ಅಭಿವೃದ್ಧಿ ಹಕ್ಕು ವರ್ಗಾವಣೆ (Transferrable Development Rights-TDR) ಅಕ್ರಮಕ್ಕೆ ಸಂಬಂಧಿಸಿದಂತೆ ಕೃಷ್ಣ ಲಾಲ್ ಎಂಬ ಅಸಿಸ್ಟೆಂಟ್ ಎಂಜಿನಿಯರ್ ಮತ್ತು ಇತರ ಖಾಸಗಿ ವ್ಯಕ್ತಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ACB) ಶುಕ್ರವಾರ ದಾಳಿ ನಡೆಸಿತು. ಅನೇಕ TDR ಯೋಜನೆಗಳಲ್ಲಿನ ಬಹುಕೋಟಿ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ACBಗೆ ಈ ಪ್ರಕರಣ ನೆರವಾಗಬಹುದು.
TDR ಅನುಷ್ಠಾನಕ್ಕೆ ಬಂದಾಗಿನಿಂದ ಈ ಯೋಜನೆ ಕೇವಲ ಸಣ್ಣ, ಮಧ್ಯಮ ರಿಯಲ್ ಎಸ್ಟೇಟ್ ಉದ್ದಿಮೆಯವರಿಗೆ ಅನುಕೂಲಕರ ಎಂದೇ ತರ್ಕಿಸಲಾಗಿತ್ತು. ಬೃಹತ್ ಬೆಂಗಳೂರು ವ್ಯಾಪ್ತಿಯಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಕೃಷಿ ಅಥವಾ ಕೃಷಿಯೇತರ ಭೂಮಿ ಕಳೆದುಕೊಳ್ಳುವ ನಿವಾಸಿಗಳಿಗೆ TDR ಅನುಕೂಲ ಆದ ಉದಾಹರಣೆಗಳು ಇಲ್ಲವೇ ಇಲ್ಲ ಎಂಬಷ್ಟು ವಿರಳ.
ACB ಪ್ರಕರಣ ಏನು?
ಕೆ ಆರ್ ಪುರಂ ಹೋಬಳಿಯ ಕೌದನಹಳ್ಳಿ ಗ್ರಾಮದ ಸರ್ವೆ ನಂಬರ್ 132 ರಲ್ಲಿ 6.22 ಎಕರೆ ಜಮೀನು ಮಾರಪ್ಪ ಎಂಬವರಿಗೆ ಮರು ಮಂಜೂರಾತಿ (re-grant) ಆಗಿದ್ದು, ಅವರ ಮರಣಾನಂತರ ಮಕ್ಕಳಾದ ರೇವಣ್ಣ ಹಾಗೂ ಪಾಪಣ್ಣ ಎಂಬವರಿಗೆ ವಿಭಾಗ ಪತ್ರದ (Partition Deed) ಮೂಲಕ ಭಾಗವಾಗಿತ್ತು. ರೇವಣ್ಣ ಮತ್ತು ಅವರ ಮಕ್ಕಳು ತಮ್ಮ ಭಾಗದ ಜಮೀನು ವಿಭಜನೆ ಮಾಡಿಕೊಂಡು, ಬಿ.ಆರ್.ಲೇಔಟ್ ಎಂಬ ರೆವೆನ್ಯೂ ಬಡಾವಣೆ ಮಾಡಿ, ಜೂನ್ 2002ರ ಹೊತ್ತಿಗೆ ಎಲ್ಲ ನಿವೇಶನಗಳನ್ನೂ ಮಾರಿರುತ್ತಾರೆ. ಆದರೆ, ಕಂದಾಯ ಇಲಾಖೆಯಲ್ಲಿ ರೇವಣ್ಣನವರ ಹೆಸರಿನಲ್ಲೇ ದಾಖಲೆಗಳು ಇರುತ್ತವೆ.
