ಒಂದೊಂದೇ ರಾಜ್ಯದ ಆಡಳಿತ ಕೈಬಿಟ್ಟು ಹೋಗುತ್ತಿರುವಂತೆಯೇ ಆಡಳಿತಾರೂಢ ಬಿಜೆಪಿ ಇದೀಗ ರಾಷ್ಟ್ರದ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲುವು ಸಾಧಿಸಲೇಬೇಕೆಂಬ ಹಠ ತೊಟ್ಟಿದ್ದು, ಇದಕ್ಕಾಗಿ ಹಲವಾರು ಆಮಿಷಗಳ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
2020ರ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಹಿಂದಿನ ಎರಡು ಚುನಾವಣೆಗಳಲ್ಲಿ ಆದ ಸೋಲನ್ನು ಈ ಬಾರಿ ಗೆಲುವಿನ ಮೂಲಕ ಮರೆಯುವ ಪ್ರಯತ್ನ ನಡೆಸಲು ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ.
ನಗರ ಕೇಂದ್ರಿತ ಮತ್ತು ಸಿರಿವಂತರ ಪರವಾಗಿರುವ ಪಕ್ಷ ಎಂದೇ ಬಿಂಬಿತವಾಗಿರುವ ಬಿಜೆಪಿ ಇನ್ನು ಮುಂದೆ ಇಂತಹ ಹಣೆಪಟ್ಟಿ ಕಟ್ಟಿಕೊಂಡು ಹೋದರೆ ಮತದಾರ ಮತ ಹಾಕುವುದಿಲ್ಲ ಎಂಬುದನ್ನು ಮನಗಂಡಿದೆ. ಅಲ್ಲದೇ, ಇದುವರೆಗೆ ನಡೆದ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ರಾಷ್ಟ್ರೀಯವಾದ, ಮೋದಿ ಅಲೆ, ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡು ಹೋಗಿ ಐದು ಪ್ರಮುಖ ರಾಜ್ಯಗಳಲ್ಲಿ ಕೈಸುಟ್ಟುಕೊಂಡಿದ್ದರಿಂದ ದೆಹಲಿ ಚುನಾವಣೆಯಲ್ಲಿ ಬೇರೆಯದ್ದೇ ಆದ ಯೋಜನೆಗಳನ್ನು ರೂಪಿಸುತ್ತಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್ ಮತ್ತಿತರೆ ರಾಜ್ಯಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಬಿಟ್ಟು ಮತ್ತು ಸ್ಥಳೀಯ ಮಟ್ಟದಲ್ಲಿ ಬಿಜೆಪಿಗೆ ಇದ್ದ ಆಡಳಿತ ವಿರೋಧಿ ಅಲೆಗಳನ್ನು ಪಕ್ಕಕ್ಕೆ ಸರಿಸಿ ಕೇವಲ ಪ್ರಧಾನಿ ಮೋದಿ ಅಲೆಯ ಮೇಲೆ ತೇಲಿದ್ದರಿಂದ ಬಿಜೆಪಿ ಅಧಿಕಾರವನ್ನು ಕಳೆದುಕೊಳ್ಳುವ ಮೂಲಕ ಸೋಲಿನ ಅಲೆಯ ವಿರುದ್ಧ ಈಜಲು ಆರಂಭಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿಷ್ಠೆಯಂತಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವನ್ನು ಸಾಧಿಸುವ ನಿಟ್ಟಿನಲ್ಲಿ ಇನ್ನೂ ಎರಡು ತಿಂಗಳಿರುವಾಗಲೇ ಮತದಾರರನ್ನು ಓಲೈಸಿಕೊಳ್ಳಲೆಂದೇ ಹಲವಾರು ವೋಟ್ ಬ್ಯಾಂಕ್ ಯೋಜನೆಗಳನ್ನು ಪ್ರಕಟಿಸುತ್ತಿದೆ. ಇದರಲ್ಲಿ ಪ್ರಮುಖವಾಗಿ ದೆಹಲಿಯ 1,731 ಅನಧಿಕೃತ ಕಾಲೋನಿಗಳನ್ನು ಸಕ್ರಮ ಮಾಡಿ ಅವರಿಗೆ ಹಕ್ಕುಪತ್ರಗಳನ್ನು ನೀಡುವ ಹೊಸ ಕಾನೂನನ್ನು ಜಾರಿಗೆ ತರುವ ಭರವಸೆಯನ್ನು ನೀಡಿದೆ. ಇದನ್ನು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಘೋಷಣೆ ಮಾಡಿದ್ದಾರೆ.
ಕಳೆದ ಚುನಾವಣೆಯ ವೇಳೆ, ಆಮ್ ಆದ್ಮಿ ಪಾರ್ಟಿ ಉಚಿತ ಕುಡಿಯುವ ನೀರು ಮತ್ತು ವಿದ್ಯುತ್ ಯೋಜನೆಯನ್ನು ಪ್ರಕಟಿಸುವ ಮೂಲಕ ಮತದಾರರ ಹೃದಯ ಮತ್ತು ಮನಸನ್ನು ಕದಿಯುವ ಮೂಲಕ ಕ್ಲೀನ್ ಸ್ವೀಪ್ ಮಾಡಿ ಅಧಿಕಾರದ ಗದ್ದುಗೆ ಏರಿತ್ತು. ಇದಲ್ಲದೇ, ಶಾಲೆಗಳಿಗೆ ಆಟದ ಮೈದಾನ ಮತ್ತು ಮೊಹಲ್ಲಾಗಳಲ್ಲಿ ಕ್ಲಿನಿಕ್ ಗಳನ್ನು ಆರಂಭಿಸುವ ಮೂಲಕ ಪ್ರಾಥಮಿಕ ಆರೋಗ್ಯಕ್ಕೆ ಆದ್ಯತೆ ನೀಡಿದ್ದರಿಂದ ಫಿದಾ ಆಗಿದ್ದ ಮತದಾರರು ಆಮ್ ಆದ್ಮಿ ಪಾರ್ಟಿಯ ಕೈ ಹಿಡಿದಿದ್ದರು.
ಈ ಬಾರಿಯೂ ಆಮ್ ಆದ್ಮಿ ಪಾರ್ಟಿಯಿಂದ ಇಂತಹ ಇನ್ನೂ ಹಲವಾರು ಯೋಜನೆಗಳ ಭರವಸೆ ಹೊರ ಬರಬಹುದೆಂಬ ನಿರೀಕ್ಷೆಯಲ್ಲಿ ಬಿಜೆಪಿ ಅದಕ್ಕೂ ಮುನ್ನವೇ ಕಾಲೋನಿಗಳನ್ನು ಸಕ್ರಮ ಮಾಡುವ ಯೋಜನೆಯನ್ನು ಘೋಷಿಸಿದೆ.
ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ “ಧನ್ಯವಾದ ರ್ಯಾಲಿ’’ ಮೋದಿ ಈ ಯೋಜನೆಯನ್ನು ಪ್ರಕಟಿಸಿದ್ದಾರೆ. ಫೆಬ್ರವರಿಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಬಿಜೆಪಿ ಸರ್ಕಾರ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ದೆಹಲಿ (ಅನಧಿಕೃತ ಕಾಲೋನಿಗಳ ನಿವಾಸಿಗಳ ಸಾರ್ವಜನಿಕ ಹಕ್ಕು ಪರಿಗಣಿಸುವುದು) ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರವನ್ನೂ ಪಡೆದುಕೊಂಡಿದೆ.
ದೆಹಲಿಯಲ್ಲಿರುವ ಅನಧಿಕೃತ ಕಾಲೋನಿಗಳಲ್ಲಿ ವಾಸವಾಗಿರುವ ನಿವಾಸಿಗಳಿಗೆ ಅವರಿರುವ ಜಾಗದ ಮಾಲೀಕತ್ವದ ಹಕ್ಕನ್ನು ನೀಡುವುದು ಈ ಮಸೂದೆಯ ಉದ್ದೇಶವಾಗಿದೆ. ಈ ಕಾನೂನಿನ ಪ್ರಕಾರ ಆಸ್ತಿಯ ಮಾಲೀಕತ್ವದ ಹಕ್ಕು ನಿವಾಸಿಗಳಿಗೆ ದೊರೆಯಲಿದೆ. ಆಸ್ತಿಯ ವರ್ಗಾವಣೆ, ಅಡಮಾನ, ಆಸ್ತಿಯ ಹಕ್ಕು ಪ್ರತಿಪಾದನೆ, ಮಾರಾಟ ಒಪ್ಪಂದ, ಸ್ವಾಧೀನ ಪ್ರಮಾಣಪತ್ರ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ನಿವಾಸಿಗಳಿಗೆ ನೀಡಲಾಗುತ್ತದೆ.
2008ರಲ್ಲಿಯೇ ಅಂದಿನ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದು ಅನಧಿಕೃತ ಕಾಲೋನಿಗಳನ್ನು ಸಕ್ರಮ ಮಾಡಲು ನಿರ್ಧರಿಸಿತ್ತಾದರೂ, ಕಡೆಗೆ ಕೈಬಿಟ್ಟಿತ್ತು. ಇದೀಗ ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ ಅನುಮೋದನೆ ಪಡೆದಿದೆಯಾದರೂ, ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲು 2021ರವರೆಗೆ ಕಾಲಾವಕಾಶ ಬೇಕು ಎಂದು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಹೇಳಿದೆ. ಈಗ ಆಮ್ ಆದ್ಮಿ ಪಾರ್ಟಿಗೆ ಬಿಜೆಪಿ ಅನುಮೋದನೆ ಪಡೆದಿರುವ ಈ ಕಾಯ್ದೆಯನ್ನು ಜಾರಿಗೆ ತಂದರೂ ಕಷ್ಟ, ತರದಿದ್ದರೂ ಕಷ್ಟ ಎಂಬಂತಾಗಿದೆ. ಏಕೆಂದರೆ, ಜಾರಿಗೆ ತಂದರೆ ಇದರ ಎಲ್ಲಾ ಕ್ರೆಡಿಟ್ ಬಿಜೆಪಿಗೆ ಹೋಗುತ್ತದೆ, ತರದಿದ್ದರೆ ಪ್ರಚಾರದ ವೇಳೆ ಇಂತಹ ಜನಪರವಾದ ಯೋಜನೆಯನ್ನು ಆಮ್ ಆದ್ಮಿ ಪಾರ್ಟಿ ಜಾರಿಗೆ ತರಲಿಲ್ಲ ಎಂದು ವ್ಯತಿರಿಕ್ತವಾದ ಪ್ರಚಾರ ಮಾಡಿ ಬಿಜೆಪಿ ಮತಗಳನ್ನು ಸೆಳೆಯಲು ಪ್ರಯತ್ನಿಸಲಿದೆ. ಹೀಗಾಗಿ ಆಮ್ ಆದ್ಮಿ ಪಾರ್ಟಿಗೆ ಈ ಯೋಜನೆ ಅತ್ತ ದರಿ ಇತ್ತ ಪುಲಿಯಂತಾಗಿದೆ.
ಈ ಬಾರಿಯ ವಿಧಾನಸಭೆ ಚುನಾವಣೆ ವೇಳೆ ಪ್ರಚಾರದ ಪ್ರಮುಖವಾಗಿ ಪ್ರಸ್ತಾಪಿಸಲು ಬಿಜೆಪಿಗೆ ಹೇಳಿಕೊಳ್ಳುವಂತಹ ವಿಚಾರಗಳು ಇರಲಿಲ್ಲ. ಇದೀಗ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅನುಮೋದನೆ ಪಡೆಯುತ್ತಿದ್ದಂತೆಯೇ ಅನಧಿಕೃತ ಕಾಲೋನಿಗಳ ಸಕ್ರಮ ಕಾನೂನಿನ ಬಗ್ಗೆ ಗಲ್ಲಿ ಗಲ್ಲಿಗಳಲ್ಲಿ ಸ್ಥಳೀಯ ಬಿಜೆಪಿ ನಾಯಕರು ಪ್ರಚಾರವನ್ನು ಆರಂಭಿಸಿದ್ದಾರೆ. ಇಷ್ಟೇ ಅಲ್ಲ, ಈ ಹೊಸ ಕಾನೂನನ್ನು ತರಲು ನಿರ್ಧರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಹೇಳುವ ಸಂಬಂಧ ಸಹಿ ಸಂಗ್ರಹಣೆ ಮಾಡಲಾಗಿದೆ. ಇದಕ್ಕೆ ಅನಧಿಕೃತ ಕಾಲೋನಿಗಳ 11 ಲಕ್ಷ ನಿವಾಸಿಗಳ ಬಳಿ ಸಹಿಯನ್ನು ಹಾಕಿಸಿಕೊಳ್ಳಲಾಗುತ್ತಿದೆ.
ಮೋದಿ ನೇತೃತ್ವದಲ್ಲಿ ನಡೆದ ಧನ್ಯವಾದ ರ್ಯಾಲಿಗೆ ಎಲ್ಲಾ ಅನಧಿಕೃತ ಕಾಲೋನಿಗಳ ನಿವಾಸಿಗಳ ಸಂಘಗಳ ಪ್ರಮುಖರನ್ನು ಆಹ್ವಾನಿಸಲಾಗಿತ್ತು. ಇದಿಷ್ಟೇ ಅಲ್ಲ, ಬಿಜೆಪಿ ಈ ಹೊಸ ಕಾನೂನನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ 350 ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳನ್ನು ಆಯೋಜಿಸುತ್ತಿದೆ. ಇದೊಂದು ಐತಿಹಾಸಿಕ ನಿರ್ಧಾರವಾಗಿದೆ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬೈಕ್ ರ್ಯಾಲಿಗಳನ್ನೂ ಆಯೋಜಿಸುತ್ತಿದೆ. ಈ ಮೂಲಕ ಕಳೆದ ಚುನಾವಣೆಯಲ್ಲಿ ಆಗಿದ್ದ ಮುಖಭಂಗವನ್ನು ಈ ಬಾರಿ ಗೆಲುವನ್ನಾಗಿ ಮಾಡಿಕೊಳ್ಳಲು ಬಿಜೆಪಿ ತುದಿಗಾಲ ಮೇಲೆ ನಿಂತಿದೆ.
ಆದರೆ, ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಅಷ್ಟು ಸುಲಭವಾಗಿ ಅಧಿಕಾರವನ್ನು ಬಿಟ್ಟುಕೊಡುವ ಲಕ್ಷಣಗಳಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಯಾವ ರೀತಿ ಮತ್ತಷ್ಟು ಜನಪರ ಕಾರ್ಯಕ್ರಮಗಳನ್ನು ಘೋಷಣೆ ಮಾಡಬೇಕೆಂಬುದರ ಬಗ್ಗೆ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
ಬಿಜೆಪಿಯ ಈ ಹೊಸ ಕಾನೂನಿನ ಕಾರ್ಯತಂತ್ರಕ್ಕೆ ಈಗಾಗಲೇ ಆಮ್ ಆದ್ಮಿ ಪಾರ್ಟಿ ಪ್ರತಿತಂತ್ರವನ್ನು ರೂಪಿಸಿದೆ. ಆಮ್ ಆದ್ಮಿ ಪಾರ್ಟಿ ನಾಯಕ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಈ ಮತದಾರರನ್ನು ಓಲೈಸುವ ಯೋಜನೆ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಕಾಲೋನಿಗಳನ್ನು ಸಕ್ರಮ ಮಾಡುವ ಬಗ್ಗೆ ಬಿಜೆಪಿಗೆ ಗಂಭೀರತೆ ಇಲ್ಲ. ಒಂದು ವೇಳೆ ಇದ್ದಿದ್ದೇ ಆದಲ್ಲಿ ಮತ್ತು ಈ ಯೋಜನೆ ನಿಜಕ್ಕೂ ಜನಪರವಾಗಿದ್ದರೆ ಇನ್ನೂ ಏಕೆ ನಿವಾಸಿಗಳಿಗೆ ಮನೆಗಳನ್ನು ನೋಂದಣಿ ಮಾಡಿಕೊಡುವ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದುವರೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿಲ್ಲ. ಹೊಸ ಕಾನೂನು ಜಾರಿಗೆ ತರಲಾಗುತ್ತದೆ. ಡಿಸೆಂಬರ್ ಅಂತ್ಯದ ವೇಳೆಗೆ 600 ಕ್ಕೂ ಹೆಚ್ಚು ಕಾಲೋನಿಗಳಿಗೆ ಹಕ್ಕುಪತ್ರ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಿರಿ. ಆದರೆ ಇದುವರೆಗೆ ಒಬ್ಬರಿಗೂ ಹಕ್ಕುಪತ್ರ ನೀಡದೇ ದೆಹಲಿಯ ಮುಗ್ಧ ಜನರಿಗೆ ನೀವು ಮತ್ತೊಮ್ಮೆ ವಂಚಿಸಿದ್ದೀರಿ ಎಂದು ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುವುದನ್ನು ಆರಂಭಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಪಕ್ಷ ಕಾಲೋನಿಗಳನ್ನು ಸಕ್ರಮಗೊಳಿಸುವ ಸುಳ್ಳು ಭರವಸೆ ನೀಡಿತ್ತು, ಅದನ್ನೇ ಬಿಜೆಪಿ ಮುಂದುವರಿಸಿದೆ ಎಂದು ಕಿಡಿಕಾರುತ್ತಿರುವ ಕೇಜ್ರಿವಾಲ್, ಈ ಅನಧಿಕೃತ ಕಾಲೋನಿಗಳಲ್ಲಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಜಾರಿಯಲ್ಲಿವೆ. ಸದ್ಯದಲ್ಲೇ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಈ ಸೌಲಭ್ಯಗಳನ್ನು ಆಮ್ ಆದ್ಮಿ ಪಾರ್ಟಿ ತನ್ನ ವಾಗ್ದಾನದಂತೆ ಪೂರೈಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿಗೆ ಸೆಡ್ಡು ಹೊಡಿದಿದ್ದಾರೆ. ಈ ಮೂಲಕ ಕೇಜ್ರಿವಾಲ್ ಅನಧಿಕೃತ ಕಾಲೋನಿಗಳ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.
ಆದರೆ, ಇದುವರೆಗೆ ದೆಹಲಿ ಅಭಿವೃದ್ಧಿ ಬಗ್ಗೆ ಸೊಲ್ಲೆತ್ತದೇ ಇದ್ದ ಬಿಜೆಪಿ ಇದೀಗ ಚುನಾವಣೆ ಹೊಸ್ತಿಲಲ್ಲಿರುವಾಗ ಅನಧಿಕೃತ ಕಾಲೋನಿಗಳ ಬಗ್ಗೆ ಮಮಕಾರವನ್ನು ಹುಟ್ಟಿಸಿಕೊಂಡಿದೆ ಮತ್ತು ಅಲ್ಲಿನ ನಿವಾಸಿಗಳ ಬಗ್ಗೆ ಅಕ್ಕರೆಯನ್ನು ತೋರುತ್ತಿದೆ. ಚುನಾವಣೆಗೆ ಮುನ್ನ ಕೇವಲ 100 ನಿವಾಸಿಗಳಿಗೆ ಹಕ್ಕುಪತ್ರ ಕೊಟ್ಟು ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನ ಮಾಡುವ ತಯಾರಿ ನಡೆಸಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಬಡವರ ಬಗ್ಗೆ ತೋರುತ್ತಿರುವ ಕಾಳಜಿ ಬಿಜೆಪಿ ಮತಗಳಾಗಿ ಪರಿವರ್ತನೆ ಮಾಡುವುದು ದುಸ್ತರ ಎಂದೇ ಹೇಳಲಾಗುತ್ತಿದೆ.