ಕಳೆದ ನಾಲ್ಕೈದು ತಿಂಗಳಿನಿಂದ ದೇಶಾದ್ಯಂತ ಆವರಿಸಿದ್ದ ಲೋಕಸಭಾ ಚುನಾವಣೆಯ ಮೋಡ ಮಳೆಯಾಗುವ ಹಂತಕ್ಕೆ ಬಂದು ನಿಂತಿದೆ. ಮತಪೆಟ್ಟಿಗೆಯ ಒಳಗಿನ ಗುಟ್ಟು ಹೊರಬೀಳಲು ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದಲೂ ವಿವಿಧ ಕಾರಣಗಳಿಗಾಗಿ ಸದ್ದು – ಸುದ್ದಿ ಮಾಡಿದೆ. ರಾಜಕಾರಣಿಗಳು ಪ್ರಚಲಿತ ಸಮಸ್ಯೆ, ಪರಿಹಾರ, ಪರ್ಯಾಯ ವ್ಯವಸ್ಥೆ, ಅಭಿವೃದ್ಧಿ ಕ್ರಮ ಇತ್ಯಾದಿ ಚಿಂತನೆಗಳ ಕುರಿತು ಮಾತನಾಡುವ ಬದಲು ಪರಸ್ಪರ ಜಗಳ, ಟೀಕೆ, ಕೆಸರೆರಚಾಟ ಸೇರಿದಂತೆ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಅಲಿಖಿತ ಪರಂಪರೆಯನ್ನು ಕಾಪಾಡಿಕೊಳ್ಳುವಲ್ಲಿಯೇ ಹೆಚ್ಚು ಆಸಕ್ತಿ ತೋರಿಸಿದರು. ಅಷ್ಟೇ ಮಹತ್ವವನ್ನು ತಮ್ಮ ತೋಳ್ಬಲ, ಧನಬಲ ಪ್ರದರ್ಶನದಲ್ಲೂ ತೋರಿಸಿ ಸುದ್ದಿಯಾದರು.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹಣ, ಹೆಂಡ ಸೇರಿದಂತೆ ವಿವಿಧ ಆಮಿಷಗಳನ್ನೊಡ್ಡಿ ಮತದಾರರನ್ನು ಸೆಳೆಯುವುದು ಇದೇ ಮೊದಲಲ್ಲ. ಬಹುಶಃ ಕೊನೆಯೂ ಅಲ್ಲ. ಆದರೆ, ಇಪ್ಪತ್ತೊಂದನೆಯ ಶತಮಾನದ ಈ ಸಂದರ್ಭದಲ್ಲೂ ಈ ಪದ್ಧತಿ ಚಾಲ್ತಿಯಲ್ಲಿರುವುದು ಮಾತ್ರ ಶೋಚನೀಯ. ಗೆದ್ದು ಪಾರದರ್ಶಕ ಆಡಳಿತಕ್ಕೆ ಕಾರಣರಾಗಬೇಕಾದವರೇ ಅಕ್ರಮಗಳಲ್ಲಿ ಸಕ್ರಿಯರಾಗಿ ಪ್ರಜಾಪ್ರಭುತ್ವ ರಾಷ್ಟ್ರದ ವ್ಯವಸ್ಥೆ ತಳಮಟ್ಟದಲ್ಲೇ ಹದಗೆಡಲು ಕಾರಣರಾಗುವುದು ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ. ಜನಸಾಮಾನ್ಯರು ಮತದಾನದ ಮೂಲಕ ಅಭ್ಯರ್ಥಿಗಳನ್ನು ಆರಿಸುವಾಗ ಗಮನ ಹರಿಸುವ ವಿಷಯಗಳು, ಮತದಾನದ ಕುರಿತು ಹೊಂದಿರುವ ಗಾಂಭೀರ್ಯತೆ, ಚಿಂತನಾತ್ಮಕ ವಿಚಾರಗಳಿಗಿಂತ ಹೆಚ್ಚು ಭಾವನಾತ್ಮಕ ವಿಷಯಗಳಿಗೆ ಮಾರುಹೋಗುವ ರೀತಿ ಇವೆಲ್ಲವೂ ಉತ್ತಮ ಆಡಳಿತ ವ್ಯವಸ್ಥೆಯ ರಚನೆಗೆ ಉರುಳಾಗುವ ಕೆಲ ಅಂಶಗಳು.
