INX Media ಎಂದು ಕರೆಸಿಕೊಳ್ಳುವ ರೂ 305 ಕೋಟಿಯ ವಿದೇಶಿ ಬಂಡವಾಳ ಹೂಡಿಕೆಗೆ ನೀಡಲಾದ ಅನುಮತಿ ಸಂಬಂಧದ ಈ ಪ್ರಕರಣದಲ್ಲಿ ಸಿಬಿಐ FIR ದಾಖಲಿಸಿದ್ದು ಮೇ 15, 2017ರಂದು. ಪ್ರಕರಣ ನಡೆದಿದ್ದು ಚಿದಂಬರಂ (UPA-1ರಲ್ಲಿ) ಹಣಕಾಸು ಸಚಿವರಾಗಿದ್ದ 2007-08ರಲ್ಲಿ. ಸಿಬಿಐ ಪ್ರಕರಣದ ನಂತರ 2018ರಲ್ಲಿ ಜಾರಿ ನಿರ್ದೇಶನಾಲಯ ಕೂಡ ಪ್ರಕರಣ ದಾಖಲಿಸಿತ್ತು. ಇದಕ್ಕೂ ಮೊದಲು 2011ರಲ್ಲಿ ರೂ 3,500 ಕೋಟಿಯ Aircel-Maxis ಪ್ರಕರಣ ಚಿದಂಬರಂ ಅವರನ್ನು ಸುತ್ತಿಕೊಂಡಿತ್ತು.
INX Media ಪ್ರಕರಣದಲ್ಲಿ ಚಿದಂಬರಂಗೆ ಜುಲೈ 25, 2018 ರಂದು ದೆಹಲಿ ಹೈ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ತನಿಖೆಗೆ ಸಹಕರಿಸುವಂತೆ ಚಿದಂಬರಂಗೆ ನಿಬಂಧನೆಯನ್ನು ವಿಧಿಸಲಾಗಿತ್ತು ಹಾಗೂ ಈ ಜಾಮೀನು ಕಾಲ ಕಾಲಕ್ಕೆ ನವೀಕರಣಗೊಳ್ಳುತ್ತಲಿತ್ತು. ಈ ಪ್ರಕರಣದಲ್ಲಿ ಚಿದಂಬರಂ ಅವರನ್ನು ಕೊನೆಯ ಬಾರಿಗೆ ಸಿಬಿಐ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದು ಜುಲೈ 2018ರಲ್ಲಿ. ನಂತರ, ದೆಹಲಿ ಹೈ ಕೋರ್ಟ್ ಮಾರ್ಚ್ 11, 2019 ರಂದು ಚಿದಂಬರಂ ಜಾಮೀನು ಸ್ಥಿರಗೊಳಿಸುವ ಬಗ್ಗೆ ಆದೇಶ ಕಾದಿರಿಸಿತ್ತು. ಅಂತಿಮವಾಗಿ ಆದೇಶ ನೀಡಿದ್ದು ಆಗಸ್ಟ್ 20, 2019ರಂದು.
ಚಿದಂಬರಂ ಪರ ಘಟಾನುಘಟಿ ವಕೀಲರ ತಂಡ ಹೈ ಕೋರ್ಟ್ ನಲ್ಲಿ ವಕಾಲತ್ತು ವಹಿಸಿತ್ತು. ವಕೀಲರ ಪ್ರಕಾರ ಈ ಪ್ರಕರಣದಲ್ಲಿ ವಿಚಾರಣೆಗೆ ಕೋರ್ಟ್ ಆದೇಶದಂತೆ ಚಿದಂಬರಂ ಸಹಕರಿಸುತ್ತಿದ್ದರು. 2019 ಏಪ್ರಿಲ್ ನಲ್ಲಿ ಚಿದಂಬರ್ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ (Prosecution Sanction) ಕೋರಿ ಸಕ್ಷಮ ಪ್ರಾಧಿಕಾರಕ್ಕೆ ಸಿಬಿಐ ಮನವಿ ಸಲ್ಲಿಸಿತ್ತು. ವಕೀಲರ ಪ್ರಕಾರ Prosecution Sanction ಕೋರಿದ್ದಾರೆ ಎಂದರೆ ಸಿಬಿಐ ಈಗಾಗಲೇ ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧವಾಗಿದೆ.
ಇನ್ನು, ಅಕ್ರಮವಾಗಿ ಗಳಿಸಿದ ಹಣವನ್ನು ಸಕ್ರಮಗೊಳಿಸಿದ ಪ್ರಕರಣದಡಿ (Prevention of Money Laundering Act – PMLA) ಕೇಸ್ ದಾಖಲಿಸಲು ಜಾರಿ ನಿರ್ದೇಶನಾಲಯಕ್ಕೆ ಕಡಿಮೆ ಎಂದರೂ ರೂ 30 ಲಕ್ಷದ ವಹಿವಾಟು ಆಗಿರಬೇಕು. ಆದರೆ ಈ ಪ್ರಕರಣದಲ್ಲಿ INX Media Pvt Ltd ಸಂಸ್ಥೆ Advantage Consulting Pvt Ltd ಎಂಬ ಸಂಸ್ಥೆಗೆ ನೀಡಿದ ಹಣ ಸರಿ ಸುಮಾರು ರೂ 10 ಲಕ್ಷ ಎಂಬುದು ಚಿದಂಬರಂ ವಕೀಲರ ವಾದ.
ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಈ ಬಗ್ಗೆ ಪ್ರತಿವಾದ ಮಂಡಿಸಿ, ಚಿದಂಬರಂ ಪುತ್ರ ಕಾರ್ತಿ ಚಿದಂಬರಂ INX Media Pvt Ltd ಪ್ರಕರಣದಲ್ಲಿ ನೇರ ಭಾಗಿದಾರ. ಪ್ರಕರಣದಲ್ಲಿ ಕಾರ್ತಿ ಚಿದಂಬರಂ ತನ್ನ ತಂದೆ ಹೇಳಿದಂತೆ ನಡೆದುಕೊಂಡಿದ್ದಾರೆ. ಹೀಗಾಗಿ ಚಿದಂಬರಂ ಅವರೇ ಪ್ರಕರಣದ ರೂವಾರಿ. ಜೊತೆಗೆ, PMLA ಪ್ರಕರಣದಡಿ ಕೆಲವಷ್ಟು ಆಸ್ತಿಯನ್ನು ಅಪರಾಧಿತ ಹಣದಿಂದ (Proceeds of Crime) ಖರೀದಿಸಿರುವುದನ್ನು ಪತ್ತೆ ಹಚ್ಚಲಾಗಿದ್ದು ಅಕ್ಟೋಬರ್ 2018 ರಂದು ಈ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಆಸ್ತಿಗಳ ಪತ್ತೆಗಾಗಿ ಚಿದಂಬರಂ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯ ಇದೆ. ನಿರೀಕ್ಷಣಾ ಜಾಮೀನಿನ ರಕ್ಷೆಯಲ್ಲಿರುವ ಚಿದಂಬರಂ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಅಟಾರ್ನಿ ಜನರಲ್ ಖುದ್ದು ದೆಹಲಿ ಹೈ ಕೋರ್ಟ್ ನಲ್ಲಿ ವಾದ ಮಂಡಿಸಿದರು.
ತನ್ನ ಆದೇಶದಲ್ಲಿ ಹೈ ಕೋರ್ಟ್ ನ್ಯಾಯಮೂರ್ತಿ ಜೆ ಸುನೀಲ್ ಗೌರ್, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ನೀಡಿದ ದಾಖಲೆಗಳನ್ನು ಆಧಾರವಾಗಿ ಸ್ವೀಕರಿಸಿದ್ದಾರೆ. ಕಾರ್ತಿ ಚಿದಂಬರಂ ಅವರ Advantage Strategic Consulting Pvt Ltd (ASCPL) ಹಾಗೂ ಇತರ ಸಹ ಸಂಸ್ಥೆಗಳಿಗೆ 2007-08ರಲ್ಲಿ Span Fibre India Pvt Ltd ಹಾಗೂ ಇನ್ನಿತರ ಸಂಸ್ಥೆಗಳು ಕಳುಹಿಸಿದ ರೂ 3 ಕೋಟಿ ಹಣ, INX Media Pvt Ltd ಸಂಸ್ಥೆಗೆ ವಿದೇಶಿ ಬಂಡವಾಳಕ್ಕೆ ಚಿದಂಬರಂ ಹಣಕಾಸು ಸಚಿವರಾಗಿ ನೀಡಿದ ಅನುಮತಿಗೆ ಪ್ರತಿಯಾಗಿ ಪಡೆದ ಲಂಚದ ಹಣ ಎಂಬುದನ್ನು ಕೋರ್ಟ್ ಒಪ್ಪಿದೆ.

