ಜಿಂದಾಲ್ ಕಂಪನಿಗೆ (JSW Steel) 3,666 ಎಕರೆ ಭೂಮಿಯ ಶುದ್ಧ ಕ್ರಯಪತ್ರ (Lease cum sale deed) ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದು, ಈ ಶುದ್ಧ ಕ್ರಯಪತ್ರದಿಂದ ರಾಜ್ಯ ಬೊಕ್ಕಸಕ್ಕೆ ರೂ. 5ರಿಂದ 6 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದಿದ್ದಾರೆ.
ಜಿಂದಾಲ್ ಕಂಪನಿಗೆ 3,666 ಎಕರೆ ಭೂಮಿಯ ಶುದ್ಧ ಕ್ರಯಪತ್ರ ನೀಡುವ ನಿರ್ಧಾರದ ಬಗ್ಗೆ ‘ಪ್ರತಿಧ್ವನಿ’ ಈಗಾಗಲೇ ವರದಿಗಳನ್ನು ಮಾಡಿದೆ. ಇದೀಗ ಈ ಭೂಮಿಯ ಮಾರ್ಗದರ್ಶಿ (Guidance Value) ಹಾಗೂ ಮಾರುಕಟ್ಟೆ ಮೌಲ್ಯದ ಬಗ್ಗೆ ‘ಪ್ರತಿಧ್ವನಿ’ ಕೆಲವು ದಾಖಲೆಗಳನ್ನು ಕಲೆಹಾಕಿದೆ.
ಸರ್ಕಾರ ಶುದ್ಧ ಕ್ರಯಪತ್ರ ನೀಡಲು ಉದ್ದೇಶಿಸಿರುವ ಭೂಮಿ ಬಳ್ಳಾರಿ ತಾಲೂಕಿನ ಸಂಡೂರು ತಾಲೂಕಿನ ತೋರಣಗಲ್ಲು, ಕುರೇಕುಪ್ಪ, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿದೆ. ಈ ಹಳ್ಳಿಗಳ ಪೈಕಿ ಕುರೇಕುಪ್ಪ ಗ್ರಾಮದಲ್ಲಿ ಭೂಮಿಯ ಮಾರ್ಗದರ್ಶಿ ಹಾಗೂ ಮಾರುಕಟ್ಟೆ ಮೌಲ್ಯ ಸರ್ಕಾರ ನಿಗದಿಪಡಿಸಿದ ದರಕ್ಕೆ ಹೋಲಿಸಿದರೆ ಅತ್ಯಂತ ಹೆಚ್ಚಿದೆ.
ಕುರೇಕುಪ್ಪ ಕಂದಾಯ ಗ್ರಾಮಕ್ಕೆ ಸೇರಿದ ಕೃಷಿ ಜಮೀನೊಂದರ ಇತ್ತೀಚಿನ ನೊಂದಣಿ ಪತ್ರವನ್ನು ಪರಿಶೀಲಿಸಿದರೆ ಇದು ಸ್ಪಷ್ಟವಾಗುತ್ತದೆ. ಏಪ್ರಿಲ್ 2019ರಲ್ಲಿ ನೊಂದಣಿಯಾದ ಈ ಶುದ್ಧ ಕ್ರಯಪತ್ರದಲ್ಲಿ ಎರಡು ಎಕರೆ ಭೂಮಿಯನ್ನು ಸರ್ಕಾರದ ಮಾರ್ಗದರ್ಶಿ ಬೆಲೆಯಡಿಯಲ್ಲಿ ಬರೋಬ್ಬರಿ ರೂ. 32 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಅಂದರೆ, ಎಕರೆಯೊಂದಕ್ಕೆ ರೂ. 16 ಲಕ್ಷ! ನೊಂದಣಿ ಇಲಾಖೆ ಮೂಲಗಳ ಪ್ರಕಾರ, ಈ ಗ್ರಾಮದಲ್ಲಿ ಮಾರುಕಟ್ಟೆ ಬೆಲೆ ಇನ್ನೂ ಹೆಚ್ಚಿದೆ.
ಈ ಗ್ರಾಮದಲ್ಲಿ ಜಿಂದಾಲ್ ಕಂಪನಿಗೆ 2006ರಲ್ಲಿ ಸರ್ಕಾರ ನಿಗದಿಪಡಿಸಿದ್ದ ಬೆಲೆ ಎಕರೆಯೊಂದಕ್ಕೆ ರೂ. 1.22 ಲಕ್ಷ. ಈ ಬೆಲೆ ಸರ್ಕಾರ ನಿಗದಿಪಡಿಸುವಲ್ಲಿ ಸರ್ಕಾರದ ನಿಲುವು ಹೀಗಿದೆ: ಸಚಿವ ಸಂಪುಟ ಸಭೆಯ ನಡಾವಳಿಯಲ್ಲಿ ವಾಣಿಜ್ಯ ಮತ್ತು ಉದ್ಯಮ ಇಲಾಖೆ ಹೇಳಿದಂತೆ, 1995ಕ್ಕಿಂತ ಮುಂಚೆ ರಾಜ್ಯ ಸರ್ಕಾರ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್‌ಗೆ ತೋರಣಗಲ್ಲು ಗ್ರಾಮದಲ್ಲಿ ಪ್ರತಿ ಎಕರೆಗೆ ರೂ. 45,000ದಂತೆ 3,695 ಎಕರೆ ಜಮೀನು ಹಂಚಿಕೆ ಮಾಡಿತ್ತು. ನಂತರ ಇದೇ ಕಂಪನಿಯ ಪೂರಕ ಕೈಗಾರಿಕಾ ಘಟಕಕ್ಕೆ ಪ್ರತಿ ಎಕರೆಗೆ ರೂ. 65,000ದಂತೆ 250 ಎಕರೆ ಭೂಮಿ ಹಂಚಿಕೆ ಮಾಡಲಾಗಿತ್ತು. ಈಗ ಸರ್ಕಾರ ಶುದ್ಧ ಕ್ರಯಪತ್ರ ನೀಡಲು ಮುಂದಾಗಿರುವ ಭೂಮಿ ಮೊದಲು ಕೆಪಿಸಿಎಲ್‌ನ (ಕರ್ನಾಟಕ ವಿದ್ಯುತ್ ನಿಗಮ ನಿ.) ವಿಜಯನಗರ ಥರ್ಮಲ್ ಪವರ್ ಪ್ರಾಜೆಕ್ಟ್‌ಗಾಗಿ ಕೆಐಡಿಬಿ ಮೀಸಲಿರಿಸಿದ್ದ 1,166.51 ಎಕರೆಯಷ್ಟು ಭೂಮಿ.
2005ರಲ್ಲಿ ರಾಜ್ಯ ಸರ್ಕಾರ ಕೆಪಿಸಿಎಲ್‌ಗೆ ಹಂಚಿಕೆ ಮಾಡಿದ್ದ ಈ ಭೂಮಿಯೂ ಸೇರಿದಂತೆ ಒಟ್ಟು 2,000 ಎಕರೆ ಭೂಮಿಯನ್ನು ಎಕರೆಯೊಂದಕ್ಕೆ ರೂ. 90,000ರಂತೆ ತೋರಣಗಲ್ಲು ಮತ್ತು ಕುರೆಕುಪ್ಪ ಗ್ರಾಮಗಳಲ್ಲಿ ಹಂಚಿಕೆ ಮಾಡಿತು. ಆಗ ಕೆಪಿಸಿಎಲ್‌ಗಾಗಿ ಭೂಸ್ವಾಧೀನಪಡಿಸಿದಾಗ ರೈತರಿಗೆ ವಿತರಿಸಿದ ಪ್ರತಿ ಎಕರೆಯ 1.10 ಲಕ್ಷ ಮತ್ತು ಕೆಐಡಿಬಿಯ ಭೂಸ್ವಾಧೀನ ಶುಲ್ಕ ಶೇ.11 ಸೇರಿದಂತೆ ಪ್ರತಿ ಎಕರೆಗೆ 1.22 ಲಕ್ಷವನ್ನು ಜಿಂದಾಲ್ ಪಾವತಿಸಿತ್ತು.
2019ರಲ್ಲಿ ಜಿಂದಾಲ್ ಪರ ಇದೇ 2,000 ಎಕರೆಯ ಶುದ್ಧ ಕ್ರಯಪತ್ರ ಮಾಡಿಕೊಡುವಾಗ ಆರ್ಥಿಕ ಇಲಾಖೆಯ ಅಭಿಪ್ರಾಯದಲ್ಲಿ 2007ರ ಸಮಯದಲ್ಲಿ ನಿಗದಿಪಡಿಸಿದ ಎಕರೆಯೊಂದಕ್ಕೆ ರೂ. 1.22 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಶುದ್ಧ ಕ್ರಯಪತ್ರ ಮಾಡಬಾರದು ಎಂದಷ್ಟೇ ಹೇಳಿದೆ. ಹಾಗಾಗಿ, ಸರ್ಕಾರ ಯಾವುದೇ ರೀತಿಯಲ್ಲೂ ಆ ಬೆಲೆಗೆ ಕಡಿಮೆ ಮಾಡಿಕೊಡದೇ ಅದೇ ಬೆಲೆಗೆ ಶುದ್ಧ ಕ್ರಯಪತ್ರ ಮಾಡಿಕೊಡಲು ಒಪ್ಪಿದೆ. ಅಂದರೆ, ಈಗಿನ ಮಾರುಕಟ್ಟೆ ಬೆಲೆಯ ಬಗ್ಗೆ ಸರ್ಕಾರ ಯಾವುದೇ ಚಿಂತನೆ ನಡೆಸಿಲ್ಲ. ಇದಲ್ಲದೇ, 27-12-2017ರ ಕಾನೂನು ಅಭಿಪ್ರಾಯದಲ್ಲಿ 2,000 ಎಕರೆ ಭೂಮಿಯಲ್ಲಿ ಅದಿರು ನಿಕ್ಷೇಪ ಇರುವುದರಿಂದ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರ ಮರುಚಿಂತನೆ ನಡೆಸಬೇಕು ಎಂದಿತ್ತು. ಆದರೆ, ಇದನ್ನು ತಳ್ಳಿಹಾಕಿದ ಸರ್ಕಾರ ಮರು ಅಭಿಪ್ರಾಯ ಪಡೆಯದೆ, ಇಡೀ 2,000 ಎಕರೆ ಭೂಮಿಯನ್ನು ಒಣಭೂಮಿಯೆಂದು ಹೇಳಿದೆ. “2000.58 ಎಕರೆ ಜಮೀನು ಒಣಭೂಮಿಯಾಗಿದ್ದು, ಈ ಜಮೀನಿನಲ್ಲಿ ಕಂಪನಿಯು ಸಮಗ್ರ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಿದ್ದು, ಇಲ್ಲಿ ಯಾವುದೇ ಖನಿಜ ಸಂಪತ್ತು ಇರುವುದಿಲ್ಲ,’’ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ವಾಣಿಜ್ಯ, ಉದ್ದಿಮೆ ಇಲಾಖೆ ಹೇಳಿದೆ.
ಸರ್ಕಾರ ನಿಗದಿಪಡಿಸಿರುವ ಬೆಲೆಯ ಪ್ರಕಾರ ಕಳೆದ 12 ವರ್ಷಗಳಲ್ಲಿ, ಅಂದರೆ 2007ರಿಂದ (ಲೀಸ್ ಒಪ್ಪಂದ ಆದ ವರ್ಷ) ಕುರೆಕುಪ್ಪ ಹಾಗೂ ತೋರಣಗಲ್ಲು ಗ್ರಾಮಗಳಲ್ಲಿನ ಭೂಮಿಯ ಬೆಲೆ ಸ್ವಲ್ಪವೂ ಹೆಚ್ಚಿಲ್ಲ. ಆದರೆ, ಅದೇ ಕಳೆದ 12 ವರ್ಷಗಳಲ್ಲಿ ಜಿಂದಾಲ್ ಕಂಪನಿಯ ಲಾಭ ಶೇ.959ರಷ್ಟು ಹೆಚ್ಚಿದೆ.
ಇಲ್ಲಿ ಗಮನಾರ್ಹ ಅಂಶವೆಂದರೆ, ಇನ್ನುಳಿದ 1,700 ಎಕರೆಗೆ ಮಾರುಕಟ್ಟೆ ಬೆಲೆಯಂತೆ ಶುದ್ಧ ಕ್ರಯಪತ್ರ ಮಾಡಿಕೊಡಬೇಕೆಂದು ಆರ್ಥಿಕ ಇಲಾಖೆ ಹೇಳಿದೆ. ಅದರಂತೆ, ಸರ್ಕಾರ 1,700 ಎಕರೆ ಭೂಮಿ ಇರುವ ತೋರಣಗಲ್ಲು, ತೋರಣಗಲ್ಲು, ಮುಸೇನಾಯಕನಹಳ್ಳಿ ಹಾಗೂ ಯರಬನಹಳ್ಳಿ ಗ್ರಾಮದಲ್ಲಿನ ಭೂಮಿಯ ಶುದ್ಧ ಕ್ರಯಪತ್ರಕ್ಕೆ ಮಾರುಕಟ್ಟೆ ಬೆಲೆ ತಿಳಿಯಲು ನೊಂದಣಿ ಹಾಗೂ ಕಂದಾಯ ಇಲಾಖೆಯಿಂದ ವರದಿ ಪಡೆದಿತ್ತು.