Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಟಿವಿ ಪತ್ರಕರ್ತರೇಕೆ ಭ್ರಷ್ಟರಾಗುತ್ತಾರೆ?

ಸುದ್ದಿವಾಹಿನಿಗಳ ಕುರಿತು ಹೊರಗಿನವರು ಟೀಕೆ ಮಾಡುವುದು ಟೊಳ್ಳೇ ಆಗಿರುವ ಸಾಧ್ಯತೆ ಇರುತ್ತದೆ.
ಟಿವಿ ಪತ್ರಕರ್ತರೇಕೆ ಭ್ರಷ್ಟರಾಗುತ್ತಾರೆ?
Pratidhvani Dhvani

Pratidhvani Dhvani

May 17, 2019
Share on FacebookShare on Twitter

ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ, ಕೆಲ ಟಿವಿ ಪತ್ರಕರ್ತರ ಬಂಧನ, ಮಾಧ್ಯಮದ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ. ಸುದ್ದಿ ಮಾಡುವ ಪತ್ರಕರ್ತರೇ ಸುದ್ದಿಯಾಗುತ್ತಿರುವುದು, ಅಪರಾಧಿಗಳ ಸ್ಥಾನದಲ್ಲಿ ನಿಲ್ಲುತ್ತಿರುವುದು ಪತ್ರಿಕಾವಲಯದಲ್ಲಿ ಆತಂಕ ಮೂಡಿಸಿದೆ. ವಿಚಿತ್ರವೆಂದರೆ ಪತ್ರಿಕಾ ಮಾಧ್ಯಮಕ್ಕೆ ಹೋಲಿಸಿದರೆ, ಈ ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿದೆ. ಜೊತೆಗೆ ಅಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಗುಸುಗುಸು ಹಿಂದೆಂದಿಗಿಂತಲೂ ಹೆಚ್ಚಿದೆ. ಹಾಗಾದರೆ, ಪತ್ರಕರ್ತರು ಭ್ರಷ್ಟರಾಗುವಲ್ಲಿ ವಾಹಿನಿಗಳ ಪಾತ್ರವಿದೆಯೇ? ಇದ್ದರೆ ವಾಹಿನಿಗಳಪಾತ್ರ ಎಷ್ಟರಮಟ್ಟದ್ದು ಎಂಬುದನ್ನು ಅರಿಯುವ ಪ್ರಯತ್ನ ಇಲ್ಲಿದೆ.

ಹೆಚ್ಚು ಓದಿದ ಸ್ಟೋರಿಗಳು

ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮಾತ್ರ PSI ಹಗರಣ ಬಗ್ಗೆ ನಿಷ್ಪಕ್ಷಪಾತ ತನಿಖೆ ಸಾಧ್ಯ : ರಾಹುಲ್‌ ಗಾಂಧಿ

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

ಶಾಸಕ ಜಮೀರ್ ಅಹ್ಮದ್ಗೆ ಎಸಿಬಿ ಶಾಕ್

ಸುದ್ದಿವಾಹಿನಿಗಳಿಗೆ ಸಂಬಂಧಿಸಿ ಬಹುತೇಕರು ನಡೆಸುವ ಟೀಕೆ ಹೊರಗಿನಿಂದ ನಿಂತುಕೊಂಡು, ಅವರಿವರು ಹೇಳಿದ ಮಾತುಗಳನ್ನು ಕೇಳಿಕೊಂಡು, ಅವುಗಳನ್ನು ಒಂದಿಷ್ಟೂ ಪರಾಮರ್ಶಿಸದೆ ಏಕಮುಖವಾಗಿರುತ್ತದೆ. ಆದರೆ ಈಗ ನಡೆಯ ಬೇಕಿರುವುದು ಸುದ್ದಿವಾಹಿನಿಗಳ ಒಳಗೆ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಮಾಣಿಕ ಪತ್ರಕರ್ತರ ನೈಜ ಮಾತುಗಳ ವಸ್ತುನಿಷ್ಠ ವಿಶ್ಲೇಷಣೆ. ಇಂತಹ ಒಂದು ಸಣ್ಣ ಪ್ರಯತ್ನ ಇಲ್ಲಿದೆ.

ಕನ್ನಡದ ಮೊತ್ತ ಮೊದಲ ಪೂರ್ಣ ಪ್ರಮಾಣದ ಸುದ್ದಿ ವಾಹಿನಿ ಟಿವಿ 9. ಪತ್ರಕರ್ತರ ಒಡೆತನದದ್ದೇ ಎಂಬ ಘೋಷಣೆಯೊಂದಿಗೆ ಈ ಸುದ್ದಿವಾಹಿನಿ 2006 ರಲ್ಲಿ ಆರಂಭಗೊಂಡಿತು. ನಂತರ 2008 ರಲ್ಲಿ ರಾಜೀವ್ ಚಂದ್ರಶೇಖರ್ ಒಡೆತನದ ಸುವರ್ಣ ನ್ಯೂಸ್ ಪ್ರಸಾರ ಆರಂಭಿಸಿತ್ತು. 2010 ರ ನಂತರದಲ್ಲಿ ಸುದ್ದಿ ವಾಹಿನಿಗಳ ಶಕೆಯೇ ಆರಂಭವಾಯಿತು ಎನ್ನಬಹುದು. ಕಸ್ತೂರಿ ನ್ಯೂಸ್, ಸಮಯ ನ್ಯೂಸ್, ಜನಾಶ್ರೀ, ಪಬ್ಲಿಕ್ ಟಿವಿ, ರಾಜ್ ನ್ಯೂಸ್, ಪ್ರಜಾ ಟಿವಿ ಹೀಗೆ ಒಂದಾದ ಮೇಲೊಂದು ವಾಹಿನಿಗಳು ಮಾಧ್ಯಮಲೋಕವನ್ನು ಪ್ರವೇಶಿಸಿದವು. ಇದರಲ್ಲಿ ಹೆಚ್ಚಿನವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ರಾಜಕೀಯ ವ್ಯಕ್ತಿಗಳ ಮಾಲೀಕತ್ವಕ್ಕೆ ಸೇರಿದವು.

