ಜಿಂದಾಲ್ ಕಂಪನಿಗೆ (JSW Steel) 3,666 ಎಕರೆ ಜಮೀನಿಗೆ ಶುದ್ಧ ಕ್ರಯಪತ್ರ (Lease cum sale deed) ನೀಡುವ ರಾಜ್ಯ ಸಚಿವ ಸಂಪುಟದ ನಿರ್ಧಾರದ ಹಿಂದೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (Karnataka Industrial Areas Development Board) ಮೂರು ವರ್ಷಗಳ ಪರಿಶ್ರಮ ಇದೆ!
ಸಚಿವ ಆರ್ ವಿ ದೇಶಪಾಂಡೆ ಕಳೆದ ವಾರ ಈ ನಿರ್ಧಾರ ಸಮರ್ಥಿಸಿದ ವರದಿ ಬಂದಾಗ ‘ಪ್ರತಿಧ್ವನಿ’ ಈ ಬಗ್ಗೆ ಕುತೂಹಲ ತಳೆದು ತನಿಖೆ ನಡೆಸಿದೆ. 2014ರಲ್ಲಿ ಸಿದ್ದರಾಮಯ್ಯ ಸರ್ಕಾರ ನೂತನ ಕೈಗಾರಿಕಾ ನೀತಿ ಜಾರಿಗೆ ತಂದು, ನಂತರ ಎರಡೇ ವರ್ಷಗಳಲ್ಲಿ ಈ ನೀತಿಯನ್ನು ಬದಲಾಯಿಸಿ ಅನೇಕ ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡುವ ತಿದ್ದುಪಡಿಯನ್ನು ಸದ್ದಿಲ್ಲದೆ 2016ರಲ್ಲಿ ಅನುಷ್ಠಾನಕ್ಕೆ ತಂದ ಪ್ರಕರಣವಿದು.
ರಾಜ್ಯದಲ್ಲಿ 2013ಕ್ಕೂ ಹಿಂದೆ ಹಂಚಿಕೆಯಾಗಿರುವ ಹೆಚ್ಚಿನ ಖಾಸಗಿ ಏಕ ಘಟಕ ಸಂಕೀರ್ಣಗಳಿಗೆ (Single Unit Complexes) ಈ ಸೌಲಭ್ಯ ಕೊಡಿಸುವ ಮಹತ್ವದ ತಿದ್ದುಪಡಿಯನ್ನು KIADB 2016ರಲ್ಲಿ ಅನುಷ್ಠಾನಕ್ಕೆ ತಂದಿತ್ತು. ಈ ನಿರ್ಧಾರಕ್ಕೆ ಬರಲು ನೀಡಲಾದ ಬಹು ಮುಖ್ಯ ಕಾರಣ KIADB ಬಳಿ ಹಣವೇ ಇಲ್ಲದಿರುವುದು. ಎಷ್ಟರ ಮಟ್ಟಿಗೆಂದರೆ, ದೈನಂದಿನ ಖರ್ಚು ತೂಗಿಸಲೆಂದೇ KIADB ರೂ. 250 ಕೋಟಿ ಸಾಲ ಪಡೆದಿದೆಯಂತೆ!

KIADB ಮೂಲಕ ಎರಡು ರೀತಿಯ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತದೆ. ಒಂದು, KIADB ತಾನೇ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನಂತರ ಕೈಗಾರಿಗಳಿಗೆ ವಿತರಿಸುವುದು, ಇನ್ನೊಂದು, ಕರ್ನಾಟಕ ಭೂ ಸುಧಾರಣೆ ಅಧಿನಿಯಮ ಸೆಕ್ಷನ್ 109ರ ಪ್ರಕಾರ, ಕಂಪನಿಗಳು ತಾವೇ ರೈತರಿಂದ (Karnataka Land Reforms Act) ನೇರವಾಗಿ ಭೂಮಿ ಖರೀದಿಸುವುದು. KIADB ಆರ್ಥಿಕವಾಗಿ ಬಡವಾಗುತ್ತಾ ಹೋದಂತೆ ಹೆಚ್ಚಿನ ಏಕ ಘಟಕ ಸಂಕೀರ್ಣಗಳಿಗೆ ಭೂ ಸ್ವಾಧೀನವನ್ನು ಕಂಪನಿಗಳೇ ಮಾಡುತ್ತಿವೆ.
