ಭಾರತದ ಪ್ರತೀ ಮ್ಯಾಪಿನಲ್ಲೂ ಜಮ್ಮು ಮತ್ತು ಕಾಶ್ಮೀರವನ್ನು ಬಿಡಿಸುತ್ತ, ‘ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಂಗೊಳಿಪ ತಾಯ್ನಾಡೆ…’ ಅಂತ ಹಾಡುತ್ತ ಬೆಳೆದ ನನಗೆ ಮೊದಲ ಬಾರಿ ಕಾಶ್ಮೀರ ಭಾರತದ ಭಾಗವಲ್ಲ ಎಂಬುದನ್ನು ಎಲ್ಲೋ ಓದಿದಾಗ ಆಘಾತವಾಗಿತ್ತು. ಅದು ಭಾರತವನ್ನು ಚೂರುಚೂರಾಗಿಸುವ ಅವಿವೇಕಿಗಳ ಹುನ್ನಾರದಂತೆ ಕಂಡಿತ್ತು. ಆದರೆ, ಆ ಬಗ್ಗೆ ಓದಿ ಹೆಚ್ಚು ಅರಿಯುವ ಗೋಜಿಗೆ ಹೋಗಿರಲಿಲ್ಲ. ಮುಂದೆ ಪತ್ರಿಕೋದ್ಯಮ ಓದುವಾಗ ಪ್ರತಿದಿನ ಕಾಶ್ಮೀರದಲ್ಲಿ ಆಗುತ್ತಿದ್ದ ಭಯೋತ್ಪಾದಕ ದಾಳಿಗಳು, ಮಿಲಿಟರಿ ಕಾರ್ಯಾಚರಣೆಗಳು ಅದರಿಂದ ಉಂಟಾಗುತ್ತಿದ್ದ ಸಾವು-ನೋವುಗಳ ಪಿಟಿಐ ವರದಿ ಓದಲು ಸಿಗುತ್ತಿತ್ತು. ಈ ಸುದ್ದಿಗಳು ಎಷ್ಟು ಮಾಮೂಲಾಗಿಬಿಟ್ಟಿತ್ತೆಂದರೆ, ದೊಡ್ಡ ದುರಂತಗಳಲ್ಲವಾದರೆ ಪತ್ರಿಕೆಗಳಲ್ಲಿ ಸಣ್ಣ ಜಾಗವನ್ನೂ ಪಡೆದುಕೊಳ್ಳುತ್ತಿರಲಿಲ್ಲ. ಆಗೆಲ್ಲ, ಈ ದೇಶದ ಭಾಗವಾಗುವ ಆಸೆ ಕಾಶ್ಮೀರದ ಜನರಿಗೇ ಇಲ್ಲವೆಂದಮೇಲೆ, ಇಲ್ಲೇ ಇರಿ ಎಂದು ಅವರನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳುವುದಾದರೋ ಯಾವ ಪುರುಷಾರ್ಥಕ್ಕೆ ಎನ್ನಿಸುತಿತ್ತು. ಸ್ವತಂತ್ರರಾಗ್ತೀವಿ, ಪಾಕಿಸ್ತಾನಕ್ಕೆ ಸೇರುತ್ತೀವಿ ಅನ್ನುವವರನ್ನು ಉಳಿಸಿಕೊಳ್ಳಲು ನಮ್ಮ ಸೈನಿಕರು ಅಥವಾ ಅಲ್ಲಿನ ನಾಗರಿಕರು ಯಾಕೆ ಅನ್ಯಾಯವಾಗಿ ಸಾಯಬೇಕು ಅನ್ನಿಸಲು ಶುರುವಾಗಿತ್ತು. ಮುಂದೆ ಕಾಶ್ಮೀರದ ಬಗ್ಗೆ ಅರಿಯುವ ಗಂಭೀರ ಯತ್ನ ನಡೆಸಿದಾಗಷ್ಟೇ, ಕಾಶ್ಮೀರ ಸಮಸ್ಯೆಯ ಪ್ರಾಚೀನತೆ, ಕ್ಲಿಷ್ಟತೆ, ಸೂಕ್ಷ್ಮತೆಗಳು ನನ್ನ ಅರಿವಿಗೆ ಬಂದದ್ದು.
ನಮ್ಮ ದೇಶದಲ್ಲಿ ಕೆಲವು ಶಾಶ್ವತ ವಿವಾದಗಳಿವೆ. ಅವುಗಳು ಕಾಯಂ ಚುನಾವಣಾ ವಿಷಯಗಳು. ಅದನ್ನು ಬಗೆಹರಿಸುವುದು ಸುಲಭವೂ ಅಲ್ಲ. ಬಗೆಹರಿಯುವುದು ಹಲವರಿಗೆ ಬೇಕಾಗಿಯೂ ಇಲ್ಲ. ಇಂತಹ ವಿಷಯಗಳಲ್ಲಿ ಕಾಶ್ಮೀರ ವಿವಾದವೂ ಒಂದು. ಹೀಗಾಗಿ, ಕಾಶ್ಮೀರದ ಸಮಸ್ಯೆ ಬಗೆಹರಿಸುವ ಕುರಿತಂತೆ ರಾಜಕಾರಣಿಗಳು ಮನಬಂದಂತೆ ಹೇಳಿಕೆ ನೀಡುವಾಗ, ನಾವು ಇಲ್ಲಿ ಕುಳಿತು ಕಾಶ್ಮೀರವನ್ನು, ಕಾಶ್ಮೀರಿಗಳನ್ನು ಬೇಕಾಬಿಟ್ಟಿ ವಿಶ್ಲೇಷಿಸುವಾಗ ಕಾಶ್ಮೀರದ ಸಮಸ್ಯೆಯ ಅಗಾಧತೆಯನ್ನು ಎಲ್ಲರೂ ಅರಿಯುವ ಅಗತ್ಯವಿದೆ ಎಂದು ನನಗೆ ತೀವ್ರವಾಗಿ ಅನಿಸಲು ಆರಂಭಿಸುತ್ತದೆ. ಸಾಂವಿಧಾನಿಕವಾಗಿ, ಕಾನೂನಾತ್ಮಕವಾಗಿ ಕಾಶ್ಮೀರ ಎಂದೂ ಪರಿಪೂರ್ಣವಾಗಿ ಭಾರತದ ಭಾಗವಾಗಿರಲೇ ಇಲ್ಲ ಎಂಬುದು ಹಲವರಿಗೆ ಈಗಲೂ ತಿಳಿದಿಲ್ಲ. ಇನ್ನೂ ಹಲವರು ಒಪ್ಪಲು ಸಿದ್ಧರಿಲ್ಲ.
ಕಾಶ್ಮೀರದಿಂದ ಆರಂಭವಾಗುವ ಭಾರತದ ಮ್ಯಾಪಿನಲ್ಲಿ ‘ಷರತ್ತುಗಳು ಅನ್ವಯಿಸುತ್ತವೆ’ ಎಂದು ಸಣ್ಣ ಅಕ್ಷರಗಳಲ್ಲಿ ಬರೆದಿಲ್ಲವಾದರೂ, ಪರಿಸ್ಥಿತಿ ಹಾಗೆಯೇ ಇದೆ ಎಂಬುದು ಕಹಿ ಎನಿಸಿದರೂ, ಒಪ್ಪಿಕೊಳ್ಳುವುದು ಕಷ್ಟವಾದರೂ ವಾಸ್ತವ.
ದೇಶದಷ್ಟೇ ಹಳೆಯ ಸಮಸ್ಯೆ

- 1947ರಲ್ಲಿ ದೇಶ ವಿಭಜನೆಯಾದಾಗ ಭಾರತ ಅಥವಾ ಪಾಕಿಸ್ತಾನವನ್ನು ಸೇರುವ ಅಥವಾ ಸ್ವತಂತ್ರವಾಗಿ ಉಳಿಯುವ ಆಯ್ಕೆ ರಾಜಾಡಳಿತ ಪ್ರದೇಶಗಳ ಮುಂದಿತ್ತು. ಸ್ವತಂತ್ರವಾಗಿ ಉಳಿಯುವುದು ಕೇವಲ ಕಾಗದದ ಮೇಲಿನ ಆಯ್ಕೆ ಎಂಬುದನ್ನು ಅರಿತಿದ್ದ ಬಹುತೇಕ ರಾಜರು ತಮ್ಮ ಪ್ರದೇಶದ ಭೌಗೋಳಿಕತೆ ಮತ್ತು ಸಾಮಾಜಿಕತೆಯನ್ನು ಆಧರಿಸಿ ಒಂದು ದೇಶವನ್ನು ಆಯ್ದುಕೊಂಡರು.
- ಕಾಶ್ಮೀರದಲ್ಲಿ ಸನ್ನಿವೇಶ ಕೊಂಚ ವಿಶೇಷವಾಗಿತ್ತು. ಕಾಶ್ಮೀರ ಗಡಿ ಪ್ರದೇಶವಾದ ಕಾರಣ ಅದು ಭಾರತ ಅಥವಾ ಪಾಕಿಸ್ತಾನ ಎರಡರಲ್ಲಿ ಒಂದನ್ನು ಆಯ್ದುಕೊಳ್ಳಬಹುದಿತ್ತು. ಅಲ್ಲಿನ ರಾಜ ಹರಿಸಿಂಗ್ ಹಿಂದುವಾದರೂ, ಪ್ರಜೆಗಳಲ್ಲಿ ಮುಸ್ಲಿಮರೇ ಬಹುಸಂಖ್ಯಾತರು. ರಾಜಾ ಹರಿಸಿಂಗ್ ತಾನು ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದರು.
- ಆದರೆ, ಕೆಲವೇ ತಿಂಗಳಲ್ಲಿ ಪಾಕಿಸ್ತಾನ ಬೆಂಬಲಿತ ಬುಡಕಟ್ಟು ಪಡೆಗಳು ಕಾಶ್ಮೀರವನ್ನು ಆಕ್ರಮಿಸಿಕೊಳ್ಳುತ್ತ ಬಂದವು. ಅವರನ್ನು ಹಿಮ್ಮೆಟ್ಟಿಸಲು ಸಹಾಯಕ್ಕಾಗಿ ಭಾರತದ ಮೊರೆಹೋಗುವುದು ಹರಿಸಿಂಗ್‌ಗೆ ಅನಿವಾರ್ಯವಾಯಿತು. ಹೀಗಾಗಿ, ಸೇರ್ಪಡೆ ಒಪ್ಪಂದಕ್ಕೆ (Instrument of accession) ಸಹಿ ಹಾಕಿ, ಭಾರತೀಯ ಪಡೆಗಳನ್ನು ಕಾಶ್ಮೀರದೊಳಗೆ ಬಿಟ್ಟುಕೊಳ್ಳಲು ಅನುವು ಮಾಡಿಕೊಟ್ಟರು. ಆದರೆ, ಬೇರೆ ರಾಜಾಡಳಿತ ಪ್ರದೇಶಗಳಿಗಿಂತ ಭಿನ್ನವಾಗಿ ಕಾಶ್ಮೀರದಲ್ಲಿ ಜನಮತ ಗಣನೆ ನಡೆಸುವ ಭರವಸೆಯನ್ನು ಆ ಸಂದರ್ಭದಲ್ಲಿ ನೀಡಲಾಯಿತು.
- ಇದೇ ವೇಳೆ, ಲಾರ್ಡ್ ಮೌಂಟ್ ಬ್ಯಾಟನ್ ಸೇರ್ಪಡೆ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿ ಬರೆದ ಪತ್ರದಲ್ಲಿ ಕಾಶ್ಮೀರದಲ್ಲಿ ಜನಮತ ಗಣನೆ ನಡೆಸಬೇಕು ಎಂಬ ಪ್ರಸ್ತಾವನೆಯನ್ನು ಮುಂದಿಟ್ಟರು. ಜೊತೆಗೆ, ಅಂತಾರಾಷ್ಚ್ರೀಯ ಒತ್ತಡವನ್ನು ತಪ್ಪಿಸುವ ಸಲುವಾಗಿಯೋ ಏನೋ, ಭಾರತೀಯ ಪಡೆಗಳು ಮೇಲುಗೈ ಸಾಧಿಸುತ್ತಿದ್ದರೂ, ಪ್ರಧಾನಿ ನೆಹರು ಕಾಶ್ಮೀರ ಸಮಸ್ಯೆಯನ್ನು ಮುಂದಿಟ್ಟುಕೊಂಡು ವಿಶ್ವಸಂಸ್ಥೆಯ ಕದ ತಟ್ಟಿದರು.
- ವಿಶ್ವಸಂಸ್ಥೆ ಈ ಪರಿಹಾರ ಸೂತ್ರ ಮುಂದಿಟ್ಟಿತು. ಮೊದಲಿಗೆ ಪಾಕ್ ತನ್ನ ಸೈನ್ಯವನ್ನು ಕಾಶ್ಮೀರದಿಂದ ಹಿಂದಕ್ಕೆ ಕರೆಸಿಕೊಳ್ಳಬೇಕು. ನಂತರ ಅಗತ್ಯ ಪಡೆ ಹೊರತುಪಡಿಸಿ ಭಾರತವೂ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಬೇಕು. ಬಳಿಕ, ಕಾಶ್ಮೀರ ಯಾವ ದೇಶಕ್ಕೆ ಸೇರಬೇಕೆಂಬುದನ್ನು ಕಾಶ್ಮೀರದಲ್ಲಿ ಜನಮತ ಗಣನೆ ನಡೆಸುವ ಮೂಲಕ ನಿರ್ಧರಿಸಬೇಕು.