2007-08 ಹಾಗೂ 2008-09 ರಲ್ಲಿ ಈ ಹಣ ಬಿಟ್ಟರೆ ASCPL ಗೆ ಬೇರೆ ಯಾವುದೇ ಮೂಲದ ಹಣದ ಇರಲಿಲ್ಲ. ಈ ಹಣದಿಂದಲೇ ASCPL ಕಂಪೆನಿ ವಾಸನ್ ಹೆಲ್ತ್ ಕೇರ್ ಎಂಬ ಸಂಸ್ಥೆಯನ್ನು ಖರೀದಿಸಿತ್ತು. ಹೀಗಾಗಿ ವಾಸನ್ ಹೆಲ್ತ್ ಕೇರ್ ಖರೀದಿ ಮತ್ತು ಮುಂದಿನ ದಿನಗಳಲ್ಲಿ ವಾಸನ್ ಹೆಲ್ತ್ ಕೇರ್ ನ ಶೇರುಗಳ ಮಾರಾಟದಿಂದ ಗಳಿಸಿದ ರೂ 62.68 ಕೋಟಿಯಷ್ಟು ಹಣ ಅಪರಾಧಿತ ಮೂಲದ ಹಣ ಎಂಬ ತನಿಖಾ ಸಂಸ್ಥೆಗಳ ವಾದವನ್ನು ಕೋರ್ಟ್ ಒಪ್ಪಿದೆ. ಇಷ್ಟೇ ಅಲ್ಲದೇ, ನ್ಯಾ. ಗೌರ್ ತಮ್ಮ ಸುದೀರ್ಘ ಆದೇಶದಲ್ಲಿ ವಿತ್ತ ಅಪರಾಧಿಗಳಿಗೆ ಇನ್ನು ಮುಂದೆ ನಿರೀಕ್ಷಣಾ ಜಾಮೀನು ಸೌಕರ್ಯ ಇಲ್ಲದಂತೆ ಮಾಡಲು ಕಾನೂನಿಗೆ ತಿದ್ದುಪಡಿ ಅಗತ್ಯ ಎಂದೂ ಹೇಳಿದ್ದಾರೆ. ಈ ಬಗ್ಗೆ ಸಂಸತ್ತಿಗೆ ಮನವರಿಕೆ ಮಾಡುವ ಸಮಯ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ, ದೆಹಲಿ ಹೈ ಕೋರ್ಟ್ ನ ಆದೇಶ ಪ್ರಶ್ನಿಸಿ ಚಿದಂಬರಂ ಸಲ್ಲಿಸಿದ ಮನವಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳದ ಸುಪ್ರೀಂ ಕೋರ್ಟ್ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ನ ಕೆಲವು ಹಿರಿಯ ವಕೀಲರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ನ ವಕೀಲರ ಸಂಘಕ್ಕೆ ಪತ್ರ ಬರೆದಿರುವ ಕೆಲವು ವಕೀಲರು INX Media ಪ್ರಕರಣದಲ್ಲಿ ಆರೋಪಿಯಾಗಿದ್ದರೂ, ಚಿದಂಬರಂ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರಾಗಿದ್ದೂ ತುರ್ತು ವಿಚಾರಣೆಯಿಂದ ವಂಚಿತರಾಗಿದ್ದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಕ್ಕೆ, ಹಿರಿಯ ವಕೀಲರಾದ ಚಂದರ್ ಉದಯ್ ಸಿಂಗ್, ಜೈದೀಪ್ ಗುಪ್ತಾ ಹಾಗೂ ಹರಿನ್ ಪಿ ರಾವಲ್ ಸೇರಿದಂತೆ 140 ಮಂದಿ ವಕೀಲರು ಸಹಿ ಮಾಡಿದ್ದು, ಹೀಗೆ ಹೇಳಲಾಗಿದೆ, “ಈ ದೇಶದಲ್ಲಿ ಸುಪ್ರೀಂ ಕೋರ್ಟ್ ಬಾರ್ ನ 40 ವರ್ಷದ ಹಳೆಯ ಸದಸ್ಯರೂ, ಅದರಲ್ಲಿಯೂ 35 ವರ್ಷಗಳಷ್ಟು ಹಿರಿಯ ವಕೀಲರಾಗಿ ಸೇವೆ ಸಲ್ಲಿಸಿದ ವಕೀಲರೊಬ್ಬರು ಎರಡು ಬಾರಿ ಪೀಠಕ್ಕೆ ಮನವಿ ಸಲ್ಲಿಸಿಯೂ ತುರ್ತು ವಿಚಾರಣೆಗೆ ಅವಕಾಶ ಕಲ್ಪಿಸದೇ ಹೋಗುವ ಘಟನೆ ಸಂಭವಿಸೀತೆಂದು ಸಂವಿಧಾನ ಶಿಲ್ಪಿಗಳು ಕನಸು ಮನಸಿನಲ್ಲಿಯೂ ಎಣಿಸಿರಲಿಕ್ಕಿಲ್ಲ.’’
ಕಾಂಗ್ರೆಸ್ ನಾಯಕ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ತುರ್ತು ವಿಚಾರಣೆ ಕೋರಿ ನ್ಯಾಯಮೂರ್ತಿ ರಮಣ ಅವರ ಪೀಠದ ಮುಂದೆ ಬುಧವಾರ (ಆಗಸ್ಟ್ 21) ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡು ಬಾರಿ ಮನವಿ ಸಲ್ಲಿಸಿದ್ದರು.