“ಕುಡಿಯೋದಕ್ಕೆ ಬಿಟ್ರೆ ಹೊಲ, ಗದ್ದೆ, ತೋಟಗಳಿಗೆ ಒಂದು ಹನಿಯೂ ನೀರು ಬಿಡೋಲ್ಲ. ತುಂಗಾ ಜಲಾಶಯ ಡೆಡ್ ಸ್ಟೋರೇಜ್ ಹಂತ ತಲುಪಿದೆ. ಹೇಗೋ ಇನ್ನೊಂದಿಷ್ಟು ದಿನ ಕುಡಿಯಲು ನೀರು ಪೂರೈಸಬಹುದು, ಅಷ್ಟರಲ್ಲಿ ಮಳೆಯಾಗಲಿ ಅಂತ ನಾನೂ ಬೇಡಿಕೊಳ್ತೇನೆ,” ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ ಎ ದಯಾನಂದ ಮಾಧ್ಯಮದವರ ಎದುರು ನೇರಾನೇರ ಹೇಳಿಬಿಟ್ಟರು. ಅವರು ಹೇಳಿದ್ದು ಅಕ್ಷರಶಃ ವಾಸ್ತವವಾಗಿತ್ತು. ಜಲಾಶಯದ ಆಸುಪಾಸಿನ ತೋಟಗಳೆಲ್ಲ ಗರಿಕೆಯಾಗುತ್ತಿದ್ದು, ಪಂಪ್‌ಸೆಟ್ ಹಾಕಿ ನೀರು ಎತ್ತಲೂ ಆಗದ ರೀತಿಯಲ್ಲಿ ಹಿನ್ನೀರು ಬತ್ತಿಹೋಗಿದೆ.
ಸಾಧಾರಣ ಮಳೆಗೂ ತುಂಬಿಕೊಳ್ಳುವ ತುಂಗಾ ಜಲಾಶಯದ (ಗಾಜನೂರು ಜಲಾಶಯ) ಸಾಮರ್ಥ್ಯ ಕೇವಲ 3.24 ಟಿಎಂಸಿ. ವನ್ಯಜೀವಿ ವಲಯದಲ್ಲಿರುವುದರಿಂದ ತುಂಬಾ ಚಿಕ್ಕ ಗಾತ್ರದಲ್ಲಿ ನಿರ್ಮಿಸಲಾಗಿದೆ, ಈಗ ಇದರಲ್ಲಿ ಕೇವಲ 1.25 ಟಿಎಂಸಿ ನೀರಿನ ಸಂಗ್ರಹ ಇದೆ. ಇದು ಒಂದು ಟಿಎಂಸಿಗಿಂತ ಕಡಿಮೆ ಇಳಿದಲ್ಲಿ ನಗರಕ್ಕೆ ನೀರು ಪೂರೈಸುವ ಜಾಕ್ವೆಲ್‌ಗೂ ಸಿಗದ ಹಾಗೆ ಪಾತಾಳ ಕಾಣಲಿದೆ. ಅಲ್ಲಿಗೆ, ಶಿವಮೊಗ್ಗ ನಗರದ ಜನ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಬರಲಿದೆ.

ಶಿವಮೊಗ್ಗಕ್ಕೆ ಜಲಾಶಯದ ಸಮೀಪದಿಂದ ನೀರು ಎತ್ತಿ ಸರಬರಾಜು ಮಾಡುವ ಯೋಜನೆ ಇರಲಿಲ್ಲ. ಶಿವಮೊಗ್ಗ ನಗರದ ಬಳಿಯ ಮಂಡ್ಲಿ ಏರಿಯಾದಲ್ಲಿ ನೀರೆತ್ತಲಾಗುತ್ತಿತ್ತು. ಎಸ್ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ನಗರಕ್ಕೆ ಸಮಗ್ರವಾಗಿ ನೀರು ಹರಿಸುವಂತೆ ಜಲಾಶಯದಿಂದ ನೀರೆತ್ತುವ ಯೋಜನೆ ರೂಪಿಸಲಾಯಿತು. ಹೊಸ ಜಲಾಶಯದ ನಿರ್ಮಾಣ ಸಂಧರ್ಭದಲ್ಲಿ ಮಧ್ಯ ಕರ್ನಾಟಕಕ್ಕೆ ತುಂಗಭದ್ರಾ) ನೀರಿನ ಹರಿವು ಕಡಿಮೆಯಾಗುತ್ತದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಕೂಡ ಕಡಿಮೆ ಸಾಮರ್ಥ್ಯದ ಜಲಾಶಯ ನಿರ್ಮಾಣ ಮಾಡಲಾಯಿತು.
ಸುಮಾರು ಮೂವತ್ತು ವರ್ಷದಿಂದ ನೀರು ಪೂರೈಕೆ ಘಟಕದಲ್ಲಿ ಕೆಲಸ ಮಾಡುವ ಗುರುರಾಜ್ ಹಲವು ವರ್ಷಗಳಿಂದ ಈ ತರಹದ ಪರಿಸ್ಥಿತಿ ನೋಡಿಯೇ ಇರಲಿಲ್ಲವಂತೆ. “ಮರಳು ಚೀಲಗಳನ್ನೆಲ್ಲ ಹಾಕಿ ಜಾಕ್ವೆಲ್ ಬಳಿ ತಡೆಯೊಡ್ಡಿದ್ದೇವೆ, ಏನು ಮಾಡಿದರೂ ನೀರೇ ಇಲ್ಲದಿದ್ದರೆ ಮೇಲೆತ್ತುವುದಾದರೂ ಹೇಗೆ?” ಎನ್ನುತ್ತಾರೆ.