- ಭಾರತ ಇದಕ್ಕೆ ಒಪ್ಪಿತು. ಆದರೆ, ಪಾಕ್ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಲೇ ಇಲ್ಲ, ಹೀಗಾಗಿ, ಜನಮತ ಗಣನೆ ಸಾಧ್ಯವಾಗಲಿಲ್ಲ. ಶೇಖ್ ಅಬ್ದುಲ್ಲಾ ನೇತೃತ್ವದ ತಾತ್ಕಾಲಿಕ ಸರ್ಕಾರ ಭಾರತದೊಂದಿಗೆ ಒಂದಾಗುವ ಒಲವು ತೋರಿಸಿದರೂ, ಜನಮತ ಗಣನೆಯ ಅಂಶ ಮಾತ್ರ ಜಾರಿಗೆ ಬರಲಿಲ್ಲ.
- ಈ ನಡುವೆ, ಸೇರ್ಪಡೆ ಒಪ್ಪಂದಕ್ಕೆ ಸಹಿ ಹಾಕಿದ್ದ ಬೇರೆಲ್ಲ ರಾಜಾಡಳಿತ ಪ್ರದೇಶಗಳು ಆ ಮೂಲಕ ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕದ ವಿಷಯದಲ್ಲಿ ಭಾರತಕ್ಕೆ ಅಧಿಕಾರ ಕೊಟ್ಟಿದ್ದವು. ಆದರೆ, ಆಡಳಿತ ಆಯಾ ರಾಜ್ಯಗಳ ಕೈಯಲ್ಲೇ ಇತ್ತು. ಬಳಿಕ ಭಾರತದ ಸಂವಿಧಾನವನನ್ನು ಒಪ್ಪಿಕೊಳ್ಳುವ ಮೂಲಕ ಈ ಎಲ್ಲ ರಾಜ್ಯಗಳು ಸಂಪೂರ್ಣವಾಗಿ ಗಣತಂತ್ರ ಭಾರತದ ಭಾಗವಾದವು. ಕಾಶ್ಮೀರದ ವಿಷಯದಲ್ಲಿ ಇದು ನಡೆಯಲಿಲ್ಲ; ಇದರ ಅರ್ಥ, ಕಾಶ್ಮೀರ ಭಾರತದೊಂದಿಗೆ ಸೇರ್ಪಡೆಯಾದರೂ ವಿಲೀನಗೊಳ್ಳಲಿಲ್ಲ.
- ಹೀಗಾಗಿಯೇ, ಸಂವಿಧಾನದಲ್ಲಿ 370ನೇ ವಿಧಿಯ ಮೂಲಕ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಯಿತು. ಆದರೆ, ತಾತ್ಕಾಲಿಕವಾದ ಈ ವಿಧಿ ಹಲವು ಗೊಂದಲಗಳೊಂದಿಗೆ ಈಗಲೂ ಮುಂದುವರಿದಿದೆ. 370ನೇ ವಿಧಿಯನ್ನು ರದ್ದುಗೊಳಿಸಲು ಇದ್ದ ಮಾರ್ಗಗಳು ಈಗ ಮುಚ್ಚಿಹೋಗಿವೆ. ಆದರೆ, ಈ ವಿಧಿಯ ಮೂಲಕ ಮಾತ್ರವೇ ಕಾಶ್ಮೀರ ಭಾರತದ ಸಂವಿಧಾನದಲ್ಲಿ ದಾಖಲಾಗಿದೆ ಎಂಬುದೂ ನಿಜ.