ಕನ್ನಡದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ವಾಹಿನಿಗಳು

  1. ಟಿವಿ 9
  2. ಪಬ್ಲಿಕ್ ಟಿವಿ
  3. ಸುವರ್ಣ ನ್ಯೂಸ್
  4. ನ್ಯೂಸ್ 18
  5. ಪವರ್ ಟಿವಿ
  6. ಪ್ರಜಾ ಟಿವಿ
  7. ದಿಗ್ವಿಜಯ
  8. ಕಸ್ತೂರಿ
  9. ರಾಜ್ ನ್ಯೂಸ್
  10. ಬಿ ಟಿವಿ
  11. ಸಮಯ
  12. ಟಿವಿ 5
  13. ನ್ಯೂಸ್ ಎಕ್ಸ್

ಪ್ರಸಾರ ಸ್ಥಗಿತಗೊಳಿಸಿರುವ ವಾಹಿನಿಗಳು

  1. ಜನಶ್ರೀ
  2. ಸುದ್ದಿ ಟಿವಿ
  3. ಫೋಕಸ್ ಟಿವಿ
  4. ಸ್ವರಾಜ್ ಇಂಡಿಯಾ
  5. ಟಿವಿ 1
  6. ಜಿ -6

ಒಂದಿಷ್ಟು ವಿಶ್ಲೇಷಣೆಗಳು

ಮುಚ್ಚಲ್ಪಟ್ಟ ಸುದ್ದಿವಾಹಿನಿಗಳಿಂದ ಮಾಜಿ ಪತ್ರಕರ್ತರೆನಿಸಿಕೊಂಡರವ ಮಾತುಗಳನ್ನು ಆಧರಿಸಿ ಇಲ್ಲಿ ಒಂದೆರಡು ಚಾನೆಲ್ಗಳ ಹುಟ್ಟು-ಗೆಲುವು-ಸೋಲಿನ ಚರ್ಚೆ ಇದೆ.

ರೆಡ್ಡಿ ಸಹೋದರರ ಜನಶ್ರೀ ವಾಹಿನಿ

ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಮಾಲಕತ್ವದ್ದು ಎನ್ನಲಾಗಿದ್ದ ಜನಶ್ರೀ ಸುದ್ದಿ ಸಂಸ್ಥೆ 2011, ಫೆಬ್ರವರಿಯಲ್ಲಿ ಕಾರ್ಯಾರಂಭಿಸಿತು. ಅದು ಗಣಿ ಹಣ ರೆಡ್ಡಿಗಳ ಕೈಯಲ್ಲಿ ಯಥೇಚ್ಛವಾಗಿ ಹರಿದಾಡುತ್ತಿದ್ದ ಕಾಲ. ರವಿ ಬೆಳಗೆರೆ ಸಂಪಾದಕತ್ವದಲ್ಲಿ ಮುನ್ನಡೆಯಲಿದೆ ಎಂದು ಗುಸುಗುಸು ಕೇಳಿ ಬರುತ್ತಿದ್ದಾಗ, ಬೆಳಗೆರೆಯ ಗರಡಿಯಲ್ಲಿ ಪಳಗಿದ ಅನಂತ ಚಿನಿವಾರ್ ಅದರ ಸಾರಥ್ಯವನ್ನು ವಹಿಸಿದ್ದರು. ಉದ್ಯೋಗಿಗಳಿಗೆ ಕೇಳಿದ್ದಕ್ಕಿಂತ ತುಸು ಹೆಚ್ಚೇ ಸಂಬಳವನ್ನು ನಿಗದಿಪಡಿಸುತ್ತಾರೆ, ಅತೀ ಹೆಚ್ಚು ಬಂಡವಾಳ ಹೂಡಿದ್ದಾರೆ ಎಂಬುದು ಮಾಧ್ಯಮ ಲೋಕದಲ್ಲಿ ಅಂದಿನ ಗಾಸಿಪ್ ಗಳಲ್ಲಿ ಒಂದಾಗಿತ್ತು. ಆದರೆ ಚಿನಿವಾರ್ ಆರಂಭದಲ್ಲಿ ರೆಡ್ಡಿಗಳ ಚಾನಲ್ ಎಂದು ಮೂಗುಮುರಿಯುತ್ತಿದ್ದವರೂ ಚಾನಲ್ ನೋಡುವಂತೆ ಮಾಡಿದ್ದರು. ಸುದ್ದಿ ಆಯ್ಕೆ, ಸಂದರ್ಶನಗಳು, ಎಲ್ಲವೂ ಜನಾಶ್ರೀಯತ್ತ ಮುಖಮಾಡುವಂತೆ ಮಾಡುತ್ತಿತ್ತು. ಎಲ್ಲಾ ವಾಹಿನಿಗಳಂತೆ ಇದು ನಿತ್ಯ ಭವಿಷ್ಯಕ್ಕೆ ಜ್ಯೋತಿಷಿಗಳನ್ನು ಕೂರಿಸದೆ, ಆ ಸಮಯದಲ್ಲಿ ಉದ್ಯೋಗ ವಾರ್ತೆ ಬಿತ್ತರಿಸಿತು. ಕನ್ನಡದ ಜನಪ್ರಿಯ ಧಾರವಾಹಿಗಳಾದ ಗುಡ್ಡೆದ ಭೂತ, ಮಾಲ್ಗುಡಿ ಡೇಸ್ ಮರಳಿ ಕನ್ನಡಿಗರ ಮನೆಯಲ್ಲಿ ಪ್ರಸಾರವಾಯಿತು. ಸುದ್ದಿ ವಾಹಿನಿಗಳ ಸ್ವರಚಿತ ಸ್ಥಿರ ಮಾದರಿಯನ್ನು ಮುರಿದೂ ಟಿ ಆರ್ ಪಿ ಯನ್ನು ಹೆಚ್ಚಿಸಿಕೊಂಡು ಮುನ್ನುಗ್ಗುತ್ತಿತ್ತು.

