ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿ. ಕೆ. ಶಿವಕುಮಾರ್ ಎಲ್ಲಾ ರೀತಿಯ ರಾಜಕೀಯ ಟ್ರಬಲ್ ಗಳನ್ನು ಎದುರಿಸಿ ನಿಂತರಾದರೂ ಜಾರಿ ನಿರ್ದೇಶನಾಲಯದ (ಇಡಿ) ಟ್ರಬಲ್ ಎದುರಿಸಲು ಸಾಧ್ಯವಾಗಲಿಲ್ಲ. ಸತತ ನಾಲ್ಕು ದಿನಗಳ ವಿಚಾರಣೆ ಬಳಿಕ ಮಂಗಳವಾರ ರಾತ್ರಿ ಇಡಿ ಅಧಿಕಾರಿಗಳನ್ನು ಅವರನ್ನು ಬಂಧಿಸಿದ್ದಾರೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಇಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ವಶಕ್ಕೆ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಶಿವಕುಮಾರ್ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಸೂಕ್ತ ವಿವರಣೆ ನೀಡದೆ ಅಸಹಕಾರ ಕೋರುತ್ತಿದ್ದಾರೆ. ಹೀಗಾಗಿ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಶಿವಕುಮಾರ್ ಬಂಧನಕ್ಕೆ ತನಿಖೆಗೆ ಅಸಹಕಾರ ಖಂಡಿತಾ ಕಾರಣವಲ್ಲ. ಏಕೆಂದರೆ, ಭಾನುವಾರ ಹೊರತುಪಡಿಸಿ ಗಣೇಶನ ಹಬ್ಬ ಆಚರಿಸಲೂ ಅವಕಾಶ ನೀಡದೆ ಇಡಿ ಅಧಿಕಾರಿಗಳು ಕರೆದಾಗೆಲ್ಲಾ ಶುಕ್ರವಾರದಿಂದ ನಾಲ್ಕು ದಿನ ವಿಚಾರಣೆಗೆ ಶಿವಕುಮಾರ್ ಹಾಜರಾಗಿದ್ದರು. ಮಧ್ಯೆ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವ ಕೆಲಸವನ್ನೂ ಮಾಡಿರಲಿಲ್ಲ. ಹೀಗಿರುವಾಗ ವಿಚಾರಣೆಗೆ ಅಸಹಕಾರ ಎಂಬ ಕಾರಣಕ್ಕೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ಬದಲಾಗಿ ವಿಚಾರಣೆ ವೇಳೆ ಇಡಿ ಅಧಿಕಾರಿಗಳಿಗೆ ಶಿವಕುಮಾರ್ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಮಹತ್ವದ ದಾಖಲೆ ಅಥವಾ ಮಾಹಿತಿ ಸಿಕ್ಕಿರಬೇಕು ಇಲ್ಲವೇ, ದೆಹಲಿಯ ಫ್ಲಾಟ್ ನಲ್ಲಿ ಸಿಕ್ಕಿದ 8.59 ಕೋಟಿ ರೂ. ಅಕ್ರಮ ಹಣಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಲು ಶಿವಕುಮಾರ್ ವಿಫಲವಾಗಿರಬಹುದು.

ಪಿಎಂಎಲ್ಎ ಕಾಯ್ದೆಯಡಿ ಬಂಧನ ಅಷ್ಟು ಸುಲಭವಲ್ಲ
ಸದ್ಯ ಶಿವಕುಮಾರ್ ವಿರುದ್ಧ ಇಡಿ ತನಿಖೆ ನಡೆಯುತ್ತಿರುವುದು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್ಎ). ಈ ತನಿಖೆಗೂ ಕ್ರಿಮಿನಲ್ ಅಪರಾಧ ದಂಡ ಸಂಹಿತೆಗಳಡಿ ನಡೆಯುವ ತನಿಖೆಗೂ ಸಾಕಷ್ಟು ವ್ಯತ್ಯಾಸವಿದೆ. ಪಿಎಂಎಲ್ಎ ಕಾಯ್ದೆಯಡಿ ಹಣ ವರ್ಗಾವಣೆ ಕುರಿತಂತೆ ಕೇವಲ ದಾಖಲೆಗಳ ಮೇಲೆ ಮಾತ್ರ ವಿಚಾರಣೆ ನಡೆಯುತ್ತದೆ. ಪ್ರಸ್ತುತ ಎಲ್ಲಾ ಸಕ್ರಮ ವರ್ಗಾವಣೆಗಳ ಮಾಹಿತಿ ಆನ್ ಲೈನ್ ನಲ್ಲೂ ಲಭ್ಯವಾಗುತ್ತದೆ. ಒಂದೊಮ್ಮೆ ಆನ್ ಲೈನ್ ನಲ್ಲಿ ಮಾಹಿತಿ ಲಭ್ಯವಾಗದೇ ಇದ್ದರೆ ಆಗ ಸಂಬಂಧಿಸಿದವರು ಆ ದಾಖಲೆಗಳನ್ನು ತನಿಖೆ ವೇಳೆ ಒಪ್ಪಿಸಬೇಕಾಗುತ್ತದೆ. ಅದರಂತೆ ಶಿವಕುಮಾರ್ ಅವರು ಇಡಿ ವಿಚಾರಣೆಗೆ ಬಂಡಲ್ ಗಟ್ಟಲೆ ದಾಖಲೆಗಳೊಂದಿಗೆ ತೆರಳಿದ್ದರು. ತಾನು ಎಲ್ಲದಕ್ಕೂ ಸಿದ್ಧವಾಗಿಯೇ ಬಂದಿದ್ದೇನೆ. ಹಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ತನ್ನ ಬಳಿ ಇವೆ ಎಂದು ಹೇಳಿಕೊಂಡೇ ತನಿಖಾಧಿಕಾರಿಗಳ ಮುಂದೆ ತೆರಳಿದ್ದರು.
