳಿದ್ದೇ ಸತ್ಯ ಎನ್ನುವ ಮತಗಟ್ಟೆ ಸಮೀಕ್ಷೆಗಳನ್ನು ಎಷ್ಟು ನಂಬಬೇಕು?
Pratidhvani Dhvani

Pratidhvani Dhvani

May 21, 2019
Share on FacebookShare on Twitter

ಮತ ಚಲಾಯಿಸಿದ ನಂತರ ಮತಗಟ್ಟೆಯಿಂದ ಹೊರಬಿದ್ದ ಮತದಾರನನ್ನು ಆಗಲೇ ಮಾತನಾಡಿಸಿ ನಿರ್ದಿಷ್ಟ ಪ್ರಶ್ನಾವಳಿಯ ಮೂಲಕ ಯಾವ ಪಕ್ಷಕ್ಕೆ ಮತ ಚಲಾಯಿಸಿದನೆಂದು ಬಾಯಿ ಬಿಡಿಸಿ, ದಾಖಲಿಸಿ, ಸಂಗ್ರಹಿಸಿದ ಅಂಕಿ-ಅಂಶ ಮಾಹಿತಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಸೀಟುಗಳಾಗಿ ಪರಿವರ್ತಿಸಿ ಹೇಳುವುದೇ ಮತಗಟ್ಟೆ ಸಮೀಕ್ಷೆ.

ಹೆಚ್ಚು ಓದಿದ ಸ್ಟೋರಿಗಳು

ವಿಂಡ್‌ಶೀಲ್ಡ್‌ನಲ್ಲಿ ಬಿರುಕು ತುರ್ತು ಭೂಸ್ಪರ್ಶ ಮಾಡಿದ ಸ್ಪೈಸ್ ಜೆಟ್ ವಿಮಾನ

ಶಿವಸೇನೆ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದ ಶಿಂಧೆ ಬಣ

ಶೀಘವ್ರೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು : ಫಡ್ನವೀಸ್

ಮತ ಚಲಾಯಿಸಿದ ಮತದಾರನನ್ನು ಬಿಡುವಾಗಿ ಆತನ ಮನೆಯಲ್ಲಿ ಅದೇ ದಿನ ಅಥವಾ ಮರುದಿನ ಸಾವಧಾನವಾಗಿ ಮಾತನಾಡಿಸಿ, ಪ್ರಶ್ನಾವಳಿಯ ಮೂಲಕ ಆತ ಮತ ನೀಡಿದ ಪಕ್ಷ ಯಾವುದು ಮತ್ತು ಯಾಕೆಂದು ತಿಳಿದುಕೊಂಡ ಮಾಹಿತಿಯ ವೈಜ್ಞಾನಿಕ ವಿಶ್ಲೇಷಣೆ ಮತ್ತು ಸೀಟುಗಳಾಗಿ ಪರಿವರ್ತಿಸುವ ವಿಧಾನ ಮತದಾನೋತ್ತರ ಸಮೀಕ್ಷೆ. ಮತದಾರನ ಈ ಸಂದರ್ಶನ ಮುಖಾಮುಖಿಯಾಗೂ ನಡೆಯಬಹುದು, ಇಲ್ಲವೇ ದೂರವಾಣಿ ಮೂಲಕವೂ ಆದೀತು.

ಮತಗಟ್ಟೆ ಸಮೀಕ್ಷೆಯಲ್ಲಿ ಅದೇ ತಾನೆ ಮತ ಚಲಾಯಿಸಿದ ಮತದಾರ ವಾಚಾಳಿಯಾಗಿದ್ದರೆ ಮತ್ತು ತಾನು ಮತ ನೀಡಿದ ಪಕ್ಷ ಇಲ್ಲವೇ ಅಭ್ಯರ್ಥಿಯ ಕುರಿತು ಹೇಳಿಕೊಳ್ಳಲು ಯಾವುದೇ ಕಾರಣಕ್ಕೂ ಹಿಂಜರಿಯದಿದ್ದರೆ ಮಾತ್ರ ಸತ್ಯ ಹೇಳುತ್ತಾನೆ. ಭಯಗ್ರಸ್ತ ಮತ್ತು ಸಂಕೋಚದ ವ್ಯಕ್ತಿಯಾದರೆ ತನ್ನ ನಿಜ ಆದ್ಯತೆಯನ್ನು ಮರೆಮಾಚಿ, ತನ್ನ ನೆರೆಹೊರೆಯವರ ಆಯ್ಕೆಯನ್ನೇ ತನ್ನ ಆಯ್ಕೆಯೆಂದು ಸುಳ್ಳು ಹೇಳಿಬಿಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದೇ ರೀತಿ, ಮತ ಚಲಾಯಿಸಿ ಕೆಲ ಕಾಲದ ನಂತರ ತನ್ನ ಮನೆಯ ವಾತಾವರಣದಲ್ಲಿ ತನ್ನ ನಿಜ ಆಯ್ಕೆಯನ್ನು ನಿಸ್ಸಂಕೋಚವಾಗಿ ಹೇಳುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಎರಡೂ ವಿಧಾನಗಳಲ್ಲಿ ಮತ ಚಲಾಯಿಸಿ ವ್ಯಕ್ತಿ ಸತ್ಯ ಹೇಳಿದರೆ ಮತ್ತು ಆತ ಹೇಳಿದ ಆಯ್ಕೆಯನ್ನು ದಾಖಲಿಸುವ ಸಮೀಕ್ಷೆಕಾರ ಸತ್ಯವಾಗಿ ದಾಖಲಿಸಿಕೊಂಡರೆ ಹಾಗೂ ಏಜೆನ್ಸಿಯ ಉನ್ನತ ಮಟ್ಟದಲ್ಲಿ ಈ ಮಾಹಿತಿಯನ್ನು ವಸ್ತುನಿಷ್ಠವಾಗಿ ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ ಮಾತ್ರವೇ ಸಮೀಕ್ಷೆಗಳ ಫಲಿತಾಂಶಗಳು ಕರಾರುವಾಕ್ ಆಗಿರಲು ಸಾಧ್ಯ.

