ಕರ್ನಾಟಕದ ರಾಜಕೀಯದಲ್ಲಿ ಒಂದು ಮಾತು ಪ್ರಚಲಿತದಲ್ಲಿದೆ. ಇದ್ದ ಮೂರು ರಾಜಕೀಯ ಪಕ್ಷಗಳಲ್ಲಿ, ಕಾಂಗ್ರೆಸ್ ಆಡಳಿತ ನಡೆಸುವಲ್ಲಿ ಸದಾ ಮುಂದೆ. ಆದರೆ ವಿರೋಧ ಪಕ್ಷವಾಗಿ ಕರ್ತವ್ಯ ನಿರ್ವಹಿಸಲು ಸದಾ ಹಿಂದೆ. ಬಿಜೆಪಿ ಇದಕ್ಕೆ ತದ್ವಿರುದ್ಧ. ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲು ತೋರುವ ಹುಮ್ಮಸ್ಸು ಆಡಳಿತ ಸಿಕ್ಕಿದಾಗ ಮಾಯ. ಜೆಡಿಎಸ್ ಗೆ ಹೇಗೂ ಸ್ವಂತ ಶಕ್ತಿಯ ಮೇಲೆ ಸರಕಾರ ರಚಿಸುವುದು ಅಸಾಧ್ಯ. ಆದರೆ, ಅತಂತ್ರ ಪರಿಸ್ಥಿತಿಯಲ್ಲಿ ಅದು ಯಾವುದೇ ಪಕ್ಷದೊಂದಿಗೆ ಸರಕಾರ ರಚಿಸಿದರೂ ಅಧಿಕಾರ ಅಲ್ಪಾಯು.
ಇಂತಹ ವಿಡಂಬನಾತ್ಮಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಾಜಾ ಉದಾಹರಣೆ 2018ರ ವಿಧಾನಸಭೆ ಚುನಾವಣೆಯ ನಂತರ ನಡೆದಿರುವ ಘಟನೆಗಳು.
ಚುನಾವಣೆಯಲ್ಲಿ ಯಾರಿಗೂ ಜನಾದೇಶವಿರಲಿಲ್ಲ. ಅವಕಾಶವಾದಿ ರಾಜಕಾರಣದ ಮೂಲಕ “ಸಂಖ್ಯಾಬಲ” ತೋರಿಸಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ರಚಿಸಿದರೂ, ಸುಮಾರು ಒಂದು ವರ್ಷ ತನ್ನ ಒಳಜಗಳ ಮತ್ತು ಅಧಿಕಾರ ಹಂಚಿಕೆಯ ಗೊಂದಲದಲ್ಲಿ ಒಳ್ಳೆಯ ಸರಕಾರ ಕೊಡುವ ತನ್ನ ಮೂಲಭೂತ ಕರ್ತವ್ಯವನ್ನು ಮರೆತು ಬಿಟ್ಟಿತ್ತು. ಕ್ಷಮತೆಯನ್ನು ತೋರಿಸಬೇಕಾಗಿದ್ದ ವಿರೋಧಿ ಪಕ್ಷದಲ್ಲಿ ಕುಳಿತ ಬಿಜೆಪಿ ತಾನು ಎಂದು ಅಧಿಕಾರಕ್ಕೆ ಬರುವುದೋ ಎಂದು ಕನಸು ಕಾಣುತ್ತ, ವಿರೋಧ ಪಕ್ಷದ ಮೂಲಭೂತ ಕರ್ತವ್ಯವನ್ನು ಮರೆತು ಕುಳಿತಿತ್ತು. ಹೀಗಾಗಿ ಅಂದು ರಾಜ್ಯದಲ್ಲಿ ಬಂದ ಬರ ಪರಿಸ್ಥಿತಿಯನ್ನು ಅವಲೋಕಿಸುವವರು, ಜನರಿಗೆ ಮತ್ತು ಜಾನುವಾರುಗಳಿಗೆ ನೀರಿನ, ಮೇವಿನ ಅಭಾವ, ಗೋಳುಗಳನ್ನು ಕೇಳುವ, ಪರಿಹರಿಸುವ ಕೆಲಸದ ಕಡೆಗೆ ಮೈತ್ರಿ ಪಕ್ಷದ ಸರಕಾರವಾಗಲಿ, ಅಥವಾ ವಿರೋಧಿ ಪಕ್ಷವಾದ ಬಿಜೆಪಿ ಆಗಲೀ ಗಮನ ಹರಿಸಲಿಲ್ಲ.
ಈಗ ಪರಿಸ್ಥಿತಿ ಅದಲು ಬದಲಾಗಿದೆ. ಮೈತ್ರಿ ಸರಕಾರ ಕುಸಿದು ಬಿಜೆಪಿ ಕೈಗೆ ಅಧಿಕಾರದ ಚುಕ್ಕಾಣಿ ಬಂದಿದೆ. ಅಂದು ಮಳೆಯ ಅಭಾವದಿಂದ ಬೆಂದಿದ್ದ ಜನ, ಈಗ ಮಹಾಮಳೆ ಮತ್ತು ನೆರೆಹಾವಳಿಯ ಹೊಡೆತಕ್ಕೆ ಹಿಂಡಿ ಹಿಪ್ಪಿಯಾಗಿದ್ದಾರೆ. ಅವರ ಪಡಿಪಾಡಲು ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದೆ.

ಬಿಜೆಪಿ ತಾಂತ್ರಿಕವಾಗಿ ತನ್ನ ಬಹುಮತ ಸಿದ್ದಮಾಡಿದರೂ, ವಾಸ್ತವವಾಗಿ 224 ಸದಸ್ಯರ ವಿಧಾನಸಭೆಯಲ್ಲಿ ತನಗೆ ಬಹುಮತವಿಲ್ಲವೆಂಬ ಅಳುಕಿನಲ್ಲಿಯೇ ಕೆಲಸ ಮಾಡುತ್ತಿದೆ. ಆಡಳಿತಕ್ಕೆ ದಿಕ್ಕು ದೆಸೆಯಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಬಂದು ಕುಳಿತಿರುವ ಕಾಂಗ್ರೆಸ್/ಜೆಡಿಎಸ್ ತನ್ನದೇ ಅದ ಗೊಂದಲಗಳಲ್ಲಿ ಸಿಕ್ಕು ಸರಿಯಾಗಿ ಕರ್ತವ್ಯ ನಿರ್ವಹಿಸಲು ವಿಫಲವಾಗಿದೆ. ಸಂತ್ರಸ್ತ ಜನರ ಬವಣೆಗಳನ್ನು ಕೇಳಲು ಬಂದ ಹೊಸ ಸರಕಾರಕ್ಕೂ, ಹೊಸದಾಗಿ ವಿರೋಧ ಪಕ್ಷದ ಸ್ಥಾನ ಪಡೆದ ಕಾಂಗ್ರೆಸ್/ಜೆಡಿಎಸ್ ಗೂ ವ್ಯವಧಾನವಿಲ್ಲ. ಅಧಿಕಾರಾರೂಢ ಮತ್ತು ವಿರೋಧಿಪಕ್ಷಗಳೂ ತಮ್ಮ ಅಂತರಿಕ ಸಮಸ್ಯೆಗಳಲ್ಲಿ ಮುಳುಗಿ ಬಿಟ್ಟಿವೆ.
ಬಿಜೆಪಿ ಕೈಗೆ ಅಧಿಕಾರ ಬಂದರೂ ಸರಿಯಾಗಿ ಸರಕಾರ ಮಾಡಲಿಕ್ಕೆ ಆಗಲಿಲ್ಲ. ಮಂತ್ರಿಮಂಡಲ ರಚನೆಯಲ್ಲಿ ಅನಗತ್ಯ ವಿಳಂಬ, ರಚನೆಯಾದ ಮೇಲೂ ಪರಿಸ್ಥಿತಿಯನ್ನು ನಿಭಾಯಿಸಲು ತೋರಿದ ಅಸಮರ್ಥತೆ ಎದ್ದು ಕಾಣುತ್ತಿತ್ತು. ಗೊಂದಲಗಳ ಪರಿಹಾರವಾದರೂ, ಆಗಬೇಕಾದ ರೀತಿಯಲ್ಲಿ ಪರಿಹಾರ ಕೆಲಸಗಳು ಇನ್ನೂ ಆಗುತ್ತಿಲ್ಲ. ಜಿಲ್ಲೆಯ ಉಸ್ತುವಾರಿ ಹೊತ್ತ ಮಂತ್ರಿಗಳು ತಮ್ಮ ಕಾರ್ಯಗಳಲ್ಲಿ ಸರಿಯಾಗಿ ಕಾರ್ಯಪ್ರವೃತ್ತರಾಗಿಲ್ಲ. ಆಡಳಿತ ಯಂತ್ರ ಇನ್ನೂ ನಿದ್ರೆಯಿಂದ ಎದ್ದಿಲ್ಲ. ಹೊಸ ಬಿಜೆಪಿ ಸರಕಾರದ ಬಗ್ಗೆ ಜನರು ಬೇಸರ ಹೊಂದದೇ ರಲು ಹೇಗೆ ಸಾಧ್ಯ?

ಬಿಜೆಪಿಗೆ ಸರಕಾರ ನಡೆಸಲು ಬರುವುದಿಲ್ಲ. ಈ ನಿದ್ದೆ ಮಾಡುವ ಸರಕಾರಕ್ಕೆ ಚಾಟಿ ಏಟು ಕೊಟ್ಟು ಎಬ್ಬಿಸುವ ಕೆಲಸವನ್ನು ವಿರೋಧಿ ಪಕ್ಷದಲ್ಲಿ ಕುಳಿತ ಕಾಂಗ್ರೆಸ್ ಮತ್ತು ಅದರ ರಾಜಕೀಯ ಮಿತ್ರ/ಮತ್ತು ವಿರೋಧಿ ಜೆಡಿಎಸ್ ಕೂಡ ಮಾಡುತ್ತಿಲ್ಲ. ಏಕೆಂದರೆ, ಇವೆರಡೂ ಪಕ್ಷಗಳಿಗೆ ಜನಹಿತಕ್ಕಾಗಿ ಹೋರಾಟ ಮಾಡುವುದು, ಬೀದಿಗೆ ಇಳಿಯುವುದು, ಪರಿಣಾಮಕಾರಿ ವಿರೋಧ ಪಕ್ಷವಾಗಿ ಕೆಲಸಮಾಡುವ ಕೆಲಸವೇ ಮರೆತು ಹೋದಂತಿದೆ. ಅವರವರಿಗೆ ತಮ್ಮ ರಾಜಕೀಯ ಅಸ್ತಿತ್ವದ ಸಮಸ್ಯೆಯೇ ದೊಡ್ಡದಾಗಿದೆ. ಅದರಲ್ಲಿ ಜನರ ದು:ಖ ದುಮ್ಮಾನಗಳು ಕಾಣಿಸುತ್ತಿಲ್ಲ.
ಕಾಂಗ್ರೆಸ್ ನಲ್ಲಿ ಇರುವ ಇರುವ ದೊಡ್ಡ ಸಮಸ್ಯೆ ಎರಡು – ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನು ನೇಮಿಸುವುದು ಮತ್ತು ಕೆಪಿಸಿಸಿ ಆಧ್ಯಕ್ಷರನ್ನು ಆರಿಸುವುದು. ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರು ಇರುವಾಗಲೇ ಅವರ ಬದಲು ಹೊಸ ನಾಯಕರನ್ನು ಆರಿಸಬೇಕೆಂಬ ಕೂಗು ಈಗ ಎದ್ದಿರುವದು ಬಹಳ ಆಶ್ಚರ್ಯಕರವಾದರೂ, ಅವರ ನಾಯಕತ್ವದ ಬಗೆಗೆ ಪಕ್ಷ ಧುರೀಣರಲ್ಲಿ ಮತ್ತು ಕಾರ್ಯಕರ್ತರಲ್ಲಿ ಬಹಳ ಅಸಮಾಧಾನವಿದೆ ಎನ್ನುವುದೇನೂ ಗುಟ್ಟಾಗಿ ಉಳಿದಿಲ್ಲ. ಇದಕ್ಕೆ ತಳುಕು ಹಾಕಿದಂತೆ ಕೆಪಿಸಿಸಿಗೆ ಹೊಸ ಅಧ್ಯಕ್ಷರು ಬೇಕೆನ್ನುವ ಕೂಗೂ ಕೇಳುತ್ತಿದೆ. ಚುನಾವಣೆ ನಿಮಿತ್ತ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಕೇಳಿ ಬರುತ್ತಿದೆ. ಇದಕ್ಕಾಗಿ ಪೈಪೋಟಿಯೂ ಬಿರುಸಾಗಿ ನಡೆದಿದೆ. ಹಲವಾರು ಆಕಾಂಕ್ಷಿಗಳು ಈಗಾಗಲೇ ರಂಗ ಪ್ರವೇಶ ಮಾಡಿದ್ದಾರೆ.
ಲೋಕಸಭೆ ಚುವಾವಣೆಯ ಹೀನಾಯ ಸೋಲಿನ ಆಘಾತದಿಂದ ಕಾಂಗ್ರೆಸ್ ಇನ್ನೂ ಹೊರಬಂದಿಲ್ಲ. ರಾಹುಲ್ ಗಾಂಧಿಯವರ ಪದತ್ಯಾಗ, ಸಂವಿಧಾನದಲ್ಲಿ ಕಾಶ್ಮೀರಕ್ಕಿರುವ ವಿಶೇಷ ಸೌಲಭ್ಯ ಕೊಡುವ ಸಂವಿಧಾನದ 370 ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದುದರ ಬಗ್ಗೆ ಕಾಂಗ್ರೆಸ್ ತೆಗೆದುಕೊಂಡಿರುವ ಅಸ್ಪಷ್ಟ ನಿಲುವು, ಕಾಂಗ್ರೆಸ್ ಮುಖಂಡರಾದ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಮತ್ತು ಕರ್ನಾಟಕದ ಮಾಜಿ ಮಂತ್ರಿ ಡಿ. ಕೆ ಶಿವಕುಮಾರ್ ಬಂಧನ ಕಾಂಗ್ರೆಸಿಗರಿಗೆ ದೊಡ್ಡ ಆಘಾತವನ್ನೇ ಉಂಟು ಮಾಡಿದೆ. ವಿಶೇಷವಾಗಿ, ಕಾಂಗ್ರೆಸ್ ನ “ಏಟಿಎಂ” ಎಂದೇ ಪ್ರಸಿದ್ಧವಾದ ಕರ್ನಾಟಕದಲ್ಲಿ ಪಕ್ಷದ ದುಸ್ಥಿತಿಯ ಬಗ್ಗೆ ಕಾರ್ಯಕರ್ತರು ಕಳವಳಗೊಂಡಿದ್ದಾರೆ. ಕಾಂಗ್ರೆಸ್ ಒಬ್ಬ ಸಮರ್ಥ ನಾಯಕನ ನಿರೀಕ್ಷೆಯಲ್ಲಿದೆ.