ಡಿ. ಕೆ. ಶಿವಕುಮಾರ್ ಎಲ್ಲಾ ದಾಖಲೆಗಳನ್ನು ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದರೂ ನಾಲ್ಕು ದಿನಗಳ ವಿಚಾರಣೆ ಬಳಿಕ ಇಡಿ ಅಧಿಕಾರಿಗಳನ್ನು ಅವರನ್ನೇಕೆ ಬಂಧಿಸುತ್ತಿದ್ದರು? ಇದಕ್ಕೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರತಿಪಕ್ಷಗಳ ನಾಯಕರನ್ನು ಮಟ್ಟ ಹಾಕುತ್ತಿದೆ ಎಂಬ ಕಾರಣ ನೀಡಿ ಪ್ರಕರಣ ರಾಜಕೀಯಗೊಳಿಸಬಹುದು. ಆದರೆ, ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಅದಕ್ಕೆ ಕಾರಣಗಳನ್ನು ನೀಡಬೇಕಾಗಿರುವುದು, ಇನ್ನಷ್ಟು ದಿನ ವಶಕ್ಕೆ ಪಡೆಯಲು ಸಕಾರಣಗಳನ್ನು ಕೊಡಬೇಕಾಗಿರುವುದು ತನಿಖಾಧಿಕಾರಿ. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿಯ ಪ್ರಕರಣಗಳಲ್ಲಿ ಅಧಿಕಾರಿಗಳು ಸ್ವಲ್ಪ ಎಡವಿದರೂ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಏಕೆಂದರೆ, ಇಂತಹ ಪ್ರಕರಣಗಳಲ್ಲಿ ಸಿಲುಕಿಕೊಳ್ಳುವುದು ಪ್ರಭಾವಿ ರಾಜಕಾರಣಿಗಳು ಇಲ್ಲವೇ ಉದ್ಯಮಿಗಳು. ಅಧಿಕಾರಿಗಳ ಸಣ್ಣ ಪುಟ್ಟ ಎಡವಟ್ಟುಗಳನ್ನು ಗಮನಿಸಿ ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಾರೆ. ಹೀಗಿರುವಾಗ ಕರೆದಾಗಲೆಲ್ಲಾ ವಿಚಾರಣೆಗೆ ಬರುತ್ತಿದ್ದವರನ್ನು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಬಂಧಿಸುವುದು ಕಷ್ಟಸಾಧ್ಯ. ಬಂಧಿಸಬಹುದಾದ ಮತ್ತು ಬಂಧಿಸಿದರೆ ಆ ಕ್ರಮವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿರುವ ಸಾಕ್ಷ್ಯಗಳು ತನಿಖಾಧಿಕಾರಿಗಳಿಗೆ ಸಿಕ್ಕಿದ ಬಳಿಕವೇ ಬಂಧನದ ನಿರ್ಧಾರಕ್ಕೆ ಬರುತ್ತಾರೆ. ನಾಲ್ಕು ದಿನಗಳ ವಿಚಾರಣೆ ಬಳಿಕ ಶಿವಕುಮಾರ್ ಪ್ರಕರಣದಲ್ಲೂ ಅಂತಹ ಮಹತ್ವದ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿರಬಹುದು.
ಇಡಿ ಅಧಿಕಾರಿಗಳ ಪ್ರಮುಖ ಅನುಮಾನಗಳೇನು?
