ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಚುನಾವಣೆ ಪ್ರಚಾರ ಸಭೆಗಳಲ್ಲಿ ಆಡಿದ ಮಾತುಗಳು ಸುಪ್ರೀಂ ಕೋರ್ಟ್ ತಲುಪಿದ್ದವು. ಚುನಾವಣಾ ಆಯೋಗವು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಾದಾಗ ಕೋರ್ಟ್ ಆಯೋಗಕ್ಕೆ ಬೆಂಡೆತ್ತಿತ್ತು. ಪರಿಣಾಮವಾಗಿ, ಇಬ್ಬರ ಮೇಲೂ ನಿರ್ದಿಷ್ಟ ಅವಧಿಯ ಪ್ರಚಾರ ನಿಷೇಧವನ್ನು ಆಯೋಗವು ಹೇರಿದೆ. ಇಂಥ ಕ್ರಮ ಕೈಗೊಂಡ ನಂತರವಷ್ಟೇ ನ್ಯಾಯಾಲಯ ತನ್ನ ತೃಪ್ತಿ ವ್ಯಕ್ತಪಡಿಸಿದೆ.
ರಾಜ್ಯ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ (ಏ.16) ರಾತ್ರಿ ಬೆಳಗಾವಿ ಸಮೀಪದ ಕಡೋಲಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ, “ಬ್ರಾಹ್ಮಣರ ಸಹಿತ ಮೇಲ್ವರ್ಗದವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿಲ್ಲ,” ಎಂದು ಹೇಳಿದ್ದಾಗಿ ಪತ್ರಿಕೆಗಳಲ್ಲಿ ವರದಿಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ಹೇಳಿಕೆ ಹರಿದಾಡಿದೆ.
ಸತೀಶ್ ಅವರು ಚುನಾವಣೆ ಪ್ರಚಾರ ಸಭೆಯಲ್ಲಿ ಇಂಥ ಹೇಳಿಕೆ ನೀಡಿದ್ದು ಬ್ರಾಹ್ಮಣ ಸಮಾಜ ಸಹಿತ ಮೇಲ್ವರ್ಗದವರಿಗೆ ಅಸಮಾಧಾನ ಉಂಟುಮಾಡಿದ್ದರೆ ಅದು ಸಹಜವೂ ಆಗಿದೆ. ಅವರ ಹೇಳಿಕೆ ತೀವ್ರ ಚರ್ಚೆಗೆ ಒಳಪಡುವಂಥ ರಾಷ್ಟ್ರ ಮಟ್ಟದ ವಿಷಯ.
ದೇಶಕ್ಕಾಗಿ ಯಾರು, ಎಷ್ಟು ಪ್ರಮಾಣದಲ್ಲಿ ತ್ಯಾಗ ಮಾಡಿದರು, ಎಷ್ಟು ಜನರು ಪ್ರಾಣ ಕಳೆದುಕೊಂಡರು ಎಂಬುದನ್ನು ನಿಖರವಾಗಿ ಹೇಳಲೇಬೇಕಾದರೆ ಅದು ಚುನಾವಣೆ ಸಮಯದಲ್ಲಿ ಅಲ್ಲ. ಚುನಾವಣೆ ಎಂದರೆ ಸಮಾಜದ ಎಲ್ಲ ಮತದಾರರ ಎದುರು ಮತಯಾಚನೆ ಮಾಡುವ ಮೂಲಕ ತಮ್ಮ ಅಭ್ಯರ್ಥಿಯು ಗೆಲ್ಲುವಂತೆ ಮಾಡುವುದು. ಯಾವುದೇ ಸಮಾಜವನ್ನು ವೈರಿಯಂತೆ ಕಾಣುವುದಾಗಲೀ, ಪೂರ್ವಗ್ರಹಪೀಡಿತರಾಗಿ ಮಾತನಾಡುವುದಾಗಲೀ ಚುನಾವಣಾ ಪ್ರಚಾರಕನು ಮಾಡುವ ಕೆಲಸವಲ್ಲ. ಇಂಥ ಮಾತು ಆಡುವವರು ಅಭ್ಯರ್ಥಿಯ ತಲೆಯ ಮೇಲೆ ಕಲ್ಲು ಚಪ್ಪಡಿ ಹಾಕಿದಂತೆಯೇ.
ಬ್ರಾಹ್ಮಣರನ್ನು ಮತ್ತು ಇತರ ಮೇಲ್ವರ್ಗದವರನ್ನು ನಿಂದಿಸುವ ಮೂಲಕ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಮತ್ತಷ್ಟು ಗಟ್ಟಿಗೊಳಿಸಬಹುದೆಂದು ಕಾಂಗ್ರೆಸ್ ನಾಯಕರು ತಿಳಿದಿರಬಹುದು. ಆದರೆ, ಮೇಲ್ವರ್ಗದ ಮತದಾರರು ನಿರ್ಣಾಯಕರಾಗಿರುವ ಅನೇಕ ಮತಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಆರಿಸಿ ಬಂದಿಲ್ಲವೇ?
ಬೆಳಗಾವಿ ಮತ್ತು ಚಿಕ್ಕೋಡಿ ಮತಕ್ಷೇತ್ರಗಳಲ್ಲಿ ವ್ಯಾಪಕ ಪ್ರಚಾರ ಕೈಕೊಂಡಿರುವ ಸತೀಶ್ ಅವರ ಹೇಳಿಕೆ ಸಾಕಷ್ಟು ವಿವಾದ ಹುಟ್ಟುಹಾಕಬಹುದು. ಕಾಂಗ್ರೆಸ್ಸಿನ ರಾಜ್ಯ ಘಟಕದ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಹುಟ್ಟಾ ಕಾಂಗ್ರೆಸ್ಸಿಗರು, ಬ್ರಾಹ್ಮಣರು. ಇನ್ನೊಬ್ಬ ಹಿರಿಯ ಮುಖಂಡ, ಸಚಿವ ಆರ್ ವಿ ದೇಶಪಾಂಡೆ ಸಹ ಬ್ರಾಹ್ಮಣರೇ. ಬಿ ಕೆ ಚಂದ್ರಶೇಖರ್ ಅವರೂ ಬ್ರಾಹ್ಮಣರೇ. ನನಗೆ ತಿಳಿದಂತೆ ಈ ಮೂವರು ಬಿಜೆಪಿಯ ಕಟ್ಟಾ ವಿರೋಧಿಗಳು. ಸತೀಶ್ ಅವರ ಹೇಳಿಕೆಯು ಈ ಮೂವರಿಗೆ ಮುಜುಗರ ತಂದರೂ ಅಚ್ಚರಿಯೇನಿಲ್ಲ.
ಸತೀಶ್ ಅವರು ಪ್ರತಿವರ್ಷ ಮೂಢನಂಬಿಕೆಗಳ ವಿರುದ್ಧ ನಡೆಸುವ ಕಾರ್ಯಕ್ರಮದ ಭಾಗವಾಗಿ ಬೆಳಗಾವಿಯ ಸ್ಮಶಾನದಲ್ಲಿ ನಡೆಸುವ ವಿಚಾರ ಸಂಕಿರಣದಲ್ಲಿ ಆಡುವ ಮಾತುಗಳನ್ನೇ ಚುನಾವಣಾ ಪ್ರಚಾರ ಸಭೆಗಳಲ್ಲಿ ಆಡಿದರೆ ವ್ಯತಿರಿಕ್ತ ಪರಿಣಾಮಗಳಾಗುವುದು ಸಹಜವೇ ಆಗಿದೆ.
ಅಂಕಣಕಾರರು ಹಿರಿಯ ಪತ್ರಕರ್ತರು