ಈ ಹಂತಗಳಲ್ಲಿನ ತಪ್ಪು ತಡೆಗಳು ಮತ್ತು ಅಪ್ರಮಾಣಿಕತೆಗಳು ಫಲಿತಾಂಶವನ್ನು ಏರುಪೇರು ಮಾಡುವಲ್ಲಿ ಅನುಮಾನವೇ ಇಲ್ಲ. ಫಲಿತಾಂಶ ಬಂದ ನಂತರವೂ ಅದನ್ನು ಒತ್ತಡಗಳಿಗೆ ಮಣಿದು ತಿದ್ದಿ ತೀಡುವ ಹಾಗೂ ಪ್ರತಿಸ್ಪರ್ಧಿ ಏಜೆನ್ಸಿಗಳು ಹೊರಹಾಕುವ ಫಲಿತಾಂಶಗಳಿಂದ ಪ್ರಭಾವಿತರಾಗಿ ಬದಲಾಯಿಸುವ ಸಾಧ್ಯತೆಗಳು ಇಂದಿನ ದಿನಮಾನದಲ್ಲಿ ಸರ್ವೇ ಸಾಮಾನ್ಯ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ದೊಡ್ಡ ಬಹುಮತದಿಂದ ಅಧಿಕಾರಕ್ಕೆ ಮರಳುವುದಾಗಿ ಹತ್ತಕ್ಕೂ ಹೆಚ್ಚು ಮತಗಟ್ಟೆ ಸಮೀಕ್ಷೆಗಳು ಸಾರಿವೆ. ಇವುಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಇದೇ 23ರ ತನಕ ಕಾಯದೆ ವಿಧಿ ಇಲ್ಲ.

ಯಾವ ಮತಗಟ್ಟೆ ಸಮೀಕ್ಷೆಯನ್ನು ನಂಬಬಹುದು, ಯಾವುದನ್ನು ನೆಚ್ಚುವಂತಿಲ್ಲ? ಸಮೀಕ್ಷೆ ನಡೆಸುವ ಏಜೆನ್ಸಿಗಳ ಹೆಸರುಗಳು, ಟಿವಿ ವಾಹಿನಿಗಳನ್ನು ನೋಡಿ ನಂಬಲು ಬಂದೀತೇ ಅಥವಾ ಆಯ್ದುಕೊಂಡ ನಮೂನೆ- ಮಾದರಿಗಳ (ಸ್ಯಾಂಪಲ್) ಸಂಖ್ಯೆ ದೊಡ್ಡದಿದ್ದಷ್ಟೂ ಸಮೀಕ್ಷೆ ನಂಬಲು ಅರ್ಹವೇ? ಇದ್ಯಾವುದೂ ಅಲ್ಲ ಎನ್ನುತ್ತಾರೆ ದೆಹಲಿಯ ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರದ (ಸಿಎಸ್‌ಡಿಎಸ್) ಮುಖ್ಯಸ್ಥ ಸಂಜಯಕುಮಾರ್. ಮತಗಟ್ಟೆ ಸಮೀಕ್ಷೆ ಮತ್ತು ಮತದಾನೋತ್ತರ ಸಮೀಕ್ಷೆಗಳನ್ನು ನಡೆಸುವಲ್ಲಿ ಸಾಕಷ್ಟು ಅನುಭವ ಉಳ್ಳ ಸಂಸ್ಥೆಯಿದು. ಹಾಲಿ ಪಕ್ಷ ರಾಜಕಾರಣದಲ್ಲಿ ತೊಡಗಿರುವ ಸ್ವರಾಜ್ ಪಕ್ಷದ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರು ಈ ಹಿಂದೆ ಈ ಸಂಸ್ಥೆಯಲ್ಲಿದ್ದಾಗ ನಡೆಸುತ್ತಿದ್ದ ಸಮೀಕ್ಷೆಗಳು ಬಹುತೇಕ ಕರಾರುವಾಕ್ ಎನಿಸಿಕೊಂಡಿದ್ದವು.

