ಈ ಕೋವಿಡ್ 19 ಸೋಂಕಿನ ಸಂದರ್ಭದಲ್ಲಿ ಲಕ್ಷಾಂತರ ಭಾರತೀಯರು ವಿದೇಶಗಳಲ್ಲಿ ಸಿಲುಕಿದರು. ಇವರು ಭಾರತಕ್ಕೆ ಬರುವುದಕ್ಕೆ ಸೂಕ್ತ ಸೌಲಭ್ಯವೂ ಲಭ್ಯವಿರಲಿಲ್ಲ. ಏಕೆಂದರೆ ಎಲ್ಲ ವಿಮಾನ ಯಾನ ಕಂಪೆನಿಗಳು ದಿಢೀರನೆ ಪ್ರಯಾಣವನ್ನು ರದ್ದು ಮಾಡಿದವು. ಇಂತಹ ಸಂಕಷ್ಟ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ವಂದೇ ಭಾರತ್ ಮಿಷನ್ ಎಂಬ ಘೋಷಣೆಯೊಂದಿಗೆ ಅನಿವಾಸಿ ಭಾರತೀಯರನ್ನು ಕರೆತರಲು ಯೋಜನೆಯನ್ನು ರೂಪಿಸಿತು. ಇದಕ್ಕೆ ದೇಶಾದ್ಯಂತ ವ್ಯಾಪಕ ಪ್ರಚಾರವೂ ದೊರೆಯಿತು. ಈ ಮಿಷನ್ ನಿಂದ ಸಹಸ್ರಾರು ಜನರಿಗೆ ಅನುಕೂಲವೂ ಅಗಿರಬಹುದು. ಆದರೆ ಅನೇಕರಿಗೆ ಸಂಕಷ್ಟವೂ ಅಗಿದೆ. ಈ ರೀತಿ ತೊಂದರೆಗೆ ಸಿಲುಕಿದ ಅನಿವಾಸಿ ಭಾರತೀಯರೊಬ್ಬರು ತಾಯ್ನಾಡು ಸೇರಲು ಅನುಭವಿಸಿದ ನೋವಿನ ಕಥನ ಇದು. ಈ ಭಾರತೀಯ ನಾಗರಿಕ ತವರಿಗೆ ಬರಲು ಕೊನೆಗೆ ಮೋದಿ ಸರ್ಕಾರ ಮತ್ತು ಏರ್ ಇಂಡಿಯಾ ವಿರುದ್ದ ಮೊಕದ್ದಮೆ ದಾಖಲಿಸಿ ವಿಮಾನದಲ್ಲಿ ಆಸನ ಪಡೆಯಬೇಕಾಗಿ ಬಂದುದು ನಿಜಕ್ಕೂ ದುರ್ದೈವ.
ಕೇರಳದ ಅನಿವಾಸಿ ಭಾರತೀಯ ಮೊಂತಿ ಮಜೀದ್ ಅವರ ನೋವಿನ ಕಥನ ತುಂಬಾ ದೀರ್ಘವಾಗಿದೆ. 2015 ರಿಂದ ಯೂರೋಪ್ ನಲ್ಲಿ ಮತ್ತು 2018 ರಿಂದ ಮ್ಯೂನಿಚ್ ನಗರದಲ್ಲಿ ತಂತ್ರಜ್ಞಾನ ಉದ್ಯಮದಲ್ಲಿ ತಾಂತ್ರಿಕ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಮೊಂತಿ ಅವರಿಗೆ ಬೆಂಗಳೂರಿನ ಐಟಿ ಕಂಪೆನಿಯಿಂದ ಉದ್ಯೋಗದ ಆಫರ್ ಬಂದಿತು. ತಡ ಮಾಡದೆ ಮಾರ್ಚ್ ನಲ್ಲಿಯೇ ಜೂನ್ 5 ರಂದು ಭಾರತಕ್ಕೆ ಮರಳಲು ಟಿಕೇಟ್ ನ್ನು ರಿಸರ್ವ್ ಮಾಡಿದರು. ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವಾಗ ಯೂರೋಪಿಯನ್ ಯೂನಿಯನ್ ಬ್ಲು ಕಾರ್ಡ್ ವೀಸಾ ನೀಡಲಾಗುತ್ತದೆ. ಇದು ಉದ್ಯೋಗದಾತರೊಂದಿಗೆ ಸಂಪರ್ಕ ಹೊಂದಿರುವುದರಿಂದ ಉದ್ಯೋಗ ಇಲ್ಲದ ಕೂಡಲೇ ವೀಸಾ ಕೂಡ ರದ್ದಾಗುತ್ತದೆ. ಆದರೆ ಕರೋನ ಲಾಕ್ ಡೌನ್ ಹಿನ್ನೆಲೆಯಲ್ಲಿ ಜರ್ಮನಿಯ ಅಧಿಕಾರಿಗಳು ವೀಸಾ ಇಲ್ಲದೆಯೂ ಅಲ್ಲಿ ನೆಲೆಸಲು ಅನುವು ಮಾಡಿ ಕೊಟ್ಟಿದ್ದರು. ನಂತರವೇ ಶುರುವಾಗಿದ್ದು ಮೊಂತಿ ಅವರ ಕಷ್ಟದ ಸರಮಾಲೆ.

ಜೂನ್ 5 ಕ್ಕೆ ಒಂದು ವಾರ ಇರುವಂತೆಯೇ ಮ್ಯೂನಿಚ್ ನಿಂದ ತಿರುವನಂತಪುರಕ್ಕೆ ಆಸನ ಕಾಯ್ದಿರಿಸಲಾಗಿದ್ದ ಕತಾರ್ ಏರ್ ವೇಸ್ ವಿಮಾನ ಹಾರಾಟ ರದ್ದು ಪಡಿಸಿರುವುದಾಗಿ ಫೋನ್ ಮೂಲಕ ತಿಳಿಸಿ ಪ್ರಯಾಣ ಮುಂದೂಡಬಹುದು ಅಥವಾ ಫುಲ್ ರೀಫಂಡ್ ಪಡೆಯಬಹುದೆಂದು ತಿಳಿಸಿತು. ಅವರು ಪ್ರಯಾಣ ಮುಂದಕ್ಕೆ ಹಾಕುವ ನಿರ್ಧಾರ ಕೈಗೊಂಡರು. ಅದೇ ಸಮಯಕ್ಕೆ ಭಾರತದ ಸರ್ಕಾರ ದೆಹಲಿಯಿಂದ ಫ್ರಾಂಕ್ ಫರ್ಟ್ ಗೆ ಮೂರು ವಿಮಾನಗಳನ್ನು ವಂದೇ ಭಾರತ್ ಯೋಜನೆಯಡಿಯಲ್ಲಿ ನಿಯೋಜಿಸಿರುವುದಾಗಿ ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಪ್ರಕಟಿಸಿತು. ಆದರೆ ಈ ಕುರಿತು ರಾಯಭಾರ ಕಚೇರಿಯ ಅಥವಾ ವಿದೇಶಾಂಗ ಇಲಾಖೆಯ ವೆಬ್ ಸೈಟ್ ನಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಬರ್ಲಿನ್ ನ ಭಾರತೀಯ ರಾಯಭಾರ ಕಚೇರಿಯು ಭಾರತಕ್ಕೆ ಮರಳುವ ಭಾರತೀಯರು ಗೂಗಲ್ ಫಾರ್ಮ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳುವಂತೆ ಟ್ವಿಟರ್ ನಲ್ಲಿ ಪ್ರಕಟಿಸಿತು. ಈ ರೀತಿ ರಿಜಿಸ್ಟರ್ ಮಾಡಿದಾಗ ಹಿರಿಯ ನಾಗರಿಕರು ,ಮಕ್ಕಳು, ವೀಸಾ ಅವಧಿ ಮುಗಿದವರು ಮತ್ತು ಗರ್ಭಿಣಿಯರಿಗೆ ಪ್ರಯಾಣಕ್ಕೆ ಮೊದಲ ಆದ್ಯತೆ ನೀಡುವುದು ಕಚೇರಿಯ ಉದ್ದೇಶ ಅಗಿತ್ತು. ಅದರಂತೆ ಗೂಗಲ್ ಮೂಲಕ ರಿಜಿಸ್ಟರ್ ಮಾಡಿಸಿದರೂ ಮೊದಲ ಮೂರು ವಿಮಾನಗಳಲ್ಲಿ ಮೋಂತಿ ಅವರಿಗೆ ಆಸನ ದೊರೆಯಲೇ ಇಲ್ಲ. ಬರ್ಲಿನ್ ನ ಭಾರತೀಯ ಅಧಿಕಾರಿಗಳು ಪುನಃ ಸಾಮಾಜಿಕ ತಾಣದಲ್ಲಿ ಪ್ರಕಟಣೆ ನೀಡಿ ಯಾವ ಭಾರತೀಯರೂ ಹೆದರುವುದು ಬೇಡ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿಮಾ ವ್ಯವಸ್ಥೆ ಮಾಡುವುದಾಗಿ ಪ್ರಕಟಿಸಿದರು.