“ಸೇರ್ಪಡೆ ಒಪ್ಪಂದ ಬೇಷರತ್ತಾಗಿತ್ತು, ಹೀಗಾಗಿ ಭಾರತದೊಂದಿಗೆ ಕಾಶ್ಮೀರದ ವಿಲೀನ ಸಂಪೂರ್ಣ,” ಎನ್ನುತ್ತಾರೆ ಕೆಲವರು. ಆದರೆ, ಸೇರ್ಪಡೆ ಸಂದರ್ಭದಲ್ಲಿನ ಹಲವು ಗೊಂದಲಗಳು, ಆಗಲೇ ಜನಮತ ಗಣನೆಯ ಷರತ್ತು ವಿಧಿಸಲಾಗಿತ್ತು ಎಂಬುದಕ್ಕಿರುವ ದಾಖಲೆಗಳು, ಮೌಂಟ್ ಬ್ಯಾಟನ್ ಪತ್ರ, ವಿಶ್ವಸಂಸ್ಥೆಯ ಮಧ್ಯಸ್ಥಿಕೆ ಇವೆಲ್ಲ ಇದಕ್ಕೆ ವಿರುದ್ಧವಾದ ಕತೆ ಹೇಳುತ್ತವೆ. ಕೆಲವು ತಜ್ಞರ ಪ್ರಕಾರ, “370ನೇ ವಿಧಿಯೇ ಪ್ರತ್ಯೇಕ ಸಂವಿಧಾನ ಹೊಂದಿರುವ ಕಾಶ್ಮೀರವನ್ನು ಭಾರತದೊಂದಿಗೆ ಜೋಡಿಸಿರುವ ಏಕೈಕ ಬಲವಾದ ಕೊಂಡಿ. ಸಂವಿಧಾನದಿಂದ ಇದನ್ನು ತಗೆದುಹಾಕುವುದು ಕಾಶ್ಮೀರವನ್ನು ಕೈಬಿಟ್ಚಂತೆ.” ನ್ಯಾಯಾಲಯಗಳು 370ನೇ ವಿಧಿ ಈಗ ಶಾಶ್ವತ ಭಾಗವಾಗಿದೆ ಎಂದೇ ತೀರ್ಪು ನೀಡುತ್ತ ಬಂದಿವೆ.
ಕಾಶ್ಮೀರ ಸ್ವಾತಂತ್ರ್ಯಾ ನಂತರದಲ್ಲಿ ಹಲವು ಸ್ಥಿತ್ಯಂತರಗಳನ್ನು ಕಂಡಿದೆ. ಸ್ವಾತಂತ್ರ್ಯ ಸಿಕ್ಕ ಮೊದಲಲ್ಲಿ ಜನಮತಗಣನೆ ನಡೆದರೆ ಕಾಶ್ಮೀರ ಭಾರತಕ್ಕೇ ಸೇರುವುದು ಬಹುತೇಕ ಖಚಿತವಿತ್ತು. ಭಾರತ ಜನಮತ ಗಣನೆಯ ಭರವಸೆ ನೀಡುವುದಕ್ಕೂ, ಪಾಕಿಸ್ತಾನ ಈ ಕುರಿತು ಸಹಕರಿಸದೆ ಇದ್ದದ್ದಕ್ಕೆ ಕಾರಣವೂ ಇದೇ ಆಗಿತ್ತು. ಆದರೆ, ಕ್ರಮೇಣ ಬದಲಾಗುತ್ತ ಬಂದ ಪರಿಸ್ಥಿತಿ ಈಗ ಭಾರತ ವಿರೋಧಿ ಅಲೆಯ ರೂಪದಲ್ಲಿ ಉಲ್ಬಣಗೊಂಡು ನಿಂತಿದೆ. ಕಾಶ್ಮೀರ ಜನತೆಗೆ ಜನಮತ ಗಣನೆ ನಡೆಸದೆ ನಮಗೆ ಮೋಸವಾಗಿದೆ ಎಂಬ ಭಾವ ಬೇರೂರಿದೆ. ಈ ಭಾವನೆಯನ್ನು ಪ್ರತ್ಯೇಕತಾವಾದಿ ಸಂಘಟನೆಗಳು ಪೋಷಿಸುತ್ತ ಬಂದಿವೆ. ಕಾಶ್ಮೀರ ಪಂಡಿತರ ಹತ್ಯಾಕಾಂಡ ಅಲ್ಲಿನ ಡೆಮೋಗ್ರಫಿಯನ್ನೇ ಬದಲಿಸಿದೆ. ಭಾರತದ ಇತರ ಪ್ರದೇಶಗಳು ಕಾಶ್ಮೀರವನ್ನು ನೋಡುವ ರೀತಿಯನ್ನು ಆ ಹತ್ಯಾಕಾಂಡ ಬದಲಿಸಿಬಿಟ್ಟಿತು.