ನಾನಾ ಮತಗಟ್ಟೆ ಸಮೀಕ್ಷೆಗಳು ಹೊರಹಾಕುವ ಸೀಟು ಸಂಖ್ಯೆಗಳನ್ನು ಪೂರ್ಣವಾಗಿ ತಿರಸ್ಕರಿಸಲೂ ಬರುವುದಿಲ್ಲ, ಇಡಿಯಾಗಿ ಒಪ್ಪಿಕೊಳ್ಳಲೂ ಆಗುವುದಿಲ್ಲ. ಮಾಹಿತಿಯನ್ನು ಹೊರತೆಗೆಯಲು ಕ್ರಮಬದ್ಧವಾಗಿ ರೂಪಿಸಿದ ಪ್ರಶ್ನಾವಳಿ ಬಳಸಿ ಬಹುದೊಡ್ಡ ಸಂಖ್ಯೆಯ ಮತದಾರರನ್ನು ಸಂದರ್ಶಿಸಿ ಮಾಹಿತಿಯನ್ನು ಸಂಗ್ರಹಿಸಲಾಗಿದೆಯೇ ಎಂಬುದನ್ನು ಈ ಸಮೀಕ್ಷಾ ವಿಜ್ಞಾನ ಅವಲಂಬಿಸಿರುತ್ತದೆ.

1957ರ ಲೋಕಸಭಾ ಚುನಾವಣೆಯಲ್ಲೇ ಈ ವಿಧಾನ ಆರಂಭ ಆಗಿತ್ತು. ಈ ಸಮೀಕ್ಷೆ ನಡೆಸಿದ್ದು ಭಾರತೀಯ ಸಾರ್ವಜನಿಕ ಅಭಿಪ್ರಾಯ ಸಂಸ್ಥೆ. ಭಾರತದಲ್ಲಿ ಚುನಾವಣೆ ಅಂಕಿ-ಅಂಶ ಮತ್ತು ಮತದಾನದ ದಿಕ್ಕು ದೆಸೆಯ ಅಧ್ಯಯನದಲ್ಲಿ ಪ್ರಣಯ್ ರಾಯ್ ಮತ್ತು ಯೋಗೇಂದ್ರ ಯಾದವ್ 20 ಸಾವಿರ ಇಲ್ಲವೇ 30 ಸಾವಿರ ಮತದಾರರ ಸಂದರ್ಶನಗಳಿಂದ (ಸ್ಯಾಂಪಲ್ ಸೈಜ್) ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ, ಶೇಕಡಾವಾರು ಮತ ಗಳಿಕೆ ಮತ್ತು ಸೀಟುಗಳ ಸಂಖ್ಯೆ ಹೇಳುತ್ತಿದ್ದ ದಿನಗಳಿದ್ದವು. ಈಗ ಈ ಸ್ಯಾಂಪಲ್ ಸೈಜ್ ಲಕ್ಷಗಳ ಸಂಖ್ಯೆ ಮುಟ್ಟಿದೆ.

ಸ್ಯಾಂಪಲ್ ಸೈಜ್ ಮುಖ್ಯ ಹೌದು. ಆದರೆ, ನಿರ್ದಿಷ್ಟ ಮತದಾರ ಸಮುದಾಯದ ಗುಣಲಕ್ಷಣ ವೈಖರಿಗಳ ಪ್ರಾತಿನಿಧಿಕ ಮಾದರಿಯನ್ನು ಇರಿಸಿಕೊಳ್ಳುವುದು ಅದಕ್ಕಿಂತಲೂ ಬಹುಮುಖ್ಯ. ಇತ್ತೀಚೆಗೆ ಪ್ರಾಯೋಜಕರ ಒತ್ತಡಗಳಿಗೆ ಮಣಿದು ಸುದ್ದಿವಾಹಿನಿಗಳು ದೊಡ್ಡ ಗಾತ್ರದ ಸ್ಯಾಂಪಲ್ ಸೈಜ್ ಗಳನ್ನು ಇರಿಸಿಕೊಳ್ಳತೊಡಗಿವೆ. ಯಾವ ವಾಹಿನಿ ಮತಗಟ್ಟೆ ಸಮೀಕ್ಷೆಯನ್ನು ಮೊದಲು ಬಿತ್ತರಿಸಿತು ಎಂಬ ಪೈಪೋಟಿ ಈ ಮೊದಲಿಗೆ ಇತ್ತು. ಇದೀಗ ಈ ಪೈಪೋಟಿ ಸ್ಯಾಂಪಲ್‌ಗಳ ಸಂಖ್ಯೆಗೆ ಇಳಿದಿದೆ.

ಚುನಾವಣೋತ್ತರ ಸಮೀಕ್ಷೆಯೊಂದರ ನೋಟ

ಸಿಎಸ್‌ಡಿಎಸ್ ಇತ್ತೀಚೆಗೆ ಮಾಡಿದ ಮತದಾನೋತ್ತರ ಸಮೀಕ್ಷೆ ಸಾರಾಸಗಟಾಗಿ ತಪ್ಪಾಯಿತು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಬಿಜೆಪಿಯದು ಎಂದು ಹೇಳಿದ್ದರೂ, ನಾನಾ ಪಕ್ಷಗಳು ಗಳಿಸಿದ ಸೀಟುಗಳ ಸಂಖ್ಯೆಗೂ, ಸಿಎಸ್‌ಡಿಎಸ್ ತನ್ನ ಸಮೀಕ್ಷೆಗಳಲ್ಲಿ ಮುಂದೆ ಮಾಡಿದ್ದ ಸಂಖ್ಯೆಗಳಿಗೂ ಭಾರೀ ಅಂತರವಿತ್ತು ಎಂಬುದನ್ನು ಸಂಜಯಕುಮಾರ್ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ: “ಈ ವೈಫಲ್ಯಕ್ಕೂ ಸ್ಯಾಂಪಲ್ ಸೈಜ್‌ಗೂ ಸಂಬಂಧ ಇರಲಿಲ್ಲ. ಸಂದರ್ಶನಗಳು ನಕಲಿ ಇದ್ದಿರಬಹುದು ಎಂಬ ಅಂಶ ನಮಗೆ ಮೊದಲೇ ತಿಳಿಯಲಿಲ್ಲ. ಆ ನಂತರ ನಕಲಿ ಸಂದರ್ಶನಗಳು ನುಸುಳಿ ಅನಾಹುತ ಮಾಡದಂತೆ ತಡೆಯಲು ತಂತ್ರಜ್ಞಾನದ ನೆರವು ಪಡೆಯಲಾಗಿದೆ.”

ಮತದಾನದ ಶೇಕಡವಾರು ಪ್ರಮಾಣವನ್ನು ಅಂದಾಜು ಮಾಡುವುದು ಭಾರತದ ಸಂದರ್ಭದಲ್ಲಿ ಕಷ್ಟದ ಕೆಲಸ. ಪ್ರದೇಶ, ಜಾತಿ, ಧರ್ಮ, ಭಾಷೆ, ಭಿನ್ನ ಹಂತದ ಶೈಕ್ಷಣಿಕ ಅರ್ಹತೆ, ಆರ್ಥಿಕ ಏಣಿಶ್ರೇಣಿಗಳಂತಹ ಹಲವು ವಿಷಯಗಳು ಮತದಾನ ವರ್ತನೆಯನ್ನು ಪ್ರಭಾವಿಸುತ್ತವೆ. ಮತದಾರ ಪ್ರವೃತ್ತಿಯ ಅಧ್ಯಯನ ಮಾಡುವಾಗ ಈ ವರ್ಗಗಳ ಮತದಾರರ ಪ್ರಾತಿನಿಧ್ಯ ಹೆಚ್ಚೂ ಆಗುವಂತಿಲ್ಲ, ಕಡಿಮೆಯೂ ಇರುವಂತಿಲ್ಲ. ಈ ಹಿಂದಿನ ಮತದಾನದ ಶೇಕಡವಾರು ಪ್ರಮಾಣವನ್ನೂ ಪರಿಗಣಿಸಲಾಗುವ ಕಾರಣ, ಒಂದು ಚುನಾವಣೆ ಮತ್ತು ಇನ್ನೊಂದು ಚುನಾವಣೆಯ ನಡುವೆ ಪಕ್ಷಗಳ ಮೈತ್ರಿಯಲ್ಲಿ ಬದಲಾವಣೆ, ಪಕ್ಷಗಳ ಇಬ್ಭಾಗ ಇಲ್ಲವೇ ವಿಲೀನದಂತಹ ಬೆಳವಣಿಗೆಗಳಿಂದ ಕೆಲಸ ಮತ್ತಷ್ಟು ಕಠಿಣವಾಗುತ್ತದೆ. ಮತಗಳ ಪ್ರಮಾಣ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ತೊನೆಯುವುದನ್ನು (ಸ್ವಿಂಗ್) ಅನ್ವಯಿಸುವುದು ಅತ್ಯಂತ ಸಂಕೀರ್ಣ ಕಾರ್ಯ. ಪಕ್ಷಗಳು ಮತ್ತು ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದ್ದಷ್ಟೂ ಈ ಕೆಲಸ ಕ್ಲಿಷ್ಟವಾಗುತ್ತ ಹೋಗುತ್ತದೆ.

ಸಮೀಕ್ಷೆಯನ್ನು ನಡೆಸದೆಯೇ ಫಲಿತಾಂಶದ ಖಚಿತ ದಿಕ್ಕು ತೋರುವ ಹಲವು ಕ್ಷೇತ್ರಗಳು ಎಲ್ಲ ರಾಜ್ಯಗಳಲ್ಲೂ ಇರುತ್ತವೆ. ಹೀಗಾಗಿ, ಸಮೀಕ್ಷೆಯನ್ನು ಎಲ್ಲ ಕ್ಷೇತ್ರಗಳಲ್ಲೂ ನಡೆಸುವ ಅಗತ್ಯ ಇರುವುದಿಲ್ಲ. ತೀವ್ರ ಪೈಪೋಟಿಯ ಸೀಮಿತ ಸಂಖ್ಯೆಯ ಕ್ಷೇತ್ರಗಳಿಗೆ ಮಾತ್ರವೇ ಸೀಮಿತಗೊಳಿಸಬಹುದು. ನಾನಾ ಸಾಮಾಜಿಕ-ಆರ್ಥಿಕ ಹಿನ್ನೆಲೆಗಳನ್ನು ಆಧರಿಸಿದ ಮತದಾರನ ನಡವಳಿಕೆಯ ವಿಶ್ಲೇಷಣೆ ಈ ಪದ್ಧತಿಯಲ್ಲಿ ಲಭ್ಯ ಇರುವುದಿಲ್ಲ.