ಅದನಂತರ ಏರ್ ಇಂಡಿಯಾ ವಂದೇ ಭಾರತ್ ಯೋಜನೆಯಡಿಯಲ್ಲಿ ಪುನಃ ಮೂರು ವಿಮಾನ ಓಡಿಸಲಿದ್ದು ಅದರಲ್ಲಿ ಜೂನ್ 19 ರಂದು ಫ್ರಾಂಕ್ ಫರ್ಟ್ ನಿಂದ ತಿರುವನಂತಪುರಕ್ಕೆ ಕೂಡ ವಿಮಾನ ಇದೆ ಎಂದು ತಿಳಿಸಿತ್ತು. ಅದರಂತೆ ಏರ್ ಇಂಡಿಯಾ ವೆಬ್ ಸೈಟಿನಲ್ಲಿ ಜೂನ್ 10 ರ ನಂತರ ಟಿಕೆಟ್ ಬುಕ್ ಮಾಡಬಹುದೆಂದು ಬರ್ಲಿನ್ ನ ಭಾರತೀಯ ಅಧಿಕಾರಿಗಳು ತಿಳಿಸಿದರು. ನಂತರ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದಾಗ ನಿಗದಿತ ವಿಮಾನ ಇರಲೇ ಇಲ್ಲ. ನಂತರ ಮೋಂತಿ ಅವರು ವಾಟ್ಸ್ ಅಪ್ ಮಾಹಿತಿಯ ಪ್ರಕಾರ ಜೂನ್ 23 ರಂದು ಕೊಚಿನ್ ಗೆ ಪ್ರಯಾಣಿಸಲು 650 ಯೂರೋಪಿಯನ್ ಡಾಲರ್ ಹಣ ನೀಡಿ ಟಿಕೆಟ್ ಬುಕ್ ಮಾಡಿದರು. ಟಿಕೆಟ್ ಕೂಡ ಕನ್ಫರ್ಮ್ ಆಯಿತು. ಅವರು ಜರ್ಮನಿಯಲ್ಲಿ ತಮ್ಮ ಮನೆ , ಸಂಪರ್ಕಗಳು ಎಲ್ಲವನ್ನೂ ಕಡಿತಗೊಳಿಸುತ್ತ ಬಂದರು. ಜೂನ್ 29 ರಂದು ಮೋಂತಿ ಅವರು ತಮ್ಮ ಹೊಸ ಉದ್ಯೋಗಕ್ಕೆ ಬೆಂಗಳೂರಿನಲ್ಲಿ ಸೇರ್ಪಡೆ ಆಗಬೇಕಿತ್ತು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ ಏರ್ ಇಂಡಿಯಾ ವೆಬ್ ಸೈಟಿನ ಮಾಹಿತಿ ಪ್ರಕಾರ ಜೂನ್ 16 ಮತ್ತು 19 ರ ವಿಮಾನಗಳು ನಿಗದಿತವಾಗಿ ಪ್ರಯಾಣಿಸಲಿದ್ದು ಅದರಲ್ಲಿ ಜೂನ್ 23 ರ ವಿಮಾನದ ಮಾಹಿತಿಯೇ ಇರಲಿಲ್ಲ. ಏರ್ ಇಂಡಿಯಾದ ಇನ್ನೊಂದು ದೊಡ್ಡ ಲೋಪ ಎಂದರೆ ಇತರ ವಿಮಾನ ಯಾನ ಕಂಪೆನಿಗಳಂತೆ ಏರ್ ಇಂಡಿಯಾ ಪ್ರಯಾಣಿಕರ ಬುಕಿಂಗ್ ನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸುವುದಿಲ್ಲ. ಹಾಗಾಗಿ ನಮ್ಮ ಟಿಕೆಟ್ ಬುಕ್ ಆಗಿರುವುದು ವೆಬ್ ಸೈಟಿನಲ್ಲಿ ಗೊತ್ತಾಗುವುದಿಲ್ಲ. ಮೋಂತಿ ಅವರು ಜೂನ್ ೧ ರಿಂದ ೧೫ ರ ತನಕ ನಿತ್ಯವೂ ಅರ್ಧ ಗಂಟೆ ಫೋನ್ ಕೈಲಿ ಹಿಡಿದುಕೊಂಡು ಏರ್ ಇಂಡಿಯಾ ಕಸ್ಟಮರ್ ಕೇರ್ ನವರ ಜತೆ ಮಾಹಿತಿ ಪಡೆಯಲು ಕಷ್ಟ ಪಡಬೇಕಾಯಿತು. ಆದರೆ ರದ್ದಾದ ವಿಮಾನದ ಬಗ್ಗೆ ಅವರಲ್ಲಿ ಯಾವುದೇ ಮಾಹಿತಿ ಸಿಗಲಿಲ್ಲ. ವಿದ್ಯಾರ್ಥಿಗಳ ಪಾಡಂತೂ ಹೇಳತೀರದಷ್ಟು ಹದಗೆಟ್ಟಿತ್ತು. ಅವರ ಬಳಿ ಹಣ, ಆಹಾರ , ಉಳಿದುಕೊಳ್ಳಲು ಸ್ಥಳ ಕೂಡ ಇರಲಿಲ್ಲ. ಮೋಂತಿ ಅವರು ತಮ್ಮ ನಿವಾಸ ಖಾಲಿ ಮಾಡಿ ಫೋನ್ ಮತ್ತು ಇಂಟರ್ ನೆಟ್ ಸಂಪರ್ಕವನ್ನೂ ಕಡಿತಗೊಳಿಸಿದ್ದರು. ವಿಮಾನ ಪ್ರಯಾಣ ತಡವಾಗುತ್ತಿರುವುದರಿಂದ ಗೆಳೆಯರೊಬ್ಬರ ಮನೆಯಲ್ಲಿ ಸಂತ್ರಸ್ತರಂತೆ ಇರಬೇಕಾಯಿತು. ಈ ಸಂದರ್ಭ ಅವರು ಕೇರಳದ ಮುಖ್ಯ ಮಂತ್ರಿ, ಏರ್ ಇಂಡಿಯಾ, ಪ್ರಧಾನ ಮಂತ್ರಿ ಗಳಿಗೂ ಈ ಮೇಲ್ ಕಳಿಸಿದರು. ಇವರ ಸಂಪರ್ಕಕ್ಕಾಗಿಯೇ ಟ್ವಿಟರ್ ಅಕೌಂಟ್ ಕೂಡ ತೆರೆದರು ಆದರೆ ಯಾರೂ ಉತ್ತರಿಸಲಿಲ್ಲ. ವಿಮಾನ ಯಾವಾಗ ಇದೆ ಎಂಬ ಬಗ್ಗೆಯೂ ಮಾಹಿತಿ ಸಿಗಲಿಲ್ಲ. ಇದೊಂದು ನರಕ ಯಾತನೆ ಎಂದು ಅವರು ಬಣ್ಣಿಸುತ್ತಾರೆ.
ನಂತರ ಜುಲೈ1 ರಂದು ಏರ್ ಇಂಡಿಯಾ ಫ್ರಾಂಕ್‌ಫರ್ಟ್ ನಿಂದ ಬೆಂಗಳೂರಿಗೆ ವಿಮಾನ ಹಾರಾಟ ಇರುವುದನ್ನು ಪ್ರಕಟಿಸಿತು. ಮೋಂತಿ ಅವರು ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದರೂ ಬುಕಿಂಗ್ ಸಾದ್ಯವಾಗಲಿಲ್ಲ. ಏಜೆಂಟ್ ಒಬ್ಬರು ಅಸನ ಇಲ್ಲ ಎಂದರೆ ಮತ್ತೊಬ್ಬರು ಬುಕಿಂಗ್ ಆರಂಭಗೊಂಡಿಲ್ಲ ಎಂದರು. ಈ ನರಕಯಾತನೆಯ ನಂತರ ಮೋಂತಿ ಅವರು ಕೇಂದ್ರ ಸರ್ಕಾರ, ಕೇರಳ ಸರ್ಕಾರ, ಏರ್ ಇಂಡಿಯಾ, ಜರ್ಮನಿಯ ಭಾರತದ ರಾಯಭಾರಿ ವಿರುದ್ದ ಮೊಕದ್ದಮೆ ಹೂಡುವ ನಿರ್ಧಾರಕ್ಕೆ ಬರುತ್ತಾರೆ. ಅದರಂತೆ ಜುಲೈ3 ರಂದು ನಂ 13506/2020 ಕೇರಳ ಹೈ ಕೋರ್ಟಿನಲ್ಲಿ ಮೋಂತಿ ಅವರ ಪರವಾಗಿ ಅವರ ತಂದೆ ಸಿ ಏ ಮಜೀದ್ ರಿಟ್ ಅರ್ಜಿ ಸಲ್ಲಿಸಿದರು. ಜುಲೈ 6 ರಂದು ಕೋರ್ಟಿನಲ್ಲಿ ವಿಚಾರಣೆಗೆ ಬಂದಾಗ ಕೇಂದ್ರ ಸರ್ಕಾರದ ಪ್ರತಿನಿಧಿ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು. ನಂತರ ವಿಚಾರಣೆ ಜುಲೈ 9 ಕ್ಕೆ ಮುಂದೂಡಲ್ಪಟ್ಟಿತು. ಜುಲೈ 8 ರ ಸಂಜೆ ಮೋಂತಿ ಅವರ ವಕೀಲರು ಪಾಸ್‌ಪೋರ್ಟ್, ಟಿಕೇಟ್ ಮಾಹಿತಿ ಕೇಳಿದರು. ಎಲ್ಲವನ್ನೂ ಮೇಲ್ ಮಾಡಲಾಯಿತು. ನಂತರ ಜುಲೈ 12 ರಂದು ಕೋರ್ಟ್ ವಿಚಾರಣೆಗೂ ಮುನ್ನ ಜುಲೈ 12 ರ ಫ್ರಾಂಕ್ ಫರ್ಟ್ -ಬೆಂಗಳೂರು ವಿಮಾನಕ್ಕೆ ಏರ್ ಇಂಡಿಯಾ ಟಿಕೇಟ್ ನೀಡಿ ಮೋಂತಿ ಅವರು ದೇಶ ತಲುಪಿದರು.
ಆದರೆ ಹಣ ನೀಡಿ ಒಂದು ಟಿಕೆಟ್ ಪಡೆಯುವಲ್ಲಿ ಅವರು ಅನುಭವಿಸಿದ ನರಕಯಾತನೆ ಮಾತ್ರ ಮರೆಯಲಾಗದ್ದು ಎನ್ನುತ್ತಾರೆ ಮೋಂತಿ ಅವರು. ಅನಿವಾಸಿ ಭಾರತೀಯರನ್ನು ಏರ್ ಇಂಡಿಯಾ ನೋಡಿಕೊಂಡ ರೀತಿ ಮಾತ್ರ ನಿಜಕ್ಕೂ ಅಕ್ಷಮ್ಯ ಎಂದೂ ಅವರು ಹೇಳುತ್ತಾರೆ. ಸರ್ಕಾರದ ಯೋಜನೆಗಳಿಗೆ ಬಣ್ಣ ಬಣ್ಣದ ಪ್ರಚಾರ ನೀಡಲಾಗುತ್ತದೆ. ಅದರೆ ವಾಸ್ತವ ಭಿನ್ನವಾಗಿರುತ್ತದೆ ಎಂದು ಈ ಘಟನೆ ತೋರಿಸಿದೆ.






