ಜಿಂದಾಲ್ ಕಂಪನಿಗೆ (JSW Steel) 3,666 ಎಕರೆ ಭೂಮಿಯ ಶುದ್ಧ ಕ್ರಯಪತ್ರ (Lease cum sale deed) ಕೊಡುವುದರಿಂದ ರಾಜ್ಯದ ಮೇಲೆ ಯಾವುದೇ ಆರ್ಥಿಕ ಹೊರೆ ಇಲ್ಲ ಎನ್ನುವ ಸರ್ಕಾರದ ನಿಲುವು ಎಷ್ಟು ಸರಿ? ರಾಜ್ಯ ಸರ್ಕಾರ ಸ್ವಾಮ್ಯದ MMLಗೆ (Mysore Minerals Ltd) ಬರಬೇಕಿರುವ ರೂ. 1,200 ಕೋಟಿ ಹಣ ಪಾವತಿಸಿದರಷ್ಟೇ ಶುದ್ಧ ಕ್ರಯಪತ್ರ ಎಂದು ಜಿಂದಾಲ್‌ಗೆ ಹೇಳಲು ಸರ್ಕಾರಕ್ಕೇನು ಮುಜುಗರ?
ಹೆಚ್ಚು ಓದಿದ ಸ್ಟೋರಿಗಳು
ಮಾಜಿ ಸಚಿವ ಎಚ್ ಕೆ ಪಾಟೀಲ್ ಅವರು ಸೋಮವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬರೆದ ಪತ್ರದಲ್ಲಿ ಈ ಬಾಕಿ ಹಣದ ಉಲ್ಲೇಖವಿದೆ. ಲೋಕಾಯುಕ್ತ ವರದಿಯಲ್ಲಿ ಜಿಂದಾಲ್ ಕಂಪನಿ ಮೇಲೆ ಹಲವು ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳಿದ್ದವು. ಅವುಗಳಲ್ಲಿ ಒಂದು, ರಾಜ್ಯ ಸರ್ಕಾರ ಸ್ವಾಮ್ಯದ MML (Mysore Minerals Ltd) ಜೊತೆಗಿನ ಜಿಂದಾಲ್ ಕಂಪನಿಯ ಒಪ್ಪಂದ ಹಾಗೂ ಆ ಒಪ್ಪಂದದ ಕರಾರಿನ ಉಲ್ಲಂಘನೆ. ಇದರಂತೆ, ಜಿಂದಾಲ್ ಕಂಪನಿಯಿಂದ MMLಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. MMLಗೆ ಜಿಂದಾಲ್ ರೂ. 1,200 ಕೋಟಿಗೂ ಅಧಿಕ ಹಣ ಪಾವತಿಸಬೇಕಿದೆ.
ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಸರ್ಕಾರ ಅಕ್ರಮ ಗಣಿಗಾರಿಕೆ ಮೇಲಿನ ಲೋಕಾಯುಕ್ತ ವರದಿ ಮೇಲೆ ಕೈಗೊಳ್ಳಲಾದ ಕ್ರಮಗಳ ಮೇಲ್ವಿಚಾರಣೆ ನಡೆಸಲು ಸಚಿವ ಸಂಪುಟ ಉಪ ಸಮಿತಿ ನೇಮಿಸಿತ್ತು. ಆಗಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಪಾಟೀಲ್ ಅವರಿಗೆ ಈ ಸಮಿತಿಯ ನೇತೃತ್ವ ವಹಿಸಲಾಗಿತ್ತು.
ಜಿಂದಾಲ್ ಕಂಪನಿ ಹಾಗೂ MML ನಡುವಿನ ಒಪ್ಪಂದ ತಿಳಿಯುವ ಮುನ್ನ ಜಿಂದಾಲ್ ಕಂಪೆನಿ ಸಂಕ್ಷಿಪ್ತ ಹಿನ್ನೆಲೆ ತಿಳಿಯಬೇಕು.
ಜಿಂದಾಲ್ ಸ್ಟೀಲ್ಸ್ ಹಿನ್ನೆಲೆ

ಜಿಂದಾಲ್ ಗ್ರೂಪ್ 1982ರಲ್ಲಿ ಮುಂಬೈನ ವಾಸಿಂದ್ ಪ್ರದೇಶದಲ್ಲಿ ಆರಂಭವಾಯಿತು. ಪೈರಮಲ್ ಸ್ಟೀಲ್ ಲಿಮಿಟೆಡ್ ಎಂಬ ಕಂಪನಿಯನ್ನು ಖರೀದಿಸಿದ ಜಿಂದಾಲ್ ಗ್ರೂಪ್, ಮಹಾರಾಷ್ಟ್ರದ ತಾರಾಪುರ್‌ನಲ್ಲಿ ಸಣ್ಣ ಸ್ಟೀಲ್ ಮಿಲ್ ಆರಂಭಿಸಿತು. ಮುಂದೆ ಕಂಪನಿ – Jindal Iron Ore Steel Co Ltd (JISCO) ಆಗಿ ಬದಲಾಯಿತು. 1994ರಲ್ಲಿ Jindal Vijayanagar Steel Ltd (JVSL) ಹೆಸರಿನಲ್ಲಿ ಬಳ್ಳಾರಿ-ಹೊಸಪೇಟೆ ಮಾರ್ಗದ ತೋರಣಗಲ್ ಎಂಬಲ್ಲಿ 3,700 ಎಕರೆ ಭೂಮಿಯಲ್ಲಿ ಸ್ಟೀಲ್ ಪ್ಲಾಂಟ್ ಆರಂಭವಾಯಿತು. 2005ರಲ್ಲಿ JISCO ಹಾಗೂ JVSL ವಿಲೀನಗೊಂಡು, JSW Steel Ltd ಎಂಬ ಹೆಸರಿನಲ್ಲಿ ಉದ್ಯಮ ಮುಂದುವರಿಯಿತು.
ಜಿಂದಾಲ್‌ನ ತೋರಣಗಲ್ ಪ್ಲಾಂಟ್‌ಗೆ ಹೆಚ್ಚಿನ ಅದಿರು ಪೂರೈಕೆ ಆಗುವುದು ಬಳ್ಳಾರಿ ಜಿಲ್ಲೆಯಿಂದ. MML ಸ್ವಾಮ್ಯದಲ್ಲಿರುವ Timmappanagudi Iron Ore Mine (TIOM) ಮೂಲಕ ಜಿಂದಾಲ್ ತನ್ನ ಇನ್ನೊಂದು ಕಂಪನಿ Vijayanagar Minerals Pvt Ltd (VMPL) ಮೂಲಕ 2003-04ರಲ್ಲಿ ಅದಿರು ಹಂಚಿಕೆ ಒಪ್ಪಂದ ಮಾಡಿಕೊಂಡಿತ್ತು. ಆ ಒಪ್ಪಂದದ ಪ್ರಕಾರ, TIOMನ ಅದಿರು ಹಂಚಿಕೆ ಜಿಂದಾಲ್ ಹಾಗೂ MML ನಡುವೆ ಮಾತ್ರ ನಡೆಯಬೇಕು. ಆದರೆ, 2003-04ರಲ್ಲಿ TIOMನ 85,022 ಮೆಟ್ರಿಕ್ ಟನ್ ಅದಿರನ್ನು VMPL ಜಿಂದಾಲ್‌ನ ಮತ್ತೊಂದು ಸಹಸಂಸ್ಥೆ South West Mining Ltd (SWML)ಗೆ ಮಾರಾಟ ಮಾಡಿ ರಫ್ತು ಕೂಡ ಮಾಡಿತು. ಈ ರೀತಿ ಜಿಂದಾಲ್, 2003-04ರಿಂದ 2004-05ರವರೆಗೆ 3.65 ಲಕ್ಷ ಮೆಟ್ರಿಕ್ ಟನ್ ಅದಿರನ್ನು SWML ಮೂಲಕ ರಫ್ತು ಮಾಡಿತ್ತು. ಈ ಸಂಬಂಧ ಬಾಕಿ ಹಣ ರೂ. 1,200 ಕೋಟಿ ಬಗ್ಗೆ MML ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.
ಗ್ರಾಮೀಣಾಭಿವೃದ್ಧಿಇಲಾಖೆಯ ಆಕ್ಷೇಪದ ಹಿನ್ನೆಲೆಯಲ್ಲಿ ಪಡೆಯಲಾದ ಕಾನೂನು ಅಭಿಪ್ರಾಯದಲ್ಲಿ ಈ ಬಗ್ಗೆ ಉಲ್ಲೇಖವಿದೆ. 3,666 ಎಕರೆ ಭೂಮಿಯ ಲೀಸ್ ಒಪ್ಪಂದ ನಡೆದಿದ್ದು 2006ರಲ್ಲಾದರೂ ಸರ್ಕಾರ ಕ್ರಮ ತೆಗೆದುಕೊಳ್ಳಬಹುದು ಎಂದು ಅಭಿಪ್ರಾಯ ಹೇಳಿತ್ತು. “ಶುದ್ಧ ಕ್ರಯಪತ್ರದ ಪ್ರಸ್ತಾಪ ಹಾಗೂ MML ಅದಿರನ್ನು ಅಕ್ರಮವಾಗಿ ಮಾಡಿರುವುದು ಎರಡೂ ಪ್ರತ್ಯೇಕ ಪ್ರಕರಣಗಳೇನೋ ಹೌದು. ಆದರೆ, 2006ರ ಲೀಸ್ ಒಪ್ಪಂದದ ನಿಯಮ 7ರ ಪ್ರಕಾರ, ಸರ್ಕಾರ ಬಾಕಿ ಹಣವನ್ನು ಪಾವತಿಸುವ ಷರತ್ತು ವಿಧಿಸಬಹುದು. ಇಷ್ಟೇ ಅಲ್ಲದೆ, 3,666 ಎಕರೆಗಳ ಪೈಕಿ 2,000 ಎಕರೆಯ ಭೂಮಿಯಲ್ಲಿ ಖನಿಜ ಸಂಪತ್ತು ವಿಪುಲವಾಗಿರುವ ಕಾರಣ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳದೆ ನಿಖರ ಬೆಲೆ ವಿಧಿಸಿ ರಾಜ್ಯದ ಹಿತ ಕಾಪಾಡಿಕೊಳ್ಳವುದು,’’ ಎಂದು ಹೇಳಿದೆ.

ಈ ಕಾನೂನು ಅಭಿಪ್ರಾಯಕ್ಕೆ ಮೇಲ್ಮನವಿ ಎಂಬಂತೆ, ರಾಜ್ಯ ಸರ್ಕಾರ ಮಾರ್ಚ್ 2018ರಲ್ಲಿ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆಯಿತು. ತಮ್ಮ ಅಭಿಪ್ರಾಯದಲ್ಲಿ ಅಡ್ವೊಕೇಟ್ ಜನರಲ್, ಎಲ್ಲ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳುವಲ್ಲಿ ಸ್ವತಂತ್ರವಿದೆ ಎಂದಷ್ಟೇ ಹೇಳಿದ್ದರಲ್ಲದೆ, ಜಿಂದಾಲ್ ವಿರುದ್ಧ ಯಾವುದೇ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ವಿಷಯ ಅವರ ಗಮನಕ್ಕೆ ತರಲಾಗಿಲ್ಲ ಎಂದೂ ಹೇಳಿದ್ದರು.
ಎಚ್ ಕೆ ಪಾಟೀಲ್ ಅವರ ಪತ್ರದ ಮತ್ತೊಂದು ಪ್ರಮುಖ ಅಂಶ ಹೀಗಿದೆ, “ಈ ಬಾಕಿ ವಸೂಲಾತಿಯ ಕುರಿತು ಮುಂದೆ ಏನು ಕ್ರಮ ಕೈಗೊಳ್ಳಲಾಯಿತು ಎಂಬ ಬಗ್ಗೆ ಆರ್ಥಿಕ ಇಲಾಖೆ ತಮ್ಮ (ಕುಮಾರಸ್ವಾಮಿ) ಗಮನಕ್ಕೆ ತಂದಿರಲಿಕ್ಕಿಲ್ಲ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು ಜಿಂದಾಲ್ ಕಂಪನಿಯ ಪ್ರಮುಖ ಹುದ್ದೆಗಳಲ್ಲಿ ನಿವೃತ್ತಿಯ ನಂತರ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ಅಧಿಕಾರಿ, ತಾವು ಸರ್ಕಾರದ ಅಧಿಕಾರಾವಧಿಯಲ್ಲಿದ್ದಾಗ ಮಂಡಿಸಿದ ಪ್ರಸ್ತಾವನೆಗಳು ಮಂಜೂರಾತಿಗೆ ಪ್ರಭಾವ ಬೀರಿವೆ. ಈ ರೀತಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ಪ್ರಸ್ತಾವನೆಗಳ ಕುರಿತು ಮರು ಚಿಂತನೆ ಅಗತ್ಯ.’’