ಕಾಶ್ಮೀರದಲ್ಲಿನ ದಿನನಿತ್ಯದ ಹಿಂಸಾಚಾರ, ಭಯೋತ್ಪಾದಕ ದಾಳಿಗಳು, ಅಲ್ಲೇ ನೆಲೆಸಿರುವ ಸಶಸ್ತ್ರ ಪಡೆಗಳು, ಅವುಗಳ ಕಾರ್ಯಾಚರಣೆಗಳಿಂದ ಕಾಶ್ಮೀರ ನರಕವಾಗಿದೆ. ಹೀಗಾಗಿ, ಜಮ್ಮು ಮತ್ತು ಲಡಾಖ್‌ನಲ್ಲಿ ಇರುವಂತೆ ನಾವು ಭಾರತದ ಒಂದು ಭಾಗ ಎಂಬ ಭಾವನೆ ಕಾಶ್ಮೀರದಲ್ಲಿ ಇಲ್ಲ.
ಸ್ವತಂತ್ರ ಕಾಶ್ಮೀರ ಚಳವಳಿಗಳು ಹಿಂಸಾಚಾರಕ್ಕೆ ತಿರುಗಿ ದಶಕಗಳೇ ಕಳೆದಿವೆ. ಹಲವು ಪೀಳಿಗೆಯಿಂದ ಸಶಸ್ತ್ರ ಪಡೆಗಳನ್ನು ನೋಡುತ್ತ, ಅವರ ನಡುವೆ ಬದುಕುತ್ತ ಬಂದಿರುವ ಬಹುತೇಕ ಕಾಶ್ಮೀರಿಗಳು ಭಾರತದಿಂದ ಮಾನಸಿಕವಾಗಿ ದೂರ ಸರಿದುಬಿಟ್ಟಿದ್ದಾರೆ. ಭಾರತದ ಇತರ ಭಾಗದ ಜನರಿಗೆ ಭಯೋತ್ಪಾದನೆಯಂತೆ ಕಾಣುವ ಚಟುವಟಿಕೆಗಳು ಕಾಶ್ಮೀರಿಗಳಿಗೆ ಸ್ವಾತಂತ್ರ್ಯ ಹೋರಾಟದಂತೆ ಕಾಣುತ್ತದೆ. ಈ ಸ್ವಾತಂತ್ರ್ಯ ಹೋರಾಟದ ಕಡೆಗೆ ಬಹುತೇಕ ಕಾಶ್ಮೀರಿ ಯುವಕರು ಸೆಳೆಯಲ್ಪಡುತ್ತಿದ್ದಾರೆ.

ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳಿಂದ ನಡೆಯುತ್ತಿರುವ ವ್ಯಾಪಕ ಮಾನವ ಹಕ್ಕು ಉಲ್ಲಂಘನೆ ಸದ್ಯದ ಬಹುದೊಡ್ಡ ಸಮಸ್ಯೆ. ಈ ಬಗ್ಗೆ ಇರುವ ಅಂಕಿ-ಅಂಶಗಳು ಅತಂಕಕಾರಿಯಾಗಿವೆ. ಮಿಲಿಟರಿ ಪಡೆಗಳ ಬೂಟಿನ ಸದ್ದು ಕೇಳುವ ಯಾವುದೇ ಪ್ರದೇಶದಲ್ಲಾಗಲೀ, ವ್ಯಾಪಕ ಮಾನವ ಹಕ್ಕು ಉಲ್ಲಂಘನೆ ಸರ್ವೇಸಾಮಾನ್ಯ. ಅದು ಒಂದು ರೀತಿಯ ಅನಿವಾರ್ಯ ಕರ್ಮವೆಂದರೂ ತಪ್ಪಲ್ಲ. ಹೀಗಾಗಿ, ಕಾಶ್ಮೀರ ಇದಕ್ಕೆ ಹೊರತಲ್ಲ. ಕಾಶ್ಮೀರ ರಕ್ಷಣೆಗೆ ಎಂದು ಕಳುಹಿಸಲಾಗಿರುವ ಸಶಸ್ತ್ರ ಪಡೆಗಳನ್ನು ಬಹುತೇಕ ಕಾಶ್ಮೀರಿಗಳು ವೈರಿಗಳಂತೆ ನೋಡುತ್ತಿದ್ದಾರೆ, ತೀವ್ರವಾಗಿ ದ್ವೇಷಿಸುತ್ತಿದ್ದಾರೆ. ಈ ದ್ವೇಷ ಒಂದು ವಿಷವರ್ತುಲವಾಗಿ ಬದಲಾಗಿದ್ದು, ಸಶಸ್ತ್ರ ಪಡೆಗಳು ಮತ್ತು ಕಾಶ್ಮೀರಿಗಳು ಪರಸ್ಪರ ದ್ವೇಷಿಸುತ್ತ ಈ ವರ್ತುಲದಲ್ಲಿ ಸಿಲುಕಿದ್ದಾರೆ. ಇಂತಹ ಹಿಂಸಾಚಾರಗಳನ್ನೇ ನೋಡುತ್ತ ಬೆಳೆದ ಕಾಶ್ಮೀರ ಯುವಕರ ಕೈಗೆ ಭಾರತದ ವಿರುದ್ಧ ಬಂದೂಕು ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸುವುದು ಕಷ್ಟದ ಕೆಲಸವೇ ಅಲ್ಲ. ಬಹುತೇಕ ಕಾಶ್ಮೀರಿ ಯುವಕರು, ಹದಿವಯಸ್ಸಿನ ಮಕ್ಕಳು ಇನ್ಯಾರದೋ ರಾಜಕೀಯ ಲೆಕ್ಕಾಚಾರಕ್ಕೆ ಬಲಿಯಾಗುತ್ತಿದ್ದಾರೆ.