ಆದರೆ ಈ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ. ರೆಡ್ಡಿಯ ಬಂಧನದ ನಂತರ ವಾಹಿನಿ ಅಧಃಪತನದ ಹಾದಿ ಹಿಡಿಯತೊಡಗಿತು. ಶ್ರೀರಾಮುಲು ಹೊಸ ಪಕ್ಷ ಸ್ಥಾಪಿಸಿದಾಗ ವಾಹಿನಿ ಅದರ ಮುಖವಾಣಿಯಾಯಿತು. ಟಿ ಆರ್ ಪಿ ಕುಸಿಯತೊಡಗಿತು. ಅದರ ಪರಿಣಾಮ ವಾಹಿನಿಗೆ ಜಾಹಿರಾತು ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತಾಯಿತು. ನೌಕರರಿಗೆ ಸಂಬಳ ನೀಡುವುದೂ ದುಸ್ತರವಾಗತೊಡಗಿತು. ಇನ್ನೇನು ಮುಚ್ಚಿಯೇ ಹೋಯಿತು ಎನ್ನುವಾಗ ಅಲ್ಲಿನ ಉದ್ಯೋಗಿಗಳೆಲ್ಲರೂ ಸೇರಿ ಅದನ್ನು ರಿ-ಲಾಂಚ್ ಮಾಡಿಯೂ ಬಿಟ್ಟರು. ಅಷ್ಟರಲ್ಲಿ ಅಲ್ಲಿನ ಮುಖ್ಯ ಕಾರ್ಯ ನಿರ್ವಾಹಕ ಬ್ಲಾಕ್ ಮೇಲ್ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದು, ವಾಹಿನಿಗೆ ಕಳಂಕವಾಗಿ ಅಂಟಿಕೊಂಡುಬಿಟ್ಟಿತು. ಅಲ್ಲಿಂದ ಮುಂದೆ ಜನಾಶ್ರೀ ಜನ ಮನಕ್ಕೆ ತಲುಪಲೇ ಇಲ್ಲ. ಜನ ಮನಕ್ಕೆ ದನಿಯಾಗುವ ಅದರ ಪ್ರಯತ್ನ ಅಲ್ಲಿಯೇ ಕಮರಿತು.

‘ಸಮಯ’ದಲ್ಲಿ ಮುಗಿಯದ ಕಷ್ಟಗಳ ಸರಮಾಲೆ

2010 ರಲ್ಲಿ ಪ್ರಸಾರ ಆರಂಭಿಸಿದ ಸಮಯ ಟಿವಿ ಹಲವಾರು ಏಳುಬೀಳುಗಳನ್ನು ಕಂಡು ಪ್ರಪ್ರಥಮವಾಗಿ ಮುಚ್ಚಲ್ಪಟ್ಟ ಕನ್ನಡದ ಸುದ್ದಿ ವಾಹಿನಿ ಎಂದು ಗುರುತಿಸಲ್ಪಟ್ಟರೂ ಇಗ ಮತ್ತೆ ರೀ ಲಾಂಚ್ ಗೊಂಡಿದೆ. ಪ್ರಸಕ್ತ ಸರ್ಕಾರದಲ್ಲಿ ಅರಣ್ಯ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಆರಂಭಿಸಿದ ಈ ವಾಹಿನಿ ನಂತರ ಕೈಯಿಂದ ಕೈಗೆ ಹಸ್ತಾಂತರಗೊಂಡಿತು. ಮಾಜಿ ಕೈಗಾರಿಕಾ ಮಂತ್ರಿ ಬಿಜೆಪಿಯ ಮುರುಗೇಶ್ ನಿರಾಣಿಯವರೂ ಸ್ವಲ್ಪ ಸಮಯ ಈ ವಾಹಿನಿಯ ಉಸ್ತುವಾರಿ ವಹಿಸಿದ್ದರು.

ಈ ವಾಹಿನಿ ಹಲವು ತಿಂಗಳು ತನ್ನ ನೌಕರರಿಗೆ ಸಂಬಳವನ್ನೇ ನೀಡದೆ ಸತಾಯಿಸಿತು. ಬೇರೆ ವಾಹಿನಿಗಳಿಗೆ ಕೆಲವರು ವಲಸೆಯೂ ಹೋದರು. ಎಲ್ಲಿಯೂ ಹೋಗಲಾಗದವರು ಅಲ್ಲಿ ನಿಯಮಿತವಾಗಿ ಸಂಬಳ ಸಿಗದೆ, ಪರಿಪಾಟಲು ಪಡಬೇಕಾಯಿತು. ಈ ನಡುವೆ 2013 ರಲ್ಲಿ ಕಂಪನಿ ಲಾಕ್ಔಟ್ ಕೂಡ ಆಯಿತು. 300 ಕ್ಕೂ ಅಧಿಕ ಉದ್ಯೋಗಿಗಳು ಬೀದಿಗೆ ಬಿದ್ದರು. ಇದರ ನಂತರವೂ ಚುನಾವಣೆಯ ಸಮಯಕ್ಕೆ ವಾಹಿನಿ ಮತ್ತೆ ಪುನಃ ತನ್ನ ಕಾರ್ಯಾರಂಭಿಸಿತು. ಈಗಲೂ ಟಿಆರ್ ಶಿವಪ್ರಸಾದ್ ನೇತೃತ್ವದಲ್ಲಿ ಚಾನೆಲ್ ಕಾರ್ಯ ನಿರ್ವಹಿಸುತ್ತಿದೆ.

ಸದ್ದಿಲ್ಲದೆ ಸರಿದ ಸುದ್ದಿ ಟಿವಿ

ಮಾಧ್ಯಮಲೋಕದಲ್ಲಿ ಪಳಗಿರುವ ಶಶಿಧರ್ ಭಟ್ ನೇತೃತ್ವದಲ್ಲಿ ಆರಂಭವಾದ ಸುದ್ದಿ ಟಿವಿಯ ಬಗ್ಗೆ ಕನ್ನಡಿಗರಿಗೆ ನಿರೀಕ್ಷೆಗಳಿದ್ದವು. ಚಾನೆಲ್ ನಲ್ಲಿ ಕರ್ತವ್ಯ ನಿರ್ವಹಿಸಿದ ಪತ್ರಕರ್ತರ ಪ್ರಕಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಅತಿರಥ ಮಹಾರಥ ಮಂತ್ರಿಗಳೆಲ್ಲಾ ಈ ಚಾನೆಲ್ ನಲ್ಲಿ ಹೂಡಿಕೆ ಹೂಡಿದ್ದರು. ಭಟ್ಟರು ಆಯ್ದ ತಂಡ ಕಟ್ಟಿದ್ದರೂ, ಸದ್ದು ಮಾಡುವ ಮೊದಲೇ ಅದರ ಉಸಿರೇ ನಿಂತು ಹೋಯಿತು. ಆರ್ಥಿಕ ಮುಗ್ಗಟ್ಟಿನಿಂದಾಗಿ ವಾಹಿನಿಯನ್ನು ಮುಚ್ಚಬೇಕಾಯಿತು.

`ಭಟ್ಟರು ಉತ್ತಮ ಪತ್ರಕರ್ತರು. ಆದರೆ ಅವರು ಮಾರ್ಕೆಟಿಂಗ್ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು. ಆದರೆ ಅವರಿಗೆ ಮಾರ್ಕೆಟಿಂಗ್ ತಂತ್ರಗಾರಿಕೆ ಗೊತ್ತಿರಲಿಲ್ಲ. ಜ್ಯೋತಿಷ್ಯ ಬೇಡ ಎಂದು ಖಡಾಖಂಡಿತವಾಗಿ ತೀರ್ಮಾನ ತೆಗೆದುಕೊಂಡರು. ಇದು ಉತ್ತಮವಾದುದೆ. ಜ್ಯೋತಿಷ್ಯ ಎಂದರೆ ವಾಹಿನಿಗಳಿಗೆ ಟಿ ಆರ್ ಪಿ ಆದಾಯದ ಮೂಲ. ಆದರೆ ಅದರ ಬದಲಿಗೆ ಆದಾಯ ತರುವಂಥ ಬೇರೆ ಏನು? ಎಂದರೆ ಅದಕ್ಕೆ ಉತ್ತರವಿರಲಿಲ್ಲ. ಇದರೊಂದಿಗೆ ವಿವಿಧ ಆಂತರಿಕ ಕಾರಣಗಳಿಂದಲೂ ವಾಹಿನಿ ಮುಚ್ಚುವ ಸ್ಥಿತಿಗೆ ಬಂತು’ ಎನ್ನುತ್ತಾರೆ ಭಟ್ ಜತೆಗೆ ಕೆಲಸ ಮಾಡಿದ ಪತ್ರಕರ್ತರು.

ಈ ಸಂಸ್ಥೆ ಇಂದಿಗೂ ಹಲವಾರು ಪತ್ರಕರ್ತರಿಗೆ ಸಂಬಳ ಉಳಿಸಿಕೊಂಡಿದೆ. ಅಲ್ಲಿ ಕೆಲಸ ಮಾಡಿದ್ದ ಪತ್ರಕರ್ತರು ಈಗಲೂ ಜೀವನೋಪಾಯಕ್ಕೆ ಪರಿಪಾಟಲು ಪಡುತ್ತಿದ್ದಾರೆ.

‘ಫೋಕಸ್’ನಿಂದ ಅತಂತ್ರರಾದ ಪತ್ರಕರ್ತರು

ಮಹಿಳಾ ನೇತೃತ್ವದಲ್ಲಿ ಆರಂಭಗೊಂಡ, ಸಂಪಾದಕರನ್ನು ಫೇಸ್‌ಬುಕ್ ಮೂಲಕ ಆಯ್ಕೆ ಮಾಡಿಕೊಂಡು ದಕ್ಷಿಣ ಭಾರತಕ್ಕೆ ಕಾಲಿಟ್ಟದ್ದು ಫೋಕಸ್ ಟಿವಿ. ಆಯಕಟ್ಟಿನ ಸ್ಥಾನಗಳು ಮಹಿಳೆಯರಿಗೇ ಮೀಸಲು ಎಂಬ ನೀತಿಯಡಿ ಜ್ಯೋತಿ ಇರ್ವತ್ತೂರು, ರಾಧಾ ಹಿರೇಗೌಡರ್ ಮುಂತಾದವರ ನೇಮಕವೂ ಆಗಿತ್ತು. ಮಾಧ್ಯಮ ಲೋಕದಲ್ಲಿ ಆಯಕಟ್ಟಿನ ಸ್ಥಾನದಲ್ಲಿ ಪುರುಷರ ಪಾತ್ರವೇ ಹೆಚ್ಚಾಗಿರುವಾಗ, ಮಹಿಳೆಯರನ್ನು ಕಡೆಗಣಿಸುತ್ತಿದ್ದಾರೆ ಎಂಬ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದ್ದಾಗ, ಮಹಿಳೆಯರಿಗೂ ಸಮಾನತೆ ಸಿಕ್ಕಿತು, ಅವರೂ ವಾಹಿನಿಗಳಲ್ಲಿ ಮುಖ್ಯ ಹುದ್ದೆಗಳನ್ನು ನಿಭಾಯಿಸಬಲ್ಲರು ಎಂದು ಸಾಧಿಸುವ ಮೊದಲೇ ವಾಹಿನಿಯ ಬಾಗಿಲು ಮುಚ್ಚಿತ್ತು.

“ಈ ಚಾನೆಲ್ ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಂದಿತ್ತು. ಚುನಾವಣೆಯ ನಂತರ ಲಾಕ್ ಔಟ್ ಆಗಿತ್ತು. ತನ್ನ ನೌಕರರಿಗೆ ಇನ್ನೂ ಮೂರು ನಾಲ್ಕು ತಿಂಗಳ ವೇತನ ಪಾವತಿಸದೆ ಸತಾಯಿಸುತ್ತಿದೆ. ನೌಕರರು ಕೋರ್ಟ್ ಮೊರೆ ಹೋಗಿದ್ದಾರೆ. ನೂರಕ್ಕೂ ಅಧಿಕ ಪತ್ರಕರ್ತರು ಅತಂತ್ರರಾಗಿದ್ದಾರೆ,” ಎನ್ನುತ್ತಾರೆ ವಾಹಿನಿಯಿಂದ ಸಂಕಷ್ಟಕ್ಕೊಳಗಾದ ಪತ್ರಕರ್ತೆ.

ಚುನಾವಣೆಗೋಸ್ಕರ ಬಂದ ‘ಸ್ವರಾಜ್ ಎಕ್ಸ್‌ಪ್ರೆಸ್’

ಹೆಚ್ಚಿನವರಿಗೆ ಸ್ವರಾಜ್ ನ್ಯೂಸ್ ಎಂಬ ಸುದ್ದಿ ವಾಹಿನಿಯೊಂದು ಕನ್ನಡದಲ್ಲಿತ್ತು ಎಂದು ಗೊತ್ತಾದದ್ದೇ ಅದು ಮುಚ್ಚಿದ ಸುದ್ದಿ ಬಂದಾಗ. 2018 ರ ಜನವರಿಯಲ್ಲಿ ಆರಂಭಗೊಂಡ ಈ ವಾಹಿನಿ ಕಾರ್ಯ ನಿರ್ವಹಿಸಿದ್ದು ಕೇವಲ ಕೆಲವೇ ತಿಂಗಳುಗಳು. ಸ್ವರಾಜ್ ಎಕ್ಸ್‌ಪ್ರೆಸ್ ಎಂಬ ಹೆಸರಿನಲ್ಲಿ ಸುದ್ದಿ ಪ್ರಸಾರ ಮಾಡುತ್ತಿದ್ದ ಈ ವಾಹಿನಿ, ತನ್ನ ನೌಕರರಿಗೆ ಸರಿಯಾಗಿ ವೇತನವನ್ನೂ ಪಾವತಿಸದೆ, ಅವರಿಗೆ ಯಾವ ಮುನ್ಸೂಚನೆಯನ್ನೂ ಕೊಡದೆ ತನ್ನ ಪ್ರಸಾರವನ್ನು ಸ್ಥಗಿತಗೊಳಿಸಿಬಿಟ್ಟಿತ್ತು. ಸುಮಾರು 250 ಕ್ಕೂ ಮಿಕ್ಕಿ ಇದರ ನೌಕರರು ರಾತ್ರಿ ಬೆಳಗಾಗುವುದರೊಳಗೆ ಅತಂತ್ರರಾಗಿದ್ದರು. ಎಂಇಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಖ್ ಒಡೆತನದ ಈ ವಾಹಿನಿ ಆರ್ಥಿಕ ಮುಗ್ಗಟ್ಟಿನಿಂದ ಮುಚ್ಚಲ್ಪಟ್ಟಿತು ಎಂಬುದು ಒಂದು ವಾದವಾದರೆ, ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರಕ್ಕೋಸ್ಕರ ಆರಂಭಿಸಿ ನಂತರ ಏಕಾಏಕಿಮುಚ್ಚಿದ್ದಾರೆ ಎನ್ನುವುದು ಇನ್ನೊಂದು ವಾದಸರಣಿ.

ನ್ಯೂಸ್ ಎಕ್ಸ್, ಫೋಕಸ್, ಸ್ವರಾಜ್‌ನಂತೆಯೇ ಚುನಾವಣಾ ಸಮಯದಲ್ಲಿ ಸುದ್ದಿ ಪ್ರಸಾರ ಆರಂಭಿಸಿತು. ಸ್ವಲ್ಪ ಸಮಯದ ಹಿಂದೆ ಸುಮಾರು 30 ಹಿರಿಯ ಪತ್ರಕರ್ತರನ್ನು `ಕಾಸ್ಟ್ ಕಟ್ಟಿಂಗ್’ ನೆಪಹೂಡಿ ಏಕಾಏಕಿ ನಿಮ್ಮನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿಸಿ ಅವರನ್ನು ಬೀದಿಗೆ ತಳ್ಳಿತು. `ಚುನಾವಣೆಗೋಸ್ಕರ ವಾಹಿನಿ ಆರಂಭಿಸಿ, ಪತ್ರಕರ್ತರಿಗೆ ಬಣ್ಣ ಬಣ್ಣದ ಕನಸನ್ನು ತೋರಿಸಿ, ಹೆಚ್ಚು ವೇತನದ ಆಮಿಷವೊಡ್ಡಿ ನಂತರ ಅವರನ್ನು ಅತಂತ್ರರನ್ನಾಗಿ ಮಾಡಿ ಅವರ ಬದುಕಲ್ಲಿ ಆಟವಾಡುತ್ತಿದೆ’ ಎಂದು ಹಲವು ಪತ್ರಕರ್ತರು ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ದೊರಕುವ `ಪೇಯ್ಡ್ ನ್ಯೂಸ್’ (ಸುದ್ದಿಗಾಗಿ ಕಾಸು) ಈ ವಾಹಿನಿಗಳ ಗುರಿ ಎಂಬುದು ಕೆಲವು ನೊಂದ ಪತ್ರಕರ್ತರ ಆರೋಪ.

ಜಿ ಪರಮೇಶ್ವರ್ ಒಡೆತನದ ಜಿ-6 ಪ್ರಸಾರ ಆರಂಭಿಸಲು ಲೋಗೋ ಬಿಡುಗಡೆ ಮಾಡಿತ್ತು. ಆದರೆ ಅದು ಮುಂದುವರಿಯಲಿಲ್ಲ.

ದುಬಾರಿ ವೆಚ್ಚದ ಭರಿಸಲಾಗದೆ ಹಿಂದೆ ಸರಿದ ‘ನ್ಯೂಸ್ 1’

ನ್ಯೂಸ್ 1 ಕೆಪಿ ನಂಜುಂಡಿ ಒಡೆತನದ ಈ ವಾಹಿನಿ ಸುಮಾರು 10 ತಿಂಗವರೆಗೆ ಕಾರ್ಯ ನಿರ್ವಹಿಸಿದ್ದಿರಬಹುದು. ದುಬಾರಿ ಮೊತ್ತದ ಕ್ಯಾರೇಜ್ ಫೀಸ್ (ವಾಹಿನಿಗಳನ್ನು ಪ್ರಸಾರ ಮಾಡಬೇಕಾಗಿರುವ ವಿತರಕರಿಗೆ ವಾಹಿನಿ ಪಾವತಿಸಬೇಕಾಗಿರುವ ಹಣ) ನ್ನು ಕೇಬಲ್ ವಿತರಕರಿಗೆ ಪಾವತಿಸಲಿಕ್ಕಾಗದೆ ಚಾನೆಲ್ ಬಾಗಿಲು ಹಾಕಬೇಕಾಯಿತು, ಎಂಬುದು ವಾಹಿನಿಯನ್ನು ಹತ್ತಿರದಿಂದ ಬಲ್ಲವರ ಅಂಬೋಣ. ಆದರೆ ನೌಕರರಿಗೆ ಸರಿಯಾಗಿ ಹಣ ಪಾವತಿಸಲಾಗಿದೆ ಎನ್ನುತ್ತವೆ ಮೂಲಗಳು. ಚಾನೆಲ್ ಗಳ ಆರ್ಥಿಕ ಮುಗ್ಗಟ್ಟಿಗೆ ಈ ದುಬಾರಿ ಮೊತ್ತದ ಕ್ಯಾರೇಜ್ ಶುಲ್ಕ ಕೂಡ ಕಾರಣ. ವಾಹಿನಿಯನ್ನು ಜನರು ವೀಕ್ಷಿಸಲು ಅದು ಸೆಟ್ ಆಫ್ ಬಾಕ್ಸ್ ನಲ್ಲಿ ಅಥವಾ ಕೇಬಲ್ ನೆಟ್ ವರ್ಕ್ ನಲ್ಲಿ ಸಿಗಬೇಕು. ವಾಹಿನಿ ವೀಕ್ಷಕರ ಟಿವಿ ಸೆಟ್ ನಲ್ಲಿ ಕಾಣಿಸಿಕೊಳ್ಳಲು ವಾಹಿನಿಗಳು ಅದರಲ್ಲೂ ಸುದ್ದಿ ವಾಹಿನಿಗಳು ವಿತರಕರಿಗೆ ದುಬಾರಿ ಮೊತ್ತದ ಹಣವನ್ನು ತೆರಬೇಕು. ವಾಹಿನಿಗಳು ಅದನ್ನು ಕಂತಿನಲ್ಲಿ ಕಟ್ಟುತ್ತವೆ. ಕಂತು ಕಟ್ಟಲು ವಿಳಂಬವಾದರೆ ವಾಹಿನಿಯ ಪ್ರಸಾರವನ್ನು ಇವು ಸ್ಥಗಿತಗೊಳಿಸಬಹುದು. ಹೀಗಾಗಿ ವಾಹಿನಿಗಳಿಗೆ ಸಹಜವಾಗಿ ಆರ್ಥಿಕ ಮುಗ್ಗಟ್ಟು ಕಾಡುತ್ತದೆ. ಇದಲ್ಲದೆ ಸ್ವಂತ ಉಪಗ್ರಹ ಇಲ್ಲದ ವಾಹಿನಿಗಳು ಪ್ರಸಾರಕ್ಕಾಗಿ ಬೇರೆ ಉಪಗ್ರಹವನ್ನು ನೆಚ್ಚಿಕೊಳ್ಳಬೇಕಾಗುತ್ತದೆ. ಅದಕ್ಕೂ ಬಾಡಿಗೆ ಹಣ ಪಾವತಿಸಬೇಕಷ್ಟೆ.

