ಅಭಿವೃದ್ಧಿ ಹಕ್ಕು ವರ್ಗಾವಣೆ (Transferrable Development Rights -TDR) ಅಕ್ರಮದ ಕರಾಳತೆ ಊಹಿಸಿದಂತೆ ಬೆಳೆಯುತ್ತಲೇ ಇದೆ. ಕೃಷ್ಣ ಲಾಲ್ ಎಂಬ ಅಸಿಸ್ಟೆಂಟ್ ಎಂಜಿನಿಯರ್ ಮತ್ತು ಇತರ ಖಾಸಗಿ ವ್ಯಕ್ತಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ACB) ಪ್ರಕರಣದ ದಾಖಲಿಸಿದ ಬೆನ್ನಲ್ಲೇ, 20 ವಿವಿಧ ಅಭಿವೃದ್ಧಿ ಪ್ರಮಾಣಪತ್ರಗಳ (Development Rights Certificate – DRC) ಅವ್ಯವಹಾರ ರೂ.700 ಕೋಟಿಗಳಷ್ಟು ಎಂದು ಅಂದಾಜಿಸಲಾಗಿದೆ.
TDR ಅವ್ಯವಹಾರದಲ್ಲಿ ದಾಖಲಿಸಿದ ಮೊದಲ FIR ಸಂಬಂಧ ಶನಿವಾರ (ಮೇ 4, 2019) ACB ಮತ್ತೆ 5 ಸ್ಥಳಗಳಲ್ಲಿ ದಾಳಿ/ಶೋಧ ನಡೆಸಿದೆ. ಈ ದಾಳಿಗಳನ್ನು Vallmark Realty Holdings (Pvt) Limited ಎಂಬ ರಿಯಲ್ ಎಸ್ಟೇಟ್ ಕಂಪನಿಯ ರೆಸಿಡೆನ್ಸಿ ರಸ್ತೆಯ ಕಚೇರಿ, ಅದರ ನಿರ್ದೇಶಕ ರತನ್ ಬಾಬುಲಾಲ್ ಲಾಥ್ ಅವರ ಓಲ್ಡ್ ಏರ್‌ಪೋರ್ಟ್ ರಸ್ತೆಯ ನಿವಾಸ, ಇದೇ ಕಂಪನಿಯ ಉದ್ಯೋಗಿ ಅಮಿತ್ ಜೆ ಬೋಳಾರ್ ಅವರ ಇಂದಿರಾ ನಗರ ನಿವಾಸ ಹಾಗೂ ಇನ್ನಿತರ ಆರೋಪಿಗಳಾದ ಕೆ ಗೌತಮ್ ಹಾಗೂ ಮುನಿರಾಜಪ್ಪ ಎಂಬುವರ ಕಲ್ಕೆರೆ ಮುಖ್ಯ ರಸ್ತೆಯಲ್ಲಿನ ನಿವಾಸಗಳಲ್ಲಿ ನಡೆಸಲಾಗಿದೆ.
ACBಯ ಪ್ರಭಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (Additional Director General of Police) ಎಂ ಚಂದ್ರಶೇಖರ್ ಅವರ ಪ್ರಕಾರ, ಶನಿವಾರದ ದಾಳಿಗಳು ಮೊದಲ FIRಗಷ್ಟೇ ಸೀಮಿತವಾಗಿದೆ. “ACB ಇದುವರೆಗೆ TDR ಅವ್ಯವಹಾರಗಳ ಸಂಬಂಧ ಒಂದು FIR ಮಾತ್ರ ದಾಖಲಿಸಿದೆ. ಉಳಿದ ಮಾಹಿತಿಗಳ ಬಗ್ಗೆ ಇನ್ನೂ ತನಿಖೆ ಪ್ರಗತಿಯಲ್ಲಿದೆ.”
ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ದಾಳಿಯ ಸಂದರ್ಭ ರತನ್ ಬಾಬುಲಾಲ್ ಲಾಥ್ ಮನೆಯಲ್ಲಿರಲಿಲ್ಲ. ACB ಅಧಿಕಾರಿಗಳ ಪ್ರಕಾರ TDR ಅಕ್ರಮ ತನಿಖೆ ಆರಂಭಗೊಂಡ ದಿನದಿಂದ ಅಧಿಕೃತ ಪತ್ರ ವ್ಯವಹಾರದ ಮಾಹಿತಿ ಆರೋಪಿಗಳಿಗೆ ತಲುಪುತ್ತಿದೆ. ಏಪ್ರಿಲ್ 26ರಂದು ಪ್ರಮುಖ ಆರೋಪಿ ಕೃಷ್ಣ ಲಾಲ್ ಹಾಗೂ ಇತರ ಆರೋಪಿಗಳಾದ ಬಿ.ಎಸ್.ಸುರೇಂದ್ರನಾಥ್, ಕೆ.ಗೌತಮ್, ಕೆ.ಸುರೇಶ್ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಕೃಷ್ಣ ಲಾಲ್ ಮನೆಯಲ್ಲಿ ಸಿಕ್ಕ ಒಂದು ಅಧಿಕೃತ ಪತ್ರ ACB ಅಧಿಕಾರಗಳನ್ನು ಅಚ್ಚರಿಗೊಳಿಸಿತ್ತು. ಅದು ಕೃಷ್ಣ ಲಾಲ್ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ ACB ಅಧಿಕಾರಿಗಳು ಬಿಬಿಎಂಪಿ ಕಮಿಷನರ್‌ಗೆ ಬರೆದ ಪತ್ರದ ಪ್ರತಿ. ಮುಂದೆ ತನಿಖೆಯಲ್ಲಿ ಇನ್ನೊಬ್ಬ ಬಿಬಿಎಂಪಿ ಅಧಿಕಾರಿಯ ಹೆಸರು ಹೊರಬಂದು, ಆ ಅಧಿಕಾರಿಯನ್ನು ರಹಸ್ಯ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಅಮಾನತಿನಲ್ಲಿ ಇರಿಸಲಾಯಿತು.
ಅದೇ ರೀತಿ, ರತನ್ ಬಾಬುಲಾಲ್ ಲಾಥ್ ಮನೆಯ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಶುಕ್ರವಾರ ಸಂಜೆ (ಮೇ 03, 2019) ಲಾಥ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಲಾಯಿತಾದರೂ, ಶನಿವಾರದ ಶೋಧದ ನಂತರ, ಲಾಥ್ ವಕೀಲರ ಮನವಿ ಮೇರೆಗೆ ವಿಚಾರಣೆಯನ್ನು ಶನಿವಾರ ಮಧ್ಯಾಹ್ನಕ್ಕೆ ನಿಗದಿಪಡಿಸಲಾಯಿತು. ಸಂಜೆ ನ್ಯಾಯಾಲಯ (CCH-48) ನ್ಯಾಯಾಧೀಶ ಸದಾಶಿವ ಎಸ್ ಸುಲ್ತಾನಪುರಿ ಅವರು ಆರೋಪಿ ಲಾಥ್‌ಗೆ ಮಧ್ಯಂತರ ಜಾಮೀನು ನೀಡಿದರು. ಆರೋಪಿ ಲಾಥ್ ಪರ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದರು.
