ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಹೋರಾಟ ವ್ಯಾಪಕವಾಗುತ್ತಿರುವ ನಡುವೆಯೇ, ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಜರ್ಮನಿ ಮೂಲದ ವಿದ್ಯಾರ್ಥಿಯನ್ನು ವಾಪಸ್ ತವರಿಗೆ ಕಳುಹಿಸುವ ಭಾರತದ ನಿರ್ಧಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಗೆ ಒಳಗಾಗಿದೆ.
ಜರ್ಮನಿಯ ನ್ಯೂರೆಂಬರ್ಗ್ ಮೂಲದ ವಿದ್ಯಾರ್ಥಿಯಾದ ಜಾಕಬ್ ಲಿಂಡೆಂತಾಲ್ ಮದ್ರಾಸ್ ನ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಹಾಗೂ ಜರ್ಮನಿ ವಿಶ್ವವಿದ್ಯಾಲಯದ ನಡುವಿನ ಕೊಡುಕೊಳ್ಳುವಿಕೆಯ ಭಾಗವಾಗಿ ಮದ್ರಾಸ್ ಐಐಟಿಯಲ್ಲಿ ಭೌತಶಾಸ್ತ್ರದ ತರಬೇತಿಯಲ್ಲಿ ಪಾಲ್ಗೊಂಡಿದ್ದ. ಈ ಸಂದರ್ಭದಲ್ಲಿ ದೇಶಾದ್ಯಂತ ಸಿಎಎ ವಿರುದ್ಧ ಹೋರಾಟ ಚುರುಕು ಪಡೆದಿತ್ತು. ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದರಿಂದ ಅವರಿಗೆ ಬೆಂಬಲ ವ್ಯಕ್ತಪಡಿಸುವುದರ ಭಾಗವಾಗಿ ಐಐಟಿ ಮದ್ರಾಸ್ ವಿದ್ಯಾರ್ಥಿಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಹೋರಾಟದಲ್ಲಿ ಜಾಕಬ್ ಸಹ ಭಾಗಿಯಾಗಿ “ಸಮವಸ್ತ್ರದಲ್ಲಿರುವ ಕ್ರಿಮಿನಲ್ ಗಳು ಕ್ರಿಮಿನಲ್ ಗಳಿಗೆ ಸಮ”, “1933-45ರಲ್ಲಿ ಜರ್ಮನಿಯಲ್ಲಿ ನಡೆದ ಘಟನೆಗಳಿಗೆ ನಾವು ಸಾಕ್ಷಿ” ಎಂಬ ಕಿಚ್ಚು ಹಬ್ಬಿಸುವ ಸಂದೇಶಗಳನ್ನೊಳಗೊಂಡ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದ. ಪ್ರತಿಭಟನೆಯಲ್ಲಿ ಆತ ಭಾಗವಹಿಸಿದ್ದಕ್ಕಿಂತಲೂ ಆತ ಹಿಡಿದುಕೊಂಡಿದ್ದ ಭಿತ್ತಿಪತ್ರಗಳು ನರೇಂದ್ರ ಮೋದಿ ಸರ್ಕಾರವನ್ನು ಕಂಗೆಡಿಸಿದಂತಿದೆ. ಇದರಿಂದ ಕುಪಿತವಾದ ಸರ್ಕಾರವು ವಲಸೆ ಅಧಿಕಾರಿಗಳ ಮೂಲಕ ಜಾಕಬ್ ತಕ್ಷಣ ಭಾರತ ತೊರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಅಷ್ಟಕ್ಕೂ ಜಾಕಬ್ ಹಿಡಿದಿದ್ದ ಭಿತ್ತಿಪತ್ರಗಳ ಸಂದೇಶ ಮೋದಿ ಸರ್ಕಾರಕ್ಕೆ ಇರಿಸುಮುರುಸು ತಂದದ್ದೇಕೆ ಎಂಬುದು ಕುತೂಹಲಕಾರಿಯಾಗಿದೆ. “ಸಮವಸ್ತ್ರದಲ್ಲಿರುವ ಕ್ರಿಮಿನಲ್ ಗಳು ಕ್ರಿಮಿನಲ್ ಗಳಿಗೆ ಸಮ” ಎಂಬ ಭಿತ್ತಪತ್ರದ ಅರ್ಥವು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹಾಗೂ ಆತನ ಸೇನೆಯನ್ನು ನೆನಪಿಸುವುದಾಗಿದೆ. ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದು ಜರ್ಮನಿಯಲ್ಲಿದ್ದ ಯಹೂದಿಗಳಿಗೆ ಚಿತ್ರ-ವಿಚಿತ್ರ ಹಿಂಸೆ ನೀಡಿ ಕೊಂದಿರುವ ಹಿಟ್ಲರ್ ಸೇನೆಯ ಕಥಾನಕ ಇಂದಿಗೂ ಇತಿಹಾಸದ ರಕ್ತಸಿಕ್ತ ಅಧ್ಯಾಯ. ಜಗತ್ತಿನಲ್ಲಿ ಮತ್ತೆಂದೂ ಹುಟ್ಟಬಾರದಂಥ ಪಾತಕಗಳನ್ನು ಮಾಡಿರುವ ಹಿಟ್ಲರ್ ಜನಾಂಗೀಯವಾದ ಹಾಗೂ ಉಗ್ರ ರಾಷ್ಟ್ರವಾದಕ್ಕೆ ಹೆಸರಾಗಿದ್ದಾತ. ನಾಜಿ ಸಿದ್ಧಾಂತದ ಪ್ರತಿಪಾದಕನಾದ ಹಿಟ್ಲರ್ ಆಡಳಿತ ಹಾಗೂ ಆತನ ಸೇನೆಯಿಂದ ಪ್ರೇರಿತವಾಗಿ ರೂಪು ತಳೆದ ಬಿಜೆಪಿಯ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಗತ್ತಿನ ಹಲವು ತಜ್ಞರು ಕಟುಟೀಕೆ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿಯವರಲ್ಲಿ ಹಿಟ್ಲರ್ ಗುಣಗಳಿವೆ ಎಂದು ಹಲವರು ಎಚ್ಚರಿಸಿದ್ದು, ಅವರ ವಿರೋಧಿಗಳು ಮೋದಿಯನ್ನು ಹಿಟ್ಲರ್ ಎಂದೇ ಗುಪ್ತವಾಗಿ ಸಂಭೋದಿಸುವುದುಂಟು. ಜರ್ಮನಿಯನ್ನು ಜಗತ್ತಿನ ಭೂಪಟದಲ್ಲಿ ಶಾಶ್ವತವಾಗಿ ಕೆಟ್ಟ ಮಾದರಿಯಾಗಿಸಿರುವ ಹಿಟ್ಲರ್ ಮಾದರಿ ಭಾರತದಲ್ಲಿ ಕಾಣಿಸುತ್ತಿದೆ ಎಂದು ಹೇಳುವುದು ಜಾಕಬ್ ಹಿಡಿದಿದ್ದ ಭಿತ್ತಿಪತ್ರಗಳ ಉದ್ದೇಶವಾಗಿತ್ತು ಎನ್ನಲಾಗಿದೆ. ಇದನ್ನು ನೆನಪಿಸುವುದರೊಂದಿಗೆ ಜಾಮಿಯಾ ಹಾಗೂ ಅಲಿಘಡ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಅಮಾನವೀಯ ದಾಳಿಯನ್ನು ಖಂಡಿಸುವ ಉದ್ದೇಶದಿಂದ ಆತ ಅತ್ಯಂತ ಪರಿಣಾಮಕಾರಿಯಾದ “ಸಮವಸ್ತ್ರದಲ್ಲಿರುವ ಕ್ರಿಮಿನಲ್ ಗಳು ಕ್ರಿಮಿನಲ್ ಗಳಿಗೆ ಸಮ” ಎನ್ನುವ ಭಿತ್ತಪತ್ರ ರಚಿಸಿ ಅದನ್ನು ಎತ್ತಿ ಹಿಡಿದಿದ್ದ ಎಂದು ವ್ಯಾಖ್ಯಾನಿಸಲಾಗಿದೆ.
ಅಲ್ಲದೇ “1933-45 ರ ಅವಧಿಗೆ ನಾವು ಸಾಕ್ಷಿ” ಎಂಬ ಮಾರ್ಮಿಕ ಭಿತ್ತಪತ್ರವನ್ನೂ ಜಾಕಬ್ ಹಿಡಿದಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಈ ಅವಧಿಯಲ್ಲಿ ಹಿಟ್ಲರ್ ನಡೆಸಿದ ಪಾತಕಗಳಿಗೆ ಕೊನೆಯೇ ಇಲ್ಲ. ರಾಷ್ಟ್ರವಾದ, ಜನಾಂಗೀಯವಾದದ ಮೂಲಕ ಯಹೂದಿಗಳನ್ನು ಗಿಲೋಟಿನ್ ಯಂತ್ರಕ್ಕೆ ಕೊಟ್ಟು ಸಾಯಿಸುವ, ಸುಳ್ಳುಗಳನ್ನು ಸತ್ಯ ಎಂದು ಬಿಂಬಿಸಿ ಜರ್ಮನಿಗರನ್ನು ರಾಷ್ಟ್ರೀಯತೆಯ ಉನ್ಮಾದದಲ್ಲಿ ವಂಚಿಸಿದ ಹಿಟ್ಲರ್, ದ್ವೇಷ, ಮತ್ಸರಗಳನ್ನೇ ಉಸಿರಾಡಿದಾತ. ಪ್ರಪಂಚದ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಿದರೆ ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಾವಧಿಯು ಕರಾಳ ಅಧ್ಯಾಯ. ಆತನ ಮತಾಂಧತೆಯು ಎರಡನೇ ಮಹಾಯುದ್ದಕ್ಕೆ ಮುನ್ನುಡಿ ಬರೆದಿತ್ತಲ್ಲದೇ 19ನೇ ಶತಮಾನದ 40 ದಶಕ ರಕ್ತಚರಿತೆಗೆ ಹೆಸರಾಗಿತ್ತು.
19ನೇ ಶತಮಾನದ ಪೂರ್ವಾರ್ಧದ ಜರ್ಮನಿಯ ಇತಿಹಾಸಕ್ಕೂ ಭಾರತದಲ್ಲಿ ಇಂದು ನಡೆಯುತ್ತಿರುವ ಬೆಳವಣಿಗೆಗಳಿಗೆ ಸಾಮ್ಯತೆ ಇದೆ ಎಂಬುದನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನವನ್ನು ಜಾಕಬ್ ಮಾಡಿದ್ದ ಎನ್ನಲಾಗಿದೆ. ಇದು ಸಹಜವಾಗಿ ನರೇಂದ್ರ ಮೋದಿ ಸರ್ಕಾರಕ್ಕೆ ಇಷ್ಟವಾಗಿಲ್ಲ.
ಪರ ದೇಶದ ಪ್ರಜೆಯೊಬ್ಬ ಭಾರತದ ಆಂತರಿಕ ವಿಚಾರಗಳಲ್ಲಿ ಪಾಲ್ಗೊಳ್ಳುವುದು ಅಕ್ಷಮ್ಯ ಎನ್ನುವುದು ಬಿಜೆಪಿ ಹಾಗೂ ಅದರ ಪರವಾದ ನಿಲುವು ಉಳ್ಳವರ ಅಭಿಪ್ರಾಯ. ಇದನ್ನು ಸರಿ ಎಂದು ಅನುಮೋದಿಸುವವರು ಇತ್ತೀಚೆಗೆ ಅಮೆರಿಕಾದ ಹ್ಯೂಸ್ಟನ್ ನಲ್ಲಿ ನರೇಂದ್ರ ಮೋದಿಯವರು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಪ್ರಚಾರ ಮಾಡಿದ್ದು ಸರಿ ಎಂದು ಹೇಗೆ ಸಮರ್ಥಿಸುತ್ತಾರೆ? ಪರ ದೇಶದ ಪ್ರಜೆ ಭಾರತದ ವ್ಯವಹಾರಗಳಲ್ಲಿ ಭಾಗವಹಿಸುವುದು ಅಕ್ಷಮ್ಯ ಎನ್ನುವುದಾದರೆ ನಮ್ಮ ಪ್ರಧಾನಿಯೂ ಮತ್ತೊಂದು ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗುವುದನ್ನು ಹೇಗೆ ಅರ್ಥೈಸಿಕೊಳ್ಳಬೇಕು? ಎಂಬ ಗಂಭೀರ ಪ್ರಶ್ನೆಗೆ ಉತ್ತರಿಸಬೇಕಿದೆ.
ಜನಾಂಗೀಯ ಅವಮಾನಕ್ಕೊಳಗಾಗಿ ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಹೊರದಬ್ಬಿಸಿಕೊಂಡಿದ್ದನ್ನೇ ಕಾರಣವಾಗಿಟ್ಟುಕೊಂಡು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಕಟ್ಟಿದ ಗಾಂಧಿಯ ನಾಡು ಭಾರತ. ಬ್ರಿಟಿಷರ ಅಟ್ಟಹಾಸ, ಅನೀತಿ, ಅಧರ್ಮ, ಕ್ರೂರತೆಗಳ ನಡುವೆಯೂ ಅಹಿಂಸೆಯ ಮೂಲಕ ಭಾರತವನ್ನು ದಾಸ್ಯದಿಂದ ಬಿಡುಗಡೆಗೊಳಿಸಿದ ಮಹಾತ್ಮನ ನಾಡಾದ ಭಾರತ ಸಹಿಷ್ಣುತೆಗೆ ಹೆಸರಾದದ್ದು. ಬಾಪುವಿನ 150ನೇ ವರ್ಷದ ಜಯಂತಿ ಆಚರಿಸುತ್ತಿರುವ ಸಂದರ್ಭದಲ್ಲಿ ಅವರ ಆಚಾರ-ವಿಚಾರಗಳನ್ನು ನಮ್ಮ ಆಡಳಿತಗಾರರು ಕೃತಿಗಿಳಿಸಿಬೇಕಿದೆ. ದುರಂತವೆಂದರೆ ಇಂದು ಅದನ್ನು ನಿರೀಕ್ಷಿಸುವುದೇ ಪ್ರಮಾದ ಎನ್ನುವಂತಾಗಿದೆ.