2014 ರ ಸರ್ಕಾರದ ಆದೇಶದಂತೆ (CI 511 SPQ 2013), KIADB 99 ವರ್ಷಗಳ ಲೀಸ್ ಆಧಾರದಲ್ಲಿ ಏಕ ಘಟಕ ಸಂಕೀರ್ಣಗಳಿಗೆ ಭೂಮಿ ವಿತರಿಸಲಾಗುತ್ತಿತ್ತು. ಈ ನಿಯಮಗಳನ್ನು ಸಡಿಲಿಸಿ, ಭವಿಷ್ಯದಲ್ಲಿ ಲೀಸ್/ಸೇಲ್ ಡೀಡ್ ಆಧಾರದಲ್ಲಿ ವಿತರಿಸುವ ಹಾಗೂ ಈ ಹಿಂದೆ, ಅಂದರೆ, 2013ಕ್ಕೂ ಮೊದಲು ವಿತರಿಸಿದ ಭೂಮಿಯನ್ನು ಷರತ್ತಿಗೊಳಪಟ್ಟು ಶುದ್ಧ ಕ್ರಯಪತ್ರ ಮಾಡಿಕೊಡುವ ಬಗ್ಗೆ ಇದೇ ನಿಯಮಗಳಿಗೆ ತಿದ್ದುಪಡಿ ಅಗತ್ಯವಿತ್ತು. ಈ ತಿದ್ದುಪಡಿ ಜಾರಿಗೆ ಬಂದಿದ್ದು 19-11-2016ರಲ್ಲಿ ನಡೆದ KIADBಯ 345ನೇ ಮಂಡಳಿ ಸಭೆಯಲ್ಲಿ.
ಅಚ್ಚರಿ ಎಂದರೆ, ಇಡೀ ಸಭೆಯಲ್ಲಿ (ಮಂಡಳಿ ಸಭೆಯ ದಾಖಲೆ ‘ಪ್ರತಿಧ್ವನಿ’ ಬಳಿಯಿದೆ) ಎಲ್ಲಿಯೂ 99 ವರ್ಷಗಳ ಲೀಸ್ ಆಧಾರದ ವಿತರಣಾ ನೀತಿ ಬದಲಾಯಿಸಿ ಶುದ್ಧ ಕ್ರಯಪತ್ರ ಮಾಡಿಕೊಡುವಂತೆ ಯಾವುದೇ ಖಾಸಗಿ ಕಂಪನಿಗಳು ಮನವಿ ಮಾಡಿದ ಬಗ್ಗೆ ಉಲ್ಲೇಖವಿಲ್ಲ. ಬದಲಾಗಿ, ಈ ತಿದ್ದುಪಡಿಯ ಬಗ್ಗೆ ವಿಷಯ ಪ್ರಸ್ತಾಪ ಆದದ್ದು, ಮೆಟ್ರೊ (Bangalore Metro Rail Corporation) ಸಲ್ಲಿಸಿದ್ದ ಪ್ರಸ್ತಾಪದಲ್ಲಿ. ಮೆಟ್ರೊ ತನ್ನ ಮನವಿಯಲ್ಲಿ ಹೇಳಿಕೊಂಡಿದ್ದೇನೆಂದರೆ, “ಮೆಟ್ರೊ ಪೂರ್ಣ ಪ್ರಮಾಣದ ಸರ್ಕಾರಿ ಉದ್ದಿಮೆಯಾಗಿರುವುದರಿಂದ ರೈಲು ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಾಗಿರುವ ಭೂಮಿಯನ್ನು ಶುದ್ಧ ಕ್ರಯಪತ್ರ ಮಾಡಿಕೊಡುವುದು ಯೋಜನೆಯ ದೃಷ್ಟಿಯಿಂದ ಉತ್ತಮ, ಸಾರ್ವಜನಿಕ ಹಿತದೃಷ್ಟಿಯಿಂದ ಶುದ್ಧ ಕ್ರಯಪತ್ರ ಮಾಡಿಕೊಡುವುದು ನೆರವಾಗಲಿದೆ.’’
ಮಂಡಳಿ ಸಭೆಯಲ್ಲಿ ಇದೇ ತಿದ್ದುಪಡಿಯನ್ನು ಇತರ ಸಾರ್ವಜನಿಕ ವಲಯದ ಉದ್ದಿಮೆಗಳ (Public Sector Undertakings) ಪರವಾಗಿ ಸ್ವಾಧೀನಪಡಿಸುವ ಭೂಮಿಗೆ ವಿಸ್ತರಿಸಿ, ಜೊತೆಗೆ ಎಲ್ಲ ಖಾಸಗಿ ಏಕ ಘಟಕ ಸಂಕೀರ್ಣಗಳನ್ನೂ ಸೇರಿಸುವ ನಿರ್ಧಾರ ತೆಗೆದುಕೊಂಡಿತು.
ನೆರೆ ರಾಜ್ಯಗಳು ನಡೆದ ಹಾದಿ
ಇತ್ತೀಚೆಗೆ ರಾಷ್ಟ್ರೀಯ ದೈನಿಕವೊಂದರಲ್ಲಿ (‘Times of India’) ಜಿಂದಾಲ್‌ಗೆ ಭೂಮಿ ಕಡಿಮೆ ಬೆಲೆಯಲ್ಲಿ ನೀಡುವ ನಿರ್ಧಾರ ಸಮರ್ಥಿಸಿ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಒಂದು ಹೇಳಿಕೆ ನೀಡಿದ್ದರು. ಅದೇನೆಂದರೆ, ರಾಜ್ಯದಲ್ಲಿ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ನೀಡುವ ಕೈಗಾರಿಕೆಗಳನ್ನು ಉತ್ತೇಜಿಸುವಲ್ಲಿ ನೆರೆ ರಾಜ್ಯಗೊಂದಿಗೆ ಸ್ಪರ್ಧಿಸುವ ಅನಿವಾರ್ಯತೆಯನ್ನು ರಾಜ್ಯ ಹೊಂದಿದೆ.
