ಗದಗ್ ಜಿಲ್ಲೆಯ ಸಣ್ಣ ಹಳ್ಳಿಗಳಿಂದ ಬಂದು ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ಪಡೆದು ಅಂತರ ರಾಷ್ಟ್ರೀಯ ಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಗೆದ್ದ ಕುಸ್ತಿಪಟು ಮಹಿಳೆಯರು ಇಲ್ಲಿದ್ದಾರೆ. ಈ ದಂಗಲ್ ಕಹಾನಿಯತ್ತ ಒಂದು ನೋಟ.
ಗದಗ್ ಜಿಲ್ಲೆಯ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳನ್ನು ಹೊರಗಡೆ ಕಳುಹಿಸಲು ಹಿಂದೇಟು ಹಾಕುವವರ ಮಧ್ಯೆ ತಾವು ಕುಸ್ತಿಯಲ್ಲಿ ಸಾಧನೆ ಮಾಡುತ್ತೇವೆ ಎಂದು ಹೊರಬಂದು ಸಾಧಿಸಿ ತೋರಿಸಿದ್ದಾರೆ. ಪ್ರತಿ ದಿನವೂ ಬಸ್ಸಿನಲ್ಲಿ ಬಂದು ಕುಸ್ತಿ ಅಭ್ಯಾಸ ಮಾಡಿ ನಂತರ ತಮ್ಮ ಕಾಲೇಜಿಗೆ ಹೋಗಿ ಸಂಜೆ ಮತ್ತೆ ಕುಸ್ತಿ ತರಬೇತಿ ಪಡೆದು, ಹೀಗೆ ನಿತ್ಯವೂ ಸತತ ಪರಿಶ್ರಮದಿಂದ ಇಂದು ಕೆಲವು ಬಾಲಕಿಯರು ತಮ್ಮ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.
ಇವರಲ್ಲಿ ಪ್ರೇಮಾ ಹುಚ್ಚಣ್ಣವರ ಇವರು 2012 ರಲ್ಲಿ ಏಷಿಯನ್ ಕ್ಯಾಡೆಟ್ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿ ಭಾರತಕ್ಕೆ ಚಿನ್ನ ತಂದಿದ್ದಾರೆ. ಕೈರ್ಗಿಸ್ತಾನ್ ನಲ್ಲಿ ನಡೆದ ಅಂತರ ರಾಷ್ಟ್ರೀಯ ರೆಸ್ಲಿಂಗ್ ನಲ್ಲಿ ನಡೆದ ಇವರ ರೋಚಕ ಕುಸ್ತಿ ಪಂದ್ಯವನ್ನು ಇನ್ನೂ ಕುಸ್ತಿ ಪ್ರಿಯರು ನೆನೆಸಿಕೊಳ್ಳುತ್ತಾರೆ. ಪ್ರೇಮಾ ಗದುಗಿನ ಹತ್ತಿರದ ಅಸುಂಡಿ ಗ್ರಾಮದವರು. ಬಾಲ್ಯದಿಂದಲೂ ಕುಸ್ತಿ ಗೀಳು ಇವರಿಗೆ. ಮೊದಲು ಮನೆಯಲ್ಲಿ ಹಾಗೂ ಗ್ರಾಮದ ಕೆಲವರಲ್ಲಿ ಕುಸ್ತಿ ಇಂಗಿತವನ್ನು ವ್ಯಕ್ತಪಡಿಸಿದಾಗ ಸುಮ್ಮನ ಕಲಿ ಆಮ್ಯಾಲೆ ಮದುವೆ ಯಾಗಿ ಹೋಗು, ಕುಸ್ತಿ ಪಸ್ತಿ ಹೆಣ್ಣ ಮಕ್ಕಳಿಗಲ್ಲ. ಇಂತಾ ಹುಚ್ಚು ವಿಚಾರ ಮನಸನ್ಯಾಂಗಿದ ತೆಗೆದು ಹಾಕು ಎಂದು ಬೈದರು. ಇದಾವುದನ್ನು ಲೆಕ್ಕಿಸದೇ ನಿರಂತರ ಅಭ್ಯಾಸ ಹಾಗೂ ಛಲದಿಂದ ಪ್ರೇಮಾ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದಾಗ ಬೈದವರೆ ಬೆನ್ನು ತಟ್ಟಿ ಇಂದಿಗೂ ಪ್ರೇಮಾ ತಮ್ಮ ಹಳ್ಳಿಯವಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಮನೆಯಲ್ಲಿ ಹಾಗೂ ಗ್ರಾಮದಲ್ಲಿ ಪ್ರತಿರೋಧ ಬಂದಾಗ ಪ್ರೇಮಾ ತಮ್ಮ ಇಂಗಿತವನ್ನು ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ ಅವರ ಮುಂದೆ ವ್ಯಕ್ತಪಡಿಸಿದರು. ಆಗ ಶರಣಗೌಡ ಚಿಂತೆ ಮಾಡಬೇಡ ನೀನು ನಮ್ಮ ಮನೆಯಲ್ಲಿ ಇರು ಹಾಗೂ ನಿರಂತರ ಅಭ್ಯಾಸ ಮಾಡು, ನಾನು ತರಬೇತಿ ನೀಡುತ್ತೇನೆ ಎಂದು ಲಕ್ಕುಂಡಿ ಗ್ರಾಮದಲ್ಲಿರುವ ತಮ್ಮ ಚಿಕ್ಕ ಮನೆಯಲ್ಲಿ ಇರಿಸಿಕೊಂಡು ಪ್ರೇಮಾಗೆ ತರಬೇತಿ ನೀಡಿದರು. ಶರಣಗೌಡ ಅವರ ಅರ್ಥಿಕ ಸ್ಥಿತಿ ಆಗಿನ್ನೂ ಹೇಳಿಕೊಳ್ಳುವಂತಿರಲಿಲ್ಲ. ಬಡತನದ ಮಧ್ಯೆಯೂ ಪ್ರೇಮಾ ಮತ್ತು ಇನ್ನಿತರ ಬಾಲಕಿಯರನ್ನು ತಮ್ಮ ಮಕ್ಕಳಂತೆ ಪೋಷಿಸಿ ತರಬೇತಿ ನೀಡಿದರು. ನಿತ್ಯ ಸೈಕಲ್ ತುಳಿದುಕೊಂಡು ಲಕ್ಕುಂಡಿಯಿಂದ ಗದುಗಿಗೆ 12 ಕಿಮಿ ವರೆಗೆ ಬಂದು ತರಬೇತಿ ನೀಡುವ ಶರಣಗೌಡ ಅವರ ಕಾಯಕ ಮೆಚ್ಚುವಂಥದ್ದು.
ಕುಸ್ತಿ ತರಬೇತಿ ಹಾಗೂ ಕುಸ್ತಿಪಟುಗಳಾಗುವುದು ಸುಲಭ ಅಲ್ಲ. ಬಡವರಿಗಂತೂ ಇದು ಬಹು ದೂರ. ಕಾರಣ ಮನೆಯಿಂದ ನಿತ್ಯ ಜಿಲ್ಲಾ ಕೇಂದ್ರಕ್ಕೆ ಬೆಳಿಗ್ಗೆ ಸೂರ್ಯನ ಬೆಳಕು ಬೀಳುವುದರೊಳಗೆ ಇರಬೇಕು. ನಿತ್ಯ ಇಂತಿಷ್ಟು ಕ್ಯಾಲೋರಿಯಷ್ಟು ಆಹಾರ ಸೇವಿಸಬೇಕು, ಎನರ್ಜಿ ಡ್ರಿಂಕ್ (ಶಕ್ತಿ ನೀಡುವ ಪಾನೀಯ) ಗಳನ್ನು ಕುಡಿಯಬೇಕು. ತಾಜಾ ತರಕಾರಿ, ಶಕ್ತಿ ಬರುವ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು.

ಪ್ರೇಮಾ ಹುಚ್ಚಣ್ಣವರ ಪ್ರತಿಧ್ವನಿ ತಂಡದೊಂದಿಗೆ ಹಂಚಿಕೊಂಡಿದ್ದು ಹೀಗೆ, “ಮೊದಲು ನನಗೆ ಮನೆಯಲ್ಲಿ ಹಾಗೂ ನೆರೆಹೊರೆಯಲ್ಲಿ `ಬೇಡ’ ಎಂಬ ಉಪದೇಶಗಳೇ ಬಂದವು. ಆದರೂ ನನ್ನ ಮನದಲ್ಲಿ ಒಂದು ಆಸೆ ಇತ್ತು. ನಾನು ಕುಸ್ತಿಯಲ್ಲಿ ಏನಾದರೂ ಸಾಧಿಸಬೇಕು ಎಂಬ ಹಂಬಲ ಅಗಾಧವಾಗಿತ್ತು. ಶರಣಗೌಡ ಗುರುಗಳು ನನಗೆ ಸರಿಯಾದ ಸಮಯದಲ್ಲಿ ಸಿಕ್ಕರು. ಇಂದು ನಾನು ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಒಲಂಪಿಕ್ ಹಾಗೂ ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆಯುವ ಹಂಬಲವೂ ಇದೆ. ಭಾರತ ದೇಶದ ಹೆಣ್ಣು ಮಕ್ಕಳು ತೊಡೆ ತಟ್ಟಿ ನಿಂತರೆ ಏನು ಬೇಕಾದರೂ ಸಾಧಿಸುತ್ತಾರೆ ಎಂಬ ಸಂದೇಶ ನೀಡುವ ಇರಾದೆಯಿದೆ. ಗುರುಗಳ ಒಂದು ಮಾತು ಇವತ್ತಿಗೂ ನನಗೆ ಪ್ರೇರಣೆ. ನಿನ್ನ ಎದುರು ಯಾರು ಇದ್ದಾರೆ ಎಂಬುದು ನೋಡಿ ಸೆಣಸಾಡಬೇಡ. ಬದಲಿಗೆ ನೀನು ಗೆದ್ದೇ ಗೆಲ್ಲುವೆ ಎಂಬ ನಂಬಿಕೆ ಇಟ್ಟುಕೊಂಡು ಸೆಣಸಾಡು, ಈ ಮಾತು ಅಕ್ಷರಶಃ ಸತ್ಯ”.
ಶರಣಗೌಡ ಬೇಲೇರಿ ಅವರ ಮಾತು, “ನಮ್ಮ ಭಾಗದಲ್ಲಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟರೆ ಜವಾಬ್ದಾರಿ ಮುಗೀತು ಎಂಬ ಮನೋಭಾವದವರೇ ಹೆಚ್ಚು. ನಾನು ಈ ಬಾಲಕಿಯರನ್ನು ನೋಡಿದಾಗ ಇವರು ಸಾಧಕರು ಆಗುತ್ತಾರೆ. ನಾನು ನನ್ನ ಕೈಲಾದ ಸಹಾಯ ಮಾಡಬೇಕು ಎಂಬ ಸದಿಚ್ಛೆಯಿಂದ ಇವರಿಗೆ ತರಬೇತಿ ನೀಡಿದೆ. ಎಲ್ಲರೂ ನನ್ನನ್ನು ಇವರ ಗುರು ಅಂತಲೇ ಪರಿಚಯ ಮಾಡಿಕೊಳ್ಳುತ್ತಾರೆ, ಒಬ್ಬ ಗುರುವಿಗೆ ಇದಕ್ಕಿಂತ ಇನ್ನೇನು ಬೇಕು”.

ಯಾರು ಈ ಶರಣಗೌಡ ಬೇಲೇರಿ?
ಇವರು ಮೂಲತಃ ಗದುಗಿನ ಹಾತಲಗೇರಿ ಗ್ರಾಮದವರು. ಈಗ ಲಕ್ಕುಂಡಿಯಲ್ಲಿ ವಾಸವಾಗಿದ್ದಾರೆ. ಚಿಕ್ಕಂದಿನಿಂದಲೂ ಕುಸ್ತಿ ಪಟು ಆಗಿದ್ದ ಶರಣಗೌಡ ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಹಾಗೂ ಅಂದಿನ ದಿನಗಳಲ್ಲಿ ಅವಕಾಶ ಕಡಿಮೆ ಇದ್ದುದರಿಂದ ಅಂತರ ರಾಷ್ಟ್ರೀಯ ಮಟ್ಟಕ್ಕೆ ತಲುಪಲಾಗಲಿಲ್ಲ. ಈ ಕೊರತೆಯನ್ನು ಅವರು ತಮ್ಮ ಮಕ್ಕಳಿಗೆ ಕುಸ್ತಿ ಕಲಿಸಿ, ರಾಜ್ಯ ಮಟ್ಟ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿ ನೀಗಿಸಿಕೊಂಡರು. ತಮ್ಮ ಮಕ್ಕಳಷ್ಟೇ ಏಕೆ, ಬೇರೆಯವರ ಮಕ್ಕಳು ಹಾಗೂ ಆಸಕ್ತರಿಗೂ ಕುಸ್ತಿ ಕಲಿಸಿ ಹಳ್ಳಿಗಳಿಂದ ಪ್ರತಿಭೆಗಳನ್ನು ಹುಡುಕಿ ತಂದು ಅವರಿಗೆ ಉಚಿತ ಊಟ, ತರಬೇತಿ ಹಾಗೂ ತಮ್ಮೊಂದಿಗೆ ವಾಸಿಸಲು ಅವಕಾಶ ನೀಡಿ ಮಾನವೀಯತೆ ಮೆರೆದಿದ್ದಾರೆ.
ಶರಣಗೌಡ ಅವರಿಗೆ ರಾಜ್ಯ ಮಟ್ಟದ ಕುಸ್ತಿ ಪಂದ್ಯಗಳಲ್ಲಿ ಹೆಣ್ಣು ಮಕ್ಕಳನ್ನು ನೋಡಿದಾಗ ಗದುಗಿನ ಬಾಲಕಿಯರನ್ನು ಈ ಮಟ್ಟಕ್ಕೆ ತರಬೇಕು ಎಂಬ ಯೋಚನೆ ಬಂತು. ಅವರು ಪ್ರತಿಭೆಗಳನ್ನು ಅರಸುತ್ತ ಇದ್ದಾಗ ಪ್ರೇಮಾ ಹುಚ್ಚಣ್ಣವರ, ಶ್ವೇತಾ ಭೆಳಗಟ್ಟಿ, ಸಂಗೀತಾ ಸಿತಾರಳ್ಳಿ, ಶಯೀದಾ ಭಾನು ಹೀಗೆ ಆಸಕ್ತ ಬಾಲಕಿಯರು ಸಿಕ್ಕರು. ಇವರಿಗೆ ತರಬೇತಿ ನೀಡಿ ಸ್ಥಳೀಯ ಪಂದ್ಯಗಳಲ್ಲಿ ಭಾಗವಹಿಸಲು ಶರಣಗೌಡ ಶ್ರಮಿಸಿದರು. ಹೆಣ್ಣು ಮಕ್ಕಳು ಕುಸ್ತಿಗೆ ಬರುತ್ತಾರಾ ಎಂದು ಹಲವರು ಆಶ್ವರ್ಯಪಡಿಸಿದ್ದರು ಮತ್ತು ಬೇಡ ಅವರಿಗೆ ಏನಾದರೂ ತೊಂದರೆ ಆದರೆ ಹೇಗೆ, ಅವರ ಮನೆಯವರ ಒಪ್ಪಿಗೆ ಇದೆಯಾ ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದರು. “ಇದಾವುದಕ್ಕೂ ಜಗ್ಗದೆ ನಾನು ತರಬೇತಿಗೊಳಿಸಿದ ಪ್ರತಿಯೊಬ್ಬರಿಗೂ ಸಿಂಹಿಣಿಯಂತೆ ಎಂದು ಮುನ್ನುಗ್ಗಿ ಎಂದು ಹೇಳಿದೆ. ಎಲ್ಲರನ್ನು ಮನವೊಲಿಸಿ ಇವರೆಲ್ಲಾ ಕುಸ್ತಿಗೆ ಅವಕಾಶ ಪಡೆದರು. ಈ ಎಲ್ಲ ಬಾಲಕಿಯರು, ಬಾಲಕರನ್ನೂ ಸರಿಗಟ್ಟಿ ಅವರನ್ನು ಕುಸ್ತಿಯಲ್ಲಿ ಸೋಲಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು.’’
ಸ್ಥಳೀಯ ಕುಸ್ತಿ ಗೆದ್ದ ಬಳಿಕ ಶರಣಗೌಡ ಎಲ್ಲ ಬಾಲಕಿಯರನ್ನು ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಹಲವು ಪ್ರಶಸ್ತಿಗಳನ್ನು ಬಾಚುವಂತೆ ಮಾಡಿದರು. ನಂತರ ಇವರ ಗೆಲುವಿನ ಓಟ ನಿಲ್ಲಲಿಲ್ಲ. ಇಂದು ಈ ಬಾಲಕಿಯರು ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ಗಂಡಿಗಿಂತ ಹೆಣ್ಣುಮಕ್ಕಳು ಕಮ್ಮಿಯೇನಲ್ಲ ಎಂದು ಸಾಬೀತು ಪಡಿಸಿದ್ದಾರೆ. ಹೆಣ್ಣು ಕೂಸು ಹುಟ್ಟಿದರೆ ಅಯ್ಯೋ ಎನ್ನುವ ಜನರಿಗೆ ಇಂಥವರು ಮಾದರಿ…ಅಲ್ಲವೇ…