ಮಾಜಿ ಸಚಿವ ಡಿ ಕೆ ಶಿವಕುಮಾರ್ ಹವಾಲಾ ಹಣ ಆರೋಪದಲ್ಲಿ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಶಿವಕುಮಾರ್ ಜಾಮೀನಿನ ವಿಚಾರವನ್ನು ಬದಿಗಿರಿಸಿ ನೋಡುವುದಾದರೂ ಭಾರತ ರಾಜಕಾರಣದ ಅತ್ಯಂತ ಅಪಾಯಕಾರಿ ಜೋಡಿ ಮೋದಿ-ಶಾ, ಶಿವಕುಮಾರ್ ನೆಪದಲ್ಲಿ ಮತ್ತೊಂದು ಮಹತ್ವದ ಹಕ್ಕಿಯನ್ನು ಹೊಡೆಯಲು ಹೊಂಚು ಹಾಕಿ ಕುಳಿತಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆ ಹಕ್ಕಿ ಮತ್ತಾವುದೂ ಅಲ್ಲ ಗಾಂಧಿ ಕುಟುಂಬದ ಕಣ್ಣು-ಕವಿ, ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ, ಕಾಂಗ್ರೆಸ್ ಖಜಾಂಚಿ ಅಹ್ಮದ್ ಪಟೇಲ್.
ಎರಡು ವರ್ಷಗಳ ಹಿಂದೆ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ರನ್ನು ಸೋಲಿಸುವ ಮೂಲಕ ದೀರ್ಘಕಾಲದ ವೈರಿಯನ್ನು ಬಗ್ಗುಬಡಿಯುವುದರ ಜೊತೆಗೆ ಗಾಂಧಿ ಕುಟುಂಬಕ್ಕೆ ಮುಖಭಂಗ ಉಂಟು ಮಾಡಲು ಹೊರಟಿದ್ದ ಮೋದಿ-ಶಾ ಜೋಡಿ ತಾನೇ ಮಣ್ಣು ಮುಕ್ಕಿತ್ತು. ಇದೇ ಸಂದರ್ಭದಲ್ಲಿ ಸಂಖ್ಯೆಯ ಆಟದಲ್ಲಿ ಗೆಲ್ಲಲು ಗುಜರಾತ್ ಶಾಸಕರನ್ನು ಹಿಡಿದಿಡುವ ಮೂಲಕ ಡಿ ಕೆ ಶಿವಕುಮಾರ್ ಮೋದಿ-ಶಾ ಜೋಡಿಯ ಅಣಿಯುವ ಆಟದಲ್ಲಿ ಸೇರಿಬಿಟ್ಟಿದ್ದರು. ಇದರ ಬಳಿಕವೂ ಚುನಾವಣಾ ಆಯೋಗದ ನಡುಬಗ್ಗಿಸಿ ಫಲಿತಾಂಶ ಬದಲಾಯಿಸುವ ಮೂಲಕ ಗಾಂಧಿ-ಪಟೇಲ್ ಮೀಸೆ ಮಣ್ಣಾಗಿಸುವ ಮೋದಿ-ಶಾ ಆಟ ನಡೆದಿರಲಿಲ್ಲ.
