ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳು ತೀವ್ರ ತರವಾದ ಬರ ಎದುರಿಸುತ್ತಿವೆ. ಕೆಲವು ಕಡೆಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಜನರ ಸಮಸ್ಯೆಗಳಿಗೆ ಕಿವಿಯಾಗಬೇಕಿದ್ದ ಆಡಳಿತರೂಢ ಸಮ್ಮಿಶ್ರ ಸರ್ಕಾರವಾಗಲಿ, ವಿರೋಧ ಪಕ್ಷವಾದ ಬಿಜೆಪಿಯಾಗಲಿ ನಿರೀಕ್ಷಿತ ಕೆಲಸ ಮಾಡಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ಜನರ ಸಮಸ್ಯೆಗಳನ್ನು ಇಟ್ಟು ಹೋರಾಟ ನಡೆಸಬೇಕಾದ ಬಿಜೆಪಿ 2018ರ ಮೇ 23ರಂದು ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಅಗತ್ಯವಾದ ಎಲ್ಲಾ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದೆ. ಇದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬಿಜೆಪಿಯ ಹೈಕಮಾಂಡ್ ನೆರವಾಗಿದೆ ಎಂಬುದಕ್ಕೆ ಪಕ್ಷದ ನಾಯಕರು ನೀಡಿರುವ ಹೇಳಿಕೆಗಳಲ್ಲಿ ಉತ್ತರ ಅಡಗಿದೆ.
ಅಲಮಟ್ಟಿ ಜಲಾಶಯ ವಿಷಯ:
ಪ್ರತಿಪಕ್ಷವಾದ ಬಿಜೆಪಿಗೆ ಜನರ ಸಮಸ್ಯೆಗಳು ಮುಖ್ಯವಲ್ಲ. ಅಧಿಕಾರವೇ ಅದರ ಏಕೈಕ ಗುರಿ ಎಂಬುದಕ್ಕೆ ಈ ಸಂಗತಿಗಳು ಸ್ಪಷ್ಟತೆ ಒದಗಿಸುತ್ತವೆ. ವಿಜಯಪುರ ಜಿಲ್ಲೆಯಲ್ಲಿರುವ ಆಲಮಟ್ಟಿ ಜಲಾಶಯದ ಎತ್ತರವನ್ನು 519 ಮೀಟರ್ ನಿಂದ 524 ಮೀಟರ್ ಗೆ ಹೆಚ್ಚಿಸುವುದಕ್ಕೆ ಸುಪ್ರೀಂಕೋರ್ಟ್ ಹಲವು ವರ್ಷಗಳ ಹಿಂದೆ ಒಪ್ಪಿಗೆ ನೀಡಿದೆ. ಈ ಯೋಜನೆ ಅನುಷ್ಠಾನದಿಂದ ಈ ಭಾಗದ ಸಾಕಷ್ಟು ಕೃಷಿ ಭೂಮಿಯು ನೀರಾವರಿಗೆ ಒಳಪಡಲಿದೆ. ಇದರಿಂದ ಸಹಜವಾಗಿ ಜನರ ಬದುಕು ಸುಧಾರಣೆಯಾಗಲಿದೆ. ಆದರೆ, ಇದರ ಬಗ್ಗೆ ಎತ್ತರದ ಧ್ವನಿಯಲ್ಲಿ ಮಾತನಾಡಿ ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಾದ ಬಿಜೆಪಿ ಮಾಡುತ್ತಿರುವುದೇನು?
ಕೃಷ್ಣಾ ಬಿ ಸ್ಕೀಮ್ ಅಡಿ ಕಾಲುವೆಗಳ ಆಧುನೀಕರಣ ಕೆಲಸ ಇನ್ನೂ ಆರಂಭವಾಗಿಲ್ಲ. ಈ ನಿಟ್ಟಿನಲ್ಲಿ ಆಡಳಿತ ಪಕ್ಷ ಯಾವುದೇ ಕೆಲಸ ಮಾಡಿಲ್ಲ. ಈ ವಿಚಾರ ಇಟ್ಟುಕೊಂಡು ಪ್ರಬಲ ಹೋರಾಟ ಸಂಘಟಿಸಬೇಕಿದ್ದ ಪ್ರತಿ ಪಕ್ಷವಾದ ಬಿಜೆಪಿ ಮಾಡಿದ್ದಾದರೂ ಏನು? ಉತ್ತರ ಕರ್ನಾಟಕ ಭಾಗದಲ್ಲಿ 13 ಸಾವಿರಕ್ಕೂ ಅಧಿಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೊರತೆಯಿದೆ. ಈ ಶಾಲೆಗಳಿಗೆ ಬೋಧಕರನ್ನು ನೇಮಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕೆಲಸವನ್ನು ಸರ್ಕಾರ ಕೈಗೊಳ್ಳುವಂತೆ ಮಾಡಬೇಕಿದ್ದ ಕಮಲ ಪಾಳೆಯವು ಈ ಬಗ್ಗೆ ಯಾವುದೇ ರೀತಿಯಲ್ಲೂ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ.
ರಾಯಚೂರು ಶಾಖೋತ್ಪನ್ನ ವಿಷಯ:
ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕದ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿ ಕಂಪೆನಿಗೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರ ಅಲ್ಲಿನ ಜನರ ಉದ್ಯೋಗವನ್ನು ಕಸಿದುಕೊಂಡಿದೆ. ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ನೂರಾರು ಮಂದಿ ಬೀದಿಗೆ ಬಿದ್ದಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಿದ್ದ ಪ್ರತಿಪಕ್ಷ ಬಿಜೆಪಿ ಏನು ಮಾಡುತ್ತಿದೆ?
ಇತ್ತೀಚೆಗೆ ಉತ್ತರ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ ಉಪನ್ಯಾಸಕರು ದಕ್ಷಿಣ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಿಗೆ ನಿಯೋಜನೆಗೊಳ್ಳುವ ಆದೇಶವನ್ನು ಸಮ್ಮಿಶ್ರ ಸರ್ಕಾರ ಹೊರಡಿಸಿದೆ. ಇದು ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಮಾರಕವಾದ ನಿರ್ಧಾರ. ಆದರೆ, ಇದನ್ನು ಕಟುವಾಗಿ ವಿರೋಧಿಸಬೇಕಾದ ಬಿಜೆಪಿಯು ಅಧಿಕಾರ ಹಿಡಿಯುವ ಒಂದು ಅಂಶದ ಕಾರ್ಯಕ್ರಮ ಹಾಕಿಕೊಂಡು ಜನರ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

ಉತ್ತರ ಕರ್ನಾಟಕದಲ್ಲಿ ಕಚೇರಿ:
ಕೆಲವು ತಿಂಗಳ ಹಿಂದೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ವ್ಯಾಪಕವಾಗಿ ಕೇಳಿಬಂದಿತ್ತು. ಈ ಕಾವನ್ನು ತಣಿಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೆಲವು ಸರ್ಕಾರಿ ಕಚೇರಿಗಳನ್ನು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸ್ಥಳಾಂತರಿಸುವ ನಿರ್ಧಾರ ಪ್ರಕಟಿಸಿದ್ದರು. ಇದರ ಸಾಧಕ-ಬಾಧಕ, ಜನರಿಗೆ ಈ ನಿರ್ಧಾರದಿಂದ ಆಗಬಹುದಾದ ಸಮಸ್ಯೆ ಹಾಗೂ ಲಾಭ, ಸರ್ಕಾರದ ನಿರ್ಧಾರದ ನಂತರ ಆದ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ಜನಾಭಿಪ್ರಾಯ ರೂಪಿಸಲು ಆಸ್ಥೆ ವಹಿಸಬೇಕಿದ್ದ ಬಿಜೆಪಿ ಈ ನಿಟ್ಟಿನಲ್ಲೂ ಧ್ವನಿ ಎತ್ತಲಿಲ್ಲ.
ನಾಮಕಾವಸ್ತೆಗೆ ಎನ್ನುವಂತೆ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಆರಂಭಿಸುವುದಕ್ಕೂ ಮುನ್ನ ಪ್ರತಿಪಕ್ಷದ ನಾಯಕರಾದ ಬಿ ಎಸ್ ಯಡಿಯೂರಪ್ಪನವರು ಬರದ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳ ರೈತರನ್ನು ಭೇಟಿ ಮಾಡಿದ್ದರು. ಇದನ್ನೂ ತಾರ್ಕಿಕವಾಗಿ ಅಂತ್ಯಗೊಳಿಸುವ ಕೆಲಸವನ್ನು ಬಿಜೆಪಿ ನಾಯಕತ್ವ ಮಾಡಲಿಲ್ಲ.
ಡಾ. ಡಿ ಎಂ ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಯ ಸ್ಥಿತಿಗತಿಯ ಬಗ್ಗೆಯೂ ಬಿಜೆಪಿ ಇದುವರೆಗೆ ಚಕಾರವೆತ್ತಿಲ್ಲ. ಈ ತಾಲ್ಲೂಕುಗಳ ಅಭಿವೃದ್ಧಿಗೆ ವೆಚ್ಚ ಮಾಡಲಾದ ಅನುದಾನ ಹಾಗೂ ವಾಸ್ತವದ ಬಗ್ಗೆ ಗಮನಸೆಳೆಯಬೇಕಿದ್ದ ಬಿಜೆಪಿ ಪ್ರತಿಪಕ್ಷವಾಗಿ ತನ್ನ ನಿರ್ವಹಣೆಯನ್ನು ಸಮಾಧನಕರವಾಗಿಯೂ ನಿರ್ವಹಿಸಿಲ್ಲ ಎಂಬ ಅಭಿಪ್ರಾಯ ಉತ್ತರ ಕರ್ನಾಟಕದ ಜನರ ಮನದಲ್ಲಿದೆ.
ಬಿಜೆಪಿ ಈ ಭಾಗದಲ್ಲಿ ಗೆದ್ದದ್ದೆಷ್ಟು:
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದ 96 ಕ್ಷೇತ್ರಗಳಲ್ಲಿ ಬಿಜೆಪಿಯು 56 ಸ್ಥಾನ ಗೆದ್ದಿದೆ. ಕಾಂಗ್ರೆಸ್ 34 ಹಾಗೂ ಜೆಡಿಎಸ್ 6 ಸ್ಥಾನ ದಕ್ಕಿವೆ. ಆಡಳಿತರೂಢ ಪಕ್ಷಗಳಿಗಿಂತಲೂ ಹೆಚ್ಚು ಸ್ಥಾನ ಗೆದ್ದಿರುವ ಬಿಜೆಪಿಯು ಪ್ರಬಲವಾಗಿ ಆ ಭಾಗದ ಸಮಸ್ಯೆಗಳನ್ನು ಮಂಡಿಸುವ ಮೂಲಕ ಜನರನ್ನು ಎಚ್ಚರಿಸಬೇಕಿತ್ತು. ಆದರೆ, ಇಂಥ ಯಾವುದೇ ತೆರನಾದ ಹೋರಾಟವನ್ನು ಬಿಜೆಪಿ ಸಂಘಟಿಸಲಿಲ್ಲ. ಇದಕ್ಕೆ ಕಾರಣವೂ ಇದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಎತ್ತಿದರೆ ದಕ್ಷಿಣ ಕರ್ನಾಟಕದಲ್ಲಿ ಜನ ಬೆಂಬಲ ಕಳೆದುಕೊಳ್ಳುವ ಆತಂಕವನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಎದುರಿಸುತ್ತಿವೆ. “ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದರಿಂದ ಮುಂದಿನ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಬೇಕಾಗಬಹುದಾದ ಆತಂಕ ಎದುರಿಸುತ್ತಿದೆ. ಈ ಕಾರಣಕ್ಕಾಗಿಯೇ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತಿದೆ” ಎಂದು ಬೇಸರಿಸುತ್ತಾರೆ ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ರಾಯಚೂರು ಮೂಲದ ಅಬ್ದುಲ್ ರಜಾಕ್.
ಆಡಳಿತ ಪಕ್ಷದ ವಿಫಲತೆಗಳನ್ನು ಎತ್ತಿ ತೋರುವಲ್ಲಿ ಸೋತಿರುವ ಪ್ರತಿಪಕ್ಷ ಒಂದು ಕಡೆಯಾದರೆ, ಶತಾಯಗತಾಯ ಮಂತ್ರಿಯಾಗುವುದೇ ಗುರಿ ಎಂಬಂತೆ ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಾಸಕರು ಮತ್ತೊಮ್ಮೆ ಜನಾದೇಶ ಕೇಳಲು ಬರಲಿದ್ದಾರೆ. ಆಗಲಾದರೂ ಜನರು ಜಾತಿ, ಮತ, ಧರ್ಮ ಹಾಗೂ ಪ್ರಾಂತ್ಯಗಳನ್ನು ಬದಿಗಿಟ್ಟು ತಮ್ಮ ನೋವು ಹಾಗೂ ಬೇಡಿಕೆಗಳಿಗೆ ಧ್ವನಿಯಾಗುವ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ, ಇದೂ ಕಷ್ಟಸಾಧ್ಯ ಎಂಬ ಮಟ್ಟಕ್ಕೆ ವ್ಯವಸ್ಥೆಯನ್ನು ಕಲುಷಿತಗೊಳಿಸಲಾಗಿದೆ.