`ಟ್ರೈನಿ ಪತ್ರಕರ್ತರಿಗೇನೋ ಕೆಲಸ ದೊರಕುತ್ತದೆ. ಆದರೆ ಹಿರಿಯ ಪತ್ರಕರ್ತರು ಅವರಿಗೆ ವೇತನ ಹೆಚ್ಚಾಗಿರುವ ಕಾರಣ ನೌಕರಿ ದೊರೆಯದೆ ಪರದಾಡುತ್ತಿದ್ದಾರೆ. ಆದರೆ ವಾಹಿನಿಗಳು ಅನುಭವಸ್ಥ ಪತ್ರಕರ್ತರಿಲ್ಲದೆ ಗುಣಮಟ್ಟದ ಸುದ್ದಿ ನೀಡಲಾಗದೆ ಟಿ ಆರ್ ಪಿ ಯನ್ನೂ ಪಡೆಯಲಾಗದೆ ಸೊರಗುತ್ತಿವೆ. ಇದು ಖಂಡಿತಾ ಒಳ್ಳೆಯ ಬೆಳವಣಿಗೆ ಅಲ್ಲ. ಟಿವಿ 9, ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಹೊರತುಪಡಿಸಿ ಉಳಿದ ವಾಹಿನಿಗಳಲ್ಲಿನ ಪತ್ರಕರ್ತರಿಗೆ ಅಭದ್ರತೆ ಕಾಡುತ್ತಿದೆ. ಕೆಲವು ವಾಹಿನಿಗಳಲ್ಲಿ ವೇತನವೂ ಸರಿಯಾಗಿ ಪಾವತಿಯೂ ಆಗುತ್ತಿಲ್ಲ’ ಎನ್ನುತ್ತಾರೆ ಈ ವಾಹಿನಿಗಳ ಆಟದಿಂದ ಬೇಸತ್ತ ಪತ್ರಕರ್ತೆ.

“ವಿದ್ಯುನ್ಮಾನ ಮಾಧ್ಯಮದ ಭವಿಷ್ಯವೇ ಅತಂತ್ರ ಸ್ಥಿತಿಯಲ್ಲಿದೆ. ಇಲ್ಲಿರುವ ಯಾರಿಗೂ ಮುಂದಿನ ದಿನಗಳ ಬಗ್ಗೆ ಭರವಸೆ ಇಲ್ಲ. ಪದೇ ಪದೇ ಮುಚ್ಚುತ್ತಿರುವ ವಾಹಿನಿಗಳು. ಒಂದರಿಂದ ಇನ್ನೊಂದಕ್ಕೆ ವಲಸೆ. ಅಲ್ಲಿಯೂ ಕಾಡುವ ಅದೇ ಅಭದ್ರತೆ, ಅನಿಶ್ಚಿತತೆ. ಪತ್ರಕರ್ತರು ಕಂಗಾಲಾಗಿರುವ ಈ ಸ್ಥಿತಿಯಲ್ಲಿ ಭ್ರಷ್ಟಚಾರಕ್ಕೆ ವಾಹಿನಿಗಳೆ ಪರೋಕ್ಷವಾಗಿ ಕಾರಣ ಎಂದು ಕೆಲವು ಪತ್ರಕರ್ತರು ದೂರುತ್ತಾರೆ.

“ಸಂಬಳ ಸರಿಯಾಗಿ ಪಾವತಿಸಿದರೆ ಅವರೇಕೆ ಭ್ರಷ್ಟರಾಗುತ್ತಾರೆ?” ಎಂದು ಅವರು ಪ್ರಶ್ನಿಸುತ್ತಾರೆ.

“ಕೆಲವು ವಾಹಿನಿಗಳಲ್ಲಿ ಬ್ಲಾಕ್ ಮೇಲ್ ಮಾಡಲೆಂದೇ ಪತ್ರಕರ್ತರಿದ್ದಾರೆ. ಅವರನ್ನು ವಾಹಿನಿಯೇ ನೇಮಿಸಿಕೊಳ್ಳುತ್ತದೆ. ವಾಹಿನಿಗೆ ಆದಾಯ ತರಲೆಂದೇ ಅವರು ನೇಮಕಗೊಂಡಿರುತ್ತಾರೆ” ಎಂದು ಮಾಧ್ಯಮ ಲೋಕದ ಇನ್ನೊಂದು ಮುಖವನ್ನು ಅಲ್ಲಿ ಕೆಲಸ ಮಾಡಿದ ಪತ್ರಕರ್ತರೇ ಅನಾವರಣಗೊಳಿಸುತ್ತಾರೆ.

