ಮೂರೂವರೆ ವರ್ಷಗಳ ಹಿಂದೆ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ ಯು) ನಡೆದ ಕಾರ್ಯಕ್ರಮವೊಂದರಲ್ಲಿ ದೇಶ ವಿರೋಧಿ ಘೋಷಣೆ ಕೂಗಲಾಯಿತು ಎಂದು ಆರೋಪಿಸಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಇತರ ಎಂಟು ಮಂದಿಯ ವಿರುದ್ಧ “ದೇಶದ್ರೋಹ”ದ ಪ್ರಕರಣದಲ್ಲಿ ವಿಚಾರಣೆಗೆ ಪೂರ್ವಾನುಮತಿ ನೀಡಲು ದೆಹಲಿ ಸರ್ಕಾರದ ಗೃಹ ಸಚಿವಾಲಯ ನಿರಾಕರಿಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
“ಆರೋಪಿತ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಸಲ್ಲಿಸಿರುವ ಸಾಕ್ಷ್ಯಗಳು ಬಹಳ ದುರ್ಬಲತೆಯಿಂದ ಕೂಡಿವೆ ಮತ್ತು ಬಿಟ್ಟ ಜಾಗ ಭರ್ತಿ ಮಾಡಿದಂತಿವೆ. ದೇಶದ್ರೋಹದ ಪ್ರಕರಣ ದಾಖಲಿಸುವಂತಹ ಯಾವುದೇ ಬಲವಾದ ಸಾಕ್ಷ್ಯಗಳು ಕಂಡುಬರುತ್ತಿಲ್ಲ. ಆದ್ದರಿಂದ ಐಪಿಸಿ ಸೆಕ್ಷನ್ 124ಎ ಅಡಿ ಪ್ರಕರಣ ದಾಖಲಿಸಲು ಅನುಮತಿ ನೀಡಲು ಸಾಧ್ಯವಿಲ್ಲ. ಆದರೆ, ಸದರಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ದಾಖಲಿಸಿರುವ ಇತರೆ ಪ್ರಕರಣಗಳ ಸಂಬಂಧ ಕ್ರಮ ಕೈಗೊಳ್ಳಬಹುದಾಗಿದೆ” ಎಂಬುದಾಗಿ ದೆಹಲಿ ಸರ್ಕಾರ ಹೇಳಿದೆ.
“ಆರೋಪ ಪಟ್ಟಿಯ ಪುಟಸಂಖ್ಯೆ 856 ರಲ್ಲಿ ದೂರುದಾರರಾದ ದೆಹಲಿಯ ವಸಂತ ಕುಂಜ್ ಉತ್ತರ ಠಾಣೆಯ ಪೊಲೀಸ್ ಇನ್ಸಸ್ಪೆಕ್ಟರ್ ವೀರೇಂದ್ರ ಸಿಂಗ್ ಅವರು ಸಹ, ಆರೋಪಿತ ವಿದ್ಯಾರ್ಥಿಗಳು ವಿನಾಶಕಾರಿ ಪ್ರವೃತ್ತಿ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶದಿಂದ ಯಾವುದೇ ದೇಶದ್ರೋಹಿ ಘೋಷಣೆ ಕೂಗಿರುವ ಉಲ್ಲೇಖ ಮಾಡಿಲ್ಲ” ಎಂಬುದಾಗಿ ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ದಿ ನ್ಯೂ’’ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
“ಆರೋಪ ಪಟ್ಟಿಯ ಪುಟಸಂಖ್ಯೆ 728-798 ರಲ್ಲಿ ಜೆಎನ್ ಯು ಕ್ಯಾಂಪಸ್ ನಲ್ಲಿ, ದೇಶವಿರೋಧಿ ಘೋಷಣೆಗಳನ್ನು ಕೂಗಿದ ದೃಶ್ಯವಿದೆ ಎಂದು ಹೇಳಲಾಗಿರುವ, ಸುದ್ದಿವಾಹಿನಿಯೊಂದು ಒದಗಿಸಿದ್ದ ವಿಡಿಯೋದಲ್ಲಿ ಕಂಡುಬರುವ ದೃಶ್ಯ ಆರೋಪಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದೆಂದು ಹೇಳಲಾಗುವುದಿಲ್ಲ ಎಂಬ ಉಲ್ಲೇಖ ಸಹ ಇದೆ” ಎಂಬುದಾಗಿ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ದೆಹಲಿಯು ಕೇಂದ್ರಾಡಳಿತ ಪ್ರದೇಶವಾಗಿದ್ದು, ಅಲ್ಲಿನ ಪೊಲೀಸ್ ಆಡಳಿತ ನೇರವಾಗಿ ಕೇಂದ್ರ ಸರ್ಕಾರದ ಕೈಗೆಳಗೆ ಬರುತ್ತದೆ. ಆದರೆ, ಒಬ್ಬ ವ್ಯಕ್ತಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಸಂಬಂಧಪಟ್ಟ ರಾಜ್ಯದ ಗೃಹ ಸಚಿವಾಲಯದ ಸಮ್ಮತಿ ಅಗತ್ಯವಾಗಿದೆ. ರಾಜ್ಯ ಸರ್ಕಾರದ ಸಮ್ಮತಿ ಇಲ್ಲದೆ ಜೆಎನ್ ಯು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದ ದೆಹಲಿ ಪೊಲೀಸರ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಹಳ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಅದೇನೇ ಇದ್ದರೂ, ಈ ಪ್ರಕರಣ ಕುರಿತು ಬಹುತೇಕ ಮಾಧ್ಯಮಗಳು ನಡೆದುಕೊಂಡ ರೀತಿಯ ಕುರಿತು ಇಲ್ಲಿ ಚರ್ಚಿಸುವ ಅಗತ್ಯವಿದೆ. 2016ರ ಫೆಬ್ರವರಿ 9 ರಂದು ಜೆಎನ್ ಯು ಕ್ಯಾಂಪಸ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೇಶದ್ರೋಹದ ಘೋಷಣೆಗಳನ್ನು ಕೂಗಲಾಯಿತು ಎಂದು ಆರೋಪಿಸಿ ದೆಹಲಿ ಪೊಲೀಸರು ಕನ್ಹಯ್ಯ ಕುಮಾರ್ ಮತ್ತು ಇತರ ಒಂಬತ್ತು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಾಗ, ಬಹುತೇಕ ಮಾಧ್ಯಮಗಳು ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಆರೋಪಿತ ಹತ್ತು ಮಂದಿ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳಂತೆ ಬಿಂಬಿಸಿ ಪ್ರಚಾರ ಮಾಡಿದವು.

ಆರೋಪಿತ ವಿದ್ಯಾರ್ಥಿಗಳ ವಿರುದ್ಧ ಸಾಕ್ಷ್ಯವಾಗಿ ದೆಹಲಿ ಪೊಲೀಸರು ಸಲ್ಲಿಸಿದ್ದ ವಿಡಿಯೊ ಸಹ ‘ತಿರುಚಲಾದ ವಿಡಿಯೊ’ ಎಂಬುದು ಸಾಬೀತಾದಾಗಲೂ ಈ ವಿದ್ಯಾರ್ಥಿಗಳ ವಿರುದ್ಧದ ಅಪಪ್ರಚಾರ ನಿಂತಿರಲಿಲ್ಲ. ಈಗ ದೆಹಲಿ ಸರ್ಕಾರವು “ಆರೋಪಿತ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಸಮ್ಮತಿ ನೀಡಲು ಪೂರಕ ಸಾಕ್ಷಿಗಳಿಲ್ಲ” ಎಂದು ಹೇಳಿರುವುದನ್ನೂ ಕೆಲ ಮುಖ್ಯವಾಹಿನಿ ಮಾಧ್ಯಮಗಳು, “ದೆಹಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿರುವ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ವಿಚಾರಣೆ ನಡೆಸಲು ಸಮ್ಮತಿ ನೀಡದಿರಲು ದೆಹಲಿ ಸರ್ಕಾರ ನಿರ್ಧರಿಸಿದೆ” ಎಂಬುದಾಗಿ ವರದಿ ಪ್ರಸಾರ ಮಾಡುತ್ತಿವೆ. ಅಂದರೆ, ಪರೋಕ್ಷವಾಗಿ ದೆಹಲಿಯ ಆಪ್ ಸರ್ಕಾರ ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂಬಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ.
ಕನ್ಹಯ್ಯ ಕುಮಾರ್ ಮತ್ತು ಇತರ ಒಂಬತ್ತು ವಿದ್ಯಾರ್ಥಿಗಳ ವಿರುದ್ಧ ದಾಖಲಿಸಲಾಗಿರುವ ದೇಶದ್ರೋಹದ ಪ್ರಕರಣಕ್ಕೆ ಸಾಕ್ಷ್ಯ ಒದಗಿಸಲು ತಿಣುಕಾಡುತ್ತಿರುವ ದೆಹಲಿ ಪೊಲೀಸರಿಗೆ ಈಗ ದೆಹಲಿ ಸರ್ಕಾರದ ಅಸಮ್ಮತಿಯಿಂದಾಗಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ದೇಶದ್ರೋಹ ಪ್ರಕರಣದ ವಿಚಾರಣೆ ಮುಂದುವರಿಸಬೇಕೋ ಅಥವಾ ಕೈ ಬಿಡಬೇಕೋ ಎಂಬ ನಿರ್ಧಾರ ನ್ಯಾಯಾಲಯ ಮಾಡಲಿದೆ. ಆದರೆ ಆರೋಪ ಸಾಬೀತಾಗದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೇಶದ್ರೋಹಿ ಹಣೆಪಟ್ಟಿ ಹಚ್ಚುವ ಕೆಲ ಮಾಧ್ಯಮಗಳ ಆತುರವಂತೂ ಗುಪ್ತ ಕಾರ್ಯಸೂಚಿಯಿಂದ ಕೂಡಿರುವಂತೆ ಕಾಣುತ್ತಿರುವುದು ಸುಳ್ಳಲ್ಲ.