ಹಾಗೆಂದ ಮಾತ್ರಕ್ಕೆ ಕೆಲವರು ಆಗ್ರಹಿಸುವಂತೆ ಕಾಶ್ಮೀರಿಗಳ ಸ್ವಾತಂತ್ರ್ಯದ ಕೂಗಿಗೆ ಓಗೊಟ್ಟು ಕಾಶ್ಮೀರವನ್ನು ಬಿಟ್ಟು ಹೊರಬರುವುದು ಭಾರತಕ್ಕೆ ಸಾಧ್ಯವಿಲ್ಲದ ಮಾತು. ಏಕೆಂದರೆ, ಒಂದು ವೇಳೆ ಕಾಶ್ಮೀರದ ಸ್ವಾತಂತ್ರ್ಯದ ಕನಸು ನನಸಾದರೂ ಆ ಸ್ವಾತಂತ್ರ್ಯ ಹೆಚ್ಚು ಕಾಲ ಬಾಳುವುದು ಕಷ್ಟಕರ. ಹದ್ದಿನಂತೆ ಕಾದು ಕೂತಿರುವ ಪಾಕಿಸ್ತಾನ, ಕಾಶ್ಮೀರವನ್ನು ಅಕ್ರಮಿಸಲು ಹೆಚ್ಚು ಕಾಲ ಕಾಯುವುದಿಲ್ಲ. ಇದಕ್ಕೆ ಸ್ವತಂತ್ರ ಕಾಶ್ಮೀರದ ಕನಸು ತೋರಿಸುತ್ತಿರುವ ಹಲವು ಮುಖಂಡರು ಕುಮ್ಮಕ್ಕು ನೀಡಿದರೂ ಆಶ್ಚರ್ಯವೇನಿಲ್ಲ. ಇದು ಭಾರತದ ಭದ್ರತೆಯ ದೃಷ್ಚಿಯಿಂದ ತೀರಾ ಅಪಾಯಕಾರಿ. ಇದಕ್ಕೆ ಮುಖ್ಯ ಕಾರಣ ಕಾಶ್ಮೀರದ ಭೌಗೋಳಿಕ ಸ್ಥಿತಿ. ಅತ್ಯಂತ ಸೂಕ್ಷ್ಮವಾದ ಆಯಕಟ್ಟಿನ ಪ್ರದೇಶದಲ್ಲಿರುವ ಕಾಶ್ಮೀರದಿಂದ ಭಾರತ ಹಿಂದೆ ಸರಿದರೆ, ಪಾಕಿಸ್ತಾನ ಮತ್ತು ಚೀನಾ ಆಕ್ರಮಣಕ್ಕೆ ಭಾರತ ತನ್ನ ಬಾಗಿಲು ತೆರೆದಂತೆ. ಹೀಗಾಗಿಯೇ, ಕಾಶ್ಮೀರ ಭಾರತಕ್ಕೆ ಬಿಸಿ ತುಪ್ಪ.
