ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧನಕ್ಕೊಳಪಡಿಸಿ ಆರು ದಿನಗಳಾದರೂ ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸದ ಕಾಂಗ್ರೆಸ್ ಪಕ್ಷ ಈಗ ಬೆಂಬಲಕ್ಕೆ ನಿಂತಿದೆ. ಶಿವಕುಮಾರ್ ಪರವಾಗಿ ಕಾನೂನು ಹೋರಾಟದ ಜತೆಗೆ ಜನರ ನಡುವಿನ ಹೋರಾಟದಲ್ಲೂ ಪಕ್ಷ ನಿಲ್ಲಲಿದೆ ಎಂದು ಕುಟುಂಬದವರಿಗೆ ಭರವಸೆ ನೀಡಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಸ್ವತಃ ಶಿವಕುಮಾರ್ ಅವರ ಸಹೋದರ ಡಿ. ಕೆ. ಸುರೇಶ್ ಅವರನ್ನು ಕರೆಸಿ ಮಾತುಕತೆ ನಡೆಸಿದ್ದು, ನಿಮ್ಮೊಂದಿಗೆ ಪಕ್ಷವಿದೆ ಎಂದು ಭರವಸೆ ತುಂಬಿದ್ದಾರೆ.
ಇಷ್ಟಕ್ಕೆಲ್ಲಾ ಕಾರಣ ಡಿ. ಕೆ. ಶಿವಕುಮಾರ್ ಅವರಿಗಿರುವ ಜನಪ್ರಿಯತೆ ಮತ್ತು ಅವರ ಬಂಧನ ವಿರೋಧಿಸಿ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟ. ಅದರಲ್ಲೂ ಮುಖ್ಯವಾಗಿ ಬಹುತೇಕ ಒಕ್ಕಲಿಗ ಸಮುದಾಯ ಅವರ ಬೆಂಬಲಕ್ಕೆ ನಿಂತಿರುವುದು. ಮುಂದಿನ ದಿನಗಳಲ್ಲಿ ಶಿವಕುಮಾರ್ ಅವರಿಗೆ ಜನನಾಯಕನಾಗುವ ಎಲ್ಲಾ ಲಕ್ಷಣಗಳಿವೆ. ಅವರನ್ನು ಕಡೆಗಣಿಸಿದರೆ ಅದು ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಅನುಮಾನ ಕಾಡಿದ್ದರಿಂದಲೇ ಸ್ವತಃ ಸೋನಿಯಾ ಗಾಂಧಿ ಅವರೇ ಮುಂದೆ ನಿಂತು ಕಾಂಗ್ರೆಸ್ ಪಕ್ಷವನ್ನು ಶಿವಕುಮಾರ್ ಅವರ ಬೆನ್ನಿಗೆ ನಿಲ್ಲುವಂತೆ ನೋಡಿಕೊಳ್ಳುತ್ತಿದ್ದಾರೆ.
ಹೌದು, ಸೆಪ್ಟೆಂಬರ್ 3ರಂದು ಶಿವಕುಮಾರ್ ಬಂಧನವಾಗುತ್ತಿದ್ದಂತೆ ಬಂಧನ ಖಂಡಿಸಿ ರಾಜ್ಯದ ಹಳೇ ಮೈಸೂರು ಭಾಗದಲ್ಲಿ ಪ್ರತಿಭಟನೆ, ಹೋರಾಟಗಳು ಆರಂಭವಾಗಿದ್ದವು. ಎರಡು ದಿನ ತೀವ್ರತರದ ಹೋರಾಟಗಳು ನಡೆದಿದ್ದವು. ಆದರೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಏಕೆಂದರೆ, ಇಂತಹ ಬಂಧನ ಪ್ರಕ್ರಿಯೆಗಳು ನಡೆದಾಗ ಅವರ ಬೆಂಬಲಿಗರು ಒಂದೆರಡು ದಿನ ಪ್ರತಿಭಟನೆ, ಹೋರಾಟ ನಡೆಸುವುದು ಸಾಮಾನ್ಯ. ನಂತರ ಎಲ್ಲರೂ ಸುಮ್ಮನಾಗುತ್ತಾರೆ. ಹೀಗಿರುವಾಗ ಬಂಧನಕ್ಕೊಳಗಾದ, ಅದರಲ್ಲೂ ಭ್ರಷ್ಟಾಚಾರದ ವ್ಯಾಪ್ತಿಗೆ ಬರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಬಂಧನದಲ್ಲಿರುವ ವ್ಯಕ್ತಿಗೆ ಬೆಂಬಲ ಸೂಚಿಸಿದರೆ ಬಿಜೆಪಿಯವರು ಅದನ್ನೇ ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಬಹುದು ಎಂಬ ಕಾರಣಕ್ಕೆ ಎಐಸಿಸಿ ಈ ಬಗ್ಗೆ ಪ್ರಬಲ ಪ್ರತಿರೋಧ ತೋರಿಸಿರಲಿಲ್ಲ.

