ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ ಕಲಂ 370 ಮತ್ತು ಕಲಂ 35ಎ ರದ್ದುಗೊಳಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧಾರ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬುಡವನ್ನೇ ಅಲ್ಲಾಡಿಸುವಂತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ನಿಲುವು ಎಂಬುದೇ ಇಲ್ಲ. ಅಷ್ಟೇ ಅಲ್ಲ, ನೆಹರೂ ಕುಟುಂಬ ಸದಸ್ಯರಿಗೆ ವಿರುದ್ಧವಾಗಿ ನಡೆದುಕೊಂಡರೂ ಅದನ್ನು ಪ್ರಶ್ನಿಸುವ ಧೈರ್ಯವೂ ವರಿಷ್ಠರಿಗೆ ಇಲ್ಲ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಕೇಂದ್ರದ ನಿಲುವು ವಿರೋಧಿಸಿದರೆ, ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಮತ್ತೊಂದು ಗುಂಪು ಕೇಂದ್ರ ಸರ್ಕಾರವನ್ನು ಬೆಂಬಲಿಸಿದೆ. ನಾಯಕರ ಮಧ್ಯೆ ಈ ರೀತಿಯ ದ್ವಂದ್ವ ಮುಂದುವರಿದರೂ ಪಕ್ಷದ ಶಿಸ್ತು ಸಮಿತಿ ಅಥವಾ ಉನ್ನತ ನಾಯಕರು ಮಾತ್ರ ಏನೂ ಕೇಳಿಸದಂತೆ ಸುಮ್ಮನಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ ಕಲಂ 370 ಮತ್ತು 35ಎ ರದ್ದುಗೊಳಿಸುವ ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಅವರು ಮೊಟ್ಟ ಮೊದಲು ರಾಜ್ಯಸಭೆಯಲ್ಲಿ ಮಂಡಿಸಿದಾಗ ಕಾಂಗ್ರೆಸ್ ಸದಸ್ಯರಾದ ಗುಲಾಂ ನಬಿ ಆಜಾದ್, ಪಿ. ಚಿದಂಬರಂ ಸೇರಿದಂತೆ ಎಲ್ಲರೂ ಖಂಡತುಂಡವಾಗಿ ವಿರೋಧಿಸಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಕೇಂದ್ರದ ಮಾಜಿ ಸಚಿವ ಮತ್ತು ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡು ಟ್ವೀಟ್ ಮಾಡಿದ್ದರು. ಆಗಲೇ ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಗೊಂದಲ ಬಹಿರಂಗಗೊಳ್ಳುವ ಲಕ್ಷಣ ಕಾಣಿಸಿಕೊಂಡಿತ್ತು.
ಒಂದೆಡೆ ಕಾಂಗ್ರೆಸ್ ನ ಒಂದು ಗುಂಪು ಕೇಂದ್ರದ ನಡೆಯನ್ನು ವಿರೋಧಿಸುತ್ತಾ ಬಂದರೆ, ಇನ್ನೊಂದೆಡೆ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ದೀಪೇಂದರ್ ಹೂಡಾ, ಜನಾರ್ದನ ದ್ವಿವೇದಿ ಸೇರಿದಂತೆ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಕೇಂದ್ರ ಸರ್ಕಾರದ ನಿರ್ಧಾರವನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ಇನ್ನೊಂದೆಡೆ ರಾಹುಲ್ ಗಾಂಧಿ ಅವರು ಸರ್ಕಾರದ ನಿಲುವು ಪ್ರಜಾಪ್ರಭುತ್ವ ವಿರೋಧಿ ಎಂದು ಟೀಕಿಸುತ್ತಿದ್ದರೆ ಒಂದು ಗುಂಪು ಅವರ ಹೇಳಿಕೆಯನ್ನು ಬೆಂಬಲಿಸುತ್ತಿತ್ತು. ಈ ರೀತಿಯ ದ್ವಂದ್ವ ಕೇವಲ ರಾಷ್ಟ್ರೀಯ ಮಟ್ಟದ ನಾಯಕರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿಸಿಂಗ್‌ರವರ ಪುತ್ರ ಡಾ. ಕರಣ್‌ಸಿಂಗ್, ಸೋನಿಯಾ ಗಾಂಧಿಯವರ ಲೋಕಸಭಾ ಕ್ಷೇತ್ರ ರಾಯ್ ಬರೇಲಿಯ ವಿಧಾನಸಭಾ ಕ್ಷೇತ್ರದ (ವಿಧಾನ ಸಭಾ ಕ್ಷೇತ್ರದ ಹೆಸರೂ ರಾಯ್ ಬರೇಲಿ) ಕಾಂಗ್ರೆಸ್ ಶಾಸಕಿ ಅದಿತಿಸಿಂಗ್, ಕರ್ನಾಟಕದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್… ಹೀಗೆ ಪಕ್ಷದ ನಿಲುವಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರವನ್ನು ಬೆಂಬಲಿಸಿದ ಕಾಂಗ್ರೆಸ್ ನವರ ಪಟ್ಟಿ ಬೆಳೆಯುತ್ತಲೇ ಇದೆ.

ಇನ್ನೂ ನಿಲುವು ಸ್ಪಷ್ಟಪಡಿಸದ ಸೋನಿಯಾ
ಕಾಂಗ್ರೆಸ್ ಪಕ್ಷದ ನಾಯಕರು ಈ ರೀತಿ ಬಹಿರಂಗವಾಗಿ ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದರೂ ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗುವ ಮುನ್ನ ಮತ್ತು ನಂತರದಲ್ಲಿ ಈ ಕುರಿತು ಎಲ್ಲೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಈ ವಿಚಾರದ ಬಗ್ಗೆ ಪಕ್ಷದಲ್ಲೇ ಪರ-ವಿರೋಧ ಅಭಿಪ್ರಾಯಗಳು ಇರುವುದರಿಂದ ತಾವು ಒಂದು ಅಭಿಪ್ರಾಯ ವ್ಯಕ್ತಪಡಿಸಿ ಮುಜುಗರ ಉಂಟುಮಾಡುವುದು ಬೇಡ ಎಂಬ ಕಾರಣಕ್ಕೆ ಅವರು ಸುಮ್ಮನಿದ್ದಾರೆ. ಈ ವಿಚಾರದಲ್ಲಿ ಗೊಂದಲ ಮೂಡಿಸಿ ಇಕ್ಕಟ್ಟಿಗೆ ಸಿಲುಕುವುದು ಬೇಡ ಎಂಬ ಭಾವನೆ ಸೋನಿಯಾ ಅವರಲ್ಲಿದೆ. ವಿಶೇಷ ಸ್ಥಾನಮಾನ ರದ್ದು ವಿಚಾರ ಲೋಕಸಭೆಯಲ್ಲಿ ಚರ್ಚೆಯಾಗುತ್ತಿದ್ದಾಗ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧಿರ್ ರಂಜನ್ ಚೌಧರಿ ನೀಡಿದ ವಿವಾದಾತ್ಮಕ ಹೇಳಿಕೆ ಕುರಿತಂತೆ ಸೋನಿಯಾ ಅವರು ನೀಡಿದ ಪ್ರತಿಕ್ರಿಯೆ ಇದನ್ನು ಸ್ಪಷ್ಟಪಡಿಸಿದೆ.
ಜಮ್ಮುಕಾಶ್ಮೀರ ವಿಚಾರದಲ್ಲಿ ಸೋನಿಯಾ ಅವರ ಈ ಮೌನವೇ ಕಾಂಗ್ರೆಸ್ ನಲ್ಲಿ ನಾಯಕರು ಪಕ್ಷದ ಸಿದ್ಧಾಂತ, ನಿಲುವುಗಳನ್ನು ಬಿಟ್ಟು ನಾಯಕರು ತಮ್ಮ ತಮ್ಮ ಮನಸ್ಸಿನಲ್ಲಿರುವ ಮಾತುಗಳನ್ನು ಬಹಿರಂಗಪಡಿಸಲು ಕಾರಣ ಎಂಬ ಮಾತು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿದೆ. ರಾಜೀವ್ ಗಾಂಧಿ ನಿಧನದ ನಂತರ ಸುಮಾರು ಒಂದೂವರೆ ದಶಕ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಅವರು 2014ರಲ್ಲಿ ಪಕ್ಷ ಹೀನಾಯವಾಗಿ ಸೋಲುವುದನ್ನು ತಪ್ಪಿಸಲು ಸಾಧ್ಯವಾಗದೇ ಇದ್ದರೂ ನಾಯಕರಲ್ಲಿ ಒಗ್ಗಟ್ಟು, ಒಮ್ಮತ ಇರುವಂತೆ ನೋಡಿಕೊಳ್ಳುತ್ತಿದ್ದರು. ರಾಹುಲ್ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಈ ಒಗ್ಗಟ್ಟು, ಒಮ್ಮತ ನಿಧಾನವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿತ್ತು. ಈ ವೇಳೆ ಸೋನಿಯಾ ಅವರು ಮೇಲುಸ್ತುವಾರಿ ವಹಿಸಿದ್ದರೆ (ಯುಪಿಎ ಅಧ್ಯಕ್ಷೆಯಾಗಿ ಕೆಲಸ ಮಾಡಿದಂತೆ) ನಾಯಕರ ಮಧ್ಯೆ ಗೊಂದಲ ಮೂಡುತ್ತಿರಲಿಲ್ಲ. ಅದೇ ರೀತಿ ಜಮ್ಮು-ಕಾಶ್ಮೀರ ವಿಚಾರದಲ್ಲಿ ಸೋನಿಯಾ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದರೆ ಇತರೆ ನಾಯಕರೂ ಯೋಚಿಸಿ ಮಾತನಾಡುತ್ತಿದ್ದರು. ಈ ರೀತಿಯ ದ್ವಂದ್ವ, ಗೊಂದಲ ಮೂಡುತ್ತಿರಲಿಲ್ಲ ಎಂದು ಪಕ್ಷದ ಹಿರಿಯರು ಹೇಳುವುದರಲ್ಲಿ ಸತ್ಯಾಂಶವಿದೆ.
ಪಕ್ಷವೇ ಮುಳುಗುವ ಆತಂಕ ಮೌನಕ್ಕೆ ಕಾರಣ
ಕಾಂಗ್ರೆಸ್ ಮೌನಕ್ಕೆ ಎರಡು ಪ್ರಮುಖ ಕಾರಣಗಳಿವೆ. 1- ಆಪರೇಷನ್ ಕಮಲದ ಭೀತಿ. 2- ವೋಟ್ ಬ್ಯಾಂಕ್ ರಾಜಕಾರಣ.
ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ರದ್ದುಗೊಳಿಸಿದ ವಿಚಾರದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರ ನಿಲುವಿಗೆ ವ್ಯತಿರಿಕ್ತವಾಗಿ ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತಿರುವ ಪಕ್ಷದ ನಾಯಕರ ವಿರುದ್ಧ ವರಿಷ್ಠರಾಗಲಿ, ಶಿಸ್ತು ಸಮಿತಿಯಾಗಲಿ ಚಕಾರವೆತ್ತುತ್ತಿಲ್ಲ. ಅಂತಹ ಹೇಳಿಕೆಗಳನ್ನು ನೀಡದಂತೆ ಸೂಚನೆಯನ್ನೂ ನೀಡುತ್ತಿಲ್ಲ. ಬಿಜೆಪಿಯ ಆಪರೇಷನ್ ಕಮಲಕ್ಕೆ ಬೆಚ್ಚಿ ಶಿಸ್ತು ಕ್ರಮ ಕೈಗೊಳ್ಳಬೇಕಾದ ಸ್ಥಾನದಲ್ಲಿದ್ದವರು ಮೌನವಾಗಿದ್ದಾರೆ. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಇನ್ನಷ್ಟು ಹೆಚ್ಚು ಬಹುಮತದೊಂದಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ರಾಜ್ಯಗಳಲ್ಲಿ ಅನ್ಯ ಪಕ್ಷದವರ ಮೇಲೆ ಆಪರೇಷನ್ ಕಮಲ ಅಸ್ತ್ರ ಪ್ರಯೋಗಿಸಿ ತಮ್ಮತ್ತ ಸೆಳೆದುಕೊಳ್ಳುದನ್ನು ಮತ್ತಷ್ಟು ತೀವ್ರಗೊಳಿಸಿದೆ. ಹಾಲಿ ಶಾಸಕರು, ಸಂಸದರೇ ಆಪರೇಷನ್ ಕಮಲಕ್ಕೆ ಒಳಗಾಗುತ್ತಿದ್ದಾರೆ. ಇಂತಹ ವೇಳೆ ಕೇಂದ್ರದ ಪರ ಮಾತನಾಡಿದವರ ಮೇಲೆ ಶಿಸ್ತು ಕ್ರಮ ಕೈಗೊಂಡರೆ ತಕ್ಷಣ ಅವರಿಗೆ ಬಿಜೆಪಿ ಗಾಳ ಹಾಕಿ ತನ್ನತ್ತ ಸೆಳೆದುಕೊಳ್ಳುತ್ತದೆ. ಈಗಾಗಲೇ ಸೋತು ಸುಣ್ಣವಾಗಿರುವ ಪಕ್ಷದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ಹೀಗಾಗಿ ಮುಜುಗರ, ಅವಮಾನ ಆದರೂ ಅದನ್ನು ಸಹಿಸಿಕೊಂಡು ವರಿಷ್ಠರು ಮೌನವಾಗಿದ್ದಾರೆ.
ಹಾಗೆಂದು ಕಾಂಗ್ರೆಸ್ ವರಿಷ್ಠರ ಮೌನಕ್ಕೆ ಆಪರೇಷನ್ ಕಮಲದ ಭೀತಿಯೊಂದೇ ಅಲ್ಲ. ವೋಟ್ ಬ್ಯಾಂಕ್ ರಾಜಕಾರಣವೂ ಅಡಗಿದೆ. ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ಸಾರಾಸಗಟಾಗಿ ವಿರೋಧಿಸಿದರೆ ಹಿಂದೂ ವೋಟ್ ಬ್ಯಾಂಕ್ ಕೈಕೊಡುತ್ತದೆ. ಹಿಂದೂ ಧರ್ಮದ ವಿಚಾರದಲ್ಲಿ ಈ ಹಿಂದೆ ತೆಗೆದುಕೊಂಡ ನಿಲುವುಗಳು ಪಕ್ಷಕ್ಕೆ ಯಾವ ಸ್ಥಿತಿ ತಂದುಕೊಟ್ಟಿದೆ ಎಂಬ ವಿಚಾರ ಕಣ್ಣ ಮುಂದೆಯೇ ಇದೆ. ಅದೇ ರೀತಿ ಎಲ್ಲರೂ ಒಟ್ಟಾಗಿ ಬೆಂಬಲಿಸಿದರೆ ಪಕ್ಷವನ್ನು ಸದಾ ಕಾಲ ಕೈಹಿಡಿಯುತ್ತಿರುವ ಮುಸ್ಲಿಂ ವೋಟ್ ಬ್ಯಾಂಕ್ ನ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿ ಎರಡೂ ವೋಟ್ ಬ್ಯಾಂಕ್ ಉಳಿಸಿಕೊಳ್ಳುವ ಉದ್ದೇಶವೂ ಕಾಂಗ್ರೆಸ್ ಮೌನದ ಹಿಂದಿದೆ.