2017ರಲ್ಲಿ ಐಟಿ ಅಧಿಕಾರಿಗಳು ಡಿ. ಕೆ. ಶಿವಕುಮಾರ್ ಮತ್ತು ಅವರ ಆಪ್ತರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ದೆಹಲಿಯ 3 ಫ್ಲಾಟ್ ಗಳಲ್ಲಿ 8.59 ಕೋಟಿ ರೂ. ಪತ್ತೆಯಾಗಿತ್ತು. ಈ ಹಣ ಶಿವಕುಮಾರ್ ನಡೆಸುತ್ತಿರುವ ಹವಾಲಾ ವ್ಯವಹಾರಕ್ಕೆ ಸಂಬಂಧಪಟ್ಟದ್ದು ಎಂದು ಐಟಿ ಅಧಿಕಾರಿಗಳು ದೂರು (ಚಾರ್ಜ್ ಶೀಟ್) ದಾಖಲಿಸಿದ್ದರು. ವಿಚಾರಣೆ ವೇಳೆ ಈ ಹಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಆಪ್ತರು ನೀಡಿದ ಹೇಳಿಕೆಗಳು, ಹಣ ಶಿವಕುಮಾರ್ ಅವರಿಗೆ ಸೇರಿದ್ದು ಎಂಬುದನ್ನು ಸೂಚಿಸಿದ್ದವು.
ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡು ಶಿವಕುಮಾರ್ ಅವರಿಗೆ 2019ರ ಫೆಬ್ರವರಿಯಲ್ಲಿ ಸಮನ್ಸ್ ಜಾರಿ ಮಾಡಿತ್ತು. ನಂತರ ಅವರು ಕೋರ್ಟ್ ಮೊರೆ ಹೋದರು. ಕೋರ್ಟ್ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ್ದರಿಂದ ಕಳೆದ ಶುಕ್ರವಾರದಿಂದ ಇಡಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ವಿಚಾರಣೆ ವೇಳೆ ಹಣ ಪತ್ತೆಗೆ ಸಂಬಂಧಿಸಿದಂತೆ ಮೂರು ಅಂಶಗಳ ಮೇಲೆ ತನಿಖಾಧಿಕಾರಿಗಳಿಗೆ ಅನುಮಾನ ಬಂದಿದ್ದವು.
1. ದೆಹಲಿಯ ಫ್ಲಾಟ್ ಗಳಲ್ಲಿ ಪತ್ತೆಯಾದ 8.59 ಕೋಟಿ ರೂ. ಯಾರಿಗೆ ಸೇರಿದ್ದು. ಅದರ ಮೂಲವೇನು?
2. ಈ ಹಣ ಪತ್ತೆಯಾಗುವ ಕೆಲವೇ ದಿನಗಳ ಮುನ್ನ ಮಲ್ಲೇಶ್ವರದ ಬ್ಯಾಂಕ್ ಒಂದರಲ್ಲಿ ಬೆಸ್ಕಾಂ ಖಾತೆಯಲ್ಲಿರುವ ಹಣ ವಿತ್ ಡ್ರಾ ಮಾಡಿದ್ದು, ಈ ಹಣಕ್ಕೂ ದೆಹಲಿಯಲ್ಲಿ ಸಿಕ್ಕಿದ ಹಣಕ್ಕೂ ಏನಾದರೂ ಲಿಂಕ್ ಇದೆಯೇ?
3. ಪತ್ತೆಯಾದ ಹಣದಲ್ಲಿ ಹೆಚ್ಚಿನವು 2 ಸಾವಿರ ರೂಪಾಯಿ ಮುಖ ಬೆಲೆಯದ್ದು. ನೋಟು ಅಮಾನ್ಯವಾದ ಕೆಲವೇ ತಿಂಗಳುಗಳಲ್ಲಿ ಇಷ್ಟೊಂದು ನೋಟುಗಳು ಹೇಗೆ ಸಿಕ್ಕಿದವು?
ಈ ಮೂರು ಅಂಶಗಳು ಒಂದಕ್ಕೊಂದು ಲಿಂಕ್ ಆಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಬಲವಾದ ಅನುಮಾನ ಕಾಣಿಸಿಕೊಂಡಿತ್ತು. ಆದರೆ, ವಿಚಾರಣೆ ವೇಳೆ ಇವುಗಳಿಗೆ ಪೂರಕ ದಾಖಲೆಗಳನ್ನು ಒದಗಿಸಲು ಶಿವಕುಮಾರ್ ವಿಫಲರಾಗಿರಬಹುದು. ಅಂದರೆ, ಅವರ ಬಳಿಕ ದಾಖಲೆ ಇಲ್ಲವೆಂದರೆ ಅದು ಅಕ್ರಮ ಹಣ ವರ್ಗಾವಣೆ ಎಂದು ತನಿಖಾಧಿಕಾರಿಗಳು ಭಾವಿಸಬಹುದು. ಹೀಗಾಗಿಯೇ ಬಂಧನ ಮಾಡಿರಬಹುದು ಎಂಬ ಮಾತು ಕೇಳಿಬರುತ್ತಿದೆ.