ಮೂಲಗಳ ಪ್ರಕಾರ, ACB ಇದುವರೆಗೂ 20 ಅಭಿವೃದ್ಧಿ ಪ್ರಮಾಣಪತ್ರಗಳ ಸಂಬಂಧ ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ. ಈ ಪ್ರಾಥಮಿಕ ಮಾಹಿತಿ ಹಾಗೂ ದಾಖಲಾತಿಗಳ ಪ್ರಕಾರ, TDR ಅವ್ಯವಹಾರಗಳಲ್ಲಿ ನಾಲ್ಕು ಬಗೆಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಈ ಎಲ್ಲ ಪ್ರಕರಣಗಳಲ್ಲಿ ಒಂದಲ್ಲ ಒಂದು ರಿಯಲ್ ಎಸ್ಟೇಟ್ ಕಂಪನಿಯ ಪಾತ್ರ ಪ್ರಮುಖವಾಗಿ ಇದ್ದೇ ಇದೆ. ‘ಪ್ರತಿಧ್ವನಿ’ ಈ ಹಿಂದೆ ವರದಿ ಮಾಡಿದಂತೆ, TDR ಅನುಷ್ಠಾನಕ್ಕೆ ಬಂದಾಗಿನಿಂದ ಈ ಯೋಜನೆ ಕೇವಲ ರಿಯಲ್ ಎಸ್ಟೇಟ್ ಉದ್ದಿಮೆಯವರಿಗೆ ಅನುಕೂಲಕರವಾಗಿಯೇ ಅನುಷ್ಠಾನಗೊಂಡಿದೆ.
Also Read: ಟಿಡಿಆರ್ ಅಕ್ರಮ: ಎಸಿಬಿ ಮುಂದಿದೆ ಹಲವು ಪ್ರಕರಣ ಬಯಲಿಗೆಳೆಯುವ ಸದವಕಾಶ
ಯಾವ್ಯಾವ ರೀತಿ ಅಕ್ರಮ ನಡೆದಿದೆ?
ACB ಇದುವರೆಗೂ ಕಲೆಹಾಕಿರುವ ಪ್ರಾಥಮಿಕ ಮಾಹಿತಿ ಹಾಗೂ ಪೂರಕ ದಾಖಲಾತಿಗಳ ಪ್ರಕಾರ, 20ಕ್ಕೂ ಹೆಚ್ಚಿನ ಅಭಿವೃದ್ಧಿ ಪ್ರಮಾಣಪತ್ರಗಳು ಕಲ್ಕೆರೆ ಹೊರವರ್ತುಲ ರಸ್ತೆಗೆ ಸಂಬಂಧಿಸಿಯೇ ಇವೆ. ಈ ಪ್ರಕರಣಗಳಲ್ಲಿ ನಾಲ್ಕು ರೀತಿಯಲ್ಲಿ ಅಕ್ರಮಗಳನ್ನು ನಡೆಸಲಾಗಿದೆ.
1. ರಸ್ತೆ ನಿರ್ಮಾಣ ಯೋಜನೆಯ ಸಮೀಪದ ಸರ್ಕಾರಿ ಜಾಗವನ್ನು ಗುರುತಿಸುವುದು. ಸರ್ಕಾರಿ ಜಾಗಕ್ಕೆ ಕಾಲ್ಪನಿಕ ಮಾಲೀಕರನ್ನು ಸೃಷ್ಟಿಸುವುದು. ರಿಯಲ್ ಎಸ್ಟೇಟ್ ಕಂಪನಿಯೊಂದು ಈ ಕಾಲ್ಪನಿಕ ಮಾಲೀಕನೊಂದಿಗೆ ಒಪ್ಪಂದ ಮಾಡಿಕೊಂಡಂತೆ ದಾಖಲೆ ನಿರ್ಮಿಸಿ TDR ಪ್ರಕ್ರಿಯೆಗೆ ಚಾಲನೆ ನೀಡುತ್ತದೆ. ರಿಯಲ್ ಎಸ್ಟೇಟ್ ಕಂಪನಿ ಇರುವುದರಿಂದ ಬಿಬಿಎಂಪಿ ಕಡತಗಳು ಕ್ರಿಪ್ರ ವೇಗದಲ್ಲಿ ಅನುಮೋದನೆಗಾಗಿ ಓಡಾಡುತ್ತವೆ. ಕೊನೆಯಲ್ಲಿ ಸರ್ಕಾರಿ ಜಮೀನೂ ಸೇರಿದಂತೆ TDR ಹಾಗೂ DRC ನೀಡಲಾಗುತ್ತದೆ. ರಿಯಲ್ ಎಸ್ಟೇಟ್ ಕಂಪನಿ ಹೀಗೆ ಪಡೆದ DRCಯನ್ನು ಅಧಿಕ ಮೊತ್ತಕ್ಕೆ ಮಾರುತ್ತದೆ.
2.ಮೂಲ ಮಾಲೀಕರಿಗೆ ತಿಳಿಯದಂತೆ ಜಮೀನಿನ ಮಾಲೀಕನ ಪೂರ್ಣ ಗುರುತನ್ನೇ (identity) ಬದಲಿಸುವುದು. ನಂತರ ನಕಲಿ ಮೂಲ ಮಾಲೀಕ ಬಿಬಿಎಂಪಿ ಎದುರು ನೈಜ ಮಾಲೀಕನಂತೆ TDRಗೆ ಅನುಮೋದಿಸುವುದು. ಕೊನೆಯಲ್ಲಿ, ಪರಿತ್ಯಾಗ ಪತ್ರದ (relinquishment deed) ಮೂಲಕ ಜಾಗವನ್ನು ಬಿಬಿಎಂಪಿಗೆ ಬಿಟ್ಟುಕೊಟ್ಟು ವಿತರಿಸಲಾಗುವ DRCಯನ್ನು ರಿಯಲ್ ಎಸ್ಟೇಟ್ ಕಂಪನಿಗೆ ಮಾರುವುದು.
3.ಮೂಲ ಮಾಲೀಕನೊಂದಿಗೆ ಒಪ್ಪಂದ ಮಾಡಿಕೊಳ್ಳುವ ರಿಯಲ್ ಎಸ್ಟೇಟ್ ಕಂಪನಿ ಅಥವಾ ಮಧ್ಯವರ್ತಿ ನೈಜವಾಗಿ TDRನಲ್ಲಿ ಅಗತ್ಯವಿರುವ ವಿಸ್ತೀರ್ಣಕ್ಕಿಂತ ಹೆಚ್ಚಿನ ವಿಸ್ತೀರ್ಣವನ್ನು ತೋರುವುದು. ಉದಾಹರಣೆಗೆ, 100 ಚದರ ಮೀಟರ್ ಜಾಗ ಸ್ವಾಧೀನಪಡಿಸಿಕೊಂಡಿದ್ದರೆ, 1000 ಚದರ ಮೀಟರ್ ಎಂದು ತೋರಿಸುವುದು ಮತ್ತು TDR, DRC ಮಾರುವುದು.
4.ಈ ವಿಧಾನ ACB ಈಗಾಗಲೇ ದಾಖಲಿಸಿರುವ ಪ್ರಕರಣ. ಇದರಂತೆ, ಸ್ವಾಧೀನಪಡಿಸಿಕೊಳ್ಳಬೇಕಾಗಿರುವ ಜಮೀನಿನ ಅಕ್ಕಪಕ್ಕದಲ್ಲಿರುವ ಸರ್ಕಾರಿ ರಸ್ತೆ ಸೇರಿದಂತೆ ಖಾಸಗಿ ನಿವೇಶನವನ್ನೂ TDR ವ್ಯಾಪ್ತಿಗೆ ತರುವುದು. ಮೂಲ ನಿವೇಶನದಾರರಿಗೂ ತಿಳಿಯದಂತೆ ಬಿಬಿಎಂಪಿ ಅಧಿಕಾರಿಗಳ ಜೊತೆ ಶಾಮೀಲಾಗಿ TDR ಹಾಗೂ DRC ಪಡೆದು ರಿಯಲ್ ಎಸ್ಟೇಟ್ ಕಂಪನಿಗೆ ಮಾರುವುದು.
ಫೋಟೊ: ಎಸಿಬಿ ಪ್ರಭಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ ಚಂದ್ರಶೇಖರ್ (ಎಡ) ಮತ್ತು Vallmark Realty Holdings (Pvt) Limited ನಿರ್ದೇಶಕ ರತನ್ ಬಾಬುಲಾಲ್ ಲಾಥ್ (ಬಲ)