2004ರ ಲೋಕಸಭಾ ಚುನಾವಣೆಯಲ್ಲಿ ನಡೆಸಲಾದ ಎಲ್ಲ ಮತಗಟ್ಟೆ ಸಮೀಕ್ಷೆಗಳೂ ಬಿಜೆಪಿ ನೇತೃತ್ವದ ಎನ್‌ಡಿಎಗೆ ನಿಶ್ಚಿತ ಗೆಲುವನ್ನು ಸಾರಿದ್ದವು. ಎಲ್ಲ ಮತಗಟ್ಟೆ ಸಮೀಕ್ಷೆಗಳೂ ಎನ್‌ಡಿಎಗೆ ನೀಡಿದ್ದ ಸೀಟುಗಳ ಸರಾಸರಿ ಮೊತ್ತ 255 ಆಗಿತ್ತು. ಯುಪಿಎಗೆ ನೀಡಿದ್ದ ಸೀಟುಗಳ ಸರಾಸರಿ ಮೊತ್ತ 183. ಆದರೆ, ಫಲಿತಾಂಶಗಳಲ್ಲಿ ಎನ್‌ಡಿಎ 187 ಮತ್ತು ಯುಪಿಎ 219 ಸೀಟುಗಳನ್ನು ಗೆದ್ದಿದ್ದವು.

ಶೇಕಡವಾರು ಮತ ಗಳಿಕೆಯ ಲೆಕ್ಕಾಚಾರ ಮಾಡಲು ಮತ್ತು ಈ ಮತ ಗಳಿಕೆಯನ್ನು ಸೀಟುಗಳಾಗಿ ಪರಿವರ್ತಿಸಲು ತಾವು ಬಳಸುವ ವಿಧಾನವೇನು ಎಂಬುದನ್ನು ಬಹುತೇಕ ಸಮೀಕ್ಷಾ ಸಂಸ್ಥೆಗಳು ಬಹಿರಂಗಗೊಳಿಸುವುದಿಲ್ಲ. ಹೀಗಾಗಿ, ಈ ಹಂತದಲ್ಲಿ ಸಮೀಕ್ಷಾ ಸಂಸ್ಥೆಗಳ ಕೆಲಸದ ಮೌಲ್ಯಮಾಪನಕ್ಕೆ ಅವಕಾಶವೇ ಆಗಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಮತಗಟ್ಟೆ ಮತ್ತು ಮತದಾನೋತ್ತರ ಸಮೀಕ್ಷೆಗಳನ್ನು ನಡೆಸುವ ಏಜೆನ್ಸಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಎಲ್ಲವೂ ವೈಜ್ಞಾನಿಕ ವಿಧಾನ ಅನುಸರಿಸುತ್ತವೆ ಎಂಬುದನ್ನು ಶೋಧಿಸಿ ನೋಡಿದವರಿಲ್ಲ. ಅನುಭವಿ, ಕಸುಬುದಾರ ಸಂಸ್ಥೆಗಳ ಸಂಖ್ಯೆ ಮೂರು ನಾಲ್ಕನ್ನು ಮೀರುವುದಿಲ್ಲ. ಕೆಲವು ಕೇವಲ ದೇಶದಲ್ಲಿನ ಮೇಲ್ಮೈ ಚುನಾವಣಾ ವಾತಾವರಣವನ್ನು ನೋಡಿ ಅಂದಾಜಿನ ಮೇರೆಗೆ ಸೀಟುಗಳ ಸಂಖ್ಯೆ ಹೇಳುತ್ತವೆ. ಇನ್ನು ಕೆಲವು ನಿರ್ದಿಷ್ಟ ಪಕ್ಷವೇ ನೇಮಿಸಿಕೊಂಡ ಏಜೆನ್ಸಿಗಳು. ಆದರೆ, ಆ ಗುಟ್ಟನ್ನು ರಟ್ಟು ಮಾಡುವುದಿಲ್ಲ. ನೇಮಿಸಿಕೊಂಡ ಪಕ್ಷಕ್ಕೆ ಋಣಿಯಾಗಿರುವುದು ಸ್ವಾಭಾವಿಕ. ಹೀಗಾಗಿ, ಮತಗಟ್ಟೆ ಸಮೀಕ್ಷೆಗಳನ್ನು ಇಡಿಯಾಗಿ ನೆಚ್ಚಿಕೊಳ್ಳುವಂತಿಲ್ಲ ಎಂಬ ಮಾತಿಗೆ ಇತ್ತೀಚಿನ ದಶಕಗಳಲ್ಲಿ ನಡೆದಿರುವ ಸಮೀಕ್ಷೆಗಳು ಜೀವಂತ ಉದಾಹರಣೆಗಳು.

ಈ ಸಲವೂ ಮೋದಿ ಅಧಿಕಾರಕ್ಕೆ ಮರಳಲಿದ್ದಾರೆ ಎಂಬ ಸ್ಥೂಲ ಮುನ್ನೋಟವನ್ನು ಒಪ್ಪಿಕೊಂಡೇ 2019ರ ಸಮೀಕ್ಷೆಗಳನ್ನು ನಿರುಕಿಸೋಣ. ತಪ್ಪು ತಡೆಗಳಿಲ್ಲದೆ ವೈಜ್ಞಾನಿಕವಾಗಿ ಮಾಡಲಾಗುವ ಮತಗಟ್ಟೆ ಸಮೀಕ್ಷೆಗಳಲ್ಲಿ ದೋಷದ ಪ್ರಮಾಣ ಹೆಚ್ಚೆಂದರೆ ಶೇ.3ರಿಂದ ಶೇ.5ರಷ್ಟು ಮಾತ್ರ ಎನ್ನಲಾಗಿದೆ. ಆದರೆ, 2019ರ ಹಾಲಿ ಲೋಕಸಭಾ ಚುನಾವಣೆಗಳ ಮತಗಟ್ಟೆ ಸಮೀಕ್ಷೆಗಳು ನೀಡಿರುವ ಸೀಟುಗಳ ಸಂಖ್ಯೆಯ ನಡುವೆ ಶೇ.25ರಷ್ಟು ದೊಡ್ಡ ಅಂತರವಿದೆ. ಈ ಸಮೀಕ್ಷೆಗಳ ನಡುವೆ 15ರಿಂದ 20 ಸೀಟುಗಳ ವ್ಯತ್ಯಾಸ ಒಪ್ಪಲು ಬಂದೀತು. ಆದರೆ, ಈ ಅಂತರ 90 ಸೀಟುಗಳಷ್ಟು ಎಂಬುದು ಎದ್ದು ಕುಳಿತು ಗಮನಿಸಬೇಕಾದ ದೋಷ.

ಎನ್‌ಡಿಎಗೆ ನಾನಾ ಸಮೀಕ್ಷೆಗಳು ನೀಡಿರುವ ಸೀಟುಗಳ ಸಂಖ್ಯೆ ಕನಿಷ್ಠ 277ರಿಂದ ಗರಿಷ್ಠ 365. ಎಲ್ಲ ಸಮೀಕ್ಷೆಗಳನ್ನೂ ವೈಜ್ಞಾನಿಕವಾಗಿ ಮಾಡಿದ್ದಲ್ಲಿ 90 ಸೀಟುಗಳ ಅಂತರ ಯಾಕೆ ಬರಬೇಕೆಂಬ ಪ್ರಶ್ನೆ ಎದ್ದಿದೆ. ಕೆಲವು ಸಮೀಕ್ಷೆಗಳು ಪರಸ್ಪರರ ಸಂಖ್ಯೆಗಳು ಮತ್ತು ವಾತಾವರಣ ಗಮನಿಸಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿರುವ ವರದಿಗಳಿವೆ.

ಯುಪಿಎ ಸೀಟುಗಳ ಸಂಖ್ಯೆ 82ರಿಂದ 132 ಎಂದು ಸಮೀಕ್ಷೆಗಳು ಹೇಳಿವೆ. ಸಮೀಕ್ಷೆಯ ನ್ಯಾಯಬದ್ಧ ದೋಷದ ಪ್ರಮಾಣ ಶೇ.3ರಿಂದ 5 ಎಂಬುದನ್ನು ಒಪ್ಪಿದರೆ ಈ ಸಮೀಕ್ಷೆಗಳ ನಡುವೆ ಐವತ್ತು ಸೀಟುಗಳ ಅಂತರ ಯಾಕೆ? ಉತ್ತರ ಪ್ರದೇಶದಲ್ಲಿ ಎಸ್‌ಪಿ- ಬಿಎಸ್‌ಪಿ ಮೈತ್ರಿಕೂಟ 40 ಸೀಟು ಗಳಿಸುತ್ತದೆಂದು ಒಂದು ಸಮೀಕ್ಷೆ ಹೇಳಿದರೆ, ಭಾರೀ ಸೋಲು ಉಣ್ಣಲಿದೆ ಎಂದು ಮತ್ತೊಂದು ಸಾರುತ್ತದೆ. ಯಾವುದು ನಿಜ? ಯಾವುದು ವೈಜ್ಞಾನಿಕ?

2014ರ ಚುನಾವಣೆಗಳಲ್ಲಿ ಬಿಜೆಪಿಗೆ ಸರ್ಕಾರ ರಚಿಸುವುದೆಂದು ಸಾರಿದ್ದ ಸಮೀಕ್ಷೆಗಳು, ಎನ್‌ಡಿಎಗೆ 249 ಸೀಟುಗಳು ದಕ್ಕಲಿವೆ ಎಂದಿದ್ದವು. ವಾಸ್ತವವಾಗಿ ಎನ್‌ಡಿಎ ಸೀಟುಗಳ ಸಂಖ್ಯೆ 336ಕ್ಕೆ ಜಿಗಿದಿತ್ತು. ಯುಪಿಎ 70ರಿಂದ 148 ಸೀಟುಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ಈ ಸಂಖ್ಯೆ 69ಕ್ಕೆ ಕುಸಿದಿತ್ತು. ಎನ್‌ಡಿಎ ಮತ್ತು ಯುಪಿಎ ಸಂಖ್ಯೆಯನ್ನು ಬಹುತೇಕ ಕರಾರುವಾಕ್ಕಾಗಿ ಹೇಳಿದ್ದು ಚಾಣಕ್ಯ ಸಮೀಕ್ಷಾ ಸಂಸ್ಥೆಯೊಂದೇ.

2009ರಲ್ಲಿ ಯುಪಿಎ ಮತ್ತು ಎನ್‌ಡಿಎ ನಡುವೆ ತುರುಸಿನ ಪೈಪೋಟಿ ಏರ್ಪಡಲಿದ್ದು, ಎರಡರ ಪೈಕಿ ಯಾವುದು ಬೇಕಾದರೂ ಸರ್ಕಾರ ರಚಿಸಬಹುದು ಎಂದಿದ್ದವು ಸಮೀಕ್ಷೆಗಳು. ಬಿಜೆಪಿಗೆ 180ರಿಂದ 197 ಮತ್ತು ಯುಪಿಎಗೆ 191ರಿಂದ 199 ಸೀಟುಗಳನ್ನು ನೀಡಿದ್ದವು. ಆದರೆ, ವಾಸ್ತವವಾಗಿ ಯುಪಿಎ 262 (ಸರಳ ಬಹುಮತದ ಸಂಖ್ಯೆ 273) ಮತ್ತು ಎನ್‌ಡಿಎ 159 ಸೀಟುಗಳನ್ನು ಗೆದ್ದಿತ್ತು. ಇತರರಿಗೆ 136ರಿಂದ 172 ಸೀಟುಗಳ ಗೆಲುವು ದೊರೆಯುವುದಾಗಿ ಹೇಳಲಾಗಿತ್ತು. ಆದರೆ, ಇತರರು ಗೆದ್ದ ಸೀಟುಗಳು 79 ಮಾತ್ರ. ಸಮೀಕ್ಷೆಗಳಲ್ಲಿದ್ದ ಗೊಂದಲ ಮತದಾರರ ಮನಸುಗಳಲ್ಲಿ ಇರಲಿಲ್ಲ.

2004ರಲ್ಲಂತೂ ಸಮೀಕ್ಷೆಗಳ ಮುಖಕ್ಕೆ ಮಂಗಳಾರತಿಯಾಗಿತ್ತು. 1998ರಲ್ಲಿ ಅಧಿಕಾರಕ್ಕೆ ಬಂದಿದ್ದ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ‘ಭಾರತ ಬೆಳಗುತ್ತಿದೆ’ ಎಂಬ ಪ್ರಚಾರಾಂದೋಲನದ ನಡುವೆ 2004ರಲ್ಲಿ ಪುನಃ ಗೆಲ್ಲುವುದೆಂದು ಸಮೀಕ್ಷೆಗಳು ಹೇಳಿದ್ದವು. ತನ್ನ ಮರುಆಯ್ಕೆ ಕುರಿತು ಭಾರೀ ಭರವಸೆ ಹೊಂದಿದ್ದ ವಾಜಪೇಯಿ ಸರ್ಕಾರ, ಅವಧಿ ಪೂರೈಸುವುದಕ್ಕೆ ಆರು ತಿಂಗಳು ಮೊದಲೇ ಲೋಕಸಭೆ ವಿಸರ್ಜಿಸಿ ಚುನಾವಣೆಗೆ ತೆರಳಿತ್ತು. ವಿದೇಶಿ ಮೂಲದ ‘ಕಳಂಕ’ ಹೊತ್ತ ಸೋನಿಯಾ ಗಾಂಧಿ ಅವರ ಕಾಂಗ್ರೆಸ್ ಯುಪಿಎ ರಚಿಸಿ ಅಧಿಕಾರಕ್ಕೆ ಬರಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

ಎನ್‌ಡಿಎ 245ರಿಂದ 290ರಷ್ಟು ಸೀಟು ಗೆಲ್ಲಲಿದ್ದು, ಯುಪಿಎ 169ರಿಂದ 186 ಸೀಟುಗಳ ಗೆಲುವಿನಲ್ಲೇ ನಿಂತುಬಿಡಲಿದೆ ಎಂದು ಸಮೀಕ್ಷೆಗಳು ಸಾರಿದ್ದವು. ಆದರೆ ಯುಪಿಎ 222 ಸೀಟುಗಳನ್ನು ಗೆದ್ದಿತು. ಎನ್‌ಡಿಎ 189 ಸೀಟುಗಳಲ್ಲೇ ಸ್ಥಗಿತಗೊಂಡಿತು. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿ ಮುಂದಿನ 10 ವರ್ಷ ಕಾಲ ಸರ್ಕಾರ ನಡೆಸಿದರು.

ಐ.ಕೆ.ಗುಜ್ರಾಲ್ ಅವರ ಯುಪಿಎ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ವಾಪಸು ತೆಗೆದುಕೊಂಡು 1998ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಸಮೀಕ್ಷೆಗಳು ಬಹುತೇಕ ಕರಾರುವಾಕ್ ಆಗಿದ್ದವು. ಎನ್‌ಡಿಎಗೆ 214ರಿಂದ 249 ಸೀಟು ಸಿಗುವುದೆಂದು ಹೇಳಲಾಗಿತ್ತು. ಫಲಿತಾಂಶಗಳು ಹೊರಬಿದ್ದಾಗ ಎನ್‌ಡಿಎ 252 ಸೀಟು ಗೆದ್ದಿತ್ತು. ಜಯಲಲಿತಾ ಬೆಂಬಲ ವಾಪಸು ಪಡೆದ ಕಾರಣ ವಾಜಪೇಯಿ ಸರ್ಕಾರ 13 ತಿಂಗಳಲ್ಲೇ ಉರುಳಿತ್ತು. 1999ರಲ್ಲಿ ಮತ್ತೆ ನಡೆದ ಚುನಾವಣೆಗಳಲ್ಲಿ ಎನ್‌ಡಿಎಗೆ 300ರಿಂದ 336 ಸೀಟುಗಳು ಸಿಗಲಿವೆಯೆಂದು ಹೇಳಿದ್ದ ಸಮೀಕ್ಷೆಗಳು ಕೂಡ ಬಹುತೇಕ ನಿಖರವಾಗಿದ್ದವು. ಎನ್‌ಡಿಎ 296 ಸೀಟು ಗೆದ್ದಿತ್ತು.

