ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವೊಂದರ ಪ್ರಮುಖ ಹುದ್ದೆಯನ್ನು ನಿಷ್ಪಕ್ಷಪಾತವಾಗಿ ಮತ್ತು ನಿರ್ಭಯವಾಗಿ ನಿರ್ವಹಿಸಿದ ಟಿ ಎನ್ ಶೇಷನ್ ಭಾನುವಾರ ನಿಧನರಾಗಿದ್ದಾರೆ. ತಮಿಳುನಾಡು ಕೇಡರ್ ನ ಐ ಎ ಎಸ್ ಅಧಿಕಾರಿ ಶೇಷನ್, ಡಿಸೆಂಬರ್ 15, 1932 ರಂದು ಪಾಲಕ್ಕಾಡ್ನಲ್ಲಿ ಜನಿಸಿದವರು. ಅವರ ಪೂರ್ಣ ಹೆಸರು ತಿರುನೆಲ್ಲೈ ನಾರಾಯಣ ಅಯ್ಯರ್ ಶೇಷನ್.
ಒಂದು ಕಾಲದಲ್ಲಿ ದೇಶದ ಚುನಾವಣೆಗಳಲ್ಲಿ ಬೂತ್ ರಿಗ್ಗಿಂಗ್ ಮತ್ತು ಸರ್ಕಾರಿ ಯಂತ್ರೋಪಕರಣಗಳ ದುರುಪಯೋಗ ಹೆಚ್ಚುತ್ತಿದ್ದಾಗ, ಶೇಷನ್ ಅವರು ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಮರಳಿ ತಂದರು. ಅಷ್ಟೇ ಅಲ್ಲ ಚುನಾವಣಾ ನೀತಿ ಸಂಹಿತೆಯೇ ಗೊತ್ತಿರದಿದ್ದ ಸಮಯದಲ್ಲಿ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿಗೊಳಿಸಿದರು. 1990 ರಿಂದ 1996 ರವರೆಗೆ ದೇಶದ 10 ನೇ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಅವಧಿಯಲ್ಲಿ ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಆಯೋಗದ ಅಧಿಕಾರವನ್ನು ಸೂಕ್ತವಾಗಿ ಬಳಸುವಲ್ಲಿ ಶೇಷನ್ ಯಶಸ್ವಿ ಆಗಿದ್ದರು.
ಅದು 1991 ನೇ ಇಸವಿ. ಅಂದಿನ ಪ್ರಧಾನ ಮಂತ್ರಿ ಚಂದ್ರಶೇಖರ್ ಅವರ ಅಲ್ಪಾವಧಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಸುಬ್ರಮಣಿಯನ್ ಸ್ವಾಮಿ ಅವರು ಶೇಷನ್ ಅವರು ಚುನಾವಣಾ ಆಯುಕ್ತರಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಕಟ್ಟುನಿಟ್ಟಿನ ಆದೇಶಗಳೆಂದರೆ, ಮತದಾರರಿಗೆ ಲಂಚ ಅಥವಾ ಬೆದರಿಕೆ ಹಾಕದಂತೆ ನೋಡಿಕೊಳ್ಳುವುದು, ಚುನಾವಣೆಯ ಸಮಯದಲ್ಲಿ ಮದ್ಯ ವಿತರಣೆ ನಿಲ್ಲಿಸುವುದು, ಪ್ರಚಾರಕ್ಕಾಗಿ ಸರ್ಕಾರೀ ಯಂತ್ರದ ಬಳಕೆ ನಿಯಂತ್ರಿಸಿವುದು, ಜಾತಿ ಮತ್ತು ಕೋಮು ರಾಜಕಾರಣ ನಿಲ್ಲಿಸುವುದು, ಚುನಾವಣಾ ಪ್ರಚಾರಕ್ಕಾಗಿ ಧಾರ್ಮಿಕ ಸ್ಥಳಗಳನ್ನು ಮತ್ತು ಧ್ವನಿವರ್ಧಕಗಳನ್ನು ಬಳಸಲು ಕಡ್ಡಾಯ ಅನುಮತಿ ಬೇಕೆನ್ನುವ ಆಜ್ಞೆ ಹೊರಡಿಸಿದುದು.