ಸುವರ್ಣ ಸುದ್ದಿ ಚಾನೆಲ್ ಹಿರಿಯ ಪತ್ರಕರ್ತ ಆನಂದ ಪಿ ಬೈದನಮನಿಯವರ ಪ್ರಕಾರ, “ಜಾಹೀರಾತು ಮಾರುಕಟ್ಟೆಯಲ್ಲಿ ದೇಶದಲ್ಲಿಯೇ ಕರ್ನಾಟಕ 4 ನೇ ಸ್ಥಾನದಲ್ಲಿತ್ತು. ಈ ಮಾರುಕಟ್ಟೆ ಇಲ್ಲಿದ್ದ ಉದಯ ಹಾಗು ಈ ಟಿವಿಗೆ ಲಾಭದಾಯಕವಾಗಿತ್ತು. ಹೀಗಾಗಿ ಸಹಜವಾಗಿಯೇ ಸುದ್ದಿ ವಾಹಿನಿಗಳ ಕಣ್ಣು ಇಲ್ಲಿತ್ತು. ಟಿವಿ 9 ಕನ್ನಡದಲ್ಲಿ ಪ್ರಸಾರ ಆರಂಭಿಸಿ ಲಾಭ ಪಡೆದಾಗ ಸಹಜವಾಗಿಯೇ ಇತರ ವಾಹಿನಿಗಳ ಕಣ್ಣು ಕರ್ನಾಟಕದತ್ತ ನೆಟ್ಟಿತು. ಸಾಲು ಸಾಲು ಸುದ್ದಿ ವಾಹಿನಿಗಳು ಆರಂಭವಾಯಿತು. ಆದರೆ ಒಂದು ಹಂತದಲ್ಲಿ ನಾನಾ ಕಾರಣಗಳಿಂದಾಗಿ ಈ ಜಾಹೀರಾತು ಮಾರುಕಟ್ಟೆ ಕುಸಿಯಿತು. ಈ ಬಿಸಿ ಕನ್ನಡದ ಸುದ್ದಿ ವಾಹಿನಿಗಳನ್ನೂ ತಟ್ಟಿತು. ವಾಹಿನಿಗಳ ನೆಟ್ ವರ್ಕ್ ಹೊಂದಿದಂತಹ (ಉದಯ, ರಾಜ್, ಜೀ ನೆಟ್ ವರ್ಕ್ ಗಳು) ವಾಹಿನಿಗಳಿಗೆ ಇದು ಅಷ್ಟಾಗಿ ಮುಟ್ಟಲಿಲ್ಲ. ಆದರೆ ನೆಟ್ ವರ್ಕ್ ಹೊಂದಿರದ ಏಕ ಮಾಲಕತ್ವ ಹೊಂದಿದ ಇತರ ವಾಹಿನಿಗಳಿಗೆ ಇದು ಹೊಡೆತ ನೀಡಿತು.”

`ಕೆಲವು ಚಾನೆಲ್ ಗಳಲ್ಲಿ ನಿಯಮಿಯವಾಗಿ ಸಂಬಳ ಸಿಗದಾಗ ವರದಿಗಾರರು ತಾವೇ ಸ್ವತಃ ವಾಹಿನಿಗೆ ಆದಾಯ ತರಲು ಮುಂದಾದರು. ವಾಹಿನಿಯ ಮಾರ್ಕೆಟಿಂಗ್ ವಿಭಾಗವನ್ನು ತಾವೇ ಕೈಗೆತ್ತಿಕೊಂಡರು. ಆಗ ಸ್ವಾಭಾವಿಕವಾಗಿಯೇ ವೃತ್ತಿಪರತೆಯ ಕೊರೆತೆಯುಂಟಾಗುತ್ತದೆ. ವೃತ್ತಿಯ ಕುರಿತಾದ ಅಭದ್ರತೆ ಅವರನ್ನು ಕಾಡುತ್ತಿತ್ತು. ಹೀಗಾಗಿ ಅವರ ವೃತ್ತಿಪರ ನಿಲುವುಗಳು ಸಡಿಲವಾಗುತ್ತಾ ಬಂದವು” ಎನ್ನುತ್ತಾರೆ ಬೈದನಮನಿ.

“ಪೋಲಿಸರಿಗೆ ಮತ್ತು ವಕೀಲರಿಗೆ ಪತ್ರಕರ್ತರ ಬಗ್ಗೆ ಸಾತ್ವಿಕ ರೋಷವೊಂದಿರುತ್ತದೆ. ಇಂತಹ ಸಂದರ್ಭದಲ್ಲಿ ಅದನ್ನು ಅವರು ಆ ಸುದ್ದಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು, ಹೆಚ್ಚಿನ ಆಸಕ್ತಿ ವಹಿಸಿ ತನಿಖೆ ನಡೆಸುತ್ತಾರೆ. ಈ ಮೂಲಕ ತಮ್ಮ ರೋಷವನ್ನು ಹೊರಹಾಕುತ್ತಾರೆ” ಎನ್ನುತ್ತಾರೆ ಬೈದನಮನಿ.

ಆದರೆ ಕೆಲವು ಪತ್ರಕರ್ತರು ಈ ವಾದಸರಣಿಯನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಪತ್ರಕರ್ತರ ಭ್ರಷ್ಟಾಚಾರದಲ್ಲಿ ವಾಹಿನಿಯ ಪಾತ್ರ ಇಲ್ಲ. ಅದು ವ್ಯಕ್ತಿಗತವಾದದ್ದು. `ಭ್ರಷ್ಟ ಪತ್ರಕರ್ತರ ಆರೋಪ ಎದುರಿಸುತ್ತಿರುವ ಒಬ್ಬ ಪತ್ರಕರ್ತ ಟಾಪ್ 5 ವಾಹಿನಿಗಳ ಪಟ್ಟಿಯಲ್ಲಿರುವ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾತ. ಆತ ಆ ವಾಹಿನಿಯಲ್ಲಿ ಮುಖ್ಯ ಹುದ್ದೆಯಲ್ಲಿದ್ದಾನೆ. ಅಲ್ಲಿ ವೇತನವೂ ಸರಿಯಾಗಿ ಪಾವತಿಯಾಗುತ್ತಿದೆ. ಹೀಗಿದ್ದ ಮೇಲೆ ವಾಹಿನಿಯ ಪಾತ್ರ ಅಲ್ಲಿ ಏನೂ ಇಲ್ಲ’ ಎನ್ನುತ್ತಾರೆ ಇನ್ನೋರ್ವ ಹೆಸರು ಹೇಳಲಿಚ್ಛಿಸದ ಪತ್ರಕರ್ತ.

