ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ಕೊಡಲಾದ ದೇಣಿಗೆಯ ಪೂರ್ಣ ವಿವರವನ್ನು ಮೇ 30ರ ಒಳಗೆ ಚುನಾವಣಾ ಆಯೋಗಕ್ಕೆ ಮುಚ್ಚಿದ ಲಕೋಟೆಯಲ್ಲಿ ಒದಗಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಮಾಹಿತಿಯಲ್ಲಿ ದೇಣಿಗೆ ನೀಡಿದ ಸಂಸ್ಥೆ ಅಥವಾ ವ್ಯಕ್ತಿಯ ವಿವರವನ್ನೂ ನೀಡುವಂತೆಯೂ ಕೋರ್ಟ್ ಆದೇಶಿಸಿದೆ. ಚುನಾವಣಾ ಬಾಂಡ್ ಯೋಜನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ವಿಸ್ತ್ರತವಾದ ವಿಚಾರಣೆಯ ಅಗತ್ಯವಿದೆ ಎಂದಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ವಿಚಾರಣೆಯನ್ನು ಮುಂದೂಡಿದೆ.
ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ ಹಾಗೂ ಇತರರರು ಚುನಾವಣಾ ಬಾಂಡ್ ಯೋಜನೆ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಯೋಜನೆಗೆ ತಡೆ ಕೋರಿದ್ದ ಭೂಷಣ್, ಚುನಾವಣಾ ಬಾಂಡ್ ಯೋಜನೆಯ ರಹಸ್ಯ ದೇಣಿಗೆ ಅಂಶವನ್ನು ಬಳಸಿಕೊಂಡು ಕಾರ್ಪೊರೇಟ್ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ಹಿಂದಿಗಿಂತಲೂ ಹೆಚ್ಚು ದೇಣಿಗೆ ನೀಡಲಾರಂಭಿಸಿವೆ ಎಂದಿದ್ದರು.
ಕೋರ್ಟ್‌ನಲ್ಲಿ ನಡೆದಿದ್ದೇನು?
ಅರ್ಜಿದಾರರ ವಾದ: ಚುನಾವಣಾ ಬಾಂಡ್ ಪಾರದರ್ಶಕತೆಯನ್ನು ಹೆಚ್ಚಿಸುವ ಬದಲು ಅಕ್ರಮ ಅನಾಮಿಕ ದೇಣಿಗೆಯನ್ನು ಪ್ರೋತ್ಸಾಹಿಸುತ್ತಿದೆ ಎಂಬುದು ಅರ್ಜಿದಾರರ ವಾದ. ಪ್ರಶಾಂತ್ ಭೂಷಣ್ ಪ್ರಕಾರ ಚುನಾವಣಾ ಬಾಂಡ್ ಗೂ ಮೊದಲು ಕೂಡ ದೇಣಿಗೆದಾರ ವಿವರ ಗುಪ್ತವಾಗಿತ್ತು ಹಾಗೂ ಕಪ್ಪು ಹಣ ನಗದು ರೂಪದಲ್ಲಿ ರಾಜಕೀಯ ಪಕ್ಷಗಳ ನಿಧಿ ಸೇರುತ್ತಿತ್ತು. ಆದರೆ, ಚುನಾವಣಾ ಬಾಂಡ್ ಯೋಜನೆಯಿಂದ ಕಪ್ಪು ಹಣ ಅಧಿಕೃತವಾಗಿ ಬ್ಯಾಂಕ್ ಮೂಲಕ ರಾಜಕೀಯ ಪಕ್ಷಗಳ ನಿಧಿಗೆ ಸೇರುತ್ತಿದೆ, ಅಲ್ಲದೇ ಬ್ಯಾಂಕ್ ಆಗಲಿ ದೇಣಿಗೆದಾರರಾಗಲಿ ಹಣದ ವಿವರ ಬಹಿರಂಗಪಡಿಸಬೇಕಾಗಿಲ್ಲ.
ಚುನಾವಣಾ ಆಯೋಗದ ವಾದ: ಚುನಾವಣಾ ಬಾಂಡ್ ಗಳ ಮೂಲಕ ಪಡೆಯಲಾದ ದೇಣಿಗೆ ಪೈಕಿ ಸಿಂಹಪಾಲು ಆಡಳಿತಾರೂಢ ಪಕ್ಷಕ್ಕೆ ಸಂದಿದೆ. ಚುನಾವಣಾ ಬಾಂಡ್ ಯೋಜನೆಗೆ ನೇರವಾಗಿ ಆಕ್ಷೇಪ ವ್ಯಕ್ತಪಡಿಸದ ಆಯೋಗ, ದೇಣಿಗೆದಾರರ ವಿವರ ಬಹಿರಂಗಪಡಿಸದಿರುವ ರಹಸ್ಯ ವ್ಯವಸ್ಥೆಯನ್ನು ಆಕ್ಷೇಪಿಸಿದೆ. ಆಯೋಗದ ಪ್ರಕಾರ ಇದು ಅನಾಮಿಕ ದೇಣಿಗೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಆಯೋಗದ ಪ್ರಕಾರ ಮತದಾರರು ಚುನಾವಣಾ ಹಕ್ಕಿನ ಜೊತೆ ರಾಜಕೀಯ ಪಕ್ಷಗಳ ದೇಣಿಗೆಯ ಬಗ್ಗೆ ತಿಳಿಯುವ ಹಕ್ಕನ್ನೂ ಹೊಂದಿದ್ದಾರೆ.
ಸರ್ಕಾರದ ವಾದ: ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ರಾಜಕೀಯ ಪಕ್ಷಗಳ ಧನ ಮೂಲ ತಿಳಿಯುವ ಹಕ್ಕು ಮತದಾರನಿಗಿಲ್ಲ ಎಂದಿದ್ದಾರೆ. ಪಾರದರ್ಶಕತೆ ಎಂಬುವುದು ಕಡ್ಡಾಯವಾದ ಮಂತ್ರವೇನಲ್ಲ ಎಂದು ವೇಣುಗೋಪಾಲ್ ಹೇಳಿದರು. ಚುನಾವಣಾ ಬಾಂಡ್ ಕಪ್ಪು ಹಣ ನಿರ್ಮೂಲನೆಯತ್ತ ದಿಟ್ಟ ಹೆಜ್ಜೆ ಎಂದಿರುವ ಅವರು ಈ ನಿಟ್ಟಿನಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದರು.
ಏನಿದು ಚುನಾವಣಾ ಬಾಂಡ್?
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಯಸುವ ವ್ಯಕ್ತಿ ಅಥವಾ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ಚುನಾವಣಾ ಬಾಂಡ್ ಪಡೆಯಬಹುದು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ವ್ಯವಸ್ಥೆಯನ್ನು 2018 ರಲ್ಲಿ ಜಾರಿಗೆ ತಂದಿತ್ತು. ರೆಪ್ರೆಸೇಂಟೇಶನ್ ಆಫ್ ಪೀಪಲ್ ಕಾಯ್ದೆಯ ಸೆಕ್ಷನ್ 29A ಪ್ರಕಾರ ನೊಂದಣಿಯಾದ ರಾಜಕೀಯ ಪಕ್ಷಗಳಿಗೆ ಮಾತ್ರ ಈ ಯೋಜನೆ ಲಭ್ಯ. ಈ ಯೋಜನೆಯ ಗಮನಾರ್ಹ ಅಂಶವೆಂದರೆ, ದೇಣಿಗೆ ನೀಡುವವರ ವಿವರ ರಹಸ್ಯವಾಗಿರುವುದು. ಕೇಂದ್ರ ಸರ್ಕಾರ ಈ ಯೋಜನೆಯ ಸಮರ್ಥನೆ ಮಾಡಿಕೊಂಡಿದ್ದು, ಇದರಿಂದ ಕಪ್ಪು ಹಣ ವಿನಿಮಯ ಹಾಗೂ ರಾಜಕೀಯ ಪಕ್ಷಗಳಿಗೆ ನೀಡಲಾಗುವ ನಗದು ದೇಣಿಗೆ ನಿಲ್ಲಲಿದೆ ಎಂದಿದೆ.
ಆದದ್ದೇನು?