ಶೇಷನ್ ಅವರ ಆದೇಶದಿಂದಾಗಿಯೇ ಚುನಾವಣೆಗಳಲ್ಲಿ ಮಿತಿ ಇಲ್ಲದೆ ವೆಚ್ಚ ಮಾಡಲಾಗುತಿದ್ದ ಕಪ್ಪು ಹಣದ ಬಳಕೆ ಕಡಿಮೆ ಆಯಿತು. ಅಷ್ಟೇ ಅಲ್ಲ ನಕಲೀ ಮತದಾರರನ್ನು ತಡೆಯಲು ಗುರುತಿನ ಚೀಟಿಗಳನ್ನೂ ಕಡ್ಡಾಯಗೊಳಿಸಲಾಯಿತು. ಒಟ್ಟಾರೆ ಹೇಳುವುದಾದರೆ ಮುಖ್ಯ ಚುನಾವಣಾ ಆಯುಕ್ತರು ಹೇಗಿರಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆಯೇ ಆದರು ಶೇಷನ್.
ಒಮ್ಮೆ ಪತ್ರಿಕಾ ಗೋಷ್ಟಿಯಲ್ಲಿ ಪತ್ರಕರ್ತರೊಬ್ಬರು ಶೇಷನ್ ಅವರಿಗೆ ಸುಬ್ರಮಣ್ಯನ್ ಸ್ವಾಮಿ ಅವರ ಜನತಾ ಪಕ್ಷಕ್ಕೆ ಮಾನ್ಯತೆ ಮತ್ತು ಪಕ್ಷದ ಚಿಹ್ನೆ ನೀಡುವಾಗ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಲು ಸಾದ್ಯವೇ ಎಂದೇ ಪ್ರಶ್ನಿಸಿದ್ದರು. ಆಗ ಶೇಷನ್ ಅವರು ತಮ್ಮ ತೀರ್ಮಾನವನ್ನು ಕಾದು ನೋಡುವಂತೆ ಹೇಳಿದ್ದರು.
1991 ರ ಮೇ 21 ರಂದು ರಾಜೀವ್ ಗಾಂಧಿಯವರ ದುರಂತ ಹತ್ಯೆಗೆ ಒಂದು ಅಥವಾ ಎರಡು ದಿನ ಮೊದಲು ನಡೆದಿದ್ದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಬೆಂಬಲಿಗರಿಂದ ಬೂತ್ ರಿಗ್ಗಿಂಗ್ ಕೃತ್ಯಗಳು ವ್ಯಾಪಕವಾಗಿ ನಡೆದಿದ್ದವು. ಈ ಬಗ್ಗೆ ಸಮಯಕ್ಕೆ ಅವಕಾಶವೇ ಇಲ್ಲದಂತೆ ಶೇಷನ್ ಇಡೀ ಕ್ಷೇತ್ರದಲ್ಲಿ ಮರು ಮತದಾನ ನಡೆಸಿದರು. ನಂತರ 1997 ರಲ್ಲಿ ಶೇಷನ್ ಅವರು ರಾಷ್ಟ್ರಪತಿ ಚುನಾವಣೆಗೂ ಕೆ ಅರ್ ನಾರಾಯಣನ್ ವಿರುದ್ದ ಸ್ಪರ್ಧಿಸಿ ಸೋಲನ್ನುಂಡರು. ಕಾಂಗ್ರೆಸ್ ಪಕ್ಷ ಅವರನ್ನು 1999 ರಲ್ಲಿ ಗಾಂಧಿನಗರದಿಂದ ಎಲ್. ಕೆ. ಅಡ್ವಾಣಿ ವಿರುದ್ಧ ಕಣಕ್ಕಿಳಿಸಿತು. ಇದು ಅವರ ಜನಪ್ರಿಯತೆಯನ್ನು ಕುಗ್ಗಿಸಿತು.