ನೀರು ಸರಬರಾಜು ಇಲಾಖೆ ಎಂಜಿನಿಯರ್ ರಮೇಶ್, ಒಂದು ತಿಂಗಳವರೆಗೆ ಹೇಗೋ ಸುಧಾರಿಸಬಹುದೇನೋ ಎಂಬ ಲೆಕ್ಕಾಚಾರದಲ್ಲಿದ್ದು, “ಶಿವಮೊಗ್ಗ ಹೊರವಲಯ ಬೊಮ್ಮನಕಟ್ಟೆ, ಶಾಂತಿನಗರಕ್ಕೆ ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ, ಸರ್ಕಾರದ ಆದೇಶವೇ ಇರುವುದರಿಂದ ಒಂದು ಹನಿ ನೀರನ್ನೂ ಬೇರೆ ಕೆಲಸಕ್ಕೆ ಬಿಡುವುದಿಲ್ಲ,” ಎನ್ನುತ್ತಾರೆ.
“ಜಲಾಶಯದಲ್ಲಿ ತುಂಬಿಕೊಂಡಿರುವ ಮರಳಿನ ರಾಶಿ, ಗಿಡಗಂಟಿಗಳ ಅವಶೇಷಗಳು ನೀರಿನ ಸಂಗ್ರಹಕ್ಕೆ ತೊಡಕು ಉಂಟುಮಾಡಿದೆ. ಈಗ ಹೇಳುವ ಡೆಡ್ ಸ್ಟೋರೇಜ್‌ಗಿಂತಲೂ ಕಡಿಮೆ ನೀರಿರಬಹುದು,” ಎಂಬುದು ಪರಿಸರ ಹೋರಾಟಗಾರ ಅಜಯ್ ಕುಮಾರ್ ಶರ್ಮಾ ಅಭಿಪ್ರಾಯ.

ಭೌಗೋಳಿಕವಾಗಿ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರದಲ್ಲಿ ಮಲೆನಾಡಿನ ಕುರುಹುಗಳೇ ಇಲ್ಲ, ಬೇಸಿಗೆಯ ಬಿಸಿಲ ಧಗೆಗೆ ಸುತ್ತಲಿನ ಜಲಮೂಲಗಳೆಲ್ಲ ಬೇಗನೆ ಬರಿದಾಗಿಬಿಟ್ಟಿರುತ್ತವೆ. ನೂರಾರು ಕೆರೆ ನುಂಗಿ ಹೆಬ್ಬಾವಂತೆ ಬೆಳೆದಿರುವ ನಗರದಲ್ಲಿ 3.50 ಲಕ್ಷ ಜನರಿದ್ದಾರೆ ಎಂದಾದರೆ, ನೀರೆಷ್ಟು ಬೇಕು ಎಂಬದನ್ನು ಊಹಿಸಲಾಗದು. ತುಂಗಾ ನದಿಯೊಂದೇ ಕುಡಿಯುವ ನೀರಿನ ಮೂಲವಾದ್ದರಿಂದ 100 ಎಂಎಲ್‌ಡಿ (millions of liter per day) ನೀರೆತ್ತಲಾಗುತ್ತಿದೆ. ಹಿಂದೆ ಜಲಾಶಯವನ್ನು ಎತ್ತರಿಸುವ ಕಾಯಕಕ್ಕೆ ಕೈಹಾಕಿದಾಗಲೆಲ್ಲ ವಿರೋಧಗಳೇ ಹೆಚ್ಚಾಗಿದ್ದವು. ಸಾಲದು ಎಂಬಂತೆ ಆಂಧ್ರಪ್ರದೇಶದಿಂದಲೂ ದಾವೆ ಹೂಡಲಾಗಿತ್ತು (ತುಂಗಭದ್ರಾ ಕೊರತೆ).
ಕಳೆದ ಐದಾರು ವರ್ಷಗಳಿಂದಲೂ ಮಳೆ ಸರಿಯಾದ ಸಮಯಕ್ಕೆ ಬೀಳುತ್ತಿಲ್ಲ, ಕಳೆದ ವರ್ಷ ಏಪ್ರಿಲ್ ತಿಂಗಳಲ್ಲೇ ಮಳೆ ಆರಂಭವಾಗಿತ್ತು. ಈ ಬಾರಿ ಜೂನ್ ಬಂದರೂ ಮಳೆ ಬರುವ ಕುರುಹುಗಳೂ ಕಾಣುತ್ತಿಲ್ಲ. ಈ ನಡುವೆ, ಜಲಮಂಡಳಿಯ ಪ್ರಥಮ ದರ್ಜೆ ಸಹಾಯಕರೊಬ್ಬರು ಜಲಾಶಯದಲ್ಲಿ ಮುಳುಗಡೆಯಾಗಿರುವ ದೇವರಿಗೆ ಪೂಜೆ ಸಲ್ಲಿಸಿಯಾದರೂ ವರುಣನ ಕೃಪೆಗೆ ಪಾತ್ರರಾಗುವ ತವಕದಲ್ಲಿದ್ದಾರೆ!