ಮಾಹಿತಿ ಹಕ್ಕಿನಡಿಯಲ್ಲಿ ಒದಗಿಸಲಾದ ಅಂಕಿ ಅಂಶಗಳು ಹೇಳುವಂತೆ, 2018 ರಲ್ಲಿ, ಅಂದರೆ ಯೋಜನೆ ಜಾರಿಗೊಂಡ ಒಂದು ವರ್ಷದಲ್ಲೇ ಸ್ಟೇಟ್ ಬ್ಯಾಂಕ್ 1,056.73 ಕೋಟಿ ಹಣ ಚುನಾವಣಾ ಬಾಂಡ್ ರೂಪದಲ್ಲಿ ವಿತರಿಸಿದೆ. ಇದು 2019 ರಲ್ಲಿ (ಎರಡು ತಿಂಗಳಲ್ಲಿ) 1,716.05 ಕೋಟಿಗೆ ಏರಿದೆ. ಪುಣೆಯ ನಿವಾಸಿ ವಿಹಾರ್ ದುವೆ ಎಂಬ ವ್ಯಕ್ತಿ ಸಲ್ಲಿಸಿದ ಅರ್ಜಿಗೆ ನೀಡಲಾದ ಮಾಹಿತಿಯಲ್ಲಿ ಸ್ಟೇಟ್ ಬ್ಯಾಂಕ್ ಈ ವಿವರಗಳನ್ನು ನೀಡಿದೆ. ಸ್ಟೇಟ್ ಬ್ಯಾಂಕ್ 2018 ರಲ್ಲಿ ಆರು ಬಾರಿ – ಮಾರ್ಚ್, ಏಪ್ರಿಲ್, ಮೇ, ಜುಲೈ, ಅಕ್ಟೋಬರ್ ಹಾಗೂ ನವೆಂಬರ್ – ಚುನಾವಣಾ ಬಾಂಡ್ ವಿತರಿಸಿತ್ತು. ಅದೇ 2019 ಲ್ಲಿ ಕೇವಲ ಎರಡು ತಿಂಗಳುಗಳ – ಜನವರಿ ಹಾಗೂ ಮಾರ್ಚ್ – ವಿತರಣೆ ನಡೆದಿದೆ.
ರಾಜಕೀಯ ಪಕ್ಷಗಳ ಬಗ್ಗೆ ಅಧ್ಯಯನ ನಡೆಸುವ ಸರ್ಕಾರೇತರ ಸಂಸ್ಥೆ – ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR), ಏಪ್ರಿಲ್ 2019ರಲ್ಲಿ ವರದಿಯೊಂದನ್ನು ಬಿಡುಗಡೆಗೊಳಿಸಿತು. ಅದರ ಪ್ರಕಾರ ರಾಜಕೀಯ ಪಕ್ಷಗಳು 2017-18 ರಲ್ಲಿ ಪಡೆದ ದೇಣಿಗೆಯಲ್ಲಿ 53% ಹಣ ಪತ್ತೆ ಹಚ್ಚಲಾಗದ ಮೂಲದಿಂದ ಬಂದಿದೆ. ಈ ಪೈಕಿ 80% ಹಣ ತಲುಪಿರುವುದು ಆಡಳಿತಾರೂಢ ಬಿಜೆಪಿಗೆ. ಈ ವರದಿಯಲ್ಲಿ ಪ್ರಮುಖ ಆರು ರಾಜಕೀಯ ಪಕ್ಷಗಳ ದೇಣಿಗೆಯನ್ನು ಆದಾಯ ತೆರಿಗೆ ದಾಖಲೆಗಳ ಆಧಾರದಲ್ಲಿ ಪರಿಶೀಲಿಸಲಾಗಿತ್ತು. ವರದಿಯ ಪ್ರಕಾರ ಈ ಆರು ರಾಜಕೀಯ ಪಕ್ಷಗಳು – ಬಿಜೆಪಿ, ಕಾಂಗ್ರೆಸ್, ಬಹುಜನ ಸಮಾಜ ಪಕ್ಷ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ, ತೃಣಮೂಲ ಕಾಂಗ್ರೆಸ್ ಹಾಗೂ ಸಿ ಪಿ ಐ – ಪಡೆದ ಒಟ್ಟು ದೇಣಿಗೆ ರೂ. 1,293 ಕೋಟಿ. ಈ ಪೈಕಿ ಪತ್ತೆ ಹಚ್ಚಲಾಗದ ಮೂಲದ ಹಣ ರೂ. 689 ಕೋಟಿ. ಗಮನಾರ್ಹ ಅಂಶವೆಂದರೆ, ಪತ್ತೆ ಹಚ್ಚಲಾಗದ ಮೂಲದ ದೇಣಿಗೆ ಪೈಕಿ ಬಿಜೆಪಿ ಪಡೆದಿದ್ದು ರೂ. 553 ಕೋಟಿ, ಕಾಂಗ್ರೆಸ್ ಪಡೆದಿದ್ದು ರೂ 120 ಕೋಟಿ ಹಾಗೂ ಉಳಿದ ಪಕ್ಷಗಳ ಗಳಿಕೆ ರೂ. 16 ಕೋಟಿ. ವರದಿಯ ಪ್ರಕಾರ ಪತ್ತೆ ಹಚ್ಚಲಾಗದ ಮೂಲದ ದೇಣಿಗೆಯ ಪೈಕಿ ಚುನಾವಣಾ ಬಾಂಡ್ ಗಳ ಕೊಡುಗೆ ರೂ. 215 ಕೋಟಿ.