1991 ರ ಉತ್ತರಪ್ರದೇಶದ ಚುನಾವಣೆಯಲ್ಲಿ 873 ಇದ್ದ ಬೂತ್ ರಿಗ್ಗಿಂಗ್ ಸಂಖ್ಯೆ 1993 ರ ಚುನಾವಣೆಯಲ್ಲಿ 255 ಕ್ಕೆ ಇಳಿದಿತ್ತು. ಮತದಾನ ದಿನದ ಹತ್ಯೆಗಳ ಸಂಖ್ಯೆ 36 ರಿಂದ ಮೂರಕ್ಕೆ ಇಳಿದಿತ್ತು. 1994 ರ ನಾಲ್ಕು ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅವರು 150 ಚುನಾವಣಾ ವೀಕ್ಷಕರನ್ನು ನಿಯೋಜಿಸಿದರು. ಪ್ರತಿ ಅಭ್ಯರ್ಥಿಯ ಚುನಾವಣಾ ವೆಚ್ಚವನ್ನು ಮೇಲ್ವಿಚಾರಣೆ ಮಾಡಲು ಅವರು ಆಂಧ್ರದಲ್ಲಿ 120, ಕರ್ನಾಟಕದಲ್ಲಿ 116, ಸಿಕ್ಕಿಂನಲ್ಲಿ 60 ಮತ್ತು ಗೋವಾದಲ್ಲಿ 40 ಆಡಿಟ್ ವೀಕ್ಷಕರನ್ನು ನಿಯೋಜಿಸಿದರು.
1996 ರ ಸಾರ್ವತ್ರಿಕ ಚುನಾವಣೆಗಳಲ್ಲಿ, ಪ್ರತೀ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಅತ್ಯಂತ ಹೆಚ್ಚಿನ ವೀಕ್ಷಕರನ್ನೂ ಅಧಿಕಾರಿಗಳನ್ನೂ ನೇಮಿಸಿತ್ತು. ಆಗ ದೇಶದಲ್ಲಿ ಸುಮಾರು 3,00,000 ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧನದಲ್ಲಿರಿಸಿದ್ದು ಒಂದು ದಾಖಲೆಯೇ. 1994 ರಲ್ಲಿ, ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಕ್ಕಾಗಿ ಅಂದಿನ ಕೇಂದ್ರ ಸಚಿವ ಸೀತಾರಾಮ್ ಕೇಸರಿ ಮತ್ತು ಆಹಾರ ಸಚಿವ ಕಲ್ಪನಾಥ ರೈ ಇಬ್ಬರನ್ನು ಸಂಪುಟದಿಂದ ತೆಗೆದು ಹಾಕುವಂತೆ ಅಂದಿನ ಪ್ರಧಾನ ಮಂತ್ರಿಯಯವರನ್ನು ಕೋರಿದ್ದರು. ಸರ್ಕಾರಕ್ಕೆ ಇಂತಹ ಅಪೇಕ್ಷಿಸದ ಸಲಹೆಗಳನ್ನು ನೀಡುವ ಮೂಲಕ ಸಿಇಸಿ ತನ್ನ ಕಾರ್ಯವ್ಯಾಪ್ತಿಯನ್ನು ಮೀರಿದೆ ಎಂಬ ಬಗ್ಗೆ ಆ ಸಮಯದಲ್ಲಿ ಚರ್ಚೆ ನಡೆದಿತ್ತು. ಏನೇ ಆದರೂ ಶೇಷನ್ ಅವರ ಕಾರ್ಯ ವೈಖರಿ ಪ್ರತಿಯೊಬ್ಬ ಪ್ರಜೆಯೂ ಬಹಳ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಾದ್ದಾಗಿದೆ.