ಮಂಗಳೂರಿನಲ್ಲಿ ಮೂಲ ಸಂಬಂಧವನ್ನು ಹೊಂದಿದ್ದ ಗಂಗಯ್ಯ ವೀರಪ್ಪ ಸಿದ್ಧಾರ್ಥ ಹೆಗ್ಡೆ ಎಲ್ಲ ವ್ಯಾವಹಾರಿಕ ಜಂಜಾಟಕ್ಕೆ ಅಂತ್ಯಹಾಡಲು ಮಂಗಳೂರನ್ನೇ ಆಯ್ಕೆ ಮಾಡಿಕೊಂಡರೇ? ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅಳಿಯ ಎಂದೇ ಜನಪ್ರಿಯರಾಗಿದ್ದ ಕಾಫಿ ಕಿಂಗ್ ಜಿ. ವಿ. ಸಿದ್ಧಾರ್ಥ್ ಅವರು ಕೆಫೆ ಕಾಫಿ ಡೇ ಸಹಿತ ಹಲವು ವ್ಯವಹಾರಗಳ ಸಂಸ್ಥಾಪಕರು. ಜುಲೈ 29ರಂದು ಸಂಜೆ ಮಂಗಳೂರು ಸಮೀಪದ ನೇತ್ರಾವತಿ ಸೇತುವೆ ಸಮೀಪದಿಂದ ಸಿದ್ಧಾರ್ಥ್ ನಾಪತ್ತೆ ಆಗಿದ್ದಾರೆ. ಸೇತುವೆಯಲ್ಲಿ ವಾಕಿಂಗ್ ಮಾಡಿಕೊಂಡು ಬರುತ್ತೇನೆಂದು ಕಾರು ಚಾಲಕ ಬಸವರಾಜ್ ಪಾಟೀಲ್ ಅವರಿಗೆ ತಿಳಿಸಿದ್ದ ಸಿದ್ಧಾರ್ಥ ಅನಂತರ ಸಂಪರ್ಕಕ್ಕೆ ಸಿಕ್ಕಿಲ್ಲ.
ಚಾಲಕ ನೀಡಿದ ಮಾಹಿತಿ ಮಾಹಿತಿ ಪ್ರಕಾರ ಅವರು ದೂರವಾಣಿ ಸಂಭಾಷಣೆಯಲ್ಲಿ ಇದ್ದಾಗಲೇ ಕಾರಿನಿಂದ ಇಳಿದಿದ್ದಾರೆ. ಕೊನೆಯ ಬಾರಿಗೆ ಫೋನ್ ಮಾಡಿರುವುದು ತಮ್ಮ ಒಡೆತನದ ಕೆಫೆ ಕಾಫಿ ಡೇ ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಓ) ಜಾವೇದ್ ಎಂಬುವವರಿಗೆ.
ನಾಪತ್ತೆ ಆಗುವ ಮೊದಲು ಕಂಪೆನಿಯ ಆಡಳಿತ ಮಂಡಳಿ ಸದಸ್ಯರಿಗೆ ಬರೆದಿರುವ ಲಿಖಿತ ಪತ್ರದಲ್ಲಿ ಸಿದ್ಧಾರ್ಥ್ ತನ್ನ ಮುಂದಿನ ಹಾದಿಯ ಬಗ್ಗೆ ಏನನ್ನೂ ಬರೆದಿಲ್ಲ. ಆದರೆ, ನಾಪತ್ತೆಯ ವಿಚಾರದಲ್ಲಿ ಅನೇಕ ವ್ಯಾಖ್ಯಾನಗಳನ್ನು ಮಾಡಲಾಗುತ್ತಿದೆ. ಅವರು ಜೀವಂತ ಇದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಬೆಂಗಳೂರಿನಲ್ಲಿದ್ದ ಕಾರಣ ಸೋಮವಾರ ರಾತ್ರಿಯೇ ಸಿದ್ಧಾರ್ಥ್ ಕುಟುಂಬದವರನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ.
ಸಿದ್ಧಾರ್ಥ್ ಬರೆದಿರುವ ಪತ್ರದ ಪ್ರಕಾರ ಆರ್ಥಿಕ ಮುಗ್ಗಟ್ಟು, ಸಾಲ ಬಾಕಿ ಮತ್ತು ಆದಾಯ ತೆರಿಗೆ ಇಲಾಖೆಯ ಕಿರುಕುಳ ಎದುರಿಸುತ್ತಿರುವುದು ಸ್ಪಷ್ಟವಾಗಿದೆ. ಇತ್ತೀಚೆಗೆ ಮೈಂಡ್ ಟ್ರೀ ಕಂಪೆನಿಯ ಶೇರುಗಳನ್ನು ಮಾರಾಟ ಮಾಡಿದ್ದರು. ಇದಕ್ಕೆ ಆಂತರಿಕ ವಿರೋಧಗಳಿತ್ತು.
ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪಡೆದಿರುವ ಸಿದ್ದಾರ್ಥ್ ಅವರ ತಂದೆ ಚಿಕ್ಕಮಗಳೂರು ಮೂಡಿಗೆರೆಯಲ್ಲಿ ಕಾಫಿ ತೋಟಗಳನ್ನು ಹೊಂದಿದ್ದರು. ಶಿಕ್ಷಣ ಪಡೆದ ನಂತರ ಮುಂಬಯಿಯಲ್ಲಿ ಜೆ. ಎಂ. ಫೈನಾನ್ಷಿಯಲ್ ಕಂಪೆನಿಯಲ್ಲಿ ಎರಡು ವರ್ಷ ತರಬೇತು ಆಡಳಿತದಾರನಾಗಿ ಕೆಲಸ ಮಾಡಿ ಬೆಂಗಳೂರಿಗೆ ಹಿಂತಿರುಗಿ 26ರ ಹರೆಯದಲ್ಲಿ ಸ್ವಂತ ಉದ್ಯಮ ಆರಂಭಿಸಿದ್ದರು. ಮೊದಲಿಗೆ ಶಿವನ್ ಸೆಕ್ಯುರಿಟೀಸ್ ಹೆಸರಿನಲ್ಲಿ ಕಂಪನಿಯನ್ನು ಪ್ರಾರಂಭಿಸಿದರು. 2000 ನೇ ಇಸವಿಯಲ್ಲಿ ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಎಂದು ಮರುನಾಮಕರಣ ಮಾಡಲಾಯಿತು. 1992ರಲ್ಲಿ ಕಾಫಿ ತೋಟಗಾರಿಕೆ ಮತ್ತು ಕಾಫಿ ವ್ಯವಹಾರದ ಅಮಲ್ಗಮೇಟೆಡ್ ಬೀನ್ ಕಂಪೆನಿ (ಎಬಿಸಿ) ಇಂದು ಅಂದಾಜು ಎರಡೂವರೆ ಸಾವಿರ ಕೋಟಿ ರೂಪಾಯಿ ವ್ಯವಹಾರದ ಸಂಸ್ಥೆಯಾಗಿ ಬೆಳೆದಿದೆ.
ಸುಮಾರು 12 ಸಾವಿರ ಎಕರೆ ಕಾಫಿ ತೋಟ ಹೊಂದಿರುವ ಸಿದ್ಧಾರ್ಥ್, ದಕ್ಷಿಣ ಭಾರತದಲ್ಲಿ ಕಾಫಿ ಹುಡಿ ಮಾರಾಟ ಮಾಡುವ 200 ಕ್ಕೂ ಹೆಚ್ಚು ಅಂಗಡಿಗಳನ್ನು ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಮಗಳು ಮಾಳವಿಕಾ ಅವರನ್ನು ವಿವಾಹ ಆಗರುವ ಸಿದ್ಧಾರ್ಥ್ 1996ರಲ್ಲಿ ಕೆಫೆ ಕಾಫಿ ಡೇ ಎಂಬ ವಿನೂತನ ಕಾಫಿ ಶಾಪ್ ಗಳನ್ನು ತೆರೆದು ಬಹಳಷ್ಟು ಜನಪ್ರಿಯತೆಯನ್ನು ಪಡೆದರು. ಭಾರತದ ಅತಿದೊಡ್ಡ ರಿಟೇಲ್ ಕಾಫಿ ಚೈನ್ ಇದಾಗಿದ್ದು, ದೇಶದಾದ್ಯಂತ 209 ನಗರ, ಪಟ್ಟಣಗಳಲ್ಲಿ 1,423 ಕಾಪಿ ಡೇ ಶಾಪ್ ಗಳನ್ನು ಹೊಂದಿದ್ದಾರೆ. ಚಿಕ್ಕಮಗಳೂರು ಕಾಫಿಯನ್ನು ವಿಶ್ವದಾದ್ಯಂತ ಜನಪ್ರಿಯಗೊಳಿಸಿದ ಕೀರ್ತಿ ಸಿದ್ದಾರ್ಥ್ ಅವರಿಗೆ ಸಲ್ಲುತ್ತದೆ.
ಕಾಫಿ ಮಾತ್ರವಲ್ಲದೆ ಬಾಳೆಹಣ್ಣು ರಫ್ತು ಮಾಡುವ ವ್ಯವಹಾರಕ್ಕೂ ಸಿದ್ಧಾರ್ಥ ಕೈ ಹಾಕಿದ್ದರು. ಅದಕ್ಕಿಂತಲೂ ಮಿಗಿಲಾಗಿ ದಕ್ಷಿಣ ಅಮೆರಿಕಾದ ಗಯಾನ ದೇಶದ ಅಮೆಜಾನ್ ಕಾಡುಗಳನ್ನು ಲೀಸ್ ಗೆ ಪಡೆದು ಮಂಗಳೂರು ಬಂದರು ಮೂಲಕ ಟಿಂಬರ್ ಅಮದು ಮಾಡಿಕೊಂಡು ಚಿಕ್ಕಮಗಳೂರಿನಲ್ಲಿ ಉತ್ತಮ ಗುಣಮಟ್ಟದ ಪೀಠೋಪಕರಣ ಉತ್ಪಾದಿಸುವ ದ ಡಾರ್ಕ್ ಫಾರೆಸ್ಟ್ ಫರ್ನಿಚರ್ ಕಂಪೆನಿಯೊಂದಕ್ಕೆ 2010ರಲ್ಲಿ ಚಾಲನೆ ನೀಡಿದ್ದರು.
ಎರಡು ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆಫೆ ಕಾಫಿ ಡೇ ಕಂಪೆನಿಯ ಹಲವು ಕಚೇರಿಗಳ ಮೇಲೆ ದಾಳಿ ನಡೆಸಿ ತನಿಖೆ ನಡೆಸಿತ್ತು. ಅಂದಾಜು ಮೂರು ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿ ಬಾಕಿ ಇದೆ ಎನ್ನಲಾಗುತ್ತಿದೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಕಿರುಕುಳ ಮತ್ತು ಸಾಲಗಾರರ ಒತ್ತಡ ಸಹಿಸಲಾಗುತ್ತಿಲ್ಲ ಎಂದು ಸಿದ್ಧಾರ್ಥ ತಮ್ಮ ಪತ್ರದಲ್ಲಿ ಉಲ್ಲೇಖಿಸಿ ನಾಪತ್ತೆ ಆಗಿದ್ದಾರೆ.
ಬೃಹತ್ ಮೊತ್ತದ ಸಾಲಕ್ಕಾಗಿ ಸಿದ್ಧಾರ್ಥ್ ಖಾಸಗಿ ಹಣಕಾಸು ಕಂಪನಿಯ ಮೂಲಕ ಪ್ರಯತ್ನ ಮಾಡಿದ್ದು, ಅದು ಕೈಗೂಡಲಿಲ್ಲ ಎನ್ನಲಾಗುತ್ತಿದೆ. ಈ ಮಧ್ಯೆ, ಜುಲೈ 30ರಂದು ಕಂಪೆನಿಯ ಶೇರುಗಳ ಬೆಲೆ ಕುಸಿದಿದೆ. ಕಾಫಿ ಡೇ ಎಂಟರ್ ಪ್ರೈಸಸ್ ಆಡಳಿತ ನಿರ್ದೇಶಕ ಸಿದ್ದಾರ್ಥ್ ನಾಪತ್ತೆ ಆಗಿದ್ದು, ಕಂಪೆನಿಯು ಸಮರ್ಥ ಆಡಳಿತ ಮಂಡಳಿಯನ್ನು ಹೊಂದಿದ್ದು ವ್ಯವಹಾರ ಮುಂದುವರಿಸಲಾಗುವುದು ಎಂದು ಮುಂಬಯಿ ಸ್ಟಾಕ್ ಎಕ್ಸ್ ಚೇಂಜ್ ಗೆ ಕಂಪೆನಿಯ ಕಾರ್ಯದರ್ಶಿ ಸದಾನಂದ ಪೂಜಾರಿ ಮಾಹಿತಿ ನೀಡಿದ್ದಾರೆ.