KIADBಯ 345ನೇ ಮಂಡಳಿ ಸಭೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಇಂತಹದ್ದೊಂದು ಕೈಗಾರಿಕಾ ನೀತಿ ಅನುಷ್ಠಾನಕ್ಕೆ ತರುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಅದರ ಪ್ರಕಾರ, ಆಂಧ್ರ ಸರ್ಕಾರ 2015-20 ರ ಕೈಗಾರಿಕಾ ನೀತಿ ಅನ್ವಯ SIPB – State Investment Promotion Boad (KIADBಯಂತೆ ಆಂಧ್ರ ಪ್ರದೇಶದ ಮಂಡಳಿ) ರೂ. 100 ಕೋಟಿಗೂ ಹೆಚ್ಚಿನ ಹೂಡಿಕೆ ಇರುವ ಕಂಪನಿಗಳಿಗೆ ಲೀಸ್ ಬದಲು ಶುದ್ಧ ಕ್ರಯಪತ್ರ ನೀಡುವ ಬಗ್ಗೆ ಚಿಂತಿಸಬಹುದು ಎಂದಿದೆ. ಆಂಧ್ರಪ್ರದೇಶ ಸರ್ಕಾರ ‘ಚಿಂತಿಸಬಹುದು’ ಎಂದು ತನ್ನ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಸೂಚಿಸಿದ್ದನ್ನು, KIADB ಅನುಷ್ಠಾನಕ್ಕೆ ತಂದೇಬಿಟ್ಟಿದೆ!
ಈ ತಿದ್ದುಪಡಿಯಂತೆ, ಇನ್ನು ಮುಂದೆ ಎಲ್ಲ ಖಾಸಗಿ ಏಕ ಘಟಕ ಸಂಕೀರ್ಣಗಳಿಗೆ 99 ವರ್ಷಗಳ ಲೀಸ್‌ಗೆ ಬದಲಾಗಿ ಸರ್ಕಾರ ಶುದ್ಧ ಕ್ರಯಪತ್ರವನ್ನೇ ನೀಡಲಿದೆ. ಆದರೆ, ಇದಕ್ಕೂ ಮೊದಲು 15 ವರ್ಷಗಳ ಲೀಸ್/ಸೇಲ್ ಅವಧಿ ನೀಡಲಾಗುವುದು ಹಾಗೂ ಕಂಪನಿಗಳು ಶೇ.50ಕ್ಕೂ ಹೆಚ್ಚು ಭೂಮಿ ಬಳಸಿಕೊಂಡಿದ್ದರೂ, 15 ವರ್ಷಕ್ಕೂ ಮೊದಲು ಶುದ್ಧ ಕ್ರಯಪತ್ರ ನೀಡುವಂತಿಲ್ಲ. ಹಾಗೆಯೇ, 23-08-2013ಕ್ಕೂ ಮೊದಲು KIADBಗೆ ಪೂರ್ಣ ಠೇವಣಿ ಹಣ ಪಾವತಿಸಿದ ಏಕ ಘಟಕ ಸಂಕೀರ್ಣಗಳಿಗೆ ಶುದ್ಧ ಕ್ರಯಪತ್ರ ನೀಡುವುದು.
ಇದಲ್ಲದೆ, ಮೂಲದಲ್ಲಿ ಹಂಚಿಕೆಯಾದ ಭೂಮಿಯ ಜೊತೆಗೆ ಹೆಚ್ಚುವರಿ ಹಂಚಿಕೆ ಮಾಡಿದ ಭೂಮಿಗೂ ಮೊದಲ ಹಂಚಿಕೆಯ ಕರಾರು ಪತ್ರ ಅನ್ವಯಿಸಲಿದೆ. ಅಂದರೆ, ಜಿಂದಾಲ್‌ನಂತೆ, 2006ರಲ್ಲಿ ಒಂದಷ್ಟು ಭೂಮಿ 2007ರಲ್ಲಿ ಮತ್ತಷ್ಟು ಭೂಮಿ ಹಂಚಿಕೆಯಾದಲ್ಲಿ 2006ರ ಹಂಚಿಕೆ ನಿಯಮವೇ ಅನ್ವಯಿಸಲಿದೆ.
ಇಷ್ಟೊಂದು ಅನುಕೂಲ ಮಾಡಿದ ಸರ್ಕಾರ, ಜಿಂದಾಲ್ ಹೊರತುಪಡಿಸಿ ಎಷ್ಟೆಲ್ಲ ಕೈಗಾರಿಕೆಗಳಿಗೆ ಇದೇ ತಿದ್ದುಪಡಿಯಾದ ನಿಯಮದಂತೆ ಶುದ್ಧ ಕ್ರಯಪತ್ರ ಮಾಡಿಕೊಟ್ಟಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.