ಜಿಂದಾಲ್ ಕಂಪನಿಗೆ (JSW Steel) 3,666 ಎಕರೆ ಭೂಮಿಯ ಶುದ್ಧ ಕ್ರಯಪತ್ರ (Lease cum sale deed) ಕೊಡುವ ಸಂಬಂಧ ಕರ್ನಾಟಕದ ಸಚಿವ ಸಂಪುಟ ಕೈಗೊಂಡ ನಿರ್ಧಾರದ ಕುರಿತು ಮಾಜಿ ಸಚಿವ ಎಚ್.ಕೆ.ಪಾಟೀಲ್, ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಈಗಾಗಲೇ ಈ ಕುರಿತ ಪ್ರಕರಣವೊಂದು ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಮತ್ತು ಈ ಕುರಿತು ಅಭಿಪ್ರಾಯ ನೀಡುವಾಗ ಅಡ್ವೊಕೇಟ್ ಜನರಲ್ ಸುಪ್ರೀಂ ಕೋರ್ಟ್‌ನಲ್ಲಿರುವ ಮೇಲ್ಮನವಿ ಕುರಿತ ಮಾಹಿತಿ ಮುಚ್ಚಿಟ್ಟಿರುವುದರಿಂದ ಸಚಿವ ಸಂಪುಟ ಕೈಗೊಂಡ ನಿರ್ಧಾರ ಸರಿಯಲ್ಲ ಎಂಬುದು ಪಾಟೀಲ್ ಅವರ ಖಚಿತ ಅಭಿಪ್ರಾಯ.
ಎಚ್ ಕೆ ಪಾಟೀಲ್ ಅವರು ಸೋಮವಾರವಷ್ಟೇ ಸಿಎಂಗೆ ಪತ್ರ ಬರೆದು ಈ ಕುರಿತು ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಲೋಕಾಯುಕ್ತ ವರದಿಯಲ್ಲಿ ಜಿಂದಾಲ್ ಕಂಪನಿ ಮೇಲೆ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳಿದ್ದವು; ಅವುಗಳಲ್ಲಿ, ರಾಜ್ಯ ಸರ್ಕಾರ ಸ್ವಾಮ್ಯದ MML (Mysore Minerals Ltd) ಜೊತೆಗಿನ ಜಿಂದಾಲ್ ಕಂಪನಿಯ ಒಪ್ಪಂದ ಹಾಗೂ ಆ ಒಪ್ಪಂದದ ಕರಾರಿನ ಉಲ್ಲಂಘನೆಯೂ ಒಂದು. ಜಿಂದಾಲ್ ಕಂಪನಿಯಿಂದ MMLಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. MMLಗೆ ಜಿಂದಾಲ್ ಕಂಪನಿಯು 1,200 ಕೋಟಿ ರೂಪಾಯಿಗೂ ಅಧಿಕ ಹಣ ಪಾವತಿಸಬೇಕಿದೆ ಎಂಬ ಗಂಭೀರ ಸಂಗತಿಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದರು. ಆದರೆ, ಈ ಕುರಿತು ಯಾವುದೇ ಅಧಿಕೃತ ಅಭಿಪ್ರಾಯ ಮುಖ್ಯಮಂತ್ರಿಯವರಿಂದಾಗಲೀ ಅಥವಾ ಸಚಿವರಿಂದಾಗಲೀ ಹೊರಬಿದ್ದಿರಲಿಲ್ಲ. ಜೊತೆಗೆ, ಸಚಿವ ಸಂಪುಟದಲ್ಲಿ ಜಿಂದಾಲ್‌ಗೆ ಶುದ್ಧ ಕ್ರಯಪತ್ರ ಕೊಡಲು ಸಚಿವ ಸಂಪುಟ ಅನುಮೋದನೆ ಕೂಡ ನೀಡಿಯಾಗಿತ್ತು. ಇದರಿಂದ ಅಸಮಾಧಾನಗೊಂಡಿರುವ ಎಚ್.ಕೆ.ಪಾಟೀಲ್, ಮತ್ತೊಂದು ಪತ್ರ ಬರೆದು ಸುಪ್ರೀಂ ಕೋರ್ಟ್‌ನ ಮಾತುಗಳನ್ನು ನೆನೆಪಿಸಿದ್ದಾರೆ.
ಈ ಹಿಂದಿನ ಸರ್ಕಾರದ ಎದುರು ಈ ವಿಷಯ ಬಂದಾಗ, ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿತ್ತು. ಆದರೆ, ಕಾನೂನು ಇಲಾಖೆಯ ಅಭಿಪ್ರಾಯ ಶುದ್ಧ ಕ್ರಯಪತ್ರ ನೀಡುವ ಪರವಾಗಿ ಇರಲಿಲ್ಲ. ಆದರೂ ಕಾನೂನು ಇಲಾಖೆಯ ಅಭಿಪ್ರಾಯವನ್ನು ಮೀರಿ, ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಕೇಳಲಾಗಿತ್ತು. ಅಡ್ವೊಕೇಟ್ ಜನರಲ್ ಅವರು ಶುದ್ಧ ಕ್ರಯಪತ್ರ ನೀಡಿದರೆ ಕಾನೂನು ತೊಡಕಿಲ್ಲ ಎಂಬರ್ಥ ಬರುವ ಅಭಿಪ್ರಾಯ ನೀಡಿದ್ದರು. ಹಾಗಾಗಿ ಸಚಿವ ಸಂಪುಟ ಅನುಮೋದನೆ ನೀಡಿದೆ. ಆದರೆ, ಮಾಜಿ ಸಚಿವ ಪಾಟೀಲ್ ಅವರು ಹೇಳುವ ಪ್ರಕಾರ, “ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಆಧರಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದರೆ ಅದು ಕಾನೂನುಬದ್ಧ ಆಗುವುದಿಲ್ಲ. ಏಕೆಂದರೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಈ ವಿಷಯ ಬಾಕಿ ಇದೆ. ಸಮಾಜ ಪರಿವರ್ತನಾ ಸಮುದಾಯವು ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತು ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಈ ಪ್ರಕರಣ ಸೇರ್ಪಡೆಯಾಗಿದ್ದರೂ ಅಡ್ವೊಕೇಟ್ ಜನರಲ್ ಅದನ್ನು ಪರಿಗಣಿಸಿಲ್ಲ.”
ಈ ಕುರಿತು ಮಧ್ಯಂತರ ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್, “ಈ ಕುರಿತ ಯಾವುದೇ ಪ್ರಕರಣಗಳ ವಿಚಾರಣೆ ಯಾವುದೇ ಕೋರ್ಟ್‌ನಲ್ಲಿ ಬಾಕಿ ಇದ್ದಲ್ಲಿ, ಈ ಕೋರ್ಟ್‌ನಿಂದ ಮುಂದಿನ ಆದೇಶ ಬರುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಸಿಬಿಐ ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಮೂರು ತಿಂಗಳ ಒಳಗೆ ವರದಿ ಸಲ್ಲಿಸಬೇಕು,” ಎಂದು ಹೇಳಿದ್ದ ಮಾತುಗಳನ್ನು ಪಾಟೀಲ್ ಅವರು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದಾರೆ.
“ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ, ಮೇ 27ರಂದು ಸಚಿವ ಸಂಪುಟ ಕೈಗೊಂಡಿರುವ ನಿರ್ಣಯ ಸಮರ್ಪಕವಾದುದಲ್ಲ. ಅಡ್ವೊಕೇಟ್ ಜನರಲ್ ಅವರು, ‘ಈ ಪ್ರಕರಣದಲ್ಲಿ ಯಾವುದೇ ಮೇಲ್ಮನವಿ ಸಲ್ಲಿಸಿರುವ ಕುರಿತು ತಮ್ಮ ಗಮನಕ್ಕೆ ಬಂದಿರುವುದಿಲ್ಲ’ ಎಂದು ಹೇಳುವ ಮೊದಲು, ಮೇಲ್ಮನವಿಗಳನ್ನು ಸಲ್ಲಿಸಲಾಗಿದೆಯೇ ಹಾಗೂ ಜಿಂದಾಲ್ ಮತ್ತು ಸೌತ್ ವೆಸ್ಟ್ ಮೈನಿಂಗ್ ಕಂಪನಿಗಳ ಕುರಿತು ಲೋಕಾಯುಕ್ತರು ಸಲ್ಲಿಸಿದ ವರದಿಯ ಹಿನ್ನೆಲೆಯಲ್ಲಿ ಯಾವುದಾದರೂ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ ಯೇ ಎಂಬುದನ್ನು ಪರಿಶೀಲಿಸಬೇಕಾಗಿತ್ತು,” ಎಂದು ಎಚ್ ಕೆ ಪಾಟೀಲ್ ಚಾಟಿ ಬೀಸಿದ್ದಾರೆ.
“ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಸರ್ಕಾರದ ದಾರಿ ತಪ್ಪಿಸುವ ಯಾರದೇ ಅಭಿಪ್ರಾಯಲ್ಲೂ ಕವಡೆಕಾಸಿನ ಕಿಮ್ಮತ್ತೂ ಕೊಡದೆ, ತಪ್ಪು ಮಾಹಿತಿಗಳನ್ನು ಆಧರಿಸಿ ಸರ್ಕಾರ ನಿರ್ಣಯ ಕೈಗೊಂಡರೆ ಸೂಕ್ತವಾಗದು. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಕೈಗೊಂಡಿರುವ ಕರಾಳ ನಿರ್ಣಯವನ್ನು ಅ ನುಷ್ಠಾನಗೊಳಿಸದೆ ರದ್ದುಗೊಳಿಸಬೇಕೆಂದು ಆಗ್ರಹಿಸುವೆ,” ಎಂದು ಎಚ್ ಕೆ ಪಾಟೀಲ್ ಪತ್ರ ಮುಗಿಸಿದ್ದಾರೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ಕುರಿತ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷರಾಗಿದ್ದ ಎಚ್ ಕೆ ಪಾಟೀಲ್, ಪ್ರಕರಣದ ಕುರಿತು ಇದುವರೆಗಿನ ಪತ್ರಗಳಲ್ಲಿ ಸಾಕಷ್ಟು ಮಾಹಿತಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಒದಗಿಸಿಯಾಗಿದೆ. ಇದೀಗ, ಸಚಿವ ಸಂಪುಟದ ನಿರ್ಣಯದ ಕುರಿತು ಸಿಎಂ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಬಾಕಿ.