ರಾಜ್ಯದಲ್ಲಿ ಜನತಾ ಪರಿವಾರ ಒಡೆದು ಛಿದ್ರವಾಗಲು ಪಕ್ಷದ ನಾಯಕರ ಸ್ವಯಂಕೃತಾಪರಾಧಗಳೇ ಕಾರಣ ಎಂಬುದು ರಾಜ್ಯ ರಾಜಕೀಯ ಬಲ್ಲವರಿಗೆ ಗೊತ್ತಿರುವ ಸತ್ಯ. ಒಂದೇ ಪಕ್ಷದಲ್ಲಿದ್ದರೂ ಇನ್ನೊಬ್ಬ ತನಗಿಂತ ಮೇಲೇರಬಾರದು, ಪಕ್ಷದ ಸ್ಥಾನಮಾನಗಳು ನಮಗೇ ಬೇಕು ಎಂಬ ಸ್ವಾರ್ಥ ಪಕ್ಷವನ್ನು ಒಡೆದು ಚೂರು ಚೂರು ಮಾಡಿತ್ತು. ಇಂತಹ ಚೂರುಗಳಲ್ಲಿ ಈಗ ಗಟ್ಟಿಯಾಗಿ ಉಳಿದುಕೊಂಡಿರುವುದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾ ದಳ ಮಾತ್ರ. ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್ ಕೂಡ ತನ್ನ ಶಕ್ತಿ ಕಳೆದುಕೊಳ್ಳುತ್ತಿದ್ದು, ದೇವೇಗೌಡರು ಮತ್ತು ಅವರ ಜಾತಿ ಬಲದಿಂದ ಹಳೇ ಮೈಸೂರು ಭಾಗದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.
ಆದರೆ, ಕಾಂಗ್ರೆಸ್ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಹಳೇ ಮೈಸೂರು ಭಾಗದ ಶಕ್ತಿಯೂ ಸಣ್ಣಗೆ ಅಲುಗಾಡಲಾರಂಭಿಸಿತ್ತು. ಆದರೆ, ಪಕ್ಷ ಅಧಿಕಾರದಲ್ಲಿದೆ ಎಂಬ ಒಂದೇ ಕಾರಣಕ್ಕೆ ಅಷ್ಟಕ್ಕೆ ನಿಂತಿತ್ತು. ಆದರೆ, ಯಾವಾಗ ಮೈತ್ರಿ ಸರ್ಕಾರ ಉರುಳಿತೋ ಅಲುಗಾಟ ಜೋರಾಗಲಾರಂಭಿಸಿದ್ದು, ಪಕ್ಷದ ಇನ್ನಷ್ಟು ಕೊಂಬೆಗಳು ಉದುರಿಹೋಗುವ ಆತಂಕ ಕಾಣಿಸಿಕೊಂಡಿದೆ. ಈಗಾಗಲೇ ಮೂವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರೆ, ಇನ್ನೂ ಕೆಲವು ಶಾಸಕರು ಪಕ್ಷ ತೊರೆಯುವ ಮುನ್ಸೂಚನೆ ದೊರೆತಿದೆ.
2004ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ರಚಿಸಿದವು. ಅಲ್ಲಿಗೆ ಜೆಡಿಎಸ್ ಅಲುಗಾಟ ಆರಂಭವಾಗಿತ್ತು. ನಂತರದಲ್ಲಿ ಈ ಸಮ್ಮಿಶ್ರ ಸರ್ಕಾರ ಉರುಳಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅಷ್ಟರಲ್ಲಾಗಲೇ ಜೆಡಿಎಸ್ ನಿಂದ ಒಬ್ಬೊಬ್ಬರೇ ಶಾಸಕರು ಜಾಗ ಖಾಲಿ ಮಾಡಲಾರಂಭಿಸಿದರು. ಸಿದ್ದರಾಮಯ್ಯ ಮತ್ತು ತಂಡದಿಂದ ಆರಂಭವಾದ ಈ ಜೆಡಿಎಸ್ ತೊರೆಯುವ ಕಾರ್ಯ ಇತ್ತೀಚೆಗೆ ಪಕ್ಷದ ಮೂವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಸರ್ಕಾರ ಉರುಳಿಸುವವರೆಗೂ ಮುಂದುವರಿದಿತ್ತು.
ಪ್ರತಿ ಬಾರಿ ಪಕ್ಷದ ಶಾಸಕರು ರಾಜಿನಾಮೆ ನೀಡಿ ಬೇರೆ ಪಕ್ಷ ಸೇರಿದಾಗೆಲ್ಲಾ ಕಾಂಗ್ರೆಸ್, ಬಿಜೆಪಿಯವರು ನಮ್ಮ ಪಕ್ಷ ಒಡೆದು ಶಾಸಕರನ್ನು ಸೆಳೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಜೆಡಿಎಸ್ ವರಿಷ್ಠರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೂ ಸಾಮಾನ್ಯವಾಗಿತ್ತು. ಆದರೆ, ಸಿದ್ದರಾಮಯ್ಯ ಅವರಿಂದ ಹಿಡಿದು ಇತ್ತೀಚೆಗೆ ರಾಜಿನಾಮೆ ನೀಡಿದ ಎಚ್. ವಿಶ್ವನಾಥ್, ನಾರಾಯಣಗೌಡ, ಕೆ. ಗೋಪಾಲಯ್ಯ ಅವರ ರಾಜಿನಾಮೆ ಹಿಂದಿನ ಕಾರಣಗಳನ್ನು ಕೆದಕುತ್ತಾ ಹೋದರೆ ಅದು ಕೊನೆಗೆ ಬಂದು ನಿಲ್ಲುವುದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪಕ್ಕದಲ್ಲಿ. ಮತ್ತೆ ಈಗ ಜೆಡಿಎಸ್ ಶಾಸಕರಾದ ಜಿ. ಟಿ. ದೇವೇಗೌಡ, ಕೆ. ಮಹದೇವ್, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಸುರೇಶ್ ಬಾಬು, ಗುಬ್ಬಿ ಶ್ರೀನಿವಾಸ್ ಪಕ್ಷಕ್ಕೆ ಗುಡ್ ಬೈ ಹೇಳುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಕಾರಣ ಹುಡುಕಿದಾಗ ಮತ್ತೆ ಮುನ್ನಲೆಗೆ ಬರುವುದು ಕುಮಾರಸ್ವಾಮಿ ಅವರ ಹೆಸರು.

ಕುಮಾರಸ್ವಾಮಿ ಅಪನಂಬಿಕೆಯೇ ಕಾರಣ?
ಶಾಸಕರ ರಾಜಿನಾಮೆ ಸೇರಿದಂತೆ ಜೆಡಿಎಸ್ ಪಕ್ಷದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಹಿಂದೆ ಅಪನಂಬಿಕೆ ಇದೆ. ಅದರಲ್ಲೂ ಕುಮಾರಸ್ವಾಮಿ ಅವರು ತಮ್ಮ ಆಪ್ತರ ಬಗ್ಗೆಯೂ ನಂಬಿಕೆ ಹೊಂದಿಲ್ಲ. ಎಲ್ಲರನ್ನೂ ಅನುಮಾನದ ದೃಷ್ಟಿಯಿಂದಲೇ ನೋಡುತ್ತಿದ್ದಾರೆ. ಹೀಗಾಗಿ ಅವರಿಗೆ ಆಪ್ತರಾಗಿದ್ದವರು ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ ಎಂಬ ಮಾತು ಪಕ್ಷದ ವಲಯದಲ್ಲೇ ಆಗಾಗ್ಯೆ ಚರ್ಚೆಗೆ ಬರುತ್ತಿದ್ದವು. ಆದರೆ, ರಾಜಕೀಯದಲ್ಲಿ ಇಂತಹ ಆರೋಪಗಳು ಸಾಮಾನ್ಯ ಎಂದು ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ದೂರವಾಣಿ ಕದ್ದಾಲಿಕೆ ಪ್ರಕರಣ ಬೆಳಕಿಗೆ ಬಂದ ಬಳಿಕ ಕುಮಾರಸ್ವಾಮಿ ಅವರು ಯಾರನ್ನೂ ನಂಬುವುದಿಲ್ಲ. ಎಲ್ಲರ ಬಗ್ಗೆಯೂ ಅವರಿಗೆ ಅಪನಂಬಿಕೆ ಎಂಬ ಮಾತು ಸತ್ಯಕ್ಕೆ ಸಮೀಪ ಎನ್ನಿಸುವಂತಿದೆ. ಏಕೆಂದರೆ, ಈ ದೂರವಾಣಿ ಕದ್ದಾಲಿಕೆ ಮಾಡಿದ್ದೇ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಸೂಚನೆ ಮೇಲೆ ಎಂಬ ಮಾತುಗಳಿವೆ. ಯಾರ‍್ಯಾರ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ ಎಂಬುದನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಪರಿಶೀಲಿಸಿದಾಗ ನೂರಾರು ಹೆಸರುಗಳು ಬೆಳಕಿಗೆ ಬಂದಿದ್ದು, ಅದರಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ಹೆಸರೂ ಇದ್ದುದು ಕುಮಾರಸ್ವಾಮಿ ಬಗ್ಗೆ ಇದ್ದ ಅನುಮಾನಗಳನ್ನು ದೃಢಪಡಿಸುತ್ತದೆ.
ಏಕೆಂದರೆ, ತಮ್ಮ ಸಮುದಾಯದವರೊಬ್ಬರು ಮುಖ್ಯಮಂತ್ರಿಯಾಗಿದ್ದಾರೆ ಎಂಬ ಕಾರಣಕ್ಕೆ ಹಳೆಯ ದ್ವೇಷವೆಲ್ಲವನ್ನೂ ಮರೆತು ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ರಕ್ಷಣೆಯಾಗಿ ನಿಂತಿದ್ದವರು ಈ ಸ್ವಾಮೀಜಿ. ಅಷ್ಟೇ ಅಲ್ಲ, ಎರಡು ಬಾರಿ ಸರ್ಕಾರ ಉರುಳಿಸುವ ಪ್ರಯತ್ನವನ್ನು ತಪ್ಪಿಸಿದ್ದರು ಕೂಡ. ಇಂತಹ ಸ್ವಾಮೀಜಿಯವರ ಬಗ್ಗೆಯೇ ಅಪನಂಬಿಕೆಯಿಂದ ಅವರ ದೂರವಾಣಿ ಕದ್ದಾಲಿಕೆ ಮಾಡಿದ್ದಾರೆ ಎಂದಾದ ಮೇಲೆ ಇನ್ನು ಕುಮಾರಸ್ವಾಮಿ ಯಾರನ್ನು ನಂಬುತ್ತಾರೆ? ಅವರನ್ನು ನಂಬಿ ನಾವಾದರೂ ಪಕ್ಷದಲ್ಲಿ ಭವಿಷ್ಯ ನಂಬಿಕೊಂಡು ಕುಳಿತಿರುವುದು ಹೇಗೆ? ಎಂಬ ಆತಂಕವೇ ಇನ್ನಷ್ಟು ಶಾಸಕರು ಜೆಡಿಎಸ್ ನಿಂದ ದೂರವಾಗಲು ಪ್ರಯತ್ನಿಸುತ್ತಿರುವುದರ ಹಿಂದಿರುವ ಸತ್ಯ.

ಈ ಕಾರಣಕ್ಕಾಗಿಯೇ ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್ ಶಾಸಕರು ಪಕ್ಷ ತೊರೆದಿರುವ ಕಾರಣಗಳು ಕುಮಾರಸ್ವಾಮಿ ಅವರ ಪಕ್ಕದಲ್ಲಿ ನಿಲ್ಲುತ್ತದೆ. ಏಕೆಂದರೆ, ಆ ರೀತಿ ಪಕ್ಷ ತೊರೆದವರೆಲ್ಲರೂ ದೇವೇಗೌಡರಿಗಿಂತ ಕುಮಾರಸ್ವಾಮಿಗೆ ಆಪ್ತರಾಗಿದ್ದವರು. ಉದಾಹರಣೆಗೆ ಕುಮಾರಸ್ವಾಮಿಗಾಗಿ ಪ್ರಾಣ ಕೊಡುತ್ತೇನೆ ಎನ್ನುತ್ತಿದ್ದ ಜಮೀರ್ ಅಹ್ಮದ್ ಖಾನ್ ಬಳಿಕ ಕುಮಾರಸ್ವಾಮಿ ಕಾರಣದಿಂದಲೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು. ಜಮೀರ್ ಜತೆಜತೆಗೇ ಕಾಂಗ್ರೆಸ್ ಸೇರಿದ್ದ ಎನ್. ಚೆಲುವರಾಯಸ್ವಾಮಿ, ಎಚ್. ಸಿ. ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ರಮೇಶ್ ಬಂಡಿಸಿದ್ದೇಗೌಡ, ಭೀಮಾ ನಾಯಕ್ ಕೂಡ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲೇ ಗುರುತಿಸಿಕೊಂಡಿದ್ದವರು. ಇದೀಗ ಜೆಡಿಎಸ್ ತೊರೆಯುತ್ತಾರೆ ಎನ್ನಲಾಗುತ್ತಿರುವ ಆರು ಶಾಸಕರು ಕೂಡ ಕೆಲ ತಿಂಗಳ ಹಿಂದೆ ಕುಮಾರಸ್ವಾಮಿ ಆಪ್ತ ವಲಯದಲ್ಲಿದ್ದವರು.
ಆದರೆ, ಪಕ್ಷದ ನಾಯಕತ್ವ ವಹಿಸಿದವರಿಗೆ ತಮ್ಮ ಪಕ್ಷದವರ ಮೇಲೆ ಇಷ್ಟೊಂದು ಅಪನಂಬಿಕೆ ಇರುವುದು ರಾಜ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಬೆಳೆಯುತ್ತಿರುವ ರೀತಿ ಇತರೆ ಪಕ್ಷಗಳಿಗೆ ಆಘಾತ ತಂದಿದೆ. ದೇಶದ ಅತಿ ಹಳೆಯ, ಹಲವು ದಶಕಗಳ ಕಾಲ ದೇಶವನ್ನು ಆಳಿದ್ದ ಕಾಂಗ್ರೆಸ್ಸೇ ನೆಲಕಚ್ಚುವ ಸ್ಥಿತಿ ಬಂದಿದೆ. ಇದರ ಮಧ್ಯೆಯೂ ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಬಿಜೆಪಿಗೆ ತಿರುಗೇಟು ನೀಡುತ್ತಿವೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಇದೇ ನಿಟ್ಟಿನಲ್ಲಿ ಬೆಳವಣಿಗೆ ಕಾಣಬಹುದು ಎಂಬ ನಿರೀಕ್ಷೆ ಕಾಣಿಸಿಕೊಂಡಿತ್ತು. ಆದರೆ, ನಾಯಕರ ಅಪನಂಬಿಕೆ ಆ ನಿರೀಕ್ಷೆ ಹುಸಿ ಮಾಡುತ್ತಿದೆ.