ಇವರು ಚುನಾವಣಾ ಸಮಯದಲ್ಲಿ ವಾಹಿನಿಗಳು ಹಣ ಮಾಡಲಿಕ್ಕೆಂದೇ ಹುಟ್ಟಿಕೊಳ್ಳುತ್ತವೆ ನಂತರ ಮುಚ್ಚುತ್ತವೆ ಎಂಬ ವಾದವನ್ನೂ ನಿರಾಕರಿಸುತ್ತಾರೆ. “ಚುನಾವಣೆಯಲ್ಲಿ ವಾಹಿನಿಗಳು ಹಣ ಮಾಡಬಹುದೇ ವಿನಾಃ, ಅದಕ್ಕಾಗಿ ಚಾನೆಲ್ ಕಟ್ಟಿ ಆ ವಾಹಿನಿ ಎಂಬ ಬಿಳಿಯಾನೆಯನ್ನು ಸಾಕಲು ಸಾಧ್ಯವಿಲ್ಲ. ಅದಲ್ಲದೆ ಇನ್ನೂ ಸರಿಯಾಗಿ ಸ್ಥಾಪಿತವಾಗದ ವಾಹಿನಿಗಳಿಗೆ ಹಣ ನೀಡಲು ರಾಜಕಾರಣಿಗಳೇನು ಮೂರ್ಖರಲ್ಲ. ಅವರು ಟಿ ಆರ್ ಪಿ ಇರುವ ವಾಹಿನಿಗಳಿಗೆ ಮಾತ್ರ ಹೆಚ್ಚಿನ ಹಣ ವ್ಯಯಿಸುತ್ತಾರೆ. ಪ್ರಸಾರವೇ ಆರಂಭಿಸದೆ ಯೂ ಟ್ಯೂಬ್, ಫೇಸ್ ಬುಕ್ ನಲ್ಲಿ ಕಾರ್ಯ ನಿರ್ವಹಿಸುವ ವಾಹಿನಿಗಳಿಗೆ ಅವರೇಕೆ ಹಣ ನೀಡುತ್ತಾರೆ” ಎನ್ನುತ್ತಾರೆ.

RS 500
RS 1500

SCAN HERE

don't miss it !

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ
ಅಭಿಮತ

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

by ನಾ ದಿವಾಕರ
July 5, 2022
ಪ್ರಧಾನಿ ಮೋದಿ ರ್ಯಾಲಿ ಸ್ಥಳದ ಸಮೀಪ ಸ್ಪೋಟ: ಪೊಲೀಸರು ದೌಡು!
ದೇಶ

40 ಪರ್ಸೆಂಟ್‌ ಕಮಿಷನ್‌ ವಿವಾದ: ಪ್ರಧಾನಿ ಕಚೇರಿಯಿಂದ ಕೆಂಪಣ್ಣಗೆ ಬುಲಾವ್!

by ಪ್ರತಿಧ್ವನಿ
June 28, 2022
ಮೊಹಮ್ಮದ್ ಜುಬೇರ್ ವಿರುದ್ಧ ಕ್ರಿಮಿನಲ್ ಪಿತೂರಿ, ಸಾಕ್ಷ್ಯ ನಾಶದಂತಹ ಹೊಸ ಕೇಸ್‌ ದಾಖಲಿಸಿದ ದೆಹಲಿ ಪೊಲೀಸ್!
ದೇಶ

ಮೊಹಮ್ಮದ್ ಜುಬೇರ್ ವಿರುದ್ಧ ಕ್ರಿಮಿನಲ್ ಪಿತೂರಿ, ಸಾಕ್ಷ್ಯ ನಾಶದಂತಹ ಹೊಸ ಕೇಸ್‌ ದಾಖಲಿಸಿದ ದೆಹಲಿ ಪೊಲೀಸ್!

by ಪ್ರತಿಧ್ವನಿ
July 2, 2022
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶಿಂಧೆ ಪ್ರಮಾಣ ವಚನ ಸ್ವೀಕಾರ
ದೇಶ

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶಿಂಧೆ ಪ್ರಮಾಣ ವಚನ ಸ್ವೀಕಾರ

by ಪ್ರತಿಧ್ವನಿ
June 30, 2022
ಫ್ಯಾಕ್ಟ್‌ ಚೆಕ್ಕರ್‌ ಜುಬೇರ್‌ ಕೂಡಲೇ ಬಿಡುಗಡೆ ಮಾಡಿ: ಸಂಪಾದಕರ ಮಂಡಳಿ ಆಗ್ರಹ
ದೇಶ

ಫ್ಯಾಕ್ಟ್‌ ಚೆಕ್ಕರ್‌ ಜುಬೇರ್‌ ಕೂಡಲೇ ಬಿಡುಗಡೆ ಮಾಡಿ: ಸಂಪಾದಕರ ಮಂಡಳಿ ಆಗ್ರಹ

by ಪ್ರತಿಧ್ವನಿ
June 28, 2022
Next Post
ನಿಮ್ಮ ಧರ್ಮಸ್ಥಳ ಪ್ರವಾಸವನ್ನು ದಯವಿಟ್ಟು ಒಂದು ತಿಂಗಳು  ಮುಂದಕ್ಕೆ ಹಾಕಿ!

ನಿಮ್ಮ ಧರ್ಮಸ್ಥಳ ಪ್ರವಾಸವನ್ನು ದಯವಿಟ್ಟು ಒಂದು ತಿಂಗಳು ಮುಂದಕ್ಕೆ ಹಾಕಿ!

ಸರ್ವಾಧಿಕಾರಿಗಳಿಬ್ಬರ ಸಿಂಹಾಸನ ಮೋಹ ಮತ್ತು ನೆತ್ತರು ಮೆತ್ತಿದ ಜನತಂತ್ರ

ಸರ್ವಾಧಿಕಾರಿಗಳಿಬ್ಬರ ಸಿಂಹಾಸನ ಮೋಹ ಮತ್ತು ನೆತ್ತರು ಮೆತ್ತಿದ ಜನತಂತ್ರ

ಭಿನ್ನ ಅಭಿಪ್ರಾಯ ದಾಖಲಿಸಿಕೊಳ್ಳದ ಇ.ಸಿ ವಿರುದ್ಧ ಮುನಿಸಿಕೊಂಡ ಆಯುಕ್ತ ಲಾವಸ

ಭಿನ್ನ ಅಭಿಪ್ರಾಯ ದಾಖಲಿಸಿಕೊಳ್ಳದ ಇ.ಸಿ ವಿರುದ್ಧ ಮುನಿಸಿಕೊಂಡ ಆಯುಕ್ತ ಲಾವಸ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist