ರಾಜಕಾರಣಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು, ಸ್ಥಾನಮಾನ ಗಿಟ್ಟಿಸಿಕೊಳ್ಳಲು ಸಮುದಾಯದ ಬಗ್ಗೆ, ಸಮುದಾಯದ ನಾಯಕರ ಬಗ್ಗೆ, ನಾಡು, ನುಡಿಗಳ ಅಸ್ತಿತ್ವದ ಬಗ್ಗೆ ಮಾತನಾಡುತ್ತಾರೆ. ಅವುಗಳನ್ನು ಬಳಸಿಕೊಂಡು ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂಬುದಕ್ಕೆ ಈಗ ಇನ್ನೊಂದು ಉದಾಹರಣೆ ಕುರುಬ ಸಮುದಾಯವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸುವ ಹೋರಾಟ.
ಕುರುಬ ಸಮುದಾಯವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಬೇಕೆಂದು ರಾಜ್ಯ ಕುರುಬರ ಸಂಘ ಮತ್ತು ಸಮುದಾಯದ ಮಠಾಧೀಶರು ಬಹಳ ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೀಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೋರಾಟದ ವೇಗ ಹೆಚ್ಚಿಸುವ ಹುಮ್ಮಸ್ಸು ತೋರುತ್ತಿದ್ದಾರೆ. ಈಶ್ವರಪ್ಪ ಅವರ ಈ ಉತ್ಸಾಹ-ಹುಮ್ಮಸ್ಸುಗಳೇ ಈಗ ಅನುಮಾನ ಮೂಡಿಸುವಂತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆರ್ ಎಸ್ ಎಸ್ ಮತ್ತು ಬಿಜೆಪಿ ಜೊತೆಯೇ ಪಯಣ ಮಾಡಿಕೊಂಡು ಬಂದಿರುವ ಈಶ್ವರಪ್ಪ ಎಂದೂ ಕುರುಬರ ಸಂಘದ ಜೊತೆ ಸಕ್ರೀಯವಾಗಿ ಗುರುತಿಸಿಕೊಂಡವರಲ್ಲ. ಈಗ ದಿಢೀರನೇ ಅವರಿಗೆ ಸಮುದಾಯದ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿರುವುದೇಕೆ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇಂಥ ಅನುಮಾನ ಹುಟ್ಟಲು ಸಕಾರಣಗಳೂ ಇವೆ.
ಮೊದಲನೆಯದಾಗಿ ಈಶ್ವರಪ್ಪ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ್ದರು. ಆಗ ಯಡಿಯೂರಪ್ಪ ವಿರುದ್ಧ ಪಕ್ಷದಲ್ಲಿ ತಮ್ಮ ಹಿಡಿತ ಸಾಧಿಸಲು ಕಟ್ಟಿಕೊಂಡಿದ್ದ ವೇದಿಕೆ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಇದಕ್ಕೆ ಪೂರಕವೆಂಬಂತೆ ಶಿವಮೊಗ್ಗದಿಂದ ತಮಗೆ ಟಿಕೆಟ್ ಸಿಗುತ್ತಿದ್ದಂತೆ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು ಮರೆತರು.
ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ವಿಚಾರ ಚರ್ಚೆಯಾಗುತ್ತಿದೆ. ಜೊತೆಗೆ ಸಂಪುಟ ಪುನರ್ರಚನೆಯಾದರೆ ಕೆಲವು ಹಿರಿಯ ಸಚಿವರನ್ನು ಕೈಬಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆ ಪಟ್ಟಿಯಲ್ಲಿ ಈಶ್ವರಪ್ಪ ಹೆಸರು ಕೂಡ ಇದೆ. ಹಾಗಾಗಿ ಈಗ ಈಶ್ವರಪ್ಪ ಅವರಿಗೆ ಸಮುದಾಯದ ಸಮಸ್ಯೆ ನೆನಪಾಗಿರಬಹುದು ಎನ್ನಲಾಗುತ್ತಿದೆ.