ಜುಲೈ 2009ರಲ್ಲಿ ಸರ್ವೆ ನಂಬರ್ 132ರ ಕೆಲವು ಭಾಗದ ಜಮೀನನ್ನು ಭಟ್ಟರಹಳ್ಳಿ ರಸ್ತೆಯಿಂದ ಟಿ.ಸಿ.ಪಾಳ್ಯದವರೆಗಿನ ರಸ್ತೆ ಅಗಲೀಕರಣಕ್ಕೆ ಬಿ.ಬಿ.ಎಂ.ಪಿ ನೋಟಿಫೈ ಮಾಡುತ್ತದೆ. ಕಂದಾಯ ಇಲಾಖೆಯ ದಾಖಲೆಗಳಲ್ಲಿ ಇನ್ನೂ ರೇವಣ್ಣನವರ ಹೆಸರಿದ್ದರೂ, 2002ರಲ್ಲೇ ರೆವನ್ಯೂ ಬಡಾವಣೆ ಮಾಡಿ ನಿವೇಶನ ಮಾರಿದ್ದರಿಂದ ರೇವಣ್ಣ ಅವರ ಮಕ್ಕಳು TDRಗೆ ಅರ್ಜಿ ಸಲ್ಲಿಸುವುದಿಲ್ಲ.
ಈ ಸಂದರ್ಭದಲ್ಲಿ ಬಿ.ಎಸ್.ಸುರೇಂದ್ರನಾಥ್, ಕೆ.ಗೌತಮ್, ಕೆ.ಸುರೇಶ್ ಹಾಗೂ Vallmark Realty Holdings (Pvt) Limited ಎಂಬ ರಿಯಲ್ ಎಸ್ಟೇಟ್ ಕಂಪನಿಯ ಅಮಿತ್ ಜೆ ಬೋಳಾರ್ ಎಲ್ಲರೂ ಸೇರಿ ರೇವಣ್ಣ ಕುಟುಂಬದ ಜೊತೆಗೆ ಒಪ್ಪಂದ ಮಾಡಿಕೊಂಡು ನಿವೇಶನ ಮಾರಿರುವ ವಿಷಯವನ್ನು ಮರೆಮಾಚಿ, ಖಾತಾ ವರ್ಗಾವಣೆ ಹಾಗೂ ವಂಶವೃಕ್ಷ ಬದಲಾವಣೆಗೆ ಅರ್ಜಿ ಸಲ್ಲಿಸುತ್ತಾರೆ. ಕಂದಾಯ ಇಲಾಖೆಯವರೂ ದಾಖಲೆಗಳನ್ನು ರೇವಣ್ಣನವರ ಮಕ್ಕಳ ಹೆಸರಿಗೆ ವರ್ಗಾಯಿಸುತ್ತಾರೆ.
“ಗೂಗಲ್ ಅರ್ಥ್ ಮೂಲಕ 2002ರಿಂದಲೂ ಆ ಸ್ಥಳದಲ್ಲಿ ಬಡಾವಣೆ ಇದ್ದಿದ್ದನ್ನು ಪತ್ತೆಹಚ್ಚಲಾಗಿದೆ. ಈ ಬಡಾವಣೆಯಲ್ಲಿ ಕಟ್ಟಡಗಳೂ ನಿರ್ಮಾಣಗೊಂಡಿದ್ದವು ಹಾಗೂ ಮೂಲ ಮಾಲೀಕರಿಗೆ TDR ಸಂಬಂಧ ರೇವಣ್ಣನವರ ಮಕ್ಕಳು ಅರ್ಜಿ ಸಲ್ಲಿಸಿದ್ದೂ ಗೊತ್ತಿರಲಿಲ್ಲ. ರೇವಣ್ಣನವರ ಮಕ್ಕಳ ಅರ್ಜಿಯ ಮೇಲೆ ತಹಶೀಲ್ದಾರ್ ಖಾತೆ ವರ್ಗಾಯಿಸುವ ಮೊದಲು ಯಾವುದೇ ದಾಖಲೆಗಳನ್ನು ಪರಿಶೀಲಿಸದಿರುವುದು ಬೆಳಕಿಗೆ ಬಂದಿದೆ,’’ ಎಂದು ACBಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಖಾತಾ ಬದಲಾವಣೆ ಆಗುತ್ತಿದ್ದಂತೆ, ಬಿ.ಎಸ್.ಸುರೇಂದ್ರನಾಥ್, ಕೆ.ಗೌತಮ್, ಕೆ.ಸುರೇಶ್ ಹಾಗೂ ಅಮಿತ್ ಜೆ ಬೋಳಾರ್ ಎಲ್ಲ ಸೇರಿ ರೇವಣ್ಣ ಅವರ ಮಕ್ಕಳ ಜೊತೆ TDR ಖರೀದಿಸುವ ಒಪ್ಪಂದ ಕರಾರು ಮಾಡಿಕೊಳ್ಳುತ್ತಾರೆ. ನಂತರ ಎಲ್ಲರೂ ಸೇರಿ ಭೂಮಿಯ ಹಾಗೂ ಕಟ್ಟಡದ ಮೌಲ್ಯಮಾಪನವನ್ನು ಬಿ.ಬಿ.ಎಂ.ಪಿ ಕಾರ್ಯನಿರ್ವಾಹಕ ಎಂಜಿನಿಯರ್‌ರಿಂದ ಪಡೆಯುತ್ತಾರೆ. ಆದರೆ, ಇದರಲ್ಲಿ ಭೂಮಿಯ ಹಾಗೂ ಕಟ್ಟಡದ ಜಾಗಕ್ಕಿಂತ ಹೆಚ್ಚಿನ ಜಾಗ ನಮೂದಿಸಲಾಗುತ್ತದೆ. ಅಲ್ಲದೆ, ಈಗಾಗಲೇ ನೋಟಿಫೈ ಆಗಿರುವ ಕ್ರಾಸ್ ರಸ್ತೆಗಳನ್ನೂ ಸೇರಿಸಿ ಮೌಲ್ಯಮಾಪನ ಮಾಡಲಾಗುತ್ತದೆ ಹಾಗೂ 2014ರಲ್ಲಿ ಪರಿತ್ಯಾಗ ಪತ್ರದ (relinquishment deed) ಮೂಲಕ ಜಾಗವನ್ನು ಬಿ.ಬಿ.ಎಂ.ಪಿ.ಗೆ ಬಿಟ್ಟುಕೊಡಲಾಗುತ್ತದೆ.
ಏಪ್ರಿಲ್ 2014ರಲ್ಲಿ ಬಿ.ಬಿ.ಎಂ.ಪಿ ಅಧಿಕಾರಿಗಳು ಎರಡು ಅಭಿವೃದ್ಧಿ ಪ್ರಮಾಣಪತ್ರಗಳನ್ನು (Development Rights Certificate- DRC) ಬಿ.ಎಸ್.ಸುರೇಂದ್ರನಾಥ್ ಹಾಗೂ ಇತರ ವ್ಯಕ್ತಿಗಳಿಗೆ ನೀಡುತ್ತಾರೆ. ಆಶ್ಚರ್ಯವೆಂದರೆ, 2009ರಿಂದ ಈ TDR ಬಗ್ಗೆ ಏನೂ ಆಸಕ್ತಿ ತೋರಿಸದ ಬಿ.ಬಿ.ಎಂ.ಪಿ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ರಿಯಲ್ ಎಸ್ಟೇಟ್ ವ್ಯಕ್ತಿಗಳು ಮಧ್ಯಪ್ರವೇಶಿಸಿದ 46 ದಿನದೊಳಗೆ ಇಡೀ TDR ಪ್ರಕಿಯೆಯನ್ನೇ ಮುಗಿಸಿ, DRCಗಳನ್ನು ಕೊಟ್ಟು ಬಿಡುತ್ತಾರೆ. ಈ ಮಧ್ಯವರ್ತಿಗಳು ಹಾಗೂ ರಿಯಲ್ ಎಸ್ಟೇಟ್ ವ್ಯಕ್ತಿಗಳು DRCಗಳನ್ನು ರೂ. 56.37 ಕೋಟಿಗೆ ಮಾರುತ್ತಾರೆ.
ಮುಂದೇನು?
ಈ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ACB ಇದುವರೆಗೂ ಪೂರ್ಣಗೊಂಡ ಹಾಗೂ ಅತಂತ್ರ ಸ್ಥಿತಿಯಲ್ಲಿರುವ ಅನೇಕ TDR ಪ್ರಕರಣಗಳ ತನಿಖೆ ನಡೆಸಿದಲ್ಲಿ ಇನ್ನಷ್ಟು ಹಗರಣಗಳು ಹೊರಬೀಳಲಿವೆ. ಕಳೆದ 4 ವರ್ಷಗಳಲ್ಲಿ TDR ಯೋಜನೆಯಲ್ಲಿ ಮೂಲ ಮಾಲಿಕರು ಅನುಭವಿಸಿದ ಕಷ್ಟ, ನಷ್ಟ ಹಾಗೂ ಕಿರುಕುಳಗಳ ಬಗ್ಗೆ ಅನೇಕ ಪತ್ರಿಕೆಗಳು ವರದಿ ಮಾಡಿವೆ. ಜುಲೈ 2017ರಲ್ಲಿ ಬಿ.ಬಿ.ಎಂ.ಪಿ ಹೊಸ TDR ನೀತಿಯನ್ನು ಜಾರಿ ಮಾಡಿದ ಮೇಲಂತೂ ಯಾವುದೇ TDR ಪ್ರಕ್ರಿಯೆ ಸುಗಮವಾಗಿ ನಡೆದ ಉದಾಹರಣೆಗಳಿಲ್ಲ.
ಮೂಲಗಳ ಪ್ರಕಾರ, ಬಿ.ಬಿ.ಎಂ.ಪಿ ಅಧಿಕಾರಿಗಳು ಸಲ್ಲಿಸುವ TDR ಪ್ರಸ್ತಾವನೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bangalore Development Authority) ತಿರಸ್ಕರಿಸುತ್ತ ಬಂದಿದೆ. ಪ್ರತಿ ಪ್ರಸ್ತಾವನೆಯೂ ದೋಷಗಳಿಂದ ಕೂಡಿರುತ್ತದೆ, ಎಲ್ಲಿಯವರೆಗೆ ಎಂದರೆ, ಸರಿಯಾಗಿ ಮೂಲ ಮಾಲೀಕರ ದಾಖಲೆಯನ್ನೂ ಪರಿಶೀಲಿಸದೆ ಕಳುಹಿಸಲಾಗುತ್ತದೆ ಎಂಬುದು ಬಿಡಿಎ ವಾದ. ಮೂಲ ಮಾಲೀಕತ್ವದ ಸ್ಪಷ್ಟ ದಾಖಲೆ ಸಮರ್ಪಕವಾಗಿರದ ಪ್ರಸ್ತಾವನೆಯನ್ನು ಬಿ.ಬಿ.ಎಂ.ಪಿ ಏಕೆ ಕಳುಹಿಸುತ್ತಿದೆ ಎಂಬುದು ACBಯ ಈ ಒಂದು ಪ್ರಕರಣದಿಂದಂತೂ ಸ್ಪಷ್ಟವಾಗಿದೆ. ಅಂದಹಾಗೆ, ACB ತನಿಖೆ ನಡೆಸುತ್ತಿರುವ ಸದ್ಯದ ಪ್ರಕರಣದ ಪ್ರಮುಖ ಆರೋಪಿ ಕೃಷ್ಣ ಲಾಲ್ (ಪ್ರಕರಣ ನಡೆದಾಗ ಬಿ.ಬಿ.ಎಂ.ಪಿ.ಯಲ್ಲಿದ್ದವರು) ಈಗ ಬಿಡಿಎನಲ್ಲಿದ್ದಾರೆ.