“ಈಗಿನ ಸಮೀಕ್ಷೆಗಳು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಮರಳುವುದರ ಕಡೆಗೆ ಬೆರಳು ಮಾಡುತ್ತಿವೆ ಎಂಬುದನ್ನಷ್ಟೇ ಸ್ವೀಕರಿಸಿ, ಉಳಿದಂತೆ ಸೀಟುಗಳ ಅಂಕಿ-ಅಂಶಗಳನ್ನು ಬದಿಗೆ ತಳ್ಳಬೇಕು. ಬಿಜೆಪಿ ಮತ್ತೆ ಸರ್ಕಾರ ರಚಿಸಲಿದೆ. ಸ್ವಂತ ಬಲದಿಂದ ರಚಿಸುವುದೋ ಅಥವಾ ಮಿತ್ರಪಕ್ಷಗಳ ನೆರವು ಪಡೆಯಬೇಕಾಗಬಹುದೋ ಎಂಬುದೊಂದೇ ಕಾದುನೋಡಬೇಕಿರುವ ಸಂಗತಿ. ಬಿಜೆಪಿ ನೆಲಮಟ್ಟದಲ್ಲಿ ತನ್ನ ವಿರೋಧಿಗಳು ಭಾವಿಸುವಷ್ಟು ದುರ್ಬಲವಾಗಿಲ್ಲ,” ಎನ್ನುತ್ತಾರೆ ಯೋಗೇಂದ್ರ ಯಾದವ್.

RS 500
RS 1500

SCAN HERE

don't miss it !

ಎತ್ತಿಗೂ ಜನ್ಮದಿನ: ರೈತ ಕುಟುಂಬದಲ್ಲಿ ಸಂಭ್ರಮ
ಕರ್ನಾಟಕ

ಎತ್ತಿಗೂ ಜನ್ಮದಿನ: ರೈತ ಕುಟುಂಬದಲ್ಲಿ ಸಂಭ್ರಮ

by ಪ್ರತಿಧ್ವನಿ
July 1, 2022
ಇನ್ನೂ ಕೋವಿಡ್ ಸಾಂಕ್ರಾಮಿಕ ಮುಗಿದಿಲ್ಲ, 110 ರಾಷ್ಟ್ರದಲ್ಲಿ ಸೋಂಕು ಹೆಚ್ಚಳ : ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ದೇಶ

ಇನ್ನೂ ಕೋವಿಡ್ ಸಾಂಕ್ರಾಮಿಕ ಮುಗಿದಿಲ್ಲ, 110 ರಾಷ್ಟ್ರದಲ್ಲಿ ಸೋಂಕು ಹೆಚ್ಚಳ : ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

by ಪ್ರತಿಧ್ವನಿ
June 30, 2022
ಉದಯಪುರ ಹತ್ಯೆ : ಕೃತ್ಯಕ್ಕೆ ಬುದ್ಧಿಜೀವಿಗಳು, ಚಿಂತಕರ ಖಂಡನೆ ; ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ
ದೇಶ

ಉದಯಪುರ ಹತ್ಯೆ : ಕೃತ್ಯಕ್ಕೆ ಬುದ್ಧಿಜೀವಿಗಳು, ಚಿಂತಕರ ಖಂಡನೆ ; ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

by ಪ್ರತಿಧ್ವನಿ
June 29, 2022
ಕಾಂಗ್ರೆಸ್ಸಿಗೂ ನನಗೂ ಇಂದಿಗೆ ಸಂಬಂಧ ಮುಗಿಯಿತು : ಸಿಎಂ ಇಬ್ರಾಹಿಂ
ಕರ್ನಾಟಕ

ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು

by ಪ್ರತಿಧ್ವನಿ
July 2, 2022
ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ
ಅಭಿಮತ

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

by ನಾ ದಿವಾಕರ
July 5, 2022
Next Post
ಚುನಾವಣೆಯಲ್ಲಿ ದುಡ್ಡು ಹಂಚುವ ವಾಡಿಕೆ: ನಿಜವಾಗಿಯೂ ತಪ್ಪು ಯಾರದ್ದು?

ಚುನಾವಣೆಯಲ್ಲಿ ದುಡ್ಡು ಹಂಚುವ ವಾಡಿಕೆ: ನಿಜವಾಗಿಯೂ ತಪ್ಪು ಯಾರದ್ದು?

ಹಿರಿಯ ಅಧಿಕಾರಿಗಳ ಬಗ್ಗೆ ಹೈಕೋರ್ಟ್ ಹೇಳಿದ ಮಾತಿಗೆ ಇಲ್ಲಿದೆ ಪುರಾವೆ!

ಹಿರಿಯ ಅಧಿಕಾರಿಗಳ ಬಗ್ಗೆ ಹೈಕೋರ್ಟ್ ಹೇಳಿದ ಮಾತಿಗೆ ಇಲ್ಲಿದೆ ಪುರಾವೆ!

ಕೃಷ್ಣಾ ನೀರು ವಿಜಯಪುರ ತಲುಪದಿರಲು ಕಾರಣ ಅದೇ ಜಿಲ್ಲೆಯ ರಾಜಕಾರಣಿಗಳು!

ಕೃಷ್ಣಾ ನೀರು ವಿಜಯಪುರ ತಲುಪದಿರಲು ಕಾರಣ ಅದೇ ಜಿಲ್ಲೆಯ ರಾಜಕಾರಣಿಗಳು!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist