ದೇಶದಾದ್ಯಂತ ಎಲ್ಲ ರಾಜಕೀಯ ಪಕ್ಷಗಳು ಮುಂಬರಲಿರುವ ಲೋಕಸಮರವನ್ನ ಸಮರ್ಥವಾಗಿ ಎದುರಿಸಲು ತಯಾರಿ ಆರಂಭಿಸಿದೆ . ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿ ಅಭ್ಯರ್ಥಿಗಳು ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿವೆ.ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳು ಈಗಾಗಲೇ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ಎರಡನೇ ಪಟ್ಟಿ ಅಂತಿಮಗೊಳಿಸುವಂತಹ ಕಸರತ್ತಿನಲ್ಲಿ ತೊಡಗಿಸಿಕೊಂಡಿರುವ ಸಂದರ್ಭದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಬಹುದಾದ ದೊಡ್ಡ ಬೆಳವಣಿಗೆ ನಡೆದು ಹೋಗಿದೆ.
ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡೋದಕ್ಕೆ ಕೇವಲ ಇನ್ನೂ ಒಂದೇ ವಾರ ಬಾಕಿ ಇರುವಾಗ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಅರುಣ್ ಗೋಯಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣೆ ಸಮೀಪದಲ್ಲಿರುವಾಗ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಅವಧಿಗೂ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾಗಿದ್ದ ಅರುಣ್ ಗೋಯಲ್ ರವರ ಅಧಿಕಾರ ಅವಧಿ 2027ರವರೆಗೆ ಇತ್ತು . ಆದರೆ ಅವಧಿಗೂ ಮುನ್ನ ತಮ್ಮ ಸ್ಥಾನಕ್ಕೆ ಅರುಣ್ ಗೋಯಲ್ ರಾಜೀನಾಮೆ ನೀಡಿರುವುದು ಹಲವು ರೀತಿಯ ರಾಜಕೀಯ ಆಯಾಮದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ . ಗೋಯಲ್ ತಮ್ಮ ರಾಜೀನಾಮೆಯಲ್ಲಿ ಯಾವ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದು ಎಂಬ ಕಾರಣವನ್ನೂ ನಮೂದಿಸಿಲ್ಲ.
ಈ ಬೆಳವಣಿಗೆ, ರಾಜೀನಾಮೆಯ ಹಿಂದೆ ರಾಜಕೀಯ ಒತ್ತಡ ಇದೆಯಾ,ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರಲಾಗ್ತಿದ್ಯಾ, ಯಾವ ಕಾರಣಕ್ಕಾಗಿ ತಮ್ಮ ಸ್ಥಾನಕ್ಕೆ ಅರುಣ್ ಗೋಯಲ್ ರಾಜೀನಾಮೆ ನೀಡಿದ್ದಾರೆ ಅನ್ನೋ ವಿಚಾರ ವ್ಯಾಪಕವಾಗಿ ದೇಶದಾದ್ಯಂತ ಚರ್ಚಿಸಲ್ಪಡುತ್ತಿದೆ.
ಇದು ವಿಪಕ್ಷಗಳಿಗೆ ಚುನಾವಣಾ ಅಸ್ತ್ರವಾದ್ರೂ ಆಶ್ಚರ್ಯ ಪಡಬೇಕಿಲ್ಲ . ಈಗಾಗಲೇ ಸಾಕಷ್ಟು ವಿಚಾರಗಳನ್ನ ಮುಂದಿಟ್ಟುಕೊಂಡು ಇಂಡಿಯಾ ಮೈತ್ರಿಕೂಟ ಮತ್ತು ಇತರೆ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಎನ್.ಡಿ.ಎ ಕೂಟವನ್ನ ಹಣೆಯಬೇಕು ಅಂತ ತಂತ್ರಗಾರಿಕೆ ರೂಪಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ಮಹತ್ವವನ್ನು ಪಡೆದುಕೊಂಡಿದೆ.
ವಿರೋಧ ಪಕ್ಷಗಳು ಈ ವಿಚಾರವನ್ನು ಪ್ರಮುಖವಾಗಿಸಿಕೊಂಡು ಈಬಾರಿಯ ಚುನಾವಣೆಗೆ ಜನರ ಮುಂದೆ ಹೋದರೆ, ಕೇಂದ್ರ ಸರ್ಕಾರದ ಕೌಂಟರ್ ಏನಾಗಿರಲಿದೆ ಎಂಬುದೇ ಕೋತೂಹಲಕ್ಕೆ ಕಾರಣವಾಗಿದೆ.