ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಿಂದಿನ ಸರ್ಕಾರ ಯೋಜನೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಿ ಎಂದು ಆದೇಶ ಹೊರಡಿಸಿಬಿಟ್ಟರು. ಅಂತೆಯೇ ಮಂಗಳವಾರ (30.07.2019) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರಾಜ್ಯಾದ್ಯಂತ ಆಚರಿಸುತ್ತಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದ್ದಾರೆ.
ಕೊಡಗಿನ ವಿರಾಜಪೇಟೆ ಶಾಸಕರಾದ ಕೆ. ಜಿ. ಬೋಪಯ್ಯನವರು ಪ್ರತಿ ವರ್ಷ ರಾಜ್ಯದಲ್ಲಿ ಸರ್ಕಾರದ ಕಾರ್ಯಕ್ರಮವನ್ನಾಗಿ ಆಚರಿಸುತ್ತಿರುವ ಟಿಪ್ಪು ಜಯಂತಿಯನ್ನು ಕೂಡಲೇ ರದ್ದುಪಡಿಸಬೇಕೆಂದು ಸರ್ಕಾರಕ್ಕೆ ಮನವಿಯನ್ನು ಮಾಡಿಕೊಂಡಿದ್ದರು. ಇದರ ಬಗ್ಗೆ ಬೋಪಯ್ಯನವರು “ಟಿಪ್ಪು ಜಯಂತಿ ಆಚರಣೆ ವಿರುದ್ಧ ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ಕೊಡಗು ಜಿಲ್ಲೆಯಲ್ಲಿ ತೀವ್ರ ಪ್ರತಿಭಟನೆ ನಡೆದಿದ್ದು, ಜಿಲ್ಲೆಯ ಜನರೆಲ್ಲರೂ ಸದರಿ ಕಾರ್ಯಕ್ರಮದ ಆಚರಣೆಯ ವಿರುದ್ಧ ಇದ್ದಾರೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದರಿಂದ ಜಿಲ್ಲೆಯಲ್ಲಿ ಸಾವುಗಳು ಸಂಭವಿಸುತ್ತಿದ್ದು, ಸಾರ್ವಜನಿಕರ ಮತ್ತು ಸರ್ಕಾರಿ ಆಸ್ತಿ-ಪಾಸ್ತಿಗಳಿಗೆ ಅಪಾರ ಹಾನಿಯಾಗಿರುತ್ತದೆ. ಅಲ್ಲದೆ, ಇಂದಿಗೂ ಜಿಲ್ಲೆಯಲ್ಲಿ ಅಶಾಂತಿಯ ವಾತವರಣ ಇದ್ದು, ಜನರ ನಡುವಿನ ಸಾಮರಸ್ಯ ಹದಗೆಟ್ಟಿದೆ. ಆದ್ದರಿಂದ ಸದರಿ ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುವ ಆದೇಶವನ್ನು ಕೂಡಲೇ ರದ್ದುಪಡಿಸಲು ಅಗತ್ಯ ಆದೇಶ ನೀಡಬೇಕೆಂದು ಕೋರುತ್ತೇನೆ” ಎಂದು ಪತ್ರ ಬರೆದಿದ್ದರು. ಬೋಪಯ್ಯನವರ ಮನವಿಗೆ ಸರ್ಕಾರ ತಕ್ಷಣ ಸ್ಪಂದನೆ ನೀಡಿರುವುದರಿಂದ ರಾಜ್ಯ ಬಿಜೆಪಿ ನಾಯಕರೆಲ್ಲರೂ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ನಾಯಕರು ಸರ್ಕಾರದ ನಿರ್ಧಾರವನ್ನು “ದ್ವೇಷ ರಾಜಕಾರಣದ’’ ಆರಂಭ ಎಂದೆಲ್ಲಾ ಟೀಕಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೂ ಟಿಪ್ಪುವನ್ನು ಸ್ವಾತಂತ್ರ ಹೋರಾಟಗಾರ ಎಂದೆಲ್ಲಾ ಬಣ್ಣಿಸಿ, ಬಿಜೆಪಿಯ ಕೋಮು ರಾಜಕಾರಣಕ್ಕೆ ಟಿಪ್ಪು ಜಯಂತಿ ಬಲಿಯಾಗಿದೆ ಎಂದಿದ್ದಾರೆ.
ಟಿಪ್ಪು ಸುಲ್ತಾನ್ ಒಂದು ಧರ್ಮಕ್ಕೆ ಸೇರಿದವರಲ್ಲ. ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಸೇರಿರುವ ಆಸ್ತಿ. ಈ ಕಾರಣಕ್ಕಾಗಿಯೇ ಟಿಪ್ಪು ಜಯಂತಿ ಆಚರಣೆಯ ನಿರ್ಧಾರ ಕೈಗೊಂಡಿದ್ದೆ. ಜಾತಿ-ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆಯಲು ಹೊರಟಿರುವ ಬಿಜೆಪಿಯ ನಡೆ ಅನಿರೀಕ್ಷಿತವೇನಲ್ಲ.
— Siddaramaiah (@siddaramaiah) July 30, 2019
ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವುದು ಅಪರಾಧ. ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ಧ ಹೋರಾಡುತ್ತಲೇ ವೀರಮರಣ ಹೊಂದಿದ ಹುತಾತ್ಮ. ಕೋಮುವಾದವನ್ನೇ ತಲೆಯಲ್ಲಿ ತುಂಬಿಕೊಂಡಿರುವ ಬಿಜೆಪಿ ನಾಯಕರು ಇತಿಹಾಸದ ಅರಿವಿಲ್ಲದ ಮೂಢರು.
— Siddaramaiah (@siddaramaiah) July 30, 2019
ಈ ಮಧ್ಯೆ, 2008-2013 ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ವಾಲ್ಮೀಕಿ ಜಯಂತಿ ಹಾಗೂ ಕನಕ ಜಯಂತಿ ಘೋಷಣೆ ಮಾಡಿ ರಜೆಯನ್ನು ಘೋಷಿಸಿತ್ತು. ಈ ಎರಡೂ ಜಯಂತಿಗಳನ್ನು 2018ಕ್ಕೆ ಅಸ್ತಿತ್ವಕ್ಕೆ ಬಂದ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸರ್ಕಾರಿ ರಜೆಗಳನ್ನು ಕಡಿತಗೊಳಿಸುವ ಪ್ರಸ್ತಾಪದಡಿ ರದ್ದುಗೊಳಿಸಿತ್ತು. ಟಿಪ್ಪು ಜಯಂತಿಗೆ ಸಿದ್ದರಾಮಯ್ಯ ಸರ್ಕಾರ ಸರ್ಕಾರಿ ರಜೆ ಘೋಷಿಸಿರಲಿಲ್ಲ.
ಟಿಪ್ಪು ಜಯಂತಿ ರದ್ದಾಯಿತು. ಎಸಿಬಿ ರದ್ದು ಯಾವಾಗ?
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಧಿಕಾರಕ್ಕೆ ಏರುವ ಮೊದಲೇ, ಅಂದರೆ 2017ರಿಂದಲೇ “ತಾನು ಅಧಿಕಾರಕ್ಕೆ ಬಂದ 24 ತಾಸಿನಲ್ಲೇ ಎಸಿಬಿ ರದ್ದುಗೊಳಿಸಿ, ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುತ್ತೇನೆ” ಎಂದು ಹೇಳಿದ್ದರು. 2018 ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿಯೂ ಸಹ ಎಸಿಬಿ ಹಾಗೂ ಟಿಪ್ಪು ಜಯಂತಿಯನ್ನು ರದ್ದುಗೊಳಿಸುತ್ತೇನೆ ಎಂಬುದನ್ನು ಸ್ಪಷ್ಟಪಡಿಸಿದ್ದರು ಹಾಗೂ ಎಲ್ಲೆಡೆ ಮಾಧ್ಯಮಗಳ ಮುಂದೆ, ಭಾಷಣಗಳಲ್ಲಿ ಯಡಿಯೂರಪ್ಪನವರು ಸೇರಿದಂತೆ ಹಲವು ಬಿಜೆಪಿ ನಾಯಕರು ಇದನ್ನೇ ಹೇಳಿಕೊಂಡು ಬರುತ್ತಿದ್ದರು. ಆದರೆ ಈಗ ಟಿಪ್ಪು ಜಯಂತಿ ರದ್ದು ಮಾಡಿದರೂ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಗೊಳಿಸಿವುದು ಯಾವಾಗ ಎಂಬ ಪ್ರಶ್ನೆ ಉಳಿದಿದೆ.
13ನೇ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿತ್ತು. ಯಡಿಯೂರಪ್ಪ ಸಿಎಂ ಹುದ್ದೆ ಅಲಂಕರಿಸಿದ್ದರು. ಆದರೆ, ಲೋಕಾಯುಕ್ತ ನಡೆಸಿದ ಅಕ್ರಮ ಗಣಿಗಾರಿಕೆ ತನಿಖಾ ವರದಿ ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿತ್ತು. ತಕ್ಷಣ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ನಂತರ ಲೋಕಾಯುಕ್ತ ಕೋರ್ಟ್ ನಲ್ಲಿ ನಡೆಯುತ್ತಿದ್ದ ಅಕ್ರಮ ಡಿನೋಟಿಫೇಕೇಶನ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದರು.
ಈಗ 15ನೇ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ನಂತರ ಯಡಿಯೂರಪ್ಪ ಮತ್ತೆ ಸಿಎಂ ಪಟ್ಟವನ್ನು ಅಲಂಕರಿಸಿದ್ದಾರೆ. ಆದರೆ ಟಿಪ್ಪು ಜಯಂತಿ ರದ್ದುಮಾಡಲು ಆದೇಶ ಹೊರಡಿಸಿದ ಸಿಎಂ,ಎಸಿಬಿಯನ್ನು ರದ್ದು ಮಾಡಿ ಲೋಕಾಯುಕ್ತ ಇಲಾಖೆಯನ್ನು ಯಾವಾಗ ಮತ್ತು ಹೇಗೆ ಬಲಪಡಿಸುತ್ತಾರೆ ಎಂಬುದು ಸದ್ಯದ ಕುತೂಹಲ.
ಪಕ್ಷಗಳು ತಮ್ಮ ಸರ್ಕಾರ ರಚನೆಯಾದ ತಕ್ಷಣ ಭ್ರಷ್ಟಾಚಾರ ತಡೆಯುತ್ತೇವೆ ಎಂದು ತಮಗೆ ಬೇಕಾದ ರೀತಿಯಲ್ಲಿ ಸಂಸ್ಥೆಗಳನ್ನು ರಚಿಸಿಕೊಳ್ಳುತ್ತಾರೆ ಎಂಬುದು ಇಲ್ಲಿ ಸ್ಪಷ್ಟ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 2016ರಲ್ಲಿ ಇದ್ದಕ್ಕಿದ್ದಂತೆ ಲೋಕಾಯುಕ್ತದ ಬಳಿ ಇದ್ದ ಭ್ರಷ್ಟಚಾರ ನಿಗ್ರಹ ಕಾನೂನನ್ನು ಪ್ರತ್ಯೇಕಿಸಿ ಎಸಿಬಿ ರಚನೆ ಮಾಡಿದ್ದರು. ಎಸಿಬಿ ತನ್ನ ಕಾರ್ಯವನ್ನು ನಡೆಸುತ್ತಿದೆಯಾದರೂ ಅದು ನೇರ ರಾಜ್ಯ ಸರ್ಕಾರದ ಅಧೀನದಲ್ಲಿದೆ ಮತ್ತು ಒಂದು ಸ್ವತಂತ್ರ ಸಂಸ್ಥೆಯಾಗಿಲ್ಲ. ಎಸಿಬಿ ಸಂಸ್ಥೆಯಲ್ಲಿನ ಪೋಲಿಸ್ ಘಟಕಕ್ಕೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದರೆ, ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರುತ್ತದೆ. ಇರುವ ಸಂಸ್ಥೆಗಳನ್ನು ರದ್ದುಗೊಳಿಸಿ, ಹೊಸದಾಗಿ ಸಂಸ್ಥೆಗಳನ್ನು ರಚಿಸುವುದು ಅಥವಾ ದುರ್ಬಲಗೊಳಿಸಿದ ಸಂಸ್ಥೆಗಳನ್ನೇ ಮತ್ತೆ ಬಲಪಡಿಸುವುದು ಎಂದರೆ ತಮ್ಮ ಅನುಕೂಲತೆಗಳಿಗಾಗಿ ಮಾಡುವ ವ್ಯವಸ್ಥೆ ಎಂಬುದು ರಾಜ್ಯದ ಜನತೆಗೆ ಸ್ಪಷ್ಟವಾಗಿ ಅರಿವಾಗುತ್ತಿದೆ.