ಆದರೆ, ಬಂಧನವಾಗಿ ಆರು ದಿನ ಕಳೆದರೂ ಕರ್ನಾಟಕದಲ್ಲಿ ಶಿವಕುಮಾರ್ ಪರ ಹೋರಾಟದ ಕಿಚ್ಚು ತಣ್ಣಗಾಗಿಲ್ಲ. ಒಕ್ಕಲಿಗ ಸಮುದಾಯ ಹೆಚ್ಚು ಸಂಖ್ಯೆಯಲ್ಲಿರುವ ಹಳೇ ಮೈಸೂರು ಭಾಗದಲ್ಲಿ ಒಂದಲ್ಲಾ, ಒಂದು ಪ್ರತಿಭಟನೆ ನಡೆಯುತ್ತಲೇ ಇದೆ. ಈ ಮಧ್ಯೆ ಜನಸಂಖ್ಯೆ ವಿಚಾರದಲ್ಲಿ ಪ್ರಬಲ ಸಮುದಾಯವಾಗಿರುವ ಒಕ್ಕಲಿಗರು, ಒಕ್ಕಲಿಗರ ಸಂಘಟನೆಗಳ ಒಕ್ಕೂಟದಡಿ ಬುಧವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಕೂಡ ಪ್ರತಿಭಟನೆಗೆ ನಿರ್ಧರಿಸಿದೆ. ಇದರಿಂದ ರಾಜ್ಯದಲ್ಲಿ ಒಕ್ಕಲಿಗರು ಮಾತ್ರವಲ್ಲ, ಇತರೆ ಸಮುದಾಯದವರೂ ಶಿವಕುಮಾರ್ ಬೆಂಬಲಿಕ್ಕಿದ್ದಾರೆ ಎಂಬುದು ಎಐಸಿಸಿಗೆ ಅರ್ಥವಾಗಿದೆ. ರಾಜ್ಯ ಕಾಂಗ್ರೆಸ್ ಮತ್ತು ಪ್ರಬಲ ಒಕ್ಕಲಿಗ ಸಮುದಾಯ ಶಿವಕುಮಾರ್ ಬೆನ್ನಿಗೆ ಇರುವಾಗ ರಾಷ್ಟ್ರೀಯ ಕಾಂಗ್ರೆಸ್ ಅವರ ಜತೆಗೆ ನಿಲ್ಲದೇ ಇದ್ದರೆ ಪಕ್ಷದ ಬಗ್ಗೆ ಒಕ್ಕಲಿಗ ಸಮುದಾಯ ಸೇರಿದಂತೆ ಶಿವಕುಮಾರ್ ಬೆಂಬಲಕ್ಕೆ ನಿಂತವರಿಗೆ ಬೇಸರ ಉಂಟಾಗಬಹುದು. ಇದು ಸಂಘಟನೆ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕಾಗಿಯೇ ಸೋನಿಯಾ ಗಾಂಧಿ ಅವರು ಡಿ. ಕೆ. ಸುರೇಶ್ ಅವರನ್ನು ಕರೆಸಿಕೊಂಡು ಪಕ್ಷ ಶಿವಕುಮಾರ್ ಜತೆಗಿದೆ ಎಂಬ ಸಂದೇಶವನ್ನು ರಾಜ್ಯಕ್ಕೆ ಕಳುಹಿಸಿರುವುದು.

ಚಿದಂಬರಂಗಿಲ್ಲದ ಬೆಂಬಲ ಶಿವಕುಮಾರ್ ಗೆ
ಕಾಂಗ್ರೆಸ್ ತನ್ನ ನಾಯಕರ ವಿಚಾರದಲ್ಲಿ ಒಂದೇ ನಿಲುವು ಹೊಂದಿದೆ ಎಂದಾಗಿದ್ದರೆ ಐಎನ್ಎಕ್ಸ್ ಮೀಡಿಯಾ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ವಿಚಾರದಲ್ಲೂ ಇದೇ ಮಾನದಂಡ ಅನುಸರಿಸುತ್ತಿತ್ತು. ಚಿದಂಬರಂ ಅವರನ್ನು ಸಿಬಿಐ ಬಂಧಿಸಿದ ಬಳಿಕ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರತಿಪಕ್ಷ ನಾಯಕರ ವಿರುದ್ಧ ಸೇಡಿನ ಕ್ರಮ ಅನುಸರಿಸುತ್ತಿದೆ ಎಂದು ಟ್ವೀಟ್, ಹೇಳಿಕೆಗಳು ಮಾತ್ರ ಸೋನಿಯಾ ಸೇರಿದಂತೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಂದ ಬಂತೇ ಹೊರತು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುವ ಅಥವಾ ಹೋರಾಟದಲ್ಲಿ ಜತೆಗೆ ನಿಲ್ಲುವ ಭರವಸೆ ಇದುವರೆಗೂ ಸಿಕ್ಕಿಲ್ಲ. ಏಕೆಂದರೆ, ಚಿದಂಬರಂ ಜನನಾಯಕರೂ ಅಲ್ಲ, ಅವರ ರಾಜ್ಯ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ನೆಲೆಯೂ ಇಲ್ಲ. ಜತೆಗೆ ಸಂಘಟನೆ ವಿಚಾರದಲ್ಲಿ ಚಿದಂಬರಂ ಕೊಡುಗೆ ಪಕ್ಷಕ್ಕೆ ಹೆಚ್ಚೇನೂ ಇಲ್ಲ.
ಆದರೆ, ಶಿವಕುಮಾರ್ ವಿಚಾರದಲ್ಲಿ ಹಾಗಲ್ಲ. ಕರ್ನಾಟಕದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಶಿವಕುಮಾರ್. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಆ ಸಮುದಾಯದ ನಾಯಕನಾಗುವತ್ತ ಸಾಗುತ್ತಿದ್ದಾರೆ. ಇದರ ಜತೆಗೆ ಸಂಘಟನೆಯಲ್ಲೂ ಚತುರನಾಗಿರುವ ಶಿವಕುಮಾರ್ ಅವರ ನೆರವು, ಸಹಕಾರ ಕಾಂಗ್ರೆಸ್ ಪಕ್ಷಕ್ಕೆ ಅತಿ ಮುಖ್ಯವಾಗಿದೆ. ಇದು ಒಂದೆಡೆಯಾದರೆ ಎಐಸಿಸಿ ಪಾಲಿಗೆ ಅವರು ಟ್ರಬಲ್ ಶೂಟರ್ ಕೂಡ ಆಗಿದ್ದಾರೆ. 2017ರಲ್ಲಿ ಗುಜರಾತ್ ಶಾಸಕರನ್ನು ಬೆಂಗಳೂರಿಗೆ ಕರೆತಂದು ಅವರನ್ನು ಆಪರೇಷನ್ ಕಮಲದಿಂದ ರಕ್ಷಿಸಿದ್ದಲ್ಲದೆ, ರಾಜ್ಯಸಭೆಗೆ ಅಹ್ಮದ್ ಪಟೇಲ್ ಅವರನ್ನು ಆರಿಸುವಲ್ಲಿ ಕಾಂಗ್ರೆಸ್ ನ ಗೌರವ ಕಾಪಾಡಿದವರು. ಎಚ್. ಡಿ. ದೇವೇಗೌಡರ ಕುಟುಂಬದ ಜತೆ ಜಿದ್ದಾಜಿದ್ದಿ ಇದ್ದರೂ ಹೈಕಮಾಂಡ್ ಮಾತಿಗೆ ಒಪ್ಪಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಮತ್ತು ಆ ಸರ್ಕಾರ 14 ತಿಂಗಳು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸರ್ಕಾರ ಉಳಿಸಿಕೊಳ್ಳಲು ಕೊನೇ ಕ್ಷಣದವರೆಗೂ ಶತಾಯ ಗತಾಯ ಪ್ರಯತ್ನಿಸಿದರು. ಇದಿಷ್ಟೇ ಅಲ್ಲ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಸಮಸ್ಯೆ ಎದುರಿಸಿದ ಸಂದರ್ಭದಲ್ಲೆಲ್ಲಾ ಅದನ್ನು ಬಗೆಹರಿಸಲು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದರು. ಹೀಗಾಗಿ ಶಿವಕುಮಾರ್ ಕೇವಲ ರಾಜ್ಯಕ್ಕೆ ಮಾತ್ರವಲ್ಲ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೂ ಅಗತ್ಯ ಎನಿಸಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ ಹೈಕಮಾಂಡ್ ಬಹಿರಂಗವಾಗಿ ಶಿವಕುಮಾರ್ ಬೆನ್ನಿಗೆ ನಿಂತಿದೆ.

ಮುಂದೆ ಡಿಕೆಶಿಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ?
ಶಿವಕುಮಾರ್ ವಿರುದ್ಧ ಬಂದಿರುವ ಆರೋಪಗಳು ಆರ್ಥಿಕ ಅಪರಾಧಕ್ಕೆ ಸಂಬಂಧಿಸಿದವು. ಸದ್ಯ ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆಯೇ ಹೊರತು ಅವರ ಮೇಲಿನ ಯಾವ ಆರೋಪಗಳೂ ಸಾಬೀತಾಗಿಲ್ಲ. ಹೀಗಾಗಿ ಆರೋಪ ಸಾಬೀತಾಗುವವರೆಗೆ ಅವರು ಆರೋಪಿಯಾಗಿರುತ್ತಾರೆಯೇ ಹೊರತು ಅಪರಾಧಿ ಅಲ್ಲ. ಸದ್ಯ ಇಡಿ ವಶದಲ್ಲಿರುವ ಶಿವಕುಮಾರ್ ಇಂದಲ್ಲಾ ನಾಳೆ ಜಾಮೀನು ಪಡೆದು ಜೈಲಿನಿಂದ ಹೊರಬಂದರೆ ಬಳಿಕ ಪ್ರಕರಣ ಇತ್ಯರ್ಥವಾಗಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಶಿವಕುಮಾರ್ ಅವರಿಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತಿದೆ. ಶಿವಕುಮಾರ್ ಅವರಿಗೆ ವ್ಯಕ್ತವಾಗುತ್ತಿರುವ ಜನಬೆಂಬಲ ಗಮನಿಸಿ ಈ ಯೋಚನೆ ಮಾಡಲಾಗಿದೆ.
ಗುರುವಾರ ದೆಹಲಿಯಲ್ಲಿ ಅಖಿಲ ಭಾರತ ಮಟ್ಟದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರ ಸಭೆ ನಡೆಯುತ್ತಿದ್ದು, ಸೋನಿಯಾಗಾಂಧಿಯವರು ಅಧ್ಯಕ್ಷರಾದ ಮೇಲೆ ಪಕ್ಷ ಸಂಘಟನೆಗಾಗಿ ನಡೆಯುತ್ತಿರುವ ಮಹತ್ವದ ಮೊದಲ ಸಭೆ ಇದು. ಈ ಸಭೆಯಲ್ಲಿ ಶಿವಕುಮಾರ್ ಬಂಧನ ವಿಚಾರ ಪ್ರಮುಖವಾಗಿ ಚರ್ಚೆಗೆ ಬರಲಿದ್ದು, ಇದಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಬಗ್ಗೆ ಚರ್ಚೆಯಾಗಬಹುದು. ಅಂತಹ ನಿರ್ಧಾರಗಳೇನಾದರೂ ಆದಲ್ಲಿ ಶಿವಕುಮಾರ್ ಅವರಿಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ಸಿಗುವುದು ಖಚಿತ.