ಇವತ್ತು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸರ್ಕಾರಿ ಸ್ವಾಯತ್ತ ಸಂಸ್ಥೆ ಆಗಿದ್ದರೂ ಸಹ ಒಂದು ಪಂಚತಾರ ಖಾಸಗಿ ಆಸ್ಪತ್ರೆಯಲ್ಲಿ ಸಿಗುವ ಗುಣಮಟ್ಟ ಚಿಕಿತ್ಸೆಯನ್ನು ನೀಡುತ್ತಿದ್ದೇವೆ. ಇಲ್ಲಿ ಸಾಧನೆಯ ಗುಟ್ಟು ಏನೆಂದರೆ, ನಾನು ನಿರ್ದೇಶಕನಾಗಿ ಒಂದು ನಾಯಕತ್ವವನ್ನು ತೆಗೆದುಕೊಂಡು ಒಂದು ಕೆಲಸ ಮಾಡುವಂತಹ ವಾತವರಣ ನಿರ್ಮಾಣ ಮಾಡಿದ್ದೇವೆ. ಅಂದರೆ ಪ್ರತಿಯೊಬ್ಬ ವೈದ್ಯರು ಹಾಗೂ ಸಿಬ್ಬಂದಿಯವರೂ ಕೂಡ, ಈ ಆಸ್ಪತ್ರೆಯನ್ನು ತಮ್ಮದೆ ಆಸ್ಪತ್ರೆ ಎಂಬ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿ ಈ ಆಸ್ಪತ್ರೆಯಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿ ಇದೆ. ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲ. ಹೀಗಾಗಿ ಒಟ್ಟಾರೆಯಾಗಿ ನಾವು ಸಾಧನೆ ಮಾಡುವುದಕ್ಕೆ, ನಮ್ಮ ಸಹೋದ್ಯೋಗಿಗಳ ಎಲ್ಲಾ ಸಹಕಾರ, ಸರ್ಕಾರದ ಸಹಕಾರ ಮತ್ತು ಜನಸಾಮಾನ್ಯರ ಪ್ರೋತ್ಸಾಹ ಎಲ್ಲವೂ ಕೂಡ ಕಾರಣ.
ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಜಗತ್ತಿನಲ್ಲಿ ಒಂದು ಶ್ರೇಷ್ಠವಾದ ಹೃದ್ರೋಗ ಆಸ್ಪತ್ರೆ ಎಂದು ವರದಿಯಾಗಿದೆ. ಇದು ಕೇವಲ ನಮ್ಮ ಕೇವಲ ಜಯದೇವ ಹೃದ್ರೋಗ ಆಸ್ಪತ್ರೆಗೆ ಸಿಕ್ಕ ಗೌರವವಲ್ಲ. ಇಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ನನ್ನ ಸಹದ್ಯೋಗಿಗಳಿಗೆ, ಸರ್ಕಾರಕ್ಕೆ ಮತ್ತು ದೇಶಕ್ಕೆ ಸಿಕ್ಕ ಗೌರವ. ಏಕೆಂದರೆ ನನಗೆ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್‌ನಿಂದ ನನ್ನ ವೈದ್ಯ ಮಿತ್ರರೆಲ್ಲಾ ನನಗೆ ಕಾಲ್ ಮಾಡಿದ್ದಾರೆ. ಭಾರತದಲ್ಲಿ ಈ ರೀತಿಯ ಒಂದು ಇಷ್ಟು ದೊಡ್ಡ ಪ್ರಮಾಣದಲ್ಲಿ, ರಿಯಾಯಿತಿ ದರದಲ್ಲಿ ಗುಣಮಟ್ಟದಲ್ಲಿ ಚಿಕಿತ್ಸೆ ಕೊಡುವ ಆಸ್ಪತ್ರೆ ಎಂದು ಇಡೀ ಜಗತ್ತಿಗೆ ಗೊತ್ತಾಗಿದೆ. ಇಲ್ಲಿ ನಮ್ಮ ವೈದ್ಯಕೀಯ ಕ್ಷೇತ್ರಕ್ಕೆ, ಅದರಲ್ಲೂ ಹೃದ್ರೋಗ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಗೌರವ ಮತ್ತು ಮಾನ್ಯತೆ ಸಿಕ್ಕಿದೆ.
ನಾನು ಜಯದೇವ ಆಸ್ಪತ್ರೆಯ ನಿರ್ದೇಶಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದು 2006ರಲ್ಲಿ. ಕಳೆದ 12 ವರ್ಷದಲ್ಲಿ ಶೇಕಡ 500ರಷ್ಟು ಪ್ರಗತಿಯನ್ನು ನಾವು ಸಾಧಿಸಿದ್ದೇವೆ. ಆಗ ಪ್ರತಿದಿನ 200 ರೋಗಿಗಳು ಬರುತ್ತಿದ್ದರಷ್ಟೇ. ಆಗ ಜನರಿಗೆ ಆಸ್ಪತ್ರೆಯ ಬಗ್ಗೆ ವಿಶ್ವಾಸ ಇರಲಿಲ್ಲ. ಕಳೆದ 12 ವರ್ಷದಿಂದ ಜಯದೇವ ಹೃದ್ರೋಗ ಸಂಸ್ಥೆ ಹಂತ ಹಂತವಾಗಿ ಗುಣಮಟ್ಟದ ಚಿಕಿತ್ಸೆಯನ್ನು ಕೊಡುತ್ತಾ ಬಂದಿದೆ. ಇವತ್ತು ಜನರ ವಿಶ್ವಾಸವನ್ನು ಗಳಿಸಿದೆ. ಏಕೆಂದರೆ ಜನರು ಆಸ್ಪತ್ರೆಗೆ ಬರಬೇಕಾದರೆ ಎರಡು ಮೂರು ಕಾರಣಕ್ಕೆ ಬರುತ್ತಾರೆ. ಒಂದು ಆಸ್ಪತ್ರೆ ಬಗ್ಗೆ ವಿಶ್ವಾಸ ಇರಬೇಕು. ಕೈಗೆಟುಕುವ ದರದಲ್ಲಿ ಗುಣಮಟ್ಟ ಚಿಕಿತ್ಸೆ ಸಿಗಬೇಕು. ಈ ಅಂಶಗಳೆಲ್ಲಾ ಜಯದೇವ ಆಸ್ಪತ್ರೆಯಲ್ಲಿದೆ.
ಆರಂಭದಲ್ಲಿ ಸ್ವಲ್ಪ ಸಮಸ್ಯೆ ಇತ್ತು, ಸೌಲಭ್ಯ ಕಡಿಮೆಯಿತ್ತು. ಅನಂತರ ವೈದ್ಯರ ಕೊರತೆ, ಮೂಲಭೂತ ಸೌಕರ್ಯದ ಕೊರತೆ ಇತ್ತು. ಅದಕ್ಕೆ ನಾನು ಅಧಿಕಾರ ವಹಿಸಿಕೊಂಡ ನಂತರ ಎಲ್ಲಾ ನಮ್ಮ ಸಹೋದ್ಯೋಗಿಗಳು ಮತ್ತು ವೈದರನ್ನು ಕರೆದು ನಾವು ನಮ್ಮ ಒಂದು ದಿನದ ಸಂಬಳವನ್ನು ಸಂಸ್ಥೆಗೆ ಕೊಡೊಣ, ನಂತರ ಬೇರೆ ಬೇರೆಯವರನ್ನು ಕೇಳೋಣ ಎನ್ನುವ ತೀರ್ಮಾನ ತೆಗೆದುಕೊಂಡೆವು. ನಂತರ ಎಲ್ಲರೂ ಒಂದು ದಿನದ ಸಂಬಳವನ್ನು ಕೊಟ್ಟರು. ತದನಂತರ ನಾವು ಸರ್ಕಾರ ಸ್ವಾಯತ್ತ ಸಂಸ್ಥೆಗಳು ಮತ್ತು ಹಲವಾರು ಸಂಘ ಸಂಸ್ಥೆಗಳಿಂದ ಹಾಗೂ ದಾನಿಗಳಿಂದ ಹಣವನ್ನು ಸಂಗ್ರಹಿಸಿದೆವು. ಒಂದು ಕಡೆ ಸರ್ಕಾರದ ಅನುದಾನವಷ್ಟೇ ಸಾಲುತ್ತಿರಲಿಲ್ಲ. ನಂತರ ಗುಣಮಟ್ಟ ಚಿಕಿತ್ಸೆಗೆ ಹೆಚ್ಚು ಒತ್ತು ಕೊಟ್ಟೆವು. ಆಮೇಲೆ ಸ್ಪೆಷಲ್ ವಾರ್ಡ್ ಓಪನ್ ಮಾಡಿದೆವು, ಫುಡ್ ಕೋರ್ಟ್ ಓಪನ್ ಮಾಡಿದೆವು, ಗ್ರಂಥಾಲಯ ನಿರ್ಮಾಣ, ಮಾಸ್ಟರ್ ಚೆಕ್‌ಅಪ್ ಸೌಲಭ್ಯ, ಆರು ಕಾರ್ಡಿಯಾ ಕ್ಯಾಥ್ ಲ್ಯಾಬ್ ಮಾಡಿದ್ದೇವೆ.
ಪ್ರತಿದಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಸುಮಾರು 100 ಜನರಿಗೆ ಆಂಜೋಗ್ರಾಮ್, ಆಂಜೋಪ್ಲಾಸ್ಟಿ ಚಿಕಿತ್ಸೆ ಕೊಡುತ್ತಿದ್ದೇವೆ. ಇಡೀ ದೇಶದಲ್ಲಿ ಇಷ್ಟು ಪ್ರಮಾಣದಲ್ಲಿ ಹೃದಯದ ಚಿಕಿತ್ಸೆ ನಡೆಯುತ್ತಿರುವುದು ಈ ಆಸ್ಪತ್ರೆಯಲ್ಲಿ. ಹೀಗಾಗಿ ಹಂತ ಹಂತವಾಗಿ ನಾವು ಮೇಲುಗೈ ಸಾಧಿಸುತ್ತಿದ್ದೇವೆ. ಬಹಳ ಮುಖ್ಯವಾಗಿ ಇಲ್ಲಿ ಆಂಜೋಗ್ರಾಮ್ ಚಿಕಿತ್ಸೆಗಾಗಿ 2000 ಅಡ್ವಾನ್ಸ್ ಕೊಡಬೇಕಿತ್ತು. ಹೀಗಾಗಿ ನಾನು ಆಗ ತೀರ್ಮಾನ ತೆಗೆದುಕೊಂಡೆ, ತುರ್ತು ಚಿಕಿತ್ಸೆಗಾಗಿ ಬಡವರೆಲ್ಲಾ ಬರುತ್ತಾರೆ, ಅವರ ಹತ್ತಿರ ದುಡ್ಡು ಇರುವುದಿಲ್ಲ. ಅವರು ಅಡ್ಮಿಷನ್ ಆಗದೇ ಇದ್ದರೆ ಜೀವಕ್ಕೆ ಅಪಾಯ ಉಂಟಾಗಬಹುದು. ಹಾರ್ಟ್ ಅಟ್ಯಾಕ್ ಆದಂತಹ ಸಂದರ್ಭದಲ್ಲಿ ಒಂದೊಂದು ನಿಮಿಷವೂ ಸಹ ಬಹಳ ಮುಖ್ಯ. ಅದಕ್ಕಾಗಿ ನಮ್ಮ ಜಯದೇವ ಆಸ್ಪತ್ರೆಯಲ್ಲಿ, ತುರ್ತು ಚಿಕಿತ್ಸೆಗಾಗಿ ಒಂದು ರುಪಾಯಿ ಇಲ್ಲದಿದ್ದರೂ ಅವರಿಗೆ ನಾವು ಚಿಕಿತ್ಸೆ ಕೊಡುತ್ತೇವೆ. ಹೀಗಾಗಿ ಇಂತಹ ಬದಲಾವಣೆಯನ್ನು ತಂದೆವು.
ಇಲ್ಲಿ ಕೆಲಸ ಮಾಡುವ ಎಲ್ಲಾ ನೌಕರರಿಗೂ ಕೂಡ ಉತ್ತಮವಾದ ವಾತವರಣವಿದೆ. ಯಾರು ಚೆನ್ನಾಗಿ ಕೆಲಸ ಮಾಡುತ್ತಾರೋ ಅವರಿಗೆ ಪ್ರೋತ್ಸಾಹ ಕೊಡುತ್ತೇವೆ.
ಈಗ ನಾವು ಬೆಂಗಳೂರಿಗೆ ಸೀಮಿತವಾಗಲಿಲ್ಲ. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ 700 ಬೆಡ್‌ಗಳಿವೆ, ಮೈಸೂರಿನಲ್ಲಿ 400 ಬೆಡ್‌ಗಳಿರುವ ಕಾರ್ಡಿಯಾ ಆಸ್ಪತ್ರೆ ನಿರ್ಮಾಣ ಮಾಡಿದ್ದೇವೆ. ಈ ಮೈಸೂರಿನ ಆಸ್ಪತ್ರೆ ನಿರ್ಮಾಣಕ್ಕೆ 250 ಕೋಟಿ ಖರ್ಚಾಯಿತು. ಸರ್ಕಾರ 170 ಕೋಟಿ ಕೊಟ್ಟಿತ್ತು. ಇನ್ನು 80 ಕೋಟಿ ನಾವು ಬೆಂಗಳೂರಿನ ಆಸ್ಪತ್ರೆಯಲ್ಲಿ ಉಳಿತಾಯ ಮಾಡಿದ ಹಣದಲ್ಲಿ ಮತ್ತು ಸಾರ್ವಜನಿಕರಿಂದ ದೇಣಿಗೆ ತೆಗೆದುಕೊಂಡು ನಿರ್ಮಾಣ ಮಾಡಿದ್ದೆವು. ನಂತರ ಮೂರನೇಯದು, ಹೈದರಾಬಾದ್ ಕರ್ನಾಟಕದ ಜನರಿಗೆ ಅನುಕೂಲವಾಗಲಿ ಎಂದು ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ನಿರ್ಮಿಸಿದ್ದೇವೆ. ಆದರೆ ಈ ಮೂರು ಆಸ್ಪತ್ರೆಗಳಲ್ಲಿ ಯಾವುದೇ ಹಾಸಿಗೆ ಖಾಲಿ ಇಲ್ಲ. ಆಸ್ಪತ್ರೆ ಹೌಸ್‌ಫುಲ್ ಆಗಿದೆ. ಈಗ ಇನ್ಫೋಸಿಸ್ ಪ್ರತಿಷ್ಠಾನದಿಂದ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ಸಹಾಯದಿಂದ ಈಗ ನಮ್ಮ ಜಯದೇವ ಆಸ್ಪತ್ರೆಯ ಆವರಣದಲ್ಲೇ 300 ಬೆಡ್‌ಗಳು ಸೌಲಭ್ಯ ಹೊಂದಿರುವ ಆಸ್ಪತ್ರೆಯನ್ನು ಕಟ್ಟುತ್ತಿದ್ದಾರೆ. ಈಗ ನೋಡಿ ರೋಗಗಳು ಜಾಸ್ತಿ ಆಗುತ್ತಿದೆ. ಮತ್ತು ಜನರಿಗೆ ಈ ಆಸ್ಪತ್ರೆಯ ಬಗ್ಗೆ ಹೆಚ್ಚು ವಿಶ್ವಾಸವಿದೆ.
ಹೌದು. ನಮ್ಮ ಸಿಬ್ಬಂದಿಗೆ ಒಂದು ಭರವಸೆ ಇತ್ತು. ಏಕೆಂದರೆ ಬೇರೆಯವರಿಗೆ ನಾವು ದೇಣಿಗೆ ಕೇಳುವ ಬದಲು, ನಾವು ಮೊದಲು ದೇಣಿಗೆ ಕೊಟ್ಟರೆ ನಮಗೆ ಆತ್ಮಸ್ಥೈರ್ಯ ಇರುತ್ತೆ ಎಂದು ಎಲ್ಲರೂ ಸಹಕಾರ ಕೊಟ್ಟರು. ಹೀಗಾಗಿ ದೇಶದಲ್ಲಿ ಜಯದೇವ ಆಸ್ಪತ್ರೆ ರೋಲ್ ಮಾಡಲ್ ಇನ್ಸಿಟ್ಯೂಟ್ ಆಗಿದೆ. ಈಗ ನಮ್ಮಲ್ಲಿ ರಿಯಾಯಿತಿ ದರದಲ್ಲಿ ಗುಣಮಟ್ಟ ಚಿಕಿತ್ಸೆ ಕೊಡುತ್ತಿರುವುದರಿಂದ, ವಿಶ್ವದರ್ಜೆಯ ಚಿಕಿತ್ಸೆಯನ್ನು ಕೊಡುತ್ತಿರುವುದರಿಂದ, ಇದನ್ನು ಅಭ್ಯಾಸ ಮಾಡಲು, ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಟೀಮ್ ಕೂಡ ಭೇಟಿ ನೀಡಿದೆ. ಆಮೇಲೆ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್, ಲೀಡರ್ ಶಿಪ್ಸ್ ಸ್ಕೂಲ್ ಆಫ್ ಸಿಂಗಪುರ್, ಯುನೈಟೈಡ್ ಸ್ಟೇಟ್ಸ್ ಆಸ್ಟ್ರೀಯನ್ ಮೆಡಿಕಲ್ ಸ್ಕೂಲ್ಸ್ ಎಲ್ಲರೂ ಭೇಟಿ ನೀಡಿ, ನಮ್ಮ ಮಾಡೆಲ್ ಅನ್ನು ಅಭ್ಯಾಸ ಮಾಡಿದ್ದಾರೆ. ಸರ್ಕಾರದ ಸೆಕ್ಟರ್ ಅಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆ ಎಂದೇ ಹೇಳಬಹುದು.
ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತಿದಿನ ಸುಮಾರು 1500-1700 ರೋಗಿಗಳು ಬರುತ್ತಿದ್ದಾರೆ. ಮತ್ತು ಸುಮಾರು 600 ಜನರಿಗೆ ಎಕೋಕಾರ್ಡಿಗರಂ ಟೆಸ್ಟ್ ಆಗುತ್ತೆ. 125 ಜನರಿಗೆ ಟ್ರಿಡ್ಮಿಲ್ ಟೆಸ್ಟ್ ಆಗುತ್ತೆ. ರಾತ್ರಿ ವೇಳೆ ಐಸಿಯುನಲ್ಲಿ ಪ್ರತಿ ಐದು ನಿಮಿಷಕ್ಕೊಮ್ಮೆ ಒಂದು ಅಡ್ಮಿಷನ್ ಆಗುತ್ತೆ. ತದನಂತರ ಪ್ರತಿದಿನ 15 ಓಪನ್ ಹಾರ್ಟ್ ಸರ್ಜರಿ ಆಗುತ್ತೆ.
ಮೈಸೂರು ಜಯದೇವದಲ್ಲಿ ಪ್ರತಿದಿನ ಸುಮಾರು 500-600 ಹೊರರೋಗಿಗಳು ಬರುತ್ತಾರೆ. ಅಲ್ಲೂ ಕೂಡ 30-35 ಆಂಜೋಗ್ರಾಮ್ ಆಂಜೋ ಪ್ಲಾಸ್ಟ್ ಆಗುತ್ತೆ. 2-3 ಓಪನ್ ಹಾರ್ಟ್ ಸರ್ಜರಿ ಆಗುತ್ತೆ.
ಇನ್ನು ಕಲಬುರಗಿಯಲ್ಲಿ ಪ್ರತಿದಿನ 300 ಹೊರ ರೋಗಿಗಳು ಬರುತ್ತಾರೆ. ಅಲ್ಲೂ ಕೂಡ 20-25 ಆಂಜೋಗ್ರಾಮ್ ಆಂಜೋ ಪ್ಲಾಸ್ಟ್ ಆಗುತ್ತೆ.
ನಾಲ್ಕನೇ ಶಾಖೆ ನಾವು ಬೆಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ 75 ಬೆಡ್ ಸೌಲಭ್ಯ ಕೂಡ ಇದೆ. ಅದು ಕಾರ್ಮಿಕರಿಗೆ ಮಾತ್ರ ಸೀಮಿತ.
ಕಲಬುರಗಿಯಲ್ಲಿ ಆಸ್ಪತ್ರೆಯ ಅವಶ್ಯಕತೆ ಬಹಳ ಇತ್ತು. ಏಕೆಂದರೆ ಅಲ್ಲಿ ಹೃದಯಕ್ಕೆ ಸಂಬಂಧಪಟ್ಟ ಯಾವ ಆಸ್ಪತ್ರೆಯೂ ಇಲ್ಲ. ರೋಗಿಗಳೆಲ್ಲಾ ಒಂದು ಹೈದರಾಬಾದ್‌ಗೆ ಹೋಗಬೇಕಿತ್ತು ಅಥವಾ ಸೋಲ್ಲಾಪುರ್‌ಗೆ ಹೋಗಬೇಕಿತ್ತು. ಈಗ ಇವೆಲ್ಲಾ ನಿಂತು ಹೋಗಿ ಇಲ್ಲೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಾವು 300 ಬೆಡ್ ಆಸ್ಪತ್ರೆಯ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ನಿರ್ಧಾರ ಮಾಡಿದ್ದೇವೆ. ಈಗ ನಾವು ತಯಾರಿ ನಡೆಸಿದ್ದೇವೆ, ಕ್ಯಾಬಿನೇಟ್ ಕೂಡ ಅನುಮೋದನೆ ಕೊಟ್ಟಿದೆ. 7ಕುಂಟೆ 10 ಎಕರೆ ಸ್ಥಳವಕಾಶ ಸಿಗುತ್ತಿದೆ. ಬಹುಶಃ ಮಾರ್ಚ್ ಅಥವಾ ಏಪ್ರಿಲ್ ಒಳಗೆ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಮುಂದಾಗುತ್ತೇವೆ. ಅದು 3 ವರ್ಷದಲ್ಲಿ ಕಾಮಗಾರಿ ಮುಗಿಯುತ್ತದೆ.
ನೋಡಿ ಕೆಲವು ಆಸ್ಪತ್ರೆಯಲ್ಲಿ ಕ್ವಾಲಿಟಿ ಇರುತ್ತೆ, ಚಾರಿಟಿ ಇರುವುದಿಲ್ಲ ಅಥವಾ ಚಾರಿಟಿ ಇದ್ದರೆ ಕ್ವಾಲಿಟಿ ಇರುವುದಿಲ್ಲ. ಇವತ್ತು ಜಯದೇವದಲ್ಲಿ ಚಾರಿಟಿಯೂ ಇದೆ, ಕ್ವಾಲಿಟಿಯೂ, ಸಬ್ಸಿಡಿ ಕೂಡ ಇದೆ. ಅಲ್ಲದೆ, ಜಗತ್ತಿನಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಯಾವ ಯಾವ ಪ್ರಯೋಗಗಳನ್ನು ಮಾಡುತ್ತಾರೋ, ಅವೆಲ್ಲಾ ಪ್ರಯೋಗವನ್ನು ನಾವು ಇಲ್ಲಿ ಮಾಡುತ್ತೇವೆ. ಇವತ್ತು ವಿದೇಶದಿಂದ ವೈದ್ಯರು ಇಲ್ಲಿ ತರಬೇತಿಗೆಂದು ಬರುತ್ತಿದ್ದಾರೆ.