ಕಾಶ್ಮೀರ ವಿವಾದ ಈ ಬಾರಿಯೂ ಪ್ರಮುಖ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಜಾಗ ಪಡೆದಿದೆ. ಆದರೆ, ಕಾಶ್ಮೀರದ ವಿಷಯದಲ್ಲಿ ಯಾವುದೇ ರೀತಿಯ ಒಂದು ಸ್ಪಷ್ಚ ಮತ್ತು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಎದೆಗಾರಿಕೆ ಮತ್ತು ಅದರ ಪರಿಣಾಮಗಳ ಜವಾಬ್ದಾರಿಯನ್ನು ಹೊರುವ ಧೈರ್ಯ ಮಾತ್ರ ಯಾವುದೇ ರಾಜಕೀಯ ಪಕ್ಷಗಳಿಗೂ ಇರುವಂತೆ ಕಾಣುವುದಿಲ್ಲ. ಆಯಾ ಸಮಯದಲ್ಲಿ ಆಗಿನ ನಾಯಕರು, ಆಗಿನ ಪರಿಸ್ಥಿತಿಗಳಿಗೆ ಸರಿ ಎನಿಸಿದಂತೆ ನಿರ್ಧಾರ ತೆಗೆದುಕೊಳ್ಳುತ್ತ ಬಂದಿದ್ದಾರೆ. ಹೀಗಾಗಿ, ಇಲ್ಲೆಲ್ಲೋ ಕುಳಿತು ಹಿಂದಿನ ಯಾವುದೋ ನಾಯಕರನ್ನು ಈ ವಿವಾದಕ್ಕೆ ಅವರೇ ಮುಖ್ಯ ಕಾರಣ ಎಂದು ದೂರುವುದರಲ್ಲಿ ಅರ್ಥವಿಲ್ಲ.
ಏನೇ ಆದರೂ ಭಾರತದ್ದು ಒಕ್ಕೂಟ ವ್ಯವಸ್ಥೆ. ಯಾವುದೇ ಪ್ರದೇಶವನ್ನು, ಅಲ್ಲಿನ ಜನರ ಬೆಂಬಲವಿಲ್ಲದೆ ಶಾಶ್ವತವಾಗಿ ಹಿಡಿದಿಟ್ಟುಕೊಳ್ಳುವುದು (ಅದರಲ್ಲೂ ಪಾಕಿಸ್ತಾನದ ಗಡಿಯಲ್ಲಿರುವ ರಾಜ್ಯವನ್ನು) ಕಷ್ಟದ ಮಾತು ಎಂಬುದನ್ನು ನಾವು ಮರೆಯುವಂತಿಲ್ಲ. ಕಾಶ್ಮೀರಿಗಳಿಗೆ ಭಾರತದ ಇತರ ಯಾವುದೇ ರಾಜ್ಯದ ಪ್ರಜೆಗಳಿಗಿಲ್ಲದ ಹಲವು ಸವಲತ್ತುಗಳಿವೆ ನಿಜ. ಇತರರಿಗೆ ಅದು ಅನಗತ್ಯ ಓಲೈಕೆ ಎಂಬಂತೆ ಕಾಣುವುದೂ ಸತ್ಯ. ಆದರೆ, ದಿನಬೆಳಗಾದರೆ ಗುಂಡಿಗೆ ಎದೆಯೊಡ್ಡಬೇಕಾದ ಪ್ರಜೆಗಳನ್ನು ಇಂತಹ ಸವಲತ್ತುಗಳಿಂದ ಸೆಳೆಯುವುದು ಸಾಧ್ಯವಿಲ್ಲ. ಕಾಶ್ಮೀರದಲ್ಲಿ ಮತ್ತೆ ಶಾಂತಿ ನೆಲೆಸುವಂತೆ ಮಾಡುವುದೊಂದೇ ಮಾರ್ಗ. ಅದು ಕಾಶ್ಮೀರಿಗಳನ್ನು ಒಲಿಸಿಕೊಳ್ಳದೆ ಸಾಧ್ಯವಿಲ್ಲ. ಆದರೆ, ಇದು ರಾಜಕೀಯ ಇಚ್ಛಾಶಕ್ತಿಯೊಂದಿಗೆ, ಪ್ರಾಮಾಣಿಕವಾಗಿ, ದೀರ್ಘಕಾಲ ನಡೆಸಬೇಕಾದ ಪ್ರಕ್ರಿಯೆ. ಕಾಶ್ಮೀರ ಬೇಕು, ಆದರೆ ಕಾಶ್ಮೀರಿಗಳು ಬೇಡ ಎಂಬ ನಿಲುವನ್ನು ಬಿಟ್ಟು ಪ್ರಾಮಾಣಿಕವಾಗಿ ಕೈ ಚಾಚಿದರೆ ಅವರೂ ಮತ್ತೆ ಇತ್ತ ಬಂದಾರೇನೋ.
ಅಂಕಣಕಾರರು ಹವ್ಯಾಸಿ ಪತ್ರಕರ್ತೆ