ಇದರೊಂದಿಗೆ ಕೀಳುಮಟ್ಟದ ರಾಜಕಾರಣ, ಮತದಾರರಿಗೆ ನೇರವಾಗಿ ಒಡ್ಡಲಾಗುವ ಆಮಿಷ ಇವೆಲ್ಲವೂ ಪ್ರಜಾತಂತ್ರ ಹಬ್ಬದಲ್ಲಿ ಆಚರಣೆಗಳಂತೆ ಬೆರೆತು, ಭಾರತದಲ್ಲಾಗುವ ಚುನಾವಣೆಗಳ ಸ್ವರೂಪವೇ ಹೀಗೆ ಎಂಬಷ್ಟರ ಮಟ್ಟಿಗೆ ವ್ಯವಸ್ಥೆ ಕಲುಷಿತಗೊಂಡಿದೆ. ಮತದಾರ ಪ್ರಭುಗಳೆಂದು ಕರೆಸಿಕೊಳ್ಳುವ ಜನರೇ ಚುನಾವಣಾ ಸಂದರ್ಭದಲ್ಲಿ ನಡೆಯುವ ಅಕ್ರಮಗಳೆಡೆಗೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ‘ಅಕ್ರಮ ಪರಂಪರೆ’ಯನ್ನು ಅತ್ಯಂತ ಸಹಜವಾಗಿ ಒಪ್ಪಿಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ, ಇದನ್ನು ಸರಿಪಡಿಸುವುದು ಅತಿ ದೊಡ್ಡ ಸವಾಲಿನಂತೆ ಕಾಣುತ್ತದೆ.
ದಶಕಗಳ ಹಿಂದೆ ಚುನಾವಣೆ ನಡೆಯುತ್ತಿದ್ದ ರೀತಿಗೂ, ಇಂದಿಗೂ ತಾಂತ್ರಿಕವಾಗಿ ಕೆಲ ಬದಲಾವಣೆಗಳಾಗಿವೆ. ಆದರೆ, ಬದಲಾಗದೆ ಮೊದಲಿಗಿಂತಲೂ ಹೆಚ್ಚು ಗಾಢವಾಗಿ ಆವರಿಸಿಕೊಂಡ ಅಂಶಗಳು ಹಲವಾರು ಇವೆ. ಚುನಾವಣಾ ಸಂದರ್ಭದಲ್ಲಿ ಹಂಚಲಾಗುವ ಹಣವನ್ನು ಪಡೆಯುವುದು ತಮ್ಮ ಹಕ್ಕು ಎಂಬಂತೆ ಜನ ವರ್ತಿಸಲು ಆರಂಭಿಸಿರುವುದು ಸಮಸ್ಯೆ ಹೆಚ್ಚಿದೆ ಎಂಬುದಕ್ಕೆ ಸಣ್ಣ ನಿದರ್ಶನ. ಪ್ರಸ್ತುತ ಜನರು ಆಲೋಚಿಸುವ ಕ್ರಮ ಹೇಗಿದೆ ಎಂಬುದಕ್ಕೆ ನನ್ನ ಹತ್ತಿರದವರಿಂದ ಕೇಳಲ್ಪಟ್ಟ ಈ ನೈಜ ಘಟನೆಗಳೇ ಸಾಕ್ಷಿ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷವೊಂದರ ಮುಖಂಡರು ತಮ್ಮ ಬೂತಿನ ಮತದಾರರಿಗೆ ಹಣ ಹಂಚದಿರಲು ಯೋಚಿಸಿ, ಅಕ್ರಮವಾಗಿ ಹಂಚಲು ತಮ್ಮದೇ ಪಕ್ಷ ನೀಡಿರುವ ಹಣವನ್ನು ತಮ್ಮೂರಿನ ಸರ್ಕಾರಿ ಶಾಲೆಗೆ ಹಾಗೂ ಕೆಲವು ಸಣ್ಣಪುಟ್ಟ ಕಾಮಗಾರಿಗಳಿಗೆ ವಿನಿಯೋಗಿಸಲು ನಿರ್ಧರಿಸಿದರು. ಈ ಅಭಿಪ್ರಾಯವನ್ನು ಬಹುತೇಕರು ಶ್ಲಾಘಿಸಿದರು ಕೂಡ. ಆದರೆ, ಚುನಾವಣೆಗೆ ಎರಡು ದಿನವಿರುವಾಗ ಮುಖಂಡರ ನಿರ್ಧಾರವನ್ನು ತಿಳಿದ ಒಂದಿಷ್ಟು ಮಂದಿ, “ಜನರಿಗೆ ಹಂಚಬೇಕಾದ ಹಣದಲ್ಲಿ ಅಭಿವೃದ್ಧಿ ಮಾಡುವ ಅವಶ್ಯಕತೆ ಇಲ್ಲ ಹಾಗೂ ಹಂಚದಿದ್ದರೆ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವುದಿಲ್ಲ,” ಎಂದು ಮುಲಾಜಿಲ್ಲದೆ ಹೇಳಿದರು. ಅಂತಿಮವಾಗಿ ಹಣ ಮತದಾರರ ಜೇಬು ಸೇರಿತು. ಇಲ್ಲಿ ರಾಜಕೀಯದವರಿಗಿಂತ ಜನಸಾಮಾನ್ಯರೇ ಹಣ ಹಂಚುವುದರ ಪರವಾಗಿರುವುದನ್ನು ಗಮನಿಸಬಹುದು.
ಅದೇ ರೀತಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಂದು ಬೂತ್‍ನಲ್ಲಿ ಹಂಚಲೆಂದು ಎರಡು ಪ್ರಮುಖ ಪಕ್ಷಗಳಿಗೆ ಕೆಲ ಲಕ್ಷಗಳಷ್ಟು ಹಣ ಸಂದಾಯವಾಗಿತ್ತು. ಅದೇ ಸಂದರ್ಭದಲ್ಲಿ ಬೂತ್ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಗೆ ತಲುಪಿದ್ದ ಊರ ದೇವಾಲಯವೊಂದರ ಅಭಿವೃದ್ಧಿ ಕುರಿತು ಗ್ರಾಮಸ್ಥರಲ್ಲಿ ಚರ್ಚೆಯಾಗುತ್ತಿತ್ತು. ಇದರ ಕುರಿತು ಚಿಂತಿಸಿದ ಉಭಯ ಪಕ್ಷಗಳ ಮುಖಂಡರು, ತಮ್ಮ-ತಮ್ಮ ಪಕ್ಷಗಳಿಗೆ ನೀಡಲಾದ ಅಷ್ಟೂ ಅಕ್ರಮ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಸುರಿದು ಪಾಪ ತೊಳೆದುಕೊಳ್ಳಲು ನಿರ್ಧರಿಸಿದರು. ಆದರೆ, ಇದನ್ನು ತಿಳಿದ ಕೂಡಲೇ ಪಕ್ಷದ ಕಾರ್ಯಕರ್ತರೇ ಜಾತಿ, ಧರ್ಮಗಳ ಲೆಕ್ಕಾಚಾರವನ್ನು ಎಳೆದುತಂದು ಮುಖಂಡರ ನಿರ್ಧಾರಕ್ಕೆ ಕಲ್ಲು ಹಾಕಿ, ತಮ್ಮ ಪಾಲಿನ ಹಣವನ್ನು ಬಾಚಿಕೊಂಡರು. ಚುನಾವಣೆ ಮುಗಿಯುವ ತನಕವೂ ಕಾರ್ಯಕರ್ತರ ಕಾರು, ಬೈಕು ಊರೂರು ಅಲೆದು ಹೋಟೆಲಿನ ಮುಂದೆ ನಿಲ್ಲುತ್ತಿತ್ತು. ಇದೊಂಥರಾ ಕೋಳಿ ಮೊದಲಾ, ಮೊಟ್ಟೆ ಮೊದಲಾ? ಎಂಬಂತಹ ಪರಿಸ್ಥಿತಿ. ರಾಜಕಾರಣ ಹೇಗೆ ತಳಮಟ್ಟದಲ್ಲೇ ಹದಗೆಟ್ಟಿದೆ ಹಾಗೂ ಇದನ್ನು ಸರಿದಾರಿಗೆ ತರುವುದು ಏಕೆ ಕಷ್ಟಸಾಧ್ಯ ಎಂಬುದನ್ನು ಈ ಸಣ್ಣ ಉದಾಹರಣೆಗಳ ಮೂಲಕವೇ ಅರ್ಥೈಸಿಕೊಳ್ಳಬಹುದು.
ವಿಪರ್ಯಾಸವೆಂದರೆ, ಇಂದಿಗೂ ಎಷ್ಟೋ ಜನ ಮತದಾರರು ತಮಗೆ ರಾಜಕೀಯ ಪಕ್ಷಗಳಿಂದ ಹಣ ಬಂದಿಲ್ಲ ಹಾಗೂ ಹಂಚಬೇಕಾದ ಹಣವನ್ನು ಕಾರ್ಯಕರ್ತರೇ ನುಂಗಿ ಮೋಸ ಮಾಡಿದ್ದಾರೆ ಎಂದು ದನಿಯೆತ್ತರಿಸಿ ಹೇಳುತ್ತಾರೆ. ಹಲವರು ಬಹುತೇಕ ಎಲ್ಲ ಪಕ್ಷಗಳಿಂದಲೂ ಹಣ ಸಿಗಲೆಂದು ಆಶಿಸುತ್ತಾರೆ. ಆದರೆ, ಇದೇ ಜನರು ರಾಜಕೀಯ ಪಕ್ಷಗಳ ಭ್ರಷ್ಟಾಚಾರ, ಅಭಿವೃದ್ಧಿಯೆಡೆಗೆ ತೋರುವ ಅಸಡ್ಡೆ ಕುರಿತು ಪುಂಖಾನುಪುಂಖವಾಗಿ ಮಾತನಾಡಿ ತಮ್ಮನ್ನು ಸುಬಗರಂತೆ ಬಿಂಬಿಸಿಕೊಳ್ಳುತ್ತಾರೆ.
ಮೇಲ್ನೋಟಕ್ಕೆ ಇವೆಲ್ಲವೂ ಅತ್ಯಂತ ಸಾಧಾರಣ ವಿಚಾರಗಳಂತೆ ಕಂಡರೂ, ಇಡೀ ದೇಶದ ಮತದಾರರ ಮನಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಅವಲೋಕಿಸಿದರೆ ಪರಿಸ್ಥಿತಿಯ ಗಂಭೀರತೆ ಎದ್ದು ಕಾಣುತ್ತದೆ. ಚುನಾವಣಾ ಸಂದರ್ಭಗಳಲ್ಲಿ ವಿವಿಧ ಆಮಿಷಗಳನ್ನೊಡ್ಡಿ ಜನರಿಗೆ ಹಣದ ರುಚಿ ಹತ್ತಿಸಿರುವ ರಾಜಕೀಯ ಪಕ್ಷಗಳು ಹಾಗೂ ಅದು ಅನೈತಿಕವೆಂಬ ಅರಿವಿದ್ದರೂ ತಮ್ಮ ಹಕ್ಕು ಎಂಬಂತೆ ವರ್ತಿಸುವ ಜನರು ವ್ಯವಸ್ಥೆಯ ಬಹುದೊಡ್ಡ ವ್ಯಂಗ್ಯವಾಗಿ ಕಾಣುತ್ತಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವ ವ್ಯಕ್ತಿಯೂ ತಾನು ಹಣ ಪಡೆದ ಪಕ್ಷಕ್ಕೇ ಮತ ಹಾಕಬೇಕೆಂಬ ನಿಷ್ಠೆ ತೋರುವುದು ಅನುಮಾನ. ರಾಜಕೀಯ ಪಕ್ಷಗಳಿಗೂ ಈ ವಿಚಾರ ತಿಳಿಯದಿರುವುದೇನಲ್ಲ. ಆದರೆ, ಚುನಾವಣೆ ಎಂದಾಕ್ಷಣ ಒಂದಷ್ಟು ಹಣ ಚೆಲ್ಲುವುದು ರಾಜಕೀಯ ಪಕ್ಷಗಳ ಪಾಲಿಗೆ ಸಂಪ್ರದಾಯವಾಗಿದೆ. ಹೀಗೆ ಹರಿದು ಸಾಗುವ ಹಣ ಕಾನೂನಿನ ಪ್ರಕಾರ ಅಕ್ರಮವೆಂದು ಗುರುತಿಸಿಕೊಂಡರೂ ಕಾನೂನಿನ ನೆರಳಿನಲ್ಲೇ ನಿರ್ಭಯವಾಗಿ ಸಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಗುಟ್ಟು. ಚುನಾವಣಾ ಸಂದರ್ಭದಲ್ಲಿ ಅಲ್ಲಲ್ಲಿ ಅಕ್ರಮ ಹಣ ಜಪ್ತಿ ಎಂಬ ಸುದ್ದಿ ಕಿವಿಗೆ ಬಿದ್ದರೂ ಅವು ನ್ಯಾಯದೇವತೆಗೆ ತೆರುವ ಕನಿಷ್ಠ ಮೊತ್ತದ ತಪ್ಪುಕಾಣಿಕೆಯಂತೆ ಎಂಬುದು ಒಂದು ಅಪ್ರಿಯ ಸತ್ಯ. ದುರದೃಷ್ಟವಶಾತ್ ಯಾವ ರಾಜಕೀಯ ಪಕ್ಷವೂ ಈ ಪರಂಪರೆಗೆ ಅಂತ್ಯ ಹಾಡುವ ಧೈರ್ಯ ಮಾತ್ರ ತೋರುತ್ತಿಲ್ಲ ಮತ್ತು ಇದಕ್ಕೆ ಕಾರಣ ಜನಸಾಮಾನ್ಯರು ಎಂಬುದು ಮಾತ್ರ ಕಟುವಾಸ್ತವ.
ಪ್ರತಿಯೊಂದು ಚುನಾವಣೆಗಾಗಿ ರಾಜಕೀಯ ಪಕ್ಷಗಳು ನಡೆಸುವ ದುಂದುವೆಚ್ಚ ಸಾವಿರ ಕೋಟಿಗಳನ್ನು ಮೀರಿಹೋಗುತ್ತದೆ ಹಾಗೂ ಇಷ್ಟು ದೊಡ್ಡ ಮಟ್ಟದ ಹಣ ಅಷ್ಟೇ ದೊಡ್ಡ ಮಟ್ಟದ ಜನಸಾಗರದಲ್ಲಿ ಹರಿದುಹೋಗುವುದರಿಂದ ಅತಿದೊಡ್ಡ ಅನುಕೂಲ ಯಾವೊಬ್ಬ ಜನಸಾಮಾನ್ಯನಿಗೂ ಆಗಲಾರದು. ಒಂದು ವೇಳೆ, ರಾಜಕೀಯ ಪಕ್ಷಗಳು ಹೀಗೆ ಪೋಲಾಗುವ ಹಣವನ್ನು ಕಟ್ಟನಿಟ್ಟಾಗಿ ನಿಲ್ಲಿಸಿದರೆ ಪಕ್ಷಗಳ ವತಿಯಿಂದಲೇ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಆ ಮೂಲಕ ಜನರನ್ನು ತಲುಪಬಹುದು. ಆದರೆ, ಈ ಯಾವುದೇ ವಿಚಾರಗಳು ಸಾಧ್ಯವಾಗಬೇಕೆಂದರೆ ಜನರ ಮನಸ್ಥಿತಿ ಬದಲಾಗಬೇಕು, ಮತ ಚಲಾಯಿಸುವುದು ಮಾತ್ರವೇ ಹಕ್ಕು ಹೊರತು ಮತ ಚಲಾಯಿಸಲು ಹಣ ಪಡೆಯುವುದು ಹಕ್ಕಲ್ಲ ಎಂಬ ಅರಿವು ಜನರಲ್ಲಿ ಮೂಡಬೇಕು. ಈ ಕೆಲಸಗಳು ಈಗಾಗಲೇ ಹದಗೆಟ್ಟಿರುವ ರಾಜಕೀಯ ವ್ಯವಸ್ಥೆ ಹಾಗೂ ಜನರ ಮನಸ್ಥಿತಿಯ ಪರಸ್ಪರ ಸಹಯೋಗದಲ್ಲಿ ನಡೆಯಬೇಕು.