ರಾಜ್ಯ ಸರಕಾರದ ಮಿತ್ರಪಕ್ಷ ಜಾತ್ಯತೀತ ಜನತಾದಳದೊಂದಿಗೆ ಮಾಡಿಕೊಂಡಿರುವ ಮೈತ್ರಿಯೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಡವಟ್ಟಾಯಿತೇ ಎಂಬುದು ಫಲಿತಾಂಶ ಬಂದ ನಂತರ ಮಾಡಲಾಗುತ್ತಿರುವ ವಿಶ್ಲೇಷಣೆ.
ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದರೆ ಹತ್ತು ಕ್ಷೇತ್ರಗಳನ್ನಾದರೂ ಗೆಲ್ಲಬಹುದಿತ್ತು ಎನ್ನಲಾಗುತ್ತಿದೆ. ಈಗ ಗೆದ್ದಿರುವುದು ಸಚಿವ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮಾತ್ರ. ಜೆಡಿಎಸ್ ಕೂಡ ಒಂದು ಸ್ಥಾನ ಗೆದ್ದಿದೆ. ರಾಜ್ಯದಲ್ಲಿ ಒಟ್ಟು 28 ಸ್ಥಾನಗಳಲ್ಲಿ ಉಳಿದೆಲ್ಲ 25 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಮಂಡ್ಯದ ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಪಾಲಾಗಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಮೈತ್ರಿ ಸರಕಾರವಿದ್ದ ಕಾರಣ ಮತ್ತು ಬಿಜೆಪಿಯನ್ನು ಸೋಲಿಸಬೇಕೆಂಬ ಉದ್ದೇಶದಿಂದ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಾಗ ಜೆಡಿಎಸ್ ಸ್ವಲ್ಪ ಹೆಚ್ಚೇ ಸ್ಥಾನಕ್ಕೆ ಬೇಡಿಕೆ ಇರಿಸಿತ್ತು. ಮಾತ್ರವಲ್ಲದೆ, ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ಮೂರು ಮಂದಿ ಅಭ್ಯರ್ಥಿಗಳಾಗಿದ್ದರು.
ಹಾಸನದಿಂದ ಅನಾಯಾಸವಾಗಿ ಗೆಲ್ಲುತ್ತಿದ್ದ ದೇವೇಗೌಡರು ಆ ಕ್ಷೇತ್ರವನ್ನು ತನ್ನ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು ತನಗೆ ಸಂಬಂಧಪಡದ ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಕೈಯಿಂದ ವಶಪಡಿಸಿಕೊಂಡರು. ಸಮಸ್ಯೆ ಆರಂಭವಾಗಿದ್ದು ಇಲ್ಲಿಂದಲೇ. ಅನಂತರ ಮತ್ತೊಬ್ಬ ಮೊಮ್ಮಗ ಕೂಡ ಸಂಸದನಾಗಲಿ ಎಂದು ಕಿರಿಯ ಸೊಸೆ ಆಸೆಪಟ್ಟಾಗ ಆತನಿಗೆ ಮಂಡ್ಯವನ್ನು ನೀಡಲಾಯಿತು. ಇಲ್ಲಿ ಸುಮಲತಾ ಎಂಬ ಹೆಸರಿನ ಸುಸಂಸ್ಕೃತ ಮಹಿಳೆ, ಮಂಡ್ಯದ ಗಂಡು ಅಂಬರೀಶ್ ಮಡದಿ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಆಗಿದ್ದರು. ಇಡೀ ರಾಜ್ಯದಲ್ಲಿ ಪರಿಣಾಮ ಬೀರಬಲ್ಲ ರಾಜಕೀಯ ನಿರ್ಧಾರ ಇಲ್ಲೇ ಆಯಿತು. ಅದಕ್ಕೆ ಪೂರಕವಾಗಿ ಪ್ರಾದೇಶಿಕ ಟಿವಿ ವಾಹಿನಿಗಳು ಕೂಡ ಅಗತ್ಯಕ್ಕಿಂತ ಹೆಚ್ಚೇ ಇಂಡಿಯಾಕ್ಕಿಂತ (ದೇಶದ ಚುನಾವಣೆಗಿಂತ) ಮಂಡ್ಯಕ್ಕೆ ಹೆಚ್ಚು ಪ್ರೈಮ್ ಟೈಮ್ ನೀಡಿ, ಅದನ್ನು ರಾಜ್ಯದ ಬಹು ದೊಡ್ಡ ಸಂಗತಿ ಮಾಡಿಬಿಟ್ಟಿದ್ದವು.
ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಇಡೀ ರಾಜ್ಯದ ಮತದಾರರ ಮೇಲೆ ಸುಮಲತಾ ಪ್ರಕರಣ ಪರಿಣಾಮ ಬೀರುರುವುದು ಮೇಲ್ನೋಟಕ್ಕೆ ಯಾರಿಗೂ ಕಂಡುಬರಲಿಲ್ಲ. ಇದರೊಂದಿಗೆ, ಮೈತ್ರಿ ಸರಕಾರದ ಕಾರ್ಯವೈಖರಿ, ಮೈತ್ರಿ ಪಕ್ಷಗಳ ಮುಖಂಡರ ಹೇಳಿಕೆಗಳು, ಬಿಜೆಪಿಯ ಸಂಘಟಿತ ಪ್ರಚಾರ ಅಥವಾ ಅಪಪ್ರಚಾರ, ಪ್ರಧಾನಿ ನರೇಂದ್ರ ಮೋದಿ ಭಾಷಣ, ಸ್ಥಳೀಯ ಕಾಂಗ್ರೆಸ್ ಮುಖಂಡರ ವೈಫಲ್ಯಗಳು, ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ಕೊರತೆಗಳು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೀನಾಯ ಸ್ಥಿತಿಗೆ ತಂದಿಟ್ಟಿದೆ.
ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲಿಗಿಂತಲೂ ಹೆಚ್ಚಾಗಿ ಕಲಬುರ್ಗಿಯಲ್ಲಿ ಮಾಜಿ ಕೇಂದ್ರ ಸಚಿವ, ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರ ಅಪಜಯ ಗಮನಾರ್ಹ. ಹಳೇ ಹೈದರಾಬಾದ್ ಕರ್ನಾಟಕದಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಂದ ತೊಡಗಿ ಉಮೇಶ್ ಜಾಧವ್ ತನಕ ಅನೇಕರು ಕಾಂಗ್ರೆಸ್ ತೊರೆಯಲು ಕಾರಣ ಖರ್ಗೆ. ಮಾತ್ರವಲ್ಲದೆ, ಖರ್ಗೆ ಈ ಬಾರಿಯ ಚುನಾವಣೆಯಲ್ಲಿ ಸೋಲಲು ಕೂಡ ಇದೇ ಕಾರಣ. ಖರ್ಗೆ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸೋಲುತ್ತಿರುವುದು.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜನಪ್ರಿಯ ಮತ್ತು ಉತ್ತಮ ಸಂಸದೀಯ ಪಟು ಮುದ್ದಹನುಮೇಗೌಡ ಅವರನ್ನು ಬದಲಿಸಿರುವುದು ದೇವೇಗೌಡರಿಗಾದ ಮೊದಲ ಹಿನ್ನಡೆಯಾದರೆ, ಮಾಜಿ ಮುಖ್ಯಮಂತ್ರಿಯಾಗಿರುವ ದೇವೇಗೌಡರು ಹೇಮಾವತಿ ನದಿ ನೀರನ್ನು ತುಮಕೂರಿಗೆ ಹರಿಸಲು ಬಿಡಲಿಲ್ಲ ಎಂಬ ಅರೋಪ ಎರಡನೆಯದು. ಮೂರನೆಯದಾಗಿ ಲಿಂಗಾಯತ-ನಾಯಕ ಜಾತಿ ಸಮೀಕರಣ ಬಸವರಾಜು ಗೆಲುವಿನಲ್ಲಿ ಕೆಲಸ ಮಾಡಿದೆ.
ಜಾತ್ಯತೀತ ಜನತಾದಳದವರ ಚುನಾವಣಾ ಮೈತ್ರಿ ರಾಜಕೀಯವೇ ಕಾಂಗ್ರೆಸ್ಸಿಗೆ ಮುಳುವಾಯಿತು ಎನ್ನುವುದಕ್ಕೆ ಉಡುಪಿ-ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳು ಕೂಡ ಸಾಕ್ಷಿಗಳಾಗುತ್ತವೆ. ಹಾಸನ, ಮಂಡ್ಯ, ತುಮಕೂರು, ಶಿವಮೊಗ್ಗದೊಂದಿಗೆ ಕರಾವಳಿಯ ಇವೆರಡು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು. ಮಂಡ್ಯ ಮತ್ತು ತುಮಕೂರು ಕಾಂಗ್ರೆಸ್ ಗೆದ್ದಿದ್ದ ಸ್ಥಾನಗಳು. ಉಳಿದವು ಕಾಂಗ್ರೆಸ್ ಗೆಲ್ಲಬಲ್ಲ ಕ್ಷೇತ್ರಗಳು. ಹಾಸನ ಮತ್ತು ಮಂಡ್ಯ ಹೊರತುಪಡಿಸಿದರೆ ಉಳಿದೆಡೆ ಜೆಡಿಎಸ್ ಪ್ರಾಬಲ್ಯ ಅಷ್ಟಕಷ್ಟೇ. ಇವೆರಡು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯವೂ ಇರಲಿಲ್ಲ. ಉಳಿದೆಡೆ ಏನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ. ಅಂತಹ ಕ್ಷೇತ್ರಗಳಲ್ಲಿ ಶಿವಮೊಗ್ಗ ಹೊರತುಪಡಿಸಿ ಇತರ ಕ್ಷೇತ್ರಗಳಲ್ಲಿ ಜೆಡಿಎಸ್‌ನಿಂದ ಸಮರ್ಥ ಅಭ್ಯರ್ಥಿಗಳೇ ಇರಲಿಲ್ಲ. ಆಸ್ನೋಟಿಕರ್ ಮತ್ತು ಪ್ರಮೋದ್ ಮಧ್ವರಾಜ್ ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸುವ ಅಗತ್ಯವಾದರೂ ಏನಿತ್ತು ಎಂಬುದನ್ನು ಇವೆರೆಡು ಪಕ್ಷಗಳ ಮುಖಂಡರೇ ಹೇಳಬೇಕು.
ಬೆಂಗಳೂರು ಸೇರಿದಂತೆ ಹಳೇ ಮೈಸೂರು ಪ್ರದೇಶದಲ್ಲಿ ಕೆಲವೊಂದು ಸ್ಥಾನಗಳನ್ನು ಈ ಬಾರಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಆಶಾಭಾವನೆ ಕಾಂಗ್ರೆಸ್ ಪಕ್ಷದಲ್ಲಿತ್ತಾದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಕರಾವಳಿ ಮತ್ತು ಮಲೆನಾಡು, ಮುಂಬಯಿ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಇರುವುದು ಸಾಮಾನ್ಯ. ಆದರೆ, ಹೈದರಾಬಾದ್ ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆ, ಉಗ್ರಪ್ಪ, ಮೈಸೂರು ಪ್ರದೇಶದಲ್ಲಿ ವಿಜಯಶಂಕರ್, ಧ್ರುವನಾರಾಯಣ್, ಬೆಂಗಳೂರಿನಲ್ಲಿ ಸಚಿವ ಕೃಷ್ಣ ಭೈರೇಗೌಡ ಸೋತಿರುವುದು ಕಾಂಗ್ರೆಸ್ಸಿಗೆ ಭಾರಿ ಮುಖಭಂಗವೇ ಸರಿ.