ಈಶ್ವರಪ್ಪ ಅವರ ನಡೆಯ ಬಗ್ಗೆ ಕುರುಬ ಸಮುದಾಯವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಬೇಕೆಂದು ಮೊದಲಿಂದಲೂ ಹೋರಾಟ ಮಾಡುತ್ತಿರುವ ಕೆಲವು ನಾಯಕರಿಗೆ ಹಾಗೂ ಸ್ವಾಮೀಜಿಗಳಿಗೆ ಅನುಮಾನಗಳಿವೆ. ಆದರೆ ಹೋರಾಟದ ರಥ ಸ್ವಲ್ಪವಾದರೂ ಮುಂದಕ್ಕೆ ಹೋಗಲಿ ಎಂಬ ಕಾರಣಕ್ಕಾಗಿ ಈಶ್ವರಪ್ಪ ಅವರನ್ನು ಮುಂಚೂಣಿಗೆ ಬರಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲದೆ ಈಗ ರಾಜ್ಯ ಮತ್ತು ಕೇಂದ್ರ ಎರಡೂ ಕಡೆ ಬಿಜೆಪಿ ಸರ್ಕಾರ ಇರುವುದರಿಂದ ತಮ್ಮ ಹೋರಾಟಕ್ಕೆ ಸ್ವಲ್ಪವಾದರೂ ಜಯ ಸಕ್ಕೀತು ಎಂಬ ಆಶಾಭಾವನೆ ಇದೆ. ಈ ಹೋರಾಟದ ಹೆಸರು ಹೇಳಿಕೊಂಡು ಈಶ್ವರಪ್ಪ ರಾಜಕೀಯವಾಗಿ ಯಶಸ್ಸು ಸಾಧಿಸುವುದಾದರೆ ನಮ್ಮ ಅಭ್ಯಂತರವಿಲ್ಲ. ಜೊತೆಜೊತೆಯಲ್ಲಿ ಸಮುದಾಯವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಬೇಕೆಂಬ ನಮ್ಮ ಉದ್ದೇಶವೂ ಈಡೇರಬೇಕಷ್ಟೇ ಎಂದು ಹೆಸರನ್ನು ಬಹಿರಂಗೊಳಿಸಲು ಇಚ್ಛಿಸದ ನಾಯಕರೊಬ್ಬರು ‘ಪ್ರತಿಧ್ವನಿ’ಗೆ ಪ್ರತಿಕ್ರಿಯಿಸಿದರು.

ಈಗ ಈಶ್ವರಪ್ಪ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಹೋರಾಟವನ್ನು ಸಮುದಾಯದ ಜನಪ್ರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಆರ್ ಎಸ್ ಎಸ್ ಪ್ರೇರಿತ ಹೋರಾಟ’ ಎಂದು ವ್ಯಾಖ್ಯಾನಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ‘ಲಿಂಗಾಯತ ಕಾರ್ಡ್’ ಬಳಸುತ್ತಿರುವುದರಿಂದ ಇದಕ್ಕೆ ಪ್ರತಿಯಾಗಿ ಆರ್ ಎಸ್ ಎಸ್ ನಾಯಕರು ಈಶ್ವರಪ್ಪ ಅವರನ್ನು ಎತ್ತಿಕಟ್ಟಿದ್ದಾರೆ. ಆ ಮೂಲಕ ಕುರುಬರನ್ನು ಎತ್ತಿಕಟ್ಟಿದ್ದಾರೆ. ಹಿಂದೆ ಕೂಡ ಯಡಿಯೂರಪ್ಪ ಬಗ್ಗೆ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಲು, ಹಾಗೂ ತಮ್ಮ ಕಾರ್ಯ ಸಿದ್ದಿಸಿದ ಮೇಲೆ ಸುಮ್ಮನಾಗಲು ಆರ್ ಎಸ್ ಎಸ್ ಕಾರಣ. ಈಗಲೂ ಅದೇ ಕೆಲಸ ಮಾಡಲಾಗುತ್ತಿದೆ ಎಂಬ ಗುಮಾನಿ ಸಮುದಾಯದ ಹಲವು ನಾಯಕರಲ್ಲಿ ಆರ್ ಎಸ್ ಎಸ್ ಮತ್ತು ಈಶ್ವರಪ್ಪ ಮೇಲೆ ಇದೆ. ಆದರೆ ‘ಹೋರಾಟ ಜೀವಂತವಾಗಿರಲಿ’ ಎಂದು ಪ್ರಜ್ಞಾಪೂರ್ವಕವಾಗಿಯೇ ಈಶ್ವರಪ್ಪ ಅವರನ್ನು ಬೆಂಬಲಿಸುತ್ತಿದ್ದಾರೆ. ಈಶ್ವರಪ್ಪ ರಾಜಕೀಯವಾಗಿ ಯಶಸ್ವಿಯಾಗುತ್ತಾರಾ? ಕುರುಬ ಸಮುದಾಯಕ್ಕೆ ಪರಿಶಿಷ್ಟ ಜನಾಂಗದ ಸ್ಥಾನ ಸಿಗುತ್ತಾ ಎಂಬುದನ್ನು ಕಾದುನೋಡಬೇಕು.