ಈ ಸೋಲು ಮೋದಿ-ಶಾ ಜೋಡಿಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ವಿರೋಧಿಗಳನ್ನು ಧ್ವಂಸ ಮಾಡುವ ಮೋದಿ-ಶಾ ಜೋಡಿಗೆ ಅಹ್ಮದ್ ಪಟೇಲ್ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಸಂಸತ್ ನಲ್ಲಿ ನೋಡಲಾಗುತ್ತಿಲ್ಲ. ಅಹ್ಮದ್ ಪಟೇಲ್ ಕಂಡಾಗಲೆಲ್ಲಾ ಗುಜರಾತ್ ಹತ್ಯಾಕಾಂಡ ಕಣ್ಮುಂದೆ ಬಂದು ಮೋದಿ-ಶಾ ಜೋಡಿಯನ್ನು ಅಣಕಿಸುತ್ತಿರುವಂತಿದೆ. ಆ ಸಂದರ್ಭ ಮೋದಿ-ಶಾ ಜೋಡಿಯನ್ನು ಕಾನೂನಾತ್ಮಕ ಕುಣಿಕೆಗೆ ಸಿಲುಕಿಸಿದ ದ್ವೇಷ ಇದು. ಇದಕ್ಕಾಗಿ ಹವಾಲಾ ಹಣ ಆರೋಪದ ತನಿಖೆಯ ನೆಪದಲ್ಲಿ ಡಿ ಕೆ ಶಿವಕುಮಾರ್ ಬಾಯಲ್ಲಿ ಅಹ್ಮದ್ ಪಟೇಲ್ ಹೆಸರು ಹೇಳಿಸಿ, ಜೈಲಿಗಟ್ಟುವುದು ಮೋದಿ-ಶಾ ಜೋಡಿಯ ಗೇಮ್ ಪ್ಲಾನ್. ಶಿವಕುಮಾರ್ ಬಂಧನದ ಮೂಲಕ ಒಂದೇ ಏಟಿಗೆ ಹಲವಾರು ಕಾರ್ಯ ಸಾಧಿಸುವುದು ಮೋದಿ-ಶಾ ಜೋಡಿಯ ಆಟ.

ಅನುಮಾನಾಸ್ಪದ ರೀತಿಯ ಸಂಪತ್ತು ಕ್ರೋಡೀಕರಿಸುವುದರೊಂದಿಗೆ ಸಾರ್ವಜನಿಕವಾಗಿ ಅಷ್ಟೇನು ಉತ್ತಮವಾದ ಇಮೇಜ್ ಹೊಂದಿರದ ಶಿವಕುಮಾರ್ ಬಂಧನದ ಬಗ್ಗೆ ಅವರ ಕುಟುಂಬ ಹೊರತುಪಡಿಸಿ ಬೇರಾರಿಗೂ ಅನುಕಂಪವಿಲ್ಲ. ಸಾರ್ವಜನಿಕ ಕಡುಗೋಪವನ್ನು ಚೆನ್ನಾಗಿಯೇ ಬಳಸಿ ಆಟವಾಡುತ್ತಿರುವ ಮೋದಿ-ಶಾ ಜೋಡಿ ಅಂತರಂಗದಲ್ಲಿ ತನ್ನ ಕಾರ್ಯ ಸಾಧನೆಗೆ ಇಳಿದಿದೆ.
ಮೋದಿ-ಶಾ ಅಣಿಯುವ ಆಟದಲ್ಲಿ ಅಹ್ಮದ್ ಪಟೇಲ್ ರನ್ನು ಜೈಲಿಗೆ ಹಾಕುವ ಉದ್ದೇಶದ ಹಿಂದೆ ಹಲವು ಕಾರ್ಯತಂತ್ರಗಳಿವೆ. ಉದ್ಯಮ ವಲಯದಲ್ಲಿ ಪ್ರಭಾವಿಯಾದ ಅಹ್ಮದ್ ಪಟೇಲ್ ರಿಲಯನ್ಸ್ ನ ಮುಖೇಶ್ ಅಂಬಾನಿಯಿಂದ ಹಿಡಿದು ಎಲ್ಲರ ಜೊತೆ ಸೌಹಾರ್ದ ಸಂಬಂಧ ಹೊಂದಿದ್ದಾರೆ. ಕಾಂಗ್ರೆಸ್ ಗೆ ಚುನಾವಣೆ ನಡೆಸಲು ಅಗತ್ಯವಾದ ಸಂಪನ್ಮೂಲ ಸಂಗ್ರಹಿಸುವ ಸಾಮರ್ಥ್ಯ ಇರುವ ವ್ಯಕ್ತಿ. ಇದಕ್ಕಾಗಿಯೇ ಅವರನ್ನು ಇತ್ತೀಚೆಗೆ ಪಕ್ಷದ ಖಜಾಂಚಿಯಂಥ ಮಹತ್ವದ ಹುದ್ದೆಗೆ ನೇಮಿಸಲಾಗಿದೆ. ಹಲವು ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಗೆ ಹಣ, ಅಧಿಕಾರ, ತೋಳ್ಬಲದಲ್ಲಿ ಹಲವು ಪಟ್ಟು ಶಕ್ತಿಯುತವಾಗಿರುವ ಬಿಜೆಪಿಗೆ ಸಮನಾಗಿ ಹೋರಾಟ ನಡೆಸಲು ಅಗತ್ಯ ಸಂಪನ್ಮೂಲವಿಲ್ಲ. ದೀರ್ಘ ಕಾಲದಿಂದಲೂ ಗಾಂಧಿ ಕುಟುಂಬದೊಂದಿಗೆ ಒಡನಾಟ ಹೊಂದಿರುವ ಅಹ್ಮದ್ ಪಟೇಲ್ ಅವರು ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಉದ್ಯಮ ವಲಯ ಹಾಗೂ ಪಕ್ಷದ ನಡುವೆ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದಿನ ಉಪಕಾರವನ್ನು ನೆನಪಿಸಿಕೊಡುವ ಮೂಲಕ ಪಕ್ಷದ ಪರವಾಗಿ ಸಂಪನ್ಮೂಲ ಸಂಗ್ರಹಿಸಲು ಅಹ್ಮದ್ ಪಟೇಲ್ ಗೆ ಪಕ್ಷದಲ್ಲಿ ಖಜಾಂಚಿಯಂಥ ಮಹತ್ವದ ಹುದ್ದೆ ನೀಡಲಾಗಿದೆ.
ಇದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಮೋದಿ-ಶಾ ಜೋಡಿಯು ಕಾಂಗ್ರೆಸ್ ಬೇರುಗಳನ್ನು ಕೀಳುವ ನಿಟ್ಟಿನಲ್ಲಿ ಅಹ್ಮದ್ ಪಟೇಲ್ ಗಾಗಿ ಹೊಂಚು ಹಾಕಿ ಕುಳಿತಿದೆ. ಇದರಿಂದ ವೈಯಕ್ತಿಕ ಹಗೆ ಸಾಧನೆಯ ಜೊತೆಗೆ ಎದುರಾಳಿಯನ್ನು ಮತ್ತಷ್ಟು ನಿತ್ರಾಣಗೊಳಿಸುವ ತಂತ್ರವಿದೆ. ಇದಕ್ಕೆ ಸಾರ್ವಜನಿಕವಾಗಿ ಭ್ರಷ್ಟಾಚಾರದ ವಿರುದ್ಧ ಸಮರ ಎಂಬ ಲೇಪನ ಬಳಿಯುವ ಕುತಂತ್ರ ಅಡಕವಾಗಿದೆ. ಆದರೆ, ಚುನಾವಣಾ ಬಾಂಡ್ ಗಳ ಮೂಲಕ ಅಕ್ರಮವಾಗಿ ಸಾವಿರಾರು ಕೋಟಿ ರುಪಾಯಿ ಅನುದಾನ ಸಂಗ್ರಹಿಸಿರುವ ಬಿಜೆಪಿಯ ಆಟಗಳು ಸಾಮಾನ್ಯ ಜನರಿಗೆ ಅರ್ಥವಾಗುತ್ತಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಪಣ ತೊಟ್ಟಿದ್ದೇವೆ ಎಂದು ಮೋದಿ-ಶಾ ಘೋಷಿಸುತ್ತಿದ್ದಾರೆಯೇ ವಿನಾ ವಾಸ್ತವದಲ್ಲಿ ಅಂಥ ಯಾವುದೇ ಕೆಲಸ ನಡೆಯುತ್ತಿಲ್ಲ. ವೈರತ್ವ, ಅಧಿಕಾರದ ವ್ಯಾಪಕ ದುರ್ಬಳಕೆ ಮೋದಿ-ಶಾ ಜೋಡಿಯ ಹಾಲ್ ಮಾರ್ಕ್ ಎಂಬುದು ಹಾಲಿನಷ್ಟೇ ಸ್ಪಷ್ಟ.